ಯೆಹೋವನನ್ನು ಸ್ತುತಿಸಲಿಕ್ಕಾಗಿ ಕೂಡಿಬರುವುದು
1. ಅಧಿವೇಶನದ ಮುಖ್ಯ ವಿಷಯವೇನಾಗಿದೆ, ಮತ್ತು ಯೆಹೋವನು ನಮ್ಮ ಸ್ತುತಿಯನ್ನು ಪಡೆದುಕೊಳ್ಳಲು ಅರ್ಹನಾಗಿದ್ದಾನೆ ಏಕೆ?
1 ಯೆಹೋವನು ಶಕ್ತಿಯಲ್ಲಿ ಅಪಾರನು, ವಿವೇಕದಲ್ಲಿ ಸಾಟಿಯಿಲ್ಲದವನು, ನೀತಿಯಲ್ಲಿ ನಿರ್ಮಲನು, ಮತ್ತು ಪ್ರೀತಿಯ ವ್ಯಕ್ತೀಕರಣನು ಆಗಿದ್ದಾನೆ. ಸೃಷ್ಟಿಕರ್ತ, ಜೀವದಾತ, ಮತ್ತು ಸಾರ್ವಭೌಮ ಕರ್ತನಾಗಿ ಆತನೊಬ್ಬನೇ ಆರಾಧನೆಯನ್ನು ಪಡೆದುಕೊಳ್ಳಲು ಅರ್ಹನಾಗಿದ್ದಾನೆ. (ಕೀರ್ತ. 36:9; ಪ್ರಕ. 4:11; 15:3, 4) ಈ ವರ್ಷದ “ದೇವರನ್ನು ಘನಪಡಿಸಿರಿ” ಜಿಲ್ಲಾ ಅಧಿವೇಶನವು ಆತನನ್ನು ಒಬ್ಬನೇ ಸತ್ಯ ದೇವರಾಗಿ ಸ್ತುತಿಸುವ ನಮ್ಮ ದೃಢತೀರ್ಮಾನವನ್ನು ಇನ್ನಷ್ಟು ಬಲಪಡಿಸುವುದು.—ಕೀರ್ತ. 86:8-10.
2, 3. ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಒಳ್ಳೆಯ ಯೋಜನೆಯು ಹೇಗೆ ಸಹಾಯಮಾಡುವುದು?
2 ಒಳ್ಳೆಯ ಯೋಜನೆಯು ಆವಶ್ಯಕ: ಯೆಹೋವನು ನಮಗೆಂದು ಸಿದ್ಧಪಡಿಸಿರುವ ಆತ್ಮಿಕ ಔತಣದಿಂದ ನಾವು ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ, ಒಳ್ಳೆಯ ಯೋಜನೆಯು ಆವಶ್ಯಕವಾಗಿದೆ. (ಎಫೆ. 5:15, 16) ತಂಗುದಾಣ, ಸಾರಿಗೆ ವ್ಯವಸ್ಥೆ, ಮತ್ತು ಕೆಲಸ ಹಾಗೂ ಶಾಲೆಯಿಂದ ರಜೆಯನ್ನು ಪಡೆದುಕೊಳ್ಳುವುದರ ಬಗ್ಗೆ ಬೇಕಾದ ಏರ್ಪಾಡುಗಳನ್ನು ನೀವು ಮಾಡಿ ಮುಗಿಸಿದ್ದೀರೋ? ಈ ಪ್ರಾಮುಖ್ಯವಾದ ವಿಷಯಗಳನ್ನು ಕೊನೆಯ ಗಳಿಗೆಗಾಗಿ ಬಿಟ್ಟುಬಿಡಬೇಡಿ. ನೀವು ರಜೆಯನ್ನು ಕೇಳುವುದರಲ್ಲಿ ವಿಳಂಬಿಸುವುದಾದರೆ, ಈ ಸಂತೋಷದಾಯಕ ಸಂದರ್ಭದ ಒಂದು ಭಾಗವನ್ನು ನೀವು ಕಳೆದುಕೊಳ್ಳಬಹುದು. ನಾವೆಲ್ಲರೂ ಪ್ರತಿಯೊಂದು ಸೆಷನ್ಗೂ ಉಪಸ್ಥಿತರಾಗಿರುವುದು ಅಗತ್ಯವಾಗಿದೆ.
3 ಪ್ರತಿದಿನವೂ ಸಮ್ಮೇಳನದ ನಿವೇಶನಕ್ಕೆ ಸಮಯಕ್ಕೆ ಮುಂಚಿತವಾಗಿ ಬರುವುದನ್ನು ನಿಮ್ಮ ಗುರಿಯನ್ನಾಗಿ ಮಾಡಿಕೊಳ್ಳಿರಿ. ಇದು ಪ್ರಾರಂಭದ ಗೀತೆಯ ಮುಂಚೆ ನೀವು ನಿಮ್ಮ ಸೀಟ್ಗಳಲ್ಲಿ ಕುಳಿತು, ಪ್ರಸ್ತುತಪಡಿಸಲಿರುವ ಉಪದೇಶವನ್ನು ಪಡೆದುಕೊಳ್ಳುವ ಸರಿಯಾದ ಮನಸ್ಥಿತಿಯನ್ನು ಪಡೆದುಕೊಳ್ಳಲು ನಿಮಗೆ ಸಹಾಯಮಾಡುವುದು. ಪ್ರತಿದಿನ ಬೆಳಗ್ಗೆ 8 ಗಂಟೆಗೆ ಬಾಗಿಲುಗಳನ್ನು ತೆರೆಯಲಾಗುವುದು. ನಿಮ್ಮ ಸ್ವಂತ ಕುಟುಂಬದ ಸದಸ್ಯರು ಮತ್ತು ನಿಮ್ಮೊಟ್ಟಿಗೆ ಪ್ರಯಾಣಿಸುತ್ತಿರುವವರಿಗೆ ಮಾತ್ರವೇ ಹೊರತು ಬೇರೆ ಯಾರಿಗೂ ಸೀಟ್ಗಳನ್ನು ಕಾದಿರಿಸಬೇಡಿ.
4. ನಾವೆಲ್ಲರೂ ಸಮ್ಮೇಳನಕ್ಕೆ ಊಟವನ್ನು ತರುವಂತೆ ಏಕೆ ಕೇಳಿಕೊಳ್ಳಲಾಗುತ್ತದೆ?
4 ಮಧ್ಯಾಹ್ನದ ವಿರಾಮದ ಸಮಯದಲ್ಲಿ ಊಟಕ್ಕಾಗಿ ಅಧಿವೇಶನದ ನಿವೇಶನವನ್ನು ಬಿಟ್ಟುಹೋಗುವ ಬದಲು ಊಟವನ್ನು ನಿಮ್ಮೊಂದಿಗೆ ತರುವಂತೆ ಎಲ್ಲರನ್ನೂ ಕೇಳಿಕೊಳ್ಳಲಾಗುತ್ತದೆ. ಈ ಏರ್ಪಾಡಿಗೆ ನೀವು ತೋರಿಸುವ ಸಹಕರಣೆಯು, ಶಾಂತಿದಾಯಕ ವಾತಾವರಣಕ್ಕೆ ಅವಕಾಶ ಮಾಡಿಕೊಡುತ್ತದೆ ಮತ್ತು ಜೊತೆ ವಿಶ್ವಾಸಿಗಳೊಂದಿಗೆ ಸಹವಾಸಿಸಲು ಹೆಚ್ಚು ಸಮಯವನ್ನು ಒದಗಿಸಿಕೊಡುತ್ತದೆ. (ಕೀರ್ತ. 133:1-3) ಗಾಜಿನ ಪಾತ್ರೆಗಳು ಮತ್ತು ಮದ್ಯಪಾನೀಯಗಳು ಸಮ್ಮೇಳನದ ಸೌಕರ್ಯಗಳಲ್ಲಿ ಅನುಮತಿಸಲ್ಪಡುವುದಿಲ್ಲ ಎಂಬುದನ್ನು ದಯವಿಟ್ಟು ಮನಸ್ಸಿನಲ್ಲಿಡಿರಿ.
5. ಅಧಿವೇಶನಕ್ಕಾಗಿ ನಮ್ಮ ಹೃದಯಗಳನ್ನು ನಾವು ಹೇಗೆ ಸಿದ್ಧಪಡಿಸಿಕೊಳ್ಳಲು ಆರಂಭಿಸಬಲ್ಲೆವು?
5 ಕಿವಿಗೊಟ್ಟು ಕಲಿಯಿರಿ: ದೇವರ ವಾಕ್ಯವನ್ನು ಸ್ವೀಕರಿಸಲು ಎಜ್ರನು ತನ್ನ ಹೃದಯವನ್ನು ಪ್ರಾರ್ಥನಾಪೂರ್ವಕವಾಗಿ ಸಿದ್ಧಪಡಿಸಿಕೊಂಡನು. (ಎಜ್ರ 7:10) ಅವನು ತನ್ನ ಹೃದಯವನ್ನು ಯೆಹೋವನ ಬೋಧನೆಗಳ ಕಡೆಗೆ ತಿರುಗಿಸಿದನು. (ಜ್ಞಾನೋ. 2:2) ನಾವು ಮನೆಯಿಂದ ಹೊರಡುವ ಮುಂಚೆ, ಸಮ್ಮೇಳನದ ಮುಖ್ಯ ವಿಷಯದ ಕುರಿತು ಮನನ ಮಾಡುವ ಮೂಲಕ ಮತ್ತು ಅದರ ಕುರಿತು ನಮ್ಮ ಕುಟುಂಬದೊಂದಿಗೆ ಚರ್ಚಿಸುವ ಮೂಲಕ ಸಮ್ಮೇಳನಕ್ಕಾಗಿ ನಮ್ಮ ಹೃದಯವನ್ನು ಸಿದ್ಧಪಡಿಸಿಕೊಳ್ಳಲು ಆರಂಭಿಸಬಲ್ಲೆವು.
6. ಕಾರ್ಯಕ್ರಮದ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವಂತೆ ಯಾವುದು ಸಹಾಯಮಾಡುವುದು? (ಚೌಕವನ್ನು ನೋಡಿರಿ.)
6 ಒಂದು ದೊಡ್ಡ ಸಭಾಂಗಣದಲ್ಲಿ, ಅನೇಕ ನೋಟ ನಾದಗಳು ನಮ್ಮ ಗಮನವನ್ನು ಕಸಿದುಕೊಳ್ಳಲು ಪ್ರಯತ್ನಿಸಬಹುದು. ಇಂತಹ ಅಪಕರ್ಷಣೆಗಳು ನಮ್ಮ ಗಮನವನ್ನು ಸುಲಭವಾಗಿ ಭಾಷಣಕರ್ತನಿಂದ ತಿರುಗಿಸಬಲ್ಲವು. ಅದು ಸಂಭವಿಸುವಾಗ, ನಾವು ಅಮೂಲ್ಯವಾದ ಉಪದೇಶವನ್ನು ಕಳೆದುಕೊಳ್ಳುತ್ತೇವೆ. ಚೌಕದಲ್ಲಿ ಕೊಡಲ್ಪಟ್ಟಿರುವ ಸಲಹೆಗಳು, ನಾವು ಹೆಚ್ಚು ಉತ್ತಮವಾಗಿ ಗಮನವನ್ನು ಕೇಂದ್ರೀಕರಿಸಲು ಸಹಾಯಮಾಡುತ್ತವೆ.
7, 8. ನಾವು ಇತರರಿಗೆ ಹೇಗೆ ಪರಿಗಣನೆಯನ್ನು ತೋರಿಸಬಲ್ಲೆವು, ಮತ್ತು ನಮ್ಮ ದೃಢತೀರ್ಮಾನ ಏನಾಗಿರಬೇಕು?
7 ಬೇರೆಯವರಿಗೆ ಪರಿಗಣನೆ ತೋರಿಸಿರಿ: ಕ್ಯಾಮರಾಗಳು ಮತ್ತು ಕ್ಯಾಮ್ಕಾರ್ಡರ್ಗಳನ್ನು ಕಾರ್ಯಕ್ರಮದ ಸಮಯದಲ್ಲಿ ಉಪಯೋಗಿಸಬಹುದು, ಆದರೆ ಇತರರಿಗೆ ಅಪಕರ್ಷಣೆಯನ್ನು ಉಂಟುಮಾಡದಿರಲು, ಇದನ್ನು ಕೇವಲ ನೀವು ಕುಳಿತಿರುವ ಸ್ಥಳದಿಂದಲೇ ಉಪಯೋಗಿಸಿರಿ. ಇತರರಿಗೆ ತೊಂದರೆಯಾಗದಂತೆ ಸೆಲ್ ಫೋನ್ ಮತ್ತು ಪೇಜರ್ಗಳನ್ನು ಸೈಲೆಂಟ್ ಮೋಡ್ನಲ್ಲಿಡಬೇಕು. ಕೆಲವು ಸ್ಥಳಗಳಲ್ಲಾದರೋ, ಕೆಲವರು ಸೆಷನ್ಗಳು ನಡೆಯುತ್ತಿರುವಾಗ ಅತ್ತಿತ್ತ ಅಡ್ಡಾಡುವ ಮೂಲಕ ಇತರರಿಗೆ ಅಪಕರ್ಷಣೆಯನ್ನು ಉಂಟುಮಾಡಿದ್ದಾರೆ. ಇನ್ನೂ ಕೆಲವರು ತಡವಾಗಿ ಬರುತ್ತಾರೆ ಮತ್ತು ಮೊದಲ ಕೆಲವು ನಿಮಿಷಗಳ ಕಾರ್ಯಕ್ರಮವನ್ನು ತಮ್ಮ ಸಹೋದರರು ಕೇಳಿಸಿಕೊಳ್ಳುವುದನ್ನು ಕಷ್ಟಕರವಾಗಿ ಮಾಡುತ್ತಾರೆ. ದಯವಿಟ್ಟು ಅಟೆಂಡಂಟ್ರೊಂದಿಗೆ ಸಹಕರಿಸಿ ಮತ್ತು ನಿಮ್ಮ ನಿಮ್ಮ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಅಧ್ಯಕ್ಷನು ಕರೆಕೊಡುವಾಗ ಹಾಗೆ ಮಾಡಿರಿ.
8 ಯೆಹೋವನನ್ನು ಸ್ತುತಿಸಲಿಕ್ಕಾಗಿ ಕೂಡಿಬರಲು ನಾವೆಷ್ಟು ಹಂಬಲದಿಂದ ಎದುರುನೋಡುತ್ತೇವೆ! ನಾವು ಪ್ರತಿಯೊಂದು ಸೆಷನ್ಗೆ ಹಾಜರಾಗುವ ಮೂಲಕ, ಗಮನಕೊಟ್ಟು ಕೇಳಿಸಿಕೊಳ್ಳುವ ಮೂಲಕ, ಮತ್ತು ಕಲಿತದ್ದನ್ನು ಕಾರ್ಯರೂಪಕ್ಕೆ ಹಾಕುವ ಮೂಲಕ ಆತನನ್ನು ಘನಪಡಿಸಲು ದೃಢತೀರ್ಮಾನವನ್ನು ಮಾಡೋಣ.—ಧರ್ಮೋ. 31:12.
[ಪುಟ 3 ರಲ್ಲಿರುವ ಚೌಕ]
ಅಧಿವೇಶನಗಳ ಸಮಯದಲ್ಲಿ ಕಿವಿಗೊಡುವುದು
▪ ಭಾಷಣದ ಶೀರ್ಷಿಕೆಗಳ ಕುರಿತು ಯೋಚಿಸಿರಿ
▪ ಶಾಸ್ತ್ರವಚನಗಳನ್ನು ತೆರೆದು ನೋಡಿ
▪ ಸಂಕ್ಷಿಪ್ತವಾದ ಟಿಪ್ಪಣಿಗಳನ್ನು ತೆಗೆದುಕೊಳ್ಳಿ
▪ ಅನ್ವಯಿಸಬಯಸುವ ಅಂಶಗಳನ್ನು ಪ್ರತ್ಯೇಕಿಸಿರಿ
▪ ನೀವು ಕಲಿತದ್ದನ್ನು ಪುನರ್ವಿಮರ್ಶಿಸಿರಿ