ಸಾಕ್ಷಿಯನ್ನು ಕೊಡುವ ವಿಡಿಯೋಗಳ ಪ್ರಭಾವ
1 “ನಮ್ಮ ಮಗನು ನಡೆದಾಡಲು ಕಲಿಯುವುದಕ್ಕೆ ಮುಂಚಿನಿಂದಲೂ ಈ ವಿಡಿಯೋವನ್ನು ನೋಡುತ್ತಿದ್ದಾನೆ. ಅವನು ಅದನ್ನು ಪುನಃ ಪುನಃ ನೋಡುತ್ತಿರುತ್ತಾನೆ. ನಮ್ಮ ಮಕ್ಕಳಲ್ಲಿ ಯೆಹೋವನಿಗಾಗಿ ಪ್ರೀತಿಯನ್ನು ತುಂಬಿಸುವ ಸಾಧನಗಳನ್ನು ಹೊಂದಿರುವುದು ಎಂತಹ ಅದ್ಭುತಕರ ಸಂಗತಿಯಾಗಿದೆ!” ಈ ಕ್ರೈಸ್ತ ಹೆತ್ತವಳು ಯಾವ ವಿಡಿಯೋವನ್ನು ವರ್ಣಿಸುತ್ತಿದ್ದಳು? ನೋಹನು ದೇವರೊಂದಿಗೆ ನಡೆದನು (ಇಂಗ್ಲಿಷ್) ಎಂಬ ಮುಖ್ಯ ವಿಷಯವಿರುವ ವಿಡಿಯೋವನ್ನೇ. ಸಾಕ್ಷ್ಯೇತರ ತಾಯಿಯೊಬ್ಬಳ ಮಗನು, ನೋಹ ವಿಡಿಯೋವನ್ನು ಬೇರೆ ಯಾರೋ ಒಬ್ಬರ ಮನೆಯಲ್ಲಿ ನೋಡಿದ್ದನು, ಮತ್ತು ಅವಳು ಬ್ರಾಂಚ್ ಆಫೀಸ್ಗೆ 4,000 ರೂಪಾಯಿಗಳ ದಾನವನ್ನು ಕಳುಹಿಸಿದಳು ಹಾಗೂ ನಮ್ಮ ಬಳಿ ಮಕ್ಕಳಿಗಾಗಿ ಇನ್ನಿತರ ವಿಡಿಯೋಗಳಿವೆಯೇ ಎಂದು ಕೇಳಿದಳು. ಯೆಹೋವನ ಸಂಸ್ಥೆಯಿಂದ ಉತ್ಪಾದಿಸಲ್ಪಡುವ ವಿಡಿಯೋಗಳು ಆಬಾಲವೃದ್ಧರ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತಿವೆ.
2 ಕುಟುಂಬದಲ್ಲಿ: ಒಂದು ಸಾಕ್ಷಿ ಕುಟುಂಬವು ಯೆಹೋವನ ಸಾಕ್ಷಿಗಳು ನಾಸಿ ಆಕ್ರಮಣದ ವಿರುದ್ಧ ದೃಢವಾಗಿ ನಿಲ್ಲುತ್ತಾರೆ (ಇಂಗ್ಲಿಷ್) ಎಂಬ ವಿಡಿಯೋವನ್ನು ನೋಡಿದ ನಂತರ, ತಾಯಿಯು ವಿವರಿಸಿದ್ದು: “ಸಾಧಾರಣ ಜನರು ಅಸಾಧಾರಣವಾದ ವಿಷಯಗಳನ್ನು ತಾಳಿಕೊಳ್ಳಲು ಯೆಹೋವನು ಹೇಗೆ ಅವರನ್ನು ಶಕ್ತಗೊಳಿಸಿದನು ಎಂಬುದನ್ನು ಯೋಚಿಸುತ್ತಲೇ ನನ್ನ ದಿನವೆಲ್ಲ ಕಳೆಯಿತು! ಅದರ ಕುರಿತು ಯೋಚಿಸುವುದು, ನನ್ನ ಸಮಸ್ಯೆಗಳು ಹೋಲಿಕೆಯಲ್ಲಿ ಎಷ್ಟು ಅಲ್ಪವಾಗಿವೆ ಎಂಬುದನ್ನು ನನಗೆ ಜ್ಞಾಪಕಹುಟ್ಟಿಸಿದೆ. ನಮ್ಮ ಮಕ್ಕಳೊಂದಿಗೆ ಈ ವಿಡಿಯೋವನ್ನು ವೀಕ್ಷಿಸುವುದು, ಯೆಹೋವನ ಮೇಲೆ ಆತುಕೊಳ್ಳುವುದರ ಜರೂರಿಯನ್ನು ಮನಗಾಣುವಂತೆ ಅವರಿಗೆ ಸಹಾಯಮಾಡಿದೆ. ತದನಂತರ, ಅದರ ಕುರಿತು ಅವರೊಂದಿಗೆ ಚರ್ಚಿಸುವ ಮೂಲಕ, ನಮ್ಮ ಹೆಣ್ಣುಮಕ್ಕಳು ಎದುರಿಸಬಹುದಾದ ಯಾವುದೇ ಒತ್ತಡವನ್ನು ಅಥವಾ ಹಿಂಸೆಯನ್ನು ನಿಭಾಯಿಸಲು ಹೆಚ್ಚು ಉತ್ತಮವಾಗಿ ಶಕ್ತರಾಗಿರುವಂತೆ ನಾವು ಅವರಿಗೆ ಸಹಾಯಮಾಡಿದೆವು.”
3 ಶಾಲೆಯಲ್ಲಿ: ಒಂದು ವರದಿಯ ಭಾಗದೋಪಾದಿ, ಒಬ್ಬ ಹದಿವಯಸ್ಕ ಸಾಕ್ಷಿಯು ದೃಢವಾಗಿ ನಿಲ್ಲುತ್ತಾರೆ ವಿಡಿಯೋವಿನ ಒಂದು ಭಾಗವನ್ನು ತನ್ನ ತರಗತಿಗೆ ತೋರಿಸಶಕ್ತನಾದನು. ಈ ಮುಂಚೆ, ತನಗೆ ಸಾಕ್ಷಿಗಳು ಇಷ್ಟವಿಲ್ಲ ಎಂದು ಅಧ್ಯಾಪಕಿಯು ಹೇಳಿದ್ದಳು. ವಿಡಿಯೋವನ್ನು ನೋಡಿದ ನಂತರ, “ಇದು ಯೆಹೋವನ ಸಾಕ್ಷಿಗಳ ಕಡೆಗಿನ ನನ್ನ ದೃಷ್ಟಿಕೋನವನ್ನೇ ಬದಲಾಯಿಸಿತು. ನಾನು ಮಾತು ಕೊಡುತ್ತೇನೆ, ಮುಂದಿನ ಬಾರಿ ಅವರು ನನ್ನ ಬಾಗಿಲ ಬಳಿ ಬಂದಾಗ, ಅವರಿಗೆ ಖಂಡಿತ ಕಿವಿಗೊಡುವೆ ಮತ್ತು ಅವರೊಂದಿಗೆ ಬೈಬಲ್ ಅಧ್ಯಯನ ಮಾಡಲು ಆರಂಭಿಸುವೆ!” ಎಂದು ಅವಳು ಹೇಳಿದಳು. ನಮ್ಮ ಕುರಿತಾದ ಅವಳ ಅಭಿಪ್ರಾಯವನ್ನು ಯಾವುದು ಬದಲಾಯಿಸಿತು? ಅದು ನಮ್ಮ “ನಿಜ ಪ್ರೀತಿ ಮತ್ತು ನಿಷ್ಠೆ”ಯೇ ಎಂದು ಅವಳು ಹೇಳಿದಳು.
4 ಶುಶ್ರೂಷೆಯಲ್ಲಿ: ಸಾಹಿತ್ಯವನ್ನು ಸ್ವೀಕರಿಸಲು ಹಿಂಜರಿದ, ಆದರೂ ನಮ್ಮ ಕುರಿತು ಮತ್ತು ನಮ್ಮ ನಂಬಿಕೆಗಳ ಕುರಿತು ಅನೇಕ ಪ್ರಶ್ನೆಗಳಿದ್ದ ಒಬ್ಬ ಸ್ತ್ರೀಯನ್ನು ನಮ್ಮ ಸಹೋದರಿಯೊಬ್ಬಳು ಭೇಟಿಯಾದಳು. ಆ ಸಹೋದರಿಯು, ಯೆಹೋವನ ಸಾಕ್ಷಿಗಳು—ಆ ಹೆಸರಿನ ಹಿಂದಿರುವ ಸಂಸ್ಥೆ (ಇಂಗ್ಲಿಷ್) ಎಂಬ ವಿಡಿಯೋದೊಂದಿಗೆ ಹಿಂದಿರುಗಿದಳು ಮತ್ತು ಆ ಸ್ತ್ರೀ ಹಾಗೂ ಅವಳ ಗಂಡನಿಗೆ ಅದನ್ನು ತೋರಿಸಿದಳು. ಇಬ್ಬರೂ ಬಲವಾಗಿ ಪ್ರಭಾವಿಸಲ್ಪಟ್ಟರು ಮತ್ತು ಬೈಬಲ್ ಅಧ್ಯಯನ ಮಾಡಲು ಒಪ್ಪಿಕೊಂಡರು. ಅವರಿಗೆ ಒಂದು ಒಳ್ಳೆಯ ಸಾಕ್ಷಿಯನ್ನು ಕೊಟ್ಟದ್ದರ ಫಲಿತಾಂಶವಾಗಿ, ಅವರು ತಮ್ಮ ಜೀವಿತಗಳನ್ನು ದೇವರ ಚಿತ್ತಕ್ಕನುಗುಣವಾಗಿ ಹೊಂದಿಸಿಕೊಳ್ಳಲಾರಂಭಿಸಿದರು.
5 ನಮ್ಮ ವಿಡಿಯೋಗಳು ಅತ್ಯುತ್ತಮವಾದ ಫಲಿತಾಂಶಗಳನ್ನು ತರುವಂತಾಗುವ ರೀತಿಯಲ್ಲಿ ನೀವು ಅವುಗಳನ್ನು ಉಪಯೋಗಿಸುತ್ತಿದ್ದೀರೋ?