ಶಿಷ್ಯರನ್ನಾಗಿ ಮಾಡುವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಿ
1. ಜನರು ರಕ್ಷಣೆ ಹೊಂದಬೇಕೆಂದರೆ ನಾವೇನು ಮಾಡಬೇಕು?
1 ರಾಜ್ಯದ ಸುವಾರ್ತೆಯನ್ನು ನಾವು ಎಷ್ಟು ಹುರುಪಿನಿಂದ ಮತ್ತು ದೃಢಸಂಕಲ್ಪದಿಂದ ಸಾರುತ್ತಿದ್ದೇವೆ ಎನ್ನುವುದಕ್ಕೆ 2014ರ ಸೇವಾ ವರದಿಯೇ ಸಾಕ್ಷಿಯಾಗಿದೆ. (ಮತ್ತಾ. 24:14) ಮನೆ-ಮನೆ ಸೇವೆ, ವಿಶೇಷ ಅಭಿಯಾನಗಳು ಮತ್ತು ಸಾರ್ವಜನಿಕ ಸಾಕ್ಷಿಕಾರ್ಯಗಳ ಮೂಲಕ ಇಂದು ಹೆಚ್ಚು ಜನರಿಗೆ ಸುವಾರ್ತೆ ಸಾರುತ್ತಿದ್ದೇವೆ. ಆದರೆ ಅವರು ರಕ್ಷಣೆ ಹೊಂದಬೇಕೆಂದರೆ ನಾವು ಅವರಿಗೆ ಬೈಬಲ್ ಅಧ್ಯಯನ ಮಾಡಿ ಯೇಸುವಿನ ಶಿಷ್ಯರನ್ನಾಗಿ ಮಾಡಬೇಕು.—1 ತಿಮೊ. 2:4.
2. ಬೈಬಲ್ ಅಧ್ಯಯನ ನಡೆಸಲು ಸದಾ ಸಿದ್ಧರಾಗಿರುವಂತೆ ಯಾವ ಪ್ರಶ್ನೆಗಳು ನಮ್ಮನ್ನು ಪ್ರಚೋದಿಸುತ್ತವೆ?
2 ಬೈಬಲ್ ಅಧ್ಯಯನ ನಡೆಸಲು ಸದಾ ಸಿದ್ಧರಾಗಿರಿ: ಒಬ್ಬ ವ್ಯಕ್ತಿ ಆಸಕ್ತಿ ತೋರಿಸಿದರೆ ಅವನ ಫೋನ್ ನಂಬರನ್ನು ತೆಗೆದುಕೊಂಡು ಆ ವ್ಯಕ್ತಿಗೆ ಬೈಬಲ್ ಅಧ್ಯಯನ ಮಾಡಬೇಕೆಂಬ ಗುರಿಯಿಂದ ಪುನರ್ಭೇಟಿ ಮಾಡಲು ಪ್ರಯತ್ನಿಸುತ್ತೀರಾ? ಮೊದಲ ಭೇಟಿಯಲ್ಲೇ ಬೈಬಲ್ ಅಧ್ಯಯನ ಮಾಡಲು ಪ್ರಯತ್ನಿಸಿದ್ದೀರಾ? ಪತ್ರಿಕಾ ಮಾರ್ಗದಲ್ಲಿರುವವರಿಗೆ ಬೈಬಲ್ ಅಧ್ಯಯನ ಮಾಡಲು ಕೊನೇ ಬಾರಿ ಪ್ರಯತ್ನಿಸಿದ್ದು ಯಾವಾಗ? ನಿಮ್ಮ ಸಹೋದ್ಯೋಗಿಗಳಿಗೆ, ನೆರೆಯವರಿಗೆ, ಸಂಬಂಧಿಕರಿಗೆ ಅಥವಾ ಪರಿಚಯಸ್ಥರಿಗೆ ಯಾವತ್ತಾದರೂ ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ಅಥವಾ ಬೈಬಲ್ ಅಧ್ಯಯನ ಅಂದರೇನು? ವಿಡಿಯೋಗಳನ್ನು ತೋರಿಸಿದ್ದೀರಾ? ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ಯಾರಾದರೂ ಬೈಬಲ್ ಅಧ್ಯಯನಕ್ಕೆ ಇರುವಂಥ ಸಾಹಿತ್ಯ ತೆಗೆದುಕೊಂಡಲ್ಲಿ ಅವರಿಗೆ ‘ಈ ಸಾಹಿತ್ಯದಿಂದ ಬೈಬಲ್ ಅಧ್ಯಯನ ಮಾಡುತ್ತೇವೆ’ ಎಂದು ತಿಳಿಸಿದ್ದೀರಾ?
3. ಸತ್ಯವನ್ನು ಇತರರಿಗೆ ಚೆನ್ನಾಗಿ ಕಲಿಸಲು ನಮಗೆ ಯಾವೆಲ್ಲ ಸಹಾಯಗಳಿವೆ?
3 ಯೆಹೋವ ಮತ್ತು ಯೇಸುವಿನ ಸಹಾಯ: ‘ಜನರನ್ನು ಶಿಷ್ಯರನ್ನಾಗಿ ಮಾಡಬೇಕು’ ಎಂಬ ಆಜ್ಞೆಯ ಬಗ್ಗೆ ತಿಳಿಸುವಾಗ ಮೊದಲಾಗಿ ಯೇಸು “ಹೊರಟುಹೋಗಿ” ಎಂದು ಹೇಳಿದನು. ಇದರರ್ಥ, ಈ ಕೆಲಸಕ್ಕಾಗಿ ನಾವು ಪ್ರಯತ್ನ ಹಾಕಬೇಕು ಮತ್ತು ಪ್ರಥಮ ಹೆಜ್ಜೆ ತೆಗೆದುಕೊಳ್ಳಬೇಕು ಎಂದಾಗಿದೆ. ಆದರೆ ಯೇಸು ‘ಶಿಷ್ಯರನ್ನಾಗಿ ಮಾಡಿ’ ಎಂದಷ್ಟೇ ಹೇಳದೆ ‘ನಾನು ನಿಮ್ಮ ಜೊತೆ ಯಾವಾಗಲೂ ಇರುತ್ತೇನೆ’ ಎಂದು ಮಾತುಕೊಟ್ಟನು. (ಮತ್ತಾ. 28:19, 20) ಜೊತೆಗೆ, ಯೆಹೋವ ದೇವರು ನಮಗೆ ಪವಿತ್ರಾತ್ಮದ ಸಹಾಯವನ್ನು, ಜನರಿಗೆ ಸತ್ಯವನ್ನು ಕಲಿಸಲು ಬೇಕಾದ ಸಾಧನಗಳನ್ನು ಮತ್ತು ತರಬೇತಿಯನ್ನು ಕೊಟ್ಟಿದ್ದಾನೆ. (ಜೆಕ. 4:6; 2 ಕೊರಿಂ. 4:7) ಆದ್ದರಿಂದ, ಈ ಕೆಲಸದಲ್ಲಿ ಭಾಗವಹಿಸಲು ಬೇಕಾದ ಸಿದ್ಧಮನಸ್ಸು ಮತ್ತು ಶಕ್ತಿಗಾಗಿ ಯೆಹೋವನಲ್ಲಿ ಪ್ರಾರ್ಥಿಸೋಣ.—ಫಿಲಿ. 2:13.
4. ಶಿಷ್ಯರನ್ನಾಗಿ ಮಾಡುವ ಕೆಲಸಕ್ಕೆ ನಾವೇಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು?
4 ಸುವಾರ್ತೆ ಸಾರುವುದರಿಂದ ನಮಗೆ ಸಂತೋಷವಾಗುತ್ತದೆ ಎನ್ನುವುದೇನೋ ನಿಜ. ಆದರೆ ಒಬ್ಬ ವ್ಯಕ್ತಿಗೆ ಸತ್ಯವನ್ನು ಕಲಿಸಿ ‘ಜೀವಕ್ಕೆ ನಡಿಸುವ ದಾರಿಯಲ್ಲಿ’ ನಮ್ಮೊಂದಿಗೆ ನಡೆಯುವಂತೆ ಆತನಿಗೆ ಸಹಾಯ ಮಾಡುವಾಗ ನಮಗೆ ಇನ್ನೂ ಹೆಚ್ಚು ಸಂತೋಷವಾಗುತ್ತದೆ. (ಮತ್ತಾ. 7:14; 1 ಥೆಸ. 2:19, 20) ಎಲ್ಲದಕ್ಕಿಂತ ಹೆಚ್ಚಾಗಿ, ‘ಯಾವನಾದರೂ ನಾಶವಾಗುವುದನ್ನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪ ಹೊಂದಬೇಕೆಂದು’ ಬಯಸುವ ಯೆಹೋವ ದೇವರನ್ನು ನಾವು ಸಂತೋಷ ಪಡಿಸುತ್ತೇವೆ. (2 ಪೇತ್ರ 3:9) ಆದ್ದರಿಂದ, ನಾವು “ಶಿಷ್ಯರನ್ನಾಗಿ” ಮಾಡುವ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು.