ಕೂಟಗಳಿಗೆ ಹಾಜರಾಗುವಂತೆ ಇತರರಿಗೆ ಸಹಾಯಮಾಡಿರಿ
1 ‘ಕೂಟಗಳಿಗೆ ಹಾಜರಾಗಲು ಇಷ್ಟಪಡುವ ಯಾವುದೇ ಸ್ನೇಹಿತರು, ಹಾಗೆ ಮಾಡುವಂತೆ ಆದರದಿಂದ ಆಮಂತ್ರಿಸುತ್ತೇವೆ.’ ಈ ಪ್ರಕಟನೆಯು ಝಾಯನ್ಸ್ ವಾಚ್ಟವರ್ ಪತ್ರಿಕೆಯ ನವೆಂಬರ್ 1880ರ ಸಂಚಿಕೆಯಲ್ಲಿ ಬಂತು. ಅಂದಿನಿಂದ, ಯೆಹೋವನ ಸಾಕ್ಷಿಗಳು ಜನರನ್ನು ಬೈಬಲ್ ಉಪದೇಶಕ್ಕಾಗಿ ಹುರುಪಿನಿಂದ ಆಮಂತ್ರಿಸಿದ್ದಾರೆ. (ಪ್ರಕ. 22:17) ಇದು ಸತ್ಯಾರಾಧನೆಯ ಒಂದು ಮುಖ್ಯ ಭಾಗವಾಗಿದೆ.
2 ಹಾಜರಾಗುವುದು ಅತ್ಯಾವಶ್ಯಕ: ನಾವು ಸಭೆಯೊಂದಿಗೆ ಸಹವಾಸಮಾಡುವಾಗ ಆಶೀರ್ವಾದಗಳು ಲಭಿಸುತ್ತವೆ. ನಮ್ಮ ಅದ್ಭುತ ದೇವರಾದ ಯೆಹೋವನೊಂದಿಗಿನ ಪರಿಚಯವು ಇನ್ನೂ ಹೆಚ್ಚಾಗುತ್ತದೆ. ಸಭೆಯಲ್ಲಿ “ಯೆಹೋವನಿಂದ ಶಿಕ್ಷಿತ”ರಾಗಲು ನಾವು ಜೊತೆಯಾಗಿ ಕೂಡಿಬರುತ್ತೇವೆ. (ಯೆಶಾ. 54:13) ಆತನ ಸಂಸ್ಥೆಯು, ನಮ್ಮನ್ನು ದೇವರ ಬಳಿ ಹೆಚ್ಚು ಸಮೀಪಕ್ಕೆ ತರುವ ಬೈಬಲ್ ಉಪದೇಶದ ನಿರಂತರವಾದ ಕಾರ್ಯಕ್ರಮವನ್ನು ಸಿದ್ಧಪಡಿಸುತ್ತದೆ. ಅಷ್ಟುಮಾತ್ರವಲ್ಲದೆ, ಅದು “ದೇವರ ಎಲ್ಲ ಸಲಹೆಯನ್ನು” (NW) ಅನ್ವಯಿಸುವುದರಲ್ಲಿ ಪ್ರಾಯೋಗಿಕ ಸಹಾಯವನ್ನು ಕೊಡುತ್ತದೆ. (ಅ. ಕೃ. 20:27; ಲೂಕ 12:42) ದೇವರ ವಾಕ್ಯವನ್ನು ಕಲಿಸುವ ಕಲೆಯಲ್ಲಿ ಕೂಟಗಳು ವೈಯಕ್ತಿಕ ತರಬೇತಿಯನ್ನು ಕೊಡುತ್ತವೆ. ಶಾಸ್ತ್ರವಚನಗಳಿಂದ ಸಿಗುವ ಮರುಜ್ಞಾಪನಗಳು, ನಾವು ಇತರರೊಂದಿಗೆ ಮತ್ತು ಯೆಹೋವನೊಂದಿಗೆ ಒಳ್ಳೆಯ ಸಂಬಂಧಗಳಲ್ಲಿ ಆನಂದಿಸುವಂತೆ ಸಹಾಯಮಾಡುತ್ತವೆ. ದೇವರನ್ನು ಪ್ರೀತಿಸುವವರೊಂದಿಗೆ ಸಹವಾಸಮಾಡುವುದು ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ.—ರೋಮಾ. 1:11, 12.
3 ನೇರವಾದ ಆಮಂತ್ರಣವನ್ನು ಕೊಡಿರಿ: ಮೊದಲ ಬಾರಿ ಅಭ್ಯಾಸವನ್ನು ಮಾಡುವ ಸಮಯದಿಂದಲೇ, ಪ್ರತಿಯೊಬ್ಬ ಬೈಬಲ್ ವಿದ್ಯಾರ್ಥಿಗೆ ಕೂಟಗಳಿಗೆ ಬರುವಂತೆ ಆಮಂತ್ರಣವನ್ನು ಕೊಡಿರಿ. ಅವರಿಗೆ ಹ್ಯಾಂಡ್ಬಿಲ್ ಅನ್ನು ಕೊಡಿರಿ. ಕಳೆದ ಕೂಟದಲ್ಲಿ ನಿಮ್ಮನ್ನು ಉತ್ತೇಜಿಸಿದಂಥ ಒಂದು ವಿಷಯವನ್ನು ಅವರೊಂದಿಗೆ ಹಂಚಿಕೊಳ್ಳುವ ಮೂಲಕ, ಮತ್ತು ಮುಂದಿನ ಕೂಟದಲ್ಲಿ ಚರ್ಚಿಸಲಾಗುವ ಒಂದು ವಿಷಯವನ್ನು ಪರಿಗಣಿಸುವ ಮೂಲಕ ಅವರ ಆಸಕ್ತಿಯನ್ನು ಕೆರಳಿಸಿರಿ. ರಾಜ್ಯ ಸಭಾಗೃಹವು ಹೇಗಿರುತ್ತದೆಂಬುದನ್ನು ಸ್ವಲ್ಪ ವರ್ಣಿಸಿರಿ ಮತ್ತು ಅದು ಎಲ್ಲಿದೆ ಎಂಬುದನ್ನು ಅವರು ಸುಲಭವಾಗಿ ಕಂಡುಕೊಳ್ಳಸಾಧ್ಯವಾಗುವಂತೆ ಸರಿಯಾಗಿ ಸ್ಥಳದ ವಿವರವನ್ನು ಕೊಡಿ.
4 ನೀವು ಹೇಳಿದ ಕೂಡಲೇ ಒಬ್ಬ ವಿದ್ಯಾರ್ಥಿಯು ಹಾಜರಾಗದಿದ್ದರೂ, ಅವರನ್ನು ಯಾವಾಗಲೂ ಆಮಂತ್ರಿಸುತ್ತಾ ಇರಿ. ನಮ್ಮ ಸಂಸ್ಥೆಯು ಹೇಗೆ ಕೆಲಸಮಾಡುತ್ತದೆಂಬುದನ್ನು ಅವನಿಗೆ ವಿವರಿಸಲು ಪ್ರತಿ ವಾರ ಕೆಲವು ನಿಮಿಷಗಳನ್ನು ಬದಿಗಿಡಿರಿ. ದೇವರ ಚಿತ್ತವನ್ನು ಮಾಡುತ್ತಾರೆ (ಇಂಗ್ಲಿಷ್) ಎಂಬ ಬ್ರೋಷರ್ ಮತ್ತು ಯೆಹೋವನ ಸಾಕ್ಷಿಗಳು—ಆ ಹೆಸರಿನ ಹಿಂದಿರುವ ಸಂಸ್ಥೆ (ಇಂಗ್ಲಿಷ್) ಎಂಬ ವಿಡಿಯೋವನ್ನು ಉಪಯೋಗಿಸಿ, ನಮ್ಮೊಂದಿಗೆ ಹಾಗೂ ನಮ್ಮ ಕೂಟಗಳೊಂದಿಗೆ ಅವನನ್ನು ಚಿರಪರಿಚಿತಗೊಳಿಸಿ. ನಿಮ್ಮೊಂದಿಗೆ ಬೇರೆ ಪ್ರಚಾರಕರನ್ನು ಸಹ ಕರೆದುಕೊಂಡು ಹೋಗಿರಿ, ಹೀಗೆ ಅವರ ಪರಿಚಯವೂ ಆಗುವುದು. ಯೆಹೋವನು ನಮಗೆ ಕೊಟ್ಟಿರುವ ಸಂಸ್ಥೆಗಾಗಿ ಪ್ರಾರ್ಥನೆಯಲ್ಲಿ ಉಪಕಾರವನ್ನು ಹೇಳಿರಿ ಮತ್ತು ಈ ಸಂಸ್ಥೆಯೊಂದಿಗೆ ಅವನೂ ಸಹವಾಸಮಾಡುವ ಆವಶ್ಯಕತೆಯಿದೆ ಎಂದು ಆ ವಿದ್ಯಾರ್ಥಿಗೆ ತಿಳಿಸಿರಿ.
5 ಹೊಸ ಆಸಕ್ತ ವ್ಯಕ್ತಿಗಳು ನಮ್ಮೊಂದಿಗೆ ಸಭೆಸೇರುವಂತೆ ಸಹಾಯಮಾಡಲು ಹಿಂಜರಿಯಬೇಡಿರಿ. ಯೆಹೋವನಿಗಾಗಿರುವ ಅವರ ಗಣ್ಯತೆಯು ಬೆಳೆಯುತ್ತಾ ಹೋದಂತೆ, ಅವರು ಕಲಿತಂಥ ವಿಷಯಗಳನ್ನು ಅನ್ವಯಿಸಿಕೊಳ್ಳಲು ಮತ್ತು ದೇವರ ಐಕ್ಯ ಸಂಸ್ಥೆಯ ಭಾಗವಾಗಲು ಅವರು ಪ್ರಚೋದಿಸಲ್ಪಡುವರು.—1 ಕೊರಿಂ. 14:25.