ಶುಶ್ರೂಷೆಯಲ್ಲಿ ನಿಮ್ಮ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿರಿ
1 ನಮ್ಮ ಶುಶ್ರೂಷೆಯಲ್ಲಿ ಬಹಳಷ್ಟನ್ನು ಪೂರೈಸಲಿಕ್ಕಿದೆ ಆದರೆ ಉಳಿದಿರುವ ಸಮಯ ಕೊಂಚ. (ಯೋಹಾ. 4:35; 1 ಕೊರಿಂ. 7:29) ಸರಿಯಾದ ಏರ್ಪಾಡು ಮತ್ತು ಮುಂದಾಗಿ ಯೋಜಿಸುವ ಮೂಲಕ ನಾವು ಶುಶ್ರೂಷೆಗಾಗಿ ಬದಿಗಿರಿಸಿದ ಸಮಯವನ್ನು ಪರಿಣಾಮಕಾರಿಯಾಗಿ ಉಪಯೋಗಿಸಬಹುದು.
2 ಸಿದ್ಧರಾಗಿರಿ: ಕ್ಷೇತ್ರ ಸೇವೆಗಾಗಿರುವ ಕೂಟಕ್ಕೆ ಹೊರಡುವ ಮೊದಲು ಅಗತ್ಯವಿರುವ ಸಾಹಿತ್ಯ ನಿಮ್ಮ ಬಳಿ ಇದೆಯೊ ಮತ್ತು ನಿಮ್ಮ ನಿರೂಪಣೆಯು ಚೆನ್ನಾಗಿ ಮನಸ್ಸಿನಲ್ಲಿದೆಯೊ ಎಂಬುದನ್ನು ಖಚಿತಪಡಿಸಿರಿ. ಕೂಟವು ಪ್ರಾರ್ಥನೆಯೊಂದಿಗೆ ಮುಗಿದೊಡನೆ ನೇರವಾಗಿ ಕ್ಷೇತ್ರಕ್ಕೆ ಹೋಗಿ. ಇದರಿಂದಾಗಿ ಕ್ಷೇತ್ರ ಸೇವೆಗಾಗಿರುವ ಸಮಯದಲ್ಲಿ ನಿಮಗೂ ನಿಮ್ಮೊಂದಿಗೆ ಸೇವೆಮಾಡುವವರಿಗೂ ಸಾಧ್ಯವಾದಷ್ಟು ಹೆಚ್ಚನ್ನು ಪೂರೈಸಲಿಕ್ಕಾಗುವುದು.
3 ಕ್ಷೇತ್ರ ಸೇವೆಗಾಗಿರುವ ಕೂಟವನ್ನು ನಡೆಸಲು ನೀವು ನೇಮಿಸಲ್ಪಟ್ಟಲ್ಲಿ ಅದನ್ನು ಸರಿಯಾದ ಸಮಯಕ್ಕೆ ಆರಂಭಿಸಿರಿ. ಕೂಟವನ್ನು ಸಂಕ್ಷಿಪ್ತವಾಗಿಡಿರಿ; ಅದು 10ರಿಂದ 15 ನಿಮಿಷಗಳನ್ನು ಮೀರದಿರಲಿ. ಗುಂಪನ್ನು ಕಳುಹಿಸುವ ಮೊದಲು ಪ್ರತಿಯೊಬ್ಬರೂ ಎಲ್ಲಿ ಮತ್ತು ಯಾರೊಂದಿಗೆ ಸೇವೆಮಾಡಲಿದ್ದಾರೆಂದು ಸರಿಯಾಗಿ ತಿಳಿಸಿರಿ.
4 ಶುಶ್ರೂಷೆಯಲ್ಲಿ ತೊಡಗಿರುವಾಗ: ಕ್ಷೇತ್ರ ಸೇವೆಗಾಗಿರುವ ಕೂಟವು ಮುಗಿದ ಕೂಡಲೆ ಟೆರಿಟೊರಿಗೆ ಹೊರಡಿರಿ; ಅನಾವಶ್ಯಕವಾಗಿ ಕಾಲಹರಣ ಮಾಡಬೇಡಿ. ನೀವು ಸೇವೆಯನ್ನು ಮುಗಿಸಿ ಬೇಗ ಹೊರಡಲು ಯೋಚಿಸುವಲ್ಲಿ, ಅದರ ಬಗ್ಗೆ ಮುಂಚಿತವಾಗಿ ತಿಳಿಸಿರಿ. ಆಗ ನಿಮ್ಮ ಸಂಗಡ ಇರುವ ಪ್ರಚಾರಕನು ಕೂಡ ಬೇಗನೆ ಹೊರಡಬೇಕಾಗಿಲ್ಲ, ಬದಲಾಗಿ ಇನ್ನೊಬ್ಬ ಪ್ರಚಾರಕನೊಂದಿಗೆ ಸೇರಿ ಸೇವೆಯನ್ನು ಮುಂದುವರಿಸಬಹುದು. ನೀವು ಸೇವೆಮಾಡುತ್ತಿರುವಾಗ ದೀರ್ಘ ಚರ್ಚೆಯಲ್ಲಿ ಒಳಗೂಡಿರುವಲ್ಲಿ ನಿಮಗಾಗಿ ಕಾಯುವ ಇತರರಿಗಾಗಿ ಪರಿಗಣನೆ ತೋರಿಸಿ. ವಾದಿಸುತ್ತಿರುವ ವ್ಯಕ್ತಿಯಿಂದ ಜಾಣ್ಮೆಯಿಂದ ಬಿಡಿಸಿಕೊಳ್ಳಿ ಅಥವಾ ಅವನಿಗೆ ಆಸಕ್ತಿಯಿರುವಲ್ಲಿ ಪುನರ್ಭೇಟಿಗಾಗಿ ಏರ್ಪಡಿಸಿರಿ.—ಮತ್ತಾ. 10:11.
5 ಒಂದು ಸ್ಥಳದ ಎಲ್ಲಾ ಪುನರ್ಭೇಟಿಗಳನ್ನು ಮಾಡಿಮುಗಿಸಿದ ನಂತರವೇ ಇನ್ನೊಂದು ಸ್ಥಳಕ್ಕೆ ಹೋಗಿರಿ. ಈ ಮೂಲಕ ಅನಾವಶ್ಯಕ ಪ್ರಯಾಣವನ್ನು ತಡೆಯಸಾಧ್ಯವಿದೆ. ಕೆಲವರು ಮನೆಯಲ್ಲಿದ್ದಾರೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಫೋನ್ ಮಾಡಬಹುದು. (ಜ್ಞಾನೋ. 21:5) ಒಂದು ಭೇಟಿಯು ತುಂಬಾ ಸಮಯ ತೆಗೆದುಕೊಳ್ಳಬಹುದೆಂದು ನಿಮಗನಿಸುವಲ್ಲಿ ಅದು ಮುಗಿಯುವ ತನಕ ನಿಮ್ಮ ಗುಂಪಿನ ಇತರರು ಹತ್ತಿರದ ಟೆರಿಟೊರಿಯಲ್ಲಿ ಸಾರುವಂತೆ ಅಥವಾ ಮತ್ತೊಂದು ಪುನರ್ಭೇಟಿ ಮಾಡುವಂತೆ ಏರ್ಪಡಿಸಬಹುದು.
6 ನಾವೆಲ್ಲರೂ ಮಹಾ ಆಧ್ಯಾತ್ಮಿಕ ಕೊಯ್ಲಿನ ಸಮಯದಲ್ಲಿ ಜೀವಿಸುತ್ತಿದ್ದೇವೆ. (ಮತ್ತಾ. 9:37, 38) ಈ ಕೆಲಸವು ಬೇಗನೆ ಕೊನೆಗೊಳ್ಳಲಿದೆ. ಆದ್ದರಿಂದ ಶುಶ್ರೂಷೆಯಲ್ಲಿ ತೊಡಗಿರುವಾಗ ಸಮಯವನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದೇ ನಮ್ಮ ಅಪೇಕ್ಷೆಯಾಗಿರಬೇಕು.