ಜ್ಯೋತಿರ್ಮಂಡಲಗಳಂತೆ ಹೊಳೆಯುವ ಯುವ ಜನರು
1. ಕ್ರೈಸ್ತರು ಭಿನ್ನರಾಗಿ ಕಂಡುಬರುತ್ತಾರೆಂದು ಬೈಬಲ್ ಹೇಗೆ ತೋರಿಸುತ್ತದೆ, ಮತ್ತು ಆ ಮಾತುಗಳು ಇಂದಿನ ಕ್ರೈಸ್ತ ಯುವ ಜನರಿಗೆ ಹೇಗೆ ಅನ್ವಯವಾಗುತ್ತವೆ?
1 “ನೀವು ಲೋಕಕ್ಕೆ ಬೆಳಕಾಗಿದ್ದೀರಿ” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು. (ಮತ್ತಾ. 5:14, 16) ಗುಡ್ಡದ ಮೇಲೆ ಕಟ್ಟಿರುವ ಊರು ಸೂರ್ಯನ ಬೆಳಕಿನಲ್ಲಿ ಹೊಳೆಯುವಂತೆ, ಕ್ರೈಸ್ತರು ಎದ್ದುಕಾಣುತ್ತಾರೆ. ಇಂದು, ಹೆಚ್ಚಿನ ಯುವ ಕ್ರೈಸ್ತರು ತಮ್ಮ ಒಳ್ಳೆಯ ನಡತೆ ಮತ್ತು ಹುರುಪಿನ ಸಾರುವಿಕೆಯ ಮೂಲಕ ‘ಲೋಕದೊಳಗೆ ಜ್ಯೋತಿರ್ಮಂಡಲಗಳಂತೆ ಹೊಳೆಯುತ್ತಿದ್ದಾರೆ.’—ಫಿಲಿ. 2:16; ಮಲಾ. 3:18.
2. ಶಿಕ್ಷಕರಿಗೆ ಮತ್ತು ಸಹಪಾಠಿಗಳಿಗೆ ಸಾಕ್ಷಿನೀಡುವ ಕೆಲವು ವಿಧಗಳಾವುವು?
2 ಶಾಲೆಯಲ್ಲಿ: ನೀವು ಶಾಲೆಯಲ್ಲಿ ಹೇಗೆ ಸಾಕ್ಷಿನೀಡಬಹುದು? ಅಮಲೌಷಧ, ವಿಕಾಸವಾದ ಮತ್ತು ನೈಸರ್ಗಿಕ ವಿಪತ್ತುಗಳಂತಹ ವಿಷಯಗಳನ್ನು ಒಳಗೂಡಿರುವ ಕ್ಲಾಸ್ ಚರ್ಚೆಗಳನ್ನು ಅನೇಕ ಯುವ ಜನರು ಸಾಕ್ಷಿನೀಡುವ ಸಂದರ್ಭಗಳಾಗಿ ಉಪಯೋಗಿಸಿದ್ದಾರೆ. ಒಬ್ಬ ಸಹೋದರಿಗೆ ಭಯೋತ್ಪಾದನೆಯ ಬಗ್ಗೆ ಪ್ರಬಂಧ ಬರೆಯುವಂತೆ ಹೇಳಲಾಯಿತು. ಅವಳು, ಮಾನವಕುಲಕ್ಕೆ ದೇವರ ರಾಜ್ಯವೇ ನಿಜವಾದ ನಿರೀಕ್ಷೆಯಾಗಿದೆ ಎಂದು ಸಾಕ್ಷಿನೀಡಲು ಆ ಸಂದರ್ಭವನ್ನು ಉಪಯೋಗಿಸಿದಳು. ಉತ್ತಮವಾಗಿ ಯೋಚಿಸಿ ಬರೆದ ವರದಿಯಿಂದ ಅವಳ ಶಿಕ್ಷಕಿಯು ಪ್ರಭಾವಿತಳಾದಳು ಮತ್ತು ಇದು ಇನ್ನೂ ಹೆಚ್ಚು ಸಾಕ್ಷಿನೀಡಲು ದಾರಿಮಾಡಿಕೊಟ್ಟಿತು.
3. ಶಾಲೆಯಲ್ಲಿ ನಿಮ್ಮ ನಡತೆಯ ಮೂಲಕ ನೀವು ಹೇಗೆ ಬೆಳಕನ್ನು ಪ್ರಕಾಶಿಸಸಾಧ್ಯವಿದೆ?
3 ಜ್ಯೋತಿರ್ಮಂಡಲಗಳಂತೆ ಹೊಳೆಯುವ ಇನ್ನೊಂದು ವಿಧವು ನಮ್ಮ ನಡತೆ, ಸಭ್ಯ ಉಡುಪು ಹಾಗೂ ಶೃಂಗಾರದ ಮೂಲಕವೇ. (1 ಕೊರಿಂ. 4:9; 1 ತಿಮೊ. 2:9) ನಿಮ್ಮ ನಡವಳಿಕೆ ಭಿನ್ನವಾಗಿರುವುದನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನೋಡುವಾಗ, ನಿಮ್ಮ ಒಳ್ಳೆಯ ನಡತೆಯ ಕಾರಣ ಕೆಲವರು ಸತ್ಯದ ಕಡೆಗೆ ಸೆಳೆಯಲ್ಪಡಬಹುದು ಮತ್ತು ಅದು ನಿಮಗೆ ಬೈಬಲ್ ಸತ್ಯಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಕೊಡಬಹುದು. (1 ಪೇತ್ರ 2:12; 3:1, 2) ದೈವಿಕ ನಡತೆಯನ್ನು ತೋರಿಸುವುದು ಸುಲಭವಾಗಿರಲಿಕ್ಕಿಲ್ಲ, ಆದರೆ ಯೆಹೋವನು ನಿಮ್ಮನ್ನು ಹೇರಳವಾಗಿ ಆಶೀರ್ವದಿಸುವನು. (1 ಪೇತ್ರ 3:16, 17; 4:14) ಇತರರಿಗೆ ಸುವಾರ್ತೆಯಲ್ಲಿ ಆಸಕ್ತಿಯನ್ನು ಮೂಡಿಸಲಿಕ್ಕಾಗಿ ನೀವು ಬೈಬಲ್ ಸಾಹಿತ್ಯವನ್ನು ಬಿಡುವಿನ ಸಮಯದಲ್ಲಿ ಓದಬಹುದು ಅಥವಾ ಅವರಿಗೆ ಕಾಣುವಂತಹ ಸ್ಥಳಗಳಲ್ಲಿ ಅದನ್ನು ಇಡಬಹುದು.
4. ಶಾಲೆಯಲ್ಲಿ ಸಾಕ್ಷಿನೀಡುವುದರಿಂದ ದೊರಕುವ ಪ್ರಯೋಜನಗಳಲ್ಲಿ ಕೆಲವು ಯಾವುವು?
4 ಶಾಲೆಯಲ್ಲಿ ನಿಮ್ಮ ಬೆಳಕನ್ನು ಪ್ರಕಾಶಿಸುವುದು, ನಿಮ್ಮ ನಂಬಿಕೆಯನ್ನು ಬಲಪಡಿಸುತ್ತದೆ ಮತ್ತು ಯೆಹೋವನನ್ನು ಹೆಮ್ಮೆಯಿಂದ ಸೇವಿಸಲು ನಿಮಗೆ ಸಹಾಯಮಾಡುತ್ತದೆ. (ಯೆರೆ. 9:24) ಅದು ನಿಮಗೆ ಸಂರಕ್ಷಣೆಯಾಗಿಯೂ ಇರುತ್ತದೆ. ಒಬ್ಬ ಸಹೋದರಿಯು ಹೇಳಿದ್ದು, “ನನ್ನ ನಂಬಿಕೆಗಳ ಕುರಿತು ಮಾತಾಡುವುದರಿಂದ ಒಂದು ಪ್ರಯೋಜನವೇನೆಂದರೆ, ಬೈಬಲ್ ಏನು ಹೇಳುತ್ತದೋ ಅದಕ್ಕೆ ಹೊಂದಿಕೆಯಲ್ಲಿರದಂಥ ವಿಷಯಗಳನ್ನು ಮಾಡುವಂತೆ ವಿದ್ಯಾರ್ಥಿಗಳು ನನ್ನ ಮೇಲೆ ಒತ್ತಡವನ್ನು ಹಾಕಲು ಪ್ರಯತ್ನಿಸುವುದಿಲ್ಲ.”
5. (ಎ) ಕೆಲವು ಯುವ ಜನರು ತಮ್ಮ ಶುಶ್ರೂಷೆಯನ್ನು ಹೇಗೆ ವಿಸ್ತರಿಸುತ್ತಿದ್ದಾರೆ? (ಬಿ) ನಿಮ್ಮ ಆಧ್ಯಾತ್ಮಿಕ ಗುರಿಗಳೇನಾಗಿವೆ?
5 ವಿಸ್ತರಣೆ ಮಾಡಲ್ಪಟ್ಟಿರುವ ಸೇವೆ: ಅನೇಕ ಯುವ ಜನರು ಜ್ಯೋತಿರ್ಮಂಡಲಗಳಂತೆ ಹೊಳೆಯುತ್ತಿರುವ ಇನ್ನೊಂದು ವಿಧವು, ತಮ್ಮ ಶುಶ್ರೂಷೆಯನ್ನು ವಿಸ್ತರಿಸುವ ಮೂಲಕವೇ. ಒಬ್ಬ ಸಹೋದರನು ತನ್ನ ಪ್ರೌಢ ಶಾಲಾ ವ್ಯಾಸಂಗವನ್ನು ಮುಗಿಸಿದ ಅನಂತರ, ರಾಜ್ಯ ಘೋಷಕರ ಹೆಚ್ಚಿನ ಆವಶ್ಯಕತೆಯಿರುವಂಥ ಸ್ಥಳಕ್ಕೆ ಸ್ಥಳಾಂತರಿಸಿದನು. ಅವನು, ಒಬ್ಬನೇ ಹಿರಿಯನಿರುವಂಥ ಒಂದು ಚಿಕ್ಕ ಸಭೆಯ ಭಾಗವಾದನು. ಅವನು ಪತ್ರದಲ್ಲಿ ತನ್ನ ಸ್ನೇಹಿತನಿಗೆ ಹೀಗೆ ಬರೆದನು: “ನಾನು ಇಲ್ಲಿ ನನ್ನ ಜೀವಿತವನ್ನು ಬಹಳವಾಗಿ ಆನಂದಿಸುತ್ತಿದ್ದೇನೆ. ಶುಶ್ರೂಷೆಯು ಎಷ್ಟು ಚೈತನ್ಯದಾಯಕವಾಗಿದೆ! ಪ್ರತಿ ಮನೆಯಲ್ಲಿ ನಾವು ಸುಮಾರು 20 ನಿಮಿಷಗಳ ವರೆಗೆ ಮಾತಾಡುತ್ತೇವೆ, ಏಕೆಂದರೆ ನಾವೇನನ್ನು ಹೇಳುತ್ತೇವೊ ಅದೆಲ್ಲವನ್ನು ಜನರು ಕೇಳಬಯಸುತ್ತಾರೆ.” ಅವನು ಇನ್ನೂ ಹೇಳಿದ್ದು: “ಪ್ರತಿಯೊಬ್ಬ ಯುವ ವ್ಯಕ್ತಿಯೂ ಇದನ್ನೇ ಮಾಡಬೇಕು ಮತ್ತು ನಾನು ಆನಂದಿಸುತ್ತಿರುವ ಅದೇ ಆನಂದವನ್ನು ಸವಿದುನೋಡಬೇಕೆಂದು ನಾನು ಹಾರೈಸುತ್ತೇನೆ. ಪೂರ್ಣಪ್ರಾಣದಿಂದ ನಾವು ಯೆಹೋವನನ್ನು ಸೇವಿಸುವುದಕ್ಕಿಂತ ಮಿಗಿಲಾದ ವಿಷಯವು ಇನ್ನೊಂದಿಲ್ಲ.”
6. ನಿಮ್ಮ ಸಭೆಯಲ್ಲಿರುವ ಯುವ ಜನರಲ್ಲಿ ನೀವು ಏನನ್ನು ಗಣ್ಯಮಾಡುತ್ತೀರಿ?
6 ಲೋಕದೊಳಗೆ ಜ್ಯೋತಿರ್ಮಂಡಲಗಳಂತೆ ಹೊಳೆಯುವ ಯುವ ಜನರಾದ ನಿಮ್ಮ ವಿಷಯದಲ್ಲಿ ನಾವೆಷ್ಟು ಹೆಮ್ಮೆಪಡುತ್ತೇವೆ! (1 ಥೆಸ. 2:20) ನಿಮ್ಮ ಪೂರ್ಣಹೃದಯ, ಪ್ರಾಣ, ಬುದ್ಧಿ ಮತ್ತು ಶಕ್ತಿಯಿಂದ ನೀವು ಯೆಹೋವನ ಸೇವೆಮಾಡುವಾಗ, ನಿಮಗೆ ‘ಈಗಿನ ಕಾಲದಲ್ಲಿ ನೂರರಷ್ಟು ಫಲ ಸಿಕ್ಕೇ ಸಿಕ್ಕುತ್ತದೆ; ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವದು.’—ಮಾರ್ಕ 10:29, 30; 12:30.