“ಸುವಾರ್ತೆಯನ್ನು ಆಸಕ್ತಿಯಿಂದ” ಪ್ರಕಟಿಸಿರಿ
1. ನಾವು ಯಾವ ಸುವಾರ್ತೆಯನ್ನು ಸಾರುತ್ತೇವೆ?
1 ಒಳ್ಳೇ ವಾರ್ತೆಯು ವಿರಳವಾಗಿರುವ ಈ ಲೋಕದಲ್ಲಿ ‘ದೇವರ ಕೃಪೆಯ ವಿಷಯವಾದ ಸುವಾರ್ತೆಯನ್ನು ಆಸಕ್ತಿಯಿಂದ ಪ್ರಕಟಿಸುವ’ ಸದವಕಾಶ ನಮಗಿದೆ. (ಅ.ಕೃ. 20:24) ಇದರಲ್ಲಿ, ‘ಕಡೇ ದಿವಸಗಳು’ ಕೊನೆಗೊಂಡು ‘ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಗುವ’ ಯೆಹೋವನ ನೀತಿಯ ಹೊಸ ಲೋಕವು ಸ್ಥಾಪನೆಯಾಗುವುದರ ಬಗ್ಗೆಯೂ ಜನರಿಗೆ ತಿಳಿಸುವುದು ಒಳಗೂಡಿದೆ. (2 ತಿಮೊ. 3:1-5; ಪ್ರಕ. 21:4) ಆ ಹೊಸ ಲೋಕದಲ್ಲಿ ಅಸ್ವಸ್ಥತೆ ಎಂದಿಗೂ ಇರದು. (ಯೆಶಾ. 33:24) ಮೃತ ಪ್ರಿಯ ಜನರು ಸಮಾಧಿಗಳಿಂದ ಹೊರಬಂದು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಜೊತೆಗೂಡುವರು. (ಯೋಹಾ. 5:28, 29) ಇಡೀ ಭೂಮಿಯು ಸುಂದರ ಪರದೈಸಾಗಿ ಮಾರ್ಪಡಲಿರುವುದು. (ಯೆಶಾ. 65:21-23) ಈ ಆಶೀರ್ವಾದಗಳು ನಾವು ಸಾರುವ ಸುವಾರ್ತೆಯ ಕೇವಲ ಕೆಲವು ಅಂಶಗಳಾಗಿವೆ!
2. ಜ್ಞಾಪಕಾಚರಣೆಯ ಸಮಯಾವಧಿಯು ಸುವಾರ್ತೆಯನ್ನು ಆಸಕ್ತಿಯಿಂದ ಪ್ರಕಟಿಸಲು ಅತ್ಯುತ್ತಮ ಅವಕಾಶಗಳನ್ನು ನಮ್ಮ ಮುಂದಿಡುತ್ತದೆ ಏಕೆ?
2 ಮಾರ್ಚ್, ಏಪ್ರಿಲ್, ಮೇ ತಿಂಗಳುಗಳು ಸುವಾರ್ತೆಯನ್ನು ಸಾರಲು ಅತ್ಯುತ್ತಮ ಅವಕಾಶಗಳನ್ನು ನಮ್ಮ ಮುಂದಿಡುತ್ತವೆ. ಈ ತಿಂಗಳುಗಳಲ್ಲಿ ಅನುಕೂಲಕರ ಹವಾಮಾನ ಮತ್ತು ದೀರ್ಘ ಹಗಲುಗಳು ಇರುವುದರಿಂದ ಶುಶ್ರೂಷೆಯಲ್ಲಿ ಹೆಚ್ಚಿನ ಸಮಯವನ್ನು ವ್ಯಯಿಸಲು ಸಾಧ್ಯವಾಗುತ್ತದೆ. ಅಲ್ಲದೆ ವರ್ಷದಲ್ಲೇ ಅತಿ ಪ್ರಾಮುಖ್ಯ ಸಂದರ್ಭವಾದ ಜ್ಞಾಪಕಾಚರಣೆಯು ಮಾರ್ಚ್ 22ರ ಶನಿವಾರದಂದು ಸೂರ್ಯಾಸ್ತದ ನಂತರ ಲೋಕದಾದ್ಯಂತ ಆಚರಿಸಲ್ಪಡುವುದು. ಆದುದರಿಂದ ಕ್ಷೇತ್ರ ಚಟುವಟಿಕೆಗಳನ್ನು ಹೆಚ್ಚಿಸಲು ಈಗಿಂದಲೇ ತಯಾರಿ ಮಾಡಲಾರಂಭಿಸೋಣ.
3. ಕುಟುಂಬವಾಗಿ ನಮ್ಮ ಕ್ಷೇತ್ರ ಸೇವೆಯನ್ನು ಹೆಚ್ಚಿಸಲು ಯಾವುದು ಸಹಾಯ ಮಾಡಬಲ್ಲದು?
3 ಆಕ್ಸಿಲಿಯರಿ ಪಯನೀಯರ್ ಸೇವೆ: ಒಂದು, ಎರಡು ಅಥವಾ ಮೂರೂ ತಿಂಗಳು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಸಾಧ್ಯವಾಗುವಂತೆ ನಿಮ್ಮ ಶೆಡ್ಯೂಲನ್ನು ಹೊಂದಿಸಸಾಧ್ಯವೋ? ಇದರ ಕುರಿತು ಮುಂದಿನ ಕುಟುಂಬ ಅಧ್ಯಯನದಲ್ಲಿ ಯಾಕೆ ಚರ್ಚಿಸಬಾರದು? ಕುಟುಂಬದಲ್ಲಿ ಎಲ್ಲರ ಒಳ್ಳೇ ಸಹಕಾರದೊಂದಿಗೆ ಒಬ್ಬರು ಅಥವಾ ಹೆಚ್ಚು ಸದಸ್ಯರು ಈ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಸಾಧ್ಯವಿದೆ. (ಜ್ಞಾನೋ. 15:22) ಇದರ ಕುರಿತು ಯೆಹೋವನಿಗೆ ಪ್ರಾರ್ಥಿಸಿರಿ ಮತ್ತು ಆತನು ನಿಮ್ಮ ಪ್ರಯತ್ನಗಳನ್ನು ಹೇಗೆ ಆಶೀರ್ವದಿಸುತ್ತಾನೆಂದು ಸ್ವತಃ ನೋಡಿರಿ. (ಜ್ಞಾನೋ. 16:3) ಕುಟುಂಬದ ಒಬ್ಬ ಸದಸ್ಯನೂ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಸಾಧ್ಯವಿಲ್ಲದಿರುವುದಾದರೆ, ಶುಶ್ರೂಷೆಯಲ್ಲಿ ಹೆಚ್ಚು ಸಮಯ ವ್ಯಯಿಸುವ ನಿರ್ದಿಷ್ಟ ಗುರಿಗಳನ್ನು ಪ್ರತಿಯೊಬ್ಬನೂ ಇಡಬಹುದು.
4. ನಮಗೆ ಪೂರ್ಣ ಸಮಯದ ಉದ್ಯೋಗವಿರುವಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಸಾಧ್ಯವಾಗುವಂತೆ ನಮ್ಮ ಚಟುವಟಿಕೆಗಳನ್ನು ಹೇಗೆ ಶೆಡ್ಯೂಲ್ ಮಾಡಸಾಧ್ಯವಿದೆ?
4 ನಿಮಗೆ ಪೂರ್ಣ ಸಮಯದ ಉದ್ಯೋಗವಿರುವಲ್ಲಿ, ಒಂದು ಉತ್ತಮ ಶೆಡ್ಯೂಲ್ ನಿಮಗೆ ನೆರವಾಗಬಲ್ಲದು. ಬಹುಶಃ ಮಧ್ಯಾಹ್ನ ಊಟದ ವಿರಾಮವಿರುವಾಗ ಸ್ವಲ್ಪ ಹೊತ್ತನ್ನು ಸುವಾರ್ತೆ ಸಾರಲಿಕ್ಕಾಗಿ ಉಪಯೋಗಿಸಬಹುದು. ಇಲ್ಲವೆ ನಿಮ್ಮ ಮನೆಯ ಹತ್ತಿರವಾಗಲಿ ಕೆಲಸದ ಸ್ಥಳದ ಹತ್ತಿರವಾಗಲಿ ವೈಯಕ್ತಿಕ ಟೆರಿಟೊರಿಯನ್ನು ಪಡೆದುಕೊಳ್ಳುವಲ್ಲಿ, ಕೆಲಸಕ್ಕೆ ಹೋಗುವ ಮೊದಲು ಅಥವಾ ನಂತರ ಒಂದು ತಾಸಿನಷ್ಟು ಕಾಲ ಶುಶ್ರೂಷೆಯಲ್ಲಿ ಭಾಗವಹಿಸಬಹುದು. ಮಾತ್ರವಲ್ಲ ನಿಮ್ಮ ಶೆಡ್ಯೂಲ್ನಲ್ಲಿ ಹೆಚ್ಚು ಸಮಯ ಸಿಗಲಿಕ್ಕೋಸ್ಕರ, ಅಷ್ಟೊಂದು ಪ್ರಾಮುಖ್ಯವಲ್ಲದ ಚಟುವಟಿಕೆಗಳನ್ನು ಬೇರೆ ತಿಂಗಳುಗಳಲ್ಲಿ ಮಾಡಲು ಯೋಜಿಸಿರಿ ಮತ್ತು ವಾರಾಂತ್ಯಗಳಲ್ಲಿ ಎರಡೂ ದಿನಗಳನ್ನು ಸಂಪೂರ್ಣವಾಗಿ ಶುಶ್ರೂಷೆಯಲ್ಲಿ ವಿನಿಯೋಗಿಸಿರಿ. ಇನ್ನು ಕೆಲವರು ಕ್ಷೇತ್ರ ಸೇವೆಯನ್ನು ಮಾಡಲು, ಕೆಲಸದಿಂದ ಒಂದು ಅಥವಾ ಎರಡು ದಿನಗಳ ರಜೆಯನ್ನು ತೆಗೆದುಕೊಂಡಿದ್ದಾರೆ.
5. ವೃದ್ಧರು ಮತ್ತು ಅಶಕ್ತರಾದವರು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಶಕ್ತರಾಗುವಂತೆ ನೀವು ಹೇಗೆ ಸಹಾಯನೀಡಬಲ್ಲಿರಿ?
5 ನೀವು ವೃದ್ಧರೂ, ಅಶಕ್ತರೂ ಅಥವಾ ಕಡಿಮೆ ಬಲವುಳ್ಳವರೂ ಆಗಿರುವಲ್ಲಿ ಪ್ರತಿ ದಿನ ಸ್ವಲ್ಪ ಸಮಯ ಶುಶ್ರೂಷೆಯಲ್ಲಿ ವ್ಯಯಿಸುವ ಮೂಲಕ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಬಲ್ಲಿರಿ. “ಬಲಾಧಿಕ್ಯ”ವನ್ನು ಒದಗಿಸುವಂತೆ ಯೆಹೋವನಿಗೆ ಬೇಡಿಕೊಳ್ಳಿರಿ. (2 ಕೊರಿಂ. 4:7) ಒಬ್ಬ ಸಹೋದರಿ ತನ್ನ 106ರ ಪ್ರಾಯದಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಿದರು! ತಮ್ಮ ಕ್ರೈಸ್ತ ಸಂಬಂಧಿಕರ ಮತ್ತು ಸಭೆಯಲ್ಲಿರುವ ಇತರರ ಸಹಕಾರದಿಂದ ಅವರು ಮನೆ ಮನೆಯ ಸೇವೆಗೆ, ಪುನರ್ಭೇಟಿಗಳಿಗೆ ಮತ್ತು ಬೈಬಲ್ ಅಧ್ಯಯನಗಳಿಗೆ ಹೋಗಲು ಶಕ್ತರಾದರು ಮಾತ್ರವಲ್ಲ, ಶುಶ್ರೂಷೆಯ ಇತರ ವೈಶಿಷ್ಟ್ಯಗಳಲ್ಲಿ ಸಹ ಪಾಲ್ಗೊಂಡರು. ಹತ್ತು ಜನರೊಂದಿಗೆ ಬೈಬಲ್ ಅಧ್ಯಯನವನ್ನು ಆರಂಭಿಸುವುದರಲ್ಲಿ ಸಫಲರಾದರು. ಆ ಸಹೋದರಿಯು ಹೇಳುವುದು: “ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವ ಆ ಅದ್ಭುತ ಅವಕಾಶದ ಕುರಿತು ಯೋಚಿಸುವಾಗ ನನ್ನ ಹೃದಯವು ಯೆಹೋವನಿಗಾಗಿ ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬುತ್ತದೆ. ‘ಯೆಹೋವನೇ, ನಿನಗೆ ಉಪಕಾರ!’ ಎಂದು ನಾನು ನಿಜವಾಗಿ ಹೇಳಬಯಸುತ್ತೇನೆ.”
6. ಶಾಲೆಗೆ ಹೋಗುತ್ತಿರುವ ದೀಕ್ಷಾಸ್ನಾನಿತ ಮಕ್ಕಳು ಹೇಗೆ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಬಲ್ಲರು?
6 ಶಾಲೆಗೆ ಹೋಗುತ್ತಿರುವ ದೀಕ್ಷಾಸ್ನಾನಿತ ಮಕ್ಕಳು ನೀವಾಗಿರುವಲ್ಲಿ ನೀವು ಕೂಡ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಶಕ್ತರಾಗಬಹುದು. ಪೂರ್ಣ ಸಮಯದ ಉದ್ಯೋಗ ಮಾಡುವವರಂತೆಯೇ, ವಿಶೇಷವಾಗಿ ವಾರಾಂತ್ಯಗಳನ್ನು ಪೂರ್ಣವಾಗಿ ಶುಶ್ರೂಷೆಯಲ್ಲಿ ಕಳೆಯಲು ಶೆಡ್ಯೂಲ್ ಮಾಡಿರಿ. ಕೆಲವೊಂದು ದಿನಗಳಂದು, ಶಾಲಾ ಅವಧಿಯ ಮುಂಚೆ ಅಥವಾ ನಂತರ ಒಂದು ತಾಸಿನಷ್ಟು ಕಾಲ ಶುಶ್ರೂಷೆಯಲ್ಲಿ ಒಳಗೂಡಲು ಕೂಡ ಯೋಜಿಸಬಹುದು. ನಿಮಗೆ ಯಾವುದಾದರೂ ರಜಾದಿನವಿದೆಯೋ? ಇರುವುದಾದರೆ, ಆ ದಿನವನ್ನು ನೀವು ಸೇವೆಗಾಗಿ ಉಪಯೋಗಿಸಬಹುದು. ಹೀಗೆ ನೀವು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಬಯಸುವುದಾದರೆ, ಇದರ ಕುರಿತು ನಿಮ್ಮ ಹೆತ್ತವರೊಂದಿಗೆ ಮಾತಾಡಿರಿ.
7. ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ ಶುಶ್ರೂಷೆಗಾಗಿ ಪ್ರಚಾರಕರ ಉತ್ಸಾಹವನ್ನು ಹೆಚ್ಚಿಸಲು ಹಿರಿಯರು ಏನು ಮಾಡಬಹುದು?
7 ಉತ್ಸಾಹವನ್ನು ಹೆಚ್ಚಿಸಿರಿ: ಹಿರಿಯರು ತಮ್ಮ ಮಾದರಿಯ ಮೂಲಕ ಸಭೆಯಲ್ಲಿರುವವರ ಉತ್ಸಾಹವನ್ನು ಹೆಚ್ಚಿಸಬಲ್ಲರು. (1 ಪೇತ್ರ 5:2, 3) ಮುಂಜಾನೆಯ ಸಮಯದಲ್ಲಿ ಮತ್ತು ಶಾಲೆ ಅಥವಾ ಕೆಲಸದ ನಂತರ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವವರಿಗೋಸ್ಕರ ಕ್ಷೇತ್ರ ಸೇವೆಗಾಗಿರುವ ಹೆಚ್ಚುವರಿ ಕೂಟಗಳನ್ನು ಏರ್ಪಡಿಸಲು ಅವರು ನಿರ್ಧರಿಸಬಹುದು. ಈ ಕೂಟಗಳನ್ನು ಅರ್ಹ ಪ್ರಚಾರಕರು ನಿರ್ವಹಿಸುವಂತೆ ಸೇವಾ ಮೇಲ್ವಿಚಾರಕನು ನೋಡಿಕೊಳ್ಳಬೇಕು. ವಿಶೇಷ ಚಟುವಟಿಕೆಯ ಈ ತಿಂಗಳುಗಳಲ್ಲಿ ಪ್ರಚಾರಕರಿಗೆ ಸಾಕಷ್ಟು ಟೆರಿಟೊರಿ, ಪತ್ರಿಕೆಗಳು ಮತ್ತು ಸಾಹಿತ್ಯಗಳು ಇರುವಂತೆ ಅವನು ನೋಡಿಕೊಳ್ಳಬೇಕು.
8. ಒಂದು ಸಭೆಯ ಅನುಭವದಿಂದ ನಾವೇನು ಕಲಿಯುತ್ತೇವೆ?
8 ಒಂದು ಸಭೆಯ ಹಿರಿಯರು ಅನೇಕ ತಿಂಗಳುಗಳ ಹಿಂದಿನಿಂದಲೇ ಪ್ರಚಾರಕರಿಗೆ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವಂತೆ ಉತ್ತೇಜಿಸುತ್ತಿದ್ದರು. ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಎಷ್ಟು ಮಂದಿ ಪ್ರಚಾರಕರಿಗೆ ಒಪ್ಪಿಗೆ ನೀಡಲಾಗಿದೆ ಎಂಬುದನ್ನು ಅವರು ಪ್ರತಿ ವಾರ ಸಭೆಗೆ ಪ್ರಕಟಿಸುತ್ತಿದ್ದರು. ಇದರಿಂದಾಗಿ, ತಮ್ಮ ಶುಶ್ರೂಷೆಯನ್ನು ಹೆಚ್ಚಿಸಲು ಬಯಸುತ್ತಿದ್ದವರು ತಮಗೆ ಬೆಂಬಲ ಇದೆ ಎಂಬ ಆಶ್ವಾಸನೆ ಪಡೆದರು. ಬೆಳಗ್ಗೆ ಮತ್ತು ಸಂಜೆಯ ಸಮಯಗಳಲ್ಲಿ ಕ್ಷೇತ್ರ ಸೇವೆಗಾಗಿ ಹೆಚ್ಚುವರಿ ಕೂಟಗಳನ್ನು ಏರ್ಪಡಿಸಲಾಯಿತು. ಫಲಿತಾಂಶವಾಗಿ 53 ಮಂದಿ ಅಂದರೆ ಆ ಸಭೆಯ ಅರ್ಧದಷ್ಟು ಪ್ರಚಾರಕರು ಏಪ್ರಿಲ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಿದರು. ವಿರೋಧವಿರುವ ಸ್ಥಳಗಳಲ್ಲಿ ಸಹೋದರರಿಗೆ ಹಿರಿಯರಿಂದ ಹೆಚ್ಚಿನ ಉತ್ತೇಜನದ ಅಗತ್ಯವಿರುವುದು. ಸಾಕ್ಷಿಕಾರ್ಯದ ಬದಲಿ ಮಾರ್ಗಗಳಾದ ಪತ್ರ ಬರೆಯುವುದು, ಟೆಲಿಫೋನ್ ಸಾಕ್ಷಿಕಾರ್ಯ ಮತ್ತು ಇನ್ನಿತರ ವಿಧಾನಗಳ ಮೂಲಕ ಹೇಗೆ ಸುವಾರ್ತೆ ಸಾರುವುದೆಂಬುದರ ಕುರಿತು ಪ್ರತ್ಯಕ್ಷಾಭಿನಯಗಳನ್ನು ಒಂದು ಸೇವಾ ಕೂಟದಲ್ಲಿ ಒಳಗೂಡಿಸಬಹುದು.
9. ಅರ್ಹರಾಗಿರುವವರು ಪ್ರಚಾರಕರಾಗಲು ಜ್ಞಾಪಕಾಚರಣೆಯ ಸಮಯಾವಧಿಯು ಉತ್ತಮ ಸಂದರ್ಭವಾಗಿದೆ ಏಕೆ?
9 ಸಾರಲು ಇತರರಿಗೆ ಸಹಾಯ ನೀಡಿರಿ: ಈಗಷ್ಟೇ ಪ್ರಚಾರಕರಾದ ಹೊಸಬರು ಮತ್ತು ಎಳೆಯರು ಅನುಭವವುಳ್ಳ ಪ್ರಚಾರಕರೊಂದಿಗೆ ಕೆಲಸಮಾಡುವಂತೆ ಏರ್ಪಾಡುಗಳನ್ನು ಮಾಡಬಹುದು. ಇದನ್ನು ಮಾಡಲು ಜ್ಞಾಪಕಾಚರಣೆಯ ಸಮಯಾವಧಿಯು ಉತ್ತಮವಾಗಿದೆ. ಏಕೆಂದರೆ ಆ ಸಮಯದಲ್ಲಿ ಸಭೆಯಲ್ಲಿರುವ ಅನೇಕರು ತಮ್ಮ ಕ್ಷೇತ್ರ ಚಟುವಟಿಕೆಯನ್ನು ಹೆಚ್ಚಿಸುತ್ತಾರೆ. ನಿಮ್ಮ ಬೈಬಲ್ ವಿದ್ಯಾರ್ಥಿಯೊಬ್ಬನು ಪ್ರಗತಿ ಮಾಡುತ್ತಿದ್ದು ಈಗಾಗಲೇ ತನ್ನ ಜೀವಿತವನ್ನು ಯೆಹೋವನ ನೀತಿಯ ಮಟ್ಟಗಳಿಗೆ ಹೊಂದಿಕೆಯಲ್ಲಿ ತಂದಿದ್ದಾನೋ? ನಿಮ್ಮ ಮಕ್ಕಳು ಒಳ್ಳೆಯ ನಡತೆಯುಳ್ಳವರಾಗಿದ್ದು ಆಧ್ಯಾತ್ಮಿಕವಾಗಿ ಅಭಿವೃದ್ಧಿ ಮಾಡುತ್ತಿದ್ದರೂ ಇಷ್ಟರ ತನಕ ಪ್ರಚಾರಕರಾಗಿಲ್ಲವೋ? ಅಂಥವರು ಅಸ್ನಾತ ಪ್ರಚಾರಕರಾಗಲು ತಮಗಿರುವ ಇಚ್ಛೆಯನ್ನು ವ್ಯಕ್ತಪಡಿಸುವುದಾದರೆ, ಮತ್ತು ನಿಮಗೂ ಅವರು ಅರ್ಹರೆಂದು ಅನಿಸುವುದಾದರೆ, ದಯವಿಟ್ಟು ಅದನ್ನು ಹಿರಿಯರಲ್ಲೊಬ್ಬನಿಗೆ ತಿಳಿಸಿರಿ. ಇಬ್ಬರು ಹಿರಿಯರು ಈ ವಿಷಯವನ್ನು ನಿಮ್ಮೊಂದಿಗೆ ಮತ್ತು ನಿಮ್ಮ ಮಗ/ಮಗಳು ಅಥವಾ ವಿದ್ಯಾರ್ಥಿಯೊಂದಿಗೆ ಚರ್ಚಿಸುವಂತೆ ಅಧ್ಯಕ್ಷ ಮೇಲ್ವಿಚಾರಕನು ಏರ್ಪಾಡು ಮಾಡುವನು.
10. ನಿಷ್ಕ್ರಿಯರಾದವರಿಗೆ ನೆರವು ನೀಡಲು ಹಿರಿಯರು ಏನು ಮಾಡಬಲ್ಲರು?
10 ನಿಷ್ಕ್ರಿಯರಾದವರು ಸಭೆಯೊಂದಿಗಿನ ತಮ್ಮ ಚಟುವಟಿಕೆಯನ್ನು ಪುನರಾರಂಭಿಸಲು ಮುಂಬರುವ ತಿಂಗಳುಗಳು ಉತ್ತಮವಾಗಿವೆ. ಸಭಾ ಪುಸ್ತಕ ಅಧ್ಯಯನ ಮೇಲ್ವಿಚಾರಕರು ಮತ್ತು ಇತರ ಹಿರಿಯರು, ನಿಷ್ಕ್ರಿಯರಾದವರನ್ನು ಭೇಟಿಯಾಗಿ ತಮ್ಮೊಂದಿಗೆ ಶುಶ್ರೂಷೆಯಲ್ಲಿ ಭಾಗವಹಿಸುವಂತೆ ಪ್ರೀತಿಯಿಂದ ವೈಯಕ್ತಿಕ ಆಮಂತ್ರಣ ಕೊಡಲು ಒಟ್ಟಾಗಿ ಶ್ರದ್ಧಾಪೂರ್ವಕ ಪ್ರಯತ್ನ ಮಾಡಬೇಕು. ಅವರು ತುಂಬ ಸಮಯದಿಂದ ನಿಷ್ಕ್ರಿಯರಾಗಿರುವವರಾದರೆ ಅವರು ಅರ್ಹರಾಗಿದ್ದಾರೋ ಎಂಬುದನ್ನು ನಿರ್ಣಯಿಸಲಿಕ್ಕಾಗಿ ಮೊದಲು ಇಬ್ಬರು ಹಿರಿಯರು ಅವರೊಂದಿಗೆ ಮಾತನಾಡಬೇಕು.—km-KA 11/00 ಪು. 3.
11. “ದೇವರ ಕೃಪೆಯ” ಅತಿ ಮಹತ್ತಾದ ಅಭಿವ್ಯಕ್ತಿ ಯಾವುದು?
11 ಜ್ಞಾಪಕಾಚರಣೆಗೆ ಸಿದ್ಧತೆಗಳನ್ನು ಮಾಡಿರಿ: ವಿಮೋಚನಾ ಮೌಲ್ಯದ ಯಜ್ಞವು “ದೇವರ ಕೃಪೆಯ” ಅತಿ ಮಹತ್ತಾದ ಅಭಿವ್ಯಕ್ತಿಯಾಗಿದೆ. (ಅ.ಕೃ. 20:24) ಲೋಕವ್ಯಾಪಕವಾಗಿ ಕೃತಜ್ಞತಾಭಾವದ ಲಕ್ಷಾಂತರ ಮಂದಿ ಮಾರ್ಚ್ 22ರ ಶನಿವಾರ, ಸೂರ್ಯಾಸ್ತದ ನಂತರ ಯೇಸುವಿನ ಮರಣದ ಜ್ಞಾಪಕಾಚರಣೆಯನ್ನು ಆಚರಿಸಲು ಕೂಡಿಬರುವರು. ಯೆಹೋವನು ಮಾನವಕುಲದ ಕಡೆಗೆ ತೋರಿಸಿದ ಕೃಪೆಯ ಸಾಕ್ಷ್ಯವಾಗಿರುವ ಈ ಆಚರಣೆಗೆ ಹಾಜರಾಗುವಂತೆ ಪ್ರಾಮಾಣಿಕ ಹೃದಯದ ಎಲ್ಲಾ ಜನರನ್ನು ಆಮಂತ್ರಿಸಲು ಮತ್ತು ಅವರಿಗೆ ಸಹಾಯನೀಡಲು ನಾವು ಬಯಸುತ್ತೇವೆ.
12. ನಾವು ಯಾರನ್ನು ಜ್ಞಾಪಕಾಚರಣೆಗೆ ಆಮಂತ್ರಿಸಬೇಕು?
12 ನೀವು ಆಮಂತ್ರಿಸಲು ಬಯಸುವವರ ಹೆಸರುಗಳನ್ನು ಪಟ್ಟಿ ಮಾಡಿ. ಸಂಬಂಧಿಕರು, ನೆರೆಯವರು, ಕೆಲಸದ ಸ್ಥಳದಲ್ಲಿನ ಅಥವಾ ಶಾಲೆಯಲ್ಲಿನ ಪರಿಚಯಸ್ಥರು, ಈ ಹಿಂದೆ ಬೈಬಲ್ ಅಧ್ಯಯನ ಮಾಡಿದವರು, ಈಗಿನ ಬೈಬಲ್ ವಿದ್ಯಾರ್ಥಿಗಳು ಮತ್ತು ನೀವು ಕ್ರಮವಾಗಿ ಭೇಟಿಮಾಡುವ ಎಲ್ಲರನ್ನು ಈ ಪಟ್ಟಿಯಲ್ಲಿ ಸೇರಿಸಬಹುದು. ನೀವು ಆಮಂತ್ರಣ ಕೊಡುವಾಗ ಯಾರಿಗಾದರೂ ಜ್ಞಾಪಕಾಚರಣೆಯ ಕುರಿತು ಪ್ರಶ್ನೆಗಳಿರುವಲ್ಲಿ ಬೈಬಲ್ ಬೋಧಿಸುತ್ತದೆ ಪುಸ್ತಕದ ಪರಿಶಿಷ್ಟದ 206-9ನೇ ಪುಟಗಳಲ್ಲಿರುವ ಕರ್ತನ ಸಂಧ್ಯಾ ಭೋಜನದ ಕುರಿತಾದ ಲೇಖನದಿಂದ ಉತ್ತರಿಸಬಹುದು. ಆಗ ಈ ಬೈಬಲ್ ಅಧ್ಯಯನ ಸಹಾಯಕವನ್ನು ತೋರಿಸಲು ಅವಕಾಶ ಸಿಗುವುದರಿಂದ ಅವರೊಂದಿಗೆ ಬೈಬಲ್ ಅಧ್ಯಯನವನ್ನು ಆರಂಭಿಸಲು ಕೂಡ ಸಾಧ್ಯವಾಗಬಹುದು.
13. ಇತರರನ್ನು ಜ್ಞಾಪಕಾಚರಣೆಗೆ ಆಮಂತ್ರಿಸಿದ ಇಬ್ಬರು ಪ್ರಚಾರಕರ ಪ್ರಯತ್ನವನ್ನು ಯೆಹೋವನು ಹೇಗೆ ಆಶೀರ್ವದಿಸಿದನು?
13 ಜ್ಞಾಪಕಾಚರಣೆಗೆ ಆಮಂತ್ರಿಸಲಿಕ್ಕಾಗಿ ಒಬ್ಬ ಸಹೋದರಿಯು 48 ಕುಟುಂಬಗಳ ಪಟ್ಟಿ ಮಾಡಿದಳು. ಆಕೆ ಒಂದೊಂದು ಕುಟುಂಬಕ್ಕೆ ಆಮಂತ್ರಣ ಕೊಡುತ್ತಾ ಹೋದಂತೆ ಅದನ್ನು ಪಟ್ಟಿಯಲ್ಲಿ ಗುರುತಿಸಿ, ದಿನಾಂಕವನ್ನೂ ಬರೆದಿಡುತ್ತಿದ್ದಳು. ಆಕೆಯು ಆಮಂತ್ರಿಸಿದವರಲ್ಲಿ 26 ಮಂದಿ ಜ್ಞಾಪಕಾಚರಣೆಗೆ ಹಾಜರಾದಾಗ ಆಕೆ ಎಷ್ಟೊಂದು ಸಂತೋಷಪಟ್ಟಳು! ಒಬ್ಬ ಸಹೋದರನು, ಮುಂಚೆ ಪಾದ್ರಿಯಾಗಿದ್ದ ಆದರೆ ಈಗ ತನ್ನ ಅಂಗಡಿಯಲ್ಲಿ ಒಬ್ಬ ಉದ್ಯೋಗಿಯಾಗಿದ್ದವನನ್ನು ಜ್ಞಾಪಕಾಚರಣೆಗೆ ಆಮಂತ್ರಿಸಿದನು. ಜ್ಞಾಪಕಾಚರಣೆಯನ್ನು ಹಾಜರಾದ ನಂತರ ಅವನು ಉದ್ಗರಿಸಿದ್ದು, “ನಾನು ಬೈಬಲಿನ ಕುರಿತು ಈ ಒಂದು ತಾಸಿನಲ್ಲಿ ಏನು ಕಲಿತೆನೋ ಅದನ್ನು ಕ್ಯಾಥೊಲಿಕ್ ಚರ್ಚ್ಗೆ 30 ವರ್ಷ ಹೋಗಿಯೂ ಕಲಿಯಲಿಲ್ಲ.” ಕೂಟವು ಮುಗಿದ ಕೂಡಲೆ ಆ ವ್ಯಕ್ತಿಯು ಬೈಬಲ್ ಬೋಧಿಸುತ್ತದೆ ಪುಸ್ತಕದಿಂದ ಅಧ್ಯಯನಕ್ಕೆ ಒಪ್ಪಿಕೊಂಡನು.
14. ಯಾವ ಲೋಕವ್ಯಾಪಕ ಕಾರ್ಯಾಚರಣೆಯು ಮಾರ್ಚ್ 1ರಂದು ಆರಂಭಗೊಳ್ಳುವುದು?
14 ಕಾರ್ಯಾಚರಣೆ: ಮಾರ್ಚ್ 1ರ ಶನಿವಾರದಿಂದ ಮಾರ್ಚ್ 22ರ ತನಕ ಜ್ಞಾಪಕಾಚರಣೆಯ ವಿಶೇಷ ಆಮಂತ್ರಣ ಪತ್ರವು ಲೋಕವ್ಯಾಪಕವಾಗಿ ವಿತರಿಸಲ್ಪಡಲಿದೆ. ಎಲ್ಲರೂ ಈ ಪ್ರಾಮುಖ್ಯ ಕಾರ್ಯಾಚರಣೆಯಲ್ಲಿ ಪೂರ್ಣವಾಗಿ ಭಾಗವಹಿಸುವಂತೆ ಉತ್ತೇಜಿಸುತ್ತೇವೆ. ಆಮಂತ್ರಣ ಪತ್ರವನ್ನು ಮನೆ ಬಾಗಲಲ್ಲಿ ಬಿಟ್ಟು ಬರುವುದಕ್ಕಿಂತ ಜನರನ್ನು ವೈಯಕ್ತಿಕವಾಗಿ ಭೇಟಿಯಾಗಿ ಕೊಡುವುದು ಉತ್ತಮ. ಆದರೆ ಒಂದುವೇಳೆ ಟೆರಿಟೊರಿಯು ದೊಡ್ಡದಾಗಿರುವಲ್ಲಿ ಮನೆಯಲ್ಲಿರದವರಿಗಾಗಿ ಅದನ್ನು ವಿವೇಚನೆಯಿಂದ ಬಿಟ್ಟುಬರಬಹುದೆಂದು ಹಿರಿಯರು ನಿರ್ಧರಿಸಬಹುದು. ವಾರಾಂತ್ಯಗಳಲ್ಲಿ ಇತ್ತೀಚಿನ ಪತ್ರಿಕೆಗಳನ್ನು ಸಹ ನೀಡುವೆವು.
15. ಜ್ಞಾಪಕಾಚರಣೆಯ ಆಮಂತ್ರಣ ನೀಡುವಾಗ ನಾವೇನು ಹೇಳಬಹುದು?
15 ಈ ಆಮಂತ್ರಣ ಪತ್ರಗಳನ್ನು ವಿತರಿಸಲು ಸಮಯವು ಸ್ವಲ್ಪವೇ ಇರುವುದರಿಂದ ಚುಟುಕಾದ ನಿರೂಪಣೆಯನ್ನು ಉಪಯೋಗಿಸುವುದು ಒಳ್ಳೇದು. ಮಾತ್ರವಲ್ಲ, ಸ್ನೇಹಭಾವದವರೂ ಉತ್ಸಾಹವುಳ್ಳವರೂ ಆಗಿರ್ರಿ. ನಮ್ಮ ಸಂದೇಶದಲ್ಲಿ ಮನೆಯವನು ನಿಜವಾಗಿಯೂ ಆಸಕ್ತನಾಗಿದ್ದಾನೆಂದು ತಿಳಿದುಕೊಂಡ ನಂತರ ನೀವು ಹೀಗೆ ಹೇಳಬಹುದು: “ಮಾರ್ಚ್ 22ರಂದು ನಡೆಸಲ್ಪಡುವ ಒಂದು ಪ್ರಾಮುಖ್ಯ ಆಚರಣೆಗೆ ನಿಮ್ಮನ್ನು, ನಿಮ್ಮ ಕುಟುಂಬ ಸದಸ್ಯರನ್ನು ಮತ್ತು ಸ್ನೇಹಿತರನ್ನು ಆಮಂತ್ರಿಸಲು ಬಂದಿದ್ದೇವೆ. ಇದು ನಿಮಗಾಗಿರುವ ಆಮಂತ್ರಣ ಪತ್ರ. ಹೆಚ್ಚಿನ ವಿವರಗಳು ಇದರಲ್ಲಿ ಕೊಡಲ್ಪಟ್ಟಿವೆ.” ಮನೆಯವರಿಗೆ ಪ್ರಶ್ನೆಗಳಿರಬಹುದು ಅಥವಾ ಆಮಂತ್ರಣವನ್ನು ಸ್ವೀಕರಿಸಿ ಖಂಡಿತ ಬರುವೆವೆಂದು ಹೇಳಬಹುದು. ಇಂತಹ ಆಸಕ್ತ ವ್ಯಕ್ತಿಗಳ ಬಗ್ಗೆ ಬರೆದಿಟ್ಟು ಅವರನ್ನು ಪುನಃ ಭೇಟಿಯಾಗಲು ಏರ್ಪಾಡುಮಾಡಿರಿ.
16. ಜನರನ್ನು ಜ್ಞಾಪಕಾಚರಣೆಗೆ ಆಮಂತ್ರಿಸುವ ಈ ವಿಶೇಷ ಕಾರ್ಯಾಚರಣೆಯ ಮಹತ್ವವನ್ನು ಯಾವ ಅನುಭವವು ದೃಷ್ಟಾಂತಿಸುತ್ತದೆ?
16 ಕಳೆದ ವರ್ಷ ಒಬ್ಬ ಸೈನಿಕನಿಗೆ ತನ್ನ ಮನೆಬಾಗಲಲ್ಲಿ ಇಡಲಾಗಿದ್ದ ಜ್ಞಾಪಕಾಚರಣೆಯ ಆಮಂತ್ರಣ ಪತ್ರ ಸಿಕ್ಕಿತು. ಅವನದಕ್ಕೆ ಹಾಜರಾಗಲು ನಿರ್ಣಯಿಸಿದನು. ಆದರೆ ಅದಕ್ಕಾಗಿ ಅವನು ಮೇಲಧಿಕಾರಿಯಿಂದ ಅನುಮತಿ ಪಡೆಯಬೇಕಿತ್ತು. ಆಮಂತ್ರಣ ಪತ್ರವನ್ನು ತೋರಿಸಿದಾಗ ಮೇಲಧಿಕಾರಿಯು ಸ್ವಲ್ಪ ಸಮಯ ಸುಮ್ಮನಾದನು ಮತ್ತು ತದನಂತರ, ತನ್ನ ಹೆತ್ತವರು ಕೂಡ ಯೆಹೋವನ ಸಾಕ್ಷಿಗಳು ಮತ್ತು ತಾನೂ ಅವರೊಂದಿಗೆ ಕೂಟಗಳಿಗೆ ಹಾಜರಾಗುತ್ತಿದ್ದೆ ಎಂದು ತಿಳಿಸಿದನು. ಅವನು ಆ ಸೈನಿಕನಿಗೆ ಹಾಜರಾಗಲು ಅನುಮತಿ ಕೊಟ್ಟನು ಮಾತ್ರವಲ್ಲದೆ ಸ್ವತಃ ಜ್ಞಾಪಕಾಚರಣೆಗೆ ಹಾಜರಾದನು!
17. ನಾವು ದೇವರಿಂದ ಹೊಂದಿದ ಕೃಪೆಯನ್ನು ವ್ಯರ್ಥಮಾಡಿಕೊಳ್ಳಲಿಲ್ಲವೆಂದು ಹೇಗೆ ತೋರಿಸುತ್ತೇವೆ?
17 ಕೃತಜ್ಞತೆಯನ್ನು ವ್ಯಕ್ತಪಡಿಸಿರಿ: 2008ರ ಜ್ಞಾಪಕಾಚರಣೆಯ ಸಮಯಾವಧಿ ಹತ್ತಿರವಾಗುತ್ತಿರುವಂತೆ, ಯೆಹೋವನು ನಮ್ಮ ಕಡೆಗೆ ತೋರಿಸಿರುವ ಕೃಪೆಯನ್ನು ಪರ್ಯಾಲೋಚಿಸೋಣ. ಅಪೊಸ್ತಲ ಪೌಲನು ಬರೆದದ್ದು: “ನೀವು ಹೊಂದಿದ ದೇವರ ಕೃಪೆಯನ್ನು ವ್ಯರ್ಥಮಾಡಿಕೊಳ್ಳಬೇಡಿರೆಂದು ಎಚ್ಚರಿಸುತ್ತೇವೆ.” (2 ಕೊರಿಂ. 6:1) ದೇವರಿಂದ ಹೊಂದಿದ ಕೃಪೆಯನ್ನು ನಾವು ವ್ಯರ್ಥಮಾಡಿಕೊಳ್ಳಲಿಲ್ಲವೆಂದು ಹೇಗೆ ತೋರಿಸುತ್ತೇವೆ? ಪೌಲನು ಬರೆದದ್ದು: “ಸರ್ವ ವಿಷಯಗಳಲ್ಲಿ ನಾವು ದೇವರ ಸೇವಕರಾಗಿದ್ದೇವೆಂದು ತೋರಿಸುತ್ತೇವೆ.” (2 ಕೊರಿಂ. 6:4, NIBV) ಆದುದರಿಂದ, ನಮ್ಮ ಒಳ್ಳೇ ನಡತೆಯ ಮೂಲಕ ಮತ್ತು ಸುವಾರ್ತೆಯನ್ನು ಹುರುಪಿನಿಂದ ಸಾರುವ ಮೂಲಕ ಯೆಹೋವನು ಕೊಟ್ಟಿರುವ ಈ ಉಡುಗೊರೆಗಾಗಿ ನಮ್ಮ ಕೃತಜ್ಞತೆಯನ್ನು ತೋರಿಸುತ್ತೇವೆ. ಈ ವರ್ಷದ ಜ್ಞಾಪಕಾಚರಣೆಯ ಸಮಯಾವಧಿಯು ಸುವಾರ್ತೆಯನ್ನು ಆಸಕ್ತಿಯಿಂದ ಪ್ರಕಟಿಸುತ್ತಾ ನಮ್ಮ ಚಟುವಟಿಕೆಯನ್ನು ಹೆಚ್ಚಿಸಲು ಅತ್ಯುತ್ತಮ ಅವಕಾಶವಾಗಿದೆ.
[ಪುಟ 7ರಲ್ಲಿರುವಚೌಕ]
ಯಾರೆಲ್ಲ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಸಾಧ್ಯವಿದೆ?
◼ ಕುಟುಂಬಗಳು
◼ ಪೂರ್ಣ ಸಮಯದ ಉದ್ಯೋಗ ಇರುವವರು
◼ ವೃದ್ಧರು ಮತ್ತು ಅಶಕ್ತರು
◼ ಶಾಲೆಗೆ ಹೋಗುವವರು
[ಪುಟ 8ರಲ್ಲಿರುವಚೌಕ]
ಜ್ಞಾಪಕಾಚರಣೆಯ ಆಮಂತ್ರಣ ಪತ್ರಗಳನ್ನು ವಿತರಿಸುವಾಗ:
◼ ಚುಟುಕಾಗಿ ಮತ್ತು ಉತ್ಸಾಹದಿಂದ ಮಾತಾಡಿರಿ
◼ ಆಸಕ್ತರ ಬಗ್ಗೆ ಬರೆದಿಟ್ಟು ಪುನರ್ಭೇಟಿ ಮಾಡಿರಿ
◼ ವಾರಾಂತ್ಯಗಳಲ್ಲಿ ಪತ್ರಿಕೆಗಳನ್ನು ನೀಡಿರಿ.