ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು—ತಯಾರಿಸಲಿಕ್ಕಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು
1 ಅಧ್ಯಯನದ ಪಾಠವನ್ನು ಮುಂಚಿತವಾಗಿಯೇ ಓದಿ, ಉತ್ತರಗಳಿಗೆ ಅಡಿಗೆರೆ ಹಾಕಿ, ತನ್ನ ಸ್ವಂತ ಮಾತುಗಳಲ್ಲಿ ಅವುಗಳನ್ನು ಹೇಗೆ ವ್ಯಕ್ತಪಡಿಸಬಲ್ಲೆ ಎಂದು ಯೋಚಿಸುವ ವಿದ್ಯಾರ್ಥಿ ಸಾಮಾನ್ಯವಾಗಿ ಬೇಗನೆ ಆಧ್ಯಾತ್ಮಿಕ ಪ್ರಗತಿ ಮಾಡುತ್ತಾನೆ. ಆದುದರಿಂದ ಅಧ್ಯಯನವನ್ನು ಕ್ರಮವಾಗಿ ನಡೆಸಲು ಆರಂಭಿಸಿದ ಮೇಲೆ ವಿದ್ಯಾರ್ಥಿಯೊಟ್ಟಿಗೆ ಕುಳಿತು ಒಂದು ಪಾಠವನ್ನು ತಯಾರಿಸುತ್ತಾ ತಯಾರಿ ಮಾಡುವುದು ಹೇಗೆಂಬುದನ್ನು ತೋರಿಸಿಕೊಡಿ. ಹೆಚ್ಚಿನ ವಿದ್ಯಾರ್ಥಿಗಳೊಂದಿಗೆ ಇಡೀ ಅಧ್ಯಾಯವನ್ನು ಅಥವಾ ಪಾಠವನ್ನು ಒಟ್ಟಿಗೆ ತಯಾರಿಸುವುದು ಸಹಾಯಕಾರಿಯಾಗಿರುವುದು.
2 ಅಡಿಗೆರೆ ಮತ್ತು ಟಿಪ್ಪಣಿ: ಮುದ್ರಿತ ಪ್ರಶ್ನೆಗೆ ನೇರವಾದ ಉತ್ತರ ಕಂಡುಕೊಳ್ಳುವುದು ಹೇಗೆಂದು ವಿವರಿಸಿ. ಅಧ್ಯಯನ ಪ್ರಕಾಶನದ ನಿಮ್ಮ ಸ್ವಂತ ಪ್ರತಿಯಲ್ಲಿ ನೀವು ಕೇವಲ ಮುಖ್ಯ ಪದಗಳಿಗೆ ಅಥವಾ ವಾಕ್ಯಗಳಿಗೆ ಅಡಿಗೆರೆ ಹಾಕಿರುವುದನ್ನು ವಿದ್ಯಾರ್ಥಿಗೆ ತೋರಿಸಿ. ನೀವು ವಿಷಯಭಾಗವನ್ನು ಪರಿಗಣಿಸುವಾಗ, ಅವನು ನಿಮ್ಮ ಮಾದರಿಯನ್ನು ಹಿಂಬಾಲಿಸುತ್ತಾ ತನ್ನ ಸ್ವಂತ ಪ್ರತಿಯಲ್ಲಿ ಉತ್ತರವನ್ನು ಜ್ಞಾಪಿಸಿಕೊಳ್ಳಲು ಸಹಾಯಮಾಡುವ ವಿಷಯಗಳಿಗೆ ಮಾತ್ರ ಅಡಿಗೆರೆ ಹಾಕಲು ಬಯಸಬಹುದು. (ಲೂಕ 6:40) ಅನಂತರ ತನ್ನ ಸ್ವಂತ ಮಾತುಗಳಲ್ಲಿ ಉತ್ತರವನ್ನು ಕೊಡುವಂತೆ ಅವನನ್ನು ಕೇಳಿರಿ. ಹೀಗೆ ಮಾಡುವಾಗ ಅವನು ವಿಷಯಭಾಗವನ್ನು ಎಷ್ಟು ಉತ್ತಮವಾಗಿ ಅರ್ಥಮಾಡಿಕೊಂಡಿದ್ದಾನೆ ಎಂಬುದನ್ನು ತಿಳಿದುಕೊಳ್ಳಲು ನಿಮಗೆ ಸಾಧ್ಯವಾಗುವುದು.
3 ಅಧ್ಯಯನಕ್ಕಾಗಿ ವಿದ್ಯಾರ್ಥಿ ತಯಾರಿಸುವಾಗ ಉದ್ಧರಿಸಲ್ಪಟ್ಟಿರದ ಶಾಸ್ತ್ರವಚನಗಳನ್ನು ಜಾಗರೂಕವಾಗಿ ಪರಿಶೋಧಿಸುವುದು ಸಹ ಪ್ರಾಮುಖ್ಯ. (ಅ. ಕಾ. 17:11) ಸೂಚಿಸಲ್ಪಟ್ಟಿರುವ ಪ್ರತಿಯೊಂದು ವಚನವು ಪ್ಯಾರಗ್ರಾಫ್ನಲ್ಲಿರುವ ಒಂದು ಅಂಶವನ್ನು ಬೆಂಬಲಿಸುತ್ತದೆ ಎಂಬುದನ್ನು ಗ್ರಹಿಸುವಂತೆ ವಿದ್ಯಾರ್ಥಿಗೆ ಸಹಾಯಮಾಡಿ. ತನ್ನ ಅಧ್ಯಯನ ಪ್ರಕಾಶನದ ಮಾರ್ಜಿನ್ನಲ್ಲಿ ಚುಟುಕಾದ ಟಿಪ್ಪಣಿಗಳನ್ನು ಹೇಗೆ ಬರೆದುಕೊಳ್ಳುವುದು ಎಂಬುದನ್ನು ಅವನಿಗೆ ತೋರಿಸಿ. ಅವನು ಕಲಿಯುತ್ತಿರುವ ವಿಷಯಕ್ಕೆ ಆಧಾರವು ಬೈಬಲಾಗಿದೆ ಎಂಬ ಅಂಶವನ್ನು ಎತ್ತಿತೋರಿಸಿ. ಅಧ್ಯಯನ ನಡೆಸಲ್ಪಡುವಾಗ ಸೂಚಿಸಲ್ಪಟ್ಟಿರುವ ಶಾಸ್ತ್ರವಚನಗಳನ್ನು ತನ್ನ ಹೇಳಿಕೆಗಳಲ್ಲಿ ಧಾರಾಳವಾಗಿ ಉಪಯೋಗಿಸುವಂತೆ ಅವನನ್ನು ಪ್ರೋತ್ಸಾಹಿಸಿ.
4 ಮೇಲ್ನೋಟ ಮತ್ತು ಪುನರವಲೋಕನ: ಅಧ್ಯಯನಕ್ಕಾಗಿ ಕೂಲಂಕಷವಾಗಿ ತಯಾರಿಸುವ ಮುಂಚೆ ಪಾಠದ ಮೇಲ್ನೋಟವನ್ನು ಪಡೆದುಕೊಳ್ಳುವುದು ವಿದ್ಯಾರ್ಥಿಗೆ ಪ್ರಯೋಜನಕರ. ಅಧ್ಯಾಯದ ಶೀರ್ಷಿಕೆ, ಉಪಶೀರ್ಷಿಕೆಗಳು ಮತ್ತು ಚಿತ್ರಗಳ ಮೇಲೆ ದೃಷ್ಟಿಹಾಯಿಸುವ ಮೂಲಕ ವಿಷಯಭಾಗದ ಮೇಲ್ನೋಟವನ್ನು ಪಡೆದುಕೊಳ್ಳಸಾಧ್ಯವಿದೆ ಎಂದು ಅವನಿಗೆ ತಿಳಿಸಿ. ತನ್ನ ತಯಾರಿಯನ್ನು ಮುಗಿಸುವ ಮುಂಚೆ ಪಾಠದಲ್ಲಿರುವ ಮುಖ್ಯಾಂಶಗಳನ್ನು ಪುನರವಲೋಕಿಸಲು ಕೆಲವು ಕ್ಷಣಗಳನ್ನು ತೆಗೆದುಕೊಳ್ಳುವುದು ಒಳ್ಳೇದೆಂದು ವಿವರಿಸಿ. ಇದನ್ನು ಮಾಡಲು ಪುನರವಲೋಕನ ಚೌಕ ಕೊಡಲ್ಪಟ್ಟಿರುವುದಾದರೆ ಅದನ್ನು ಬಳಸಿಕೊಳ್ಳುವಂತೆ ತಿಳಿಸಿ. ಇಂತಹ ಪುನರವಲೋಕನವು ಮಾಹಿತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ಅವನಿಗೆ ಸಹಾಯಮಾಡುವುದು.
5 ಅಧ್ಯಯನಕ್ಕಾಗಿ ಒಳ್ಳೇ ತಯಾರಿ ಮಾಡುವಂತೆ ವಿದ್ಯಾರ್ಥಿಗೆ ತರಬೇತಿ ನೀಡುವುದು ಸಭಾ ಕೂಟಗಳಲ್ಲಿ ಅರ್ಥಭರಿತ ಹೇಳಿಕೆಗಳನ್ನು ನೀಡಲು ಅವನಿಗೆ ಸಹಾಯಮಾಡುವುದು. ಒಳ್ಳೇ ಅಧ್ಯಯನ ರೂಢಿಗಳನ್ನು ಬೆಳೆಸಿಕೊಳ್ಳುವಂತೆಯೂ ಇದು ಅವನಿಗೆ ಸಹಾಯಮಾಡುವುದು. ಅವನ ವೈಯಕ್ತಿಕ ಬೈಬಲ್ ಅಧ್ಯಯನ ಮುಗಿದ ಎಷ್ಟೋ ಸಮಯದ ನಂತರವೂ ಇದರಿಂದ ಅವನು ಪ್ರಯೋಜನ ಪಡೆಯುತ್ತಿರುವನು.