ಮನೆಬಾಗಿಲಿನಲ್ಲಿ ಮತ್ತು ಟೆಲಿಫೋನಿನ ಮೂಲಕ ಪ್ರಗತಿಪರವಾದ ಬೈಬಲ್ ಅಧ್ಯಯನಗಳನ್ನು ನಡೆಸಿರಿ
1. ಬೈಬಲ್ ಅಧ್ಯಯನಗಳನ್ನು ನಡೆಸುವುದರ ಉದ್ದೇಶವೇನಾಗಿದೆ?
1 ಒಂದು ಬೈಬಲ್ ಅಧ್ಯಯನವನ್ನು ಆರಂಭಿಸುವುದು ಎಂತಹ ಆನಂದದಾಯಕ ಸಂಗತಿಯಾಗಿದೆ! ಹಾಗಿದ್ದರೂ, ಬೈಬಲನ್ನು ಅಧ್ಯಯನಮಾಡಲು ಆಸಕ್ತಿ ತೋರಿಸುವ ಒಬ್ಬ ವ್ಯಕ್ತಿಯನ್ನು ಕಂಡುಕೊಳ್ಳುವುದು ಕೇವಲ ಆರಂಭವಾಗಿದೆ. ಅಧ್ಯಯನದ ಮುಖ್ಯ ಉದ್ದೇಶವು ಯೇಸುವಿನ ಪ್ರಾಮಾಣಿಕ ಶಿಷ್ಯನಾಗಲು ಆ ವ್ಯಕ್ತಿಗೆ ಸಹಾಯಮಾಡುವುದೇ ಆಗಿದೆ. (ಮತ್ತಾ. 28:19, 20) ಆ ಗುರಿಯನ್ನು ಮುಟ್ಟಲು ನಮಗೆ ಯಾವುದು ಸಹಾಯಮಾಡಬಲ್ಲದು?
2. ಮನೆಬಾಗಿಲಿನಲ್ಲಿ ಮತ್ತು ಟೆಲಿಫೋನಿನ ಮೂಲಕ ನಡೆಸಲ್ಪಡುವ ಬೈಬಲ್ ಅಧ್ಯಯನಗಳು ಏನಾಗಿವೆ, ಮತ್ತು ಇವು ಏಕೆ ಪರಿಣಾಮಕಾರಿಯಾಗಿವೆ?
2 ಕಾರ್ಯನಿರತ ಜನರು: ಇಂದು ಜನರು ಹಿಂದೆಂದಿಗಿಂತಲೂ ಹೆಚ್ಚು ಕಾರ್ಯನಿರತರಾಗಿದ್ದಾರೆ. ಕೆಲವೊಂದು ಸ್ಥಳಗಳಲ್ಲಿ, ಹೆಚ್ಚಿನ ಜನರು ಆರಂಭದಲ್ಲಿ ಬೈಬಲ್ ಅಧ್ಯಯನಕ್ಕಾಗಿ ಒಂದು ಇಡೀ ತಾಸನ್ನು ವ್ಯಯಿಸಲು ಸಿದ್ಧರಿರಲಿಕ್ಕಿಲ್ಲ. ಅಂತಹ ಜನರಿಗೆ ಸಹಾಯಮಾಡಲು, ಮನೆಬಾಗಿಲಿನಲ್ಲಿ ಅಥವಾ ಟೆಲಿಫೋನಿನ ಮೂಲಕ ಬೈಬಲ್ ಅಧ್ಯಯನಗಳನ್ನು ಪ್ರಾರಂಭಿಸಿ ನಡೆಸುವಂತೆ ನಮ್ಮನ್ನು ಉತ್ತೇಜಿಸಲಾಗಿದೆ. ಆರಂಭದಲ್ಲಿ, ಈ ಅಧ್ಯಯನಗಳು ತಕ್ಕಮಟ್ಟಿಗೆ ಸಂಕ್ಷಿಪ್ತವಾಗಿರಬಹುದು. ಈ ರೀತಿಯ ಅಧ್ಯಯನಗಳಲ್ಲಿ ಬೈಬಲ್ ಬೋಧಿಸುತ್ತದೆ ಹಾಗೂ ತದ್ರೀತಿಯ ಪ್ರಕಾಶನಗಳಿಂದ ಒಂದು ಅಥವಾ ಎರಡು ಪ್ಯಾರಗ್ರಾಫ್ಗಳನ್ನು ಮತ್ತು ಅವುಗಳಲ್ಲಿರುವ ಕೆಲವು ಬೈಬಲ್ ವಚನಗಳನ್ನು ಪರಿಗಣಿಸುವುದು ಸಹ ಒಳಗೂಡಿರಬಹುದು. ಅನೇಕ ಪ್ರಚಾರಕರು ಈಗಾಗಲೇ ಇಂತಹ ಅಧ್ಯಯನಗಳನ್ನು ಮನೆಬಾಗಿಲಿನಲ್ಲಿ ಅಥವಾ ಟೆಲಿಫೋನಿನ ಮೂಲಕ ನಡೆಸುತ್ತಿರುವುದು ಎಷ್ಟೊಂದು ಶ್ಲಾಘನೀಯವಾಗಿದೆ!
3. ನಾವು ಮನೆಬಾಗಿಲಲ್ಲಿ ನಡೆಸುವ ಅಧ್ಯಯನದ ಅವಧಿಯನ್ನು ಹೆಚ್ಚಿಸಲು ಏಕೆ ಪ್ರಯತ್ನಿಸಬೇಕು?
3 ಹಾಗಾದರೆ, ಕೇವಲ ಮನೆಬಾಗಿಲಲ್ಲೇ ಬೈಬಲ್ ಅಧ್ಯಯನವನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ನಾವು ತೃಪ್ತರಾಗಿರಬೇಕೋ? ಇಲ್ಲ. ಒಂದು ಅಧ್ಯಯನವು ಆರಂಭಗೊಂಡಾಗ ನಾವು ಮನೆಬಾಗಿಲಲ್ಲೇ, ನಿಂತುಕೊಂಡು ಬಹಳ ಹೊತ್ತಿನವರೆಗೆ ಮಾತಾಡದಿರುವ ಮೂಲಕ ವಿವೇಚನೆಯನ್ನು ತೋರಿಸುತ್ತೇವಾದರೂ, 1990 ಜೂನ್ ತಿಂಗಳ ನಮ್ಮ ರಾಜ್ಯದ ಸೇವೆಯ ಪುಟ 4ರಲ್ಲಿ ಹೇಳಲ್ಪಟ್ಟಂತೆ ‘ಒಮ್ಮೆ ಅಧ್ಯಯನವು ಸ್ಥಾಪಿಸಲ್ಪಟ್ಟು ಮನೆಯವನು ಹೆಚ್ಚು ಆಸಕ್ತಿ ತೋರಿಸುವುದಾದರೆ ನಾವು ಆ ಅಧ್ಯಯನದ ಅವಧಿಯನ್ನು ಹೆಚ್ಚಿಸಬಹುದಾಗಿದೆ.’ ಇದು ಬಹಳ ಪ್ರಾಮುಖ್ಯವಾದದ್ದಾಗಿದೆ. ದೃಷ್ಟಾಂತಕ್ಕಾಗಿ, ಹಸಿವಿನಿಂದ ಬಳಲುತ್ತಿರುವ ಒಂದು ಮಗುವಿಗೆ ಮೊದಮೊದಲು ಅದರ ಹಸಿವು ನೀಗುವ ತನಕ ಸಣ್ಣ ಪ್ರಮಾಣದಲ್ಲಿ ಆಹಾರವು ಉಣಿಸಲಾಗುತ್ತದೆ. ಆದರೆ ಅಷ್ಟೇ ಪ್ರಮಾಣದ ಆಹಾರವನ್ನು ಅನೇಕ ತಿಂಗಳುಗಳವರೆಗೆ ಕೊಡುವುದಾದರೆ ಆ ಮಗುವು ಪೂರ್ಣ ಬಲವನ್ನು ಪಡೆದು, ಸಾಮಾನ್ಯವಾದ ಬೆಳವಣಿಗೆಯನ್ನು ಹೊಂದುತ್ತದೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ತದ್ರೀತಿಯಲ್ಲಿ, ವಿದ್ಯಾರ್ಥಿಯು ದೇವರ ಒಬ್ಬ ಪ್ರೌಢ ಸೇವಕನಾಗಿ ಬೆಳವಣಿಗೆ ಹೊಂದಬೇಕಾದರೆ ಅವನಿಗೆ ಹೆಚ್ಚು ಔಪಚಾರಿಕವಾದ ಮತ್ತು ಕ್ರಮವಾದ ಅಧ್ಯಯನದ ಅಗತ್ಯವಿದೆ.—ಇಬ್ರಿ. 5:13, 14.
4. ಒಂದು ಬೈಬಲ್ ಅಧ್ಯಯನವನ್ನು ಮನೆಯೊಳಗೆ ನಡೆಸುವುದರಿಂದ ಸಿಗುವ ಪ್ರಯೋಜನಗಳೇನು?
4 ಮನೆಯೊಳಗೆ ನಡೆಸಲ್ಪಡುವ ಬೈಬಲ್ ಅಧ್ಯಯನಗಳು: ಒಂದು ಅಧ್ಯಯನವನ್ನು ಒಂದು ಖಾಸಗಿ ಸ್ಥಳದಲ್ಲಿ, ಅಂದರೆ ಒಂದು ಮನೆಯಲ್ಲಿ ಅಥವಾ ಬೇರೊಂದು ಸೂಕ್ತವಾದ ಸ್ಥಳದಲ್ಲಿ ನಡೆಸುವುದು ಒಳ್ಳೇದು. ಇದು ವಿದ್ಯಾರ್ಥಿಗೆ ಕಲಿಯುವುದನ್ನು ಸುಲಭಗೊಳಿಸುವುದು ಮತ್ತು ದೇವರ ವಾಕ್ಯದ ಸರಿಯಾದ ಅರ್ಥವನ್ನು ಗ್ರಹಿಸಲು ಸಹಾಯಮಾಡುವುದು. (ಮತ್ತಾ. 13:23) ಇದಕ್ಕೆ ಕೂಡಿಸಿ, ಅಧ್ಯಯನ ಭಾಗಗಳನ್ನು ವಿದ್ಯಾರ್ಥಿಯ ಆವಶ್ಯಕತೆಗಳಿಗೆ ಸರಿಯಾಗಿ ಹೊಂದಿಸಿಕೊಳ್ಳುವಂತೆ ಬೋಧಕನನ್ನು ಹೆಚ್ಚು ಶಕ್ತನನ್ನಾಗಿ ಮಾಡುವುದು. ಅಷ್ಟುಮಾತ್ರವಲ್ಲದೆ, ಹೆಚ್ಚು ದೀರ್ಘ ಸಮಯದವರೆಗೆ ಅಧ್ಯಯನಮಾಡುವುದರಿಂದ ದೇವರ ವಾಕ್ಯವನ್ನು ಹೆಚ್ಚು ಪೂರ್ಣ ರೀತಿಯಲ್ಲಿ ಮತ್ತು ನಂಬಿಕೆಯನ್ನು ಬಲಗೊಳಿಸುವಂತಹ ರೀತಿಯಲ್ಲಿ ಪರಿಗಣಿಸಲು ಸಾಧ್ಯವಾಗುವುದು.—ರೋಮಾ. 10:17.
5. ಮನೆಬಾಗಿಲಲ್ಲಿ ನಡೆಸಲ್ಪಡುವ ಬೈಬಲ್ ಅಧ್ಯಯನವನ್ನು ಮನೆಯೊಳಗೆ ನಡೆಸಲ್ಪಡುವ ಬೈಬಲ್ ಅಧ್ಯಯನವನ್ನಾಗಿ ನಾವು ಹೇಗೆ ಪರಿವರ್ತಿಸಬಲ್ಲೆವು?
5 ಒಂದು ಮನೆಬಾಗಿಲಲ್ಲಿ ನಡೆಸಲ್ಪಡುವ ಬೈಬಲ್ ಅಧ್ಯಯನವನ್ನು ಮನೆಯೊಳಗೆ ನಡೆಸಲ್ಪಡುವ ಬೈಬಲ್ ಅಧ್ಯಯನವನ್ನಾಗಿ ಹೇಗೆ ಪರಿವರ್ತಿಸಬಲ್ಲಿರಿ? ಕೆಲವು ಸಂಕ್ಷಿಪ್ತ ಅಧ್ಯಯನಗಳ ನಂತರ, ದೀರ್ಘವಾದ ಆದರೆ ನಿರ್ದಿಷ್ಟ ಸಮಯದವರೆಗಿನ ಅಧ್ಯಯನಕ್ಕಾಗಿ ನೀವೇಕೆ ಅನುಮತಿಕೇಳಬಾರದು? ಇಲ್ಲವೆ “ಇವತ್ತು ನಾವಿಬ್ಬರೂ ಸೇರಿ ಈ ವಿಷಯವನ್ನು ಕುಳಿತುಕೊಂಡು ಚರ್ಚಿಸಲು ನಿಮಗೆ ಸಮಯವಿದೆಯೇ?” ಅಥವಾ “ಇಂದು ಈ ವಿಷಯವನ್ನು ಚರ್ಚಿಸಲು ನೀವು ಎಷ್ಟು ಸಮಯವನ್ನು ವ್ಯಯಿಸಲು ಬಯಸುವಿರಿ?” ಎಂದು ನೀವು ಪರೋಕ್ಷವಾಗಿ ಕೇಳಬಹುದು. ನಿಮ್ಮ ಈ ಪ್ರಯತ್ನಗಳು ಸಫಲವಾಗದಿದ್ದಲ್ಲಿ, ಮನೆಬಾಗಿಲಲ್ಲಿಯೇ ಸಂಕ್ಷಿಪ್ತ ಬೈಬಲ್ ಅಧ್ಯಯನವನ್ನು ನಡೆಸುವುದನ್ನು ಮುಂದುವರಿಸಿರಿ. ಮುಂದೊಮ್ಮೆ ತಕ್ಕದಾದ ಸಮಯದಲ್ಲಿ ಅಧ್ಯಯನವನ್ನು ಮನೆಯೊಳಗೆ ನಡೆಸಲು ಪುನಃ ಪ್ರಯತ್ನಿಸಿರಿ.
6. ನಮ್ಮ ಶುಶ್ರೂಷೆಯನ್ನು ಯಾವ ಉದ್ದೇಶದೊಂದಿಗೆ ಮುಂದುವರಿಸಿಕೊಂಡು ಹೋಗಬೇಕು, ಮತ್ತು ಈ ಲೇಖನದಲ್ಲಿರುವ ಸಲಹೆಗಳು ಆ ಉದ್ದೇಶವನ್ನು ಪೂರೈಸಲು ಹೇಗೆ ಸಹಾಯಮಾಡಬಲ್ಲವು?
6 ಅರ್ಹ ವ್ಯಕ್ತಿಗಳನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿರುವಾಗ, ಬೈಬಲ್ ಅಧ್ಯಯನಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ನಮ್ಮ ಮುಖ್ಯ ಉದ್ದೇಶವನ್ನು ನಾವೆಂದಿಗೂ ಮರೆಯದಿರೋಣ. ಪ್ರಾಮಾಣಿಕ ಹೃದಯದ ಜನರನ್ನು ಯೆಹೋವನ ಸಮರ್ಪಿತ ಮತ್ತು ಸ್ನಾತ ಸೇವಕರಾಗಲು ಸಹಾಯಮಾಡುವುದೇ ನಮ್ಮ ಮುಖ್ಯ ಗುರಿಯಾಗಿದೆ. ಈ ಸದುದ್ದೇಶದೊಂದಿಗೆ ನಾವು ನಮ್ಮ ಶುಶ್ರೂಷೆಯನ್ನು ಮುಂದುವರಿಸಿಕೊಂಡು ಹೋಗುವಾಗ ಯೆಹೋವನು ನಮ್ಮ ಪ್ರಯತ್ನಗಳನ್ನು ಸದಾ ಆಶೀರ್ವದಿಸಲಿ.—2 ತಿಮೊ. 4:5.