ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w21 ಜುಲೈ ಪು. 26-29
  • ಯೆಹೋವನ ಸೇವೆಯಲ್ಲಿ ಕಳೆದ ಸವಿನೆನಪುಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಸೇವೆಯಲ್ಲಿ ಕಳೆದ ಸವಿನೆನಪುಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸೌತ್‌ ಆಫ್ರಿಕಾದಲ್ಲಿ ಸೇವೆ
  • ಮದುವೆ ಮತ್ತು ಹೊಸ ನೇಮಕ
  • ಬೆತೆಲಿಗೆ ವಾಪಸ್‌
  • ವಾಪಸ್‌ ಪ್ರಿಂಟರಿಗೆ
  • ಹೊಸ ನೇಮಕ
  • ಬ್ರಾಂಚ್‌ನಿಂದ ಪತ್ರ
    2006 ನಮ್ಮ ರಾಜ್ಯದ ಸೇವೆ
  • ಬೆತೆಲ್‌ ಸೇವೆ—ಹೆಚ್ಚು ಸ್ವಯಂಸೇವಕರ ಅಗತ್ಯವಿದೆ
    1995 ನಮ್ಮ ರಾಜ್ಯದ ಸೇವೆ
  • ನೀವು ನಿಮ್ಮನ್ನೇ ನೀಡಿಕೊಳ್ಳಲು ಸಾಧ್ಯವಿದೆಯೋ?
    2003 ನಮ್ಮ ರಾಜ್ಯದ ಸೇವೆ
  • ಇದು ನಿಮ್ಮ ಜೀವನದ ಅತ್ಯುತ್ತಮ ವೃತ್ತಿಯಾಗಿರಸಾಧ್ಯವೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
w21 ಜುಲೈ ಪು. 26-29
ಜಾನ್‌ ಕಿಕೋಟ್‌ ಮತ್ತು ಲೋರಾ ಕಿಕೋಟ್‌.

ಜೀವನ ಕಥೆ

ಯೆಹೋವನ ಸೇವೆಯಲ್ಲಿ ಕಳೆದ ಸವಿನೆನಪುಗಳು

ಜಾನ್‌ ಕಿಕೋಟ್‌ರವರ ಮಾತಿನಲ್ಲಿ

ಇಸವಿ 1958, ಆಗ ನನಗೆ 18 ವರ್ಷ. ನಾನು ಕೆನಡ ಬೆತೆಲಲ್ಲಿ ಇದ್ದೆ. ಪ್ರಿಂಟರಿ ಬಿಲ್ಡಿಂಗಲ್ಲಿ ಕಸ ಗುಡಿಸೋದು ನನಗೆ ಮೊದಲು ಸಿಕ್ಕಿದ ಕೆಲ್ಸ. ನಾನು ಖುಷಿಯಾಗಿದ್ದೆ. ಆಮೇಲೆ ನನಗೆ ಪ್ರಿಂಟರಿಯಲ್ಲೇ ನೇಮಕ ಸಿಕ್ತು. ಪ್ರೆಸ್ಸಿಂದ ಬರುತ್ತಿದ್ದ ಪತ್ರಿಕೆಗಳನ್ನ ನಾನು ಕಟ್‌ ಮಾಡ್ತಿದ್ದೆ. ಬೆತೆಲ್‌ ಸೇವೆ ಮಾಡ್ಕೊಂಡು ಆರಾಮಾಗಿದ್ದೆ.

ಹೀಗೆ ಒಂದು ವರ್ಷ ಕಳೀತು. ಆಮೇಲೆ ಸೌತ್‌ ಆಫ್ರಿಕಾದಲ್ಲಿ ಹೊಸ ಪ್ರಿಂಟಿಂಗ್‌ ಪ್ರೆಸ್‌ ಮಾಡ್ತಿದ್ರಿಂದ ಅಲ್ಲಿಗೆ ಸೇವೆ ಮಾಡೋಕೆ ಸಹೋದರರು ಬೇಕಾಗಿದ್ದಾರೆ ಅಂತ ಬೆತೆಲಲ್ಲಿ ಹೇಳಿದ್ರು. ನಾನು ಹೆಸ್ರು ಕೊಟ್ಟೆ. ಅವರು ನನ್ನ ಆಯ್ಕೆ ಮಾಡಿದ್ರು. ನನ್‌ ಜೊತೆ ಇನ್ನೂ ಮೂರು ಜನ ಸಹೋದರರನ್ನ ಆಯ್ಕೆ ಮಾಡಿದ್ರು. ಅವರು ಯಾರಂದ್ರೆ ಡೆನ್ನಿಸ್‌ ಲೀಚ್‌, ಬಿಲ್‌ ಮೆಕ್‌ಲೆಲ್ಲೆನ್‌ ಮತ್ತು ಕೆನ್‌ ನಾರ್ಡಿನ್‌. ನಮ್ಮೆಲ್ಲರಿಗೂ ಹೋಗೋಕೆ ಮಾತ್ರ ಟಿಕೆಟ್‌ ಕೊಟ್ಟಾಗ ನಾವು ಸೌತ್‌ ಆಫ್ರಿಕಾದಲ್ಲೇ ಜಾಸ್ತಿ ಸಮಯ ಸೇವೆ ಮಾಡಬೇಕಾಗುತ್ತೆ ಅಂತ ಗೊತ್ತಾಯ್ತು.

ನಮ್ಮಮ್ಮಾಗೆ ದೇವರ ಮೇಲೆ ತುಂಬ ನಂಬಿಕೆ ಇತ್ತು, ಯೆಹೋವನ ಜೊತೆ ಒಳ್ಳೇ ಸ್ನೇಹ ಇತ್ತು. ನಾನು ಅವರಿಗೆ ಫೋನ್‌ ಮಾಡಿ “ಅಮ್ಮ, ನಾನು ಸೌತ್‌ ಆಫ್ರಿಕಾಗೆ ಹೋಗ್ತಾ ಇದ್ದೀನಿ” ಅಂದಾಗ ಅವರು ಅಷ್ಟೇನು ಮಾತಾಡಲಿಲ್ಲ, ಈ ಕಡೆ ಬೇಡ ಅಂತಾನೂ ಅನ್ನಲಿಲ್ಲ. ನಾನು ಅಷ್ಟು ದೂರ ಹೋಗೋದು ಅಪ್ಪ ಅಮ್ಮಾಗೆ ಬೇಜಾರಾದ್ರೂ ಅವರು ನನ್ನ ತಡೀಲಿಲ್ಲ.

ಸೌತ್‌ ಆಫ್ರಿಕಾದಲ್ಲಿ ಸೇವೆ

ಕೇಪ್‌ಟೌನ್‌ನಿಂದ ಜೋಹಾನ್ಸ್‌ಬರ್ಗ್‌ಗೆ ಹೋಗ್ತಿರೋ ರೈಲಲ್ಲಿ ನಾನು, ಡೆನ್ನಿಸ್‌ ಲೀಚ್‌, ಕೆನ್‌ ನಾರ್ಡಿನ್‌, ಬಿಲ್‌ ಮೆಕ್‌ಲೆಲ್ಲೆನ್‌, 1959

ಸೌತ್‌ ಆಫ್ರಿಕಾ ಬ್ರಾಂಚಲ್ಲಿ 60 ವರ್ಷಗಳ ನಂತ್ರ ಮತ್ತೆ ಭೇಟಿಯಾದಾಗ, 2019

ಬ್ರೂಕ್ಲಿನ್‌ ಬೆತೆಲಲ್ಲಿ ನಮ್ಮ ನಾಲ್ಕೂ ಜನಕ್ಕೆ ಬೇರೆ ತರದ ಪ್ರಿಂಟಿಂಗ್‌ ಮೆಶಿನಲ್ಲಿ ಹೇಗೆ ಕೆಲಸ ಮಾಡೋದು ಅಂತ 3 ತಿಂಗಳು ಟ್ರೈನಿಂಗ್‌ ಕೊಟ್ರು. ಆಮೇಲೆ ನಾವು ಹಡಗಲ್ಲಿ ಸೌತ್‌ ಆಫ್ರಿಕಾದ ಕೇಪ್‌ಟೌನ್‌ಗೆ ಬಂದ್ವಿ. ಆಗ ನನಗೆ 20 ವರ್ಷ ಆಗಿತ್ತು. ಅವತ್ತು ಸಾಯಂಕಾಲ ಅಲ್ಲಿಂದ ಜೋಹಾನ್ಸ್‌ಬರ್ಗ್‌ಗೆ ರೈಲು ಹತ್ತಿದ್ವಿ. ನಾವು ತುಂಬ ದೂರ ಹೋಗಬೇಕಿತ್ತು. ರೈಲು ಕರೂ ಅನ್ನೋ ಚಿಕ್ಕ ಪಟ್ಟಣದಲ್ಲಿ ನಿಲ್ತು. ಅದು ಒಂಥರಾ ಬರಡು ಪ್ರದೇಶ. ಧೂಳು ಬಿಸಿಲು ಜಾಸ್ತಿ ಇತ್ತು. ನಾವು ನಾಲ್ಕೂ ಜನ ಕಿಟಕಿಯಿಂದ ನೋಡ್ತಾ ‘ಏನಿದು ಈ ಜಾಗ ಹಿಂಗಿದ್ಯಲ್ಲಾ?’ ಅಂತ ಅಂದ್ಕೊಳ್ತಿದ್ವಿ. ಸ್ವಲ್ಪ ವರ್ಷಗಳು ಆದಮೇಲೆ ನನಗೆ ಇಲ್ಲೇ ನೇಮಕ ಸಿಗುತ್ತೆ ಅಂತ ಅಂದ್ಕೊಂಡೇ ಇರಲಿಲ್ಲ. ಇಲ್ಲಿಗೆ ಬಂದು ಸೇವೆ ಮಾಡಿದಾಗಲೇ ಈ ಜಾಗ ಎಷ್ಟು ಚೆನ್ನಾಗಿದೆ ಅಂತ ನಂಗೆ ಗೊತ್ತಾಗಿದ್ದು.

ನಾನು ಕೆಲವು ವರ್ಷ ಸಾಲಚ್ಚು ಪ್ರಿಂಟಿಂಗ್‌ ಮೆಶಿನಲ್ಲಿ ಕೆಲಸ ಮಾಡ್ತಿದ್ದೆ. ಈ ಮೆಶಿನ್‌ ತುಂಬ ಚೆನ್ನಾಗಿ ಕೆಲಸ ಮಾಡ್ತಿತ್ತು. ನಾವು ಆಫ್ರಿಕನ್‌ ಭಾಷೆಗಳಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನ ಪ್ರಿಂಟ್‌ ಮಾಡ್ತಿದ್ವಿ. ಸೌತ್‌ ಆಫ್ರಿಕಾಗೆ ಮಾತ್ರ ಅಲ್ಲ ಆಫ್ರಿಕಾ ಖಂಡದಲ್ಲಿರೋ ಬೇರೆಬೇರೆ ದೇಶಗಳಿಗೂ ಪತ್ರಿಕೆಗಳನ್ನ ಪ್ರಿಂಟ್‌ ಮಾಡ್ತಿದ್ವಿ. ಈ ಹೊಸ ಪ್ರಿಂಟಿಂಗ್‌ ಮೆಶಿನನ್ನ ತಂದಿದ್ದು ಸಾರ್ಥಕ ಆಯ್ತು. ಯಾಕಂದ್ರೆ ಅಷ್ಟು ಕೆಲಸ ನಡೀತು!

ಆಮೇಲೆ ಭಾಷಾಂತರ, ಪ್ರಿಂಟಿಂಗ್‌, ಶಿಪ್ಪಿಂಗ್‌ ಇದನ್ನೆಲ್ಲ ನೋಡಿಕೊಳ್ಳೋ ಡಿಪಾರ್ಟ್‌ಮೆಂಟಲ್ಲಿ ನಾನು ಆಫೀಸ್‌ ಕೆಲಸ ಮಾಡಿದೆ. ಯಾವಾಗ್ಲೂ ಬಿಜ಼ಿಯಾಗಿ ಕೆಲಸ ಮಾಡ್ತಿದ್ದೆ, ಖುಷಿಯಾಗಿ ಇರ್ತಿದ್ದೆ, ತೃಪ್ತಿಯಾಗಿದ್ದೆ.

ಮದುವೆ ಮತ್ತು ಹೊಸ ನೇಮಕ

ನಾನೂ ಲೋರಾ ವಿಶೇಷ ಪಯನೀಯರ್‌ ಸೇವೆ ಮಾಡ್ತಿದ್ದಾಗ, 1968

1968ರಲ್ಲಿ ಲೋರಾ ಬೋವೆನ್‌ ಅನ್ನೋ ಪಯನೀಯರ್‌ ಸಹೋದರಿನ ಮದುವೆ ಆದೆ. ಅವರು ಬೆತೆಲ್‌ ಹತ್ರಾನೇ ಮನೆ ಮಾಡಿಕೊಂಡಿದ್ರು. ಭಾಷಾಂತರ ಡಿಪಾರ್ಟ್‌ಮೆಂಟಲ್ಲಿ ಟೈಪಿಂಗ್‌ ಕೆಲಸ ಮಾಡ್ತಿದ್ರು. ಆಗಿನ ಕಾಲದಲ್ಲಿ ಹೊಸದಾಗಿ ಮದುವೆ ಆದವರಿಗೆ ಬೆತೆಲಲ್ಲಿ ಇರೋ ಅವಕಾಶ ಇರಲಿಲ್ಲ. ಹಾಗಾಗಿ ನಮಗೆ ವಿಶೇಷ ಪಯನೀಯರ್‌ ನೇಮಕ ಸಿಕ್ತು. ಆಗ ನನಗೆ ಸ್ವಲ್ಪ ಚಿಂತೆ ಆಯ್ತು. ಯಾಕಂದ್ರೆ ನಾನು 10 ವರ್ಷ ಬೆತೆಲಲ್ಲಿ ಇದ್ದಾಗ ಊಟಕ್ಕೆ ಮನೆಗೆ ಏನೂ ತೊಂದ್ರೆ ಇರಲಿಲ್ಲ. ಆದ್ರೆ ಈಗ, ‘ಸಂಘಟನೆ ಕೊಡೋ ಸ್ವಲ್ಪ ಹಣದಲ್ಲಿ ಜೀವನ ಸಾಗಿಸೋದು ಹೇಗಪ್ಪಾ’ ಅಂತ ಯೋಚನೆ ಮಾಡ್ತಾ ಇದ್ದೆ. ಯಾಕಂದ್ರೆ ಆ ಹಣದಲ್ಲೇ ಬಾಡಿಗೆ, ಊಟ, ಓಡಾಟ, ಔಷಧಿ, ಬೇರೆಲ್ಲಾ ಖರ್ಚು ನೋಡಿಕೊಳ್ಳಬೇಕಿತ್ತು. ವಿಶೇಷ ಪಯನೀಯರರು ಇಷ್ಟು ತಾಸು ಸೇವೆ ಮಾಡಬೇಕು, ಇಷ್ಟು ಪುನರ್ಭೇಟಿಗಳನ್ನ ಮಾಡಬೇಕು, ಇಷ್ಟು ಪತ್ರಿಕೆಗಳನ್ನ ಕೊಡಬೇಕು ಅಂತ ಇತ್ತು. ಅದನ್ನ ಮಾಡಿದ್ರೆ ಮಾತ್ರ ಪ್ರತಿಯೊಬ್ಬರಿಗೂ ಸಂಘಟನೆಯಿಂದ ಖರ್ಚಿಗೆ ಹಣ ಸಿಗ್ತಿತ್ತು.

ಸೌತ್‌ ಆಫ್ರಿಕಾದ ಡರ್ಬನ್‌ ನಗರದ ಹತ್ರ ನಮಗೆ ಪಯನೀಯರ್‌ ನೇಮಕ ಸಿಕ್ತು. ಆ ಜಾಗ ಹಿಂದೂ ಮಹಾ ಸಾಗರದ ಪಕ್ಕದಲ್ಲೇ ಇತ್ತು. ಸುಮಾರು 1875ರಲ್ಲಿ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡೋಕೆ ಭಾರತದಿಂದ ತುಂಬ ಜನ ಇಲ್ಲಿಗೆ ಬಂದಿದ್ರು. ಅವರ ಮಕ್ಕಳು ಮೊಮ್ಮಕ್ಕಳು ಬೇರೆಬೇರೆ ಕೆಲಸ ಮಾಡಿಕೊಂಡು ಇಲ್ಲೇ ಇದ್ರು. ಅವರು ಇಲ್ಲಿ ಬಂದು ತುಂಬ ವರ್ಷ ಆಗಿದ್ರೂ ಅವರ ಸಂಸ್ಕೃತಿ, ಅಡಿಗೆ ಯಾವುದೂ ಬದಲಾಗಿರಲಿಲ್ಲ. ರುಚಿರುಚಿಯಾಗಿ ಅಡಿಗೆ ಮಾಡ್ತಿದ್ರು. ಅವರಿಗೆ ಇಂಗ್ಲಿಷ್‌ ಬರ್ತಾ ಇದ್ದಿದ್ರಿಂದ ಸಿಹಿಸುದ್ದಿ ಸಾರೋಕೆ ಸುಲಭ ಆಯ್ತು.

ವಿಶೇಷ ಪಯನೀಯರರು ತಿಂಗಳಿಗೆ 150 ಗಂಟೆ ಸೇವೆ ಮಾಡಬೇಕಿತ್ತು. ಅದಕ್ಕೆ ನಾನು ಮತ್ತು ಲೋರಾ ಮೊದಲನೇ ದಿನ 6 ಗಂಟೆ ಸೇವೆ ಮಾಡೋಣ ಅಂದುಕೊಂಡ್ವಿ. ಆ ಬಿಸಿಲಿಗೆ ಮೈಯೆಲ್ಲ ಬೆವರು ಇಳಿತಾ ಇತ್ತು. ಆಗ ನಮಗೆ ಒಂದು ಪುನರ್ಭೇಟಿನೂ ಇರಲಿಲ್ಲ, ಸ್ಟಡಿನೂ ಇರಲಿಲ್ಲ. ಬರೀ ಮನೆಮನೆಗೆ ಹೋಗಿನೇ 6 ಗಂಟೆ ಸೇವೆ ಮಾಡಬೇಕಿತ್ತು. ಸೇವೆ ಶುರುಮಾಡಿ ಸ್ವಲ್ಪ ಹೊತ್ತು ಆದ್ಮೇಲೆ ಗಡಿಯಾರ ನೋಡಿದ್ರೆ ಬರೀ 40 ನಿಮಿಷ ಆಗಿತ್ತಷ್ಟೇ! ಇನ್ನೂ 5 ಗಂಟೆ ಹೇಗಪ್ಪಾ ಮಾಡಲಿ ಅಂತ ಅಂದುಕೊಳ್ತಿದ್ದೆ.

ನಾವು ಸೇವೆ ಮಾಡೋಕೆ ಒಂದು ಐಡಿಯ ಮಾಡಿದ್ವಿ. ದಿನಾಲೂ ಸ್ಯಾಂಡ್‌ವಿಚ್‌ಗಳನ್ನ ತಗೊಂಡು ಹೋಗ್ತಿದ್ವಿ, ಫ್ಲಾಸ್ಕಲ್ಲಿ ಸೂಪ್‌ ಅಥವಾ ಕಾಫಿ ತಗೊಂಡು ಹೋಗ್ತಿದ್ವಿ. ಸುಸ್ತಾದಾಗೆಲ್ಲ ನಮ್ಮ ವೋಕ್ಸ್‌ವೇಗನ್‌ ಕಾರನ್ನ ಮರದ ಕೆಳಗೆ ನಿಲ್ಲಿಸಿ ಧಣಿವಾರಿಸಿಕೊಳ್ತಾ ಇದ್ವಿ. ಆಗ ಭಾರತೀಯ ಮಕ್ಕಳೆಲ್ಲ ಬಂದು ಪಿಳಿಪಿಳಿ ಅಂತ ಕಣ್ಣು ಬಿಟ್ಟುಕೊಂಡು ನಮ್ಮನ್ನೇ ನೋಡ್ತಿದ್ರು. ಸ್ವಲ್ಪ ದಿನ ಆದ್ಮೇಲೆ ಸೇವೆ ಮಾಡೋಕೆ ಅಷ್ಟು ಕಷ್ಟ ಅನಿಸಲಿಲ್ಲ, ದಿನ ಹೇಗೆ ಹೋಗ್ತಾ ಇತ್ತು ಅಂತ ಗೊತ್ತೇ ಆಗ್ತಿರಲಿಲ್ಲ.

ಆ ಟೆರಿಟೊರಿಯಲ್ಲಿ ಒಳ್ಳೇ ಮನಸ್ಸಿರೋ ಜನರಿಗೆ ಬೈಬಲ್‌ ಸತ್ಯ ಕಲಿಸುವಾಗ ನಮಗೆ ತುಂಬ ಖುಷಿ ಸಿಗ್ತಿತ್ತು. ಆ ಭಾರತೀಯರಿಗೆ ನಮ್ಮ ಮೇಲೆ ತುಂಬ ಗೌರವ ಇತ್ತು, ದೇವರ ಮೇಲೂ ತುಂಬ ಭಕ್ತಿ ಇತ್ತು. ಹಾಗಾಗಿ ಅವರು ಹಿಂದೂಗಳಾಗಿದ್ರೂ ನಾವು ಹೇಳೋದನ್ನ ಚೆನ್ನಾಗಿ ಕೇಳಿಸಿಕೊಳ್ತಿದ್ರು. ಯೆಹೋವ ದೇವರ ಬಗ್ಗೆ, ಯೇಸು ಬಗ್ಗೆ, ಬೈಬಲ್‌ ಬಗ್ಗೆ, ಹೊಸ ಲೋಕದ ಬಗ್ಗೆ, ಸತ್ತವರಿಗೆ ಇರೋ ನಿರೀಕ್ಷೆ ಬಗ್ಗೆ ಕಲಿಯೋಕೆ ಅವರಿಗೆ ತುಂಬ ಇಷ್ಟ ಆಗ್ತಿತ್ತು. ಒಂದು ವರ್ಷದಲ್ಲಿ ನಮಗೆ 20 ಬೈಬಲ್‌ ಸ್ಟಡಿ ಸಿಕ್ತು. ನಾವು ಹೋದಾಗೆಲ್ಲಾ ನಮ್ಮ ಸ್ಟಡಿಯವರು ನಮಗೆ ಊಟ ಕೊಡುತ್ತಿದ್ರು. ಹೊಟ್ಟೆ ತುಂಬ ಊಟ ಮಾಡ್ತಿದ್ವಿ. ತುಂಬ ಖುಷಿಯಾಗಿದ್ವಿ.

ಸ್ವಲ್ಪ ಸಮಯದಲ್ಲೇ ಹಿಂದೂ ಮಹಾ ಸಾಗರದ ಕರಾವಳಿಯಲ್ಲಿ ನಮಗೆ ಸರ್ಕಿಟ್‌ ಕೆಲಸ ಮಾಡೋ ನೇಮಕ ಸಿಕ್ತು. ಪ್ರತಿವಾರ ಒಂದೊಂದು ಕುಟುಂಬದ ಜೊತೆ ಉಳುಕೊಳ್ತಿದ್ವಿ. ಸಭೆಯಲ್ಲಿದ್ದ ಪ್ರಚಾರಕರ ಜೊತೆ ಸೇವೆಗೆ ಹೋಗ್ತಾ ಇದ್ವಿ. ಇದ್ರಿಂದ ನಾವು ಅವರ ಕುಟುಂಬದಲ್ಲೇ ಒಬ್ಬರಾಗಿಬಿಟ್ವಿ. ಅವರ ಮಕ್ಕಳ ಜೊತೆ ಸಮಯ ಕಳೀತಾ ಇದ್ವಿ. ಅವರು ಸಾಕಿರೋ ಪ್ರಾಣಿ-ಪಕ್ಷಿಗಳ ಜೊತೆ ಆಟ ಆಡ್ತಿದ್ವಿ. ಹೀಗೆ 2 ವರ್ಷ ಹೇಗೆ ಹೋಯ್ತು ಅಂತಾನೇ ಗೊತ್ತಾಗಲಿಲ್ಲ. ಒಂದಿನ ಇದ್ದಕ್ಕಿದ್ದ ಹಾಗೆ ಬ್ರಾಂಚ್‌ ಆಫೀಸಿಂದ ಫೋನ್‌ ಬಂತು. ‘ವಾಪಸ್‌ ಬೆತೆಲಿಗೆ ಬನ್ನಿ’ ಅಂತ ಕರೆದ್ರು. ಅದಕ್ಕೆ ‘ನಾವು ಇಲ್ಲೇ ಖುಷಿಯಾಗಿ ಇದ್ದೀವಿ’ ಅಂದೆ. ಆದ್ರೆ ನಾವು ಯಾವ ನೇಮಕ ಸಿಕ್ಕಿದ್ರೂ ಮಾಡೋಕೆ ರೆಡಿ ಇದ್ವಿ.

ಬೆತೆಲಿಗೆ ವಾಪಸ್‌

ಬೆತೆಲಲ್ಲಿ ನಾನು ಸರ್ವಿಸ್‌ ಡಿಪಾರ್ಟ್‌ಮೆಂಟಲ್ಲಿ ಕೆಲಸ ಮಾಡ್ತಿದ್ದೆ. ತುಂಬ ವರ್ಷ ಸೇವೆ ಮಾಡಿ ಅನುಭವ ಇರೋ ಸಹೋದರರ ಜೊತೆ ಕೆಲಸ ಮಾಡೋ ಅವಕಾಶ ಸಿಕ್ತು. ಆಗಿನ ಕಾಲದಲ್ಲಿ ಸರ್ಕಿಟ್‌ ಮೇಲ್ವಿಚಾರಕರು ಒಂದು ಸಭೆಯನ್ನ ಭೇಟಿ ಮಾಡಿದ ಮೇಲೆ ಅದರ ರಿಪೋರ್ಟನ್ನ ಬ್ರಾಂಚ್‌ಗೆ ಕಳಿಸ್ತಿದ್ರು. ಅದರ ಆಧಾರದ ಮೇಲೆ ಸರ್ವಿಸ್‌ ಡಿಪಾರ್ಟ್‌ಮೆಂಟಿನವರು ಸಭೆಗಳಿಗೆ ಪತ್ರ ಬರೆದು ಸಹೋದರರಿಗೆ ಬೇಕಾದ ಪ್ರೋತ್ಸಾಹ ಮತ್ತು ನಿರ್ದೇಶನ ಕೊಡ್ತಿದ್ರು. ಸರ್ಕಿಟ್‌ ಮೇಲ್ವಿಚಾರಕರು ಕ್ಸೋಸ, ಜ಼ುಲು ಮತ್ತು ಬೇರೆ ಆಫ್ರಿಕನ್‌ ಭಾಷೆಗಳಲ್ಲಿ ಬ್ರಾಂಚ್‌ಗೆ ಪತ್ರ ಬರೀತಿದ್ರು. ಅದನ್ನ ಸರ್ವಿಸ್‌ ಡಿಪಾರ್ಟ್‌ಮೆಂಟಿನಲ್ಲಿದ್ದ ಸೆಕ್ರೆಟರಿಗಳು ಇಂಗ್ಲಿಷಿಗೆ ಭಾಷಾಂತರ ಮಾಡ್ತಿದ್ರು. ಆಮೇಲೆ ಸರ್ವಿಸ್‌ ಡಿಪಾರ್ಟ್‌ಮೆಂಟ್‌ ಇಂಗ್ಲಿಷಲ್ಲಿ ಬರೀತಿದ್ದ ಪತ್ರಗಳನ್ನ ಆಫ್ರಿಕಾದ ಭಾಷೆಗಳಿಗೆ ಈ ಸೆಕ್ರೆಟರಿಗಳು ಭಾಷಾಂತರ ಮಾಡಿ ಕಳಿಸ್ತಿದ್ರು. ಅವರು ತುಂಬ ಕಷ್ಟಪಟ್ಟು ಕೆಲಸ ಮಾಡ್ತಿದ್ರು. ಅವರ ಶ್ರಮವನ್ನ ನಾವು ತುಂಬ ಮೆಚ್ಚಿಕೊಳ್ತೀವಿ. ಅವರು ಆಫ್ರಿಕಾದ ಸಹೋದರ ಸಹೋದರಿಯರು ಪಡ್ತಿದ್ದ ಕಷ್ಟಗಳ ಬಗ್ಗೆನೂ ನಮಗೆ ವಿವರಿಸ್ತಿದ್ರು.

ಆಗಿನ ಕಾಲದಲ್ಲಿ ಸೌತ್‌ ಆಫ್ರಿಕಾದಲ್ಲಿ ಕರಿಯರು ಬಿಳಿಯರು ಅನ್ನೋ ಭೇದಭಾವ ಇತ್ತು. ಕರಿಯರು ಬೇರೆ ಜಾಗದಲ್ಲಿ ಬಿಳಿಯರು ಬೇರೆ ಜಾಗದಲ್ಲಿ ವಾಸ ಮಾಡಬೇಕು, ಅವರು ಒಬ್ಬರಿಗೊಬ್ಬರು ಮಾತಾಡಬಾರದು ಅಂತ ಸರ್ಕಾರ ಹೇಳಿಬಿಟ್ಟಿತ್ತು. ಹಾಗಾಗಿ ಕಪ್ಪುಬಣ್ಣದ ಸಹೋದರರು ಅವರ ಭಾಷೆಯಲ್ಲಿ ಮಾತ್ರ ಮಾತಾಡ್ತಿದ್ರು. ಅವರ ಭಾಷೆಯಲ್ಲಿ ಮಾತ್ರ ಸಿಹಿಸುದ್ದಿ ಸಾರುತ್ತಿದ್ರು. ಆ ಭಾಷೆಯ ಸಭೆಗೆ ಮಾತ್ರ ಹೋಗ್ತಿದ್ರು.

ನಾನು ಮೊದಲಿಂದನೂ ಇಂಗ್ಲಿಷ್‌ ಸಭೆಯಲ್ಲೇ ಇದ್ದಿದ್ರಿಂದ ಆ ಸಹೋದರರ ಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ. ಹಾಗಾಗಿ ಆಫ್ರಿಕಾದ ಜನರ ಆಚಾರ-ವಿಚಾರಗಳು, ಸಂಸ್ಕೃತಿ ಏನು ಅಂತ ತಿಳ್ಕೊಂಡೆ. ಬೈಬಲಿಗೆ ವಿರುದ್ಧವಾಗಿರೋ ಸಂಪ್ರದಾಯಗಳನ್ನ, ಮಾಟಮಂತ್ರಕ್ಕೆ ಸಂಬಂಧಪಟ್ಟ ವಿಷ್ಯಗಳನ್ನ ಮಾಡೋಕೆ ನಮ್ಮ ಸಹೋದರರು ಒಪ್ಪುತ್ತಾ ಇರಲಿಲ್ಲ. ಆಗ ಕುಟುಂಬದವರು, ಹಳ್ಳಿ ಜನರು ಅವರಿಗೆ ತುಂಬ ವಿರೋಧ ಮಾಡ್ತಿದ್ರು, ಹಿಂಸೆ ಕೊಡ್ತಿದ್ರು. ನಮ್ಮ ಸಹೋದರರು ಪಡ್ತಿರೋ ಕಷ್ಟಗಳು ಏನಂತ ಗೊತ್ತಾಯ್ತು. ಹಳ್ಳಿಗಳಲ್ಲಿ ಇರೋ ಜನರಂತೂ ತುಂಬ ಬಡವರು. ಅವರಿಗೆ ವಿದ್ಯಾಭ್ಯಾಸ ಇಲ್ಲಾಂದ್ರೂ ಬೈಬಲಿಗೆ ತುಂಬ ಗೌರವ ಕೊಡ್ತಿದ್ರು.

ಕೆಲವು ಕೋರ್ಟ್‌ ಕೇಸುಗಳ ಮೇಲೆ ಕೆಲಸ ಮಾಡೋ ಸುಯೋಗ ನನಗೆ ಸಿಕ್ತು. ಆರಾಧನೆ ಮಾಡೋ ಸ್ವಾತಂತ್ರ್ಯದ ಬಗ್ಗೆ ಕೋರ್ಟ್‌ ಕೇಸುಗಳು ಆಗ ನಡೀತಿತ್ತು. ನಮ್ಮ ಸಹೋದರರ ಚಿಕ್ಕಚಿಕ್ಕ ಮಕ್ಕಳು ಪ್ರಾರ್ಥನೆ ಮಾಡೋಕೆ, ಭಕ್ತಿಗೀತೆಗಳನ್ನ ಹಾಡೋಕೆ ಒಪ್ಪಲಿಲ್ಲ ಅಂತ ಅವರನ್ನ ಶಾಲೆಯಿಂದ ಹೊರಗಡೆ ಹಾಕಿಬಿಟ್ಟಿದ್ರು. ಅವರ ನಿಷ್ಠೆ, ಧೈರ್ಯ ನೋಡಿ ನನ್ನ ನಂಬಿಕೆ ಬಲ ಆಗ್ತಿತ್ತು.

ಸ್ವಾಜ಼ಿಲ್ಯಾಂಡ್‌ (ಈಗ ಎಸ್ವಾಟಿನಿ) ಅನ್ನೋ ಚಿಕ್ಕ ದೇಶದಲ್ಲಿ ನಮ್ಮ ಸಹೋದರರಿಗೆ ಇನ್ನೊಂದು ಕಷ್ಟ ಬಂತು. ಅಲ್ಲಿನ ರಾಜ 2ನೇ ಸೊಬೂಜ಼ ಸತ್ತುಹೋದಾಗ ಆ ದೇಶದ ಜನರೆಲ್ಲ ಶೋಕಾಚಾರಣೆ ಮಾಡಬೇಕಿತ್ತು. ಗಂಡಸರು ತಲೆ ಬೋಳಿಸಿಕೊಳ್ಳಬೇಕಿತ್ತು. ಹೆಂಗಸರು ಕೂದಲು ಕತ್ತರಿಸಿಕೊಳ್ಳಬೇಕಿತ್ತು. ಇದನ್ನೆಲ್ಲ ಮಾಡೋಕೆ ನಮ್ಮ ಸಹೋದರ ಸಹೋದರಿಯರು ಒಪ್ಪಲಿಲ್ಲ. ಯಾಕಂದ್ರೆ ಇದು ಪೂರ್ವಜರ ಆರಾಧನೆಗೆ ಸಂಬಂಧಪಟ್ಟಿದ್ದು. ಇದ್ರಿಂದ ಬಂದ ಹಿಂಸೆಯನ್ನ ನಮ್ಮ ಸಹೋದರರು ತಾಳಿಕೊಂಡ್ರು. ಅವರು ಯೆಹೋವ ದೇವರಿಗೆ ತೋರಿಸಿದ ನಿಷ್ಠೆ ನೋಡಿ ಹೃದಯ ತುಂಬಿ ಬಂತು. ಯೆಹೋವ ದೇವರಿಗೆ ನಂಬಿಕೆಯಿಂದ, ನಿಷ್ಠೆಯಿಂದ ಇರೋದು ಹೇಗೆ, ಕಷ್ಟಗಳನ್ನ ಸಹಿಸಿಕೊಳ್ಳೋದು ಹೇಗೆ ಅಂತ ಇವರಿಂದ ಕಲಿತ್ವಿ.

ವಾಪಸ್‌ ಪ್ರಿಂಟರಿಗೆ

1981ರಲ್ಲಿ ನನಗೆ ಮತ್ತೆ ಪ್ರಿಂಟರಿಗೆ ನೇಮಕ ಸಿಕ್ತು. ಆಗ ಪ್ರಿಂಟರಿಯಲ್ಲಿ ಹೊಸ ತಂತ್ರಜ್ಞಾನನ ಅಳವಡಿಸಬೇಕಿತ್ತು. ನಮ್ಮ ಹತ್ರ 9 ಸಾಲಚ್ಚು ಮೆಶಿನ್‌ಗಳಿದ್ದವು. ಆಗ ಒಬ್ಬ ಸೇಲ್ಸ್‌ಮ್ಯಾನ್‌ ಫೋಟೊಟೈಪ್‌ಸೆಟ್ಟರನ್ನ ಒಂದು ಸಲ ಬಳಸಿ ನೋಡಿ ಅಂತ ಬ್ರಾಂಚಿಗೆ ಕೊಟ್ಟ. ಇದು ಚೆನ್ನಾಗಿ ಇದ್ದಿದ್ರಿಂದ 5 ಫೋಟೊಟೈಪ್‌ಸೆಟ್ಟರ್‌ಗಳನ್ನ ಬ್ರಾಂಚ್‌ ಕೊಂಡುಕೊಳ್ತು. ಅದರ ಜೊತೆ ಒಂದು ಹೊಸ ಪ್ರಿಂಟಿಂಗ್‌ ಪ್ರೆಸ್ಸನ್ನೂ ತಗೊಳ್ತು. ಇದ್ರಿಂದ ಮುಂಚೆಗಿಂತ ತುಂಬ ಪುಸ್ತಕಗಳನ್ನ ಪ್ರಿಂಟ್‌ ಮಾಡೋಕಾಯ್ತು.

ಕಂಪ್ಯೂಟರನ್ನ ಬಳಸಿ ನಮ್ಮ ಸಂಘಟನೆ ಮೆಪ್ಸ್‌ (ಮಲ್ಟಿಲ್ಯಾಂಗ್ವೇಜ್‌ ಎಲೆಕ್ಟ್ರಾನಿಕ್‌ ಪಬ್ಲಿಶಿಂಗ್‌ ಸಿಸ್ಟಮ್‌) ಅನ್ನೋ ಪ್ರೊಗ್ರಾಮನ್ನ ಕಂಡುಹಿಡಿತು. ಸುಮಾರು ವರ್ಷಗಳ ಹಿಂದೆ ಕೆನಡದ ಬೆತೆಲಿಂದ ನಾವು ನಾಲ್ಕು ಜನ ಪ್ರಿಂಟಿಂಗ್‌ ಕೆಲಸಕ್ಕೆ ಅಂತ ಸೌತ್‌ ಆಫ್ರಿಕ ಬ್ರಾಂಚಿಗೆ ಬಂದ್ವಿ. ಅವತ್ತಿಂದ ಪ್ರಿಂಟಿಂಗ್‌ ಕ್ಷೇತ್ರದಲ್ಲಿ ತುಂಬ ಬದಲಾವಣೆಗಳು ಆಗಿದೆ. (ಯೆಶಾ. 60:17) ಇದೆಲ್ಲ ಆಗೋ ಅಷ್ಟರಲ್ಲಿ ನಾವು ನಾಲ್ಕೂ ಜನ ಒಳ್ಳೇ ಪಯನೀಯರ್‌ ಸಹೋದರಿಯರನ್ನ ಮದುವೆ ಆಗಿದ್ವಿ. ನಾನು ಮತ್ತು ಬಿಲ್‌ ಬೆತೆಲ್‌ ಸೇವೆ ಮಾಡ್ತಿದ್ವಿ. ಕೆನ್‌ ಮತ್ತು ಡೆನ್ನಿಸ್‌ ಹತ್ರದಲ್ಲೇ ಮನೆ ಮಾಡ್ಕೊಂಡಿದ್ರು. ಅವರಿಗೆ ಮಕ್ಕಳೂ ಇದ್ರು.

ಬ್ರಾಂಚಲ್ಲಿ ತುಂಬ ಕೆಲಸಗಳು ನಡೀತಿತ್ತು. ತುಂಬ ಭಾಷೆಗಳಲ್ಲಿ ಪತ್ರಿಕೆಗಳು, ಪುಸ್ತಕಗಳು ಭಾಷಾಂತರ ಆಗ್ತಿತ್ತು, ಪ್ರಿಂಟಿಂಗ್‌ ಆಗ್ತಿತ್ತು. ಅವನ್ನ ಬೇರೆ ಬ್ರಾಂಚ್‌ಗಳಿಗೂ ಕಳಿಸಿಕೊಡ್ತಿದ್ವಿ. ಕೆಲಸ ಜಾಸ್ತಿ ಆಗ್ತಿದ್ದ ಹಾಗೆ ಬೆತೆಲ್‌ ಕುಟುಂಬನೂ ದೊಡ್ಡದಾಯ್ತು. ಹಾಗಾಗಿ ನಾವು ಒಂದು ಹೊಸ ಬೆತೆಲ್‌ ಬಿಲ್ಡಿಂಗನ್ನ ಕಟ್ಟಬೇಕಿತ್ತು. ಜೋಹಾನ್ಸ್‌ಬರ್ಗ್‌ನ ಪಶ್ಚಿಮ ದಿಕ್ಕಲ್ಲಿ ಇರೋ ಒಂದು ಸುಂದರವಾದ ಜಾಗದಲ್ಲಿ ನಮ್ಮ ಸಹೋದರರು ಒಂದು ಬಿಲ್ಡಿಂಗ್‌ ಕಟ್ಟಿದ್ರು. 1987ರಲ್ಲಿ ಅದರ ಸಮರ್ಪಣೆ ನಡಿತು. ಇದನ್ನೆಲ್ಲ ನೋಡೋ ಸುಯೋಗ ಸಿಕ್ತು. ಅಷ್ಟೇ ಅಲ್ಲ, ತುಂಬ ವರ್ಷಗಳ ತನಕ ಸೌತ್‌ ಆಫ್ರಿಕಾದ ಬ್ರಾಂಚ್‌ ಕಮಿಟಿಯಲ್ಲಿ ಕೆಲಸ ಮಾಡೋ ಅವಕಾಶನೂ ನಂಗೆ ಸಿಕ್ತು.

ಹೊಸ ನೇಮಕ

2001ರಲ್ಲಿ ಅಮೇರಿಕಾದಲ್ಲಿ ಹೊಸದಾಗಿ ಆಗಿದ್ದ ಬ್ರಾಂಚ್‌ ಕಮಿಟಿಯಲ್ಲಿ ಸೇವೆ ಮಾಡೋಕೆ ನಂಗೆ ನೇಮಕ ಸಿಕ್ತು. ಸೌತ್‌ ಆಫ್ರಿಕಾದಲ್ಲಿದ್ದ ನಮ್ಮ ಸ್ನೇಹಿತರನ್ನ, ಕೆಲಸನ ಬಿಟ್ಟುಬರೋಕೆ ಒಂದು ಕಡೆ ಬೇಜಾರಾಗ್ತಿತ್ತು. ಆದ್ರೆ ಇನ್ನೊಂದು ಕಡೆ ಅಮೆರಿಕಾದಲ್ಲಿ ಹೊಸ ಜೀವನ ಶುರುಮಾಡೋದನ್ನ ನೆನಸಿಕೊಂಡಾಗ ಖುಷಿಯಾಗ್ತಿತ್ತು.

ನಮ್ಮ ಅತ್ತೆನ ಇಲ್ಲಿ ಬಿಟ್ಟು ಹೋಗೋಕೆ ನಮಗೆ ಬೇಜಾರಾಗ್ತಿತ್ತು. ಯಾಕಂದ್ರೆ ನಾವು ನ್ಯೂಯಾರ್ಕಿಗೆ ಹೋದ್ರೆ ಅಲ್ಲಿಂದ ಇವರನ್ನ ನೋಡಿಕೊಳ್ಳೋಕೆ ಆಗಲ್ವಲ್ಲಾ. ಅದಕ್ಕೆ ಲೋರಾಳ ಮೂವರು ತಂಗಿಯರು ಮುಂದೆ ಬಂದು “ನಾವು ಅಮ್ಮನ ನೋಡಿಕೊಳ್ತೀವಿ” ಅಂತ ಹೇಳಿದ್ರು. ಅವರು “ನಮಗಂತೂ ಪೂರ್ಣ ಸಮಯದ ಸೇವೆ ಮಾಡಕ್ಕೆ ಆಗ್ತಿಲ್ಲ, ನಾವು ಅಮ್ಮನ್ನ ನೋಡಿಕೊಂಡ್ರೆ ನೀವು ಪೂರ್ಣ ಸಮಯದ ಸೇವೆ ಮಾಡಬಹುದಲ್ಲಾ” ಅಂತ ನಮ್ಮನ್ನ ಕಳಿಸಿಕೊಟ್ರು. ಅವರ ಉಪಕಾರನ ನಾವು ಯಾವತ್ತೂ ಮರಿಯಲ್ಲ.

ಕೆನಡಾದ ಟೊರಾಂಟೋದಲ್ಲಿರೋ ನಮ್ಮ ಅಣ್ಣ ಮತ್ತು ಅತ್ತಿಗೆ ನಮ್ಮ ಅಮ್ಮನ 20 ವರ್ಷಗಳಿಂದ ನೋಡಿಕೊಳ್ತಾ ಇದ್ರು. ಅವರ ಹತ್ರಾನೂ ನಾವು ಕೇಳಿದಾಗ “ನಾವು ನೋಡಿಕೊಳ್ತೀವಿ” ಅಂತ ಹೇಳಿದ್ರು. ನಾವು ನ್ಯೂಯಾರ್ಕಿಗೆ ಬಂದ ಸ್ವಲ್ಪ ಸಮಯದಲ್ಲೇ ನಮ್ಮ ಅಮ್ಮ ತೀರಿಕೊಂಡ್ರು. ಕೊನೆ ಉಸಿರು ಇರೋ ತನಕ ನಮ್ಮ ಅಮ್ಮನ್ನ ಅಣ್ಣ ಮತ್ತು ಅತ್ತಿಗೆ ತುಂಬ ಚೆನ್ನಾಗಿ ನೋಡಿಕೊಂಡ್ರು. ಅಣ್ಣ-ಅತ್ತಿಗೆ ಮತ್ತು ನನ್ನ ನಾದಿನಿಯರು ಎಷ್ಟೇ ಕಷ್ಟ ಆದ್ರೂ ನಮಗೋಸ್ಕರ ಕುಟುಂಬದ ಜವಾಬ್ದಾರಿಯನ್ನ ತಗೊಳ್ಳೋಕೆ ರೆಡಿ ಇದ್ರು. ಇಂಥ ಒಳ್ಳೇ ಕುಟುಂಬನ ಕೊಟ್ಟಿದ್ದಕ್ಕೆ ನಾನು ಯೆಹೋವ ದೇವರಿಗೆ ತುಂಬ ಥ್ಯಾಂಕ್ಸ್‌ ಹೇಳ್ತೀನಿ.

ಅಮೆರಿಕ ಬೆತೆಲಲ್ಲಿ ನಾನು ತುಂಬ ವರ್ಷ ಪ್ರಿಂಟರಿಯಲ್ಲೇ ಕೆಲಸ ಮಾಡಿದೆ. ಅಲ್ಲಿ ನಾವು ಇನ್ನಷ್ಟು ಹೊಸ ತಂತ್ರಜ್ಞಾನ ಬಳಸಿ ಕೆಲಸ ಮಾಡ್ತಿದ್ವಿ. ಇತ್ತೀಚೆಗಷ್ಟೇ ನಾನು ಪರ್ಚೇಸಿಂಗ್‌ ಡಿಪಾರ್ಟ್‌ಮೆಂಟಿಗೆ ಬಂದೆ. ಈ ಬೆತೆಲಲ್ಲಿ 5,000 ಜನ ಇದ್ದೀವಿ. ಅಷ್ಟೇ ಅಲ್ಲ 2,000 ಸಹೋದರ ಸಹೋದರಿಯರು ಬಂದು ಕಮ್ಯೂಟ್‌ ಮಾಡ್ತಾರೆ. ಇಷ್ಟು ದೊಡ್ಡ ಬೆತೆಲ್‌ ಕುಟುಂಬದಲ್ಲಿ 20 ವರ್ಷಗಳಿಂದ ಸಂತೋಷವಾಗಿ ಸೇವೆ ಮಾಡ್ತಾ ಇದ್ದೀನಿ.

ನಾನು ಇಷ್ಟೆಲ್ಲ ಸೇವೆ ಮಾಡ್ತೀನಿ ಅಂತ 60 ವರ್ಷಗಳ ಹಿಂದೆ ಅಂದುಕೊಂಡಿರಲಿಲ್ಲ. ಇಷ್ಟು ವರ್ಷ ಲೋರಾ ನನ್ನ ಜೊತೆ ಇದ್ದು ಸಹಾಯ ಮಾಡಿದ್ದಾಳೆ. ಜೀವನಪೂರ್ತಿ ಬರೀ ಸವಿನೆನಪುಗಳೇ ತುಂಬಿದೆ. ನನಗೆ ಬೇರೆ-ಬೇರೆ ರೀತಿಯ ನೇಮಕಗಳನ್ನ ಮಾಡೋ ಅವಕಾಶ ಸಿಕ್ತು. ಅನುಭವ ಇರೋ ಸಹೋದರ ಸಹೋದರಿಯರ ಜೊತೆ ಕೆಲಸ ಮಾಡೋ ಸುಯೋಗ ಸಿಕ್ತು. ಅಷ್ಟೇ ಅಲ್ಲ, ಬೇರೆ-ಬೇರೆ ಬ್ರಾಂಚ್‌ ಆಫೀಸುಗಳಿಗೆ ಹೋಗೋ ಅವಕಾಶನೂ ಸಿಕ್ತು. ಈಗ ನಂಗೆ 80 ವರ್ಷ, ಜಾಸ್ತಿ ಕೆಲಸ ಮಾಡಕ್ಕೆ ಆಗಲ್ಲ. ಚೆನ್ನಾಗಿ ತರಬೇತಿ ಪಡ್ಕೊಂಡಿರೋ ಯುವ ಸಹೋದರರು ಎಲ್ಲಾ ಕೆಲಸ ನೋಡಿಕೊಳ್ತಾರೆ.

“ಯಾವ ಜನಾಂಗದ ಜನ್ರಿಗೆ ಯೆಹೋವ ದೇವರಾಗಿ ಇರ್ತಾನೋ . . . ಅವರು ಭಾಗ್ಯವಂತರು” ಅಂತ ಕೀರ್ತನೆಗಾರ ಹೇಳಿದ್ದು ನೂರಕ್ಕೆ ನೂರು ಸತ್ಯ. (ಕೀರ್ತ. 33:12) ಇಂಥ ಭಾಗ್ಯವಂತರ ಜೊತೆ ಸೇವೆ ಮಾಡಿ ಖುಷಿಖುಷಿಯಾಗಿ ಇದ್ದೀನಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ