ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು
ಭಾಗ 5: ಎಷ್ಟು ವಿಷಯಭಾಗವನ್ನು ಆವರಿಸಬೇಕೆಂಬುದನ್ನು ನಿರ್ಧರಿಸುವುದು
1 ಯೇಸು ಬೋಧಿಸುತ್ತಿದ್ದಾಗ ತನ್ನ ಶಿಷ್ಯರ ಇತಿಮಿತಿಗಳನ್ನು ಪರಿಗಣನೆಗೆ ತೆಗೆದುಕೊಂಡನು ಮತ್ತು “ಅವರು ಕೇಳಿಸಿಕೊಳ್ಳಲು ಶಕ್ತರಾಗಿರುವಷ್ಟರ ವರೆಗೆ” ಮಾತ್ರ ಮಾತಾಡಿದನು. (ಮಾರ್ಕ 4:33, NW; ಯೋಹಾ. 16:12) ತದ್ರೀತಿಯಲ್ಲಿ, ಇಂದು ಒಂದು ಬೈಬಲ್ ಅಧ್ಯಯನದ ಅವಧಿಯಲ್ಲಿ ಎಷ್ಟು ವಿಷಯಭಾಗವನ್ನು ಆವರಿಸುವುದು ಪ್ರಾಯೋಗಿಕವಾಗಿರುವುದು ಎಂಬುದನ್ನು ದೇವರ ವಾಕ್ಯದ ಬೋಧಕರು ನಿರ್ಧರಿಸುವ ಅಗತ್ಯವಿದೆ. ಎಷ್ಟು ವಿಷಯಭಾಗವು ಆವರಿಸಲ್ಪಡಬೇಕು ಎಂಬುದು ಬೋಧಕರ ಮತ್ತು ವಿದ್ಯಾರ್ಥಿಯ ಸಾಮರ್ಥ್ಯ ಹಾಗೂ ಪರಿಸ್ಥಿತಿಗಳ ಮೇಲೆ ಹೊಂದಿಕೊಂಡಿರುವುದು.
2 ಬಲವಾದ ನಂಬಿಕೆಯನ್ನು ಕಟ್ಟಿರಿ: ಕೆಲವು ವಿದ್ಯಾರ್ಥಿಗಳು ಒಂದು ಅಧ್ಯಯನ ಅವಧಿಯಲ್ಲಿ ಎಷ್ಟು ವಿಷಯವನ್ನು ಗ್ರಹಿಸುತ್ತಾರೋ ಅಷ್ಟೇ ವಿಷಯವನ್ನು ಅರ್ಥಮಾಡಿಕೊಳ್ಳಲು ಇನ್ನಿತರ ವಿದ್ಯಾರ್ಥಿಗಳಿಗೆ ಎರಡು ಅಥವಾ ಮೂರು ಅಧ್ಯಯನ ಅವಧಿಗಳು ಬೇಕಾಗಬಹುದು. ಒಂದು ನಿರ್ದಿಷ್ಟ ಅವಧಿಯಲ್ಲಿ ತುಂಬ ವಿಷಯಭಾಗವನ್ನು ಆವರಿಸುವ ಉದ್ದೇಶದಿಂದ ನಾವು ವಿದ್ಯಾರ್ಥಿಗೆ ಸ್ಪಷ್ಟವಾದ ಅರ್ಥವಿವರಣೆಯನ್ನು ಕೊಡುವುದನ್ನು ತ್ಯಾಗಮಾಡಿಬಿಡುವುದಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗೂ, ಅವರು ಕಂಡುಕೊಂಡಿರುವ ಹೊಸ ನಂಬಿಕೆಗೆ ದೇವರ ವಾಕ್ಯದಲ್ಲಿ ಬಲವಾದ ಆಧಾರವು ಬೇಕಾಗಿದೆ.—ಜ್ಞಾನೋ. 4:7; ರೋಮಾ. 12:2.
3 ನೀವು ಪ್ರತಿವಾರ ಅಧ್ಯಯನವನ್ನು ನಡೆಸುವಾಗ, ದೇವರ ವಾಕ್ಯದಿಂದ ವಿದ್ಯಾರ್ಥಿಯು ಏನನ್ನು ಕಲಿಯುತ್ತಿದ್ದಾನೋ ಅದನ್ನು ಅವನು ಅರ್ಥಮಾಡಿಕೊಂಡು ಸ್ವೀಕರಿಸಲಿಕ್ಕಾಗಿ ಅಗತ್ಯವಿರುವಷ್ಟು ಸಮಯವನ್ನು ಅವನೊಂದಿಗೆ ಕಳೆಯಿರಿ. ಕಲಿಸಲ್ಪಡುತ್ತಿರುವ ಸತ್ಯಗಳ ಪೂರ್ಣ ಮೌಲ್ಯದಿಂದ ಪ್ರಯೋಜನ ಪಡೆದುಕೊಳ್ಳಲಾಗದಷ್ಟು ವೇಗಗತಿಯಲ್ಲಿ ಅಧ್ಯಯನವನ್ನು ನಡೆಸಬೇಡಿರಿ. ಮುಖ್ಯ ಅಂಶಗಳ ಮೇಲೆ ಗಮನವನ್ನು ಕೇಂದ್ರೀಕರಿಸಲು ಮತ್ತು ನಾವು ಬೋಧಿಸುವಂಥ ವಿಷಯಗಳಿಗೆ ಆಧಾರವನ್ನು ಒದಗಿಸುವ ಪ್ರಮುಖ ಶಾಸ್ತ್ರವಚನಗಳನ್ನು ಪರಿಗಣಿಸಲು ಸಾಕಷ್ಟು ಸಮಯವನ್ನು ಅನುಮತಿಸಿರಿ.—2 ತಿಮೊ. 3:16, 17.
4 ಅಧ್ಯಯನದ ಸಮಯದಲ್ಲಿ ಅಪಕರ್ಷಿತರಾಗಬೇಡಿ: ನಾವು ಅಧ್ಯಯನವನ್ನು ಬೇಗಬೇಗನೆ ಮಾಡಿಮುಗಿಸಲು ಬಯಸದಿರುವುದು ಮಾತ್ರವಲ್ಲ, ಅಧ್ಯಯನದ ಸಮಯದಲ್ಲಿ ಬೇರೆ ವಿಷಯದ ಕಡೆಗೆ ಅಪಕರ್ಷಿತರಾಗದಿರುವುದೂ ನಮ್ಮ ಬಯಕೆಯಾಗಿದೆ. ಒಬ್ಬ ವಿದ್ಯಾರ್ಥಿಗೆ ತನ್ನ ವೈಯಕ್ತಿಕ ವಿಷಯಗಳ ಕುರಿತು ಹೆಚ್ಚು ಸಮಯ ಮಾತಾಡಲಿಕ್ಕಿರುವುದಾದರೆ, ಇದನ್ನು ಅಧ್ಯಯನದ ನಂತರ ಮಾತಾಡಲು ನಾವು ಏರ್ಪಾಡುಗಳನ್ನು ಮಾಡಬೇಕಾಗಬಹುದು.—ಪ್ರಸಂ. 3:1.
5 ಮತ್ತೊಂದು ಬದಿಯಲ್ಲಿ, ಸತ್ಯಕ್ಕಾಗಿರುವ ನಮ್ಮ ಸ್ವಂತ ಹುರುಪು ಅಧ್ಯಯನದ ಸಮಯದಲ್ಲಿ ಅಧಿಕವಾಗಿ ಮಾತಾಡದಿರುವುದನ್ನು ಒಂದು ಪಂಥಾಹ್ವಾನವಾಗಿ ಮಾಡಬಲ್ಲದು. (ಕೀರ್ತ. 145:6, 7) ಕೆಲವೊಮ್ಮೆ ಹೆಚ್ಚಿನ ವಿಷಯಗಳನ್ನು ಅಥವಾ ಅನುಭವವನ್ನು ತಿಳಿಸುವುದು ಅಧ್ಯಯನವನ್ನು ಸತ್ವಭರಿತಗೊಳಿಸಬಲ್ಲದು. ಆದರೆ, ವಿದ್ಯಾರ್ಥಿಯು ಮೂಲಭೂತ ಬೈಬಲ್ ಬೋಧನೆಗಳ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವುದನ್ನು ತಡೆಗಟ್ಟುವಷ್ಟರ ಮಟ್ಟಿಗೆ ಅವು ವಿಪರೀತವಾದವುಗಳೂ ಉದ್ದವಾದವುಗಳೂ ಆಗಿರಬಾರದು.
6 ಪ್ರತಿಯೊಂದು ಅಧ್ಯಯನ ಅವಧಿಯಲ್ಲಿ ಸೂಕ್ತವಾಗಿರುವಷ್ಟು ವಿಷಯಭಾಗವನ್ನು ಆವರಿಸುವ ಮೂಲಕ ‘ಯೆಹೋವನ ಜ್ಞಾನಪ್ರಕಾಶದಲ್ಲಿ ನಡೆಯುವಂತೆ’ ನಾವು ನಮ್ಮ ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡುತ್ತಿದ್ದೇವೆ.—ಯೆಶಾ. 2:5.