ಸಮಯೋಚಿತ ಸಹಾಯ
1 ಅಪೊಸ್ತಲ ಪೇತ್ರನು ಜೊತೆ ವಿಶ್ವಾಸಿಗಳನ್ನು ಬಲಪಡಿಸಲಿಕ್ಕಾಗಿರುವ ಆವಶ್ಯಕತೆಯನ್ನು ಮನಗಂಡಾಗ, ಅವರಿಗೆ ಪ್ರೀತಿಯ ಜ್ಞಾಪನಗಳನ್ನು ಹಾಗೂ ಉತ್ತೇಜನವನ್ನು ಕೊಡುವಂತೆ ಹಿತಾಸಕ್ತಿಯು ಅವನನ್ನು ಪ್ರಚೋದಿಸಿತು. (2 ಪೇತ್ರ 1:12, 13; 3:1) ‘ನಂಬಿಕೆಯನ್ನು ಹೊಂದಿದವರಿಗೆ’ ಅವನು, ‘ನಮ್ಮ ಕರ್ತನಾದ ಯೇಸು ಕ್ರಿಸ್ತನ ಸಂಬಂಧವಾದ ಪರಿಜ್ಞಾನವನ್ನು ಹೊಂದುವ ವಿಷಯದಲ್ಲಿ ಅವರು ಆಲಸ್ಯಗಾರರೂ ನಿಷ್ಫಲರೂ’ ಆಗಿರದಿರಲಿಕ್ಕಾಗಿ ಆತ್ಮಿಕ ಗುಣಗಳನ್ನು ಬೆಳೆಸಿಕೊಳ್ಳುತ್ತಾ ಇರುವಂತೆ ಅವರನ್ನು ಉತ್ತೇಜಿಸಿದನು. (2 ಪೇತ್ರ 1:1, 5-8) ಅವರು “ಶಾಂತರಾಗಿದ್ದು ಆತನೆದುರಿನಲ್ಲಿ ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಕಾಣಿಸಿಕೊಳ್ಳ”ಲಿಕ್ಕಾಗಿ, ಯೆಹೋವನಿಂದ ಅವರು ಪಡೆದುಕೊಂಡಿದ್ದ ಕರೆಯನ್ನು ಹಾಗೂ ಆಯ್ಕೆಯನ್ನು ಖಚಿತಪಡಿಸಿಕೊಳ್ಳುವಂತೆ ಅವರಿಗೆ ಸಹಾಯಮಾಡುವುದೇ ಪೇತ್ರನ ಉದ್ದೇಶವಾಗಿತ್ತು. (2 ಪೇತ್ರ 1:10, 11; 3:14) ಅನೇಕ ಜೊತೆ ವಿಶ್ವಾಸಿಗಳಿಗೆ ಅವನ ಉತ್ತೇಜನವು ಸಮಯೋಚಿತ ಸಹಾಯವಾಗಿ ಪರಿಣಮಿಸಿತು.
2 ಇಂದು, ಕ್ರೈಸ್ತ ಮೇಲ್ವಿಚಾರಕರಿಗೆ ದೇವಜನರ ಕಡೆಗೆ ಇದೇ ರೀತಿಯ ಹಿತಾಸಕ್ತಿಯಿದೆ. “ವ್ಯವಹರಿಸಲು ಕಷ್ಟಕರವಾಗಿರುವ ಈ ಕಠಿನ ಕಾಲಗಳಲ್ಲಿ” ಯೆಹೋವನ ಅನೇಕ ಸೇವಕರು ಕಷ್ಟಕರ ಪರಿಸ್ಥಿತಿಗಳನ್ನು ಸಹಿಸಿಕೊಳ್ಳಬೇಕು. (2 ತಿಮೊ. 3:1, NW) ಸತತವಾದ ಆರ್ಥಿಕ, ಕೌಟುಂಬಿಕ, ಅಥವಾ ವೈಯಕ್ತಿಕ ಸಮಸ್ಯೆಗಳ ಕಾರಣ ಕೆಲವರಿಗೆ ದಾವೀದನಿಗಾದಂಥ ಅನಿಸಿಕೆಯಾಗಬಹುದು: “ಲೆಕ್ಕವಿಲ್ಲದ ಆಪತ್ತುಗಳು ನನ್ನನ್ನು ಸುತ್ತಿಕೊಂಡಿವೆ; ನನ್ನ ಪಾಪಗಳು ನನ್ನನ್ನು ಹಿಂದಟ್ಟಿ ಹಿಡಿದಿರುತ್ತವೆ, ನನಗೆ ದಿಕ್ಕೇ ತೋರುವದಿಲ್ಲ. ಅವು ನನ್ನ ತಲೇ ಕೂದಲುಗಳಿಗಿಂತಲೂ ಹೆಚ್ಚಾಗಿವೆ, ನಾನು ಎದೆಗುಂದಿ ಹೋದೆನು.” (ಕೀರ್ತ. 40:12) ಈ ಒತ್ತಡಗಳು ಎಷ್ಟು ಮಹತ್ತರವಾಗಿ ಪರಿಣಮಿಸಬಹುದೆಂದರೆ, ಅಂಥವರು ಅತ್ಯಾವಶ್ಯಕವಾಗಿರುವ ಆತ್ಮಿಕ ಜವಾಬ್ದಾರಿಗಳನ್ನು ನಿರ್ಲಕ್ಷಿಸಬಹುದು ಮತ್ತು ಕ್ರೈಸ್ತ ಶುಶ್ರೂಷೆಯಲ್ಲಿ ಕ್ರಿಯಾಶೀಲ ರೀತಿಯಲ್ಲಿ ಭಾಗವಹಿಸುವುದನ್ನು ನಿಲ್ಲಿಸಿಬಿಡಬಹುದು. ಆದರೂ, ತಮ್ಮ ಕಷ್ಟತೊಂದರೆಗಳ ಮಧ್ಯೆಯೂ ಅವರು ಯೆಹೋವನ ‘ಆಜ್ಞೆಗಳನ್ನು ಮರೆತುಬಿಟ್ಟಿಲ್ಲ.’ (ಕೀರ್ತ. 119:176) ಅಂಥವರಿಗೆ ಅಗತ್ಯವಿರುವ ಸಹಾಯವನ್ನು ಒದಗಿಸಲು ಹಿರಿಯರಿಗೆ ಇದೇ ಸೂಕ್ತವಾದ ಸಮಯವಾಗಿದೆ.—ಯೆಶಾ. 32:1, 2.
3 ಈ ಆವಶ್ಯಕತೆಯನ್ನು ಪೂರೈಸಲಿಕ್ಕಾಗಿ, ಸದ್ಯಕ್ಕೆ ಸಾರುವ ಕೆಲಸದಲ್ಲಿ ಪಾಲ್ಗೊಳ್ಳದಿರುವವರಿಗೆ ಸಹಾಯ ನೀಡಲಿಕ್ಕಾಗಿ ವಿಶೇಷ ಪ್ರಯತ್ನವನ್ನು ಮಾಡುವಂತೆ ಹಿರಿಯರನ್ನು ಪ್ರೋತ್ಸಾಹಿಸಲಾಗಿದೆ. ಇದನ್ನು ಪೂರೈಸಲಿಕ್ಕಾಗಿ ತೀವ್ರಗತಿಯ ಪ್ರಯತ್ನವು ಈಗ ಮಾಡಲ್ಪಡುತ್ತಿದೆ ಮತ್ತು ಮಾರ್ಚ್ ತಿಂಗಳ ಕೊನೆಯ ವರೆಗೂ ಹೀಗೆ ಮಾಡಲಾಗುತ್ತದೆ. ಅಕ್ರಿಯ ಪ್ರಚಾರಕರು ಸಭೆಯೊಂದಿಗಿನ ತಮ್ಮ ಚಟುವಟಿಕೆಯನ್ನು ಪುನಃ ಆರಂಭಿಸುವಂತೆ ಅವರಿಗೆ ಸಹಾಯಮಾಡುವ ಗುರಿಯೊಂದಿಗೆ ಆತ್ಮಿಕ ಸಹಾಯವನ್ನು ನೀಡಲಿಕ್ಕಾಗಿ ಅವರನ್ನು ಭೇಟಿಮಾಡುವಂತೆ ಪುಸ್ತಕ ಅಧ್ಯಯನ ಮೇಲ್ವಿಚಾರಕರನ್ನು ಕೇಳಿಕೊಳ್ಳಲಾಗಿದೆ. ಅಗತ್ಯವಿರುವಲ್ಲಿ ಒಂದು ವೈಯಕ್ತಿಕ ಬೈಬಲ್ ಅಧ್ಯಯನವನ್ನೂ ಏರ್ಪಡಿಸಬಹುದು. ಈ ವಿಷಯದಲ್ಲಿ ಸಹಾಯಮಾಡುವಂತೆ ಇತರ ಪ್ರಚಾರಕರನ್ನೂ ಕೇಳಿಕೊಳ್ಳಬಹುದು. ಈ ರೀತಿಯ ಆಮಂತ್ರಣವು ನಿಮಗೆ ಕೊಡಲ್ಪಡುವಲ್ಲಿ, ನಿಮ್ಮ ಪ್ರಯತ್ನಗಳು—ಅದರಲ್ಲೂ ವಿಶೇಷವಾಗಿ ದಯಾಪರವಾಗಿ, ಅರ್ಥಮಾಡಿಕೊಳ್ಳುವಂಥ ರೀತಿಯಲ್ಲಿ ನೀವು ಉತ್ತೇಜನವನ್ನು ನೀಡುವಲ್ಲಿ—ತುಂಬ ಪ್ರಯೋಜನದಾಯಕವಾಗಿ ಇರಸಾಧ್ಯವಿದೆ.
4 ಯಾರಾದರೊಬ್ಬರು ಸಭೆಯೊಂದಿಗಿನ ತಮ್ಮ ಚಟುವಟಿಕೆಯನ್ನು ಪುನಃ ಆರಂಭಿಸುವಾಗ, ಎಲ್ಲರೂ ಆನಂದಿಸಲು ಸಕಾರಣವಿದೆ. (ಲೂಕ 15:6) ಅಕ್ರಿಯರನ್ನು ಉತ್ತೇಜಿಸಲಿಕ್ಕಾಗಿರುವ ನಮ್ಮ ಪ್ರಯತ್ನಗಳು ನಿಜವಾಗಿಯೂ ‘ಸಮಯೋಚಿತವಾದ ಮಾತುಗಳಲ್ಲಿ’ ಫಲಿಸುವಂತಾಗಲಿ.—ಜ್ಞಾನೋ. 25:11.