ಆಧ್ಯಾತ್ಮಿಕ ಔತಣಕ್ಕೆ ನೀವು ಸಿದ್ಧರಾಗಿದ್ದೀರೋ?
1. ಔತಣವೊಂದಕ್ಕಾಗಿ ಯಾವ ರೀತಿಯ ಸಿದ್ಧತೆಯನ್ನು ಮಾಡುವ ಅಗತ್ಯವಿದೆ?
1 ಒಂದು ಔತಣವನ್ನು ನಡೆಸಬೇಕಾದರೆ ಸಾಕಷ್ಟು ತಯಾರಿಯು ಅಗತ್ಯ. ಆಹಾರ ಸಾಮಗ್ರಿಗಳನ್ನು ತರಬೇಕು, ಸ್ವಾದಿಷ್ಟವಾಗಿ ಅಡುಗೆ ಮಾಡಬೇಕು, ಅನಂತರ ಬಡಿಸಬೇಕು. ಊಟ ಬಡಿಸುವ ವ್ಯವಸ್ಥೆಯನ್ನು ಕ್ರಮಪ್ರಕಾರವಾಗಿ ನಡಿಸಬೇಕು. ಅದಲ್ಲದೆ, ಊಟ ಉಣ್ಣುವ ಸ್ಥಳವನ್ನು ಸಹ ಅಣಿಗೊಳಿಸಬೇಕು. ಅತಿಥಿಗಳು ಕೂಡ ಅದಕ್ಕಾಗಿ ತಯಾರುಮಾಡಬೇಕು, ವಿಶೇಷವಾಗಿ ಅವರು ದೂರ ಪ್ರಯಾಣಮಾಡಿ ಅಲ್ಲಿಗೆ ಬರುವುದಾದರೆ. ಅದರಲ್ಲಿ ತುಂಬಾ ಕೆಲಸವು ಸೇರಿದ್ದರೂ ಕುಟುಂಬದೊಂದಿಗೆ ಮತ್ತು ಸ್ನೇಹಿತರೊಂದಿಗೆ ಮಾಡುವ ಊಟವು ನಿಜವಾಗಿಯೂ ಆನಂದಕರ ಮತ್ತು ಸಾರ್ಥಕ. ಭೂಮಿಯಾದ್ಯಂತ ಇರುವ ಯೆಹೋವನ ಸಾಕ್ಷಿಗಳು “ಸದಾ ಎಚ್ಚರವಾಗಿರಿ!” ಜಿಲ್ಲಾ ಅಧಿವೇಶನವನ್ನು ಆತುರದಿಂದ ಮುನ್ನೋಡುತ್ತಿದ್ದಾರೆ. ಈ ಆಧ್ಯಾತ್ಮಿಕ ಔತಣಕ್ಕೆ ಅವರು ಚಿಕ್ಕ ದೊಡ್ಡ ಹಿಂಡಾಗಿ ಕೂಡಿಬರಲಿದ್ದಾರೆ. ಕಾರ್ಯಕ್ರಮವನ್ನು ತಯಾರಿಸಲು ಮತ್ತು ಎಲ್ಲವನ್ನೂ ಸಿದ್ಧಮಾಡಲು ತುಂಬಾ ಕೆಲಸವು ಈಗಾಗಲೇ ನಡೆಸಲ್ಪಟ್ಟಿದೆ. ನಮಗೆಲ್ಲರಿಗೂ ಅದಕ್ಕೆ ಹಾರ್ದಿಕ ಸ್ವಾಗತವಿದೆ. ಆ ಅಧಿವೇಶನಕ್ಕೆ ಹಾಜರಾಗಲು ಮತ್ತು ಹೆಚ್ಚಿನ ಪ್ರಯೋಜವನ್ನು ಪಡೆಯಲು ನಾವು ಸಹ ತಯಾರುಮಾಡಬೇಕು.—ಜ್ಞಾನೋ. 21:5.
2. ನಮ್ಮ ಆಧ್ಯಾತ್ಮಿಕ ಭೋಜನದ ವಿವಿಧ ಭಕ್ಷ್ಯಗಳನ್ನು ಸವಿಯಲು ಅಲ್ಲಿರಬೇಕಾದರೆ ಯಾವ ಏರ್ಪಾಡನ್ನು ಮಾಡಬೇಕು?
2 ಹೆಚ್ಚಿನ ಪ್ರಯೋಜನವನ್ನು ಪಡೆಯಿರಿ: ಈ ಆಧ್ಯಾತ್ಮಿಕ ಭೋಜನದ ವಿವಿಧ ಭಕ್ಷ್ಯಗಳನ್ನು ಸವಿಯಲು ನೀವಲ್ಲಿರುವಂತೆ ಯೋಜನೆಗಳನ್ನು ಮಾಡಿರುವಿರೋ? ನಿಮ್ಮ ಅಧಿವೇಶನಕ್ಕೆ ಆರಂಭದಿಂದ ಕೊನೆಯ ತನಕ ಹಾಜರಾಗಲು ನಿಮಗೆ ರಜೆ ಬೇಕಾದರೆ ಅಗತ್ಯವಿದ್ದಲ್ಲಿ ನಿಮ್ಮ ಮಾಲೀಕನಿಗೆ ಈಗಲೇ ತಿಳಿಸಿರಿ. ವಾಹನಾದಿಗಳು ಮತ್ತು ವಸತಿಗಾಗಿ ಏರ್ಪಾಡುಗಳನ್ನು ಮಾಡಿಮುಗಿಸಿದ್ದೀರೋ? ವೃದ್ಧರು, ಅಶಕ್ತರು ಹಾಗೂ ಸಹಾಯಬೇಕಾದ ಇತರರಿಗೆ ಗಮನಕೊಡಲ್ಪಟ್ಟಿದೆಯೋ ಎಂದು ಹಿರಿಯರು ಖಚಿತಪಡಿಸಿಕೊಳ್ಳಬೇಕು.—ಯೆರೆ. 23:4; ಗಲಾ. 6:10.
3. ನಮಗೆ ಆಮಂತ್ರಣವಿಲ್ಲದ ಒಂದು ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ನಾವು ಹಾಜರಾಗಬಾರದು ಯಾಕೆ?
3 ಅಂತಾರಾಷ್ಟ್ರೀಯ ಅಧಿವೇಶನಗಳು ಕೆಲವು ದೇಶಗಳಲ್ಲಿ ಮಾತ್ರ ನಡೆಯಲಿವೆ. ಅವುಗಳಿಗೆ ನಿರ್ದಿಷ್ಟ ಸಭೆಗಳು ಮತ್ತು ಪರದೇಶದ ಪ್ರತಿನಿಧಿಗಳು ಆಮಂತ್ರಿಸಲ್ಪಟ್ಟಿದ್ದಾರೆ ಎಂಬುದನ್ನು ಮನಸ್ಸಿನಲ್ಲಿಡಿ. ಇದಕ್ಕಾಗಿ ಏರ್ಪಾಡುಗಳನ್ನು ಮಾಡುವಾಗ, ಸಭಾಂಗಣದಲ್ಲಿರುವ ಸೀಟ್ಗಳು ಹಾಗೂ ಹೋಟೆಲ್ನಲ್ಲಿ ಲಭ್ಯವಿರುವ ರೂಮ್ಗಳ ಸಂಖ್ಯೆಯನ್ನು ಗಮನಿಸುತ್ತಾ ಎಷ್ಟು ಜನರನ್ನು ಆಮಂತ್ರಿಸಬೇಕು ಎಂದು ಬ್ರಾಂಚ್ ಆಫೀಸುಗಳು ಜಾಗ್ರತೆಯಿಂದ ಅಂದಾಜುಮಾಡಿವೆ. ಆಮಂತ್ರಿಸಲ್ಪಡದ ಒಂದು ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಪ್ರಚಾರಕರು ಹಾಜರಾಗುವುದಾದರೆ ಹಾಲ್ ಕಿಕ್ಕಿರಿದು ಎಲ್ಲರಿಗೂ ಸ್ಥಳ ಸಿಕ್ಕಲಿಕ್ಕಿಲ್ಲ.
4. ಪ್ರತಿದಿನದ ಆರಂಭದ ಕಾರ್ಯಕ್ರಮಕ್ಕೆ ಸಿದ್ಧರಾಗಿರಲು ನಮಗೆ ಯಾವ ಮರುಜ್ಞಾಪನಗಳು ಸಹಾಯಕಾರಿ?
4 ಕಾರ್ಯಕ್ರಮವು ಆರಂಭಿಸುವ ಮುಂಚೆ ನಿಮಗೆ ಸೀಟ್ ದೊರೆಯುವಂತೆ ಸಾಕಷ್ಟು ಮುಂಚಿತವಾಗಿಯೇ ಅಧಿವೇಶನ ಸ್ಥಳಕ್ಕೆ ಬನ್ನಿರಿ. ಸೆಷನ್ ಪ್ರಾರಂಭಿಸುವ ಮುಂಚೆ ಪ್ರೋಗ್ರ್ಯಾಮ್ ಹಾಳೆಯಲ್ಲಿ ಏನಿದೆ ಎಂದು ನೋಡಲು ಕೆಲವು ನಿಮಿಷ ತಕ್ಕೊಳ್ಳಿರಿ. ಸಾದರಪಡಿಸಲಿರುವ ಮಾಹಿತಿಗಾಗಿ ನಿಮ್ಮ ಹೃದಯವನ್ನು ಸಿದ್ಧಮಾಡಲು ನಿಮಗಿದು ಸಹಾಯಕರ. (ಎಜ್ರ 7:10) ಸಂಗೀತಕ್ಕೆ ಕಿವಿಗೊಡುವ ವೇಳೆಯನ್ನು ಸೆಷನ್ನ ಅಧ್ಯಕ್ಷನು ತಿಳಿಸುವಾಗ, ಅದನ್ನು ಕೇಳಿ ಆನಂದಿಸಲು ಮತ್ತು ನಂತರ ಆರಂಭದ ಗೀತೆ ಮತ್ತು ಪ್ರಾರ್ಥನೆಯಲ್ಲಿ ಭಾಗವಹಿಸಲು ಸಿದ್ಧರಾಗಿರಿ.
5. ನಮ್ಮ ಕುಟುಂಬವು ಕಾರ್ಯಕ್ರಮದಿಂದ ಹೇಗೆ ಹೆಚ್ಚು ಪ್ರಯೋಜನವನ್ನು ಪಡೆಯಬಲ್ಲದು?
5 ಅಧಿವೇಶನದಲ್ಲಿ ಕುಟುಂಬವಾಗಿ ಕೂತುಕೊಳ್ಳುವಲ್ಲಿ ಮಕ್ಕಳು ಕಾರ್ಯಕ್ರಮಕ್ಕೆ ನಿಕಟ ಗಮನಕೊಡುತ್ತಿದ್ದಾರೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ಹೆತ್ತವರಿಗೆ ಸಾಧ್ಯ. (ಧರ್ಮೋ. 31:12) ಬೈಬಲ್ ವಚನಗಳನ್ನು ಓದುವಾಗ ಎಲ್ಲರೂ ತಮ್ಮ ತಮ್ಮ ಬೈಬಲ್ಗಳನ್ನು ತೆರೆದು ಓದುವಂತೆ ಉತ್ತೇಜಿಸಲಾಗುತ್ತದೆ. ನಿಕಟ ಗಮನಕೊಡಲು ಸಂಕ್ಷಿಪ್ತ ಟಿಪ್ಪಣಿಗಳನ್ನು ಬರೆಯುವುದು ನಿಮಗೆ ಸಹಾಯಕರ. ಈ ಟಿಪ್ಪಣಿಯು ಮುಂದಕ್ಕೆ ಭಾಷಣಗಳ ಮುಖ್ಯ ಅಂಶಗಳನ್ನು ನೆನಪಿಸಿಕೊಳ್ಳಲು ಸಹಾಯಮಾಡುತ್ತದೆ. ಸೆಷನ್ ನಡೆಯುವಾಗ ಅನಾವಶ್ಯಕವಾದ ಮಾತುಕತೆ ಇಲ್ಲವೆ ಆಗಾಗ್ಗೆ ಎದ್ದು ಹೊರಗೆ ಹೋಗುವ ಕೆಟ್ಟ ಅಭ್ಯಾಸಗಳನ್ನು ವರ್ಜಿಸಿರಿ. ಕಾರ್ಯಕ್ರಮದ ಸಮಯದಲ್ಲಿ ನಿಮ್ಮ ಸೆಲ್ ಫೋನ್ ನಿಮ್ಮನ್ನು ಅಥವಾ ಇತರರನ್ನು ಅಪಕರ್ಷಿಸದಂತೆ ಬಿಡಬೇಡಿ. ಪ್ರತಿ ಸೆಷನ್ನ ಬಳಿಕ ಕಾರ್ಯಕ್ರಮದಲ್ಲಿ ನಿಮಗೇನು ಇಷ್ಟವಾಯಿತೆಂದು ಇತರರೊಂದಿಗೆ ಚರ್ಚಿಸಿರಿ.
6. ನಮ್ಮ ಅಧಿವೇಶನಗಳ ಒಂದು ಪ್ರಧಾನ ಅಂಶ ಯಾವುದು ಮತ್ತು ನಾವು ಅದರಲ್ಲಿ ಸಂಪೂರ್ಣವಾಗಿ ಹೇಗೆ ಆನಂದಿಸಬಹುದು?
6 ಜಿಲ್ಲಾ ಅಧಿವೇಶನದಲ್ಲಿ ನಮ್ಮ ಸಹೋದರ ಸಹೋದರಿಯರ ಆತ್ಮೀಯ ಬಂಧದಲ್ಲಿ ಆನಂದಿಸುವ ಸುಸಂದರ್ಭ ನಮಗಿದೆ. ಈ ಅಪೂರ್ವ ಸಹವಾಸವು ಲೋಕದಲ್ಲಿ ಬೇರೆಲ್ಲೂ ಸಿಗಲಾರದು. (ಕೀರ್ತ. 133:1-3; ಮಾರ್ಕ 10:29, 30) ನಿಮ್ಮ ಪಕ್ಕದಲ್ಲಿ ಕೂತವರಿಗೆ ನಿಮ್ಮ ಪರಿಚಯ ಮಾಡಿಕೊಡಿ ಮತ್ತು ಊಟದ ಸಮಯದಲ್ಲಿ ಅವರೊಂದಿಗೆ ಸಂವಾದಿಸಿ. ಅಧಿವೇಶನಕ್ಕೆ ಲಘು ಊಟವನ್ನು ತರುವುದರಿಂದ ಮತ್ತು ಹೊರಗೆ ಹೋಟೆಲಿಗೆ ಹೋಗುವ ಬದಲಿಗೆ ಹಾಲ್ನಲ್ಲೇ ಉಳಿಯುವುದರಿಂದ ಸಿಗುವ ಪ್ರಯೋಜನಗಳಲ್ಲಿ ಇದೊಂದು. ಪರಸ್ಪರ ಉತ್ತೇಜಿಸಲು ಸಿಗುವ ಇಂಥ ಸದವಕಾಶವನ್ನು ಕಳೆದುಕೊಳ್ಳದಿರುವಂತೆ ನೋಡಿ.—ರೋಮ. 1:11, 12.
7. ನಾವು ಧರಿಸುವ ಬಟ್ಟೆಯ ವಿಷಯದಲ್ಲಿ ಯಾವ ಸಿದ್ಧತೆಗಳನ್ನು ಮಾಡಬೇಕು?
7 ಉಡುಪು: ಇಸ್ರಾಯೇಲ್ಯರು ತಮ್ಮ ವಸ್ತ್ರಗಳ ಮೂಲೆಗಳಲ್ಲಿ ಗೊಂಡೆಗಳನ್ನು ಕಟ್ಟಬೇಕೆಂದೂ ಪ್ರತಿ ಗೊಂಡೆಯು ಒಂದೊಂದು ನೀಲಿ ದಾರದಿಂದ ಕೂಡಿರಬೇಕೆಂದೂ ಯೆಹೋವನು ಆಜ್ಞಾಪಿಸಿದ್ದು ಗಮನಾರ್ಹ. (ಅರ. 15:37-41) ಅವರು ಯೆಹೋವನ ಆರಾಧನೆಗಾಗಿ ಪ್ರತ್ಯೇಕಿಸಲ್ಪಟ್ಟ ಜನರೆಂದು ಅದು ಪ್ರತ್ಯಕ್ಷವಾಗಿ ಸೂಚಿಸಿತು. ಇಂದು ಅಧಿವೇಶನದಲ್ಲಿ ನಾವು ಧರಿಸುವ ಗೌರವಯುಕ್ತವಾದ ಸಭ್ಯ ಉಡುಪು ಲೋಕದಿಂದ ನಮ್ಮನ್ನು ಪ್ರತ್ಯೇಕವಾಗಿರಿಸುತ್ತದೆ. ಕಾರ್ಯಕ್ರಮದ ನಂತರ ಹೊರಗೆ ಊಟಕ್ಕೆ ಹೋಗುವಾಗಲೂ ಇದು ಪ್ರೇಕ್ಷಕರಿಗೆ ಒಂದು ಬಲವಾದ ಸಾಕ್ಷಿಯನ್ನು ಕೊಡುತ್ತದೆ. ಆದ್ದರಿಂದ ನೀವು ಧರಿಸುವ ಬಟ್ಟೆಯ ವಿಷಯದಲ್ಲಿ ಮುಂಚಿತವಾಗಿಯೇ ಜಾಗ್ರತೆವಹಿಸಿ.
8. ಸೀಟುಗಳನ್ನು ಕಾದಿರಿಸುವ ವಿಷಯದಲ್ಲಿ ಯಾವ ಶಾಸ್ತ್ರೀಯ ಮೂಲತತ್ತ್ವಗಳು ನಮ್ಮನ್ನು ಪ್ರಭಾವಿಸಬೇಕು?
8 ಪೀತಿಯು ಕ್ರಿಯೆಯಲ್ಲಿ: ಕೆಲವರಿಗೆ ತಮ್ಮ ಬಂಧುಮಿತ್ರರಿಗಾಗಿ ಸಭಾಂಗಣದಲ್ಲಿ ಸಿಕ್ಕಾಪಟ್ಟೆ ಸೀಟುಗಳನ್ನು ಕಾದಿರಿಸುವ ಹವ್ಯಾಸವಿದೆ ಎಂಬುದನ್ನು ಗಮನಿಸಲಾಗಿದೆ. ಕೆಲವರು ಅಟೆಂಡೆಂಟ್ರೊಂದಿಗೆ ಕೂಡ ಕೆಲವೊಮ್ಮೆ ಸಹಕರಿಸುವುದಿಲ್ಲ. ಅಕ್ರೈಸ್ತ ಮಾತುಗಳಿಂದ ಸಂಬೋಧಿಸುತ್ತಾರೆ. ನಿಶ್ಚಯವಾಗಿಯೂ ‘ನಾ-ಮುಂದು’ ಮನೋಭಾವವು ಒಬ್ಬನನ್ನು ಸದ್ಗುಣಿಯಾಗಿ ಗುರುತಿಸುವುದಿಲ್ಲ. ಅದು ಯೆಹೋವ ದೇವರಿಗೆ ಸ್ತುತಿಯನ್ನೂ ತಾರದು. ಆದ್ದರಿಂದ ನಾವು ಪ್ರೀತಿಪರರೂ ತಾಳ್ಮೆಯುಳ್ಳವರೂ ಸಹಕರಿಸುವವರೂ ಆಗಿರೋಣ. (ಗಲಾ. 5:22, 23, 25) ಸೀಟನ್ನು ಕಾದಿರಿಸುವ ವಿಷಯದಲ್ಲಿ ಕೊಡಲಾದ ಮರುಜ್ಞಾಪಕಗಳನ್ನು ನಾವು ಹೃದಯಪೂರ್ವಕವಾಗಿ ಪಾಲಿಸುತ್ತೇವೋ? ‘ಸ್ವಹಿತವನ್ನು ಹುಡುಕದಂಥ’ ಪ್ರೀತಿಯನ್ನು ತೋರಿಸುವ ಅಗತ್ಯ ನಮಗಿದೆ. (1 ಕೊರಿಂ. 13:5) ಈ ನಿಸ್ವಾರ್ಥ ಪ್ರೀತಿಯು ತನ್ನ ಶಿಷ್ಯರನ್ನು ಗುರುತಿಸುವ ಒಂದು ಪ್ರಧಾನ ಚಿಹ್ನೆಯಾಗಿದೆ ಎಂದು ಯೇಸು ಹೇಳಿದ್ದಾನೆ. (ಯೋಹಾ. 13:35) ಸಿಕ್ಕಾಪಟ್ಟೆ ಸಂಖ್ಯೆಯಲ್ಲಿ ಸೀಟುಗಳನ್ನು ಕಾದಿರಿಸುವುದು ಕ್ರಿಸ್ತನಂಥ ಈ ಪ್ರೀತಿಯನ್ನು ಕ್ರಿಯೆಯಲ್ಲಿ ತೋರಿಸುವ ಒಳ್ಳೇ ಮಾದರಿಯೋ? ಕ್ರೈಸ್ತ ಪ್ರೀತಿಯು ನಮ್ಮನ್ನು ಕ್ರಿಸ್ತನು ಏನಂದನೋ ಅದನ್ನು ಮಾಡಲು ಪ್ರೇರಿಸಬೇಕು: “ಆದಕಾರಣ ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅವುಗಳೆಲ್ಲವನ್ನು ನೀವು ಸಹ ಅವರಿಗೆ ಮಾಡಬೇಕು.”—ಮತ್ತಾ. 7:12.
9. ಅಧಿವೇಶನ ನಗರದಲ್ಲಿರುವಾಗ ಇತರರಿಗೆ ನಾವು ಹೇಗೆ ಸಾಕ್ಷಿನೀಡಬಹುದು?
9 ಸಾಕ್ಷಿಕೊಡಿ: ಸ್ವಲ್ಪ ಮುಂದಾಲೋಚನೆ ಮಾಡಿದಲ್ಲಿ ಅಧಿವೇಶನ ನಗರದಲ್ಲಿರುವಾಗ ಜನರಿಗೆ ಸಾಕ್ಷಿಕೊಡಲು ನಾವು ಶಕ್ತರಾಗುವೆವು. ಕಾರ್ಯಕ್ರಮದ ನಂತರ ಒಬ್ಬ ಸಹೋದರನು ತನ್ನ ಪತ್ನಿಯೊಂದಿಗೆ ಹೋಟೆಲಿಗೆ ಹೋದಾಗ ಬರೇ ತನ್ನ ಅಧಿವೇಶನದ ಬ್ಯಾಜ್ನ್ನು ವೇಟರ್ಗೆ ತೋರಿಸಿ, “ಹೆಚ್ಚಿನವರು ಇಂಥ ಬ್ಯಾಜ್ ಧರಿಸಿದ್ದನ್ನು ನೀವು ನೋಡಿದ್ದೀರೋ” ಎಂದು ಕೇಳಿದನು. ವೇಟರ್ ‘ಹೌದು’ ಎಂದು ಉತ್ತರಿಸುತ್ತಾ ಎಲ್ಲರೂ ಒಂದೇ ತರಹದ ಬ್ಯಾಜ್ ಅನ್ನು ಯಾಕೆ ಧರಿಸಿದ್ದಾರೆಂದು ತಿಳಿಯಲು ಬಯಸಿದನು. ಇದು ಸಂಭಾಷಣೆಗೆ ನಡೆಸಿತು ಮತ್ತು ಸಹೋದರನು ಅವನನ್ನು ಅಧಿವೇಶನಕ್ಕೆ ಆಮಂತ್ರಿಸಿದನು.
10. ನಮ್ಮ ಆತಿಥೇಯನಾದ ಯೆಹೋವ ದೇವರಿಗೆ ಗಣ್ಯತೆಯನ್ನು ಹೇಗೆ ತೋರಿಸಬಲ್ಲೆವು?
10 ನಮ್ಮ ಸಹೋದರರು ಎಲ್ಲಾ ಭಾಷಣಗಳನ್ನು, ಇಂಟರ್ವ್ಯೂಗಳನ್ನು, ಪ್ರತ್ಯಕ್ಷಾಭಿನಯಗಳನ್ನು ಚೆನ್ನಾಗಿ ಸಾದರಪಡಿಸುತ್ತಾರಾದರೂ ಈ ವಾರ್ಷಿಕ ಆಧ್ಯಾತ್ಮಿಕ ಔತಣದ ಪ್ರೀತಿಯುಳ್ಳ ದಾತನು ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನೇ. (ಯೆಶಾ. 65:13, 14) ಪ್ರತಿದಿನ ಅಲ್ಲಿ ಹಾಜರಿದ್ದು ಬಡಿಸಲಾಗುವ ಪ್ರತಿಯೊಂದು ತುತ್ತನ್ನು ಸವಿಯುವ ಮೂಲಕ ನಾವು ನಮ್ಮ ಆತಿಥೇಯ ದೇವರಿಗೆ ಗಣ್ಯತೆಯನ್ನು ತೋರಿಸುತ್ತೇವೆ. ಹಾಗೆ ಮಾಡಲು ನೀವು ಸಿದ್ಧತೆಗಳನ್ನು ಮಾಡಿರುವಿರೋ?
[ಪುಟ 4ರಲ್ಲಿರುವ ಚಿತ್ರವಿವರಣೆ]
ಜಿಲ್ಲಾ ಅಧಿವೇಶನ ಮರುಜ್ಞಾಪನಗಳು
◼ ಕಾರ್ಯಕ್ರಮದ ಸಮಯಗಳು: ಮೂರು ದಿನಗಳಲ್ಲಿಯೂ ಕಾರ್ಯಕ್ರಮವು ಬೆಳಿಗ್ಗೆ 9:20ಕ್ಕೆ ಆರಂಭವಾಗುವುದು. ಸಭಾಂಗಣದ ಬಾಗಿಲುಗಳನ್ನು ಬೆಳಿಗ್ಗೆ 8:00 ಗಂಟೆಗೆ ತೆರೆಯಲಾಗುವುದು. ಆರಂಭದ ರಾಜ್ಯ ಸಂಗೀತವು ನುಡಿಸಲ್ಪಡುವಾಗ ನಾವೆಲ್ಲರೂ ನಮ್ಮ ಆಸನಗಳಲ್ಲಿ ಕುಳಿತುಕೊಳ್ಳಬೇಕು. ಇದರಿಂದಾಗಿ ಕಾರ್ಯಕ್ರಮವನ್ನು ಗೌರವಾನ್ವಿತ ರೀತಿಯಲ್ಲಿ ಆರಂಭಿಸಲು ಸಾಧ್ಯವಾಗುತ್ತದೆ. ಕಾರ್ಯಕ್ರಮವು ಶುಕ್ರವಾರ ಮತ್ತು ಶನಿವಾರದಂದು ಸಂಜೆ 4:55ಕ್ಕೆ ಹಾಗೂ ಭಾನುವಾರದಂದು ಸಂಜೆ 4:00ಕ್ಕೆ ಕೊನೆಗೊಳ್ಳುವುದು.
◼ ಪಾರ್ಕಿಂಗ್: ಪಾರ್ಕಿಂಗ್ ಸೌಕರ್ಯಗಳನ್ನು ಪಡೆದಿರುವಂಥ ಎಲ್ಲ ಅಧಿವೇಶನ ಸ್ಥಳಗಳಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆಗನುಸಾರ ವಾಹನಗಳಿಗೆ ಫ್ರೀ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗುವುದು. ಪಾರ್ಕಿಂಗ್ ಸ್ಥಳವು ಸೀಮಿತವಾಗಿರುವುದರಿಂದ ಒಂದೇ ಕಾರಿನಲ್ಲಿ ಸಾಧ್ಯವಾದಷ್ಟು ಹೆಚ್ಚು ಮಂದಿ ಪ್ರಯಾಣಿಸಲು ಏರ್ಪಾಡು ಮಾಡಿಕೊಳ್ಳಬಹುದು.
◼ ಸೀಟುಗಳನ್ನು ಕಾದಿರಿಸುವುದು: ಕಾರ್ನಲ್ಲಿ ನಿಮ್ಮೊಂದಿಗೆ ಪ್ರಯಾಣಿಸುತ್ತಿರುವವರಿಗೆ ಅಥವಾ ಒಂದೇ ಮನೆಯಲ್ಲಿರುವವರಿಗೆ ಮಾತ್ರ ಸೀಟುಗಳನ್ನು ಕಾದಿರಿಸಬಹುದು.
◼ ಮಧ್ಯಾಹ್ನದ ಊಟ: ಮಧ್ಯಾಹ್ನದ ವಿರಾಮದಲ್ಲಿ ಊಟಕ್ಕಾಗಿ ಅಧಿವೇಶನ ಸ್ಥಳದಿಂದ ಹೊರಗೆ ಹೋಗುವ ಬದಲು ದಯವಿಟ್ಟು ಚಿಕ್ಕ ಊಟವನ್ನು ನೀವೇ ತನ್ನಿರಿ. ದೊಡ್ಡ ದೊಡ್ಡ ಟಿಫಿನ್ಗಳು, ಗಾಜಿನ ಪಾತ್ರೆಗಳು ಮುಂತಾದವುಗಳನ್ನು ಅಧಿವೇಶನಕ್ಕೆ ತರಬಾರದು. ಅಧಿವೇಶನ ವ್ಯವಸ್ಥೆಯು ಆಹಾರ, ಪಾನೀಯಗಳ ಯಾವುದೇ ಏರ್ಪಾಡನ್ನು ಮಾಡುವುದಿಲ್ಲ.
◼ ದಾನಗಳು: ನಮ್ಮ ಲೋಕವ್ಯಾಪಕ ಕಾರ್ಯಕ್ಕಾಗಿ ರಾಜ್ಯ ಸಭಾಗೃಹದಲ್ಲಿ ಅಥವಾ ಅಧಿವೇಶನದಲ್ಲಿ ಸ್ವಯಂ ಪ್ರೇರಿತ ದಾನಗಳನ್ನು ನೀಡುವ ಮೂಲಕ ನಾವು ನಮ್ಮ ಅಧಿವೇಶನ ಏರ್ಪಾಡುಗಳಿಗಾಗಿ ಗಣ್ಯತೆ ತೋರಿಸಬಲ್ಲೆವು. ನೀವು ಅಧಿವೇಶನದಲ್ಲಿ ಕಾಣಿಕೆಯಾಗಿ ಹಾಕುವ ಯಾವುದೇ ಚೆಕ್ಗಳಲ್ಲಿ “ದ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯಾ”ಗೆ ಹಣಸಂದಾಯವಾಗಬೇಕೆಂದು ಗುರುತಿಸಬೇಕು.
◼ ಅಪಘಾತಗಳು ಮತ್ತು ತುರ್ತುಪರಿಸ್ಥಿತಿಗಳು: ಅಧಿವೇಶನದ ಸ್ಥಳದಲ್ಲಿ ಯಾವುದೇ ವೈದ್ಯಕೀಯ ತುರ್ತುಪರಿಸ್ಥಿತಿ ಏಳುವಾಗ ದಯವಿಟ್ಟು ಹತ್ತಿರದಲ್ಲಿರುವ ಅಟೆಂಡೆಂಟ್ನನ್ನು ಸಂಪರ್ಕಿಸಿರಿ. ಅವನು ಕೂಡಲೇ ಪ್ರಥಮ ಚಿಕಿತ್ಸೆ ಇಲಾಖೆಗೆ ಅದನ್ನು ತಿಳಿಸುವನು. ಹೀಗೆ ಅಲ್ಲಿರುವ ನುರಿತ ಪ್ರಥಮ ಚಿಕಿತ್ಸಕನು ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ಬೇಕಾದ ಸಹಾಯ ನೀಡುವನು.
◼ ಪಾದರಕ್ಷೆ: ಸಭ್ಯವೂ ಅಚ್ಚುಕಟ್ಟೂ ಆದ ಶೂಸ್ಗಳನ್ನು ಧರಿಸಿರಿ. ಈ ಮೂಲಕ ಮೆಟ್ಟಲು ಹತ್ತುವಾಗ, ಏರುಪೇರುಗಳಲ್ಲಿ ಸುರಕ್ಷಿತವಾಗಿ ನಡೆಯಲು ಸಾಧ್ಯ.
◼ ಕಿವುಡರಿಗಾಗಿ: ಕೆಳಗಿನ ಅಧಿವೇಶನದಲ್ಲಿ ಕಾರ್ಯಕ್ರಮವನ್ನು ಸನ್ನೆ ಭಾಷೆಯಲ್ಲಿ ಪ್ರಸ್ತುತಪಡಿಸಲಾಗುವುದು: ಬೆಂಗಳೂರು-3 (ಇಂಗ್ಲಿಷ್); ಕೊಯಮತ್ತೂರು (ತಮಿಳು); ಕೊಚ್ಚಿ (ಮಲೆಯಾಳಂ); ಮತ್ತು ಪುಣೆ-ಚಿಂಚ್ವಡ್ (ಇಂಗ್ಲಿಷ್).
◼ ರೆಕಾರ್ಡಿಂಗ್: ನಿಮ್ಮ ರೆಕಾರ್ಡಿಂಗ್ ಉಪಕರಣಗಳನ್ನು ಅಧಿವೇಶನದ ಎಲೆಕ್ಟ್ರಿಕ್ ಅಥವಾ ಸೌಂಡ್ ಸಿಸ್ಟಮ್ ಸೌಕರ್ಯಕ್ಕೆ ಜೋಡಿಸಬಾರದು. ನಿಮ್ಮದೇ ಆದ ರೆಕಾರ್ಡಿಂಗನ್ನು ಮಾಡುವುದಾದರೆ ಬೇರೆಯವರಿಗೆ ಅಡಚಣೆಯಾಗದಂಥ ರೀತಿಯಲ್ಲಿ ಮಾಡಿರಿ.
◼ ಮಕ್ಕಳ ಗಾಲಿಕುರ್ಚಿ, ವಿಹಾರಕುರ್ಚಿಗಳು: ಮಕ್ಕಳ ಗಾಲಿಕುರ್ಚಿ, ವಿಹಾರಕುರ್ಚಿಗಳನ್ನು ಅಧಿವೇಶನ ಸ್ಥಳಕ್ಕೆ ತರಬಾರದು. ಆದರೆ ಹೆತ್ತವರು ತಮ್ಮ ಆಸನದ ಪಕ್ಕದಲ್ಲಿ ಭದ್ರವಾಗಿ ಬಿಗಿಯಸಾಧ್ಯವಿರುವ ಸುರಕ್ಷಿತ ಬೇಬಿ ಸೀಟನ್ನು ತರಬಹುದು.
◼ ಸುಗಂಧ ದ್ರವ್ಯಗಳು: ಹೆಚ್ಚಿನ ಅಧಿವೇಶನಗಳು ಹವಾನಿಯಂತ್ರಿತ ಸಭಾಂಗಣಗಳಲ್ಲಿ ನಡೆಸಲ್ಪಡುತ್ತವೆ. ಆದುದರಿಂದ, ಉಸಿರಾಟ ಅಥವಾ ಅದಕ್ಕೆ ಸಂಬಂಧಿಸಿದ ತೊಂದರೆಗಳಿರುವವರ ಆರೋಗ್ಯಕ್ಕೆ ಹಾನಿಯಾಗದಂತೆ ತೀಕ್ಷ್ಣ ಸುವಾಸನೆಯ ಸೆಂಟ್ಗಳ ಬಳಕೆಯನ್ನು ನಾವು ಮಿತವಾಗಿ ಬಳಸಿ ಪರಹಿತವನ್ನು ತೋರಿಸುವುದು ಒಳ್ಳೆಯದು.—1 ಕೊರಿಂ. 10:24.
◼ ಫಾಲೋ-ಅಪ್ ಫಾರ್ಮ್ಗಳು: ಅಧಿವೇಶನದ ಸಮಯದಲ್ಲಿ ಅನೌಪಚಾರಿಕ ಸಾಕ್ಷಿ ನೀಡಿದಾಗ ಸಿಕ್ಕಿದ ಆಸಕ್ತ ವ್ಯಕ್ತಿಗಳ ಕುರಿತು ಮಾಹಿತಿಯನ್ನು ಒದಗಿಸಲು ಪ್ಲೀಸ್ ಫಾಲೋ ಅಪ್ (S-43) ಫಾರ್ಮ್ ಅನ್ನು ಉಪಯೋಗಿಸಬೇಕು. ಅಧಿವೇಶನಕ್ಕೆ ಬರುವಾಗ ಪ್ರಚಾರಕರು ಒಂದೆರಡು ಫಾರ್ಮ್ಗಳನ್ನು ತರಬಹುದು. ಅವನ್ನು ತುಂಬಿಸಿದ ಮೇಲೆ ಅಧಿವೇಶನದ ಬುಕ್ರೂಮ್ಗೆ ಅಥವಾ ನಿಮ್ಮ ಸಭಾ ಸೆಕ್ರಿಟರಿಗೆ ಕೊಡತಕ್ಕದ್ದು.—ಫೆಬ್ರವರಿ 2005ರ ನಮ್ಮ ರಾಜ್ಯದ ಸೇವೆಯ ಪುಟ 6 ನೋಡಿ.
◼ ಹೋಟೆಲ್ಗಳು: ಹೋಟೆಲ್ಗಳಲ್ಲಿ ನಿಮ್ಮ ಸದ್ವರ್ತನೆಯ ಮೂಲಕ ಯೆಹೋವನ ನಾಮವನ್ನು ಮಹಿಮೆಪಡಿಸಿರಿ. ಅನೇಕ ಹೋಟೆಲ್ಗಳಲ್ಲಿ ದೊರೆಯುವ ಸೇವೆಗನುಸಾರ ಟಿಪ್ಸ್ ನೀಡುವುದು ರೂಢಿಯಲ್ಲಿದೆ.
◼ ಲಾಡ್ಜ್ಗಳು: (1) ದಯವಿಟ್ಟು ಅಗತ್ಯಕ್ಕಿಂತ ಹೆಚ್ಚು ರೂಮ್ಗಳನ್ನು ಕಾದಿರಿಸಬೇಡಿ ಮತ್ತು ಅನುಮತಿ ಇಲ್ಲದಿದ್ದರೆ ಹೆಚ್ಚು ಮಂದಿ ನಿಮ್ಮ ರೂಮ್ನಲ್ಲಿ ಉಳುಕೊಳ್ಳಬಾರದು. (2) ನಿಮ್ಮ ರಿಸರ್ವೇಷನ್ ಅನ್ನು ರದ್ದುಗೊಳಿಸಲೇಬೇಕಾದಲ್ಲಿ ಕೂಡಲೆ ಅದನ್ನು ಲಾಡ್ಜ್ನವರಿಗೆ ತಿಳಿಸಿರಿ. (3) ನೀವು ಎಲ್ಲ ಸಾಮಾನನ್ನು ಸಿದ್ಧವಾಗಿಟ್ಟ ಬಳಿಕವೇ ಟ್ರಾಲಿಯನ್ನು ತೆಗೆದುಕೊಳ್ಳಿ ಮತ್ತು ಇತರರ ಉಪಯೋಗಕ್ಕಾಗಿ ಕೂಡಲೆ ಹಿಂದಿರುಗಿಸಿ. (4) ರೂಮಿನಲ್ಲಿ ಅಪ್ಪಣೆ ವಿನಃ ಅಡಿಗೆ ಮಾಡಬಾರದು. (5) ನಿಮ್ಮ ಕೋಣೆ ಶುಚಿ ಮಾಡುವವನಿಗೆ ಪ್ರತಿದಿನ ಟಿಪ್ಸ್ ಕೊಡಿರಿ. (6) ಲಾಡ್ಜ್ನ ಅತಿಥಿಗಳಿಗಾಗಿ ಫ್ರೀಯಾಗಿ ಸಿಗುವ ಉಪಹಾರ, ಕಾಫಿ ಅಥವಾ ಐಸ್ಕ್ಯೂಬ್ಗಳನ್ನು ದುರುಪಯೋಗಿಸಬೇಡಿ. (7) ಲಾಡ್ಜ್ ಸಿಬ್ಬಂದಿಯೊಂದಿಗೆ ವ್ಯವಹರಿಸುವಾಗಲೆಲ್ಲಾ ದೇವರಾತ್ಮದ ಫಲವನ್ನು ತೋರಿಸಿರಿ. ಅವರಿಗೆ ಅನೇಕ ಅತಿಥಿಗಳನ್ನು ನೋಡಿಕೊಳ್ಳಲಿಕ್ಕಿದೆ ಆದ್ದರಿಂದ ಅವರು ನಮ್ಮ ದಯೆ, ತಾಳ್ಮೆ ಮತ್ತು ವಿವೇಚನೆಯನ್ನು ಗಣ್ಯಮಾಡುವರು. (8) ಶಿಫಾರಸು ಮಾಡಲ್ಪಟ್ಟಿರುವ ಲಾಜಿಂಗ್ ಲಿಸ್ಟ್ನಲ್ಲಿರುವ ರೂಮ್ ದರಗಳು ದಿನವೊಂದಕ್ಕೆ ತೆರಬೇಕಾದ ಪೂರ್ಣ ಬೆಲೆ. ಇದರಲ್ಲಿ ತೆರಿಗೆಯು ಸೇರಿಲ್ಲ. ನೀವು ವಿನಂತಿಸದ ಅಥವಾ ಬಳಸದ ಯಾವುದಕ್ಕಾದರೂ ಹೆಚ್ಚು ಹಣವನ್ನು ನಿಮ್ಮ ಬಿಲ್ಗೆ ಹಾಕಿದ್ದಲ್ಲಿ ಅದಕ್ಕೆ ಒಪ್ಪಬೇಡಿ ಮತ್ತು ಅದನ್ನು ಅಧಿವೇಶನದ ರೂಮಿಂಗ್ ಡಿಪಾರ್ಟ್ಮೆಂಟ್ಗೆ ಆದಷ್ಟು ಬೇಗ ತಿಳಿಸಿರಿ. (9) ಹೋಟೆಲ್ ರೂಮ್ನ ಸಂಬಂಧದಲ್ಲಿ ಯಾವುದೇ ಸಮಸ್ಯೆ ಏಳುವಲ್ಲಿ ಅಧಿವೇಶನದಲ್ಲಿರುವಾಗಲೇ ರೂಮಿಂಗ್ ಡಿಪಾರ್ಟ್ಮೆಂಟ್ಗೆ ತಪ್ಪದೆ ತಿಳಿಸಿರಿ.