ನಿವೃತ್ತಿ—ವರ್ಧಿಸಿದ ಕಾರ್ಯಕ್ಕೆ ಅನುಕೂಲವಾದ ಸಂದರ್ಭವೋ?
1 ಅನೇಕ ಪರಿಶ್ರಮಿ ಕೆಲಸಗಾರರು, ಐಹಿಕ ಕೆಲಸದ ಒತ್ತಡ ಒತ್ತಾಯಗಳಿಂದ ತಮ್ಮನ್ನು ಸ್ವತಂತ್ರಗೊಳಿಸುವಂಥ ಸಮಯವಾದ ನಿವೃತ್ತಿಗಾಗಿ ಹಾತೊರೆಯುತ್ತಾರೆ. ಆದರೆ, ಅನೇಕ ಸಲ, ನಿವೃತ್ತಿಯು ನಿರೀಕ್ಷಾಹೀನತೆ, ಬೇಸರ, ಮತ್ತು ಅಕಾಲಿಕ ವಯಸ್ಸಾಗುವಿಕೆಯಲ್ಲಿ ಕೊನೆಗೊಳ್ಳುತ್ತದೆ. ಉದ್ದೇಶಪೂರ್ಣ ಚಟುವಟಿಕೆಯ ಕೊರತೆಯು, ಒಬ್ಬನ ಮನಸ್ಸನ್ನು ಸ್ವತಃ ತನ್ನ ಕುರಿತಾಗಿಯೇ ಚಿಂತಿಸುತ್ತಾ ಇರುವಂತೆ ಮಾಡಬಹುದು. ಬ್ರಸಿಲ್ನ ಒಂದು ವಾರ್ತಾಪತ್ರಿಕೆಯು ವರದಿಸುವುದೇನೆಂದರೆ, ನಿವೃತ್ತಿ ಪಡೆದಿರುವ ಸರಕಾರೀ ಉದ್ಯೋಗಿಗಳು, ತಾವು ‘ಅತೃಪ್ತಿ, ಕಿರಿಕಿರಿ, ಅಭದ್ರತೆ, ವ್ಯಕ್ತಿತ್ವವನ್ನು ಕಳೆದುಕೊಂಡ ಅನಿಸಿಕೆಯಿಂದ ಹಿಡಿದು, ಖಿನ್ನತೆ ಹಾಗೂ ತಮ್ಮ ಲೋಕವು ಕುಸಿದು ಬೀಳುತ್ತಿದೆ ಎಂಬ ಭಾವನೆಯ ತನಕ’ ಬೇರೆ ಬೇರೆ ಸಮಸ್ಯೆಗಳನ್ನು ಎದುರಿಸುತ್ತೇವೆಂದು ದೂರುತ್ತಾರೆ.
2 ಇದಕ್ಕೆ ವ್ಯತಿರಿಕ್ತವಾಗಿ, ಅನೇಕ ಕ್ರೈಸ್ತರು ತಮ್ಮ ಜೀವಿತದ ಈ ಹೊಸ ಅಧ್ಯಾಯವನ್ನು ವರ್ಧಿಸಿದ ಕಾರ್ಯಕ್ಕೆ ಅನುಕೂಲವಾದ ಸಂದರ್ಭವಾಗಿ ವೀಕ್ಷಿಸುತ್ತಾರೆ. 65 ವರ್ಷ ಪ್ರಾಯವನ್ನು ತಲಪಿದ ಎರಡು ವಾರಗಳ ಬಳಿಕ ಪಯನೀಯರ್ ಸೇವೆಯನ್ನು ಆರಂಭಿಸಿದ ಒಬ್ಬ ಸಹೋದರರು ಹೀಗೆ ಹೇಳುತ್ತಾರೆ: “ಪಯನೀಯರ್ ಸೇವೆಯ ಕಳೆದ ಹತ್ತು ವರ್ಷಗಳಂತೆ, ನನ್ನ ಜೀವಿತದಲ್ಲಿ ಬಹಳವಾಗಿ ಆಶೀರ್ವಾದಗಳಿಂದ ತುಂಬಿದ ಒಂದು ಕಾಲಾವಧಿಯನ್ನು ನಾನು ಎಂದೂ ಅನುಭವಿಸಿಲ್ಲ ಎಂಬುದಾಗಿ ನಾನು ಹೇಳಲೇಬೇಕು.” “ನಾವು ಪಯನೀಯರ್ ಸೇವೆಯನ್ನು ಆರಂಭಿಸಿದಾಗ, ನಮ್ಮ ನೈಜವಾದ ಸುವರ್ಣ ವರ್ಷಗಳು ಆರಂಭವಾದವು” ಎಂದು ಒಬ್ಬ ದಂಪತಿಗಳು ಬರೆದರು. ಹೌದು, ಅನೇಕರಿಗೆ ನಿವೃತ್ತಿಯು ತಮ್ಮ ಶುಶ್ರೂಷೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ಯೆಹೋವನಿಂದ ಸಮೃದ್ಧವಾದ ಆಶೀರ್ವಾದಗಳನ್ನು ಪಡೆದುಕೊಳ್ಳಲು ಒಂದು ಸುವರ್ಣ ಅವಕಾಶವನ್ನು ಒದಗಿಸುತ್ತದೆ.
3 ನಿಮ್ಮನ್ನು ಕಾರ್ಯನಿರತರಾಗಿ ಮತ್ತು ಫಲಭರಿತರಾಗಿ ಇರಿಸಿಕೊಳ್ಳುವುದು: ನಿವೃತ್ತಿಹೊಂದಿರುವ ಅನೇಕರು, ಇಂದು ಸಾಮಾನ್ಯವಾಗಿರುವ ಸೌಲಭ್ಯಗಳಿಲ್ಲದೇ ಎಳೆಯ ಪ್ರಾಯದಿಂದ ಕಷ್ಟಪಟ್ಟು ದುಡಿಯಲು ಕಲಿತು ಬೆಳೆದವರಾಗಿರಬಹುದು. ಅವರಲ್ಲಿ ಈಗ ಆ ಯೌವನದ ಶಕ್ತಿಸಾಮರ್ಥ್ಯಗಳು ಇರಲಿಕ್ಕಿಲ್ಲವಾದರೂ, ಅವರು ಇನ್ನೂ ಹೆಚ್ಚು ಫಲಪ್ರದ ಕೆಲಸಗಾರರಾಗಿದ್ದಾರೆ. ಒಂದು ಬ್ರಾಂಚ್ ಟೆರಿಟೊರಿಯಲ್ಲಿ, ಪಯನೀಯರರಲ್ಲಿ 22 ಪ್ರತಿಶತ ಅಂದರೆ ಸುಮಾರು 20,000 ಸಹೋದರ ಸಹೋದರಿಯರು ಈಗ ಕಡಿಮೆಪಕ್ಷ 60 ವರ್ಷ ಪ್ರಾಯದವರಾಗಿದ್ದಾರೆ. ಈ ವೃದ್ಧರು ಸಾರುವ ಕೆಲಸದಲ್ಲಿ ಹೆಚ್ಚನ್ನು ಮಾಡುತ್ತಾರೆ. ಅವರ ಅನುಭವಗಳು ಮತ್ತು ದೈವಿಕ ಗುಣಗಳು ಅವರು ಸೇವೆಸಲ್ಲಿಸುವ ಸಭೆಗಳನ್ನು ಸಮೃದ್ಧಗೊಳಿಸುತ್ತವೆ.—ಯಾಕೋ. 3:17, 18.
4 ಕ್ರೈಸ್ತ ಶುಶ್ರೂಷೆಯಲ್ಲಿ ಕಾರ್ಯಮಗ್ನರಾಗಿರುವುದು, ಉತ್ತಮವಾದ ಆರೋಗ್ಯಕ್ಕೆ ಮತ್ತು ಪ್ರಗತಿಶೀಲ ಜೀವನಮಟ್ಟಕ್ಕೆ ನಡೆಸುತ್ತದೆ. ನಿವೃತ್ತಿಯನ್ನು ಪಡೆದುಕೊಂಡಾಗ ಪಯನೀಯರ್ ಸೇವೆಯಲ್ಲಿ ತೊಡಗಿದ ಒಬ್ಬ 84 ವರ್ಷ ಪ್ರಾಯದ ಸಹೋದರಿಯು ಹೇಳಿದ್ದು: “ಆಸಕ್ತ ವ್ಯಕ್ತಿಗಳೊಂದಿಗೆ ಅನೇಕ ಬೈಬಲ್ ಅಧ್ಯಯನಗಳನ್ನು ಹೊಂದಿರುವುದು ಮಾನಸಿಕವಾಗಿ ಚುರುಕಾಗಿರಲು ನನಗೆ ಸಹಾಯಮಾಡಿದೆ. ನನ್ನ ಬಳಿ ಒಂದು ಕಾರ್ ಇಲ್ಲದ್ದರಿಂದ ನಾನು ಹೆಚ್ಚು ದೂರ ನಡೆಯುತ್ತೇನೆ. ಇದು ನನ್ನನ್ನು ಆರೋಗ್ಯವಂತಳಾಗಿ ಇರಿಸುತ್ತದೆ.” ಒಬ್ಬ ವೃದ್ಧ ದಂಪತಿಯು ಹೇಳಿದ್ದು: “ಸೇವೆಯು ನಮ್ಮನ್ನು ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಸ್ವಸ್ಥರಾಗಿರುವಂತೆ ಮಾಡುತ್ತದೆ. ನಾವು ಯಾವಾಗಲೂ ಒಟ್ಟಿಗಿರುತ್ತೇವೆ. ನಾವು ತುಂಬಾ ನಗುತ್ತೇವೆ ಹಾಗೂ ಜೀವನದಲ್ಲಿ ಆನಂದಿಸುತ್ತೇವೆ.”
5 ಹೆಚ್ಚು ಅಗತ್ಯವಿರುವಲ್ಲಿಗೆ ಹೋಗಿ ಸೇವೆಮಾಡುವುದು: ಅನುಕೂಲಕರ ಆರ್ಥಿಕ ಪರಿಸ್ಥಿತಿಗಳಲ್ಲಿರುವ ಕೆಲವು ನಿವೃತ್ತ ಕ್ರೈಸ್ತರು, ರಾಜ್ಯ ಪ್ರಚಾರಕರಿಗಾಗಿ ಹೆಚ್ಚು ಅಗತ್ಯವಿರುವಂಥ ಸ್ಥಳಗಳಲ್ಲಿ ಸೇವೆಮಾಡಲು ಅಲ್ಲಿಗೆ ಸ್ಥಳಾಂತರಿಸಿದ್ದಾರೆ. ಅಪೊಸ್ತಲ ಪೌಲನಂತೆಯೇ ಈ ಹುರುಪಿನ ಪ್ರಚಾರಕರು ‘ಇತರರ ಸಂಗಡ ಸುವಾರ್ತೆಯ ಫಲದಲ್ಲಿ ಪಾಲುಗಾರರಾಗಬೇಕೆಂದು ಇದೆಲ್ಲವನ್ನು ಸುವಾರ್ತೆಗೋಸ್ಕರವೇ ಮಾಡುತ್ತಾರೆ.’—1 ಕೊರಿಂ. 9:23.
6 ಒಬ್ಬ ದಂಪತಿಯು ತಮ್ಮ ಇಬ್ಬರು ಮಕ್ಕಳನ್ನು ಬೆಳೆಸಿದ ನಂತರ ಪಯನೀಯರ್ ಸೇವೆಯನ್ನು ಆರಂಭಿಸಿದರು. ಹಲವಾರು ವರ್ಷಗಳ ಪಯನೀಯರ್ ಸೇವೆಯ ನಂತರ, ಅವರು ಚೈನೀಸ್ ಭಾಷೆಯನ್ನು ಕಲಿಯುವ ಪ್ರಯತ್ನವನ್ನು ಕೈಗೊಂಡರು. ಈಗ ತಮ್ಮ 70ರ ಪ್ರಾಯದಲ್ಲಿರುವ ಅವರು, ತಾವು ಸೇವೆಸಲ್ಲಿಸುತ್ತಿದ್ದ ಚೈನೀಸ್ ಗುಂಪು ಒಂದು ಸಭೆಯಾಗಿ ರೂಪುಗೊಳ್ಳುವುದನ್ನು ನೋಡುವ ಸಂತೋಷದಲ್ಲಿ ಇತ್ತೀಚೆಗೆ ಆನಂದಿಸಿದರು. ಈ ರೀತಿಯ ದಂಪತಿಗಳು ಎಂತಹ ಆಶೀರ್ವಾದವಾಗಿ ಪರಿಣಮಿಸಿದ್ದಾರೆ!
7 ಶುಶ್ರೂಷೆಯಿಂದ ನಿವೃತ್ತಿಯಿಲ್ಲ: ಅನೇಕರು ಒಂದಾನೊಂದು ದಿನ ತಮ್ಮ ಐಹಿಕ ಕೆಲಸದಿಂದ ನಿವೃತ್ತಿಯನ್ನು ಪಡೆದುಕೊಳ್ಳುತ್ತಾರಾದರೂ, ಯಾವ ಕ್ರೈಸ್ತನಿಗೂ ದೇವರ ಸೇವೆಯಿಂದ ನಿವೃತ್ತಿ ಇಲ್ಲ. ಎಲ್ಲರೂ “ಕಡೇ ವರೆಗೂ” ನಂಬಿಗಸ್ತರಾಗಿ ಉಳಿಯಬೇಕು. (ಮತ್ತಾ. 24:13, 14) ಆದರೂ, ವಯಸ್ಸಾಗುತ್ತಾ ಇರುವಾಗ, ಈ ಮುಂಚೆ ಅವರು ಯೆಹೋವನ ಸೇವೆಯಲ್ಲಿ ಮಾಡುತ್ತಿದ್ದಷ್ಟನ್ನು ಈಗ ಮಾಡಲು ಸಾಧ್ಯವಿರುವುದಿಲ್ಲ. ಆದರೆ ಅವರಿಗೆ ಏನನ್ನು ಮಾಡಸಾಧ್ಯವಿದೆಯೋ ಅದನ್ನು ಹೃತ್ಪೂರ್ವಕವಾಗಿ ಮಾಡುತ್ತಿರುವುದನ್ನು ನೋಡುವುದು ಅದೆಷ್ಟು ಉತ್ತೇಜನದಾಯಕ! ಅವರ ಕೆಲಸವನ್ನೂ ದೇವರ ನಾಮದ ವಿಷಯವಾಗಿ ಅವರು ತೋರಿಸಿದ ಪ್ರೀತಿಯನ್ನೂ ಯೆಹೋವನು ಮರೆಯಲಾರನು ಎಂಬ ಆಶ್ವಾಸನೆಯನ್ನು ದೇವರ ವಾಕ್ಯವು ಕೊಡುತ್ತದೆ.—ಲೂಕ 21:1-4; ಇಬ್ರಿ. 6:10.
8 ನೀವು ನಿವೃತ್ತಿಯ ಪ್ರಾಯವನ್ನು ತಲಪುತ್ತಿರುವುದಾದರೆ, ನಿಮ್ಮ ಬದಲಾಗುತ್ತಿರುವ ಸ್ಥಿತಿಗತಿಯನ್ನು ಹೇಗೆ ಪೂರ್ಣವಾಗಿ ಸದುಪಯೋಗಿಸಿಕೊಳ್ಳಲು ಸಾಧ್ಯವಿದೆ ಎಂದು ಏಕೆ ಪ್ರಾರ್ಥನಾಪೂರ್ವಕವಾಗಿ ಯೋಚಿಸಿ ನೋಡಬಾರದು? ದೈವಿಕ ಸಹಾಯದೊಂದಿಗೆ, ನಿವೃತ್ತಿಯು ವರ್ಧಿಸಿದ ಕಾರ್ಯಕ್ಕೆ ಅನುಕೂಲವಾದ ಸಂದರ್ಭವನ್ನು ನಿಮ್ಮ ಮುಂದೆ ತೆರೆಯುತ್ತದೆ ಮತ್ತು ಇದು ಯೆಹೋವನಿಗೆ ಮಹಿಮೆಯನ್ನು ಹಾಗೂ ಅನೇಕ ಆಶೀರ್ವಾದಗಳನ್ನು ತರುತ್ತದೆ ಎಂಬುದನ್ನೂ ನೀವು ಕಂಡುಕೊಳ್ಳುವಿರಿ.—ಕೀರ್ತ. 148:12, 13.