ಅದರ ಉದ್ದೇಶವೇನು?
1 ನಾವು ಬೈಬಲ್ ಅಧ್ಯಯನಗಳನ್ನು ಏಕೆ ನಡಿಸುತ್ತೇವೆ? ಜ್ಞಾನವನ್ನು ಒದಗಿಸಲು, ಜನರ ಜೀವಿತಗಳನ್ನು ಸುಧಾರಿಸಲು, ಅಥವಾ ಭವಿಷ್ಯದ ಕುರಿತಾದ ಅವರ ನೋಟವನ್ನು ಬೆಳಗಿಸಲಿಕ್ಕಾಗಿ ಮಾತ್ರವೋ? ಇಲ್ಲ. ನಮ್ಮ ಮೂಲ ಉದ್ದೇಶವು ಯೇಸು ಕ್ರಿಸ್ತನಿಗೆ ಶಿಷ್ಯರನ್ನು ಮಾಡುವುದೇ ಆಗಿದೆ. (ಮತ್ತಾ. 28:19; ಅ. ಕೃ. 14:21) ಆದುದರಿಂದಲೇ, ನಾವು ಯಾರೊಂದಿಗೆ ಅಧ್ಯಯನಮಾಡುತ್ತೇವೋ ಅವರು ಸಭೆಯೊಂದಿಗೆ ಸಹವಾಸಿಸುವ ಅಗತ್ಯವಿದೆ. ಅವರ ಆತ್ಮಿಕ ಬೆಳವಣಿಗೆಯು, ಅವರು ಕ್ರೈಸ್ತ ಸಭೆಗೆ ತೋರಿಸುವ ಗಣ್ಯತೆಯೊಂದಿಗೆ ನೇರವಾಗಿ ಸಂಬಂಧಿಸಿದೆ.
2 ಅದನ್ನು ಸಾಧಿಸುವ ವಿಧ: ಅತ್ಯಾರಂಭದಿಂದಲೇ, ಸಭಾ ಕೂಟಗಳಿಗೆ ಹಾಜರಾಗುವಂತೆ ವಿದ್ಯಾರ್ಥಿಯನ್ನು ಎಡೆಬಿಡದೆ ಉತ್ತೇಜಿಸುತ್ತಾ ಇರ್ರಿ. (ಇಬ್ರಿ. 10:24, 25) ಇವು ಹೇಗೆ ಅವನ ನಂಬಿಕೆಯನ್ನು ಬಲಪಡಿಸುವವು, ದೇವರ ಚಿತ್ತವನ್ನು ಮಾಡುವುದರಲ್ಲಿ ನೆರವು ನೀಡುವವು, ಮತ್ತು ಯೆಹೋವನನ್ನು ಕೊಂಡಾಡಲು ಬಯಸುವ ಇತರರೊಂದಿಗೆ ಹಿತಕರವಾದ ಸಹವಾಸವನ್ನು ಸಾಧ್ಯಗೊಳಿಸುವವು ಎಂಬುದನ್ನು ವಿವರಿಸಿ. (ಕೀರ್ತ. 27:13; 32:8; 35:18) ನಿಮ್ಮ ಪ್ರೀತಿಯ ವೈಯಕ್ತಿಕ ಅಭಿವ್ಯಕ್ತಿಗಳು ಮತ್ತು ಸಭೆಗೆ ಹಾಗೂ ಕೂಟಗಳಿಗಾಗಿರುವ ನಿಮ್ಮ ಗಣ್ಯತೆಯು, ತಾವೂ ಹಾಜರಾಗಬೇಕು ಎಂಬ ಬಯಕೆಯನ್ನು ಅವರಲ್ಲಿ ಕೆರಳಿಸುವುದು.
3 ಯೆಹೋವನ ಸಂಸ್ಥೆಯು ಒಂದು ಅಂತಾರಾಷ್ಟ್ರೀಯ ಸಹೋದರತ್ವವಾಗಿದೆ ಎಂಬುದನ್ನು ಹೊಸಬರು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಅವರಿಗೆ ಯೆಹೋವನ ಸಾಕ್ಷಿಗಳು—ಆ ಹೆಸರಿನ ಹಿಂದಿರುವ ಸಂಸ್ಥೆ (ಇಂಗ್ಲಿಷ್) ಮತ್ತು ನಮ್ಮ ಸಹೋದರರ ಇಡೀ ಬಳಗ (ಇಂಗ್ಲಿಷ್) ಎಂಬ ವಿಡಿಯೋಗಳನ್ನು ತೋರಿಸಿ. ಯೆಹೋವನು ತನ್ನ ಚಿತ್ತವನ್ನು ಪೂರೈಸಲಿಕ್ಕಾಗಿ ಲೋಕವ್ಯಾಪಕವಾಗಿರುವ ಲಕ್ಷಾಂತರ ಸಮರ್ಪಿತ ವ್ಯಕ್ತಿಗಳನ್ನು ಉಪಯೋಗಿಸುತ್ತಿದ್ದಾನೆ ಎಂಬುದನ್ನು ಗಣ್ಯಮಾಡಲು ಅವರಿಗೆ ಸಹಾಯಮಾಡಿ. ಈ ಹೊಸಬರು ಕೂಡ ದೇವರನ್ನು ಸೇವಿಸಲು ಆಮಂತ್ರಿಸಲ್ಪಟ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳುವಂತೆ ಮಾಡಿ.—ಯೆಶಾ. 2:2, 3.
4 ಒಬ್ಬ ಬೈಬಲ್ ವಿದ್ಯಾರ್ಥಿಯು ಯೇಸುವಿನ ನಿಜ ಶಿಷ್ಯನಾಗುವುದನ್ನು ನೋಡುವುದು ಅತ್ಯಾನಂದವನ್ನು ನೀಡುವಂಥ ವಿಷಯವಾಗಿದೆ. ಅದೇ ನಮ್ಮ ಉದ್ದೇಶವಾಗಿದೆ!—3 ಯೋಹಾ. 4.