‘ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಳ್ಳಿ’
1 ಒತ್ತಡಗಳು ಮತ್ತು ವ್ಯಾಕುಲತೆಗಳು ತುಂಬಿಕೊಂಡಿರುವ ಈ ಲೋಕದಲ್ಲಿ ನಮಗೆ ನಿಜ ಉಪಶಮನ ಸಿಕ್ಕಿದೆ. ಹೇಗೆ? ಯೇಸು, ತನ್ನ ನೊಗದಡಿ ವಿಶ್ರಾಂತಿ ಪಡೆದುಕೊಳ್ಳುವಂತೆ ಕೊಟ್ಟ ಹಾರ್ದಿಕ ಆಮಂತ್ರಣಕ್ಕೆ ಪ್ರತಿಕ್ರಿಯಿಸುವ ಮೂಲಕವೇ. (ಮತ್ತಾ. 11:29, 30) ಶಿಷ್ಯತ್ವದ ನೊಗವನ್ನು ತೆಗೆದುಕೊಳ್ಳುವುದರಲ್ಲಿ, ರಾಜ್ಯದ ಸುವಾರ್ತೆ ಸಾರುವುದು ಸೇರಿದೆ. ಇದು ಪ್ರಯಾಸಕರವಾದರೂ ಚೈತನ್ಯಕರವಾದ ಕೆಲಸವಾಗಿದೆ. ಈ ಕೆಲಸದ ಮೂಲಕ ಇತರರೂ ನಮ್ಮೊಂದಿಗೆ ಆ ನೊಗದಡಿ ಚೈತನ್ಯವನ್ನು ಕಂಡುಕೊಳ್ಳುವಂತೆ ಸಹಾಯ ಮಾಡುತ್ತೇವೆ.—ಮತ್ತಾ. 24:14; 28:19, 20.
2 ಶುಶ್ರೂಷೆಯಿಂದ ಚೈತನ್ಯ: ಯೇಸು ತನ್ನ ಹಿಂಬಾಲಕರಿಗೆ, ಅವರು ಈಗಾಗಲೇ ಹೊತ್ತುಕೊಂಡಿದ್ದ ಹೊರೆಯೊಂದಿಗೆ ತನ್ನ ಹೊರೆಯನ್ನೂ ಹೊತ್ತುಕೊಳ್ಳುವಂತೆ ಹೇಳಲಿಲ್ಲ. ಬದಲಿಗೆ ಅವರ ಭಾರವಾದ ಹೊರೆಗಳನ್ನು ಕೊಟ್ಟು ತನ್ನ ಹಗುರವಾದ ಹೊರೆಯನ್ನು ತೆಗೆದುಕೊಳ್ಳುವಂತೆ ಆಮಂತ್ರಿಸಿದನು. ಈ ಆಮಂತ್ರಣವನ್ನು ಸ್ವೀಕರಿಸಿರುವ ನಾವು, ಪ್ರಪಂಚದ ಚಿಂತೆ ಮತ್ತು ನಿರೀಕ್ಷಾಹೀನತೆ ಎಂಬ ಭಾರವಾದ ಹೊರೆಹೊತ್ತಿರುವುದಿಲ್ಲ; ಅಸ್ಥಿರವಾದ ಐಶ್ವರ್ಯಕ್ಕಾಗಿಯೂ ಕಷ್ಟಪಡುವುದಿಲ್ಲ. (ಲೂಕ 21:34; 1 ತಿಮೊ. 6:17) ನಾವು ಕಾರ್ಯಮಗ್ನರಾಗಿದ್ದು ಅನುದಿನದ ಆವಶ್ಯಕತೆಗಳಿಗಾಗಿ ದುಡಿಯುತ್ತೇವಾದರೂ ದೇವರ ಆರಾಧನೆಗೆ ಪ್ರಥಮ ಸ್ಥಾನ ಕೊಡುತ್ತೇವೆ. (ಮತ್ತಾ. 6:33) ಉತ್ತಮ ಇಲ್ಲವೇ ಹೆಚ್ಚು ಪ್ರಾಮುಖ್ಯ ವಿಷಯಗಳೆಡೆಗೆ ಯೋಗ್ಯ ಮನೋಭಾವ ನಮಗಿರುವಲ್ಲಿ ಶುಶ್ರೂಷೆ ನಮಗೊಂದು ಭಾರವಾದ ಹೊರಯಲ್ಲ ಬದಲಾಗಿ ಯಾವಾಗಲೂ ಚೈತನ್ಯದ ಮೂಲ ಆಗಿರುವುದು.—ಫಿಲಿ. 1:10.
3 ನಮಗಿಷ್ಟವಾದ ವಿಷಯಗಳ ಕುರಿತು ನಾವು ಖುಷಿಯಿಂದ ಮಾತಾಡುತ್ತೇವೆ. (ಲೂಕ 6:45) ಎಲ್ಲ ಕ್ರೈಸ್ತರಿಗೆ ಯೆಹೋವ ದೇವರು ಮತ್ತು ಆತನು ವಾಗ್ದಾನಿಸಿರುವ ರಾಜ್ಯದ ಆಶೀರ್ವಾದಗಳೆಂದರೆ ಬಲು ಇಷ್ಟ. ಆದ್ದರಿಂದ ಶುಶ್ರೂಷೆಯಲ್ಲಿ ಭಾಗವಹಿಸುವಾಗ ದೈನಂದಿನ ಚಿಂತೆಗಳನ್ನು ಮರೆತುಬಿಟ್ಟು “ಶುಭದ ಸುವಾರ್ತೆಯನ್ನು” ತಿಳಿಸುವುದು ಎಷ್ಟೊಂದು ಚೈತನ್ಯದಾಯಕ! (ರೋಮಾ. 10:15) ನಾವು ಒಂದು ಕೆಲಸವನ್ನು ಹೆಚ್ಚೆಚ್ಚು ಮಾಡಿದಂತೆ ಅದರಲ್ಲಿ ಹೆಚ್ಚು ಸಮರ್ಥರಾಗುತ್ತೇವೆ ಮತ್ತು ಹೆಚ್ಚು ಸಂತೋಷವನ್ನು ಅನುಭವಿಸುತ್ತೇವೆ. ಆದ್ದರಿಂದ ನಮಗೆ ಸಾಧ್ಯವಿರುವಲ್ಲಿ ಶುಶ್ರೂಷೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವುದು ಇನ್ನಷ್ಟು ಚೈತನ್ಯ ಕೊಡುತ್ತದೆ. ಅಷ್ಟೇ ಅಲ್ಲ ಜನರು ತೋರಿಸುವ ಪ್ರತಿಕ್ರಿಯೆ ನಮ್ಮನ್ನೆಷ್ಟು ಉತ್ತೇಜಿಸುತ್ತದೆ! (ಅ. ಕೃ. 15:3) ಆದರೆ ಉದಾಸೀನತೆ ಇಲ್ಲವೇ ವಿರೋಧವನ್ನು ನಾವು ಎದುರಿಸುವಲ್ಲಿ ಆಗೇನು? ನಮ್ಮ ಪ್ರಯತ್ನಗಳು ಯೆಹೋವನನ್ನು ಸಂತೋಷಪಡಿಸುತ್ತವೆ ಮತ್ತು ಆತನ ಆಶೀರ್ವಾದದಿಂದ ಕಟ್ಟಕಡೆಗೆ ಸಕಾರಾತ್ಮಕ ಫಲಿತಾಂಶಗಳು ಸಿಗುವವು ಎಂಬದನ್ನು ಮನಸ್ಸಿನಲ್ಲಿಡೋಣ. ಆಗ ಶುಶ್ರೂಷೆಯಿಂದ ನಮಗೆ ಆಧ್ಯಾತ್ಮಿಕ ಚೈತನ್ಯ ದೊರಕುವುದು.—ಅ. ಕೃ. 5:41; 1 ಕೊರಿಂ. 3:9.
4 ಯೇಸುವಿನ ಆಮಂತ್ರಣವನ್ನು ಸ್ವೀಕರಿಸುವ ಮೂಲಕ ಆತನ ಜೊತೆಯಲ್ಲಿ ಯೆಹೋವನ ಸಾಕ್ಷಿಗಳಾಗಿ ಸೇವೆಮಾಡುವ ಸದವಕಾಶ ನಮಗಿದೆ. (ಯೆಶಾ. 43:10; ಪ್ರಕ. 1:5) ಅದಕ್ಕಿಂತ ಹೆಚ್ಚು ಚೈತನ್ಯ ನೀಡುವ ವಿಷಯ ಬೇರೊಂದಿಲ್ಲ!