ನಿಮಗಿರುವವುಗಳಲ್ಲಿ ಸಂತೃಪ್ತರಾಗಿರಿ
1 ನಮ್ಮ ಮನೆವಾರ್ತೆಯ ಆರ್ಥಿಕ ಆವಶ್ಯಕತೆಗಳನ್ನು ಪೂರೈಸಬೇಕೆಂದು ಶಾಸ್ತ್ರವಚನಗಳು ನಮಗೆ ಬುದ್ಧಿ ಹೇಳುತ್ತವೆ, ಆದರೆ ಅದೇ ನಮ್ಮ ಜೀವಿತದ ಪ್ರಧಾನ ಗುರಿಯಾಗಿರಬಾರದು. ಆತ್ಮಿಕ ವಿಷಯಗಳು ಮೊದಲ ಸ್ಥಾನದಲ್ಲಿರಬೇಕು. (ಮತ್ತಾ. 6:33; 1 ತಿಮೊ. 5:8) ಈ “ಕಠಿನಕಾಲ”ಗಳಲ್ಲಿ ಸರಿಯಾದ ಸಮತೂಕವನ್ನು ಇಟ್ಟುಕೊಳ್ಳುವುದು ಒಂದು ಪಂಥಾಹ್ವಾನವಾಗಿದೆ. (2 ತಿಮೊ. 3:1) ಅದನ್ನು ಮಾಡಲು ನಮಗೆ ಯಾವುದು ಸಹಾಯಮಾಡುವುದು?
2 ಬೈಬಲಿನ ದೃಷ್ಟಿಕೋನವನ್ನು ಅಂಗೀಕರಿಸಿರಿ: ಐಶ್ವರ್ಯವನ್ನು ಬೆನ್ನಟ್ಟುವುದು ಆತ್ಮಿಕ ಧ್ವಂಸವನ್ನು ಉಂಟುಮಾಡಸಾಧ್ಯವಿದೆ ಎಂದು ದೇವರ ವಾಕ್ಯವು ನಮ್ಮನ್ನು ಎಚ್ಚರಿಸುತ್ತದೆ. (ಪ್ರಸಂ. 5:10; ಮತ್ತಾ. 13:22; 1 ತಿಮೊ. 6:9, 10) ಈ ಕಠಿನವಾದ ಸಮಯಾವಧಿಯಲ್ಲಿ, ಆತ್ಮಿಕ ಚಟುವಟಿಕೆಗಳನ್ನು ಅಂದರೆ ಕೂಟಗಳು, ಅಧ್ಯಯನ ಹಾಗೂ ಸೇವೆಯನ್ನು ನಮ್ಮ ಜೀವಿತಗಳಲ್ಲಿ ಎರಡನೆಯ ಸ್ಥಾನಕ್ಕೆ ತಳ್ಳುವಷ್ಟರ ಮಟ್ಟಿಗೆ ಐಹಿಕ ಉದ್ಯೋಗದಲ್ಲಿ ಅಥವಾ ಆರ್ಥಿಕ ಚಿಂತೆಯಲ್ಲಿ ಸಂಪೂರ್ಣವಾಗಿ ತಲ್ಲೀನರಾಗುವುದು ನಮ್ಮಲ್ಲಿ ಯಾರಿಗೂ ವಿಪತ್ಕಾರಕವಾಗಿರಸಾಧ್ಯವಿದೆ. (ಲೂಕ 21:34-36) ಇದಕ್ಕೆ ವ್ಯತಿರಿಕ್ತವಾಗಿ ಬೈಬಲ್ ಸಲಹೆ ಕೊಡುವುದು: “ನಮಗೆ ಅನ್ನವಸ್ತ್ರಗಳಿದ್ದರೆ ಸಾಕು.”—1 ತಿಮೊ. 6:7, 8.
3 ಬೇಕುಬೇಕೆಂದೇ ತಮ್ಮ ಮೇಲೆ ಬರಮಾಡಿಕೊಂಡಿರುವ ಬಡತನದಲ್ಲಿ ಕ್ರೈಸ್ತರು ಜೀವಿಸುವಂತೆ ಅಪೇಕ್ಷಿಸಲಾಗುತ್ತದೆಂದು ಇದರ ಅರ್ಥವಲ್ಲ. ಆದರೆ ಆ ಸಲಹೆಯು, ನಮ್ಮ ಭೌತಿಕ ಆವಶ್ಯಕತೆಗಳು ನಿಜವಾಗಿಯೂ ಯಾವುದಾಗಿವೆ ಎಂಬುದನ್ನು ಗುರುತಿಸುವಂತೆ ನಮಗೆ ಸಹಾಯಮಾಡುತ್ತದೆ. ಅವು, ಆಹಾರ, ಉಡುಪು, ಹಾಗೂ ನಾವು ವಾಸಿಸುತ್ತಿರುವಲ್ಲಿ ಸಾಕಾಗುವಷ್ಟು ವಸತಿಯೇ. ಜೀವನಕ್ಕೆ ಏನು ಅಗತ್ಯವಿದೆಯೋ ಅದು ನಮ್ಮ ಬಳಿ ಈಗಾಗಲೇ ಇರುವಲ್ಲಿ, ನಾವು ಇನ್ನೂ ಹೆಚ್ಚನ್ನು ಮತ್ತು ಇನ್ನೂ ಉತ್ತಮವಾದ ವಸ್ತುಗಳನ್ನು ಪಡೆದುಕೊಳ್ಳಲು ನಿರಂತರವಾಗಿ ಪ್ರಯತ್ನಿಸಬಾರದು. ಯಾವುದೇ ಖರೀದಿಯನ್ನು ಮಾಡಲು ಅಥವಾ ಹೆಚ್ಚಿನ ಕೆಲಸವನ್ನು ಮಾಡಲು ಆಲೋಚಿಸುವಾಗ, ನಾವು ಸ್ವತಃ ಹೀಗೆ ಕೇಳಿಕೊಳ್ಳುವ ಅಗತ್ಯವಿದೆ: ‘ನಿಜವಾಗಿಯೂ ಇದರ ಆವಶ್ಯಕತೆ ಇದೆಯೊ?’ ಈ ರೀತಿಯಲ್ಲಿ ಕೇಳಿಕೊಳ್ಳುವುದು, “ದ್ರವ್ಯಾಶೆಯಿಲ್ಲದವರಾಗಿರಿ; ನಿಮಗಿರುವವುಗಳಲ್ಲಿ ತೃಪ್ತರಾಗಿರಿ” ಎಂಬ ಪ್ರೇರಿತ ಸಲಹೆಯನ್ನು ಅನ್ವಯಿಸಲು ನಮಗೆ ಸಹಾಯಮಾಡುತ್ತದೆ.—ಇಬ್ರಿ. 13:5.
4 ನಾವು ಯೆಹೋವನಲ್ಲಿ ಭರವಸೆಯಿಡುವುದಾದರೆ ಆತನು ನಮ್ಮನ್ನು ಆಶೀರ್ವದಿಸುವನು. (ಜ್ಞಾನೋ. 3:5, 6) ನಮ್ಮ ದೈನಂದಿನ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ನಾವು ಕಠಿನವಾಗಿ ದುಡಿಯಬೇಕಾದರೂ, ನಾವು ನಮ್ಮ ಜೀವಿತಗಳನ್ನು ಆ ವಿಷಯಗಳ ಮೇಲೆಯೇ ಕೇಂದ್ರೀಕರಿಸುವುದಿಲ್ಲ. ನಮ್ಮ ಬಳಿ ಹೆಚ್ಚೇ ಇರಲಿ ಅಥವಾ ಕಡಿಮೆಯೇ ಇರಲಿ, ನಮ್ಮ ಅಗತ್ಯಗಳನ್ನು ತೃಪ್ತಿಪಡಿಸಲು ನಾವು ಯೆಹೋವನ ಮೇಲೆ ಆತುಕೊಳ್ಳುತ್ತೇವೆ. (ಫಿಲಿ. 4:11-13) ಅದರ ಪರಿಣಾಮವಾಗಿ, ಇನ್ನಿತರ ಆಶೀರ್ವಾದಗಳೊಂದಿಗೆ ನಾವು ದೈವಿಕ ಸಂತೃಪ್ತಿಯಲ್ಲಿ ಆನಂದಿಸುತ್ತೇವೆ.
5 ಇತರರ ನಂಬಿಕೆಯನ್ನು ಅನುಸರಿಸಿರಿ: ಸತ್ಯದ ಮಾರ್ಗದಲ್ಲಿ ತನ್ನ ಮಗಳನ್ನು ಬೆಳೆಸುತ್ತಿದ್ದ ಒಬ್ಬ ಏಕ ಹೆತ್ತವಳು, ತನ್ನ ಜೀವಿತವನ್ನು ಕ್ರಮೇಣವಾಗಿ ಸರಳೀಕರಿಸಿದಳು. ಎಲ್ಲಾ ಸೌಕರ್ಯಗಳುಳ್ಳ ಒಂದು ಮನೆಯಲ್ಲಿ ಅವಳು ಸುಖವಾಗಿದ್ದಳು. ಆದರೆ ಅದನ್ನು ಬಿಟ್ಟು ಅವಳು ಒಂದು ಚಿಕ್ಕ ಮನೆಗೆ ಮತ್ತು ನಂತರ ಒಂದು ಚಿಕ್ಕ ಅಪಾರ್ಟ್ಮೆಂಟ್ಗೆ ಸ್ಥಳಾಂತರಿಸಿದಳು. ಇದು, ತನ್ನ ಐಹಿಕ ಕೆಲಸದ ಸಮಯವನ್ನು ಕಡಿಮೆಗೊಳಿಸಿ, ಶುಶ್ರೂಷೆಗೆ ಹೆಚ್ಚಿನ ಸಮಯವನ್ನು ಮೀಸಲಿಡಲು ಅವಳನ್ನು ಶಕ್ತಳನ್ನಾಗಿ ಮಾಡಿತು. ಅವಳ ಮಗಳು ಬೆಳೆದು ಮದುವೆಯಾದ ಬಳಿಕ, ತಾಯಿಯು ನಿವೃತ್ತಿಗಾಗಿರುವ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ನಿವೃತ್ತಿಯನ್ನು ಪಡೆದಳು. ಇದರಿಂದಾಗಿ ಅವಳ ಆದಾಯವು ಇನ್ನಷ್ಟು ಕಡಿಮೆಯಾಯಿತು. ನಮ್ಮ ಈ ಸಹೋದರಿಯು ಈಗ ರೆಗ್ಯುಲರ್ ಪಯನೀಯರ್ ಸೇವೆಯ ಎಳನೆಯ ವರುಷವನ್ನು ಆನಂದಿಸುತ್ತಿದ್ದಾಳೆ. ಜೀವನದಲ್ಲಿ ರಾಜ್ಯಾಭಿರುಚಿಗಳನ್ನು ಮೊದಲ ಸ್ಥಾನದಲ್ಲಿ ಇಡಲು ಆಕೆ ಮಾಡಿದ ಯಾವುದೇ ಆರ್ಥಿಕ ತ್ಯಾಗಗಳ ಬಗ್ಗೆ ಆಕೆಗೆ ಯಾವ ವಿಷಾದವೂ ಇಲ್ಲ.
6 ಒಬ್ಬ ಹಿರಿಯನು ಮತ್ತು ಅವನ ಹೆಂಡತಿಯು, ಮೂವರು ಮಕ್ಕಳನ್ನು ಬೆಳೆಸುವುದರ ಜೊತೆಗೆ ಅನೇಕ ವರುಷಗಳ ವರೆಗೆ ಪಯನೀಯರ್ ಸೇವೆಮಾಡಿದರು. ಕುಟುಂಬದೋಪಾದಿ, ತಮ್ಮ ಬಯಕೆಗಳನ್ನಲ್ಲ ಬದಲಾಗಿ ತಮ್ಮ ಆವಶ್ಯಕತೆಗಳನ್ನು ಪೂರೈಸಿಕೊಳ್ಳುವುದರಲ್ಲಿ ಅವರು ತೃಪ್ತರಾಗಿರಲು ಕಲಿತುಕೊಂಡರು. ಆ ಸಹೋದರನು ಹೇಳುವುದು: “ನಾವು ಬಹಳ ಸರಳವಾದ ಜೀವನವನ್ನು ನಡಿಸಬೇಕಿತ್ತು. ನಾವು ಕೆಲವು ಕಷ್ಟಗಳನ್ನು ಅನುಭವಿಸಿದೆವಾದರೂ, ಯೆಹೋವನು ಯಾವಾಗಲೂ ನಮಗೆ ಆವಶ್ಯಕವಾದ ವಿಷಯಗಳನ್ನು ಒದಗಿಸಿದ್ದಾನೆ. . . . ನನ್ನ ಕುಟುಂಬವು ಈ ರೀತಿಯಲ್ಲಿ ಆತ್ಮಿಕ ಅಭಿರುಚಿಗಳನ್ನು ಪ್ರಥಮವಾಗಿ ಇಡುವುದನ್ನು ನಾನು ನೋಡುವಾಗ, ಎಲ್ಲವೂ ಸರಿಯಾಗಿದೆ ಎಂಬ ಅನಿಸಿಕೆ ನನಗಾಗುತ್ತದೆ ಮತ್ತು ಏನನ್ನೋ ಸಾಧಿಸಿದ್ದೇನೆಂಬ ತೃಪ್ತಿಯಾಗುತ್ತದೆ.” ಆತನ ಹೆಂಡತಿಯು ಕೂಡಿಸಿ ಹೇಳಿದ್ದು: “ನನ್ನ ಗಂಡನು ಆತ್ಮಿಕ ವಿಷಯಗಳಲ್ಲಿ ಕಾರ್ಯಮಗ್ನನಾಗಿರುವುದನ್ನು ನಾನು ನೋಡುವಾಗ ನನಗೆ ಆಳವಾದ ಆಂತರಿಕ ತೃಪ್ತಿಯಾಗುತ್ತದೆ.” ತಮ್ಮ ಹೆತ್ತವರು ಯೆಹೋವನನ್ನು ಪೂರ್ಣ ಸಮಯ ಸೇವಿಸಲು ನಿರ್ಧರಿಸಿದ್ದಕ್ಕಾಗಿ ಮಕ್ಕಳಿಗೂ ತುಂಬ ಸಂತೋಷ.
7 ಭೌತಿಕ ವಿಷಯಗಳ ಬೆನ್ನಟ್ಟುವಿಕೆಗೆ ಬದಲಾಗಿ ದೈವಿಕ ಭಕ್ತಿಯ ಜೀವನಕ್ರಮವನ್ನು ಆಯ್ದುಕೊಳ್ಳುವವರೆಲ್ಲರಿಗೂ, ಈಗಲೂ ಬರಲಿರುವ ಜೀವಿತದಲ್ಲೂ ಹೇರಳವಾದ ಆಶೀರ್ವಾದಗಳನ್ನು ಬೈಬಲು ವಾಗ್ದಾನಿಸುತ್ತದೆ.—1 ತಿಮೊ. 4:8.