ರಾಜ್ಯ ಸಂದೇಶವನ್ನು ಪ್ರಕಟಿಸುವುದರಲ್ಲಿ ಕಳೆದ ನೂರು ವರ್ಷಗಳು!
1. ಹೆಚ್ಚು ಕಡಿಮೆ ನೂರು ವರ್ಷಗಳ ಹಿಂದೆ ಏನು ಮಾಡುವಂತೆ ಯೆಹೋವನ ಜನರನ್ನು ಪ್ರಚೋದಿಸಲಾಯಿತು?
1 “ನೋಡಿ ರಾಜನು ಆಳುತ್ತಾನೆ! ಅವನ ಬಗ್ಗೆ ಪ್ರಚುರಪಡಿಸುವ ಪ್ರತಿನಿಧಿಗಳು ನೀವು. ಆದಕಾರಣ ರಾಜನನ್ನೂ ಅವನ ರಾಜ್ಯವನ್ನು ಪ್ರಕಟಿಸಿರಿ, ಪ್ರಕಟಿಸಿರಿ, ಪ್ರಕಟಿಸಿರಿ” ಎಂದು ಸಹೋದರ ರದರ್ಫರ್ಡ್ರವರು ಹೆಚ್ಚು ಕಡಿಮೆ ನೂರು ವರ್ಷಗಳ ಹಿಂದೆ ಉತ್ತೇಜನಕಾರಿ ಘೋಷಣೆಯನ್ನು ಮಾಡಿದರು. ಈ ಮಾತುಗಳು ದೇವರ ರಾಜ್ಯದ ಸಂದೇಶವನ್ನು ದೂರದೂರದ ಪ್ರದೇಶಗಳಿಗೆ ಹೋಗಿ ಸಾರುವಂತೆ ಯೆಹೋವನ ಜನರನ್ನು ಪ್ರಚೋದಿಸಿತು. ಅದರ ಫಲಿತಾಂಶ ಇವತ್ತು ನಮ್ಮ ಕಣ್ಮುಂದೆ ಇದೆ. ಆರಂಭದ ಕ್ರೈಸ್ತರಂತೆ ನಾವು ಸಹ “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ” ಸುವಾರ್ತೆ ಸಾರಿದ್ದೇವೆ. (ಕೊಲೊ. 1:23) ಗತಿಸಿರುವ ಆ ನೂರು ವರ್ಷಗಳಲ್ಲಿ ದೇವರ ರಾಜ್ಯವನ್ನು ಪ್ರಕಟಿಸಲು ನಾವು ಯಾವೆಲ್ಲ ಕ್ರಮ ಕೈಗೊಂಡಿದ್ದೇವೆ? ದೇವರ ರಾಜ್ಯದ ಸ್ಥಾಪನೆಯ ನೂರನೇ ವರ್ಷ ಸಮೀಪಿಸುತ್ತಿರುವ ಈ ಸಮಯದಲ್ಲಿ ಸಾರುವ ಕೆಲಸವನ್ನು ಮುಂದುವರಿಸಿಕೊಂಡು ಹೋಗುವುದು ಹೇಗೆ?
2. ನಮ್ಮ ಪ್ರಕಾಶನಗಳು ದೇವರ ರಾಜ್ಯವನ್ನು ಹೇಗೆ ಪ್ರಕಟಿಸುತ್ತಿವೆ?
2 ನಮ್ಮ ಸಾಧನೆಗಳು: ದಶಕಗಳಾದ್ಯಂತ ನಮ್ಮ ಪ್ರಕಾಶನಗಳು ದೇವರ ರಾಜ್ಯದ ಬಗ್ಗೆ ಪ್ರಕಟಿಸಿವೆ. 1939ರಿಂದ ನಮ್ಮ ಮುಖ್ಯ ಪತ್ರಿಕೆಯ ಶೀರ್ಷಿಕೆ ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು ಎಂದು ಬದಲಾಗಿದೆ. ಈ ಪತ್ರಿಕೆ ಹೆಚ್ಚಾಗಿ ದೇವರ ರಾಜ್ಯದ ಕುರಿತು ಮತ್ತು ಅದು ಏನನ್ನು ಸಾಧಿಸಲಿದೆ ಎನ್ನುವುದರ ಕುರಿತು ಚರ್ಚಿಸುತ್ತದೆ. ಎಚ್ಚರ! ಪತ್ರಿಕೆಯು ದೇವರ ರಾಜ್ಯವೊಂದೇ ಮಾನವಕುಲದ ಸಮಸ್ಯೆಗಳಿಗೆ ಪರಿಹಾರ ಎಂದು ತಿಳಿಸುತ್ತದೆ. ಸಂತೋಷಕರ ವಿಷಯವೇನೆಂದರೆ, ಇಡೀ ಭೂಮಿಯಲ್ಲೇ ಈ ಎರಡು ಪತ್ರಿಕೆಗಳನ್ನು ಅತೀ ಹೆಚ್ಚು ಭಾಷೆಗಳಲ್ಲಿ ಭಾಷಾಂತರಿಸಿ ವಿತರಿಸಲಾಗುತ್ತಿವೆ!—ಪ್ರಕ. 14:6.
3. ದೇವರ ರಾಜ್ಯವನ್ನು ಪ್ರಕಟಿಸಲು ಯಾವೆಲ್ಲ ವಿಧಾನಗಳನ್ನು ಉಪಯೋಗಿಸಿದ್ದೇವೆ?
3 ದೇವರ ರಾಜ್ಯವನ್ನು ಪ್ರಕಟಿಸಲು ಯೆಹೋವನ ಜನರು ಅನೇಕ ವಿಧಾನಗಳನ್ನು ಉಪಯೋಗಿಸಿದ್ದಾರೆ. ಆರಂಭದಲ್ಲಿ ಸೌಂಡ್ ಕಾರ್, ರೇಡಿಯೋ, ಫೋನೋಗ್ರಾಫ್ ಬಳಸಿ ಸುವಾರ್ತೆ ಸಾರಿದರು. ಕೇವಲ ಕೆಲವೇ ಮಂದಿ ರಾಜ್ಯ ಘೋಷಕರಿದ್ದರೂ ಒಂದೇ ಸಮಯದಲ್ಲಿ ಅತಿ ಹೆಚ್ಚು ಜನರಿಗೆ ಸುವಾರ್ತೆ ತಲುಪಿಸಲು ಆ ಎಲ್ಲ ವಿಧಾನಗಳು ಸಹಾಯಮಾಡಿದವು. (ಕೀರ್ತ. 19:4) ಇತ್ತೀಚಿನ ವರ್ಷಗಳಲ್ಲಿ ನಮ್ಮ jw.org ವೆಬ್ಸೈಟ್ ಮೂಲಕ ಲಕ್ಷಾಂತರ ಜನರಿಗೆ ದೇವರ ರಾಜ್ಯದ ಸಂದೇಶ ತಲುಪುತ್ತಿದೆ. ಸುವಾರ್ತೆ ಸಾರಲು ಅನುಮತಿಯಿಲ್ಲದ ದೇಶಗಳಿಗೂ ವ್ಯಾಪಿಸಿದೆ.
4. ಯಾವ ವಿಶೇಷ ಏರ್ಪಾಡುಗಳಲ್ಲಿ ನಾವು ಭಾಗವಹಿಸಿದ್ದೇವೆ?
4 ಯೆಹೋವನ ಜನರು ದೇವರ ರಾಜ್ಯದ ಸಂದೇಶವನ್ನು ಇನ್ನಿತರ ಹೊಸ ವಿಧಗಳಲ್ಲೂ ಹುರುಪಿನಿಂದ ಸಾರುತ್ತಿದ್ದಾರೆ. ಉದಾಹರಣೆಗೆ, 1994-95ರ ಸುಮಾರಿಗೆ ಕೇವಲ ಮನೆ-ಮನೆ ಸೇವೆಯಲ್ಲದೆ, ಸಾರ್ವಜನಿಕ ಪಾರ್ಕ್ಗಳಲ್ಲಿ, ವಾಹನ ನಿಲುಗಡೆ ಸ್ಥಳಗಳಲ್ಲಿ, ವಾಣಿಜ್ಯ ಸ್ಥಳಗಳಲ್ಲಿಯೂ ಸುವಾರ್ತೆ ಸಾರತೊಡಗಿದರು. ಇತ್ತೀಚೆಗೆ ಕೆಲವು ದೇಶದ ಮಹಾನಗರಗಳಲ್ಲಿ ವಿಶೇಷ ಸಾರ್ವಜನಿಕ ಸಾಕ್ಷಿಕಾರ್ಯವನ್ನು ಆಯೋಜಿಸಲಾಯಿತು. ಇದರ ಜೊತೆಗೆ, ಅನೇಕ ಸಭೆಗಳು ತಮ್ಮ ಸ್ಥಳೀಯ ಸೇವಾಕ್ಷೇತ್ರದಲ್ಲೂ ಸಾರ್ವಜನಿಕ ಸಾಕ್ಷಿಕಾರ್ಯ ಮಾಡುತ್ತಿವೆ. ಇದನ್ನು ಹೆಚ್ಚು ಜನರು ಓಡಾಡುವ ಪ್ರದೇಶಗಳಲ್ಲಿ ತಳ್ಳುಬಂಡಿ ಮತ್ತು ಮೇಜಿನ ಮೇಲೆ ಸಾಹಿತ್ಯವನ್ನಿಡುವುದರ ಮೂಲಕ ಮಾಡುತ್ತಿವೆ. ಆದರೂ ದೇವರ ರಾಜ್ಯದ ಸುವಾರ್ತೆ ಸಾರುವ ಮುಖ್ಯ ವಿಧಾನ ಮನೆ-ಮನೆ ಸೇವೆಯೇ ಆಗಿದೆ.—ಅ. ಕಾ. 20:20.
5. ಹೊಸ ಸೇವಾ ವರ್ಷದಲ್ಲಿ ನಮ್ಮಲ್ಲಿ ಹೆಚ್ಚಿನವರಿಗೆ ಯಾವ ಅವಕಾಶಗಳಿವೆ?
5 ನಮಗಿರುವ ಅವಕಾಶಗಳು: ಸೆಪ್ಟೆಂಬರ್ನಿಂದ ಆರಂಭವಾಗುವ ಸೇವಾ ವರ್ಷದಲ್ಲಿ ಅನೇಕರು ರೆಗ್ಯುಲರ್ ಪಯನೀಯರ್ ಸೇವೆ ಆರಂಭಿಸುತ್ತಿದ್ದಾರೆ. ನೀವೂ ಅವರಲ್ಲಿ ಒಬ್ಬರಾಗುವಿರೋ? ಒಂದುವೇಳೆ ಸಾಧ್ಯವಾಗದಿದ್ದರೆ, ಆಕ್ಸಿಲಿಯರಿ ಪಯನೀಯರ್ ಸೇವೆಯನ್ನಾದರೂ ಆಗಾಗ ಮಾಡಲು ಸಾಧ್ಯವೇ ನೋಡಿ. ಪಯನೀಯರ್ ಸೇವೆ ಮಾಡಲು ನಿಮ್ಮಿಂದ ಆಗಲಿ, ಆಗದೆ ಹೋಗಲಿ ದೇವರ ರಾಜ್ಯವನ್ನು ಪ್ರಕಟಿಸುವ ಕೆಲಸದಲ್ಲಿ ಸಂಪೂರ್ಣವಾಗಿ ಭಾಗವಹಿಸಲು ನೀವು ತ್ಯಾಗಗಳನ್ನು ಮಾಡುವಲ್ಲಿ ಯೆಹೋವನು ನಿಮ್ಮನ್ನು ಖಂಡಿತ ಆಶೀರ್ವದಿಸುವನು.—ಮಲಾ. 3:10.
6. 2014ರ ಅಕ್ಟೋಬರ್ ತಿಂಗಳು ಏಕೆ ವಿಶೇಷವಾಗಿದೆ?
6 ದೇವರ ರಾಜ್ಯ ಸ್ಥಾಪನೆಯಾಗಿ 2014 ಅಕ್ಟೋಬರ್ಗೆ ನೂರು ವರ್ಷವಾಗುತ್ತದೆ. ಆದ್ದರಿಂದ “ದೇವರ ರಾಜ್ಯದ ಸುವಾರ್ತೆಯನ್ನು” ಕೇಳಲು ಇಷ್ಟಪಡುವ ಎಲ್ಲರಿಗೆ ನಾವೆಲ್ಲರೂ ಸಾರುತ್ತಾ ಮುಂದುವರಿಯೋಣ.— ಅ. ಕಾ. 8:12.