‘ಎಲ್ಲವನ್ನು ಸುವಾರ್ತೆಗೋಸ್ಕರವೇ ಮಾಡಿರಿ’
1. ಒಬ್ಬ ರಾಜ್ಯ ಘೋಷಕನು ಇತರರಿಗಾಗಿ ಏನನ್ನು ಮಾಡಲು ಸಿದ್ಧನಿರುತ್ತಾನೆ, ಮತ್ತು ಏಕೆ?
1 ಇತರರಿಗೆ ಸುವಾರ್ತೆ ಸಾರುವುದನ್ನು ಅಪೊಸ್ತಲ ಪೌಲನು ತನ್ನ ಕರ್ತವ್ಯವೆಂದು ಪರಿಗಣಿಸಿದನು. (1 ಕೊರಿಂ. 9:16, 19, 23) ಅದರಂತೆಯೇ ಜನರ ಶಾಶ್ವತ ಹಿತಕ್ಷೇಮದೆಡೆಗೆ ನಮಗಿರುವ ಚಿಂತೆಯು ಅವರಿಗೆ ಸುವಾರ್ತೆಯನ್ನು ತಲುಪಿಸಲು ಹೆಚ್ಚುವರಿ ಪ್ರಯತ್ನಗಳನ್ನು ಮಾಡುವಂತೆ ನಮ್ಮನ್ನು ಪ್ರಚೋದಿಸುವುದು.
2. ಸಾರುವುದರಲ್ಲಿ ಯಾವ ಹೊಂದಾಣಿಕೆಗಳನ್ನು ಮಾಡಲು ನಾವು ಸಿದ್ಧರಿದ್ದೇವೆ, ಮತ್ತು ಏಕೆ?
2 ಜನರು ಸಿಗುವ ಸ್ಥಳದಲ್ಲಿ ಹಾಗೂ ಸಮಯದಲ್ಲಿ ಸಾರಿರಿ: ಒಬ್ಬ ನಿಪುಣ ಬೆಸ್ತನು ತನಗೆ ಅನುಕೂಲವಾದ ಸ್ಥಳದಲ್ಲೋ ಸಮಯದಲ್ಲೋ ಬಲೆಬೀಸುವುದಿಲ್ಲ. ಬದಲಿಗೆ ಹೆಚ್ಚಾಗಿ ಮೀನು ಎಲ್ಲಿ ಮತ್ತು ಯಾವಾಗ ಸಿಗುತ್ತದೆಂಬುದನ್ನು ತಿಳಿದು ಅದಕ್ಕನುಗುಣವಾಗಿ ಬಲೆಬೀಸುತ್ತಾನೆ. ಹಾಗೆಯೇ, ‘ಮನುಷ್ಯರನ್ನು ಹಿಡಿಯುವ ಬೆಸ್ತರಾದ’ ನಾವು ನಮ್ಮ ಟೆರಿಟೊರಿಯಲ್ಲಿ ಜನರನ್ನು ಕಂಡುಕೊಳ್ಳಲಿಕ್ಕಾಗಿ ಕೆಲವೊಂದು ಹೊಂದಾಣಿಕೆಗಳನ್ನು ಮಾಡಬೇಕಾಗಬಹುದು. ಹಾಗೆ ಮಾಡುವುದಾದರೆ “ಎಲ್ಲಾ ಜಾತಿಯ ಮೀನುಗಳನ್ನು” ಹಿಡಿಯುವ ವಿಶೇಷ ಕೆಲಸದಲ್ಲಿ ನಾವು ಹೆಚ್ಚೆಚ್ಚು ಆನಂದಿಸುವೆವು. (ಮತ್ತಾ. 4:19; 13:47) ನಾವು ಸಂಜೆಯಲ್ಲಿ ಜನರ ಮನೆಗಳಿಗೆ ಹೋಗಿ ಅವರನ್ನು ಭೇಟಿಮಾಡಬಲ್ಲೆವೋ ಅಥವಾ ಮುಂಜಾನೆಯ ಸಮಯದಲ್ಲಿ ರೈಲ್ವೆ ಮತ್ತು ಬಸ್ ನಿಲ್ದಾಣಗಳಲ್ಲಿ ಅನೌಪಚಾರಿಕ ಸಾಕ್ಷಿಕಾರ್ಯ ಮಾಡಬಲ್ಲೆವೋ? ‘ಸುವಾರ್ತೆಗೆ ಕೂಲಂಕಷ ಸಾಕ್ಷಿಯನ್ನು ಕೊಡುವುದು’ (NW) ಪೌಲನ ಗುರಿಯಾಗಿತ್ತು. ಮತ್ತು ಅದನ್ನು ಸಾಧಿಸಲಿಕ್ಕಾಗಿ ಅವನು ತಕ್ಕದಾದ ಸಂದರ್ಭಗಳನ್ನು ಹುಡುಕಿ ಆ ಸಂದರ್ಭಗಳನ್ನು ಉತ್ತಮವಾಗಿ ಬಳಸಿಕೊಂಡನು.—ಅ. ಕೃ. 17:17; 20:20, 24.
3, 4. ಸುವಾರ್ತೆಯನ್ನು ಸಾರುವಾಗ ನಾವು ಯಾವ ರೀತಿಯಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳಬಲ್ಲೆವು, ಮತ್ತು ಇದರ ಫಲಿತಾಂಶಗಳೇನು?
3 ಅಗತ್ಯಕ್ಕೆ ತಕ್ಕಂತೆ ನಿರೂಪಣೆಯನ್ನು ಹೊಂದಿಸಿಕೊಳ್ಳಿ: ಬೇರೆ ಬೇರೆ ಜಾತಿಯ ಮೀನುಗಳನ್ನು ಹಿಡಿಯಲಿಕ್ಕಾಗಿ ಬೆಸ್ತರು ತಮ್ಮ ವಿಧಾನಗಳನ್ನು ಬದಲಾಯಿಸುತ್ತಾರೆ. ನಮ್ಮ ಟೆರಿಟೊರಿಯಲ್ಲಿರುವ ಜನರಿಗೆ ಮನಮುಟ್ಟುವಂಥ ರೀತಿಯಲ್ಲಿ ರಾಜ್ಯದ ಸುವಾರ್ತೆಯನ್ನು ನಾವು ಹೇಗೆ ಪ್ರಸ್ತುತಪಡಿಸಬಲ್ಲೆವು? ಯಾವ ವಿಷಯದ ಕುರಿತು ಸಾಮಾನ್ಯವಾಗಿ ಜನರು ಹೆಚ್ಚು ಚಿಂತಿಸುತ್ತಾರೋ ಅಂಥ ವಿಷಯದ ಕುರಿತು ನಾವು ಜಾಣ್ಮೆಯಿಂದ ಮಾತಾಡಲು ಪ್ರಾರಂಭಿಸಬೇಕು. ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಾಗ ಅದನ್ನು ಗಮನಕೊಟ್ಟು ಆಲಿಸಬೇಕು. (ಯಾಕೋ. 1:19) ಅವರು ಮನಬಿಚ್ಚಿ ಮಾತಾಡುವಂತೆ ಮಾಡಲು ನಾವು ದೃಷ್ಟಿಕೋನ ಪ್ರಶ್ನೆಗಳನ್ನೂ ಕೇಳಬಹುದು. (ಜ್ಞಾನೋ. 20:5) ಹೀಗೆ, ಅವರನ್ನು ಪ್ರಭಾವಿಸುವಂಥ ರೀತಿಯಲ್ಲಿ ಸುವಾರ್ತೆಯ ನಿರೂಪಣೆಗಳನ್ನು ನಾವು ಹೊಂದಿಸಿಕೊಳ್ಳಬಲ್ಲೆವು. ನಮ್ಮ ಪೀಠಿಕೆಯನ್ನು ಕೇಳಿಯೇ ಮನೆಯವನು ಕಿರಿಕಿರಿಗೊಳ್ಳುತ್ತಿದ್ದಾನೆ ಅಥವಾ ಸಿಟ್ಟುಗೊಳ್ಳುತ್ತಿದ್ದಾನೆ ಎಂದು ನಮಗನಿಸುವುದಾದರೆ ಸಕಾರಾತ್ಮಕ ರೀತಿಯಲ್ಲಿ ನಮ್ಮ ಸಂಭಾಷಣೆಯನ್ನು ಕೊನೆಗೊಳಿಸಿ ತತ್ಕ್ಷಣ ಅಲ್ಲಿಂದ ಹೊರಡುವುದು ಉತ್ತಮ. ಪೌಲನು, ‘ಯಾರಾರಿಗೆ ಎಂಥೆಂಥವನಾಗಬೇಕೋ ಅಂಥಂಥವನಾದನು.’ (1 ಕೊರಿಂ. 9:22) ಹೊಂದಿಸಿಕೊಳ್ಳುವುದು ಜನರ ಹೃದಯ ಸ್ಪರ್ಷಿಸಲು ತುಂಬಾ ಪ್ರಾಮುಖ್ಯವಾಗಿದೆ.
4 “ಶುಭದ ಸುವಾರ್ತೆಯನ್ನು” ಜನರೊಂದಿಗೆ ಹಂಚಿಕೊಳ್ಳುವುದು ನಿಜಕ್ಕೂ ಆನಂದದ ವಿಷಯವಾಗಿದೆ! (ಯೆಶಾ. 52:7) ಆದಷ್ಟು ಹೆಚ್ಚು ಜನರನ್ನು ತಲುಪಲಿಕ್ಕಾಗಿ ನಾವು ‘ಸುವಾರ್ತೆಗೋಸ್ಕರ ಎಲ್ಲವನ್ನು’ ಮಾಡುತ್ತಿರೋಣ.—1 ಕೊರಿಂ. 9:23.