ಧೀರರಾದರೂ ಸಮಾಧಾನದಿಂದಿರುವವರು
1 ನಾವು ಸಾಕ್ಷಿನೀಡುವ ಜನರಲ್ಲಿ ಹೆಚ್ಚಿನವರು ಯಥಾರ್ಥ ಮನಸ್ಸಿನಿಂದ ತಮ್ಮ ನಂಬಿಕೆಗಳನ್ನು ವ್ಯಕ್ತಪಡಿಸುತ್ತಾರಾದರೂ ಇವು ಕೆಲವೊಮ್ಮೆ ಬೈಬಲ್ ಸತ್ಯಕ್ಕೆ ತದ್ವಿರುದ್ಧವಾಗಿರಬಲ್ಲವು. ನಾವು ಧೈರ್ಯದಿಂದ ಸಾರಬೇಕಾದರೂ ಅದೇ ಸಮಯದಲ್ಲಿ ಅನಾವಶ್ಯಕವಾಗಿ ಜನರ ಕೋಪವನ್ನು ಕೆರಳಿಸದೆ, ‘ಎಲ್ಲರ ಸಂಗಡ ಸಮಾಧಾನದಿಂದಿರಲು’ ಸಹ ಬಯಸುತ್ತೇವೆ. (ರೋಮಾ. 12:18; ಅ. ಕೃ. 4:29) ರಾಜ್ಯ ಸಂದೇಶವನ್ನು ತಿಳಿಸುವಾಗ ನಾವು ಹೇಗೆ ಧೈರ್ಯದಿಂದ ಮತ್ತು ಅದೇ ಸಮಯದಲ್ಲಿ ಸಮಾಧಾನದಿಂದ ಇರಬಲ್ಲೆವು?
2 ಪರಸ್ಪರರು ಸಮ್ಮತಿಸುವ ವಿಷಯಗಳಿಗಾಗಿ ಹುಡುಕಿರಿ: ಸಮಾಧಾನದಿಂದಿರುವ ವ್ಯಕ್ತಿಯು ವಾಗ್ವಾದ ಮಾಡುವುದರಿಂದ ದೂರವಿರುತ್ತಾನೆ. ಮನೆಯವರಿಗಿರುವ ಬಲವಾದ ನಂಬಿಕೆಗಳನ್ನು ಅನಾವಶ್ಯಕವಾಗಿ ತಪ್ಪೆಂದು ಹೇಳಿಬಿಡುವುದು ಅವರು ನಮ್ಮ ಸಂದೇಶಕ್ಕೆ ಕಿವಿಗೊಡುವಂತೆ ಮಾಡುವುದಿಲ್ಲ. ಅವರು ಒಂದು ತಪ್ಪು ಹೇಳಿಕೆಯನ್ನು ಮಾಡುವುದಾದರೂ, ಪ್ರಾಯಶಃ ನಾವು ಮತ್ತು ಅವರು ಸಮ್ಮತಿಸುವ ಒಂದು ಅಂಶದ ಬಗ್ಗೆ ನಾವು ಜಾಣ್ಮೆಯಿಂದ ಮಾತಾಡಲಾರಂಭಿಸಬಹುದು. ಪರಸ್ಪರರು ಸಮ್ಮತಿಸುವ ಒಂದು ವಿಷಯವನ್ನು ಒತ್ತಿಹೇಳುವ ಮೂಲಕ ಅವರಲ್ಲಿರುವ ಯಾವುದೇ ನಕಾರಾತ್ಮಕ ಭಾವನೆಗಳನ್ನು ತೆಗೆದುಹಾಕುತ್ತೇವೆ ಮತ್ತು ಅವರ ಹೃದಯವನ್ನು ಮುಟ್ಟಲು ನಾವು ಶಕ್ತರಾಗುತ್ತೇವೆ.
3 ಮನೆಯವನ ತಪ್ಪಾದ ಅಭಿಪ್ರಾಯವನ್ನು ನಾವು ತಿದ್ದದಿರುವಲ್ಲಿ ನಾವು ಸತ್ಯವನ್ನು ರಾಜಿಮಾಡಿಕೊಳ್ಳುತ್ತಿದ್ದೇವೆ ಅಥವಾ ಅದರ ತೀಕ್ಷ್ಣತೆಯನ್ನು ಕಡಿಮೆಗೊಳಿಸುತ್ತಿದ್ದೇವೆ ಎಂದಾಗುತ್ತದೊ? ಇಲ್ಲ. ಕ್ರೈಸ್ತ ಶುಶ್ರೂಷಕರಾಗಿ ನಮ್ಮ ನೇಮಕವು, ನಮಗೆದುರಾಗುವ ಪ್ರತಿಯೊಂದು ತಪ್ಪಾಭಿಪ್ರಾಯವನ್ನು ತಿದ್ದುವುದಲ್ಲ ಬದಲಾಗಿ ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದೇ ಆಗಿದೆ. (ಮತ್ತಾ. 24:14) ತಪ್ಪಾಭಿಪ್ರಾಯವನ್ನು ವ್ಯಕ್ತಪಡಿಸಲಾದಾಗ ಅತಿರೇಕದಿಂದ ಪ್ರತಿಕ್ರಿಯಿಸುವ ಬದಲಿಗೆ ಅದು, ಆ ವ್ಯಕ್ತಿಯ ಹೃದಯದಲ್ಲಿ ಏನಿದೆಯೆಂಬುದನ್ನು ತಿಳಿದುಕೊಳ್ಳುವ ಒಂದು ಸಂದರ್ಭವಾಗಿದೆ ಎಂದು ನಾವು ಪರಿಗಣಿಸಬಹುದು.—ಜ್ಞಾನೋ. 16:23.
4 ಮಾನವನ್ನು ಸಲ್ಲಿಸಿರಿ: ಕೆಲವು ಸನ್ನಿವೇಶಗಳಲ್ಲಿ ತಪ್ಪಾದ ಬೋಧನೆಗಳನ್ನು ಸುಳ್ಳೆಂದು ಸ್ಥಾಪಿಸಲು ನಮಗೆ ಧೈರ್ಯದ ಅಗತ್ಯವಿದೆ. ಆದರೆ ನಾವು ಸಮಾಧಾನದಿಂದಿರುವ ಜನರಾಗಿರುವುದರಿಂದ, ತಪ್ಪು ವಿಷಯಗಳನ್ನು ನಂಬುವ ಮತ್ತು ತಪ್ಪನ್ನು ಬೋಧಿಸುವ ಜನರನ್ನು ನಾವು ಅಪಹಾಸ್ಯ ಮಾಡುವುದಿಲ್ಲ ಯಾ ಅವರ ಬಗ್ಗೆ ಮಾತಾಡುವಾಗ ತುಚ್ಛಪದಗಳನ್ನು ಬಳಸುವುದಿಲ್ಲ. ನಾವೇ ಶ್ರೇಷ್ಠರೆಂಬ ಮನೋಭಾವವು ನಮಗಿರುವಲ್ಲಿ ಜನರು ನಮ್ಮಿಂದ ದೂರಹೋಗುವರು, ಆದರೆ ನಮ್ಮ ನಮ್ರ ಹಾಗೂ ದಯಾಪರ ನಡವಳಿಕೆಯು ಸತ್ಯವನ್ನು ಪ್ರೀತಿಸುವವರ ಮನಸ್ಸನ್ನು ತೆರೆಯುವುದು. ನಮ್ಮ ಕೇಳುಗರಿಗೆ ಮತ್ತು ಅವರ ನಂಬಿಕೆಗಳಿಗೆ ಗೌರವ ತೋರಿಸುವುದರ ಮೂಲಕ ಅವರಿಗೆ ಮಾನವನ್ನು ಸಲ್ಲಿಸಿದಂತಾಗುತ್ತದೆ ಮತ್ತು ಇದು ಅವರು ನಮ್ಮ ಸಂದೇಶವನ್ನು ಸ್ವೀಕರಿಸುವುದನ್ನು ಹೆಚ್ಚು ಸುಲಭವನ್ನಾಗಿ ಮಾಡುತ್ತದೆ.
5 ಅಪೊಸ್ತಲ ಪೌಲನು ತಾನು ಸಾರುತ್ತಿದ್ದ ಜನರ ನಂಬಿಕೆಗಳನ್ನು ಮನಸ್ಸಿನಲ್ಲಿಟ್ಟು, ಅವರ ಹೃದಯವನ್ನು ಸ್ಪರ್ಶಿಸುವಂಥ ರೀತಿಯಲ್ಲಿ ಸುವಾರ್ತೆಯನ್ನು ನೀಡಲು ಪ್ರಯತ್ನಿಸಿದನು. (ಅ. ಕೃ. 17:22-31) ‘ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಲಿಕ್ಕಾಗಿ’ ಅವನು ಇಚ್ಛಾಪೂರ್ವಕವಾಗಿ, “ಯಾರಾರಿಗೆ ಎಂಥೆಂಥವನಾಗಬೇಕೋ ಅಂಥಂಥವನಾ”ದನು. (1 ಕೊರಿಂ. 9:22) ಇದನ್ನು ನಾವು ಸಹ, ಸುವಾರ್ತೆಯನ್ನು ಧೈರ್ಯದಿಂದ ಸಾರುವಾಗ ಸಾಮಾಧಾನದಿಂದಿರುವ ಮೂಲಕ ಮಾಡಬಲ್ಲೆವು.