ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು
ಭಾಗ 3: ಶಾಸ್ತ್ರವಚನಗಳ ಪರಿಣಾಮಕಾರಿ ಉಪಯೋಗ
1. ಬೈಬಲ್ ಅಧ್ಯಯನಗಳನ್ನು ನಡೆಸುವಾಗ ನಾವು ಶಾಸ್ತ್ರವಚನಗಳ ಮೇಲೆ ಒತ್ತುನೀಡಬೇಕು ಏಕೆ?
1 ನಾವು ಬೈಬಲ್ ಅಧ್ಯಯನಗಳನ್ನು ನಡೆಸುವುದು ‘ಶಿಷ್ಯರನ್ನಾಗಿ ಮಾಡು’ವ ಉದ್ದೇಶದೊಂದಿಗೆ. ಇದನ್ನು ನಾವು, ಜನರು ದೇವರ ವಾಕ್ಯದ ಬೋಧನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸ್ವೀಕರಿಸಲು ಹಾಗೂ ತಮ್ಮ ಜೀವಿತಗಳಲ್ಲಿ ಅದನ್ನು ಅನ್ವಯಿಸಿಕೊಳ್ಳಲು ಸಹಾಯಮಾಡುವ ಮೂಲಕ ಮಾಡುತ್ತೇವೆ. (ಮತ್ತಾ. 28:19, 20; 1 ಥೆಸ. 2:13) ಆದುದರಿಂದ, ಅಧ್ಯಯನವು ಶಾಸ್ತ್ರವಚನಗಳ ಮೇಲೆ ಕೇಂದ್ರೀಕರಿಸಬೇಕು. ಮೊದಲಾಗಿ, ವಿದ್ಯಾರ್ಥಿಗಳು ತಮ್ಮ ಸ್ವಂತ ಬೈಬಲಿನಲ್ಲಿ ವಚನಗಳನ್ನು ಹೇಗೆ ಕಂಡುಕೊಳ್ಳುವುದು ಎಂಬುದನ್ನು ಅವರಿಗೆ ತೋರಿಸಿಕೊಡುವುದು ಸಹಾಯಕರವಾಗಿರುವುದು. ಆದರೆ, ಇಂಥವರು ಆಧ್ಯಾತ್ಮಿಕವಾಗಿ ಪ್ರಗತಿಯನ್ನು ಹೊಂದಲು ಅವರಿಗೆ ಸಹಾಯಮಾಡಲಿಕ್ಕಾಗಿ ನಾವು ಹೇಗೆ ಶಾಸ್ತ್ರವಚನಗಳನ್ನು ಉಪಯೋಗಿಸಸಾಧ್ಯವಿದೆ?
2. ಯಾವ ಬೈಬಲ್ ವಚನಗಳನ್ನು ಓದಿ ಚರ್ಚಿಸಬೇಕು ಎಂಬುದನ್ನು ನಾವು ಹೇಗೆ ತೀರ್ಮಾನಿಸುತ್ತೇವೆ?
2 ಓದಲಿಕ್ಕಾಗಿ ವಚನಗಳನ್ನು ಆರಿಸಿಕೊಳ್ಳಿ: ನಿಮ್ಮ ತಯಾರಿಯ ಭಾಗವಾಗಿ, ಪರಿಗಣಿಸಲ್ಪಡುತ್ತಿರುವ ಅಂಶಕ್ಕೆ ಉದ್ಧರಿಸಲ್ಪಟ್ಟಿರುವ ಪ್ರತಿಯೊಂದು ಶಾಸ್ತ್ರವಚನವು ಹೇಗೆ ಸಂಬಂಧಿಸುತ್ತದೆ ಎಂಬುದನ್ನು ಕಂಡುಕೊಳ್ಳಿರಿ, ಮತ್ತು ಅಧ್ಯಯನದ ಸಮಯದಲ್ಲಿ ಯಾವ ವಚನಗಳನ್ನು ತೆರೆದು ಚರ್ಚಿಸುವಿರಿ ಎಂಬುದನ್ನು ತೀರ್ಮಾನಿಸಿರಿ. ಸಾಮಾನ್ಯವಾಗಿ, ನಮ್ಮ ನಂಬಿಕೆಗಳಿಗೆ ಶಾಸ್ತ್ರೀಯ ಆಧಾರವನ್ನು ಕೊಡುವ ವಚನಗಳನ್ನು ಓದುವುದು ಉತ್ತಮ. ಹಿನ್ನೆಲೆ ಮಾಹಿತಿಯನ್ನು ಕೊಡುವ ವಚನಗಳನ್ನು ಓದಬೇಕೆಂದೇನಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯ ಅಗತ್ಯಗಳು ಮತ್ತು ಪರಿಸ್ಥಿತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಿ.
3. ಪ್ರಶ್ನೆಗಳನ್ನು ಉಪಯೋಗಿಸುವುದರ ಪ್ರಯೋಜನವೇನು, ಮತ್ತು ನಾವಿದನ್ನು ಹೇಗೆ ಮಾಡಬಹುದು?
3 ಪ್ರಶ್ನೆಗಳನ್ನು ಉಪಯೋಗಿಸಿರಿ: ಬೈಬಲ್ ವಚನಗಳನ್ನು ನೀವು ವಿದ್ಯಾರ್ಥಿಗೆ ವಿವರಿಸುವ ಬದಲು, ಅವುಗಳನ್ನು ಅವರೇ ನಿಮಗೆ ವಿವರಿಸುವಂತೆ ಮಾಡಿ. ಇದನ್ನು ಮಾಡುವಂತೆ ಅವರನ್ನು ಪ್ರಚೋದಿಸಲಿಕ್ಕಾಗಿ ನೀವು ಪ್ರಶ್ನೆಗಳನ್ನು ನಿಪುಣತೆಯಿಂದ ಉಪಯೋಗಿಸಬಹುದು. ಒಂದು ಶಾಸ್ತ್ರವಚನದ ಅನ್ವಯವು ತೀರ ಸ್ಪಷ್ಟವಾಗಿರುವುದಾದರೆ, ಪ್ಯಾರಗ್ರಾಫ್ನಲ್ಲಿ ತಿಳಿಸಲ್ಪಟ್ಟಿರುವ ವಿಷಯವನ್ನು ವಚನವು ಹೇಗೆ ಬೆಂಬಲಿಸುತ್ತದೆ ಎಂದು ಮಾತ್ರ ನೀವು ಕೇಳಬಹುದು. ಬೇರೆ ವಿದ್ಯಮಾನಗಳಲ್ಲಿ, ವಿದ್ಯಾರ್ಥಿಯನ್ನು ಸರಿಯಾದ ತೀರ್ಮಾನಕ್ಕೆ ನಡೆಸಲಿಕ್ಕಾಗಿ ಹೆಚ್ಚು ನಿರ್ದಿಷ್ಟವಾದ ಪ್ರಶ್ನೆಯನ್ನೋ ಪ್ರಶ್ನೆಗಳ ಒಂದು ಸರಮಾಲೆಯನ್ನೋ ಉಪಯೋಗಿಸಬೇಕಾಗಿ ಬರಬಹುದು. ಹೆಚ್ಚಿನ ವಿವರಣೆಗಳ ಅಗತ್ಯವಿರುವಲ್ಲಿ, ವಿದ್ಯಾರ್ಥಿಯ ಪ್ರತಿಕ್ರಿಯೆಯ ನಂತರ ಇದನ್ನು ಮಾಡಬಹುದು.
4. ನಾವು ಓದುವಂಥ ಶಾಸ್ತ್ರವಚನಗಳಿಗೆ ಎಷ್ಟು ವಿವರಣೆಯನ್ನು ಕೊಡುವುದು ಅವಶ್ಯ?
4 ಸರಳವಾಗಿರಲಿ: ಅನೇಕವೇಳೆ ಒಬ್ಬ ನಿಪುಣ ಬಿಲ್ಲುಗಾರನಿಗೆ ತಾನು ಗುರಿಯಿಟ್ಟದ್ದನ್ನು ಹೊಡೆಯಲು ಕೇವಲ ಒಂದೇ ಬಾಣವು ಸಾಕಾಗಿರುತ್ತದೆ. ತದ್ರೀತಿಯಲ್ಲಿ, ಒಬ್ಬ ನಿಪುಣ ಬೋಧಕನಿಗೆ ಒಂದು ಅಂಶವನ್ನು ಒತ್ತಿಹೇಳಲಿಕ್ಕಾಗಿ ಹಲವಾರು ಶಬ್ದಗಳನ್ನು ಉಪಯೋಗಿಸುವ ಅಗತ್ಯವಿರುವುದಿಲ್ಲ. ಅವನು ಮಾಹಿತಿಯನ್ನು ಸರಳವಾಗಿ, ಸ್ಪಷ್ಟವಾಗಿ ಮತ್ತು ನಿಷ್ಕೃಷ್ಟವಾಗಿ ತಿಳಿಸಬಲ್ಲನು. ಕೆಲವೊಮ್ಮೆ, ಒಂದು ಶಾಸ್ತ್ರವಚನವನ್ನು ಅರ್ಥಮಾಡಿಕೊಳ್ಳಲು ಮತ್ತು ಅದನ್ನು ಸರಿಯಾಗಿ ವಿವರಿಸಲು ನೀವು ಕ್ರೈಸ್ತ ಪ್ರಕಾಶನಗಳಲ್ಲಿ ಸಂಶೋಧನೆ ಮಾಡಬೇಕಾಗಿ ಬಂದೀತು. (2 ತಿಮೊ. 2:15) ಆದರೆ, ಅಧ್ಯಯನದ ಸಮಯದಲ್ಲಿ ಒಂದು ವಚನದ ಪ್ರತಿಯೊಂದು ಅಂಶವನ್ನೂ ವಿವರಿಸಲು ಹೋಗಬೇಡಿ. ಪರಿಗಣಿಸಲ್ಪಡುತ್ತಿರುವ ವಿಷಯವನ್ನು ಒತ್ತಿಹೇಳಲು ಬೇಕಾಗಿರುವುದನ್ನು ಮಾತ್ರ ಒಳಗೂಡಿಸಿರಿ.
5, 6. ದೇವರ ವಾಕ್ಯವನ್ನು ತಮ್ಮ ಜೀವನದಲ್ಲಿ ಅನ್ವಯಿಸುವಂತೆ ನಾವು ವಿದ್ಯಾರ್ಥಿಗಳಿಗೆ ಹೇಗೆ ಸಹಾಯಮಾಡಸಾಧ್ಯವಿದೆ, ಆದರೆ ನಾವು ಏನು ಮಾಡಬಾರದು?
5 ಪ್ರಾಯೋಗಿಕ ಅನ್ವಯವನ್ನು ಮಾಡಿರಿ: ಸೂಕ್ತವಾಗಿರುವಾಗೆಲ್ಲಾ, ಬೈಬಲ್ ವಚನಗಳು ವೈಯಕ್ತಿಕವಾಗಿ ವಿದ್ಯಾರ್ಥಿಗೆ ಹೇಗೆ ಅನ್ವಯಿಸುತ್ತವೆ ಎಂಬುದನ್ನು ಅವನಿಗೆ ತೋರಿಸಿ. ಉದಾಹರಣೆಗೆ, ಕ್ರೈಸ್ತ ಕೂಟಗಳಿಗೆ ಇನ್ನೂ ಹಾಜರಾಗದಿರುವ ಒಬ್ಬ ವಿದ್ಯಾರ್ಥಿಯೊಂದಿಗೆ ಇಬ್ರಿಯ 10:24, 25ನ್ನು ಪರಿಗಣಿಸುತ್ತಿರುವಾಗ, ನೀವು ಒಂದು ಕೂಟದ ಕುರಿತು ವಿವರಿಸಿ ಅದಕ್ಕೆ ಹಾಜರಾಗುವಂತೆ ಅವನನ್ನು ಆಮಂತ್ರಿಸಬಹುದು. ಆದರೆ ಅವನನ್ನು ಒತ್ತಾಯಿಸಬೇಡಿರಿ. ಯೆಹೋವನನ್ನು ಮೆಚ್ಚಿಸಲು ಅಗತ್ಯವಿರುವಂಥ ಕ್ರಮವನ್ನು ಕೈಗೊಳ್ಳುವಂತೆ ದೇವರ ವಾಕ್ಯವು ಅವನನ್ನು ಪ್ರಚೋದಿಸಲು ಅನುಮತಿಸಿರಿ.—ಇಬ್ರಿ. 4:12.
6 ಶಿಷ್ಯರನ್ನಾಗಿ ಮಾಡುವ ನಮ್ಮ ನೇಮಕವನ್ನು ನಾವು ಪೂರೈಸುವಾಗ, ಶಾಸ್ತ್ರವಚನಗಳ ಪರಿಣಾಮಕಾರಿ ಉಪಯೋಗದ ಮೂಲಕ ನಾವು ‘ನಂಬಿಕೆಯಿಂದ ವಿಧೇಯತೆಯನ್ನು’ ಪ್ರವರ್ಧಿಸೋಣ.—ರೋಮಾ. 16:25.