ಜೀವನ ಕಥೆ
ಯೆಹೋವನನ್ನ ಮನಸ್ಸಲ್ಲಿಟ್ಟು ತೀರ್ಮಾನಗಳನ್ನ ಮಾಡಿದೆ
ಇಸವಿ 1984ರಲ್ಲಿ ಒಂದಿನ ಬೆಳಿಗ್ಗೆ ಕೆಲಸಕ್ಕೆ ಹೋಗ್ತಾ ಇದ್ದೆ. ನಮ್ಮನೆ ಇರೋದು ವೆನೆಜ಼ುವೆಲದ ಕಾರಾಕಾಸ್‌ನಲ್ಲಿ. ದಾರಿಯಲ್ಲಿ ಹೋಗ್ತಾ ಇದ್ದಾಗ ಕಾವಲಿನಬುರುಜು ಪತ್ರಿಕೆಯಲ್ಲಿ ಓದಿದ್ದ ಒಂದು ವಿಷಯದ ಬಗ್ಗೆ ಯೋಚನೆ ಮಾಡಿಕೊಂಡು ಹೋಗ್ತಿದ್ದೆ. ಅದ್ರಲ್ಲಿ ನಮ್ಮ ಅಕ್ಕಪಕ್ಕದವರು ನಮ್ಮನ್ನ ಹೇಗೆ ನೋಡ್ತಾರೆ ಅನ್ನೋದರ ಬಗ್ಗೆ ಇತ್ತು. ಸುತ್ತಮುತ್ತ ನೋಡ್ತಾ ಈ ಜನ ನನ್ನನ್ನ ‘ಬ್ಯಾಂಕಲ್ಲಿ ಕೆಲಸ ಮಾಡೋ ಒಬ್ಬ ಶ್ರೀಮಂತ ವ್ಯಕ್ತಿ’ ಅಂತ ಅಂದ್ಕೊಂಡಿದ್ದಾರಾ ಅಥವಾ ‘ಇವನು ದೇವರ ಸೇವೆ ಮಾಡ್ತಾನೆ, ಮನೆ ನೋಡಿಕೊಳ್ಳೋಕೆ ಬ್ಯಾಂಕಲ್ಲಿ ಕೆಲಸ ಮಾಡ್ತಾನೆ’ ಅಂತ ಅಂದ್ಕೊಂಡಿದ್ದಾರಾ ಅಂತ ಯೋಚಿಸ್ತಿದ್ದೆ. ಜನ ನನ್ನನ್ನ ಒಬ್ಬ ಶ್ರೀಮಂತ ವ್ಯಕ್ತಿಯಾಗಿ ಮಾತ್ರ ನೋಡ್ತಿದ್ದಾರೆ ಅಂತ ನಂಗೆ ಗೊತ್ತಾಯ್ತು. ಅದು ನಂಗೆ ಇಷ್ಟ ಆಗಲಿಲ್ಲ. ಅದಕ್ಕೆ ಕೆಲವು ತೀರ್ಮಾನಗಳನ್ನ ಮಾಡಿದೆ.
ನಮ್ಮೂರು ಲೆಬನನ್‌ನ ಅಮುಯೂನ್. ನಾನು ಹುಟ್ಟಿದ್ದು ಮೇ 19, 1940ರಲ್ಲಿ. ಸ್ವಲ್ಪ ವರ್ಷ ಆದಮೇಲೆ ನಾವೆಲ್ಲ ಕುಟುಂಬ ಸಮೇತ ಟ್ರಿಪೊಲಿ ನಗರದಲ್ಲಿ ಮನೆ ಮಾಡಿದ್ವಿ. ನಾವೆಲ್ಲ ಯೆಹೋವ ದೇವರನ್ನ ಆರಾಧನೆ ಮಾಡ್ತಾ ಖುಷಿಖುಷಿಯಾಗಿ ಇದ್ವಿ. ನಾವು 5 ಜನ ಮಕ್ಕಳು. ಮೂರು ಹುಡುಗೀರು, ಇಬ್ಬರು ಹುಡುಗರು. ಅದ್ರಲ್ಲಿ ನಾನೇ ಕೊನೆಯವನು. ಅಪ್ಪಅಮ್ಮಗೆ ದುಡ್ಡು ಮಾಡೋದು ಮುಖ್ಯ ಆಗಿರಲಿಲ್ಲ. ಬೈಬಲ್ ಸ್ಟಡಿ, ಮೀಟಿಂಗ್, ಸೇವೆ ಮುಖ್ಯ ಆಗಿತ್ತು.
ನಮ್ಮ ಸಭೇಲಿ ತುಂಬ ಅಭಿಷಿಕ್ತರು ಇದ್ರು. ಅವರಲ್ಲಿ ಒಬ್ಬರು ಮಿಶೆಲ್ ಆಬೂದ್. ಅವರು ಸತ್ಯ ಕಲ್ತಿದ್ದು ನ್ಯೂಯಾರ್ಕಲ್ಲಿ. 1921ರಲ್ಲಿ ಲೆಬನನ್‌ಗೆ ಸತ್ಯ ತಂದ್ರು. ಅವರೇ ನಮಗೆ ಬುಕ್ ಸ್ಟಡಿ ಮಾಡ್ತಾ ಇದ್ದಿದ್ದು. ಗಿಲ್ಯಡ್ ಶಾಲೆಯಿಂದ ಪದವಿ ಪಡೆದು ಆ್ಯನ್ ಮತ್ತು ಗ್ವೆನ್ ಬೀವರ್ ಅನ್ನೋ ಇಬ್ಬರು ಸಹೋದರಿಯರು ಲೆಬನನ್‌ಗೆ ಸೇವೆ ಮಾಡೋಕೆ ಬಂದ್ರು. ಅವರಿಗೆ ಸಹೋದರ ಆಬೂದ್ ತುಂಬ ಸಹಾಯ ಮಾಡಿದ್ರು. ನಾವೆಲ್ಲ ಒಳ್ಳೇ ಫ್ರೆಂಡ್ಸ್ ಆದ್ವಿ. ತುಂಬ ವರ್ಷ ಆದಮೇಲೆ ಅಮೆರಿಕದಲ್ಲಿ ನಂಗೆ ಆ್ಯನ್ ಸಿಕ್ಕಿದ್ರು. ತುಂಬ ಖುಷಿ ಆಯ್ತು. ಸ್ವಲ್ಪ ದಿನಗಳಾದ ಮೇಲೆ ಗ್ವೆನ್ ಕೂಡ ಸಿಕ್ಕಿದ್ರು. ಅವರು ವಿಲ್‌ಫ್ರೆಡ್ ಗೂಚ್ ಅವರನ್ನ ಮದುವೆಯಾಗಿ ಲಂಡನ್ ಬೆತೆಲಲ್ಲಿ ಸೇವೆ ಮಾಡ್ತಿದ್ರು.
ಲೆಬನನಿನಲ್ಲಿ ಕೂಡಿಟ್ಟ ನೆನಪುಗಳು
ನಾನು ಚಿಕ್ಕವನಿದ್ದಾಗ ಲೆಬನನಿನಲ್ಲಿ ಸ್ವಲ್ಪ ಜನ ಯೆಹೋವನ ಸಾಕ್ಷಿಗಳಿದ್ರು ಅಷ್ಟೇ. ಸ್ವಲ್ಪ ಜನ ಇದ್ರೂ ತುಂಬ ಹುರುಪಿಂದ ಸಿಹಿಸುದ್ದಿ ಸಾರುತ್ತಾ ಇದ್ವಿ. ಇದ್ರಿಂದ ಧರ್ಮಗುರುಗಳು ರೊಚ್ಚಿಗೆದ್ದಿದ್ರು. ಅಂಥ ಕೆಲವು ಘಟನೆಗಳು ನನಗಿನ್ನೂ ನೆನಪಿದೆ.
ಒಂದು ದಿನ ನಾನು, ನನ್ನ ಅಕ್ಕ ಒಂದ್ ಅಪಾರ್ಟ್‌ಮೆಂಟಿಗೆ ಸಾರೋಕೆ ಹೋಗಿದ್ವಿ. ಇದ್ದಕ್ಕಿದ್ದ ಹಾಗೆ ಅಲ್ಲಿಗೆ ಒಬ್ಬ ಪಾದ್ರಿ ಬಂದ. ಬೇಕಂತಾನೇ ಯಾರೋ ಅವನನ್ನ ಕರೆಸಿದ್ರು ಅನ್ಸುತ್ತೆ. ಆ ಪಾದ್ರಿ ನನ್ನ ಅಕ್ಕನ್ನ ಬೈಯೋಕೆ ಶುರು ಮಾಡ್ದ. ಮೆಟ್ಲು ಮೇಲಿಂದ ಅವಳನ್ನ ತಳ್ಳಿಬಿಟ್ಟ. ಅವಳಿಗೆ ತುಂಬ ಗಾಯ ಆಯ್ತು. ಅಲ್ಲಿದ್ದ ಕೆಲವರು ತಕ್ಷಣ ಪೊಲೀಸಿಗೆ ಫೋನ್ ಮಾಡಿದ್ರು. ಅಕ್ಕನಿಗೂ ಸಹಾಯ ಮಾಡಿದ್ರು. ಆ ಪಾದ್ರಿನ ಪೊಲೀಸ್ ಸ್ಟೇಶನ್‌ಗೆ ಕರ್ಕೊಂಡು ಹೋದ್ರು. ಆಗ ಅವನ ಹತ್ರ ಗನ್ ಇದ್ದಿದ್ದು ಗೊತ್ತಾಯ್ತು. ಅದನ್ನ ನೋಡಿ ಪೊಲೀಸ್ ಅಧಿಕಾರಿ ಆ ಪಾದ್ರಿಗೆ ‘ನೀನು ಪಾದ್ರಿನಾ ಇಲ್ಲ ಡಾನಾ?’ ಅಂತ ಕೇಳಿದ್ರು.
ಇನ್ನೊಂದ್ ಸಲ ಏನಾಯ್ತಂದ್ರೆ, ನಮ್ ಸಭೆಯಿಂದ ಬಸ್ ಮಾಡ್ಕೊಂಡು ದೂರದ ಊರಿಗೆ ಹೋಗಿ ಸೇವೆ ಮಾಡ್ತಾ ಇದ್ವಿ. ಇದ್ದಕ್ಕಿದ್ದ ಹಾಗೆ ಒಬ್ಬ ಪಾದ್ರಿ ಗಲಾಟೆ ಮಾಡೋಕೆ ಅಲ್ಲಿರೋ ಜನ್ರನ್ನ ಸೇರಿಸಿಬಿಟ್ಟ. ಅವರು ನಮಗೆ ಬಾಯಿಗೆ ಬಂದ ಹಾಗೆಲ್ಲ ಬೈದ್ರು. ಕಲ್ಲು ತಗೊಂಡು ಹೊಡಿಯೋಕೆ ಶುರು ಮಾಡಿದ್ರು. ನಮ್ಮಪ್ಪಾಗೆ ತುಂಬ ಏಟಾಯ್ತು. ಅವರಿಗೆ ರಕ್ತ ಸುರಿತಾ ಇದ್ದಿದ್ದು ಈಗ್ಲೂ ನನ್ ಕಣ್ಣ ಮುಂದೆ ಹಾಗೇ ಇದೆ. ನಮ್ಮಮ್ಮ ಅಪ್ಪನ್ನ ಕರ್ಕೊಂಡು ಬೇಗ ಬೇಗ ಬಸ್ ಹತ್ರ ಹೋದ್ರು. ಗಾಬರಿಯಿಂದ ನಾವೆಲ್ಲ ಅವರ ಹಿಂದೆನೇ ಹೋದ್ವಿ. ಅಪ್ಪಾಗೆ ಅಮ್ಮ ಔಷಧಿ ಹಚ್ತಿದ್ದಾಗ, ‘ಯೆಹೋವ ದೇವ್ರೇ, ಈ ಜನರನ್ನ ಕ್ಷಮಿಸಿಬಿಡಪ್ಪಾ, ಅವ್ರೇನ್ ಮಾಡ್ತಿದ್ದಾರೆ ಅಂತ ಅವ್ರಿಗೇ ಗೊತ್ತಿಲ್ಲ.’ ಅಂತ ಬೇಡ್ಕೊಂಡಿದ್ದು ನನಗೆ ಈಗ್ಲೂ ನೆನಪಿದೆ.
ಒಂದಿನ ನಾವು ತಾತನ ಮನೆಗೆ ಹೋಗಿದ್ವಿ. ಅಲ್ಲಿಗೆ ಒಬ್ಬ ಬಿಷಪ್ ಬಂದಿದ್ರು. ನಮ್ ಅಪ್ಪ ಅಮ್ಮ ಯೆಹೋವನ ಸಾಕ್ಷಿಗಳು ಅಂತ ಅವರಿಗೆ ಚೆನ್ನಾಗಿ ಗೊತ್ತಿತ್ತು. ಅವರು ನನ್ನ ಕರೆದು ‘ಯಾಕೆ ನೀನಿನ್ನೂ ದೀಕ್ಷಾಸ್ನಾನ ತಗೊಂಡಿಲ್ಲ’ ಅಂತ ಕೇಳಿದ್ರು. ಆಗ ನಂಗಿನ್ನೂ 6 ವರ್ಷ. ಅದಕ್ಕೆ ನಾನು ‘ನಾನಿನ್ನೂ ಚಿಕ್ಕವನು, ದೀಕ್ಷಾಸ್ನಾನ ತಗೊಬೇಕಂದ್ರೆ ಬೈಬಲ್ ಬಗ್ಗೆ ಇನ್ನೂ ಸ್ವಲ್ಪ ಚೆನ್ನಾಗಿ ತಿಳ್ಕೊಂಡಿರಬೇಕು, ನಂಬಿಕೆ ಇರಬೇಕು’ ಅಂತ ಹೇಳಿದೆ. ಅದು ಅವರಿಗೆ ಇಷ್ಟ ಆಗ್ಲಿಲ್ಲ. ತಾತನ ಹತ್ರ ಹೋಗಿ ‘ನಿಮ್ ಮೊಮ್ಮಗ ಸ್ವಲ್ಪನೂ ಮರ್ಯಾದೆನೇ ಇಲ್ದೆ ಮಾತಾಡ್ತಾನೆ’ ಅಂತ ಬೈದ್ರು.
ಈ ತರ ಎಲ್ಲೋ ಒಂದೊಂದು ಘಟನೆಗಳು ನಡೀತಿತ್ತು ಅಷ್ಟೇ. ಯಾಕಂದ್ರೆ ಲೆಬನನ್ ಜನರು ತುಂಬ ಒಳ್ಳೆಯವ್ರು. ನಮಗೆ ತುಂಬ ಬೈಬಲ್ ಅಧ್ಯಯನಗಳು ಸಿಕ್ತಿತ್ತು. ಅದನ್ನೆಲ್ಲ ಎಂಜಾಯ್ ಮಾಡ್ತಿದ್ವಿ.
ವೆನೆಜ಼ುವೆಲದಲ್ಲಿ ಹೊಸ ಜೀವನ
ನಾನಿನ್ನೂ ಸ್ಕೂಲಿಗೆ ಹೋಗ್ತಿದ್ದೆ. ಆಗ ವೆನೆಜ಼ುವೆಲದಿಂದ ಒಬ್ಬ ಸಹೋದರ ಲೆಬನನ್‌ಗೆ ಬಂದಿದ್ರು. ಅವರು ನಮ್ ಸಭೆಗೆ ಬರ್ತಿದ್ರು. ನಮ್ಮಕ್ಕ ವಫಾ ಅವರಿಗೆ ಇಷ್ಟ ಆದಳು. ಆಮೇಲೆ ಅವರಿಬ್ರೂ ಮದ್ವೆ ಆಗಿ ವೆನೆಜ಼ುವೆಲಾಗೆ ಹೊರಟುಹೋದ್ರು. ಆದ್ರೆ ನಮ್ಮಕ್ಕಂಗೆ ನಮ್ಮನ್ನ ಬಿಟ್ಟಿರೋಕೆ ಆಗ್ಲಿಲ್ಲ. ಅದಕ್ಕೆ ಅವಳು ‘ನಂಗೆ ನಿಮ್ಮ ನೆನಪು ತುಂಬ ಕಾಡ್ತಿದೆ, ಎಲ್ರೂ ಇಲ್ಲಿಗೇ ಬಂದುಬಿಡಿ’ ಅಂತ ನಮ್ಮಪ್ಪಾಗೆ ಪತ್ರ ಬರೆದಳು. ಕೊನೆಗೂ ನಾವೆಲ್ಲ ಅಲ್ಲಿಗೇ ಹೋಗೋ ತರ ನಮ್ಮಕ್ಕ ಮಾಡಿಬಿಟ್ಟಳು.
ನಾವು 1953ರಲ್ಲಿ ವೆನೆಜ಼ುವೆಲಾಗೆ ಬಂದ್ವಿ. ಅಲ್ಲಿ ಕಾರಾಕಾಸ್ ನಗರದಲ್ಲಿ ನಾವು ಮನೆ ಮಾಡ್ಕೊಂಡ್ವಿ. ಅದು ರಾಷ್ಟ್ರಪತಿ ಭವನದ ಹತ್ರ ಇತ್ತು. ರಾಷ್ಟ್ರಪತಿ ದೊಡ್ಡ ಕಾರಲ್ಲಿ ಆ ಕಡೆ ಬರ್ತಾ ಇದ್ದಿದ್ದು ನನಗಿನ್ನೂ ನೆನಪಿದೆ. ಇನ್ನೊಂದ್ ಕಡೆ ನಮ್ಮಪ್ಪ ಅಮ್ಮಗೆ ಈ ಹೊಸ ಜಾಗ, ಹೊಸ ಭಾಷೆ, ಸಂಸ್ಕೃತಿ, ಊಟ ಮತ್ತು ವಾತಾವರಣಕ್ಕೆಲ್ಲ ಹೊಂದ್ಕೊಳ್ಳೋಕೆ ಕಷ್ಟ ಆಗ್ತಿತ್ತು. ಅವರು ಇನ್ನೇನು ಹೊಂದಿಕೊಳ್ಳಬೇಕು ಅನ್ನೋ ಅಷ್ಟರಲ್ಲಿ ನಮ್ ಎದೆನೇ ಒಡೆದುಹೋಗೋ ಘಟನೆ ನಡಿತು.
ಎಡದಿಂದ ಬಲಕ್ಕೆ: ಅಪ್ಪ ಅಮ್ಮ ನಾನು 1953ರಲ್ಲಿ ವೆನೆಜ಼ುವೆಲಗೆ ಬಂದಾಗ
ನಿಂತ ನೆಲ ಕುಸಿದ ಹಾಗಾಯ್ತು
ಅಪ್ಪ ಯಾವಾಗ್ಲೂ ಗಟ್ಟಿಮುಟ್ಟಾಗಿ ಆರೋಗ್ಯವಾಗಿ ಇರುತ್ತಿದ್ರು. ಅವರಿಗೆ ಹುಷಾರಿಲ್ಲದೆ ಇದ್ದಿದ್ದನ್ನ ನಾನು ನೋಡೇ ಇರಲಿಲ್ಲ. ಆದ್ರೆ ಇದ್ದಕ್ಕಿದ್ದ ಹಾಗೆ ತುಂಬ ಹುಷಾರು ತಪ್ಪಿಹೋದ್ರು. ಅವರಿಗೆ ಕ್ಯಾನ್ಸರ್ ಇದೆ ಅಂತ ಗೊತ್ತಾಯ್ತು. ಆಪರೇಷನ್ ಆದಮೇಲೆ ಒಂದು ವಾರದಲ್ಲೇ ತೀರಿಕೊಂಡ್ರು.
ನಂಗಿನ್ನೂ ಆಗ 13 ವರ್ಷ, ನಂಗೆ ಎಷ್ಟು ನೋವಾಯ್ತು ಅಂತ ಮಾತಲ್ಲಿ ಹೇಳಕ್ಕಾಗಲ್ಲ. ನಮಗೆ ದಿಕ್ಕೇ ಕಾಣದ ಹಾಗೆ ಆಗೋಯ್ತು. ಎಲ್ಲಾ ಮುಗೀತು ಅಂತ ಅನಿಸ್ತಿತ್ತು. ನಮ್ಮ ಅಮ್ಮಗಂತೂ ಅಪ್ಪ ಇಲ್ಲ ಅನ್ನೋದನ್ನ ಒಪ್ಪಿಕೊಳ್ಳೋಕೇ ಆಗುತ್ತಿರಲಿಲ್ಲ. ಆದ್ರೂ ನಾವು ಜೀವನ ಸಾಗಿಸಲೇಬೇಕು ಅಂತ ಅರ್ಥ ಮಾಡಿಕೊಂಡ್ವಿ. ಯೆಹೋವ ದೇವರ ಸಹಾಯದಿಂದ ಆ ನೋವನ್ನ ಮರಿಯೋಕೆ ಆಯ್ತು. ನಂಗೆ 16 ವರ್ಷ ಆದಾಗ ಸ್ಕೂಲ್ ಮುಗಿತು. ಚೆನ್ನಾಗಿ ದುಡಿದು ನನ್ನ ಕುಟುಂಬನ ಸಾಕಬೇಕು ಅಂತ ತುಂಬ ಆಸೆ ಇತ್ತು.
ಯೆಹೋವ ದೇವರ ಜೊತೆ ಸ್ನೇಹ ಬೆಳೆಸಿಕೊಳ್ಳೋಕೆ ಸನಾ ಅಕ್ಕ, ರೂಬೆನ್ ಭಾವ ತುಂಬ ಸಹಾಯ ಮಾಡಿದ್ರು
ಸಹೋದರ ರೂಬೆನ್ ಅರವೋ ಆಗಷ್ಟೆ ಗಿಲ್ಯಡ್ ಮುಗಿಸಿ ವೆನೆಜ಼ುವೆಲಗೆ ಬಂದಿದ್ರು. ಅವರ ಜೊತೆ ನಮ್ಮ ಅಕ್ಕ ಸನಾಗೆ ಮದುವೆ ಆಯ್ತು. ಆಮೇಲೆ ಅವರಿಬ್ಬರು ನ್ಯೂಯಾರ್ಕಿಗೆ ಹೋಗಿಬಿಟ್ರು. ನಾನು ಅವರ ಮನೆಯಿಂದಾನೇ ಯೂನಿವರ್ಸಿಟಿಗೆ ಓದೋಕೆ ಹೋಗ್ತಿದ್ದೆ. ನಾನು ಅಲ್ಲಿ ಇದ್ದಷ್ಟು ದಿನ ಯೆಹೋವ ದೇವರ ಜೊತೆ ಒಳ್ಳೇ ಸ್ನೇಹ ಬೆಳೆಸಿಕೊಳ್ಳೋಕೆ ಅಕ್ಕ-ಭಾವ ತುಂಬ ಸಹಾಯ ಮಾಡಿದ್ರು. ಬ್ರೂಕ್ಲಿನ್ ಸ್ಪ್ಯಾನಿಷ್ ಸಭೇಲಿ ಅನುಭವ ಇರೋ ಸಹೋದರರು ತುಂಬಾ ಜನ ಇದ್ರು. ಅವರಲ್ಲಿ ಇಬ್ಬರು ನಂಗೆ ತುಂಬ ಇಷ್ಟ, ಅವರು ಮಿಲ್ಟನ್ ಹೆನ್ಶೆಲ್ ಮತ್ತು ಫ್ರೆಡ್ರಿಕ್ ಫ್ರಾನ್ಸ್. ಅವರಿಬ್ರೂ ಬ್ರೂಕ್ಲಿನ್ ಬೆತೆಲಲ್ಲಿ ಸೇವೆ ಮಾಡ್ತಿದ್ರು.
1957ರಲ್ಲಿ ದೀಕ್ಷಾಸ್ನಾನ ತಗೊಂಡೆ
ಒಂದನೇ ವರ್ಷದ ಓದು ಮುಗಿತಾ ಬರ್ತಾ ಇತ್ತು. ಆಗ ನನ್ನ ಜೀವನದ ಗುರಿ ಏನು ಅಂತ ಯೋಚನೆ ಮಾಡೋಕೆ ಶುರುಮಾಡಿದೆ. ಯೆಹೋವನ ಸೇವೆ ಮಾಡೋ ಗುರಿ ಇಟ್ಟವರ ಅನುಭವಗಳನ್ನ ಕಾವಲಿನಬುರುಜು ಪತ್ರಿಕೆಗಳಲ್ಲಿ ಓದಿದೆ. ನಮ್ಮ ಸಭೇಲಿ ಪಯನೀಯರಿಂಗ್ ಮಾಡ್ತಿದ್ದವರು, ಬೆತೆಲಲ್ಲಿ ಸೇವೆ ಮಾಡ್ತಿದ್ದವರು ತುಂಬ ಖುಷಿ-ಖುಷಿಯಾಗಿ ಇರುತ್ತಿದ್ರು. ಅವರನ್ನ ನೋಡಿದಾಗ ನಾನೂ ಅವರ ತರ ಇರಬೇಕು ಅಂತ ಅನಿಸ್ತು. ಆದ್ರೆ ನನಗಿನ್ನೂ ದೀಕ್ಷಾಸ್ನಾನ ಆಗಿರಲಿಲ್ಲ. ನನ್ನ ಜೀವನನ ಮೊದ್ಲು ಯೆಹೋವ ದೇವರಿಗೆ ಸಮರ್ಪಣೆ ಮಾಡಬೇಕು ಅಂತ ಅರ್ಥ ಆಯ್ತು. 1957, ಮಾರ್ಚ್ 30ಕ್ಕೆ ದೀಕ್ಷಾಸ್ನಾನ ತಗೊಂಡೆ.
ಸರಿಯಾದ ತೀರ್ಮಾನ ತಂದ ಖುಷಿ
ದೀಕ್ಷಾಸ್ನಾನ ತಗೊಂಡ ಮೇಲೆ ನಾನು ಪೂರ್ಣ ಸಮಯದ ಸೇವೆ ಮಾಡಬೇಕು ಅಂದ್ಕೊಂಡೆ. ಇದೊಂದು ದೊಡ್ಡ ತೀರ್ಮಾನ. ಯಾಕಂದ್ರೆ ಅದಕ್ಕೆ ಕೆಲವು ತ್ಯಾಗಗಳನ್ನ ಮಾಡಬೇಕು ಅಂತ ಗೊತ್ತಾಯ್ತು. ಅದಕ್ಕೆ ನಾನು ಮೊದ್ಲು ಕಾಲೇಜ್ ಬಿಡಬೇಕು ಅಂತ ಗೊತ್ತಾಯ್ತು. ಹಾಗಾಗಿ ‘ನಾನು ಓದು ನಿಲ್ಲಿಸ್ತೀನಿ. ವೆನೆಜ಼ುವೆಲಗೆ ಬಂದು ಪಯನೀಯರಿಂಗ್ ಮಾಡ್ತೀನಿ’ ಅಂತ ಅಮ್ಮಂಗೆ, ಅಣ್ಣ-ಅಕ್ಕಂದಿರಿಗೆ ಪತ್ರಗಳನ್ನ ಬರೆದೆ.
1957ರ ಜೂನ್‌ನಲ್ಲಿ ಕಾರಾಕಾಸ್‌ಗೆ ವಾಪಸ್ ಬಂದೆ. ಅಲ್ಲಿಗೆ ಬಂದ ಮೇಲೆನೇ ಮನೆ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ, ಇನ್ನೂ ಒಬ್ಬರು ದುಡಿಬೇಕು ಅಂತ ಗೊತ್ತಾಗಿದ್ದು. ನಂಗೆ ಸರಿಯಾದ ಟೈಮ್‌ಗೆ ಬ್ಯಾಂಕ್ ಕೆಲಸ ಸಿಕ್ತು. ಏನೇ ಆದ್ರೂ ಪಯನೀಯರಿಂಗ್ ಮಾಡಲೇಬೇಕು ಅನ್ನೋದು ನನ್ನ ಮನಸ್ಸಲ್ಲಿತ್ತು. ಅದಕ್ಕೆ ತಾನೇ ನಾನು ವೆನೆಜ಼ುವೆಲಗೆ ವಾಪಸ್ ಬಂದಿದ್ದು. ಹಾಗಾಗಿ ಎರಡೂ ಮಾಡ್ತೀನಿ ಅಂತ ತೀರ್ಮಾನ ಮಾಡಿದೆ. ಇಡೀ ದಿನ ಬ್ಯಾಂಕಲ್ಲಿ ಕೆಲಸ ಮಾಡೋದರ ಜೊತೆಗೆ ಪಯನೀಯರಿಂಗೂ ಮಾಡ್ತಿದ್ದೆ. ಹೀಗೆ ಸುಮಾರು ವರ್ಷಗಳು ಕಳೀತು. ಎಷ್ಟೇ ಬಿಜ಼ಿಯಾಗಿದ್ರೂ ಖುಷಿ-ಖುಷಿಯಾಗಿದ್ದೆ.
ಆಮೇಲೆ ನಾನು ಸಿಲ್ವಿಯನಾ ಮದುವೆ ಆದೆ. ಅವರು ಜರ್ಮನಿಯವರು. ಅವರು ಅಪ್ಪ-ಅಮ್ಮ ಜೊತೆ ವೆನೆಜ಼ುವೆಲದಲ್ಲಿ ಮನೆ ಮಾಡಿಕೊಂಡಿದ್ರು. ಅವರಿಗೆ ಯೆಹೋವ ದೇವರ ಜೊತೆ ಇದ್ದ ಸ್ನೇಹ ನೋಡಿ ತುಂಬ ಇಷ್ಟ ಆಯ್ತು. ನಮಗೆ ಇಬ್ಬರು ಮಕ್ಕಳು ಹುಟ್ಟಿದ್ರು. ಮೊದಲು ಮಿಶೆಲ್ (ಮೈಕ್) ಹುಟ್ಟಿದ. ಆಮೇಲೆ ಸಮೀರ ಹುಟ್ಟಿದ್ಲು. ಅಮ್ಮನೂ ನಮ್ಮ ಜೊತೆನೇ ಇದ್ರು. ಕುಟುಂಬಕ್ಕೋಸ್ಕರ ದುಡಿಬೇಕಂದ್ರೆ ನಾನು ಪಯನಿಯರಿಂಗ್ ಬಿಡಬೇಕಾಗಿ ಬಂತು. ಆದ್ರೂ ಸೇವೆ ಮಾಡೋ ಹುರುಪನ್ನ ಬಿಡಲಿಲ್ಲ. ನಾನು ಮತ್ತೆ ಸಿಲ್ವಿಯ ರಜಾ ಇದ್ದಾಗೆಲ್ಲ ಆಕ್ಸಿಲಿಯರಿ ಪಯನಿಯರಿಂಗ್ ಮಾಡ್ತಿದ್ವಿ.
ಖುಷಿ ತಂದ ಇನ್ನೊಂದು ನಿರ್ಧಾರ
ಆಗ ನಮ್ಮ ಮಕ್ಕಳು ಇನ್ನೂ ಸ್ಕೂಲ್‌ಗೆ ಹೋಗ್ತಿದ್ರು. ನನ್ನ ಜೀವನ ತುಂಬ ಚೆನ್ನಾಗಿತ್ತು. ಯಾವುದಕ್ಕೂ ಕೊರತೆ ಇರಲಿಲ್ಲ, ಅರಾಮಾಗಿದ್ದೆ. ಬ್ಯಾಂಕಲ್ಲೂ ಎಲ್ಲರೂ ಮರ್ಯಾದೆ ಕೊಡ್ತಿದ್ರು. ಆಗಲೇ ಜನ ನನ್ನನ್ನ ಬರೀ ಒಬ್ಬ ಶ್ರೀಮಂತ ವ್ಯಕ್ತಿಯಾಗಿ ನೋಡ್ತಿದ್ದಾರಾ ಅಥವಾ ಯೆಹೋವ ದೇವರ ಸೇವಕನಾಗಿ ನೋಡ್ತಿದ್ದಾರಾ ಅಂತ ಯೋಚನೆ ಬಂದಿದ್ದು. ಆ ಯೋಚನೆ ನನ್ನನ್ನ ಇಡೀ ದಿನ ಕಿತ್ತು ತಿನ್ನುತ್ತಾ ಇತ್ತು. ಮನೆಗೆ ಬಂದ ಮೇಲೆ ನಾನು ನನ್ನ ಹೆಂಡತಿ ನಮ್ಮತ್ರ ಎಷ್ಟು ದುಡ್ಡಿದೆ ಅಂತ ಲೆಕ್ಕ ಹಾಕಿದ್ವಿ. ನಾನು ಬ್ಯಾಂಕ್ ಕೆಲಸ ಬಿಟ್ರೂ ನನಗೆ ತುಂಬ ಹಣ ಸಿಗುತ್ತಿತ್ತು. ನಂಗೆ ಸಾಲಗಳು ಇರಲಿಲ್ಲ. ಹಾಗಾಗಿ ಕೆಲಸ ಬಿಡುವಾಗ ಸಿಕ್ಕಿದ ಹಣದಿಂದ ಸರಳ ಜೀವನ ಮಾಡ್ತಾ ತುಂಬ ವರ್ಷ ಜೀವನ ಮಾಡೋಕೆ ಆಗ್ತಿತ್ತು.
ಕೆಲಸ ಬಿಡೋದು ಒಂದು ದೊಡ್ಡ ತೀರ್ಮಾನ ಆಗಿತ್ತು. ಅದಕ್ಕೆ ನನ್ನ ಹೆಂಡತಿ, ಅಮ್ಮ ತುಂಬ ಸಹಕಾರ ಕೊಟ್ರು. ನಾನು ಮತ್ತೆ ಪಯನೀಯರಿಂಗ್ ಮಾಡ್ತೀನಿ ಅಂತ ನೆನಸಿಕೊಂಡಾಗೆಲ್ಲಾ ತುಂಬಾ ಖುಷಿಯಾಗ್ತಿತ್ತು. ಇನ್ನೇನು ತಡೆಗಳಿಲ್ಲ, ಪಯನಿಯರಿಂಗ್ ಶುರು ಮಾಡಬಹುದು ಅಂತ ಅಂದ್ಕೊಂಡಾಗಲೇ ಒಂದು ಆಶ್ಚರ್ಯ ಕಾದಿತ್ತು.
ಪುಟಾಣಿ ಸರ್‌ಪ್ರೈಸ್
ನಮ್ಮ ಪುಟಾಣಿ ಸರ್‌ಪ್ರೈಸ್ ಗ್ಯಾಬ್ರಿಯೇಲ್
ಸಿಲ್ವಿಯನ ಡಾಕ್ಟರ್ ಹತ್ರ ಕರಕೊಂಡು ಹೋದಾಗ ಆ ಸರ್‌ಪ್ರೈಸ್ ಏನು ಅಂತ ಗೊತ್ತಾಯ್ತು. ನಮಗೆ ಇನ್ನೊಂದು ಮಗು ಹುಟ್ಟುತ್ತೆ ಅಂತ ಕೇಳಿಸಿಕೊಂಡಾಗ ತುಂಬ ಖುಷಿಯಾಯ್ತು. ಆದ್ರೆ ಈಗ ಕೆಲಸ ಬಿಟ್ಟು ಪಯನೀಯರಿಂಗ್ ಮಾಡೋದು ಹೇಗೆ ಅಂತ ಸ್ವಲ್ಪ ಚಿಂತೆ ಆಯ್ತು. ಆದ್ರೂ ಹುಟ್ಟೋ ಮಗುವಿಗೋಸ್ಕರ ಎಲ್ಲಾ ತಯಾರಿ ಮಾಡಿಕೊಂಡ್ವಿ. ಆಮೇಲೆ ಪಯನೀಯರಿಂಗ್ ಬಗ್ಗೆ ಯೋಚನೆ ಮಾಡಿದ್ವಿ.
ನಾನು ಮತ್ತು ಸಿಲ್ವಿಯ ಮಾತಾಡಿಕೊಂಡು ಪಯನಿಯರಿಂಗ್ ಶುರು ಮಾಡಲೇಬೇಕು ಅಂತ ನಿರ್ಧಾರ ಮಾಡಿದ್ವಿ. ಏಪ್ರಿಲ್ 1985ರಲ್ಲಿ ಗ್ಯಾಬ್ರಿಯೇಲ್ ಹುಟ್ಟಿದ. ನಾನು ಬ್ಯಾಂಕ್ ಕೆಲಸ ಬಿಟ್ಟು ಜೂನ್ 1985ರಲ್ಲಿ ರೆಗ್ಯುಲರ್ ಪಯನೀಯರಿಂಗ್ ಶುರು ಮಾಡ್ದೆ. ಸ್ವಲ್ಪ ವರ್ಷಗಳಾದ ಮೇಲೆ ಬ್ರಾಂಚ್ ಕಮಿಟಿಯ ಸದಸ್ಯನಾದೆ. ಆದ್ರೆ ಬ್ರಾಂಚ್ ಕಾರಾಕಾಸ್‌ನಲ್ಲಿ ಇರಲಿಲ್ಲ. 80 ಕಿ.ಮೀ. ದೂರದಲ್ಲಿತ್ತು. ವಾರದಲ್ಲಿ 2 ಅಥವಾ 3 ದಿನ ಕಮ್ಯೂಟ್ ಮಾಡ್ತಿದ್ದೆ.
ಲಾ ವಿಕ್ಟೋರಿಯದಲ್ಲಿ ಹೊಸ ಜೀವನ
ನಮ್ಮ ಬ್ರಾಂಚ್ ಆಫೀಸ್ ಇದ್ದಿದ್ದು ಲಾ ವಿಕ್ಟೋರಿಯದಲ್ಲಿ. ಅದಕ್ಕೆ ನಾವೆಲ್ಲ ಅಲ್ಲೇ ಮನೆ ಮಾಡಿಕೊಳ್ಳೋಣ ಅಂದುಕೊಂಡ್ವಿ. ನಮ್ಮ ಕುಟುಂಬದವರು ತುಂಬ ಹೊಂದಾಣಿಕೆ ಮಾಡಿಕೊಂಡ್ರು. ಅವರು ಒಳ್ಳೇ ಸಹಕಾರ ಕೊಟ್ರು. ಅವರಿಗೆಲ್ಲ ತುಂಬ ಥ್ಯಾಂಕ್ಸ್ ಹೇಳ್ತೀನಿ. ಅವರು ಸಹಾಯ ಮಾಡದೇ ಇದ್ದಿದ್ರೆ ನಂಗೆ ಚೆನ್ನಾಗಿ ಸೇವೆ ಮಾಡೋಕೆ ಆಗ್ತಿರಲಿಲ್ಲ. ಅಮ್ಮನ ನೋಡಿಕೊಳ್ಳೋಕೆ ಅಕ್ಕ-ಭಾವ ಮುಂದೆ ಬಂದ್ರು. ಮೈಕ್‌ಗೆ ಮದುವೆ ಆಗಿತ್ತು. ಆದ್ರೆ ಸಮೀರ ಮತ್ತು ಗ್ಯಾಬ್ರಿಯೇಲ್ ಇನ್ನೂ ನಮ್ಮ ಜೊತೆನೇ ಇದ್ರು. ಅವರಿಗೆ ಕಾರಾಕಾಸ್‌ನ ಬಿಟ್ಟು ಲಾ ವಿಕ್ಟೋರಿಯಗೆ ಬರೋಕೆ ಸ್ವಲ್ಪ ಕಷ್ಟ ಆಯ್ತು. ಯಾಕಂದ್ರೆ ಕಾರಾಕಾಸ್‌ನಲ್ಲಿ ತುಂಬ ಫ್ರೆಂಡ್ಸ್ ಇದ್ರು. ಸಿಲ್ವಿಯಗೂ ಅಷ್ಟು ದೊಡ್ಡ ನಗರದಲ್ಲಿ ಇದ್ದು ಈಗ ಚಿಕ್ಕ ಊರಿಗೆ ಬರಬೇಕಂದ್ರೆ ಸ್ವಲ್ಪ ಕಷ್ಟ ಆಯ್ತು. ದೊಡ್ಡ ಮನೆಬಿಟ್ಟು ಚಿಕ್ಕ ಮನೇಲಿ ಇರಬೇಕಾಯ್ತು. ಇದಕ್ಕೆಲ್ಲ ನಾವು ಹೊಂದಿಕೊಂಡ್ವಿ.
ಸ್ವಲ್ಪ ಸಮಯ ಆದಮೇಲೆ ಗ್ಯಾಬ್ರಿಯೇಲ್‌ಗೂ ಮದುವೆ ಆಯ್ತು. ಸಮೀರನೂ ಬೇರೆ ಕಡೆ ಮನೆ ಮಾಡಿಕೊಂಡಳು. ನನ್ನನ್ನ ಮತ್ತು ಸಿಲ್ವಿಯನ 2007ರಲ್ಲಿ ಬೆತೆಲಿಗೆ ಕರೆದ್ರು. ನಾವಿಗ್ಲೂ ಬೆತೆಲಲ್ಲಿ ಸೇವೆ ಮಾಡ್ತಾ ಇದ್ದೀವಿ. ನಮ್ಮ ದೊಡ್ಡ ಮಗ ಮೈಕ್ ಹಿರಿಯನಾಗಿ ಸೇವೆ ಮಾಡ್ತಿದ್ದಾನೆ. ಅವನ ಹೆಂಡತಿ ಮೊನಿಕಾ ಜೊತೆ ಪಯನೀಯರಿಂಗೂ ಮಾಡ್ತಿದ್ದಾನೆ. ಗ್ಯಾಬ್ರಿಯೇಲ್ ಅವನ ಹೆಂಡತಿ ಆ್ಯಮ್ರಾ ಜೊತೆ ಇಟಲಿಯಲ್ಲಿ ಇದ್ದಾನೆ. ಅವನೂ ಹಿರಿಯನಾಗಿ ಸೇವೆ ಮಾಡ್ತಿದ್ದಾನೆ. ಸಮೀರ ಪಯನೀಯರಿಂಗ್ ಜೊತೆಜೊತೆ ಮನೇಲಿ ಇದ್ದುಕೊಂಡು ಬೆತೆಲ್ ಕೆಲಸನೂ ಮಾಡ್ತಿದ್ದಾಳೆ.
ಎಡದಿಂದ ಬಲಕ್ಕೆ: ವೆನೆಜ಼ುವೆಲ ಬ್ರಾಂಚಲ್ಲಿ ನಾನು ಮತ್ತು ಹೆಂಡತಿ ಸಿಲ್ವಿಯ. ದೊಡ್ಡ ಮಗ ಮೈಕ್ ಮತ್ತು ಅವನ ಹೆಂಡತಿ ಮೊನಿಕಾ. ನಮ್ಮ ಮಗಳು ಸಮೀರ. ಕೊನೇ ಮಗ ಗ್ಯಾಬ್ರಿಯೇಲ್ ಮತ್ತು ಅವನ ಹೆಂಡತಿ ಆ್ಯಮ್ರಾ.
ಈ ಎಲ್ಲಾ ನಿರ್ಧಾರಗಳು ನನಗೆ ಖುಷಿ ತಂದಿದೆ
ನನ್ನ ಜೀವನದಲ್ಲಿ ಇಲ್ಲಿ ತನಕ ತುಂಬ ನಿರ್ಧಾರಗಳನ್ನ ಮಾಡಿದ್ದೀನಿ. ಆದ್ರೆ ‘ಛೇ ಇಂಥಾ ನಿರ್ಧಾರ ಮಾಡಿಬಿಟ್ನಲ್ಲಾ’ ಅಂತ ನಂಗೆ ಯಾವತ್ತೂ ಅನಿಸಿಲ್ಲ. ಯಾಕಂದ್ರೆ ಅದನ್ನೆಲ್ಲ ಯೆಹೋವ ದೇವರಿಗೋಸ್ಕರ ಮಾಡಿದ್ದು. ಯೆಹೋವನ ಸೇವೆ ಮಾಡ್ತಾ ನಾನು ತುಂಬ ಖುಷಿಯಾಗಿದ್ದೀನಿ. ನಂಗೆ ತುಂಬ ಸುಯೋಗಗಳು, ನೇಮಕಗಳು ಸಿಕ್ತು. ಇದ್ರಿಂದ ಯೆಹೋವ ದೇವರಿಗೆ ಹತ್ರ ಆಗೋಕೆ ಆಯ್ತು. ಬೆತೆಲ್ ಸೇವೆ ಮಾಡ್ತಾ ನಾನೂ ಸಿಲ್ವಿಯ ಖುಷಿ-ಖುಷಿಯಾಗಿ ಇದ್ದೀವಿ. ಏನೇ ತೀರ್ಮಾನ ಮಾಡಿದ್ರೂ ಯೆಹೋವನನ್ನ ಮನಸ್ಸಲ್ಲಿಟ್ಟು ಮಾಡಿದ್ವಿ. ಅದಕ್ಕೆ ಯೆಹೋವ ನಮ್ಮನ್ನ ಆಶೀರ್ವದಿಸಿದ್ದಾರೆ. ನಾವು ಮಾಡೋ ತೀರ್ಮಾನ ದೊಡ್ಡದಾಗಿರಲಿ ಚಿಕ್ಕದಾಗಿರಲಿ ಯೆಹೋವ ಅದನ್ನ ಆಶೀರ್ವದಿಸಿ “ತಿಳುವಳಿಕೆಗೂ ಮೀರಿದ ಶಾಂತಿಯನ್ನ” ಕೊಡ್ತಾರೆ.—ಫಿಲಿ. 4:6, 7.