ಬೈಬಲ್ ಅಧ್ಯಯನಗಳಲ್ಲಿ ವಚನಗಳ ಪರಿಣಾಮಕಾರಿ ಬಳಕೆ
1. ಬೈಬಲ್ ಅಧ್ಯಯನಗಳಲ್ಲಿ ವಚನಗಳಿಗೆ ಮಹತ್ವ ಕೊಡಬೇಕು ಏಕೆ?
1 ನಾವು ಬೈಬಲ್ ಅಧ್ಯಯನಗಳನ್ನು ನಡೆಸುವ ಉದ್ದೇಶ ‘ಶಿಷ್ಯರನ್ನಾಗಿ ಮಾಡುವುದೇ.’ ಜನರು ದೇವರ ವಾಕ್ಯದ ಬೋಧನೆಗಳನ್ನು ಅರ್ಥಮಾಡಿಕೊಂಡು ಸ್ವೀಕರಿಸಿ, ತಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳುವಂತೆ ನೆರವಾಗುವ ಮೂಲಕ ಇದನ್ನು ಮಾಡಬಲ್ಲೆವು. (ಮತ್ತಾ. 28:19, 20; 1 ಥೆಸ. 2:13) ಆದ್ದರಿಂದ ಅಧ್ಯಯನವು ಬೈಬಲಿನ ಮೇಲೆ ಕೇಂದ್ರಿತವಾಗಿರಬೇಕು. ನಾವು ಮೊದಲಾಗಿ ಬೈಬಲ್ ವಿದ್ಯಾರ್ಥಿಗೆ ತನ್ನ ಸ್ವಂತ ಬೈಬಲಿನಲ್ಲಿ ವಚನಗಳನ್ನು ಹೇಗೆ ತೆರೆಯಬೇಕೆಂದು ತೋರಿಸಿಕೊಡಬೇಕು.
2. ಯಾವ್ಯಾವ ವಚನಗಳನ್ನು ಓದಿ ಚರ್ಚಿಸಬೇಕೆಂದು ನಿರ್ಧರಿಸುವುದು ಹೇಗೆ?
2 ಓದುವ ವಚನಗಳನ್ನು ಆರಿಸಿ: ಅಧ್ಯಯನಕ್ಕಾಗಿ ತಯಾರಿಸುವಾಗಲೇ, ಪ್ರತಿಯೊಂದು ವಚನವೂ ವಿಷಯಕ್ಕೆ ಹೇಗೆ ಸಂಬಂಧಿಸಿದೆ ಎಂಬುದನ್ನು ಪರಿಗಣಿಸಿ ಆ ವಚನಗಳಲ್ಲಿ ಯಾವುದನ್ನು ಅಧ್ಯಯನ ನಡೆಸುವಾಗ ಓದಿ ಚರ್ಚಿಸಬೇಕೆಂದು ನಿರ್ಧರಿಸಿ. ನಮ್ಮ ನಂಬಿಕೆಗಳಿಗೆ ಆಧಾರ ಕೊಡುವ ವಚನಗಳನ್ನು ಓದುವುದು ಒಳ್ಳೇದು. ಹಿನ್ನೆಲೆ ಮಾಹಿತಿ ನೀಡುವ ವಚನಗಳನ್ನು ಓದಬೇಕಾಗಿಲ್ಲ. ಆದರೆ ಪ್ರತಿಯೊಬ್ಬ ವಿದ್ಯಾರ್ಥಿಯ ಅಗತ್ಯಗಳನ್ನೂ ಪರಿಸ್ಥಿತಿಗಳನ್ನೂ ಗಮನದಲ್ಲಿಡಬೇಕು.
3. ಪ್ರಶ್ನೆಕೇಳುವುದರ ಪ್ರಯೋಜನವೇನು? ಅದನ್ನು ಮಾಡುವುದು ಹೇಗೆ?
3 ಪ್ರಶ್ನೆ ಕೇಳಿ: ವಚನಗಳನ್ನು ನೀವೇ ವಿವರಿಸುವ ಬದಲು ಅದನ್ನು ವಿದ್ಯಾರ್ಥಿ ವಿವರಿಸುವಂತೆ ಮಾಡಿ. ಅದಕ್ಕಾಗಿ ಜಾಣ್ಮೆಯಿಂದ ಪ್ರಶ್ನೆಗಳನ್ನು ಕೇಳಿ. ವಚನವು ಸ್ಪಷ್ಟವಾಗಿರುವಲ್ಲಿ, ‘ಪ್ಯಾರದಲ್ಲಿ ಕೊಡಲಾದ ವಿಷಯವನ್ನು ವಚನ ಹೇಗೆ ಬೆಂಬಲಿಸುತ್ತದೆ?’ ಎಂದಷ್ಟೇ ಕೇಳಿ. ಸ್ಪಷ್ಟವಾಗಿರದಿದ್ದಲ್ಲಿ ವಿದ್ಯಾರ್ಥಿ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಂತೆ ಒಂದು ನೇರ ಪ್ರಶ್ನೆಯನ್ನೋ ಅನೇಕ ಪ್ರಶ್ನೆಗಳನ್ನೋ ಕೇಳಬೇಕಾದೀತು.
4. ವಚನಗಳನ್ನು ಎಷ್ಟು ವಿವರಿಸಬೇಕು?
4 ಸರಳವಾಗಿರಲಿ: ಒಬ್ಬ ಕುಶಲ ಬಿಲ್ಲುಗಾರನು ಒಂದೇ ಬಾಣದಿಂದ ಗುರಿ ಹೊಡೆಯಬಲ್ಲನು. ಹಾಗೆಯೇ ಕುಶಲ ಬೋಧಕನು ಕೆಲವೇ ಶಬ್ದಗಳಲ್ಲಿ ವಿಷಯವನ್ನು ಸ್ಪಷ್ಟವಾಗಿ ತಿಳಿಸಬಲ್ಲನು. ವಚನದ ಪ್ರತಿಯೊಂದೂ ಅಂಶವನ್ನು ವಿವರಿಸಲು ಹೋಗಬೇಡಿ. ಚರ್ಚಿಸಲಾಗುತ್ತಿರುವ ವಿಷಯಕ್ಕೆ ತಕ್ಕಂತೆ ಎಷ್ಟು ಬೇಕೋ ಅಷ್ಟನ್ನೇ ವಿವರಿಸಿ. ಕೆಲವೊಮ್ಮೆ ಒಂದು ವಚನವನ್ನು ಸರಿಯಾಗಿ ಅರ್ಥಮಾಡಿಕೊಂಡು ವಿವರಿಸಲು ನೀವು ಕ್ರೈಸ್ತ ಪ್ರಕಾಶನಗಳಲ್ಲಿ ಸಂಶೋಧನೆ ಮಾಡಬೇಕಾದೀತು.—2 ತಿಮೊ. 2:15.
5, 6. ನಮ್ಮ ವಿದ್ಯಾರ್ಥಿಗಳು ದೇವರ ವಾಕ್ಯವನ್ನು ಅನ್ವಯಿಸಿಕೊಳ್ಳಲು ನಾವು ಹೇಗೆ ನೆರವಾಗಬಲ್ಲೆವು? ಆದರೆ ಏನು ಮಾಡಬಾರದು?
5 ಅನ್ವಯವನ್ನು ತಿಳಿಸಿ: ವಿದ್ಯಾರ್ಥಿಯು ವಚನಗಳನ್ನು ತನಗೇ ಹೇಗೆ ಅನ್ವಯಿಸಬಹುದೆಂದು ಗ್ರಹಿಸುವಂತೆ ಸೂಕ್ತವಾಗಿರುವಾಗೆಲ್ಲ ನೆರವಾಗಿ. ಉದಾಹರಣೆಗೆ ಇಬ್ರಿಯ 10:24, 25ನ್ನು ಚರ್ಚಿಸುತ್ತಿರುವಾಗ ನಮ್ಮ ಕೂಟಗಳಲ್ಲಿ ಯಾವುದಾದರೊಂದರ ಬಗ್ಗೆ ವಿದ್ಯಾರ್ಥಿಗೆ ವಿವರಿಸಿ ಅದಕ್ಕೆ ಆಮಂತ್ರಿಸಿ. ಆದರೆ ಬಲವಂತ ಮಾಡಬೇಡಿ. ಯೆಹೋವನನ್ನು ಸಂತೋಷಪಡಿಸಲು ಅಗತ್ಯವಿರುವ ಹೆಜ್ಜೆತೆಗೆದುಕೊಳ್ಳುವಂತೆ ದೇವರ ವಾಕ್ಯ ಅವರನ್ನು ಪ್ರಚೋದಿಸಲಿ.—ಇಬ್ರಿ. 4:12.
6 ನಾವು ಶಿಷ್ಯರನ್ನಾಗಿ ಮಾಡುವ ನೇಮಕವನ್ನು ಪೂರೈಸುತ್ತಿರುವಾಗ ಬೈಬಲನ್ನು ಪರಿಣಾಮಕಾರಿಯಾಗಿ ಬಳಸೋಣ. ಹೀಗೆ ನಮ್ಮ ವಿದ್ಯಾರ್ಥಿಗಳು ದೇವರಿಗೆ ‘ನಂಬಿಕೆಯ ಮೂಲಕ ವಿಧೇಯರಾಗಲು’ ನೆರವಾಗೋಣ.—ರೋಮ. 16:26.