ಕಲಿಸಲು ದೃಶ್ಯ ಸಾಧನಗಳನ್ನು ಉಪಯೋಗಿಸಿರಿ
1. ಯೆಹೋವನು ತನ್ನ ಪುರಾತನ ಸೇವಕರಿಗೆ ಕಲಿಸಲು ದೃಶ್ಯ ಸಾಧನಗಳನ್ನು ಹೇಗೆ ಉಪಯೋಗಿಸಿದನು, ಮತ್ತು ಇದರ ಫಲಿತಾಂಶವೇನಾಗಿತ್ತು?
1 ಯೆಹೋವನು ತನ್ನ ಸೇವಕರಿಗೆ ಕೆಲವೊಮ್ಮೆ ದರ್ಶನಗಳು ಮತ್ತು ಕನಸುಗಳ ಮೂಲಕವಾಗಿ ಪ್ರಾಮುಖ್ಯ ವಿಚಾರಗಳನ್ನು ತಿಳಿಯಪಡಿಸಿದನು. ಯೆಹೋವನ ಸ್ವರ್ಗೀಯ ರಥದ ಕುರಿತು ಯೆಹೆಜ್ಕೇಲನು ನೋಡಿದ ದರ್ಶನದ ಬಗ್ಗೆ ಯೋಚಿಸಿರಿ. (ಯೆಹೆ. 1:1-28) ಅನುಕ್ರಮವಾಗಿ ಬರಲಿದ್ದ ಲೋಕ ಶಕ್ತಿಗಳನ್ನು ವರ್ಣಿಸಿದ ಪ್ರವಾದನಾತ್ಮಕ ಕನಸನ್ನು ಕಂಡ ದಾನಿಯೇಲನಿಗೆ ಹೇಗನಿಸಿರಬಹುದು ಎಂದು ಊಹಿಸಿರಿ. (ದಾನಿ. 7:1-15, 28) ಮತ್ತು “ಕರ್ತನ ದಿನದಲ್ಲಿ” ಸಂಭವಿಸಲಿದ್ದ ವಿಷಯಗಳ ಬಗ್ಗೆ ಅಪೊಸ್ತಲ ಯೋಹಾನನಿಗೆ “ಸಂಕೇತಗಳಲ್ಲಿ” ತಿಳಿಸಲಾದ ರೋಮಾಂಚಕ ಪ್ರಕಟನೆಯ ಕುರಿತೇನು? (ಪ್ರಕಟನೆ 1:1, 10, NW) ಯೆಹೋವನು ಅವರಿಗೆ ವರ್ಣರಂಜಿತವಾದ ರೀತಿಯಲ್ಲಿ ಮತ್ತು ಶಕ್ತಿಯುತವಾದ ಕ್ರಿಯೆಗಳ ಮೂಲಕ ಕಲಿಸಿದನು ಹಾಗೂ ಇವು ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದವು.
2. ಇತರರಿಗೆ ಬೈಬಲ್ ಸತ್ಯಗಳನ್ನು ಕಲಿಸಲು ನಾವು ಯಾವ ದೃಶ್ಯ ಸಾಧನಗಳನ್ನು ಉಪಯೋಗಿಸಸಾಧ್ಯವಿದೆ?
2 ಮರೆತುಹೋಗದಂಥ ರೀತಿಯಲ್ಲಿ ಬೈಬಲ್ ಸತ್ಯಗಳನ್ನು ಇತರರ ಮನಸ್ಸಿನಲ್ಲಿ ಅಚ್ಚೊತ್ತಬೇಕಾದರೆ, ನಾವು ಸಹ ತದ್ರೀತಿಯಲ್ಲಿ ಕಲಿಸಲು ನಮ್ಮ ವಿಡಿಯೋಗಳನ್ನು ಉಪಯೋಗಿಸಸಾಧ್ಯವಿದೆ. ನಮ್ಮ ವಿಡಿಯೋಗಳು ಬೇರೆ ಬೇರೆ ವಿಷಯಗಳನ್ನು ಆವರಿಸುತ್ತವೆ ಮತ್ತು ಬೈಬಲಿನಲ್ಲಿ, ಯೆಹೋವನ ಸಂಘಟನೆಯಲ್ಲಿ ಹಾಗೂ ನಮ್ಮ ಕ್ರೈಸ್ತ ಜೀವಿತವನ್ನು ಉತ್ತಮಗೊಳಿಸುವ ಮೂಲತತ್ತ್ವಗಳಲ್ಲಿ ದೃಢಭರವಸೆಯನ್ನು ಕಟ್ಟುತ್ತವೆ. ಕಲಿಸಲು ನಮ್ಮ ವಿಡಿಯೋಗಳನ್ನು ನಾವು ಉಪಯೋಗಿಸಸಾಧ್ಯವಿರುವ ಕೆಲವು ವಿಧಾನಗಳನ್ನು ಪರಿಗಣಿಸಿರಿ. ವಿಡಿಯೋಗಳನ್ನು ಹೇಗೆ ಉಪಯೋಗಿಸಬಹುದು ಎಂಬುದಕ್ಕೆ ಕೆಳಗೆ ಕೆಲವು ಉದಾಹರಣೆಗಳನ್ನು ಕೊಡಲಾಗಿವೆ.
3. ಒಬ್ಬ ಬೈಬಲ್ ವಿದ್ಯಾರ್ಥಿಯನ್ನು ಸಂಘಟನೆಯ ಕಡೆಗೆ ನಿರ್ದೇಶಿಸಲು ನೀವು ಯಾವುದನ್ನು ಉಪಯೋಗಿಸಸಾಧ್ಯವಿದೆ?
3 ಶುಶ್ರೂಷೆಯಲ್ಲಿ: ನೀವು ಒಬ್ಬ ಬೈಬಲ್ ವಿದ್ಯಾರ್ಥಿಗೆ ನಮ್ಮ ಲೋಕವ್ಯಾಪಕ ಕ್ರೈಸ್ತ ಸಹೋದರತ್ವದ ಕುರಿತು ತಿಳಿಸುತ್ತಿದ್ದೀರೊ? ಹಾಗಾದರೆ, ಅದನ್ನು ನಮ್ಮ ಸಹೋದರರ ಸಂಪೂರ್ಣ ಬಳಗ (ಇಂಗ್ಲಿಷ್) ಎಂಬ ವಿಡಿಯೋದ ಮೂಲಕ ಅವನಿಗೆ ತೋರಿಸಿರಿ. ನಿಮ್ಮ ಮುಂದಿನ ಅಧ್ಯಯನಕ್ಕೆ ಮುಂಚೆ ಅದನ್ನು ನೋಡುವಂತೆ ಅವನಿಗೆ ಕೊಡಿರಿ ಅಥವಾ ಮುಂದಿನ ಒಂದು ಅಧ್ಯಯನವನ್ನು ನಡೆಸುವಾಗ ಅದನ್ನು ಇಬ್ಬರು ಒಟ್ಟಿಗೆ ವೀಕ್ಷಿಸಿರಿ. ಬಳಿಕ, 2002ರ ಜೂನ್ ತಿಂಗಳ ನಮ್ಮ ರಾಜ್ಯದ ಸೇವೆಯಲ್ಲಿರುವ ಪುನರ್ವಿಮರ್ಶೆಯ ಪ್ರಶ್ನೆಗಳನ್ನು ಚರ್ಚಿಸಿರಿ.
4. ಒಬ್ಬ ಯುವ ಸಾಕ್ಷಿಯು ಶಾಲೆಯಲ್ಲಿ ಕಲಿಸಲು ಯಾವ ಸಾಧನಗಳನ್ನು ಉಪಯೋಗಿಸಸಾಧ್ಯವಿದೆ?
4 ಯುವ ಜನರೇ, ನಿಮ್ಮ ಕ್ಲಾಸ್ನಲ್ಲಿರುವವರಿಗೆ ಯೆಹೋವನ ಸಾಕ್ಷಿಗಳು ನಾಸಿ ಆಕ್ರಮಣದ ವಿರುದ್ಧ ದೃಢವಾಗಿ ನಿಲ್ಲುತ್ತಾರೆ ಅಥವಾ ಪರೀಕ್ಷೆಗಳ ಕೆಳಗೆ ನಂಬಿಗಸ್ತರು—ಸೋವಿಯೆಟ್ ಯೂನಿಯನ್ನಲ್ಲಿ ಯೆಹೋವನ ಸಾಕ್ಷಿಗಳು (ಇಂಗ್ಲಿಷ್) ಎಂಬ ವಿಡಿಯೋ ಸಾಕ್ಷ್ಯಚಿತ್ರವನ್ನು ತೋರಿಸಲು ಸಾಧ್ಯವಿದೆಯೊ ಎಂಬುದರ ಬಗ್ಗೆ ನಿಮ್ಮ ಶಿಕ್ಷಕರೊಂದಿಗೆ ನೀವು ಮಾತಾಡಬಹುದು. ನಿಮ್ಮ ಕ್ಲಾಸ್ನ ಚರ್ಚೆಗಾಗಿ ಒಂದು ಪ್ರಶ್ನಾವಳಿಯನ್ನು ತಯಾರಿಸುವಿರೆಂದು ಹೇಳಿರಿ. ಇದನ್ನು ನೀವು, 2001ರ ಜೂನ್ ಅಥವಾ 2003ರ ಫೆಬ್ರವರಿ ತಿಂಗಳ ನಮ್ಮ ರಾಜ್ಯದ ಸೇವೆಯಲ್ಲಿರುವ ಪ್ರಶ್ನೆಗಳನ್ನು ನಿಮ್ಮ ಕ್ಲಾಸ್ನ ಚರ್ಚೆಗಾಗಿ ಹೊಂದಿಸಿಕೊಳ್ಳುವ ಮೂಲಕ ತಯಾರಿಸಬಹುದು.
5. ಕುಟುಂಬ ಅಧ್ಯಯನದಲ್ಲಿ ಉಪಯೋಗಿಸಲು ಹೆತ್ತವರಿಗೆ ಯಾವುದು ಲಭ್ಯವಿದೆ?
5 ಕುಟುಂಬ ಮತ್ತು ಸ್ನೇಹಿತರೊಂದಿಗೆ: ಹೆತ್ತವರೇ, ನಿಮ್ಮ ಮಕ್ಕಳು ಯುವ ಜನರು ಪ್ರಶ್ನಿಸುವುದು—ನಾನು ನಿಜ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬಲ್ಲೆ? (ಇಂಗ್ಲಿಷ್) ಎಂಬ ವಿಡಿಯೋವನ್ನು ನೋಡಿ ಎಷ್ಟು ಸಮಯ ಕಳೆದಿದೆ? ನಿಮ್ಮ ಮುಂದಿನ ಕುಟುಂಬ ಅಧ್ಯಯನದ ಸಮಯದಲ್ಲಿ ಅದನ್ನು ಮತ್ತೊಮ್ಮೆ ನೋಡಬಾರದೇಕೆ? ಸ್ವಾರಸ್ಯವಾದ ಮತ್ತು ಬಿಚ್ಚುಮನಸ್ಸಿನ ಚರ್ಚೆಗೆ 2002ರ ಏಪ್ರಿಲ್ ತಿಂಗಳ ನಮ್ಮ ರಾಜ್ಯದ ಸೇವೆಯು ಪ್ರಶ್ನೆಗಳನ್ನು ಕೊಡುತ್ತದೆ.
6. ನೀವು ನಿಮ್ಮ ಸ್ನೇಹಿತರೊಂದಿಗೆ ಭಕ್ತಿವರ್ಧಿಸುವಂಥ ಸಮಯಕ್ಕಾಗಿ ಹೇಗೆ ಏರ್ಪಾಡುಮಾಡಬಲ್ಲಿರಿ?
6 ಸಭೆಯಲ್ಲಿರುವ ಸ್ನೇಹಿತರನ್ನು ನಿಮ್ಮ ಮನೆಗೆ ಆಮಂತ್ರಿಸಲು ನೀವು ಬಯಸಿದ್ದೀರೊ? ಹಾಗಿರುವಲ್ಲಿ, ಯೆಹೋವನ ಅಧಿಕಾರವನ್ನು ಗೌರವಿಸಿರಿ ಎಂಬ ವಿಡಿಯೋವನ್ನು ಅವರ ಜೊತೆಸೇರಿ ನೋಡುವುದರಿಂದ ನಿಮ್ಮ ಸಂಜೆಯು ಭಕ್ತಿವರ್ಧಿಸುವಂಥದ್ದಾಗುವುದು. ವಿಶೇಷವಾಗಿ, ವಿಡಿಯೋವನ್ನು ನೋಡಿದ ಅನಂತರ ನೀವು ಕಲಿತ ಪಾಠಗಳನ್ನು 2004ರ ಸೆಪ್ಟೆಂಬರ್ ತಿಂಗಳ ನಮ್ಮ ರಾಜ್ಯದ ಸೇವೆಯಲ್ಲಿ ಕೊಡಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸುತ್ತಾ ಪರಿಶೀಲಿಸುವುದಾದರೆ ಅದು ಭಕ್ತಿವರ್ಧಕವಾಗಿರುವುದು.
7. ನಮ್ಮ ವಿಡಿಯೋಗಳನ್ನು ಉಪಯೋಗಿಸಲಿಕ್ಕಾಗಿ ಯಾವ ಸಂಭಾವ್ಯ ಅವಕಾಶಗಳ ಬಗ್ಗೆ ನೀವು ಯೋಚಿಸಸಾಧ್ಯವಿದೆ?
7 ಇತರ ಅವಕಾಶಗಳು: ನಮ್ಮ 20 ವಿಭಿನ್ನ ವಿಡಿಯೋಗಳನ್ನು ಬೇರೆ ಯಾವ ವಿಧಗಳಲ್ಲಿ ನೀವು ಉಪಯೋಗಿಸಸಾಧ್ಯವಿದೆ? ಅವುಗಳಲ್ಲಿ ಒಂದು ಅಥವಾ ಎರಡು ವಿಡಿಯೋಗಳನ್ನು ನೀವು ಕ್ರಮವಾಗಿ ಭೇಟಿನೀಡುವಂಥ ವ್ಯಕ್ತಿಗೆ ತೋರಿಸುವುದು ಅವನು ಆಧ್ಯಾತ್ಮಿಕವಾಗಿ ಪ್ರಗತಿಯನ್ನು ಮಾಡುವಂತೆ ಸಹಾಯಮಾಡಬಹುದೊ? ಸ್ಥಳಿಕ ನರ್ಸಿಂಗ್ ಹೋಮ್ನಲ್ಲಿ ಅಥವಾ ವೃದ್ಧಾಶ್ರಮದಲ್ಲಿ ವಿಡಿಯೋಗಳನ್ನು ನೀವು ತೋರಿಸಸಾಧ್ಯವಿದೆಯೇ ಎಂದು ಅವರಲ್ಲಿ ಕೇಳಿಕೊಳ್ಳಬಲ್ಲಿರೊ? ಸಾಕ್ಷಿಗಳಲ್ಲದ ಸಂಬಂಧಿಕರು, ನೆರೆಯವರು ಮತ್ತು ಜೊತೆಕೆಲಸಗಾರರಲ್ಲಿ ಒಳ್ಳೇ ಅಭಿಪ್ರಾಯವನ್ನು ಮೂಡಿಸಲು ಈ ವಿಡಿಯೋಗಳು ಸಹಾಯಮಾಡಬಹುದೊ? ನಮ್ಮ ವಿಡಿಯೋಗಳು ಹೃದಯಸ್ಪರ್ಶಿಸುವಂಥದ್ದಾಗಿವೆ, ಬೋಧಪ್ರದವಾಗಿವೆ ಮತ್ತು ಪರಿಣಾಮಕಾರಿಯಾದ ದೃಶ್ಯ ಸಾಧನಗಳಾಗಿವೆ. ಆದುದರಿಂದ ಕಲಿಸಲು ಅವುಗಳನ್ನು ಉಪಯೋಗಿಸಿರಿ.