“ಎಲ್ಲರೊಂದಿಗೆ ಶಾಂತಿಶೀಲರಾಗಿರಿ”
1. ಮನೆಯವರು ಕೋಪಗೊಂಡರೆ ನಾವು ಯಾವ ಬೈಬಲ್ ಸಲಹೆಯನ್ನು ಅನ್ವಯಿಸಬೇಕು?
1 ಯೆಹೋವನ ಜನರಾದ ನಾವು ಶಾಂತಿಪ್ರಿಯರು ಮತ್ತು ನಾವು ಸಾರುವ ಸುವಾರ್ತೆ ಶಾಂತಿಯ ಕುರಿತು. (ಯೆಶಾ. 52:7) ಆದರೆ ನಾವು ಮನೆಯಿಂದ ಮನೆಗೆ ಸುವಾರ್ತೆ ಸಾರಲು ಹೋದರೆ ಜನರು ಕೋಪಗೊಳ್ಳುತ್ತಾರೆ. ಇಂಥ ಸನ್ನಿವೇಶಗಳಲ್ಲಿ ಶಾಂತಿಶೀಲರಾಗಿರಲು ನಮಗೆ ಯಾವುದು ಸಹಾಯ ನೀಡುತ್ತೆ?—ರೋಮ. 12:18.
2. ಸನ್ನಿವೇಶ ಅರ್ಥಮಾಡಿಕೊಳ್ಳುವುದು ಪ್ರಾಮುಖ್ಯವೇಕೆ?
2 ಸನ್ನಿವೇಶ ಅರ್ಥಮಾಡಿಕೊಳ್ಳಿ: ಮನೆಯವರು ಕ್ರೈಸ್ತ ವಿರೋಧಿಗಳಾದರೆ ಖಂಡಿತ ನಮ್ಮ ಮೇಲೆ ಕೋಪಗೊಳ್ಳುತ್ತಾರೆ. ಇನ್ನು ಕೆಲವರು ಬೇರೆಯೇ ಕಾರಣಕ್ಕೆ ರೇಗಬಹುದು. ನಾವು ಅನುಚಿತ ಸಮಯದಲ್ಲಿ ಭೇಟಿಮಾಡಿರಬಹುದು. ಅಥವಾ ಮನೆಯವರ ಸಿಟ್ಟಿಗೆ ವೈಯಕ್ತಿಕ ಸಮಸ್ಯೆ ಕಾರಣವಿರಬಹುದು. ಇಲ್ಲವೇ ಅವರಿಗೆ ನಮ್ಮ ಮೇಲೆ ತಪ್ಪಭಿಪ್ರಾಯ ಇರಬಹುದು. (2 ಕೊರಿಂ. 4:4) ನಾವು ಸನ್ನಿವೇಶವನ್ನು ಅರ್ಥಮಾಡಿಕೊಳ್ಳೋದಾದರೆ ಮನೆಯವರು ಹೇಗೇ ಪ್ರತಿಕ್ರಿಯಿಸಲಿ ಶಾಂತರಾಗಿರುತ್ತೇವೆ.—ಜ್ಞಾನೋ. 19:11.
3. ಮನೆಯವರಿಗೆ ಯಾವೆಲ್ಲ ವಿಧದಲ್ಲಿ ಗೌರವ ತೋರಿಸಬಹುದು?
3 ಗೌರವ ಕೊಡಿ: ಅನೇಕರು ತಮ್ಮ ಧರ್ಮ, ನಂಬಿಕೆಗಳಲ್ಲಿ ಬೇರೂರಿರುತ್ತಾರೆ. (2 ಕೊರಿಂ. 10:4) ಕೇಳ್ಬೇಕಾ ಬೇಡ್ವಾ ಎನ್ನುವುದನ್ನು ಆರಿಸಿಕೊಳ್ಳುವ ಹಕ್ಕು ಅವರಿಗಿದೆ. ಆದಕಾರಣ ನಾವು ಮನೆಯವರ ನಂಬಿಕೆಯನ್ನು ಕಡೆಗಣಿಸಬಾರದು. ನಾವೇ ಶ್ರೇಷ್ಠರು ಅನ್ನೋ ಮನೋಭಾವವನ್ನು ಸಹ ತೋರಿಸಬಾರದು. ಮನೆಯವರು ಹೊರಟು ಹೋಗಿ ಅಂತ ಹೇಳೋದಾದರೆ ಅವರ ಮಾತಿಗೆ ಗೌರವ ಕೊಟ್ಟು ಅಲ್ಲಿಂದ ಹೋಗಿಬಿಡಬೇಕು.
4. ಸೌಜನ್ಯದಿಂದ ನಡೆದುಕೊಳ್ಳುವುದು ಹೇಗೆ?
4 ಸೌಜನ್ಯದಿಂದ ಮಾತಾಡಿ: ಮನೆಯವರು ಬೈಯುವುದಾದರೂ ವಿನಯ-ಸೌಜನ್ಯದಿಂದ ಪ್ರತಿಕ್ರಿಯಿಸಿ. (ಕೊಲೊ. 4:6; 1 ಪೇತ್ರ 2:23) ವಾದ ಮಾಡುವ ಬದಲು ನಿಮಗೂ, ಮನೆಯವರಿಗೂ ಒಂದೇ ರೀತಿ ಅಭಿಪ್ರಾಯ ಇರುವ ವಿಷಯಗಳನ್ನು ಚರ್ಚೆ ಮಾಡಿ. ಮನೆಯವರ ಆಕ್ಷೇಪಕ್ಕೆ ಕಾರಣ ಕೇಳಿ. ಅವರ ಸಿಟ್ಟು ನೆತ್ತಿಗೇರುವಂತೆ ತೋರಿದರೆ ಸಂಭಾಷಣೆಯನ್ನು ಅಲ್ಲಿಗೆ ನಿಲ್ಲಿಸಿ ಬಂದುಬಿಡಿ.—ಜ್ಞಾನೋ. 9:7; 17:14.
5. ಸೇವೆಯಲ್ಲಿ ಶಾಂತಿಶೀಲತೆ ಕಾಪಾಡಿಕೊಳ್ಳುವುದರ ಪ್ರಯೋಜನಗಳೇನು?
5 ನಾವು ಶಾಂತಿಶೀಲರಾಗಿರುವಲ್ಲಿ ಮನೆಯವರ ಮೇಲೆ ಒಳ್ಳೇ ಪ್ರಭಾವ ಬೀರುತ್ತೆ. ಮುಂದಿನ ಸಲ ಹೋದಾಗ ಆ ಮನೆಯವರು ಚೆನ್ನಾಗಿ ಕೇಳುವ ಸಾಧ್ಯತೆಯಿದೆ. (ರೋಮ. 12:20, 21) ಒಂದುವೇಳೆ ಅವರಿಗೆ ನಮ್ಮ ಮೇಲಿನ ಹಗೆ ಇನ್ನೂ ಇದ್ದರೂ ಒಂದಿಲ್ಲ ಒಂದು ದಿನ ಅದು ಬದಲಾಗುತ್ತೆ. (ಗಲಾ. 1:13, 14) ಮನೆಯವರು ಸುವಾರ್ತೆ ಕೇಳಲಿ ಬಿಡಲಿ ನಾವಂತೂ ಯೆಹೋವ ದೇವರನ್ನು ಘನಪಡಿಸಿದ್ದೇವೆ. ನಾವು ಆತ್ಮಸಂಯಮ ಮತ್ತು ಶಾಂತಿಶೀಲತೆ ಕಾಪಾಡಿಕೊಳ್ಳುವಾಗ ಸುವಾರ್ತೆಯ ಮೆರಗು ಹೆಚ್ಚಿಸುತ್ತೇವೆ.—2 ಕೊರಿಂ. 6:3.