ಸ್ವಲ್ಪವೇ ಓದಲು ತಿಳಿದವರಿಗೆ ಬೋಧಿಸುವುದು
1. ಶುಶ್ರೂಷೆಯಲ್ಲಿ ನಾವು ಯಾವ ಸವಾಲನ್ನು ಎದುರಿಸಬಹುದು?
1 ನಾವು ಶುಶ್ರೂಷೆಯಲ್ಲಿ ಭಾಗವಹಿಸುತ್ತಿರುವಾಗ ಕೇವಲ ಅಲ್ಪಸ್ವಲ್ಪ ಓದು ಬರುವವರಿಗೆ ಸತ್ಯವನ್ನು ಕಲಿಸುವ ಸವಾಲನ್ನು ಕೆಲವೊಮ್ಮೆ ಎದುರಿಸುತ್ತೇವೆ. ಆಗ ನಾವೇನು ಮಾಡಸಾಧ್ಯವಿದೆ?
2. ಕೊಂಚವೇ ಓದು ಬಲ್ಲವರಿಗೆ ನಾವು ಏಕೆ ಮತ್ತು ಹೇಗೆ ಗೌರವ ತೋರಿಸುತ್ತೇವೆ?
2 ಅವರಿಗೆ ಗೌರವ ತೋರಿಸಿ: ಯೆಹೋವನು ಒಬ್ಬ ವ್ಯಕ್ತಿಯ ಹೃದಯವನ್ನು ನೋಡುತ್ತಾನೆಯೇ ಹೊರತು ಅವನು ಪಡೆದಿರುವ ವಿದ್ಯಾಭ್ಯಾಸವನ್ನಲ್ಲ. (1 ಸಮು. 16:7; ಜ್ಞಾನೋ. 21:2) ಆದ್ದರಿಂದ ಕೊಂಚವೇ ಓದು ಬಲ್ಲವರನ್ನು ನಾವು ಕಡೆಗಣಿಸುವುದಿಲ್ಲ. ಅಂಥವರಿಗೆ ನಾವು ಗೌರವ ತೋರಿಸಿ, ತಾಳ್ಮೆಯಿಂದ ವರ್ತಿಸುವಲ್ಲಿ ಅವರು ನಮ್ಮ ಸಹಾಯವನ್ನು ಸ್ವೀಕರಿಸುವ ಸಂಭಾವ್ಯತೆ ಹೆಚ್ಚು. (1 ಪೇತ್ರ 3:15) ಹೀಗೆ ಗೌರವ ತೋರಿಸುವುದರಲ್ಲಿ, ವಾಕ್ಯ ಅಥವಾ ಪ್ಯಾರವನ್ನು ಓದುವಂತೆ ಅವರನ್ನು ಒತ್ತಾಯಿಸದಿರುವುದೂ ಸೇರಿದೆ. ಅವರು ಅಮೂಲ್ಯ ಬೈಬಲ್ ಸತ್ಯಗಳನ್ನು ಕಲಿತು ಪ್ರಗತಿಮಾಡಿದಂತೆ ದೇವರ ವಾಕ್ಯವನ್ನು “ಹಗಲಿರುಳು” ಓದಿ ಆನಂದಿಸುವ ಹಂಬಲವೂ ಅವರಲ್ಲಿ ಹೆಚ್ಚುತ್ತದೆ. ಇದಕ್ಕಾಗಿ ತಮ್ಮ ಓದುವ ಸಾಮರ್ಥ್ಯವನ್ನು ಉತ್ತಮಗೊಳಿಸಲು ಅವರು ಪ್ರಯತ್ನಿಸುವರು.—ಕೀರ್ತ. 1:2, 3.
3. ಸ್ವಲ್ವವೇ ಓದಲು ತಿಳಿದವರಿಗೆ ಕಲಿಸಲಿಕ್ಕಾಗಿ ಯಾವ ಬೋಧನಾ ವಿಧಾನಗಳನ್ನು ಉಪಯೋಗಿಸಬಹುದು?
3 ಬೈಬಲಧ್ಯಯನದಲ್ಲಿ ಬೋಧಿಸುವ ವಿವಿಧ ವಿಧಾನ: ಜನರಿಗೆ ಬೋಧಿಸಲು ಹಾಗೂ ತಾವು ಕಲಿತದ್ದನ್ನು ನೆನಪಿನಲ್ಲಿಡಲು ಚಿತ್ರಗಳು ಅತ್ಯುತ್ತಮ ಸಹಾಯಕ. ನೀವು ಉಪಯೋಗಿಸುವ ಪ್ರಕಾಶನದಲ್ಲಿರುವ ಚಿತ್ರವನ್ನು ವಿದ್ಯಾರ್ಥಿಗೆ ತೋರಿಸಿ ಅವನ ಅಭಿಪ್ರಾಯವನ್ನು ಕೇಳಿರಿ. ಅನಂತರ ಆ ಚಿತ್ರವು ಏನನ್ನು ಕಲಿಸುತ್ತದೆಂದು ಅವನು ಅರ್ಥ ಮಾಡಿಕೊಳ್ಳಲು ನಿರ್ದಿಷ್ಟ ಪ್ರಶ್ನೆಗಳನ್ನು ಹಾಕಿರಿ. ಚಿತ್ರದಲ್ಲಿ ನೀವು ಎತ್ತಿಹೇಳ ಬಯಸುವ ನಿರ್ದಿಷ್ಟ ವಿಷಯಗಳನ್ನು ಕಲಿಸಲು ಬೈಬಲ್ ವಚನಗಳನ್ನು ಓದಿರಿ. ಪಾಠವನ್ನು ಪುನರ್ವಿಮರ್ಶಿಸಲು ಸಹ ಚಿತ್ರಗಳನ್ನು ಉಪಯೋಗಿಸಬಹುದು. ಒಂದೇಸಲಕ್ಕೆ ಹೆಚ್ಚು ವಿಷಯಭಾಗವನ್ನು ಆವರಿಸಬೇಡಿ. ಪಾಠದ ಮುಖ್ಯವಿಷಯ ಮತ್ತು ಮುಖ್ಯಅಂಶಗಳನ್ನು ಒತ್ತಿಹೇಳಿ. ಅಧ್ಯಯನಕ್ಕೆ ಸಂಬಂಧಪಡದ ವಿಷಯಗಳನ್ನು ಸೇರಿಸಬೇಡಿ. ವಚನಗಳನ್ನು ನೇರವಾಗಿ ಬೈಬಲಿನಿಂದ ಓದಿರಿ. ಅದು ವಿದ್ಯಾರ್ಥಿಗೆ ಅರ್ಥವಾಗಿದೆಯೆಂದು ಖಚಿತಮಾಡಿಕೊಳ್ಳಲು ಪ್ರಶ್ನೆಗಳನ್ನು ಕೇಳಿರಿ. ಇದು ತನ್ನ ಓದುವ ಸಾಮರ್ಥ್ಯವನ್ನು ಉತ್ತಮಗೊಳಿಸುವ ಅವನ ಅಪೇಕ್ಷೆಯನ್ನು ಹೆಚ್ಚಿಸಬಹುದು. ಹೀಗೆ ಅವನು ತಾನಾಗಿಯೆ ಹೆಚ್ಚಿನ ಬೈಬಲ್ ಸತ್ಯಗಳನ್ನು ಹುಡುಕಲು ಶಕ್ತನಾಗುವನು.
4. ನಮ್ಮ ವಿದ್ಯಾರ್ಥಿಯು ತನ್ನ ಓದುವ ಸಾಮರ್ಥ್ಯವನ್ನು ಪ್ರಗತಿಗೊಳಿಸಲು ನಾವು ಹೇಗೆ ನೆರವಾಗಬಹುದು?
4 ಓದುವಿಕೆಯ ಪ್ರಗತಿಗಾಗಿ ಸಹಾಯಕಗಳು: ಸ್ವಲ್ಪವೇ ಓದಲು ತಿಳಿದವರಿಗೆ ಅಥವಾ ನಿರರ್ಗಳವಾಗಿ ಓದಲು ಕಲಿಯುವ ಕೊಂಚವೇ ಸಂದರ್ಭ ಇರುವವರಿಗೆ, ಕೆಲವೊಮ್ಮೆ ಮಾಹಿತಿಯನ್ನು ಅರ್ಥಮಾಡಿಕೊಳ್ಳುವ ಮತ್ತು ಜ್ಞಾಪಿಸಿಕೊಳ್ಳುವ ಒಳ್ಳೆಯ ಸಾಮರ್ಥ್ಯ ಇರುತ್ತದೆ. ಆದ್ದರಿಂದ ಒಳ್ಳೇ ಓದುಗರು ಓದುವಾಗ ಇವರು ಕಿವಿಗೊಟ್ಟು ತಮ್ಮ ಸ್ವಂತ ಪ್ರತಿಗಳಲ್ಲಿ ಹಿಂಬಾಲಿಸುವಂತೆ ಉತ್ತೇಜಿಸಿರಿ. ಆ ಪದಗಳನ್ನು ಅವರು ಮೆಲ್ಲಮೆಲ್ಲನೆ ಪುನರುಚ್ಚರಿಸಲೂಬಹುದು. ಇದು ಅವರಿಗೆ ತಮ್ಮ ಓದುವಿಕೆಯಲ್ಲಿ ಪ್ರಗತಿಮಾಡಲು ನೆರವಾದೀತು. ಕೆಲವು ಕ್ಷೇತ್ರಗಳಲ್ಲಿ ಹಿರಿಯರು ಸಭೆಯಲ್ಲಿ ವಾಚನ ಕ್ಲಾಸುಗಳನ್ನೂ ಏರ್ಪಡಿಸಬಹುದು. ಈ ವ್ಯಾವಹಾರಿಕ ಸಲಹೆಗಳು ಸ್ವಲ್ಪವೇ ಓದಲು ತಿಳಿದವರಿಗೆ “ಪವಿತ್ರ ಬರಹಗಳನ್ನು” ಅರ್ಥಮಾಡಲು ಸಹಾಯವಾಗುವುದು. ಇದು ಅವರನ್ನು ವಿವೇಕಿಗಳನ್ನಾಗಿ ಮಾಡಿ ರಕ್ಷಣೆಗೆ ನಡೆಸಬಲ್ಲದು.—2 ತಿಮೊ. 3:15.