ಪ್ರಶ್ನಾ ಚೌಕ
◼ ನಾವು ವಿತರಿಸುವ ಸಾಹಿತ್ಯಗಳಲ್ಲಿ ನಮ್ಮ ಖಾಸಗಿ ಇ-ಮೇಲ್ ವಿಳಾಸವನ್ನು ಸೇರಿಸುವುದು ಸೂಕ್ತವಾಗಿರುವುದೋ?
ಕೆಲವು ಪ್ರಚಾರಕರು ತಾವು ಇತರರಿಗೆ ನೀಡುವಂಥ ಪತ್ರಿಕೆ ಅಥವಾ ಟ್ರ್ಯಾಕ್ಟ್‌ಗಳಲ್ಲಿ ತಮ್ಮ ಖಾಸಗಿ ಇ-ಮೇಲ್ ವಿಳಾಸವನ್ನು ಮುದ್ರಿಸಿದ್ದಾರೆ ಇಲ್ಲವೆ ಅದರ ಮುದ್ರಿತ ಲೇಬಲ್ ಅನ್ನು ಅಂಟಿಸಿದ್ದಾರೆ. ಇದರಿಂದ ಸಾಹಿತ್ಯಗಳನ್ನು ಪಡೆದುಕೊಳ್ಳುವವರು ಹೆಚ್ಚಿನ ಮಾಹಿತಿಗಾಗಿ ಆ ಪ್ರಚಾರಕರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಆಸಕ್ತ ಜನರಿಗೆ ನೆರವು ನೀಡಲಿಕ್ಕಾಗಿ ಮಾಡುವ ಇಂಥ ಪ್ರಯತ್ನಗಳು ಸದುದ್ದೇಶವುಳ್ಳವುಗಳೇ. ಆದಾಗ್ಯೂ, ಈಗಾಗಲೇ ನಮ್ಮ ಅಧಿಕೃತ ವೆಬ್‌ಸೈಟ್ ವಿಳಾಸವನ್ನು ಪತ್ರಿಕೆ ಮತ್ತು ಟ್ರ್ಯಾಕ್ಟ್‌ಗಳ ಹಿಂಬದಿಯಲ್ಲಿ ಕೊಡಲಾಗಿದೆ. ಆದುದರಿಂದ, ನಮ್ಮ ಖಾಸಗಿ ಇ-ಮೇಲ್ ವಿಳಾಸವನ್ನು ಸಾಹಿತ್ಯಗಳಲ್ಲಿ ಸೇರಿಸದಿರುವುದು ಉತ್ತಮ.
ಟೆರಿಟೊರಿಯಲ್ಲಿ ಭೇಟಿಯಾಗುವ ಜನರಿಗೆ, ವಿಶೇಷವಾಗಿ ಪುನರ್ಭೇಟಿಯಲ್ಲಿ ಸಂಧಿಸುವವರಿಗೆ ಒಂದು ಪ್ರತ್ಯೇಕ ಹಾಳೆಯಲ್ಲಿ ಸಂಪರ್ಕ ವಿಳಾಸವನ್ನು ಒದಗಿಸಬೇಕೋ ಬಾರದೋ ಎಂಬುದು ಪ್ರಚಾರಕರ ಸ್ವಂತ ತೀರ್ಮಾನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತರೇ ನಮ್ಮನ್ನು ಸಂಪರ್ಕಿಸಲಿ ಎಂದು ಬಿಟ್ಟುಬಿಡದೆ ಅವರನ್ನು ಪುನಃ ಭೇಟಿಯಾಗಲಿಕ್ಕಾಗಿ ನಾವೇ ಮೊದಲ ಹೆಜ್ಜೆ ತೆಗೆದುಕೊಳ್ಳಬೇಕು. ಏಕೆಂದರೆ, ಒಬ್ಬ ವ್ಯಕ್ತಿಯೊಂದಿಗೆ ನಾವು ಮುಖಾಮುಖಿ ಮಾತಾಡುವಾಗ ಅವರ ಕಡೆಗಿನ ನಮ್ಮ ನಿಜವಾದ ಕಾಳಜಿಯನ್ನು ಉತ್ತಮ ರೀತಿಯಲ್ಲಿ ತೋರಿಸಸಾಧ್ಯವಿದೆ.