ದೈವೋಕ್ತಿಗಳಿಗೆ ಹೆಚ್ಚು ಗಮನವನ್ನು ಕೊಡುವವರಾಗಿರಿ
1 ಮನುಷ್ಯನು ಎಷ್ಟೋ ವಿಷಯಗಳನ್ನು ಮಾತಾಡುತ್ತಾನೆ. ಅವುಗಳಲ್ಲಿ ಪ್ರತಿಯೊಂದಕ್ಕೆ ವಿಶೇಷ ಗಮನವನ್ನು ಕೊಡುವ ಅಗತ್ಯವಿರುವುದಿಲ್ಲ. ಆದರೆ ದೇವರು ಮಾತಾಡುವಾಗ, ಆತನ ಪ್ರತಿಯೊಂದು ಮಾತಿಗೂ ನಾವು ಕಿವಿಗೊಡಲೇಬೇಕು. (ಧರ್ಮೋ. 28:1, 2) ಸಂತೋಷಕರವಾಗಿ, ದೇವರಿಂದ ಪ್ರೇರಿತರಾದ ಮನುಷ್ಯರು ನಮ್ಮ ಪ್ರಯೋಜನಕ್ಕಾಗಿ ಆ ‘ದೈವೋಕ್ತಿಗಳನ್ನು’ ದಾಖಲಿಸಿಟ್ಟಿದ್ದಾರೆ. (ರೋಮಾ. 3:2) ಈ ವರ್ಷ ಬರಲಿರುವ ನಮ್ಮ ಜಿಲ್ಲಾ ಅಧಿವೇಶನದಲ್ಲಿ ಈ ದೈವೋಕ್ತಿಗಳು ಓದಲ್ಪಟ್ಟು ಚರ್ಚಿಸಲ್ಪಡುವಾಗ, ಅವುಗಳನ್ನು ಕೇಳಿಸಿಕೊಳ್ಳುವ ಸುವರ್ಣಾವಕಾಶವು ನಮಗಿದೆ. ನೀವು ಅಲ್ಲಿ ವಿಶೇಷವಾದ ಗಮನವನ್ನು ಹೇಗೆ ಕೊಡಬಹುದು?
2 ಪ್ರತಿ ದಿನ ಬೆಳಗ್ಗೆ ಬೇಗನೆ ಬನ್ನಿ: ಇಸ್ರಾಯೇಲ್ಯರು ತನ್ನ ಧರ್ಮಶಾಸ್ತ್ರಕ್ಕೆ ಕಿವಿಗೊಡಲಿಕ್ಕಾಗಿ ಸೀನಾಯಿ ಪರ್ವತದ ಬಳಿಯಲ್ಲಿ ಸೇರಿಬರುವಂತೆ ಯೆಹೋವನು ಹೇಳಿದಾಗ, ಅವರು ಎಷ್ಟು ಸಂಭ್ರಮಪಟ್ಟಿದ್ದಿರಬಹುದೆಂಬುದನ್ನು ಸ್ವಲ್ಪ ಊಹಿಸಿಕೊಳ್ಳಿ! (ವಿಮೋ. 19:10, 11, 16-19) ಜಿಲ್ಲಾ ಅಧಿವೇಶನದಲ್ಲಿ ಯೆಹೋವನಿಂದ ಉಪದೇಶವನ್ನು ಕೇಳಿಸಿಕೊಳ್ಳುವ ವಿಷಯದಲ್ಲಿ ಅವರಿಗಿದ್ದಂತಹ ಮನೋಭಾವವು ನಿಮಗೂ ಇರುವಲ್ಲಿ, ನೀವು ಪ್ರತಿ ದಿನ ಬೆಳಗ್ಗೆ ಬೇಗನೆ ಬರಲು ಏರ್ಪಾಡುಗಳನ್ನು ಮಾಡುವಿರಿ. ನಾವು ತಡವಾಗಿ ಬಂದು, ಆಸನಗಳನ್ನು ಹುಡುಕುತ್ತಾ ಇರುವಾಗ ಇತರರಿಗೂ ತೊಂದರೆಯಾಗುತ್ತದೆ, ಮತ್ತು ನಮಗೂ ಇಡೀ ಕಾರ್ಯಕ್ರಮಕ್ಕೆ ಕಿವಿಗೊಡಲು ಸಾಧ್ಯವಾಗುವುದಿಲ್ಲ. ಅಧಿವೇಶನದ ಸ್ಥಳದಲ್ಲಿ, ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ಬಾಗಿಲುಗಳನ್ನು ತೆರೆಯಲಾಗುವುದು ಮತ್ತು 9:30ಕ್ಕೆ ಕಾರ್ಯಕ್ರಮವು ಆರಂಭವಾಗುವುದು.
3 ಆದರೆ, ಕೆಲವೊಮ್ಮೆ ಕೆಲವರು ಬೇಗನೆ ಬರುತ್ತಾರಾದರೂ, ಕಾರ್ಯಕ್ರಮವು ಆರಂಭವಾಗುವಾಗ ಅವರು ತಮ್ಮ ಆಸನಗಳಲ್ಲಿರುವುದಿಲ್ಲ. ಹೀಗೇಕೆ? ಅಧ್ಯಕ್ಷನು ಆರಂಭದ ಗೀತ ನಂಬ್ರವನ್ನು ಹೇಳುವ ವರೆಗೂ ಅವರು ತಮ್ಮ ಸ್ನೇಹಿತರೊಂದಿಗೆ ಮಾತಾಡುತ್ತಾ ಇರುತ್ತಾರೆ. ಅನಂತರವೇ ಅವರು ತಮ್ಮ ಆಸನಗಳಲ್ಲಿ ಕುಳಿತುಕೊಳ್ಳಲು ಹೊರಡುತ್ತಾರೆ. ಬೆಳಗ್ಗಿನ ಕಾರ್ಯಕ್ರಮ ಹಾಗೂ ಮಧ್ಯಾಹ್ನದ ಕಾರ್ಯಕ್ರಮದ ಆರಂಭದ ಹಾಡಿನ ಹಲವಾರು ನಿಮಿಷಗಳ ಮುಂಚೆಯೇ ಅಧ್ಯಕ್ಷನು ವೇದಿಕೆಯ ಮೇಲೆ ಬಂದು ಕುಳಿತುಕೊಳ್ಳುವುದನ್ನು ನೀವು ಗಮನಿಸಿರಬಹುದು. ಆಗ ರಾಜ್ಯ ಸಂಗೀತವನ್ನು ನುಡಿಸಲಾಗುತ್ತದೆ. ನಾವು ನಮ್ಮ ಆಸನಗಳಿಗೆ ಹೋಗಿ ಕುಳಿತುಕೊಳ್ಳಲಿಕ್ಕಾಗಿ ಇದೇ ನಮಗೆ ಸೂಚನೆಯಾಗಿದೆ! ಹಾಗೆ ಮಾಡುವಲ್ಲಿ, ಆರಂಭದ ಗೀತೆಯನ್ನು ಹಾಡುವಂತೆ ಆಮಂತ್ರಣ ನೀಡಲಾಗುವಾಗ, ನಾವು ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡುವುದರಲ್ಲಿ ಜೊತೆಗೂಡಲು ಸಿದ್ಧರಿರುವೆವು.
4 ಐಕ್ಯ ಕುಟುಂಬದೋಪಾದಿ ಕಿವಿಗೊಡಿರಿ: ಜೊತೆಗೂಡಿದ್ದ ಇಸ್ರಾಯೇಲ್ಯರಿಗೆ ದೈವೋಕ್ತಿಗಳು ಓದಿ ಹೇಳಲ್ಪಡುತ್ತಿದ್ದಾಗ, ‘ಮಕ್ಕಳನ್ನು’ ಸೇರಿಸಿ ಇಡೀ ಕುಟುಂಬಗಳು ಕಿವಿಗೊಡಬೇಕಾಗಿತ್ತು ಮತ್ತು ಕಲಿಯಬೇಕಾಗಿತ್ತು. (ಧರ್ಮೋ. 31:12) ನಮ್ಮ ಅಧಿವೇಶನಗಳಲ್ಲಿ ಮಕ್ಕಳನ್ನು “ಲಗಾಮಿಲ್ಲದೆ” (NW) ಬಿಟ್ಟುಬಿಡಬಾರದು. (ಜ್ಞಾನೋ. 29:15) ಹೆತ್ತವರೇ, ಹದಿವಯಸ್ಕರ ಸಮೇತ ನಿಮ್ಮ ಇಡೀ ಕುಟುಂಬವು ಜೊತೆಯಾಗಿ ಕುಳಿತುಕೊಳ್ಳುವಂತೆ ಏರ್ಪಾಡು ಮಾಡಿರಿ. ಕೆಲವು ಹೆತ್ತವರು, ಆರಂಭದ ಗೀತೆಯು ಶುರುವಾಗುವಾಗ ತಮ್ಮ ಎಳೆಯ ಮಕ್ಕಳನ್ನು ಪಾಯಿಖಾನೆಗೆ ತೆಗೆದುಕೊಂಡು ಹೋಗುತ್ತಾರೆ. ಅಷ್ಟರ ವರೆಗೆ ಅವರು ಸುಮ್ಮನಿರುತ್ತಾರೆ. ಆದರೆ ಹೀಗೆ ಮಾಡುವುದರಿಂದ, ನಮ್ಮ ಆರಾಧನೆಯಲ್ಲಿ ಗೀತೆಗಳು ಮತ್ತು ಪ್ರಾರ್ಥನೆಗಳು ಎಷ್ಟು ಪ್ರಾಮುಖ್ಯವಾಗಿವೆ ಎಂಬುದನ್ನು ಅವರು ಎಂದೂ ಕಲಿಯಲು ಸಾಧ್ಯವಾಗುವುದಿಲ್ಲ. ಆದುದರಿಂದ, ಕಾರ್ಯಕ್ರಮವು ಆರಂಭವಾಗುವ ಮುಂಚೆಯೇ, ಅವರ ಈ ಎಲ್ಲ ಕೆಲಸಗಳಿಗೆ ಗಮನಕೊಡುವುದು ಎಷ್ಟು ಒಳ್ಳೇದು!
5 ಪ್ರತಿ ರಾತ್ರಿ ನಾವು ಚೆನ್ನಾಗಿ ನಿದ್ರೆಮಾಡಿ, ಹಗಲುಹೊತ್ತಿನಲ್ಲಿ ಭಾರಿ ಭೋಜನಗಳನ್ನು ಮಾಡದಿದ್ದರೆ, ಗಮನಕೊಟ್ಟು ಕಿವಿಗೊಡಲು ನಮಗೆ ಸಹಾಯವಾಗುವುದು. ಭಾಷಣಕರ್ತನು ಏನನ್ನು ಹೇಳುತ್ತಿದ್ದಾನೆಂಬುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ನಿಮ್ಮ ಮನಸ್ಸು ಅತ್ತಿತ್ತ ಅಲೆದಾಡುವಂತೆ ಬಿಡಬೇಡಿ. ವಚನಗಳು ಓದಲ್ಪಡುವಾಗ, ಅವುಗಳನ್ನು ನಿಮ್ಮ ಬೈಬಲಿನಲ್ಲಿ ತೆರೆದು ಓದಿರಿ. ಸಂಕ್ಷಿಪ್ತವಾದ ನೋಟ್ಸ್ಗಳನ್ನು ಬರೆಯಿರಿ. ಭಾಷಣವು ಕೊಡಲ್ಪಡುತ್ತಿರುವಾಗ, ಭಾಷಣಕರ್ತನು ಏನನ್ನು ಹೇಳಿದ್ದಾನೆಂಬುದನ್ನು ಪುನರ್ವಿಮರ್ಶಿಸಿ, ನೀವು ಆ ವಿಷಯವನ್ನು ಹೇಗೆ ಅನ್ವಯಿಸಿಕೊಳ್ಳುವಿರೆಂಬುದನ್ನು ಪರಿಗಣಿಸಿರಿ. ದಿನದ ಅಂತ್ಯದಲ್ಲಿ, ಒಂದು ಕುಟುಂಬದೋಪಾದಿ ಕಾರ್ಯಕ್ರಮದ ವಿಷಯವನ್ನು ಪುನಃ ಚರ್ಚಿಸಿರಿ. ಪ್ರತಿಯೊಬ್ಬ ಸದಸ್ಯನಿಗೆ ಯಾವ ವಿಷಯವು ಇಷ್ಟವಾಯಿತು? ಈ ಮಾಹಿತಿಯನ್ನು ನಿಮ್ಮ ಕುಟುಂಬವು ಹೇಗೆ ಬಳಸಬಹುದು?
6 ದೇವರ ವಾಕ್ಯಕ್ಕೆ ಗೌರವವನ್ನು ತೋರಿಸಿರಿ: ಅಧಿವೇಶನಗಳಲ್ಲಿ ಸ್ನೇಹಿತರೊಂದಿಗೆ ಮಾತಾಡಲು ಮತ್ತು ಭಕ್ತಿವೃದ್ಧಿಮಾಡುವಂತಹ ಸಹವಾಸವನ್ನು ಮಾಡಲಿಕ್ಕಾಗಿ ನಮಗೆ ಒಳ್ಳೆಯ ಅವಕಾಶಗಳು ಸಿಗುತ್ತವೆ. ಅಧಿವೇಶನದ ಸ್ಥಳಕ್ಕೆ ಬೇಗನೆ ಬರುವ ಮೂಲಕ, ಕಾರ್ಯಕ್ರಮವು ಆರಂಭವಾಗುವ ಮುಂಚೆ ಎಲ್ಲರೊಂದಿಗೆ ಸಂಭಾಷಿಸಲು ನಮಗೆ ಸಾಕಷ್ಟು ಸಮಯ ಸಿಗುವುದು. ಆದರೆ, ಕೆಲವರು ಕಾರ್ಯಕ್ರಮವು ನಡೆಯುತ್ತಿರುವಾಗಲೂ ಮಾತಾಡುತ್ತಿರುತ್ತಾರೆ. ಸಭಾಂಗಣವು ತುಂಬ ದೊಡ್ಡದಾಗಿರುವುದರಿಂದ ಬೇರೆಯವರಿಗೆ ಇದರಿಂದಾಗಿ ಅಷ್ಟೇನೂ ಅಪಕರ್ಷಣೆಯಾಗುವುದಿಲ್ಲವೆಂದು ಅವರು ನೆನಸುತ್ತಾರೆ. ಆದರೆ ಅವರ ಈ ಆಲೋಚನೆಯು ತಪ್ಪಾಗಿದೆ. ಯಾಕೆಂದರೆ ರಾಜ್ಯ ಸಭಾಗೃಹದಲ್ಲಿ ಒಂದು ಕೂಟಕ್ಕೆ ಹಾಜರಾಗುತ್ತಿರುವಾಗ ನಾವು ಹೇಗೆ ಕಿವಿಗೊಡುತ್ತೇವೊ, ಹಾಗೆಯೇ ಒಂದು ದೊಡ್ಡ ಸಭಾಂಗಣದಲ್ಲಿ ಕೂಟಗಳು ನಡೆಯುತ್ತಿರುವಾಗಲೂ ಕಿವಿಗೊಡಬೇಕಾಗಿದೆ. ಯಾಕೆಂದರೆ ಅದು ನಮಗೆ ಕಿವಿಗೊಡುವ ಸಮಯವಾಗಿರುತ್ತದೆ, ಮಾತಾಡುವ ಸಮಯವಲ್ಲ. ಕಾರ್ಯಕ್ರಮವು ನಡೆಯುತ್ತಿರುವಾಗ ಒಂದುವೇಳೆ ನಿಮ್ಮ ಬಳಿ ಸೆಲ್ಯುಲರ್ ಫೋನ್ಗಳು, ಪೇಜರ್ಗಳು ಇರುವಲ್ಲಿ ಅಥವಾ ನೀವು ಕ್ಯಾಮ್ಕಾರ್ಡರ್ಸ್ ಮತ್ತು ಕ್ಯಾಮೆರಾಗಳನ್ನು ಬಳಸುತ್ತಿರುವಲ್ಲಿ, ಅವುಗಳಿಂದಾಗಿ ಬೇರೆಯವರಿಗೆ ಅಪಕರ್ಷಣೆಯಾಗಬಾರದು.
7 ಮೋಶೆಯು ಯೆಹೋವನಿಂದ ಧರ್ಮಶಾಸ್ತ್ರವನ್ನು ಪಡೆದುಕೊಳ್ಳುತ್ತಿದ್ದಾಗ, “ಅವನು ಏನೂ ಊಟಮಾಡಲಿಲ್ಲ, ಏನೂ ಕುಡಿಯಲಿಲ್ಲ.” (ವಿಮೋ. 34:28) ಹಾಗೆಯೇ, ಅಧಿವೇಶನದ ಕಾರ್ಯಕ್ರಮಗಳು ನಡೆಯುತ್ತಿರುವಾಗ, ಏನಾದರೂ ತಿನ್ನುತ್ತಾ ಅಥವಾ ಕುಡಿಯುತ್ತಾ ಇರುವುದು ಅನುಚಿತವಾಗಿದೆ. ಒಂದುವೇಳೆ ಗಂಭೀರವಾದ ಆರೋಗ್ಯದ ಕಾರಣಗಳಿಂದಾಗಿ ಹಾಗೆ ಮಾಡಲೇಬೇಕಾಗಿರುವಲ್ಲಿ, ಅದು ಬೇರೆ ವಿಷಯ. ಇಲ್ಲದಿರುವಲ್ಲಿ, ಅವುಗಳನ್ನು ಮಾಡಲಿಕ್ಕಾಗಿರುವ ‘ತಕ್ಕ ಸಮಯದ’ ವರೆಗೆ ಕಾದಿರಿ.—ಪ್ರಸಂ. 3:1.
8 ಕೆಲವೊಂದು ಅಧಿವೇಶನಗಳಲ್ಲಿ, ಈಗಲೂ ಅನೇಕ ಸಹೋದರ ಸಹೋದರಿಯರು ಮತ್ತು ಎಳೆಯ ಮಕ್ಕಳು, ಕಾರ್ಯಕ್ರಮವು ನಡೆಯುತ್ತಾ ಇರುವಾಗ ಮೊಗಸಾಲೆಗಳಲ್ಲಿ ಅತ್ತಇತ್ತ ಓಡಾಡುತ್ತಿರುತ್ತಾರೆ. ಅಟೆಂಡೆಂಟರು ಇಂಥವರಿಗೆ ಸಭಾಂಗಣದೊಳಗೆ ಹೋಗಿ ಕುಳಿತುಕೊಳ್ಳುವಂತೆ ಹೇಳುವ ಸೂಚನೆಯನ್ನು ಕೊಡುತ್ತಾರೆ. ಬೇರೆ ಬೇರೆ ಡಿಪಾರ್ಟ್ಮೆಂಟ್ಗಳಲ್ಲಿ ಕೆಲಸಮಾಡುತ್ತಿರುವ ಸ್ವಯಂಸೇವಕರು, ತಮ್ಮ ಕೆಲಸವನ್ನು ಮುಗಿಸಿದೊಡನೆ ಹೋಗಿ ತಮ್ಮ ಆಸನಗಳಲ್ಲಿ ಕುಳಿತುಕೊಳ್ಳಬೇಕು. ಕಾರ್ಯಕ್ರಮವು ನಡೆಯುತ್ತಿರುವಾಗ ಯಾವುದೇ ಜರೂರಿಯ ಕೆಲಸವು ಇಲ್ಲದಿರುವುದಾದರೆ, ಸ್ವಯಂಸೇವಕರು ತಮ್ಮ ಆಸನಗಳಲ್ಲಿ ಕುಳಿತುಕೊಂಡು ಕಾರ್ಯಕ್ರಮಕ್ಕೆ ಕಿವಿಗೊಡಬೇಕು. ಕಾರ್ಯಕ್ರಮವು ನಡೆಯುತ್ತಿರುವಾಗ ಅವರು ತಮ್ಮ ಡಿಪಾರ್ಟ್ಮೆಂಟ್ಗಳಲ್ಲಿ ಬೇರೆಯವರೊಂದಿಗೆ ಮಾತಾಡುತ್ತಾ ಸುಮ್ಮನೆ ಕಾಲಹರಣಮಾಡಬಾರದು.
9 ದೇವರ ವಾಕ್ಯಕ್ಕೆ ಕಿವಿಗೊಡುತ್ತಿರುವಾಗ ‘ನಮ್ಮ ಕಿವಿಗಳು ಮಂದ’ವಾಗಿರಬಾರದು. (ಇಬ್ರಿ. 5:11) ಆದುದರಿಂದ, ಬರಲಿರುವ ನಮ್ಮ ಜಿಲ್ಲಾ ಅಧಿವೇಶನದಲ್ಲಿ, ಯೆಹೋವನಿಂದ ಬರುವ ದೈವೋಕ್ತಿಗಳಿಗೆ ಗಮನಕೊಟ್ಟು ಕಿವಿಗೊಡುವ ಮೂಲಕ, ನಾವು ಯೋಗ್ಯವಾದ ಗೌರವವನ್ನು ಕೊಡುವ ದೃಢಸಂಕಲ್ಪವನ್ನು ಮಾಡೋಣ.