ಪ್ರಶ್ನಾ ಚೌಕ
◼ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಮತ್ತು ಸೇವಾಕೂಟಗಳಲ್ಲಿ ಪ್ರತಿಯೊಂದು ಭಾಗ ಮುಗಿದಾಗ ಸಭಿಕರು ಚಪ್ಪಾಳೆ ತಟ್ಟುವುದು ಉಚಿತವೊ?
ಸೃಷ್ಟಿಕರ್ತನಾದ ಯೆಹೋವನು ಭೂಮಿಯನ್ನು ನಿರ್ಮಿಸಿದಾಗ, “ಮುಂಜಾನೆ ನಕ್ಷತ್ರಗಳು ಒಟ್ಟಾಗಿ ಉತ್ಸಾಹಧ್ವನಿಯೆತ್ತುತ್ತಾ ದೇವಕುಮಾರರೆಲ್ಲರೂ ಆನಂದಘೋಷಮಾಡುತ್ತಾ” ಇದ್ದರು. (ಯೋಬ 38:6) ಈ ದೇವದೂತರು ಯೆಹೋವನ ಮಹತ್ತಾದ ಸೃಷ್ಟಿಕಾರ್ಯಕ್ಕಾಗಿ ಆತನನ್ನು ಸ್ತುತಿಸಬಯಸಿದರು. ಏಕೆಂದರೆ, ಈ ಸೃಷ್ಟಿಕಾರ್ಯವು ಆತನ ವಿವೇಕ, ಮಹೋಪಕಾರ ಮತ್ತು ಶಕ್ತಿಯ ನವೀನ ರುಜುವಾತಾಗಿತ್ತು.
ನಮ್ಮ ಸಹೋದರರು ಮಾಡುವ ಪ್ರಯತ್ನಗಳಿಗಾಗಿ ಮತ್ತು ಅವರು ಕೊಡುವ ಭಾಷಣ ಅಥವಾ ಪ್ರತ್ಯಕ್ಷಾಭಿನಯಗಳಿಗಾಗಿ ಹೃತ್ಪೂರ್ವಕ ಅಭಿನಂದನೆಯನ್ನು ನೀಡುವುದು ಸೂಕ್ತ. ಉದಾಹರಣೆಗಾಗಿ, ಸಮ್ಮೇಳನ ಮತ್ತು ಅಧಿವೇಶನದಂತಹ ವಿಶೇಷ ಕೂಟಗಳಲ್ಲಿ ಭಾಷಣ ಮತ್ತು ಪ್ರತ್ಯಕ್ಷಾಭಿನಯಗಳ ಬಳಿಕ ನಾವು ಸಾಮಾನ್ಯವಾಗಿ ಚಪ್ಪಾಳೆ ತಟ್ಟುತ್ತೇವೆ. ಏಕೆಂದರೆ ಆ ಭಾಗಗಳ ತಯಾರಿಗಾಗಿ ಹೆಚ್ಚು ಪ್ರಯತ್ನ ಮಾಡಲಾಗಿರುತ್ತದೆ ಮತ್ತು ಸಮಯವನ್ನೂ ವ್ಯಯಿಸಲಾಗಿರುತ್ತದೆ. ನಮ್ಮ ಚಪ್ಪಾಳೆಯು ಭಾಷಣಕರ್ತನ ಪರಿಶ್ರಮಕ್ಕೆ ಮಾತ್ರವಲ್ಲದೆ, ಯೆಹೋವನು ತನ್ನ ವಾಕ್ಯ ಮತ್ತು ಸಂಘಟನೆಯ ಮೂಲಕ ಒದಗಿಸುವ ಶಿಕ್ಷಣಕ್ಕೂ ಗಣ್ಯತೆಯನ್ನು ವ್ಯಕ್ತಪಡಿಸುತ್ತದೆ.—ಯೆಶಾ. 48:17; ಮತ್ತಾ. 24:45-47.
ಹಾಗಾದರೆ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಮತ್ತು ಸೇವಾಕೂಟದಲ್ಲಿ ಚಪ್ಪಾಳೆ ತಟ್ಟುವುದರ ಕುರಿತೇನು? ಅದು ಕೃತಜ್ಞತೆಯ ಸ್ವಾಭಾವಿಕ ಅಭಿವ್ಯಕ್ತಿಯಾಗಿ ಹೊರಚಿಮ್ಮುವಲ್ಲಿ, ಅಂದರೆ ಒಬ್ಬ ವಿದ್ಯಾರ್ಥಿಯು ಮೊದಲ ಬಾರಿ ಭಾಷಣ ನೀಡುವಂತಹ ಸಂದರ್ಭಗಳಲ್ಲಿ ಚಪ್ಪಾಳೆ ತಟ್ಟುವುದರಲ್ಲಿ ತಪ್ಪೇನಿಲ್ಲ. ಆದರೆ, ಇದು ವಾಡಿಕೆಯಾಗಿ ಅರ್ಥವೇ ಇಲ್ಲದಂತಾಗಸಾಧ್ಯವಿದೆ. ಆದಕಾರಣ, ಸಾಮಾನ್ಯವಾಗಿ ಪ್ರತಿಯೊಂದು ಭಾಗದ ತರುವಾಯ ನಾವು ಚಪ್ಪಾಳೆ ತಟ್ಟುವುದಿಲ್ಲ.
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಮತ್ತು ಸೇವಾಕೂಟದ ಹೆಚ್ಚಿನ ಭಾಗಗಳಿಗೆ ನಾವು ಚಪ್ಪಾಳೆ ತಟ್ಟುವುದಿಲ್ಲವಾದರೂ, ಭಾಷಣ ನೀಡುವವರ ಪ್ರಯತ್ನಗಳಿಗಾಗಿ ಮತ್ತು ಪಡಕೊಳ್ಳುವ ಶಿಕ್ಷಣಕ್ಕಾಗಿ ನಾವೆಲ್ಲರೂ ಬೇರೆ ವಿಧಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಸಾಧ್ಯವಿದೆ. ಹೇಗೆಂದರೆ, ಎಚ್ಚರವಾಗಿದ್ದು, ಭಾಷಣ ನೀಡುವವರಿಗೆ ಒತ್ತಾಗಿ ಗಮನ ಕೊಡುವ ಮೂಲಕವೇ. ಅಲ್ಲದೆ, ಕೂಟ ಮುಗಿದ ಬಳಿಕ ಅವರ ಶ್ರಮಕ್ಕಾಗಿ ವೈಯಕ್ತಿಕವಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಸಾಧ್ಯವಿದೆ.—ಎಫೆ. 1:15, 16.