ರಾಜ್ಯ ವಾರ್ತೆ 38 ಡಿಸೆಂಬರ್ ತಿಂಗಳಲ್ಲಿ ವಿತರಿಸಿ!
1. ಸತ್ತವರ ಬಗ್ಗೆ ಜನರಲ್ಲಿ ಯಾವೆಲ್ಲ ಪ್ರಶ್ನೆಗಳಿವೆ? ಈ ಪ್ರಶ್ನೆಗಳನ್ನು ಉತ್ತರಿಸಲು ಡಿಸೆಂಬರ್ ತಿಂಗಳಲ್ಲಿ ನಾವೇನು ಮಾಡಲಿದ್ದೇವೆ?
1 ಜನರ ನಂಬಿಕೆ ಏನೇ ಇರಲಿ ಸಾವು ಅನ್ನೋದು ಎಲ್ಲರ ಶತ್ರು. (1 ಕೊರಿಂ. 15:26) ಸತ್ತ ಮೇಲೆ ಏನಾಗುತ್ತದೆ? ತೀರಿಹೋದ ಜನರನ್ನು ಮತ್ತೆ ನೋಡಬಹುದಾ? ಇಂಥ ಪ್ರಶ್ನೆಗಳು ಅನೇಕರಲ್ಲಿವೆ. ಹಾಗಾಗಿ ಜಗತ್ತಿನೆಲ್ಲೆಡೆ ಇರುವ ಎಲ್ಲ ಸಭೆಗಳು ರಾಜ್ಯ ವಾರ್ತೆ 38ನ್ನು ಜನರಿಗೆ ವಿತರಿಸಲಿವೆ. ಅದರ ಶೀರ್ಷಿಕೆ “ಸತ್ತವರು ಮತ್ತೆ ಬದುಕಿ ಬರುತ್ತಾರಾ?” ಈ ವಿಶೇಷ ಅಭಿಯಾನ ಡಿಸೆಂಬರ್ 1ರಿಂದ ಆರಂಭವಾಗಿ ಒಂದು ತಿಂಗಳು ಪೂರ್ತಿ ನಡೆಯಲಿದೆ. ಅಭಿಯಾನದ ನಂತರ ರಾಜ್ಯ ವಾರ್ತೆ 38ನ್ನು ಕರಪತ್ರವಾಗಿ ಸೇವೆಯಲ್ಲಿ ಉಪಯೋಗಿಸಲಾಗುತ್ತದೆ.
2. ರಾಜ್ಯ ವಾರ್ತೆ 38ನ್ನು ಹೇಗೆ ವಿನ್ಯಾಸಿಸಲಾಗಿದೆ?
2 ಇದರ ವಿನ್ಯಾಸ ಹೇಗಿದೆ? ರಾಜ್ಯ ವಾರ್ತೆ 38ರ ಮೊದಲ ಪುಟದಲ್ಲಿ ಕುತೂಹಲಕಾರಿ ಶೀರ್ಷಿಕೆ ಮತ್ತು ‘ನೀವೇನು ನೆನಸುತ್ತೀರಿ . . . ಹೌದು? ಇಲ್ಲ? ಬರಬಹುದೇನೋ?’ ಅಂತ ಮನೆಯವರನ್ನು ಯೋಚಿಸುವಂತೆ ಮಾಡುವ ಪದಗಳಿವೆ. ಇವೆರಡೂ ಕಾಣುವಂಥ ರೀತಿಯಲ್ಲಿ ರಾಜ್ಯ ವಾರ್ತೆಯನ್ನು ಮಡಚುವಂತೆ ವಿನ್ಯಾಸಿಸಲಾಗಿದೆ. ರಾಜ್ಯ ವಾರ್ತೆಯನ್ನು ತೆರೆದಾಗ ಒಳಗಿನ ಪುಟದಲ್ಲಿ ಶೀರ್ಷಿಕೆಯ ಪ್ರಶ್ನೆಗೆ ಉತ್ತರವನ್ನು ಕೊಡಲಾಗಿದೆ. ಬೈಬಲ್ ಹೇಳುವುದನ್ನು ನಂಬುವುದಾದರೆ ಸಿಗುವ ಪ್ರಯೋಜನಗಳೇನು ಅಂತನೂ ಕೊಡಲಾಗಿದೆ. ಅಷ್ಟೇ ಅಲ್ಲ ಬೈಬಲ್ ಹೇಳುವ ವಿಷಯವನ್ನು ಅವರೇಕೆ ನಂಬಬಹುದೆಂದು ಕಾರಣಗಳನ್ನು ಕೊಡಲಾಗಿದೆ. ರಾಜ್ಯ ವಾರ್ತೆಯ ಕೊನೇ ಪುಟಕ್ಕೆ ತಿರುಗಿಸುವುದಾದರೆ ಜನರ ಆಸಕ್ತಿಯನ್ನು ಕೆರಳಿಸುವಂಥ ಇನ್ನೆರಡು ಪ್ರಶ್ನೆಗಳಿವೆ. ಇವು ಜನರನ್ನು ಯೋಚಿಸುವಂತೆ ಮತ್ತು ಇನ್ನೂ ಹೆಚ್ಚು ವಿಷಯಗಳನ್ನು ಕಲಿಯುವಂತೆ ಮಾಡುತ್ತವೆ.
3. ರಾಜ್ಯ ವಾರ್ತೆ 38ನ್ನು ಹೇಗೆ ವಿತರಿಸಬೇಕು?
3 ಇದರ ವಿತರಣೆ ಹೇಗೆ? ಈ ಅಭಿಯಾನ ಕೂಡ ಕ್ರಿಸ್ತನ ಮರಣದ ಸ್ಮರಣೆಯ ಮತ್ತು ಜಿಲ್ಲಾ ಅಧಿವೇಶನದ ಆಮಂತ್ರಣ ಪತ್ರಗಳನ್ನು ವಿತರಿಸುವ ಅಭಿಯಾನದ ಹಾಗೆಯೇ ನಡೆಯಲಿದೆ. ನಿಮ್ಮ ಸಭಾ ಸೇವಾಕ್ಷೇತ್ರದಲ್ಲಿ ಹೇಗೆ ವಿತರಿಸಬೇಕು ಎನ್ನುವ ಸಲಹೆ-ಸೂಚನೆಗಳನ್ನು ಹಿರಿಯರು ಕೊಡುತ್ತಾರೆ. ಏಪ್ರಿಲ್ 1, 2013ರ ಪತ್ರಕ್ಕನುಸಾರ ಅವರು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಸ್ವಲ್ಪವೇ ಸೇವಾಕ್ಷೇತ್ರ ಇರುವ ಸಭೆಯವರು ತಮ್ಮ ಸೇವಾಕ್ಷೇತ್ರವನ್ನು ಬೇಗನೆ ಆವರಿಸಬಹುದು. ಹಾಗೆ ಆವರಿಸಿದಲ್ಲಿ ಅಕ್ಕಪಕ್ಕದ ಸಭೆಯವರಿಗೆ ಹೆಚ್ಚು ಸೇವಾಕ್ಷೇತ್ರ ಇರೋದಾದರೆ ಸಹಾಯ ಮಾಡಬಹುದು. ಆಯಾ ವಾರಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ರಾಜ್ಯ ವಾರ್ತೆಯನ್ನು ತೆಗೆದುಕೊಳ್ಳಿ. ಮೊದಲು ಮನೆಮನೆ ಸೇವೆಯಲ್ಲಿ ಕೊಡಿ, ಉಳಿದರೆ ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ಕೊಡಿ. ಆ ತಿಂಗಳು ಕೊನೆಯಾಗುವ ಮುಂಚೆನೇ ಎಲ್ಲ ರಾಜ್ಯ ವಾರ್ತೆ ಖಾಲಿ ಆಗಿಬಿಟ್ಟರೆ ಆ ತಿಂಗಳ ಸಾಹಿತ್ಯ ನೀಡುವಿಕೆಯನ್ನು ಬಳಸಿ. ಆ ತಿಂಗಳ ಮೊದಲ ಶನಿವಾರದಂದು ಬೈಬಲ್ ಅಧ್ಯಯನ ಆರಂಭಿಸುವುದಕ್ಕಿಂತ ಅಭಿಯಾನಕ್ಕೆ ಹೆಚ್ಚು ಆದ್ಯತೆ ಕೊಡೋಣ. ವಾರಾಂತ್ಯಗಳಲ್ಲಿ ಸೂಕ್ತವಿದ್ದಲ್ಲಿ ಪತ್ರಿಕೆಗಳನ್ನು ಕೂಡ ನೀಡಬಹುದು. ಈ ವಿಶೇಷ ಅಭಿಯಾನದಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಲು ತಯಾರಿದ್ದೀರಾ?