ಪ್ರಶ್ನಾ ಚೌಕ
◼ ಬೇರೆ ದೇಶದಲ್ಲಿರುವ ಅಪರಿಚಿತರಿಗೆ ಸುವಾರ್ತೆ ಸಾರಲು ಅಥವಾ ಬೈಬಲ್ ಅಧ್ಯಯನ ಮಾಡಲು ಪ್ರಚಾರಕರು ಇಂಟರ್‌ನೆಟ್ ಬಳಸಬಹುದೋ?
ಸಾರುವ ಕೆಲಸವನ್ನು ನಿರ್ಬಂಧಿಸಿರುವ ಮತ್ತು ಕಡಿಮೆ ಪ್ರಚಾರಕರಿರುವ ದೇಶಗಳಲ್ಲಿನ ಜನರಿಗೆ ಬೈಬಲ್ ಅಧ್ಯಯನ ಮಾಡಲು ಪ್ರಚಾರಕರು ಇಂಟರ್‌ನೆಟ್ ಉಪಯೋಗಿಸುತ್ತಿದ್ದಾರೆ. ಕೆಲವೊಮ್ಮೆ ಇದರಿಂದ ಒಳ್ಳೆಯ ಫಲಿತಾಂಶಗಳೂ ಸಿಕ್ಕಿವೆ. ಆದರೆ ಅಪರಿಚಿತ ವ್ಯಕ್ತಿಗೆ ಇ-ಮೇಲ್ ಕಳಿಸುವುದರಿಂದ ಅಥವಾ ಆನ್‌ಲೈನ್‌ನಲ್ಲಿ ಬೈಬಲ್ ಬಗ್ಗೆ ಮಾತಾಡುವುದರಿಂದ ಅಪಾಯಗಳಿವೆ ಅನ್ನುವುದನ್ನು ಮರೆಯಬೇಡಿ. (ಜುಲೈ 2007, ನಮ್ಮ ರಾಜ್ಯ ಸೇವೆ ಪುಟ 3ನ್ನು ನೋಡಿ.) ಎಲ್ಲ ಜನರಿಗೂ ಸುವಾರ್ತೆ ತಿಳಿಸಬೇಕೆಂಬ ಉದ್ದೇಶ ನಮಗಿದ್ದರೂ, ನಮಗೇ ಗೊತ್ತಿಲ್ಲದೆ ನಾವು ಕೆಟ್ಟ ಸಹವಾಸಕ್ಕೆ ಬೀಳಬಹುದು, ಧರ್ಮಭ್ರಷ್ಟರೊಂದಿಗೂ ಸಹವಾಸ ಮಾಡುವ ಸಾಧ್ಯತೆ ಇದೆ. (1 ಕೊರಿಂ. 1:19-25; ಕೊಲೊ. 2:8) ಸಾರುವ ಕೆಲಸಕ್ಕೆ ನಿರ್ಬಂಧ ಇರುವ ದೇಶಗಳಲ್ಲಿ ನಾವು ಇಂಟರ್‌ನೆಟ್ ಮೂಲಕ ಸುವಾರ್ತೆ ಸಾರಿದರೆ ಅದು ಅಲ್ಲಿನ ಅಧಿಕಾರಿಗಳ ಗಮನಕ್ಕೆ ಬರಬಹುದು. ಇದರಿಂದ ಅಲ್ಲಿನ ಸಹೋದರ ಸಹೋದರಿಯರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರಚಾರಕರು ಬೇರೆ ದೇಶದ ಜನರಿಗೆ ಇಂಟರ್‌ನೆಟ್ ಮೂಲಕ ಸುವಾರ್ತೆ ಸಾರಬಾರದು.
ಒಬ್ಬ ವಿದೇಶಿ ವ್ಯಕ್ತಿಗೆ ಸಾರಿದಾಗ ಅವನು ಆಸಕ್ತಿ ತೋರಿಸಿದರೆ, ಅವನು ತನ್ನ ದೇಶಕ್ಕೆ ಹೋದ ನಂತರ ನಮ್ಮ ಬ್ರಾಂಚ್‌ನ ನಿರ್ದೇಶನವಿಲ್ಲದೆ ನಾವು ಆ ವ್ಯಕ್ತಿಯನ್ನು ಪುನರ್ಭೇಟಿ ಮಾಡಬಾರದು. ಬದಲಿಗೆ, jw.org ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿಯನ್ನು ಹೇಗೆ ಪಡೆಯಬಹುದೆಂದು ತೋರಿಸಿಕೊಡಿ ಅಥವಾ ಅವನ ದೇಶದ ಬ್ರಾಂಚ್ ಆಫೀಸನ್ನು ಹೇಗೆ ಸಂಪರ್ಕಿಸಬಹುದೆಂದು ತಿಳಿಸಿ. ಆ ದೇಶದಲ್ಲಿ ರಾಜ್ಯ ಸಭಾಗೃಹಗಳು ಇರುವುದಾದರೆ ಆತನ ಮನೆಗೆ ಹತ್ತಿರದಲ್ಲಿರುವ ಸಭಾಗೃಹಕ್ಕೆ ಹೋಗುವಂತೆ ಪ್ರೋತ್ಸಾಹಿಸಬಹುದು. ತನ್ನ ಮನೆಗೆ ಸಾಕ್ಷಿಗಳು ಬರಬೇಕೆಂದು ಆ ವ್ಯಕ್ತಿ ಕೇಳಿಕೊಳ್ಳುವುದಾದರೆ ಪ್ಲೀಸ್ ಫಾಲೋ ಅಪ್ (S-43) ಫಾರ್ಮನ್ನು ಭರ್ತಿ ಮಾಡಿ ಸಭಾ ಸೆಕ್ರೆಟರಿಗೆ ಕೊಡಿ. ಅವರದನ್ನು jw.org ವೆಬ್‌ಸೈಟ್ ಮೂಲಕ ಬ್ರಾಂಚ್ ಆಫೀಸಿಗೆ ಕಳುಹಿಸುತ್ತಾರೆ. ಆ ವಿದೇಶಿ ವ್ಯಕ್ತಿ ಇರುವ ದೇಶದ ಬ್ರಾಂಚ್ ಆಫೀಸಿಗೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ಚೆನ್ನಾಗಿ ಗೊತ್ತಿರುವುದರಿಂದ ಅವನಿಗೆ ಆ ಬ್ರಾಂಚ್ ಆಫೀಸಿನವರೇ ಸರಿಯಾದ ಸಹಾಯ ನೀಡಬಲ್ಲರು.—ನವೆಂಬರ್ 2011 ನಮ್ಮ ರಾಜ್ಯ ಸೇವೆಯ ಪುಟ 2ನ್ನು ನೋಡಿ.
ನಾವು ಪುನರ್ಭೇಟಿ ಮಾಡುತ್ತಿರುವ ವ್ಯಕ್ತಿ ವಿದೇಶಕ್ಕೆ ಹೋದರೆ ಅಥವಾ ಈಗಾಗಲೇ ಒಬ್ಬ ವಿದೇಶಿ ವ್ಯಕ್ತಿಗೆ ಇಂಟರ್‌ನೆಟ್‌ನ ಮೂಲಕ ನಾವು ಬೈಬಲ್ ಅಧ್ಯಯನ ಮಾಡುತ್ತಿದ್ದರೆ ಆಗೇನು? ಆಗಲೂ, ಮೇಲೆ ತಿಳಿಸಲಾಗಿರುವ ಸಲಹೆ ಸೂಚನೆಗಳನ್ನೇ ಪಾಲಿಸಬೇಕು. ಆದರೆ ಆ ಆಸಕ್ತ ವ್ಯಕ್ತಿ ಇರುವ ಪ್ರದೇಶದಲ್ಲಿನ ಪ್ರಚಾರಕನೊಬ್ಬನು ಅವನನ್ನು ಭೇಟಿಯಾಗುವವರೆಗೆ ನೀವು ಇಂಟರ್‌ನೆಟ್‌ನ ಮೂಲಕ ಆಸಕ್ತಿಯನ್ನು ಬೆಳೆಸುತ್ತಾ ಇರಬಹುದು. ಆ ಆಸಕ್ತ ವ್ಯಕ್ತಿ ಸಾರುವ ಕೆಲಸ ನಿರ್ಬಂಧಿಸಲ್ಪಟ್ಟಿರುವ ದೇಶದವನಾಗಿದ್ದಲ್ಲಿ ಪತ್ರ, ಟೆಲಿಫೋನ್, ಇಂಟರ್‌ನೆಟ್ ಮೂಲಕ ಬೈಬಲ್ ಬಗ್ಗೆ ಚರ್ಚಿಸುವಾಗ ಪ್ರಚಾರಕರು ತುಂಬ ಜಾಗರೂಕರಾಗಿರಬೇಕು.—ಮತ್ತಾ. 10:16.