“ನಾನು ಬೇರೆ ದೇಶಕ್ಕೆ ಹೋಗಿ ನೆಲೆಸಬೇಕೋ?”
1 ಎಲ್ಲಿ ಆವಶ್ಯಕತೆಯು ಹೆಚ್ಚಾಗಿದೆಯೋ ಅಂತಹ ಸ್ಥಳಗಳಿಗೆ ಹೋಗಿ ನೆಲೆಸುವ ಮೂಲಕ, “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂಬ ಯೇಸುವಿನ ಕರೆಗೆ ಯೆಹೋವನ ಸಮರ್ಪಿತ ಸೇವಕರಲ್ಲಿ ಅನೇಕರು ಓಗೊಟ್ಟಿದ್ದಾರೆ. (ಮತ್ತಾ. 28:19) ಅವರು ಪೌಲನನ್ನು ಅನುಕರಿಸುತ್ತಿದ್ದಾರೆ. ಪೌಲನು, ‘ಸಮುದ್ರವನ್ನು ದಾಟಿ ಮಕೆದೋನ್ಯಕ್ಕೆ ಬಂದು ನಮಗೆ ನೆರವಾಗು’ ಎಂಬ ಕರೆಗೆ ಓಗೊಟ್ಟನು. (ಅ.ಕೃ. 16:9) ಇದನ್ನು ನಾವು ಯಾವ ರೀತಿಯಲ್ಲಿ ಪ್ರಾಯೋಗಿಕವಾಗಿ ಮಾಡಸಾಧ್ಯವಿದೆ?
2 ಒಂದು ಸಲಕ್ಕೆ ಒಂದು ಹೆಜ್ಜೆ ಇಡಿರಿ: ನಿಮ್ಮ ಸಭೆಯ ಹತ್ತಿರದಲ್ಲಿರುವ ಟೆರಿಟೊರಿಯನ್ನು ಯಾವಾಗಲಾದರೊಮ್ಮೆ ಆವರಿಸಲಾಗುತ್ತದೋ? ಹಾಗಿರುವಲ್ಲಿ, ಆ ಸ್ಥಳಗಳಲ್ಲಿ ಸುವಾರ್ತೆಯನ್ನು ಸಾರುವುದಕ್ಕೆ ಏಕೆ ಗಮನಕೊಡಬಾರದು? ಬೇರೆಲ್ಲೋ ಹೋಗಿ ನೆಲೆಸಲು ನಿರ್ಧಾರಮಾಡುವುದಕ್ಕೆ ಮೊದಲು, ಅಲ್ಲಿಗೆ ಹೋಗುವುದು ಸರಿಯೋ ಇಲ್ಲವೋ ಎಂಬುದನ್ನು ನಿಮ್ಮ ಸಭೆಯ ಹಿರಿಯರಿಂದ ಕೇಳಿ ತಿಳಿದುಕೊಳ್ಳಿರಿ. ಶುಶ್ರೂಷೆಯನ್ನು ಇನ್ನೂ ಹೆಚ್ಚಿಸಲಿಕ್ಕಾಗಿ ಹತ್ತಿರದ ಸಭೆಗೆ ಹೋಗಬಹುದೋ ಎಂಬುದರ ಬಗ್ಗೆ ನೀವು ನಿಮ್ಮ ಸರ್ಕಿಟ್ ಮೇಲ್ವಿಚಾರಕರ ಬಳಿ ಕೇಳಿ ತಿಳಿದುಕೊಳ್ಳಬಹುದು. ಅಷ್ಟುಮಾತ್ರವಲ್ಲ, ಹಣಕಾಸಿನ ಬಗ್ಗೆ ಎಲ್ಲವನ್ನೂ ಜಾಗರೂಕವಾಗಿ ಪರೀಕ್ಷಿಸಿದ ನಂತರ, ಬೇರೊಂದು ದೇಶಕ್ಕೆ ಹೋಗಿ ಸಹಾಯಮಾಡಲು ನೀವು ನಿರ್ಧಾರವನ್ನು ತೆಗೆದುಕೊಳ್ಳಬಹುದು. ಬೇರೆ ದೇಶಕ್ಕೆ ಹೋಗಿ ಸಹಾಯಮಾಡುವುದು ನಿಮ್ಮ ಆಸೆಯಾಗಿರುವುದಾದರೆ, ಯಾವ ಸ್ಥಳಕ್ಕೆ ಹೋಗಲು ನೀವು ಇಚ್ಛಿಸುತ್ತೀರಿ ಎಂಬುದರ ಬಗ್ಗೆ, ನಿಮ್ಮ ಹಿರಿಯರ ಮಂಡಳಿಯೊಂದಿಗೆ ಸೇರಿಕೊಂಡು ಬ್ರಾಂಚ್ ಆಫೀಸಿಗೆ ಒಂದು ಪತ್ರವನ್ನು ಬರೆಯತಕ್ಕದ್ದು. ಅದರಲ್ಲಿ ನಿಮ್ಮ ದೇವಪ್ರಭುತ್ವ ಹಿನ್ನೆಲೆಯನ್ನು ನೀಡತಕ್ಕದ್ದು. ಅಲ್ಲಿಯೇ ಹೋಗಿ ಖಾಯಂ ಆಗಿ ನೆಲೆಸಲು ನಿರ್ಧಾರಮಾಡುವ ಮೊದಲು, ಆ ಸ್ಥಳವನ್ನು ನೋಡಿ ಬರುವುದು ಸೂಕ್ತವಾಗಿರುವುದು ಮಾತ್ರವಲ್ಲ ಬುದ್ಧಿವಂತಿಕೆಯೂ ಆಗಿರುವುದು.
3 ವಲಸೆಹೋಗುವುದರ ಕುರಿತಾಗಿ ಎಚ್ಚರಿಕೆ: ಉತ್ತಮ ಗುಣಮಟ್ಟದ ಜೀವನವನ್ನು ಅನುಭವಿಸಲಿಕ್ಕೋ ಇಲ್ಲವೇ ಕಷ್ಟತೊಂದರೆ ಮತ್ತು ದಬ್ಬಾಳಿಕೆಗಳಿಂದ ತಪ್ಪಿಸಿಕೊಳ್ಳಲೋ ಹೆಚ್ಚೆಚ್ಚು ಸಹೋದರರು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಲಸೆಹೋಗುತ್ತಿದ್ದಾರೆ. ಹಾಗೆ ಮಾಡುವಾಗ, ಕೆಲವರು ನ್ಯಾಯನಿಷ್ಠೆಯಿಲ್ಲದ ಜನರಿಂದ ಮೋಸಹೋಗಿದ್ದಾರೆ. ಈ ಜನರು, ಬೇರೆ ದೇಶಕ್ಕೆ ಹೋಗುವುದರಲ್ಲಿ ತಾವು ಸಹಾಯಮಾಡುತ್ತೇವೆ ಎಂದು ಹೇಳಿ ಹಣಪಡೆದುಕೊಂಡು, ಪರಾರಿಯಾಗಿದ್ದಾರೆ. ಇನ್ನೂ ಕೆಲವು ಸಂದರ್ಭಗಳಲ್ಲಿ, ಈ ಜನರು ಅನೈತಿಕ ಕಾರ್ಯಗಳನ್ನು ಮಾಡುವಂತೆ ವಲಸೆಗಾರರಿಗೆ ಬಲವಂತಮಾಡಲು ಸಹ ಪ್ರಯತ್ನಿಸಿದ್ದಾರೆ. ಅವರು ಅದಕ್ಕೆ ಮಣಿಯದಿದ್ದಾಗ, ಕಾಲಿಟ್ಟ ದೇಶದಲ್ಲಿಯೇ ಅವರನ್ನು ಕೈಬಿಟ್ಟುಬಿಡುತ್ತಾರೆ. ಹೀಗೆ, ವಲಸೆಗಾರರ ಪಾಡು ತಮ್ಮ ತಾಯ್ನಾಡಿನಲ್ಲಿ ಇದ್ದುದಕ್ಕಿಂತಲೂ ಕಡೆಯಾಗಿಹೋಗುತ್ತದೆ. ವಸತಿಗಾಗಿ ಅಲ್ಲಿನ ಸಹೋದರರ ಬಳಿ ಸಹಾಯ ಕೇಳಿಕೊಳ್ಳಬೇಕಾಗುತ್ತದೆ ಇಲ್ಲವೇ ಅವರಿಂದ ಇನ್ನಿತರ ಸಹಾಯವನ್ನು ಕೇಳಿಕೊಳ್ಳಬೇಕಾಗುತ್ತದೆ. ಇದು ಈಗಾಗಲೇ ತಮ್ಮದೇ ಆದ ಕಷ್ಟಕಾರ್ಪಣ್ಯದ ಜಂಜಾಟಗಳಲ್ಲಿ ಮುಳುಗಿಹೋಗಿರುವ ಕ್ರೈಸ್ತ ಕುಟುಂಬಗಳಿಗೆ ಒಂದು ಹೊರೆಯಾಗುತ್ತದೆ. ಈ ಕಾರಣದಿಂದ ಕೆಲವು ಕುಟುಂಬಗಳವರು ಒಬ್ಬರು ಇನ್ನೊಬ್ಬರಿಂದ ಪತ್ಯೇಕಗೊಂಡು ಜೀವಿಸುವಂತಾಗಿದೆ. ಮಾತ್ರವಲ್ಲ, ಇಂತಹ ಅಹಿತಕರ ವಲಸೆಹೋಗುವಿಕೆಯಿಂದ ಕುಟುಂಬಗಳು ಆತ್ಮಿಕವಾಗಿ ಸೊರಗಿಹೋಗಿವೆ.—1 ತಿಮೊ. 6:8-11.
4 ವೈಯಕ್ತಿಕ ಲಾಭಕ್ಕಾಗಿ ನೀವು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಲಸೆ ಹೋಗುವುದಾದರೆ, ಇದನ್ನು ನೆನಪಿನಲ್ಲಿಡಿ: ನೀವೆಲ್ಲೇ ಜೀವಿಸಿದರೂ ಕಷ್ಟಗಳಂತೂ ಇದ್ದೇ ಇರುತ್ತವೆ. ಗುರುತುಪರಿಚಯವಿಲ್ಲದ ದೇಶಕ್ಕಿಂತಲೂ ಎಲ್ಲಿ ನಿಮಗೆ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಗೊತ್ತಿರುತ್ತದೋ ಆ ದೇಶದಲ್ಲಿಯೇ ಇದ್ದುಕೊಂಡು ಸಮಸ್ಯೆಗಳನ್ನು ಜಯಿಸುವುದು ಹೆಚ್ಚು ಸುಲಭ.