ಜ್ಞಾಪಕಾಚರಣೆ ಆಮಂತ್ರಣ ಪತ್ರಗಳ ಭೂವ್ಯಾಪಕ ವಿತರಣೆ!
1. ಜ್ಞಾಪಕಾಚರಣೆಗೆ ಮುಂಚೆ ಭೂವ್ಯಾಪಕವಾಗಿ ಯಾವ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ?
1 “ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ.” (ಲೂಕ 22:19) ಯೇಸುವಿನ ಈ ಆಜ್ಞೆಗೆ ಯೆಹೋವನ ಆರಾಧಕರು ವಿಧೇಯರಾಗುತ್ತಾರೆ. ಆದ್ದರಿಂದ 2010ರ ಮಾರ್ಚ್ 30ರಂದು ಅವರು ಆಸಕ್ತ ವ್ಯಕ್ತಿಗಳೊಂದಿಗೆ ಯೇಸುವಿನ ಮರಣದ ಜ್ಞಾಪಕಾಚರಣೆಗೆಂದು ಕೂಡಿಬರಲಿದ್ದಾರೆ. ಈ ನಿಟ್ಟಿನಲ್ಲಿ ಮಾರ್ಚ್ 13-30ರ ವರೆಗೆ ವಿಶೇಷ ಆಮಂತ್ರಣ ಪತ್ರಗಳನ್ನು ಭೂವ್ಯಾಪಕವಾಗಿ ವಿತರಿಸಲಾಗುವುದು.
2. ಆಮಂತ್ರಣ ಪತ್ರವನ್ನು ನಾವು ಹೇಗೆ ನೀಡಬಹುದು?
2 ವಿತರಿಸುವ ವಿಧ: ಜಾಣ್ಮೆ ಮತ್ತು ವಿವೇಚನೆಯಿಂದ ಆಮಂತ್ರಣ ಪತ್ರಗಳನ್ನು ವಿತರಿಸಿರಿ. ಒಬ್ಬ ವ್ಯಕ್ತಿಗೆ ಯೇಸುವಿನ ಕುರಿತು ಹೆಚ್ಚನ್ನು ಕಲಿಯಲು ಮನಸ್ಸಿದೆಯೆಂದು ನಿಮಗೆ ಗೊತ್ತಾಗುವಲ್ಲಿ ಆಮಂತ್ರಣ ಪತ್ರದ ಮುಖಪುಟ ಚಿತ್ರವನ್ನು ಅವನು ನೋಡುವಂಥ ರೀತಿಯಲ್ಲಿ ಅದನ್ನು ಕೊಡಿ. ಅನಂತರ ಹೀಗೆ ಹೇಳಿ: “ಮಾರ್ಚ್ 30ರ ಸಂಜೆ ಯೇಸುವಿನ ಮರಣದ ಜ್ಞಾಪಕಾಚರಣೆಗೆಂದು ಲಕ್ಷಾಂತರ ಮಂದಿ ಭೂಸುತ್ತಲೂ ಕೂಡಿಬರುವರು. ಆ ವಿಶೇಷ ಸಂದರ್ಭದಂದು ನೀವು ಕುಟುಂಬ ಸಮೇತ ಬರುವಂತೆ ಈ ಆಮಂತ್ರಣ ಪತ್ರ ಕೊಡಲು ಬಂದಿದ್ದೇನೆ. ಸ್ಥಳಿಕವಾಗಿ ಈ ಆಚರಣೆಯನ್ನು ನಡೆಸಲಾಗುವ ಸಮಯ ಮತ್ತು ಸ್ಥಳ ಇಲ್ಲಿದೆ.” ಸನ್ನಿವೇಶ ಸೂಕ್ತವಾಗಿರುವಲ್ಲಿ ಲೂಕ 22:19ರಲ್ಲಿರುವ ಆಜ್ಞೆಯನ್ನು ನೀವು ಬೈಬಲಿನಿಂದ ಓದಿ ಹೇಳಬಹುದು. ಜ್ಞಾಪಕಾಚರಣೆ ನಡೆಯುವ ಸಮಯ, ಸ್ಥಳವನ್ನೂ ತಿಳಿಸಿರಿ. ಆದರೆ ನೆನಪಿಡಿ, ಟೆರಿಟೊರಿ ಆವರಿಸಲು ಸೀಮಿತ ಸಮಯವಿರುವುದರಿಂದ ನಿಮ್ಮ ಮಾತು ಚುಟುಕಾಗಿರಲಿ.
3. ನಾವು ಯಾರನ್ನೆಲ್ಲಾ ಆಮಂತ್ರಿಸಬಹುದು?
3 ಸೂಕ್ತವಿರುವಾಗಲೆಲ್ಲ ಆಮಂತ್ರಣ ಪತ್ರದೊಂದಿಗೆ ಪತ್ರಿಕೆಗಳನ್ನೂ ನೀಡಿರಿ. ಪುನರ್ಭೇಟಿಗಳಿಗೆ, ಬೈಬಲ್ ವಿದ್ಯಾರ್ಥಿಗಳಿಗೆ, ಸಹೋದ್ಯೋಗಿಗಳಿಗೆ, ಸಹಪಾಠಿಗಳಿಗೆ, ಸಂಬಂಧಿಕರಿಗೆ, ನೆರೆಯವರಿಗೆ, ಪರಿಚಯಸ್ಥರಿಗೆ ಆಮಂತ್ರಣ ಪತ್ರವನ್ನು ತಪ್ಪದೆ ಕೊಡಿ.
4. ವಿಮೋಚನಾ ಯಜ್ಞದ ಮೂಲಕ ಯೆಹೋವನು ತೋರಿಸಿದ ಪ್ರೀತಿಗೆ ನಮಗಿರುವ ಕೃತಜ್ಞತೆಯು ಏನು ಮಾಡಲು ಪ್ರಚೋದಿಸುವುದು?
4 ಪೂರ್ಣವಾಗಿ ಭಾಗವಹಿಸಲು ಸಿದ್ಧರಾಗಿ: ನಮ್ಮ ಸೇವಾ ಚಟುವಟಿಕೆಯನ್ನು ಹೆಚ್ಚಿಸಲು ಜ್ಞಾಪಕಾಚರಣೆಯ ಸಮಯಾವಧಿಯು ಒಂದು ಅತ್ಯುತ್ತಮ ಅವಕಾಶ. ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ನೀವು ಸಮಯವನ್ನು ಹೊಂದಿಸಿಕೊಳ್ಳಬಲ್ಲಿರೋ? ನಿಮ್ಮ ಮಕ್ಕಳು ಅಥವಾ ಬೈಬಲ್ ವಿದ್ಯಾರ್ಥಿಗಳು ಆಧ್ಯಾತ್ಮಿಕವಾಗಿ ಒಳ್ಳೇ ಪ್ರಗತಿಮಾಡುತ್ತಿದ್ದಾರೋ? ಹಾಗಾದರೆ ಅವರು ಈ ವಿಶೇಷ ಅಭಿಯಾನದಲ್ಲಿ ಭಾಗವಹಿಸುವಂತೆ ಅಸ್ನಾತ ಪ್ರಚಾರಕರಾಗಲು ಅರ್ಹರಾಗಿದ್ದಾರೋ ಎಂದು ತಿಳಿಯಲು ಹಿರಿಯರನ್ನು ವಿಚಾರಿಸಿ. ವಿಮೋಚನಾ ಯಜ್ಞದ ಮೂಲಕ ಯೆಹೋವನು ತೋರಿಸಿದ ಪ್ರೀತಿಗೆ ನಮಗಿರುವ ಕೃತಜ್ಞತೆಯು ಜ್ಞಾಪಕಾಚರಣೆಗೆ ಹಾಜರಾಗುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಅಲ್ಲದೆ, ನಮ್ಮನ್ನು ಜೊತೆಗೂಡುವಂತೆ ಸಾಧ್ಯವಾದಷ್ಟು ಹೆಚ್ಚು ಮಂದಿಯನ್ನು ಆಮಂತ್ರಿಸುವಂತೆಯೂ ಉತ್ತೇಜಿಸುತ್ತದೆ.—ಯೋಹಾ. 3:16.