ಪತ್ರಿಕಾ ಮಾರ್ಗದ ಮೂಲಕ ಆಸಕ್ತಿಯನ್ನು ಬೆಳೆಸಿರಿ
1. ಆಸಕ್ತಿಯನ್ನು ಬೆಳೆಸಲು ಪತ್ರಿಕಾ ಮಾರ್ಗವನ್ನು ನಾವು ಹೇಗೆ ಉಪಯೋಗಿಸಬಲ್ಲೆವು?
1 ಶುಶ್ರೂಷೆಯಲ್ಲಿ ನಾವು ಭೇಟಿಯಾಗುವ ಅನೇಕ ಜನರು ನಮ್ಮ ಭೇಟಿಗಳನ್ನು ಸ್ವಾಗತಿಸುತ್ತಾರೆ ಮತ್ತು ನಮ್ಮ ಸಾಹಿತ್ಯವನ್ನು ಸಹ ಸಂತೋಷದಿಂದ ಸ್ವೀಕರಿಸುತ್ತಾರೆ, ಆದರೆ ಒಂದು ಕ್ರಮದ ಬೈಬಲ್ ಅಧ್ಯಯನಕ್ಕೆ ಒಪ್ಪಿಕೊಳ್ಳಲು ಅಂಜುತ್ತಾರೆ. ಅಂಥ ಜನರ ಆಸಕ್ತಿಯನ್ನು ಬೆಳೆಸುವ ಒಂದು ವಿಧವು ಪತ್ರಿಕಾ ಮಾರ್ಗದ ಮೂಲಕವೇ ಆಗಿದೆ. ನೀವು ಪತ್ರಿಕೆಯನ್ನು ನೀಡಿದಾಗ, ಆ ವ್ಯಕ್ತಿಯ ಹೆಸರು, ವಿಳಾಸ, ಭೇಟಿಮಾಡಿದ ತಾರೀಖು, ಸ್ವೀಕರಿಸಲಾದ ಪತ್ರಿಕೆಯ ಸಂಚಿಕೆ, ಚರ್ಚಿಸಲಾದ ಶಾಸ್ತ್ರವಚನ ಮತ್ತು ಇದರೊಂದಿಗೆ ವ್ಯಕ್ತಿಯ ಆಸಕ್ತಿಯನ್ನು ಸೂಚಿಸುವಂಥ ಯಾವುದೇ ಇತರ ವಿಷಯಗಳನ್ನು ಬರೆದುಕೊಳ್ಳಿರಿ. ಪತ್ರಿಕೆಯ ಪ್ರತಿ ಹೊಸ ಸಂಚಿಕೆಯು ಬಂದಾಗ, ನಿಮ್ಮ ಪತ್ರಿಕಾ ಮಾರ್ಗದಲ್ಲಿರುವ ವ್ಯಕ್ತಿಗಳಿಗೆ ಆಸಕ್ತಿಯನ್ನು ಉಂಟುಮಾಡುವ ಅಂಶಕ್ಕಾಗಿ ಅದರಲ್ಲಿ ಹುಡುಕಿರಿ. ಮತ್ತು ನೀವು ಆ ಪತ್ರಿಕೆಯೊಂದಿಗೆ ಅವರನ್ನು ಭೇಟಿಯಾಗುವಾಗ ಆ ಅಂಶವನ್ನು ಅವರ ಗಮನಕ್ಕೆ ತನ್ನಿರಿ. (1 ಕೊರಿಂ. 9:19-23) ಸಮಯಾನಂತರ ಒಂದುವೇಳೆ ನಮ್ಮ ಸಾಹಿತ್ಯಗಳಲ್ಲಿ ಅವರು ಓದುವ ಯಾವುದೇ ವಿಷಯವು ಅವರ ಆಸಕ್ತಿಯನ್ನು ಕೆರಳಿಸಬಹುದು ಮತ್ತು ಹೀಗೆ ಹೆಚ್ಚನ್ನು ಕಲಿಯುವ ಬಯಕೆಯನ್ನು ಅವರಲ್ಲಿ ಅದು ಮೂಡಿಸಬಹುದು.
2. ಜನರು ಯೆಹೋವನನ್ನು ಹುಡುಕಬೇಕಾದ ಜರೂರಿಯ ಸಮಯವು ಇದಾಗಿದೆ ಏಕೆ, ಮತ್ತು ಅವರಿಗೆ ಸಹಾಯಮಾಡಲು ನಾವು ಇನ್ನೇನನ್ನು ಮಾಡಬಲ್ಲೆವು?
2 ಪತ್ರಿಕೆಗಳನ್ನು ತಾವಾಗಿಯೇ ಓದಿಕೊಂಡ ಮಾತ್ರಕ್ಕೆ ಹೆಚ್ಚಿನ ಜನರು ಯೆಹೋವನ ಸೇವಕರಾಗಲಾರರು ಎಂಬುದನ್ನು ನಾವು ತಿಳಿದಿದ್ದೇವೆ. ಜನರು ಯೆಹೋವನನ್ನು ಹುಡುಕಬೇಕಾದ ಜರೂರಿಯ ಸಮಯವು ಇದಾಗಿರುವುದರಿಂದ, ಅವರಿಗೆ ಸಹಾಯಮಾಡಲು ನಾವು ಇನ್ನೇನನ್ನು ಮಾಡಬಲ್ಲೆವು? (ಚೆಫ. 2:2, 3; ಪ್ರಕ. 14:6, 7) ಪ್ರತಿ ಸಲ ನಾವು ಅವರಿಗೆ ಪತ್ರಿಕೆಯನ್ನು ನೀಡುವಾಗ, ಅದರಿಂದ ಜಾಗ್ರತೆಯಿಂದ ಆರಿಸಿಕೊಂಡ ಒಂದು ಶಾಸ್ತ್ರವಚನವನ್ನು ಓದಿ ತೋರಿಸುವ ಮೂಲಕ ಅವರ ಆಸಕ್ತಿಯನ್ನು ಬೆಳೆಸಬಲ್ಲೆವು.
3. (ಎ) ಒಂದೇ ವಚನವನ್ನು ಒಳಗೊಂಡ ಚರ್ಚೆಗಳ ಶ್ರೇಣಿಯನ್ನು ನಾವು ಹೇಗೆ ತಯಾರಿಸಬಲ್ಲೆವು? (ಬಿ) ನಿಮ್ಮ ಕ್ಷೇತ್ರದಲ್ಲಿರುವ ಜನರು ಯಾವ ವಿಷಯಗಳಲ್ಲಿ ಆಸಕ್ತಿಯನ್ನು ವಹಿಸುತ್ತಾರೆ?
3 ಒಂದೇ ವಚನವನ್ನು ಒಳಗೊಂಡ ಚರ್ಚೆಗಳು: ನಿಮ್ಮ ಪತ್ರಿಕಾ ಮಾರ್ಗದಲ್ಲಿರುವವರ ಕುರಿತು ಯೋಚಿಸಿರಿ ಮತ್ತು ಪ್ರತಿಯೊಬ್ಬರ ನಿರ್ದಿಷ್ಟ ಅಗತ್ಯಗಳಿಗಾಗಿ ಕೇವಲ ಒಂದು ವಚನವನ್ನು ಒಳಗೊಂಡ ಚರ್ಚೆಗಳ ಶ್ರೇಣಿಯನ್ನು ತಯಾರಿಸಿ ಇಟ್ಟುಕೊಳ್ಳಿರಿ. ಅಂದರೆ, ಒಂದು ಭೇಟಿಯಲ್ಲಿ ಕೇವಲ ಒಂದು ವಚನದ ಕುರಿತು ಚರ್ಚಿಸಿದರೆ ಸಾಕು. (ಫಿಲಿ. 2:4) ಉದಾಹರಣೆಗೆ, ಒಂದುವೇಳೆ ಯಾರಾದರು ಇತ್ತೀಚೆಗೆ ತಮ್ಮ ಪ್ರಿಯ ವ್ಯಕ್ತಿಯನ್ನು ಮರಣದಲ್ಲಿ ಕಳೆದುಕೊಂಡಿದ್ದರೆ, ಬೈಬಲು ಸತ್ತವರ ಸ್ಥಿತಿಯ ಬಗ್ಗೆ ಮತ್ತು ಪುನರುತ್ಥಾನದ ನಿರೀಕ್ಷೆಯ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಚರ್ಚಿಸಲು ನೀವು ಅನೇಕ ಪುನರ್ಭೇಟಿಗಳನ್ನು ಮಾಡಬಹುದು. ಚರ್ಚೆಗಾಗಿ ಬೈಬಲ್ ವಿಷಯಗಳು ಎಂಬ ಪುಸ್ತಿಕೆಯಲ್ಲಿರುವ “ಮರಣ” ಮತ್ತು “ಪುನರುತ್ಥಾನ” ಎಂಬ ಮುಖ್ಯ ಶಿರೋನಾಮದ ಕೆಳಗಿರುವ ವಿಷಯಗಳನ್ನು ಉಪಯೋಗಿಸುತ್ತಾ ನೀವು ಒಂದೇ ವಚನವನ್ನು ಒಳಗೊಂಡ ಚರ್ಚೆಗಳನ್ನು ತಯಾರಿಸಸಾಧ್ಯವಿದೆ. ಹೀಗೆ ಈ ಚರ್ಚೆಗಳು ಮುಗಿದ ಅನಂತರ ಅದಕ್ಕೆ ಕೂಡಿಕೆಯಾಗಿ ಅಸ್ವಸ್ಥತೆ, ವೃದ್ಧಾಪ್ಯ ಮತ್ತು ಮರಣವು ಹೇಗೆ ಸಂಪೂರ್ಣವಾಗಿ ತೆಗೆದುಹಾಕಲ್ಪಡುವುದು ಎಂಬಂಥ ಸಂಬಂಧಿತ ವಿಷಯಗಳ ಕುರಿತಾಗಿ ಹೆಚ್ಚಿನ ಚರ್ಚೆಗಳು ತಾನಾಗಿಯೇ ಹಿಂಬಾಲಿಸುವವು. ಇದರ ಮುಖ್ಯ ಉದ್ದೇಶವು, ವ್ಯಕ್ತಿಗೆ ಯಾವ ವಿಚಾರವು ಆಸಕ್ತಿಯನ್ನು ಉಂಟುಮಾಡುತ್ತದೆ ಎಂಬುದನ್ನು ಕಂಡುಹಿಡಿದು ಅದರ ಕುರಿತು ಬೈಬಲ್ ಏನು ಹೇಳುತ್ತದೆ ಎಂಬುದನ್ನು ಹಂತಹಂತವಾಗಿ ತೋರಿಸುವುದೇ ಆಗಿದೆ.
4. ವಚನಗಳನ್ನು ಉಪಯೋಗಿಸುವಾಗ ಅದನ್ನು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡುವುದು ಏಕೆ ಪ್ರಾಮುಖ್ಯವಾಗಿದೆ, ಮತ್ತು ಇದನ್ನು ನಾವು ಹೇಗೆ ಮಾಡಬಲ್ಲೆವು?
4 ತಿಳಿವಳಿಕೆಯನ್ನು ನೀಡಿರಿ: ಸಾಮಾನ್ಯವಾಗಿ ಚರ್ಚೆಗಳನ್ನು ಸರಳವಾಗಿಯೂ ಸಂಕ್ಷಿಪ್ತವಾಗಿಯೂ ಇಡುವುದು ಉತ್ತಮವಾಗಿದ್ದರೂ, ಆರಿಸಿಕೊಂಡ ವಚನವನ್ನು ಓದುವುದಕ್ಕಿಂತ ಹೆಚ್ಚಿನದ್ದನ್ನು ಮಾಡುವ ಅಗತ್ಯವಿದೆ. ಸೈತಾನನು ಸುವಾರ್ತೆಯ ಕಡೆಗೆ ಜನರ ಮನಸ್ಸನ್ನು ಮಂಕುಮಾಡಿದ್ದಾನೆ. (2 ಕೊರಿಂ. 4:3, 4) ಬೈಬಲಿನ ಪರಿಚಯವಿರುವ ಜನರಿಗೂ ಅದನ್ನು ಅರ್ಥಮಾಡಿಕೊಳ್ಳಲು ಸಹಾಯದ ಅಗತ್ಯವಿದೆ. (ಅ. ಕೃ. 8:30, 31) ಆದುದರಿಂದ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿನ ಭಾಷಣದಲ್ಲಿ ಮಾಡುವಂತೆ ವಚನವನ್ನು ವಿವರಿಸಲು ಮತ್ತು ದೃಷ್ಟಾಂತಿಸಲು ಸಮಯವನ್ನು ತೆಗೆದುಕೊಳ್ಳಿರಿ. (ಅ. ಕೃ. 17:3) ವ್ಯಕ್ತಿಯು ತನ್ನ ಸ್ವಂತ ಜೀವಿತದಲ್ಲಿ ದೇವರ ವಾಕ್ಯದ ಪ್ರಾಯೋಗಿಕ ಮೌಲ್ಯವನ್ನು ಅರಿತುಕೊಳ್ಳುವಂತೆ ಸಹಾಯಮಾಡಿರಿ.
5. ಪತ್ರಿಕಾ ಮಾರ್ಗದ ಭೇಟಿಯು ಒಂದು ಬೈಬಲ್ ಅಧ್ಯಯನವಾಗಿ ಹೇಗೆ ಬದಲಾಗಬಹುದು?
5 ತಾನು ಕಲಿಯುತ್ತಿರುವ ವಿಷಯವನ್ನು ವ್ಯಕ್ತಿಯು ಆನಂದಿಸುತ್ತಿರುವುದಾದರೆ, ಕ್ರಮೇಣವಾಗಿ ಪ್ರತಿ ಭೇಟಿಯಲ್ಲಿನ ಚರ್ಚೆಗಳಲ್ಲಿ ಎರಡು ಅಥವಾ ಮೂರು ವಚನಗಳನ್ನು ಸೇರಿಸಿರಿ. ಅಪೇಕ್ಷಿಸು ಬ್ರೋಷರ್ ಅಥವಾ ಜ್ಞಾನ ಪುಸ್ತಕವನ್ನು ಪರಿಚಯಪಡಿಸುವ ಸಂದರ್ಭಕ್ಕಾಗಿ ಯಾವಾಗಲೂ ಹುಡುಕುತ್ತಿರಿ. ಈ ರೀತಿಯಾಗಿ, ಪತ್ರಿಕಾ ಮಾರ್ಗದ ಭೇಟಿಯು ಕ್ರಮೇಣ ಒಂದು ಬೈಬಲ್ ಅಧ್ಯಯನವಾಗಿ ಬದಲಾಗಬಹುದು.