ಸಂತೋಷದಿಂದ ನಡೆಯುವವರಾಗಿರಿ
1 ನೋಹನ ದಿನಗಳಲ್ಲಿದ್ದಂತೆಯೇ, ತನ್ನ ಸಾನ್ನಿಧ್ಯದ ಸಮಯದಲ್ಲಿ ಅಧಿಕಾಂಶ ಜನರು ‘ಏನೂ ತಿಳಿಯದೇ ಇರುವರು,’ ಎಂದು ಯೇಸು ಹೇಳಿದನು. (ಮತ್ತಾ. 24:37-39) ಆದುದರಿಂದ, ಅನೇಕರು ರಾಜ್ಯದ ಶುಭವರ್ತಮಾನಕ್ಕೆ ಗಮನಕೊಡುವುದಿಲ್ಲ ಎಂಬುದನ್ನು ನಿರೀಕ್ಷಿಸಬಹುದು. ನಮ್ಮ ಸೇವೆಯನ್ನು ಮಾಡುವುದರಿಂದ ಸಿಗುವ ಸಂತೋಷವನ್ನು ಕಾಪಾಡಿಕೊಳ್ಳಲು ನಮಗೆ ಯಾವುದು ಸಹಾಯ ಮಾಡುವುದು?—ಕೀರ್ತ. 100:2.
2 ಮೊದಲು, ನಮ್ಮ ಸಂದೇಶ ಹಾಗೂ ಸಾರಬೇಕೆಂಬ ಆಜ್ಞೆಯು ದೇವರಿಂದ ಬಂದದ್ದೆಂಬುದನ್ನು ನಾವು ಮನಸ್ಸಿನಲ್ಲಿ ಇಡಬೇಕು. ನಮ್ಮ ಉತ್ತಮವಾದ ಪ್ರಯತ್ನಗಳ ಬಳಿಕವೂ, ಜನರ ಪ್ರತಿಕ್ರಿಯೆ ಕಡಿಮೆಯಿರುವುದಾದರೆ, ಅದು ವಾಸ್ತವವಾಗಿ ಯೆಹೋವನನ್ನು ನಿರಾಕರಿಸುವುದೆಂದರ್ಥ. ಸಾರುವುದರಲ್ಲಿ ನಾವು ತೋರಿಸುವ ನಂಬಿಗಸ್ತಿಕೆಗೆ ಅವನ ಮೆಚ್ಚುಗೆಯ ನಸುನಗೆ ಇದೆ ಎಂಬುದನ್ನು ಮನದಲ್ಲಿಟ್ಟುಕೊಂಡು, ದೇವರ ವಾಕ್ಯದ ಪ್ರಕಾರ ನಡೆಯುವವರಾಗಿರುವುದರಿಂದ ಸಿಗುವ ಆನಂದ ಹಾಗೂ ಆಂತರಿಕ ಸಂತೋಷವನ್ನು ಕಾಪಾಡಿಕೊಳ್ಳೋಣ.—ಯಾಕೋ. 1:25.
3 ಎರಡನೆಯದು, ರಕ್ಷಣೆಗೋಸ್ಕರ ಯೆಹೋವನು ಒದಗಿಸಿರುವ ಮಾಧ್ಯಮವನ್ನು ಅಂಗೀಕರಿಸುವ ವ್ಯಕ್ತಿಗಳು ಇನ್ನೂ ಇದ್ದಾರೆ. ಅಧಿಕಾಂಶ ಜನರು ನಿರಾಸಕ್ತರಾಗಿರಬಹುದಾದರೂ, ಈಗಲೂ, ಅಂದರೆ ಅಂತ್ಯ ಕಾಲದ ಕೊನೆಯ ಸಮಯದಲ್ಲೂ, ಒಟ್ಟುಗೂಡಿಸಲ್ಪಡಬೇಕಾದ ಕುರಿಯಂತಿರುವವರು ಇನ್ನೂ ಇದ್ದಾರೆ. “ಯಾವದೊಂದು ಊರಿಗೆ ಅಥವಾ ಹಳ್ಳಿಗೆ ಸೇರಿದಾಗ ಅಲ್ಲಿ ಯೋಗ್ಯರು ಯಾರೆಂದು” ಹುಡುಕಿ, ಅಂಥವರಿಗೆ ಸುವಾರ್ತೆಯನ್ನು ಸಾರುತ್ತಾ ಇರೋಣ.—ಮತ್ತಾ. 10:11-13.
4 ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಿ: ಸುಳ್ಳು ಧರ್ಮದ ವಿಷಾದಕರ ದಾಖಲೆಯು ಕೆಲವರ ಭ್ರಮೆಯನ್ನು ನಿವಾರಿಸಿದೆ. ಈ ವಿಷಯಗಳ ವ್ಯವಸ್ಥೆಯಿಂದ ಅನೇಕರು ಬಾಧಿತರಾಗಿ “ತೊಳಲಿ ಬಳಲಿ” ಹೋಗಿದ್ದಾರೆ. (ಮತ್ತಾ. 9:36) ಅನೇಕರು ಉದ್ಯೋಗ, ಆರೋಗ್ಯಾರೈಕೆ, ಹಾಗೂ ಭದ್ರತೆಯ ಕೊರತೆಯಿಂದ ಚಿಂತೆಯಲ್ಲಿ ಮುಳುಗಿರಬಹುದು. ಇದನ್ನು ನಾವು ಅರ್ಥಮಾಡಿಕೊಂಡರೆ, ನಮ್ಮ ಕೆಲಸದಲ್ಲಿ ಬೇಸರಗೊಳ್ಳದೆ ಮುಂದುವರಿಯಲು ಇದು ನಮಗೆ ಸಹಾಯ ಮಾಡುವುದು. ನಮ್ಮ ಟೆರಿಟೊರಿಯ ಜನರನ್ನು ಅಧಿಕವಾಗಿ ಚಿಂತೆಗೊಳಪಡಿಸುವ ವಿಷಯಗಳ ಕುರಿತು ಮಾತಾಡಲು ಮೊದಲ ಹೆಜ್ಜೆಯನ್ನು ಶ್ರದ್ಧಾಪೂರ್ವಕವಾಗಿ ತೆಗೆದುಕೊಳ್ಳಿ. ದೇವರ ರಾಜ್ಯವೊಂದೇ ನಿಜವಾದ ಪರಿಹಾರವನ್ನು ತರುವುದೆಂಬುದನ್ನು ಅವರು ಗ್ರಹಿಸಲು ಸಹಾಯಮಾಡಿ. ಪ್ರಕಾಶನಗಳಲ್ಲಿ ಕೊಡಲ್ಪಟ್ಟಿರುವಂತಹ ವಚನಗಳನ್ನು ಹಾಗೂ ನಿರ್ದಿಷ್ಟವಾದ ಅಂಶಗಳನ್ನು ಉಪಯೋಗಿಸಿ, ಸುವಾರ್ತೆಯು ಅವರ ಹೃದಯಗಳನ್ನು ಮುಟ್ಟುವ ಹಾಗೆ ಮಾಡಿ.—ಇಬ್ರಿ. 4:12.
5 ‘ಯೆಹೋವನ ಆನಂದವೇ ನಮ್ಮ ಆಶ್ರಯವಾಗಿದೆ’ ಎಂಬುದನ್ನು, ದೇವರ ವಾಕ್ಯದ ಪ್ರಕಾರ ಸಂತೋಷದಿಂದ ನಡೆಯುವವರೆಲ್ಲರೂ ನೆನಪಿನಲ್ಲಿಟ್ಟುಕೊಂಡಿದ್ದಾರೆ. (ನೆಹೆ. 8:10) ನಮ್ಮ ಆನಂದವನ್ನು ಕಳೆದುಕೊಳ್ಳುವ ಆವಶ್ಯಕತೆಯಿಲ್ಲ. “ಆ ಮನೆಯವರು ಯೋಗ್ಯರಾಗಿದ್ದರೆ ನಿಮ್ಮ ಆಶೀರ್ವಾದವು ಅವರಿಗೆ ಆಗಲಿ; ಅಯೋಗ್ಯರಾಗಿದ್ದರೆ ನಿಮ್ಮ ಆಶೀರ್ವಾದವು ನಿಮಗೆ ಹಿಂದಕ್ಕೆ ಬರಲಿ.” (ಮತ್ತಾ. 10:13) ಯೆಹೋವನು ನಮ್ಮ ಸಂತೋಷ ಹಾಗೂ ಶಕ್ತಿಯನ್ನು ನವೀಕರಿಸುತ್ತಾ ಇರುವುದರಿಂದ, ಆತನ ಪವಿತ್ರ ಸೇವೆಯಲ್ಲಿ ನಾವು ಸೈರಣೆಯಿಂದ ತಾಳಿಕೊಳ್ಳೋಣ. ಆಗ ನಮ್ಮ ನಂಬಿಗಸ್ತಿಕೆಯನ್ನು ಆತನು ಆಶೀರ್ವದಿಸುವನು.