ಪ್ರಶ್ನಾ ಚೌಕ
◼ ಸೆರೆವಾಸಿಗಳಿಗೆ ಸಾಕ್ಷಿ ನೀಡುವಾಗ ಯಾವ ಎಚ್ಚರಿಕೆಯನ್ನು ವಹಿಸಬೇಕು?
ಲೋಕವ್ಯಾಪಕವಾಗಿ ಹೆಚ್ಚುಕಡಿಮೆ 80 ಲಕ್ಷ ಸೆರೆವಾಸಿಗಳಿದ್ದಾರೆ, ಮತ್ತು ಇವರಲ್ಲಿ ಕೆಲವರು ಸುವಾರ್ತೆಯಲ್ಲಿ ಆಸಕ್ತಿಯನ್ನು ತೋರಿಸಿದ್ದಾರೆ. (1 ತಿಮೊ. 2:4) ಸೆರೆವಾಸಿಗಳು ಮತ್ತು ಅವರ ಕುಟುಂಬದವರು ಸಾಹಿತ್ಯಗಳನ್ನು ಅಥವಾ ವೈಯಕ್ತಿಕ ಭೇಟಿಯನ್ನು ವಿನಂತಿಸುತ್ತಾ ಬರೆಯುವ, ಸುಮಾರು 1,400 ಪತ್ರಗಳನ್ನು ಪ್ರತಿ ತಿಂಗಳು ಒಂದು ಬ್ರಾಂಚ್ ಆಫೀಸು ಪಡೆಯುತ್ತದೆ. ಅನೇಕ ಸೆರೆವಾಸಿಗಳ ಆಸಕ್ತಿಯು ನಿಜವಾಗಿದ್ದರೂ, ಕೆಲವರು ದೇವಜನರಿಂದ ಸ್ವಾರ್ಥಪರ ಪ್ರಯೋಜನವನ್ನು ಪಡೆದುಕೊಳ್ಳುವ ಉದ್ದೇಶದಿಂದ ಆಸಕ್ತಿಯಿದೆ ಎಂಬ ಸುಳ್ಳು ತೋರಿಕೆಯನ್ನು ಹಾಕಿಕೊಳ್ಳುತ್ತಾರೆ ಎಂಬುದನ್ನು ಅನುಭವವು ತೋರಿಸಿಕೊಟ್ಟಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡವರಾಗಿ, ಸೆರೆವಾಸಿಗಳಿಗೆ ಸಾಕ್ಷಿ ನೀಡುವಾಗ ಎಲ್ಲರೂ ಮುಂದೆ ತಿಳಿಸಲ್ಪಟ್ಟಿರುವ ಎಚ್ಚರಿಕೆಯನ್ನು ವಹಿಸಬೇಕು.
ಅನೇಕ ಸಂದರ್ಭಗಳಲ್ಲಿ, ಸೆರೆವಾಸಿಗಳಿಗೆ ಪತ್ರಗಳ ಮೂಲಕ ಸಾಕ್ಷಿ ನೀಡಲಾಗುತ್ತದೆ. ಇದು ಆತ್ಮಿಕ ಸಹಾಯವನ್ನು ನೀಡುವ ಗುರಿಯಿಂದ ಮಾಡಲಾಗುತ್ತದಾದರೂ, ಸಹೋದರಿಯರು ಸೆರೆವಾಸದಲ್ಲಿರುವ ಗಂಡಸರಿಗೆ ಪತ್ರವನ್ನು ಬರೆಯಲೇಬಾರದೆಂದು ಬಲವಾಗಿ ಶಿಫಾರಸ್ಸುಮಾಡಲಾಗಿದೆ. ಆ ಜವಾಬ್ದಾರಿಯನ್ನು ಅರ್ಹರಾದ ಸಹೋದರರು ಮಾತ್ರ ನಿರ್ವಹಿಸಬೇಕು. ಬೈಬಲಿನ ಸತ್ಯಗಳಲ್ಲಿ ನಿಜವಾದ ಆಸಕ್ತಿಯನ್ನು ತೋರಿಸುವ, ಸೆರೆವಾಸದಲ್ಲಿರುವ ಸ್ತ್ರೀಯರಿಗೆ ಪತ್ರಗಳನ್ನು ಬರೆಯಲು ಅರ್ಹ ಸಹೋದರಿಯರನ್ನು ನೇಮಿಸಬಹುದು. ಒಂದುವೇಳೆ ಅವರಿಂದ ಬಿನ್ನಹಿಸಲ್ಪಟ್ಟಿರಬಹುದಾದರೂ, ಹಣ ಅಥವಾ ವೈಯಕ್ತಿಕ ಉಡುಗೊರೆಗಳನ್ನು ಸೆರೆವಾಸದಲ್ಲಿರುವವರಿಗೆ ಕಳುಹಿಸಬಾರದು.
ಒಂದುವೇಳೆ ಬಂಧನದಲ್ಲಿರುವ ವ್ಯಕ್ತಿ ಆಸಕ್ತಿಯನ್ನು ತೋರಿಸಿದರೆ, ಅವನ ಹೆಸರು ಮತ್ತು ವಿಳಾಸವನ್ನು ಅವನಿರುವ ಸೆರೆಮನೆಯ ಕ್ಷೇತ್ರಕ್ಕೆ ಸಂಬಂಧಿಸಿದ ಸಭೆಗೆ ಒಪ್ಪಿಸಬೇಕು. ಸಾಮಾನ್ಯವಾಗಿ ಉದ್ಭವಿಸಸಾಧ್ಯವಿರುವ ವಿವಿಧ ಪರಿಸ್ಥಿತಿಗಳನ್ನು ಹೇಗೆ ಬಗೆಹರಿಸಬೇಕೆಂದು ಅಲ್ಲಿರುವ ಅರ್ಹರಾದ ಸಹೋದರರಿಗೆ ತಿಳಿದಿರುತ್ತದೆ. ಒಂದುವೇಳೆ ಆ ಕ್ಷೇತ್ರಕ್ಕೆ ಸೇರಿದ ಸಭೆಯು ಯಾವುದೆಂದು ತಿಳಿಯದಿರುವಲ್ಲಿ, ಬ್ರಾಂಚ್ ಆಫೀಸಿಗೆ ಈ ವಿನಂತಿಯನ್ನು ಕಳುಹಿಸಿಕೊಡಬೇಕು.
ಅನೇಕ ಸೆರೆವಾಸಿಗಳು ಒಂದೇ ಸಮಯದಲ್ಲಿ ಅಧ್ಯಯನ ಮಾಡುವಂತೆ ನೇಮಿತ ಸಹೋದರರು ಒಟ್ಟಾಗಿ ಕೂಟಗಳನ್ನು ನಡಿಸುವುದು ತಪ್ಪಾಗಿರುವುದಿಲ್ಲ. ಹಾಗಿದ್ದರೂ, ಪ್ರಚಾರಕರು ಸೆರೆವಾಸಿಗಳೊಂದಿಗೆ ಯಾವುದೇ ನಿರ್ಬಂಧವಿಲ್ಲದೆ ಸಹವಾಸಮಾಡುವ ವಿಶೇಷ ಸಂದರ್ಭಗಳನ್ನು ಸೆರೆಮನೆಯಲ್ಲಿ ನಡಿಸಬಾರದು. ಅಷ್ಟುಮಾತ್ರವಲ್ಲದೆ, ಪ್ರಚಾರಕರು ಯಾವುದೇ ಜಾಗರೂಕತೆಯ ಪೂರ್ವತಯಾರಿ ಇಲ್ಲದೆ ಸೆರೆವಾಸಿಗಳಿಗೆ ಭೇಟಿ ನೀಡುವುದನ್ನು ಮತ್ತು ಅತಿ ಆಪ್ತವಾಗಿ ಅವರೊಂದಿಗೆ ಸಹವಾಸ ಮಾಡುವುದನ್ನು ಉತ್ತೇಜಿಸಲಾಗುವುದಿಲ್ಲ.
ಸೆರೆವಾಸಿಗಳಿಗೆ ಸಾಕ್ಷಿ ನೀಡುವಾಗ ನಾವೆಲ್ಲರೂ “ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ” ಆಗಿರೋಣ.—ಮತ್ತಾ. 10:16.