ಹೊಸ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮ
ಸತ್ಯಾರಾಧನೆಯನ್ನು ತೀಕ್ಷ್ಣವಾಗಿ ವಿರೋಧಿಸುವವರಿಗೆ ಎದುರಾಗಿ ದೃಢವಾಗಿ ನಿಲ್ಲಲು ನಮಗೆ ಹೇಗೆ ಸಾಧ್ಯ? ಭಕ್ತಿಹೀನ ಲೋಕಕ್ಕೆ ಹಿಂತಿರುಗುವಂತೆ ಸದಾ ಪ್ರಯತ್ನಿಸುತ್ತಿರುವ ಸೈತಾನನ ಶೋಧನೆಗಳನ್ನು ನಾವು ಹೇಗೆ ಸೋಲಿಸಬಲ್ಲೆವು? 2009ರ ಸೇವಾ ವರ್ಷದ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮವು ಈ ಪ್ರಮುಖ ಪ್ರಶ್ನೆಗಳನ್ನು ಉತ್ತರಿಸುವುದು. “ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸುತ್ತಾ ಇರು” ಎಂಬದು ಅದರ ಮುಖ್ಯವಿಷಯವಾಗಿದೆ. (ರೋಮಾ. 12:21, NW) ಆ ಕಾರ್ಯಕ್ರಮದಲ್ಲಿ ಏನೆಲ್ಲಾ ಕೂಡಿದೆಯೆಂಬದನ್ನು ಗಮನಿಸಿರಿ.
ಜಿಲ್ಲಾ ಮೇಲ್ವಿಚಾರಕರು ಈ ಕೆಳಗಿನ ಭಾಷಣಗಳನ್ನು ಕೊಡುವರು: “ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸಲು ಬಲಗೊಂಡಿರುವುದು,” “ಅತಿರೇಕ ಆತ್ಮವಿಶ್ವಾಸದ ವಿಷಯದಲ್ಲಿ ಎಚ್ಚರಿಕೆಯಿಂದಿರ್ರಿ!” “ಕೆಟ್ಟತನಗಳೆಲ್ಲ ಶೀಘ್ರವೇ ಅಂತ್ಯಗೊಳ್ಳುವವು!,” “ಲೋಕವನ್ನು ಜಯಿಸಲು ನಮ್ಮ ನಂಬಿಕೆಯನ್ನು ಬಲಗೊಳಿಸುವುದು.” ಸರ್ಕಿಟ್ ಮೇಲ್ವಿಚಾರಕರು, ರೋಮಾಪುರ 13:11-13ರ ಮೇಲಾಧಾರಿತ “ಈಗಿನ ಕಾಲವು ಎಚ್ಚರವಾಗಿರತಕ್ಕ ಕಾಲ,” ಮತ್ತು ಜ್ಞಾನೋಕ್ತಿ 24:10ರ ಮೇಲಾಧಾರಿತ “ಇಕ್ಕಟ್ಟಿನ ದಿನದಲ್ಲಿ ನಿರಾಶೆಯಿಂದ ಬಳಲಿಹೋಗಬೇಡಿ” ಎಂಬ ಮುಖ್ಯ ವಿಷಯಗಳ ಮೇಲೆ ಭಾಷಣವನ್ನೀಯುವರು. ಸರ್ಕಿಟ್ ಮೇಲ್ವಿಚಾರಕರು ನೀಡುವ “ಸರ್ಕಿಟಿನ ಅಗತ್ಯಗಳ ಕಡೆಗೆ ಗಮನ ಕೊಡುವುದು” ಎಂಬ ಭಾಗಕ್ಕಾಗಿಯೂ ನಾವು ಮುನ್ನೋಡುವೆವು. “ಪಯನೀಯರರಾಗುವ ಮೂಲಕ—‘ಈ ಶುಶ್ರೂಷೆಯಲ್ಲಿ’ ನೀವು ಭಾಗವಹಿಸಬಲ್ಲಿರೋ?” ಎಂಬದು ಇನ್ನೊಂದು ಅತಿ ಉತ್ತೇಜನೀಯ ಭಾಷಣವಾಗಿರಲಿದೆ. ಎರಡು ಭಾಷಣಮಾಲೆಗಳಲ್ಲಿ ಮೊದಲನೆಯದ್ದು “ಸೈತಾನನ ತಂತ್ರೋಪಾಯಗಳನ್ನು ಎದುರಿಸಿ ದೃಢರಾಗಿ ನಿಲ್ಲಿರಿ” ಎಂದಾಗಿದೆ. ಅದು ತಂತ್ರಜ್ಞಾನ, ಮನೋರಂಜನೆ ಮತ್ತು ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಸೈತಾನನ ಕುಟಿಲ ತಂತ್ರೋಪಾಯಗಳನ್ನು ಗುರುತಿಸಲು ಮತ್ತು ತಿರಸ್ಕರಿಸಲು ನಮಗೆ ನೆರವಾಗುವುದು. “ಈ ಕೆಟ್ಟ ದಿನಗಳಲ್ಲಿ ಸೈತಾನನನ್ನು ಎದುರಿಸಲು ಬಲವನ್ನು ಪಡೆದುಕೊಳ್ಳಿರಿ” ಎಂಬ ಭಾಷಣಮಾಲೆಯು ಎಫೆಸ 6:10-18ರಲ್ಲಿರುವ ಪ್ರೇರಿತ ಬುದ್ಧಿವಾದವನ್ನು ಹೆಚ್ಚು ಪೂರ್ಣವಾಗಿ ಹೇಗೆ ಅನ್ವಯಿಸುವುದು ಎಂಬುದನ್ನು ತೋರಿಸಿಕೊಡುವುದು.
ಕೆಟ್ಟತನವನ್ನು ಅದರ ಮೂಲದಿಂದಲೇ ಸೋಲಿಸಿಬಿಡುವುದರ ಮತ್ತು ರಾಜ್ಯ ಸಂದೇಶವನ್ನು ಸಾರುವುದರ ನಡುವೆ ಒಂದು ನೇರವಾದ ಸಂಬಂಧವಿದೆ. (ಪ್ರಕ. 12:17) ಆದುದರಿಂದಲೇ ಸೈತಾನನು ಯೆಹೋವನ ಸಾಕ್ಷಿಗಳನ್ನು ಎಡೆಬಿಡದೆ ಮತ್ತು ತೀವ್ರವಾಗಿ ಸತಾಯಿಸುತ್ತಿದ್ದಾನೆ! (ಯೆಶಾ. 43:10, 12) ಆದರೆ ಪಿಶಾಚನು ತನ್ನ ಪ್ರಯತ್ನದಲ್ಲಿ ಶೋಚನೀಯವಾಗಿ ಸೋತುಹೋಗುವನು ನಿಶ್ಚಯ. ಯಾಕೆಂದರೆ ನಾವು ‘ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸುತ್ತಾ’ ಇರುವ ದೃಢಸಂಕಲ್ಪವನ್ನು ಮಾಡಿರುತ್ತೇವೆ. ಈ ಸರ್ಕಿಟ್ ಸಮ್ಮೇಳನದ ಎಲ್ಲಾ ನಾಲ್ಕು ಸೆಷನ್ಗಳಿಂದ ಪೂರ್ಣ ಪ್ರಯೋಜನ ಹೊಂದಲು ಈಗಲೇ ನಿಶ್ಚಿತ ಏರ್ಪಾಡುಗಳನ್ನು ಮಾಡಿರಿ.