“ನಾವು ಒಟ್ಟಾಗಿ ಆತನ ಹೆಸರನ್ನು ಘನಪಡಿಸೋಣ”
1. ಒಟ್ಟಾಗಿ ದೇವರ ಹೆಸರನ್ನು ಘನಪಡಿಸಲು ನಮಗೆ ಯಾವ ಅವಕಾಶವು ಒದಗಿಬರಲಿದೆ, ಮತ್ತು ಅದಕ್ಕೆ ತಯಾರಿಯಲ್ಲಿ ನಾವೀಗ ಏನು ಮಾಡಬಲ್ಲೆವು?
1 “ನನ್ನೊಡನೆ ಯೆಹೋವನನ್ನು ಕೊಂಡಾಡಿರಿ; ನಾವು ಒಟ್ಟಾಗಿ ಆತನ ಹೆಸರನ್ನು ಘನಪಡಿಸೋಣ” ಎಂದು ಕೀರ್ತನೆಗಾರನು ಹಾಡಿದನು. (ಕೀರ್ತ. 34:3) ಅನೇಕ ಸಭೆಗಳಿಂದ ಬರುವ ನಮ್ಮ ಸಹೋದರ ಸಹೋದರಿಯರೊಂದಿಗೆ ಸೇರಿ ಯೆಹೋವನ ಹೆಸರನ್ನು ಒಟ್ಟಾಗಿ ಘನಪಡಿಸಲು, ಮುಂಬರುತ್ತಿರುವ “ದೇವರೊಂದಿಗೆ ನಡೆಯಿರಿ” ಜಿಲ್ಲಾ ಅಧಿವೇಶನವು ನಮಗೆ ಒಂದು ಅವಕಾಶವನ್ನು ಒದಗಿಸಿಕೊಡುವುದು. ನೀವು ವಸತಿಸೌಕರ್ಯಕ್ಕಾಗಿ, ಸಾರಿಗೆ ವ್ಯವಸ್ಥೆಗಾಗಿ, ಮತ್ತು ಐಹಿಕ ಕೆಲಸದಿಂದ ಬಿಡುವಿಗಾಗಿ ಏರ್ಪಾಡುಗಳನ್ನು ಮಾಡಿದ್ದೀರೋ? ಇವುಗಳ ಕುರಿತು ಮುಂಚಿತವಾಗಿಯೇ ಏರ್ಪಾಡುಗಳನ್ನು ಮಾಡುವುದು ವಿವೇಕಯುತವಾಗಿರುವುದು.—ಜ್ಞಾನೋ. 21:5.
2. ಅಧಿವೇಶನ ನಿವೇಶನಕ್ಕೆ ಬೇಗನೆ ಆಗಮಿಸಲು ಯೋಜಿಸುವುದು ಏಕೆ ಪ್ರಯೋಜನದಾಯಕವಾಗಿದೆ?
2 ಅಧಿವೇಶನದ ನಿವೇಶನಕ್ಕೆ ಆಗಮಿಸುವುದು: ಒಂದು ಅಧಿವೇಶನಕ್ಕೆ ಹಾಜರಾಗುವಾಗ ನಾವು ಅನೇಕ ವಿಚಾರಗಳಿಗೆ ಗಮನಕೊಡಬೇಕಾಗುತ್ತದೆ. ಬೇಗನೆ ಹೊರಡುವುದು, ಮಾರ್ಗದಲ್ಲಿ ಅನಿರೀಕ್ಷಿತವಾಗಿ ಉಂಟಾಗಬಹುದಾದ ಯಾವುದೇ ತೊಂದರೆಯಿಂದಾಗಿ ತಡವಾಗದೆ, ಸಮಯಕ್ಕೆ ಸರಿಯಾಗಿ ನಮ್ಮ ಆಸನಗಳಲ್ಲಿ ಕುಳಿತು ಆರಂಭದ ಗೀತೆ ಮತ್ತು ಪ್ರಾರ್ಥನೆಯಲ್ಲಿ ಹೃತ್ಪೂರ್ವಕವಾಗಿ ಒಳಗೂಡುವಂತೆ ನಮ್ಮನ್ನು ಶಕ್ತಗೊಳಿಸುವುದು. (ಕೀರ್ತ. 69:30) ದುಲೈಜಾನ್, ನವ ದೆಹಲಿ, ಪೋರ್ಟ್ ಬ್ಲೇರ್, ಸಿಕಂದ್ರಬಾದ್ನಲ್ಲಿ ನಡೆಯಲಿರುವ ಅಧಿವೇಶನಗಳಿಗೆ ಹಾಜರಾಗುವವರು ಹೃತ್ಪೂರ್ವಕ ಗಾಯನದಲ್ಲಿ ಧ್ವನಿಗೂಡಿಸಲು ಸಾಧ್ಯವಾಗುವಂತೆ ತಮ್ಮ ಭಾಷೆಯ ಗೀತೆ ಬ್ರೋಷರ್ (sb-29) ಅನ್ನು ತರುವಂತೆ ವಿನಂತಿಸಲಾಗುತ್ತದೆ. ಈ ಅಧಿವೇಶನಗಳಿಗಾಗಿರುವ ಎಲ್ಲಾ ಗೀತೆಗಳನ್ನು ಈ ಬ್ರೋಷರಿನಿಂದ ಆರಿಸಿತೆಗೆಯಲಾಗಿದೆ. ಸೆಷನ್ ಪ್ರಾರಂಭಿಸುವ ಕೆಲವು ನಿಮಿಷಗಳ ಮುಂಚೆ, ಅಧ್ಯಕ್ಷನು ವೇದಿಕೆಯ ಮೇಲೆ ಕುಳಿತಿರುವಾಗ ಪೀಠಿಕಾ ರಾಜ್ಯ ಸಂಗೀತವನ್ನು ನುಡಿಸಲಾಗುತ್ತದೆ. ಆ ಸಮಯದಲ್ಲಿ ನಾವೆಲ್ಲರೂ ನಮ್ಮ ಆಸನಗಳಲ್ಲಿ ಕುಳಿತುಕೊಳ್ಳಬೇಕು. ಹೀಗೆ ಕಾರ್ಯಕ್ರಮವು ಅದರ ಘನತೆಗೆ ತಕ್ಕದಾದ ರೀತಿಯಲ್ಲಿ ಆರಂಭವಾಗಲು ಸಾಧ್ಯವಾಗುವುದು. (1 ಕೊರಿಂ. 14:33, 40) ದುಲೈಜಾನ್ ಮತ್ತು ಐಸೋಲ್ ಅಧಿವೇಶನಗಳಲ್ಲಿ ಕಾರ್ಯಕ್ರಮವು ಎಲ್ಲಾ ದಿನಗಳಲ್ಲಿಯೂ ಬೆಳಗ್ಗೆ 8:30ಕ್ಕೆ ಆರಂಭವಾಗುವುದು. ಕತ್ತಲಾಗುವ ಮುಂಚೆ ಪ್ರತಿನಿಧಿಗಳು ತಮ್ಮ ವಸತಿಸೌಕರ್ಯಗಳಿಗೆ ಹೋಗಿ ತಲಪಲು ಸಾಧ್ಯವಾಗುವಂತೆ ಈ ಏರ್ಪಾಡನ್ನು ಮಾಡಲಾಗಿದೆ.
3. ಈ ವರ್ಷ ದೊಡ್ಡದಾದ ಅಧಿವೇಶನಗಳನ್ನು ಏಕೆ ಯೋಜಿಸಲಾಗಿದೆ?
3 ಈ ವರ್ಷ ಭಾರತದಲ್ಲಿ ಅಧಿವೇಶನಗಳ ಸಂಖ್ಯೆಯು ಕಡಿಮೆಗೊಳಿಸಲ್ಪಟ್ಟಿದೆ. ನಮ್ಮ ಒಕ್ಕೂಟಗಳನ್ನು ದೊಡ್ಡದಾಗಿ ಮಾಡುವುದೇ ಇದರ ಉದ್ದೇಶವಾಗಿದೆ. ಈ ಕಾರಣದಿಂದಾಗಿ ಕೆಲವರಿಗೆ ಹೆಚ್ಚಿನ ಪ್ರಯಾಣದ ಮತ್ತು ಖರ್ಚಾಗುವ ಸಂಭಾವ್ಯತೆ ಇದೆ. ಆದರೆ, ಹೆಚ್ಚಿನ ಸಹೋದರರೊಂದಿಗೆ ಸಹವಾಸಮಾಡುವ ಮತ್ತು ಹೆಚ್ಚು ಉತ್ತಮ ಗುಣಮಟ್ಟದ ಕಾರ್ಯಕ್ರಮವನ್ನು ಆನಂದಿಸುವ ಸದವಕಾಶವು ನಮಗೆ ದಕ್ಕುತ್ತದೆ. ಇಂತಹ ದೊಡ್ಡ ಅಧಿವೇಶನಗಳು ಅಲ್ಲಿನ ಸಮಾಜಕ್ಕೆ ಒಳ್ಳೆಯ ಸಾಕ್ಷಿಯನ್ನೂ ಕೊಡುವುದು. ಆದುದರಿಂದ ಯೆಹೋವನ ಆಶೀರ್ವಾದಗಳಿಗಾಗಿ ಪ್ರಾರ್ಥಿಸಿರಿ, ದೃಢಸಂಕಲ್ಪದ ಪ್ರಯತ್ನವನ್ನು ಮಾಡಿರಿ, ಎಲ್ಲಾ ಮೂರು ದಿನಗಳಿಗೆ ಹಾಜರಾಗಲಿಕ್ಕಾಗಿ ಹಣ ಮತ್ತು ರಜೆಯನ್ನು ಉಳಿತಾಯಮಾಡಿರಿ.
4. ಆಸನಗಳನ್ನು ಕಂಡುಕೊಳ್ಳಲು ಪ್ರಯತ್ನಿಸುವಾಗ ನಾವು ಹೇಗೆ ಇತರರಿಗೆ ಪರಿಗಣನೆಯನ್ನು ತೋರಿಸಬಲ್ಲೆವು?
4 ‘ನಾವು ಮಾಡುವದನ್ನೆಲ್ಲಾ ಪ್ರೀತಿಯಿಂದ ಮಾಡುವಂತೆ’ ದೇವರ ವಾಕ್ಯವು ಪ್ರೋತ್ಸಾಹಿಸುತ್ತದೆ. (1 ಕೊರಿಂ. 16:14) ಬೆಳಗ್ಗೆ 8:00 ಗಂಟೆಗೆ ಬಾಗಿಲುಗಳು ತೆರೆಯಲ್ಪಡುವಾಗ, ನಮಗೆ ಇಷ್ಟವಿರುವ ಆಸನಗಳನ್ನು ಇತರರು ಹಿಡಿದುಕೊಳ್ಳುವ ಮೊದಲು ಅದನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿ ಓಡುವುದು, ನೂಕಿನುಗ್ಗುವುದು, ಮತ್ತು ತಳ್ಳಿದೂಡುವುದು ಇದೆಲ್ಲವನ್ನು ಮಾಡದಿರುವಂತೆ ಇತರರ ಕಡೆಗಿರುವ ಪರಿಗಣನೆಯು ನಮಗೆ ಸಹಾಯಮಾಡುವುದು. ನಿಮ್ಮೊಂದಿಗೆ ಒಂದೇ ಮನೆಯಲ್ಲಿ ಜೀವಿಸುತ್ತಿರುವವರಿಗೆ ಅಥವಾ ನಿಮ್ಮ ಬೈಬಲ್ ವಿದ್ಯಾರ್ಥಿಗಳಿಗೆ ಮಾತ್ರ ಆಸನಗಳನ್ನು ಕಾದಿರಿಸಬಹುದು.—1 ಕೊರಿಂ. 13:5; ಫಿಲಿ. 2:4.
5. ಮಧ್ಯಾಹ್ನದ ವಿರಾಮದ ಸಮಯಕ್ಕಾಗಿರುವ ಏರ್ಪಾಡುಗಳು ಯಾವುವು, ಮತ್ತು ಇದು ಹೇಗೆ ಪ್ರಯೋಜನದಾಯಕವಾಗಿದೆ?
5 ಮಧ್ಯಾಹ್ನದ ವಿರಾಮದ ಸಮಯದಲ್ಲಿ ಊಟಕ್ಕಾಗಿ ಅಧಿವೇಶನದ ನಿವೇಶನವನ್ನು ಬಿಟ್ಟುಹೋಗುವುದರ ಬದಲಿಗೆ ದಯವಿಟ್ಟು ನಿಮ್ಮೊಂದಿಗೆ ಒಂದು ಲಘು ಊಟವನ್ನು ತನ್ನಿರಿ. ಎಲ್ಲರೂ ಆತ್ಮೋನ್ನತಿಗೊಳಿಸುವ ಸಹವಾಸದಲ್ಲಿ ಆನಂದಿಸುವಂತೆ ಮತ್ತು ಮಧ್ಯಾಹ್ನದ ಸೆಷನ್ನ ಆರಂಭದಿಂದಲೇ ಉಪಸ್ಥಿತರಿರುವಂತೆ ಇದು ಸಾಧ್ಯಗೊಳಿಸುವುದು. ಕುಟುಂಬದ ಸದಸ್ಯರು ಅಥವಾ ಇತರರು, ಅಧಿವೇಶನಕ್ಕೆ ಕೊಂಡೊಯ್ಯಲು ಮನೆಯಲ್ಲಿ ವಿಧವಿಧವಾದ ಭಾರಿ ಊಟಗಳನ್ನು ತಯಾರಿಸುವಂತೆ ಸಹೋದರಿಯರಿಂದ ಅಪೇಕ್ಷಿಸುವುದು ಪ್ರೀತಿಕರವಾಗಿರುವುದಿಲ್ಲ. ಇದು, ಅಧಿವೇಶನಕ್ಕೆ ತಲಪುವಷ್ಟರಲ್ಲಿ ಸಹೋದರಿಯರು ದಣಿದುಹೋಗುವಂತೆ ಮಾಡುತ್ತದೆ ಮತ್ತು ಕಾರ್ಯಕ್ರಮದ ಮೇಲೆ ಗಮನವನ್ನು ಕೇಂದ್ರೀಕರಿಸಲು ಅವರಿಗೆ ಕಷ್ಟಕರವಾಗಿಬಿಡುತ್ತದೆ. ಅಧಿವೇಶನ ಸೌಕರ್ಯದಲ್ಲಿ ಮದ್ಯಪಾನೀಯಗಳನ್ನು ಅನುಮತಿಸಲಾಗುವುದಿಲ್ಲ.
6. ನಾವು ಪಡೆದುಕೊಳ್ಳಲಿರುವ ಉಪದೇಶಕ್ಕಾಗಿ ನಾವು ಹೇಗೆ ನಮ್ಮ ಹೃದಯಗಳನ್ನು ಸಿದ್ಧಪಡಿಸಿಕೊಳ್ಳಬಲ್ಲೆವು?
6 ಒಂದು ಆಧ್ಯಾತ್ಮಿಕ ಔತಣವು ನಮಗಾಗಿ ಕಾದಿದೆ: “ಸತ್ಯ ದೇವರಿಗಾಗಿ ಹುಡುಕಲು [ತನ್ನ] ಹೃದಯವನ್ನು ಸಿದ್ಧಪಡಿಸಿ”ಕೊಂಡವನು ರಾಜ ಯೆಹೋಷಾಫಾಟನು. (2 ಪೂರ್ವ. 19:3, NW) ಅಧಿವೇಶನಕ್ಕೆ ಮುಂಚೆ ನಾವು ನಮ್ಮ ಹೃದಯವನ್ನು ಹೇಗೆ ಸಿದ್ಧಪಡಿಸಿಕೊಳ್ಳಬಲ್ಲೆವು? ಅಕ್ಟೋಬರ್ - ಡಿಸೆಂಬರ್ ಸಂಚಿಕೆಯ ಎಚ್ಚರ! ಪತ್ರಿಕೆಯ ಕೊನೆಯ ಪುಟದಲ್ಲಿರುವ ಲೇಖನವು ಬಡಿಸಲ್ಪಡಲಿರುವ ಆಧ್ಯಾತ್ಮಿಕ ಔತಣದ ಮುನ್ನೋಟವನ್ನು ನೀಡುತ್ತದೆ. ಆ ಲೇಖನದ ಕುರಿತು ಪರ್ಯಾಲೋಚಿಸಲು ಸಮಯವನ್ನು ತೆಗೆದುಕೊಳ್ಳುತ್ತಾ ಯೆಹೋವನು ನಮಗಾಗಿ ಏರ್ಪಡಿಸಿರುವ ಔತಣಕ್ಕಾಗಿ ಏಕೆ ನಿರೀಕ್ಷಣೆಯನ್ನು ಬೆಳೆಸಿಕೊಳ್ಳಬಾರದು? ನಮ್ಮ ಹೃದಯವನ್ನು ಸಿದ್ಧಪಡಿಸಿಕೊಳ್ಳುವುದರಲ್ಲಿ, ನಾವು ಪಡೆದುಕೊಳ್ಳಲಿರುವ ಉಪದೇಶದ ಅರ್ಥವನ್ನು ಗ್ರಹಿಸಿಕೊಳ್ಳಲು ಮತ್ತು ಅದನ್ನು ಅನ್ವಯಿಸಲು ಯೆಹೋವನಲ್ಲಿ ಸಹಾಯಕ್ಕಾಗಿ ಕೇಳಿಕೊಳ್ಳುವುದೂ ಒಳಗೂಡಿದೆ.—ಕೀರ್ತ. 25:4, 5.
7. ನಮ್ಮ ಹಂಬಲವು ಏನಾಗಿದೆ, ಮತ್ತು ಏಕೆ?
7 ನಾವೆಲ್ಲರೂ ದೇವರ ವಾಕ್ಯದಿಂದ ಹೆಚ್ಚನ್ನು ಕಲಿಯಲು ಹಂಬಲಿಸುತ್ತೇವೆ, ಏಕೆಂದರೆ ಇದರ ಮೂಲಕವಾಗಿ ನಾವು ಬೆಳೆದು ರಕ್ಷಣೆಯನ್ನು ಹೊಂದಸಾಧ್ಯವಿದೆ ಎಂಬುದನ್ನು ನಾವು ಗ್ರಹಿಸಿಕೊಳ್ಳುತ್ತೇವೆ. (1 ಪೇತ್ರ 2:2) ಆದುದರಿಂದ ನಾವು, “ದೇವರೊಂದಿಗೆ ನಡೆಯಿರಿ” ಎಂಬ ನಮ್ಮ ಜಿಲ್ಲಾ ಅಧಿವೇಶನಕ್ಕೆ ಹಾಜರಾಗೋಣ ಮತ್ತು ‘ಒಟ್ಟಾಗಿ ಯೆಹೋವನ ಹೆಸರನ್ನು ಘನಪಡಿಸೋಣ.’—ಕೀರ್ತ. 34:3.
[ಪುಟ 3ರಲ್ಲಿರುವಚೌಕ]
ದೇವರ ಹೆಸರನ್ನು ಘನಪಡಿಸುವ ವಿಧಾನಗಳು
◼ ಮುನ್ಯೋಜನೆ
◼ ಇತರರಿಗೆ ಪ್ರೀತಿಯನ್ನು ತೋರಿಸಿರಿ
◼ ನಿಮ್ಮ ಹೃದಯವನ್ನು ಸಿದ್ಧಪಡಿಸಿರಿ