ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w24 ಏಪ್ರಿಲ್‌ ಪು. 2-7
  • “ಪ್ರೌಢರಾಗೋಕೆ ಪ್ರಗತಿ ಮಾಡ್ತಾ ಇರೋಣ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಪ್ರೌಢರಾಗೋಕೆ ಪ್ರಗತಿ ಮಾಡ್ತಾ ಇರೋಣ”
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪ್ರೌಢ ಕ್ರೈಸ್ತರಾಗೋದು ಅಂದ್ರೆ ಏನು?
  • ನಾವು ಪ್ರೌಢ ಕ್ರೈಸ್ತರಾಗಬೇಕಂದ್ರೆ ಏನು ಮಾಡಬೇಕು?
  • ಗಟ್ಟಿಯಾದ ಆಹಾರ ಹೇಗೆ ಸಹಾಯ ಮಾಡುತ್ತೆ?
  • ನಮಗೆ ಯಾಕೆ ಅತಿಯಾದ ಆತ್ಮವಿಶ್ವಾಸ ಇರಬಾರದು?
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಪತ್ರ ಓದಿ—ಕೊನೇ ತನಕ ನಂಬಿಗಸ್ತರಾಗಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಕ್ರಿಸ್ತನಿಗೆ ಸೇರಿರುವ ಪ್ರೌಢತೆಯನ್ನು ಮುಟ್ಟುತ್ತಿದ್ದೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಬೈಬಲಲ್ಲಿರೋ ಸರಳ ಸತ್ಯಗಳಿಂದ ಈಗ್ಲೂ ಪಾಠ ಕಲಿಬಹುದಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
w24 ಏಪ್ರಿಲ್‌ ಪು. 2-7

ಅಧ್ಯಯನ ಲೇಖನ 14

ಗೀತೆ 64 ಸತ್ಯವನ್ನು ನಿನ್ನದ್ದಾಗಿಸಿಕೊ

“ಪ್ರೌಢರಾಗೋಕೆ ಪ್ರಗತಿ ಮಾಡ್ತಾ ಇರೋಣ”

“ನಾವು . . . ಪ್ರೌಢರಾಗೋಕೆ ಪ್ರಗತಿ ಮಾಡ್ತಾ ಇರೋಣ.”—ಇಬ್ರಿ. 6:1.

ಈ ಲೇಖನದಲ್ಲಿ ಏನಿದೆ?

ಪ್ರೌಢ ಕ್ರೈಸ್ತರಾಗಬೇಕಂದ್ರೆ ಯೆಹೋವನ ತರ ಯೋಚ್ನೆ ಮಾಡಬೇಕು, ಆತನಿಗೆ ಇಷ್ಟ ಆಗೋ ತರ ನಡ್ಕೊಬೇಕು ಮತ್ತು ಒಳ್ಳೇ ತೀರ್ಮಾನಗಳನ್ನ ಮಾಡಬೇಕು. ಅದು ಹೇಗಂತ ಈ ಲೇಖನದಲ್ಲಿ ನೋಡೋಣ.

1. ಯೆಹೋವ ನಮ್ಮಿಂದ ಏನು ಕೇಳ್ಕೊಳ್ತಿದ್ದಾನೆ?

ಒಂದು ಮಗು ಹುಟ್ಟಿದಾಗ ಅಪ್ಪ-ಅಮ್ಮನಿಗೆ ಎಷ್ಟು ಖುಷಿಯಾಗುತ್ತೆ ಅಲ್ವಾ? ಆದ್ರೆ ಆ ಮಗು ಬೆಳಿದೇ ಹಾಗೇ ಇದ್ದುಬಿಟ್ರೆ ಅವ್ರಿಗೆ ಚಿಂತೆ ಆಗುತ್ತೆ. ಅದೇ ತರ ನಾವು ಮೊದಮೊದ್ಲು ಸತ್ಯ ಕಲಿತಾಗ ಯೆಹೋವನಿಗೂ ತುಂಬ ಖುಷಿ ಆಯ್ತು. ಆದ್ರೆ ನಾವು ನಿಂತ ನೀರಿನ ತರ ಇದ್ದುಬಿಟ್ರೆ ಆತನಿಗೆ ಬೇಜಾರಾಗುತ್ತೆ. (1 ಕೊರಿಂ. 3:1) ಅದಕ್ಕೇ ಆತನು “ದೊಡ್ಡವ್ರ ತರ ಇರಿ” ಅಥವಾ ಪ್ರೌಢರಾಗಿ ಅಂತ ನಮ್ಮ ಹತ್ರ ಕೇಳ್ಕೊಳ್ತಿದ್ದಾನೆ.—1 ಕೊರಿಂ. 14:20.

2. ನಾವು ಈ ಲೇಖನದಲ್ಲಿ ಏನು ಕಲಿತೀವಿ?

2 ನಾವು ಈ ಲೇಖನದಲ್ಲಿ, ಪ್ರೌಢ ಕ್ರೈಸ್ತರಾಗೋದು ಅಂದ್ರೆ ಏನು? ನಾವು ಪ್ರೌಢ ಕ್ರೈಸ್ತರಾಗಬೇಕಂದ್ರೆ ಏನು ಮಾಡಬೇಕು? ಗಟ್ಟಿಯಾದ ಆಹಾರ ಪ್ರೌಢರಾಗೋಕೆ ಹೇಗೆ ಸಹಾಯ ಮಾಡುತ್ತೆ? ನಮಗ್ಯಾಕೆ ಅತಿಯಾದ ಆತ್ಮವಿಶ್ವಾಸ ಇರಬಾರದು? ಅನ್ನೋ ಪ್ರಶ್ನೆಗಳಿಗೆ ಉತ್ರ ತಿಳ್ಕೊಳ್ಳೋಣ.

ಪ್ರೌಢ ಕ್ರೈಸ್ತರಾಗೋದು ಅಂದ್ರೆ ಏನು?

3. ದೊಡ್ಡವ್ರ ತರ ಇರೋದು ಅಂದ್ರೆ ಏನು?

3 “ದೊಡ್ಡವ್ರ ತರ ಇರಿ” ಅನ್ನೋ ಗ್ರೀಕ್‌ ಪದವನ್ನ ಭಾಷಾಂತರಿಸಿದಾಗ “ಪ್ರೌಢರಾಗಿ ಇರೋದು,” “ಪರಿಪೂರ್ಣರಾಗಿ ಇರೋದು” ಮತ್ತು “ಪೂರ್ತಿಯಾಗಿ ಇರೋದು” ಅನ್ನೋ ಅರ್ಥನೂ ಕೊಡುತ್ತೆ.a (1 ಕೊರಿಂ. 2:6) ಒಂದು ಮಗು ದೊಡ್ಡದಾಗಬೇಕಂದ್ರೆ ಬೆಳಿತಾ ಇರಬೇಕು. ಹಾಗೇ ಒಬ್ಬ ವ್ಯಕ್ತಿ ಪ್ರೌಢ ಕ್ರೈಸ್ತನಾಗಬೇಕಂದ್ರೆ ಯೆಹೋವನ ಜೊತೆ ಒಳ್ಳೇ ಸಂಬಂಧ ಬೆಳೆಸ್ಕೊಳ್ತಾ ಇರಬೇಕು. ಹಾಗಂತ ನಾವು ಪ್ರೌಢರಾದ ಮೇಲೆ ಪ್ರಗತಿ ಮಾಡೋದನ್ನ ನಿಲ್ಲಿಸಿಬಿಡಬಾರದು, ಪ್ರಯತ್ನ ಮಾಡ್ತಾನೇ ಇರಬೇಕು. (1 ತಿಮೊ. 4:15) ವಯಸ್ಸಲ್ಲಿ ದೊಡ್ಡವರಾದವರು ಮಾತ್ರ ಅಲ್ಲ, ಚಿಕ್ಕವರೂ ಪ್ರೌಢ ಕ್ರೈಸ್ತರಾಗಬಹುದು. ಆದ್ರೆ ಒಬ್ಬ ವ್ಯಕ್ತಿ ಪ್ರೌಢ ಕ್ರೈಸ್ತನಾಗಿದ್ದಾನಾ ಇಲ್ವಾ ಅಂತ ಹೇಗೆ ಗೊತ್ತಾಗುತ್ತೆ?

4. ಒಬ್ಬ ವ್ಯಕ್ತಿ ಪ್ರೌಢ ಕ್ರೈಸ್ತನಾಗಿದ್ದಾನಾ ಅಂತ ಹೇಗೆ ಗೊತ್ತಾಗುತ್ತೆ?

4 ಒಬ್ಬ ಪ್ರೌಢ ಕ್ರೈಸ್ತ ಯೆಹೋವ ಏನು ಹೇಳ್ತಾನೋ ಅದನ್ನ ಮಾಡ್ತಾನೆ. ತನಗೆ ಅನಿಸಿದ್ದನ್ನ ಮಾಡೋಕೆ ಹೋಗಲ್ಲ. ಒಂದುವೇಳೆ ಅಪರಿಪೂರ್ಣತೆಯಿಂದ ಏನಾದ್ರೂ ತಪ್ಪುಗಳನ್ನ ಮಾಡಿದ್ರೂ ಯೆಹೋವನ ತರ ಯೋಚ್ನೆ ಮಾಡೋಕೆ, ಆತನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ತುಂಬ ಪ್ರಯತ್ನ ಮಾಡ್ತಾನೆ. (ಎಫೆ. 4:22-24) ಒಬ್ಬ ಪ್ರೌಢ ವ್ಯಕ್ತಿಗೆ ಸರಿಯಾದ ತೀರ್ಮಾನ ತಗೊಳ್ಳೋಕೆ ನಿಯಮ ಪಟ್ಟಿ ಬೇಕಿಲ್ಲ. ಯಾಕಂದ್ರೆ ಅವನು ಬೈಬಲಲ್ಲಿರೋ ನಿಯಮಗಳ ಬಗ್ಗೆ ಮತ್ತು ತತ್ವಗಳ ಬಗ್ಗೆ ಚೆನ್ನಾಗಿ ತಿಳ್ಕೊಂಡಿರುತ್ತಾನೆ. ಅಷ್ಟೇ ಅಲ್ಲ ಅವನು ತೀರ್ಮಾನ ತಗೊಂಡ ಮೇಲೂ ಅದಕ್ಕೆ ತಕ್ಕ ಹಾಗೆ ನಡ್ಕೊಳ್ಳೋಕೆ ತನ್ನಿಂದ ಆಗೋದನ್ನೆಲ್ಲ ಮಾಡ್ತಾನೆ.—1 ಕೊರಿಂ. 9:26, 27.

5. ಒಬ್ಬ ವ್ಯಕ್ತಿ ಪ್ರೌಢ ಕ್ರೈಸ್ತನಾಗಿಲ್ಲ ಅಂದ್ರೆ ಏನಾಗಬಹುದು? (ಎಫೆಸ 4:14, 15)

5 ಒಬ್ಬ ವ್ಯಕ್ತಿ ಪ್ರೌಢ ಕ್ರೈಸ್ತನಾಗಿಲ್ಲ ಅಂದ್ರೆ “ಮೋಸದಿಂದ ವಂಚಿಸುವವ್ರ ಸುಳ್ಳು ಬೋಧನೆಗಳನ್ನ” ಕೇಳಿ ಮರುಳಾಗಬಹುದು. ಅಷ್ಟೇ ಅಲ್ಲ ತಪ್ಪಾದ ಸುದ್ದಿಗಳನ್ನ ಮತ್ತು ಧರ್ಮಭ್ರಷ್ಟರ ಮಾತುಗಳನ್ನ ಕೇಳಿ ಅವನು ದಾರಿತಪ್ಪಬಹುದು.b (ಎಫೆಸ 4:14, 15 ಓದಿ.) ಅವನು ಬೇರೆಯವ್ರ ಮೇಲೆ ಹೊಟ್ಟೆಕಿಚ್ಚು ಪಡಬಹುದು, ಸುಮ್ಮಸುಮ್ಮನೆ ಜಗಳಕ್ಕೆ ಇಳಿಬಹುದು, ಕೆಟ್ಟ ಆಸೆ ಬಂದಾಗ ಅಥವಾ ಅದನ್ನ ಮಾಡೋ ಒತ್ತಡ ಬಂದಾಗ ತಪ್ಪು ಮಾಡಿಬಿಡಬಹುದು.—1 ಕೊರಿಂ. 3:3.

6. ಪ್ರೌಢ ಕ್ರೈಸ್ತನಾಗೋದು ಅಂದ್ರೆ ಏನು ಅಂತ ಅರ್ಥಮಾಡ್ಕೊಳ್ಳೋಕೆ ಒಂದು ಉದಾಹರಣೆ ಕೊಡಿ. (ಚಿತ್ರನೂ ನೋಡಿ.)

6 ನಾವು ಆಗಷ್ಟೇ ನೋಡಿದ ತರ ಬೈಬಲ್‌ ಒಬ್ಬ ವ್ಯಕ್ತಿ ಪ್ರೌಢನಾಗೋದನ್ನ ಒಂದು ಮಗು ಬೆಳೆದು ದೊಡ್ಡದಾಗೋದಕ್ಕೆ ಹೋಲಿಸುತ್ತೆ. ಒಂದು ಚಿಕ್ಕ ಮಗುಗೆ ಏನೂ ಗೊತ್ತಿರಲ್ಲ, ಆ ಮಗುಗೆ ಅಪ್ಪಅಮ್ಮನ ಸಹಾಯ ಬೇಕು. ಇದನ್ನ ಅರ್ಥಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡಿ. ಒಂದು ಚಿಕ್ಕ ಹುಡುಗಿ ರಸ್ತೆ ದಾಟುವಾಗ ಅವಳ ಅಮ್ಮ ಅವಳ ಕೈ ಹಿಡ್ಕೊಂಡು ದಾಟಿಸ್ತಾರೆ. ಆ ಹುಡುಗಿ ಸ್ವಲ್ಪ ದೊಡ್ಡವಳಾದ ಮೇಲೆ ಅವಳೇ ರಸ್ತೆ ದಾಟ್ತಾಳೆ. ಆದ್ರೆ ಆಚೆ ಈಚೆ ನೋಡ್ಕೊಂಡು ದಾಟು ಅಂತ ಅವಳ ಅಮ್ಮ ಯಾವಾಗ್ಲೂ ನೆನಪಿಸ್ತಾ ಇರ್ತಾಳೆ. ಅವಳು ಇನ್ನೂ ದೊಡ್ಡವಳಾದ ಮೇಲೆ ಯಾರ ಸಹಾಯನೂ ಇಲ್ಲದೇ ಅವಳೇ ಹುಷಾರಾಗಿ ರಸ್ತೆ ದಾಟ್ತಾಳೆ. ಆ ಹುಡುಗಿಗೆ ಹುಷಾರಾಗಿ ಇರೋಕೆ ಹೇಗೆ ಅವಳ ಅಮ್ಮನ ಸಹಾಯ ಬೇಕಿತ್ತೋ ಹಾಗೇ ಪ್ರೌಢನಾಗಿಲ್ಲದ ಒಬ್ಬ ಕ್ರೈಸ್ತನಿಗೆ ಅಪಾಯದಿಂದ ದೂರ ಇರೋಕೆ, ಒಳ್ಳೇ ತೀರ್ಮಾನಗಳನ್ನ ತಗೊಳ್ಳೋಕೆ ಆಗಾಗ ಪ್ರೌಢ ಕ್ರೈಸ್ತರ ಸಹಾಯ ಬೇಕಾಗುತ್ತೆ. ಆದ್ರೆ ಒಬ್ಬ ಪ್ರೌಢ ಕ್ರೈಸ್ತನು ಬೈಬಲ್‌ ತತ್ವಗಳನ್ನ ಚೆನ್ನಾಗಿ ತಿಳ್ಕೊಂಡು ಯೆಹೋವ ಹೇಗೆ ಯೋಚ್ನೆ ಮಾಡ್ತಾನೆ ಅಂತ ಅರ್ಥಮಾಡ್ಕೊತಾನೆ. ಆಮೇಲೆ ನಿರ್ಣಯಗಳನ್ನ ಮಾಡ್ತಾನೆ.

ಚಿತ್ರಗಳು: 1. ಒಬ್ಬ ಯುವ ಸಹೋದರಿ ಅಪ್ಪಅಮ್ಮ ಹೇಳೋದನ್ನ ಕೇಳಿಸ್ಕೊಳ್ತಾ ಇದ್ದಾಳೆ. ಅವಳ ಟ್ಯಾಬಲ್ಲಿ ಒಂದು ಲೇಖನ ತೆರೆದಿಟ್ಟಿದ್ದಾಳೆ ಮತ್ತು ಅವಳ ಅಪ್ಪಅಮ್ಮ ಬೈಬಲ್‌ ತೆರೆದಿಟ್ಟಿದ್ದಾರೆ. 2. ಅದೇ ಸಹೋದರಿ ವೈಯಕ್ತಿಕ ಅಧ್ಯಯನ ಮಾಡ್ತಿದ್ದಾಳೆ ಅವಳು ಟ್ಯಾಬನ್ನ, ಬೈಬಲನ್ನ ಮತ್ತು ಒಂದು ನೋಟ್‌ಬುಕ್ಕನ್ನ ಬಳಸ್ತಿದ್ದಾಳೆ. ಚಿತ್ರದ ಒಳಗಿರೋ ಚಿತ್ರಗಳು: 1. ಒಬ್ಬ ತಾಯಿ ರಸ್ತೆ ದಾಟುವಾಗ ಮಗಳ ಕೈ ಹಿಡ್ಕೊಂಡಿದ್ದಾಳೆ, ಎರಡೂ ಕಡೆ ನೋಡಿ ರಸ್ತೆ ದಾಟೋಕೆ ನೆನಪಿಸ್ತಿದ್ದಾಳೆ. 2. ಆ ಹುಡುಗಿ ದೊಡ್ಡವಳಾದ ಮೇಲೆ ತಾನೇ ರಸ್ತೆ ದಾಟ್ತಿದ್ದಾಳೆ.

ಪ್ರೌಢರಲ್ಲದ ಕ್ರೈಸ್ತರು ಬೈಬಲ್‌ ತತ್ವಗಳನ್ನ ಅರ್ಥಮಾಡ್ಕೊಂಡು ಒಳ್ಳೇ ತೀರ್ಮಾನಗಳನ್ನ ಮಾಡೋದು ಹೇಗೆ ಅಂತ ಕಲಿಬೇಕು (ಪ್ಯಾರ 6 ನೋಡಿ)


7. ಪ್ರೌಢ ಕ್ರೈಸ್ತರಿಗೂ ಬೇರೆಯವ್ರ ಸಹಾಯ ಬೇಕಾಗುತ್ತಾ?

7 ಪ್ರೌಢ ಕ್ರೈಸ್ತನಿಗೂ ಬೇರೆಯವ್ರ ಸಹಾಯ ಬೇಕಾಗುತ್ತೆ. ಆದ್ರೆ ಅವನು ಪ್ರೌಢನಲ್ಲದ ವ್ಯಕ್ತಿ ತರ ನಡ್ಕೊಳ್ಳಲ್ಲ. ಪ್ರೌಢನಲ್ಲದ ವ್ಯಕ್ತಿ ತಾನು ಮಾಡಬೇಕಾಗಿರೋ ತೀರ್ಮಾನನೂ ಬೇರೆಯವ್ರ ಹತ್ರ ಹೋಗಿ ಕೇಳ್ತಾನೆ. ಆದ್ರೆ ಪ್ರೌಢನಾಗಿರೋ ವ್ಯಕ್ತಿ ಜಾಸ್ತಿ ಅನುಭವ ಇರುವವ್ರ ಹತ್ರ ಸಲಹೆ ಪಡ್ಕೊಂಡ್ರೂ ತಾನೇ ನಿರ್ಣಯ ಮಾಡ್ತಾನೆ. ಹೀಗೆ “ತನ್ನ ಹೊರೆಯನ್ನ ತಾನೇ ಹೊತ್ಕೊಬೇಕು” ಅಂತ ಅರ್ಥಮಾಡ್ಕೊತಾನೆ.—ಗಲಾ. 6:5.

8. ಎಲ್ಲಾ ಪ್ರೌಢ ಕ್ರೈಸ್ತರು ಒಂದೇ ತರ ಇರ್ತಾರಾ?

8 ನಾವೆಲ್ರೂ ನೋಡೋಕೆ ಒಂದೇ ತರ ಇಲ್ಲ. ಅದೇ ತರ ಪ್ರೌಢ ಕ್ರೈಸ್ತರೂ ಒಂದೇ ತರ ಇರಲ್ಲ. ಅವ್ರಿಗೆ ಬೇರೆಬೇರೆ ಗುಣಗಳಿರುತ್ತೆ. ಉದಾಹರಣೆಗೆ, ಕೆಲವರು ತುಂಬ ಬುದ್ಧಿವಂತರಾಗಿ ಇರ್ತಾರೆ, ಕೆಲವ್ರಿಗೆ ಜಾಸ್ತಿ ಧೈರ್ಯ ಇರುತ್ತೆ, ಕೆಲವ್ರಿಗೆ ಧಾರಾಳ ಮನಸ್ಸಿರುತ್ತೆ, ಇನ್ನು ಕೆಲವ್ರಿಗೆ ಕರುಣೆ-ಕನಿಕರ ಜಾಸ್ತಿ ಇರುತ್ತೆ. ಹಾಗಾಗಿ ಇಬ್ರು ಪ್ರೌಢ ಕ್ರೈಸ್ತರು ಒಂದೇ ತರದ ಸನ್ನಿವೇಶ ಬಂದಾಗ ಬೇರೆಬೇರೆ ತರ ತೀರ್ಮಾನ ತಗೊಳ್ತಾರೆ. ಯಾಕಂದ್ರೆ ಅವ್ರಿಬ್ರೂ ಬೈಬಲ್‌ ತತ್ವಕ್ಕೆ ತಕ್ಕ ಹಾಗೆ ತೀರ್ಮಾನ ಮಾಡಿದ್ರೂ ಅವ್ರ ಮನಸ್ಸಾಕ್ಷಿ ಬೇರೆಬೇರೆ ತರ ಇರೋದ್ರಿಂದ ಅವರು ಮಾಡೋ ತೀರ್ಮಾನನೂ ಬೇರೆಬೇರೆ ತರ ಇರುತ್ತೆ. ಅದಕ್ಕೇ ಅವರು ‘ನಾನು ಸರಿ ನೀನು ತಪ್ಪು’ ಅಂತ ಒಬ್ರಿಗೊಬ್ರು ತೀರ್ಪು ಮಾಡೋಕೆ ಹೋಗಲ್ಲ, ಬದ್ಲಿಗೆ ಒಗ್ಗಟ್ಟಾಗಿ ಇರೋಕೆ ನೋಡ್ತಾರೆ.—ರೋಮ. 14:10; 1 ಕೊರಿಂ. 1:10.

ನಾವು ಪ್ರೌಢ ಕ್ರೈಸ್ತರಾಗಬೇಕಂದ್ರೆ ಏನು ಮಾಡಬೇಕು?

9. ನಾವು ಇದ್ದಕ್ಕಿದ್ದ ಹಾಗೆ ಪ್ರೌಢ ಕ್ರೈಸ್ತರಾಗ್ತೀವಾ? ವಿವರಿಸಿ.

9 ಒಂದು ಚಿಕ್ಕ ಹುಡುಗ ಬೆಳೆದು ದೊಡ್ಡವನಾಗೋಕೆ ಏನೂ ಪ್ರಯತ್ನ ಮಾಡಬೇಕಾಗಿಲ್ಲ, ತಾನಾಗಿ ತಾನೇ ಬೆಳಿತಾನೆ. ಆದ್ರೆ ಒಬ್ಬ ವ್ಯಕ್ತಿ ಪ್ರೌಢ ಕ್ರೈಸ್ತನಾಗಬೇಕಂದ್ರೆ ಇದ್ದಕ್ಕಿದ್ದಂಗೆ ಆಗಲ್ಲ, ಅವನು ಪ್ರಯತ್ನ ಮಾಡಬೇಕು. ಉದಾಹರಣೆಗೆ ಕೊರಿಂಥದಲ್ಲಿದ್ದ ಸಹೋದರ ಸಹೋದರಿಯರು ಮೊದ್ಲು ಸಿಹಿಸುದ್ದಿಯನ್ನ ಕೇಳಿದ್ರು, ಆಮೇಲೆ ದೀಕ್ಷಾಸ್ನಾನ ತಗೊಂಡ್ರು, ಪವಿತ್ರ ಶಕ್ತಿಯ ಸಹಾಯ ಪಡ್ಕೊಂಡ್ರು, ಅಪೊಸ್ತಲ ಪೌಲ ಕೊಟ್ಟ ಸಲಹೆಯಿಂದ ತುಂಬ ವಿಷ್ಯಗಳನ್ನ ಕಲಿತ್ರು. (ಅ. ಕಾ. 18:8-11) ಆದ್ರೂ ಕೆಲವು ಸಹೋದರ ಸಹೋದರಿಯರು ದೀಕ್ಷಾಸ್ನಾನ ತಗೊಂಡು ತುಂಬ ವರ್ಷಗಳಾದ್ರೂ ಪ್ರೌಢ ಕ್ರೈಸ್ತರಾಗಲಿಲ್ಲ. (1 ಕೊರಿಂ. 3:2) ಅವ್ರ ತರ ನಾವು ಆಗದೇ ಇರೋಕೆ ಏನು ಮಾಡಬೇಕು?

10. ಪ್ರೌಢ ಕ್ರೈಸ್ತರಾಗೋಕೆ ನಾವು ಏನು ಮಾಡಬೇಕು? (ಯೂದ 20)

10 ನಾವು ಪ್ರೌಢರಾಗಬೇಕಂದ್ರೆ ಮೊದ್ಲು ನಮ್ಮಲ್ಲೇ ಆ ಆಸೆ ಬರಬೇಕು. ಆದ್ರೆ ‘ಮೂರ್ಖತನವನ್ನ ಪ್ರೀತಿಸುವವರು’ ಅಂದ್ರೆ ತಾವು ಈಗ ಹೇಗಿದ್ದೀವೋ ಹಾಗಿದ್ರೆ ಸಾಕು ಅಂತ ಹೇಳುವವರು ಯಾವತ್ತೂ ಪ್ರೌಢರಾಗಲ್ಲ. (ಜ್ಞಾನೋ. 1:22) ಇದು ಹೇಗಿರುತ್ತೆ ಅಂದ್ರೆ ಒಬ್ಬ ವ್ಯಕ್ತಿ ವಯಸ್ಸಲ್ಲಿ ದೊಡ್ಡವನಾಗಿದ್ರೂ ಒಂದು ನಿರ್ಣಯ ಮಾಡಬೇಕಾಗಿ ಬಂದಾಗ ಅಪ್ಪ ಅಮ್ಮ ಹೇಗೆ ಹೇಳ್ತಾರೋ ಹಾಗೇ ನಿರ್ಣಯ ಮಾಡ್ತಾನೆ. ಆದ್ರೆ ನಾವು ಹಾಗೆ ಇರಬಾರದು. ನಮ್ಮ ಜವಾಬ್ದಾರಿಯನ್ನ ನಾವೇ ತಗೊಬೇಕು, ಯೆಹೋವನ ಜೊತೆಗಿರೋ ಸಂಬಂಧವನ್ನ ನಾವೇ ಗಟ್ಟಿ ಮಾಡ್ಕೊಬೇಕು. (ಯೂದ 20 ಓದಿ.) ಹಾಗಾಗಿ ನಿಮಗೆ ಪ್ರೌಢರಾಗೋಕೆ ಸಹಾಯ ಬೇಕಿದ್ರೆ ಯೆಹೋವನ ಹತ್ರ ಪ್ರಾರ್ಥಿಸಿ. ಯಾಕಂದ್ರೆ ದೇವರಿಗೆ ಇಷ್ಟ ಆಗೋ ಕೆಲಸಗಳನ್ನ ಮಾಡೋಕೆ ನಮಗೆ “ಬಯಕೆಯನ್ನ, ಅದ್ರ ಪ್ರಕಾರ ನಡ್ಕೊಳ್ಳೋ ಶಕ್ತಿನ” ದೇವರೇ ಕೊಡ್ತಾನೆ.—ಫಿಲಿ. 2:13.

11. ನಾವು ಪ್ರೌಢ ಕ್ರೈಸ್ತರಾಗೋಕೆ ಯೆಹೋವ ಹೇಗೆಲ್ಲ ಸಹಾಯ ಮಾಡ್ತಾನೆ? (ಎಫೆಸ 4:11-13)

11 ಪ್ರೌಢರಾಗೋಕೆ ಯೆಹೋವ ನಮಗೆ ಹೇಗೆ ಸಹಾಯ ಮಾಡ್ತಾನೆ? ಸಭೆಯಲ್ಲಿ ಕುರುಬರಾಗಿ ಮತ್ತು ಬೋಧಕರಾಗಿರೋ ಸಹೋದರರಿಂದ ಸಹಾಯ ಮಾಡ್ತಾನೆ. ಅವರು ನಮ್ಮಲ್ಲಿ ಪ್ರತಿಯೊಬ್ಬರಿಗೂ “ದೊಡ್ಡವ್ರ ತರ” ಇರೋಕೆ ಅಂದ್ರೆ ‘ಕ್ರಿಸ್ತನ ತರ ಪೂರ್ತಿ ಪ್ರೌಢರಾಗೋಕೆ ಸಹಾಯ ಮಾಡ್ತಾರೆ.’ (ಎಫೆಸ 4:11-13 ಓದಿ.) ಇದಷ್ಟೇ ಅಲ್ಲ ಯೆಹೋವ ನಮಗೆ “ಕ್ರಿಸ್ತನ ಮನಸ್ಸನ್ನ” ಪಡ್ಕೊಳ್ಳೋಕೆ ಪವಿತ್ರಶಕ್ತಿನೂ ಕೊಡ್ತಾನೆ. (1 ಕೊರಿಂ. 2:14-16) ಇದ್ರ ಜೊತೆಗೆ ಯೆಹೋವ ಬೈಬಲಲ್ಲಿ ನಾಲ್ಕು ಸುವಾರ್ತಾ ಪುಸ್ತಕಗಳನ್ನ ಬರೆಸಿದ್ದಾನೆ. ಅದು ಯೇಸು ಭೂಮಿಯಲ್ಲಿದ್ದಾಗ ಹೇಗೆ ಯೋಚಿಸ್ತಿದ್ದನು, ಮಾತಾಡ್ತಿದ್ದನು, ನಡ್ಕೊಳ್ತಿದ್ದನು ಅಂತ ಕಲಿಸುತ್ತೆ. ಅದನ್ನ ಓದಿ ನಾವೂ ಯೇಸು ತರ ನಡ್ಕೊಳ್ಳೋಕೆ, ಯೋಚಿಸೋಕೆ ಪ್ರಯತ್ನ ಹಾಕಿದ್ರೆ ಖಂಡಿತ ಪ್ರೌಢರಾಗ್ತೀವಿ.

ಗಟ್ಟಿಯಾದ ಆಹಾರ ಹೇಗೆ ಸಹಾಯ ಮಾಡುತ್ತೆ?

12. ‘ಕ್ರಿಸ್ತನ ಬಗ್ಗೆ ನಾವು ಮೊದಮೊದ್ಲು ಕಲಿತ ಬೋಧನೆಗಳು’ ಅಂದ್ರೆ ಏನು?

12 “ಕ್ರಿಸ್ತನ ಬಗ್ಗೆ ನಾವು ಮೊದಮೊದ್ಲು ಕಲಿತ ಬೋಧನೆಗಳೇ” ಸಾಕು ಅಂತ ಸುಮ್ಮನಾಗಿ ಬಿಟ್ರೆ ನಾವು ಪ್ರೌಢರಾಗೋಕೆ ಆಗಲ್ಲ. ‘ಮೊದಮೊದ್ಲು ಕಲಿತ ಬೋಧನೆಗಳು’ ಅಂದ್ರೆ ನಾವು ಸತ್ಯಕ್ಕೆ ಬಂದಾಗ ಕಲಿತ ಮುಖ್ಯವಾದ ವಿಷ್ಯಗಳು. ಅದ್ರಲ್ಲಿ ಪಶ್ಚಾತ್ತಾಪ ಪಡೋದು, ನಂಬಿಕೆ ಇಡೋದು, ದೀಕ್ಷಾಸ್ನಾನ ತಗೊಳ್ಳೋದು, ಸತ್ತವರು ಮತ್ತೆ ಜೀವಂತವಾಗಿ ಬರ್ತಾರೆ ಅಂತ ನಂಬೋದು ಸೇರಿದೆ. (ಇಬ್ರಿ. 6:1, 2) ಈ ವಿಷ್ಯಗಳನ್ನ ಎಲ್ಲಾ ಕ್ರೈಸ್ತರು ನಂಬಲೇ ಬೇಕು. ಅದಕ್ಕೇ ಅಪೊಸ್ತಲ ಪೇತ್ರ ಐವತ್ತನೇ ದಿನದ ಹಬ್ಬಕ್ಕೆ ಸೇರಿ ಬಂದಿದ್ದ ಜನ್ರಿಗೆ ಈ ವಿಷ್ಯಗಳನ್ನ ಕಲಿಸಿದ. (ಅ. ಕಾ. 2:32-35, 38) ನಾವೂ ಯೇಸುವಿನ ಶಿಷ್ಯರಾಗಬೇಕಂದ್ರೆ ಈ ಮುಖ್ಯವಾದ ವಿಷ್ಯಗಳನ್ನ ಒಪ್ಕೊಬೇಕು. ಉದಾಹರಣೆಗೆ ಅಪೊಸ್ತಲ ಪೌಲನ ಕಾಲದಲ್ಲಿ ಯಾರೆಲ್ಲಾ ಸತ್ತವ್ರಿಗೆ ಮತ್ತೆ ಜೀವ ಸಿಗಲ್ಲ ಅಂತ ಹೇಳ್ತಿದ್ರೋ ಅವರು ಯೇಸು ಮೇಲೆ ಇಟ್ಟಿರೋ ನಂಬಿಕೆ ವ್ಯರ್ಥ ಅಂತ ಪೌಲ ಹೇಳಿದ. (1 ಕೊರಿಂ. 15:12-14) ಆದ್ರೆ ನಾವು ಇದನ್ನಷ್ಟೇ ತಿಳ್ಕೊಂಡ್ರೆ ಸಾಕಾಗುತ್ತಾ? ಇಲ್ಲ.

13. ಇಬ್ರಿಯ 5:14ರಲ್ಲಿ ಹೇಳಿರೋ ತರ ಗಟ್ಟಿಯಾದ ಆಹಾರ ತಗೊಳ್ಳೋಕೆ ನಾವೇನು ಮಾಡಬೇಕು? (ಚಿತ್ರನೂ ನೋಡಿ.)

13 ನಾವು ಗಟ್ಟಿಯಾದ ಆಹಾರವನ್ನ ತಗೋಬೇಕು. ಅಂದ್ರೆ ಯೆಹೋವನ ನಿಯಮಗಳ ಬಗ್ಗೆ ಮತ್ತು ತತ್ವಗಳ ಬಗ್ಗೆ ನಾವು ತಿಳ್ಕೊಬೇಕು. ಆಗ ಯೆಹೋವ ಹೇಗೆ ಯೋಚಿಸ್ತಾನೆ ಅಂತ ಅರ್ಥಮಾಡ್ಕೊಳ್ಳೋಕೆ ಆಗುತ್ತೆ. ಅದಕ್ಕೆ ನಾವು ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡಬೇಕು, ಓದಿದ್ರ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಬೇಕು, ಕಲಿತಿದ್ದನ್ನ ಪಾಲಿಸಬೇಕು. ಹೀಗೆ ಮಾಡಿದ್ರೆ ಯೆಹೋವನಿಗೆ ಇಷ್ಟ ಆಗೋ ತರ ಒಳ್ಳೇ ತೀರ್ಮಾನಗಳನ್ನ ಮಾಡೋಕೆ ಕಲಿತೀವಿ.c—ಇಬ್ರಿಯ 5:14 ಓದಿ.

ಒಬ್ಬ ಸಹೋದರ ವೈಯಕ್ತಿಕ ಅಧ್ಯಯನ ಮಾಡ್ತಿದ್ದಾನೆ. ಚಿತ್ರದ ಒಳಗಿರೋ ಚಿತ್ರಗಳು: ಅವನು ಸಮುದ್ರದ ಬಗ್ಗೆ ಒಂದು ಸಿನಿಮಾ ನೋಡಬೇಕು ಅಂದ್ಕೊಂಡಿದ್ದಾನೆ.

ಗಟ್ಟಿಯಾದ ಆಹಾರ ತಿಂದ್ರೆ ಯೆಹೋವನಿಗೆ ಇಷ್ಟ ಆಗೋ ತರ ತೀರ್ಮಾನಗಳನ್ನ ಮಾಡೋಕೆ ಕಲಿತೀವಿ (ಪ್ಯಾರ 13 ನೋಡಿ)d


14. ಕೊರಿಂಥದಲ್ಲಿದ್ದ ಕ್ರೈಸ್ತರಿಗೆ ಪ್ರೌಢರಾಗೋಕೆ ಪೌಲ ಹೇಗೆ ಸಹಾಯ ಮಾಡಿದ?

14 ಪ್ರೌಢರಲ್ಲದ ಕ್ರೈಸ್ತರಿಗೆ ಬೈಬಲಲ್ಲಿ ನೇರವಾದ ನಿಯಮ ಇಲ್ಲದೇ ಇದ್ದಾಗ ತೀರ್ಮಾನ ತಗೊಳ್ಳೋಕೆ ಕಷ್ಟ ಆಗುತ್ತೆ. ಯಾವುದಾದ್ರೂ ಒಂದು ವಿಷ್ಯದ ಬಗ್ಗೆ ಬೈಬಲಲ್ಲಿ ನೇರವಾದ ನಿಯಮ ಇಲ್ಲದಿದ್ರೆ ಮನಸ್ಸಿಗೆ ಬಂದ ಹಾಗೆ ಮಾಡಬಹುದು ಅಂತ ಕೆಲವರು ಅಂದ್ಕೊಬಹುದು. ಇನ್ನು ಕೆಲವರು ಎಲ್ಲಾದಕ್ಕೂ ನಿಯಮ ಇರಬೇಕು ಅಂತ ಹೇಳಬಹುದು. ಕೊರಿಂಥದಲ್ಲಿದ್ದ ಕ್ರೈಸ್ತರು ಹೀಗೇ ಇದ್ರು ಅನಿಸುತ್ತೆ. ಅವರು ಪೌಲನ ಹತ್ರ ಮೂರ್ತಿಗಳಿಗೆ ಅರ್ಪಿಸಿದ ಪ್ರಸಾದವನ್ನ ತಿನ್ನಬೇಕಾ, ಬೇಡ್ವಾ ಅಂತ ಕೇಳಿದ್ರು. ಆಗ ಪೌಲ ಅವ್ರಿಗೆ ಒಂದು ನಿಯಮ ಕೊಡ್ಲಿಲ್ಲ, ಬದ್ಲಿಗೆ ಅದು ಅವ್ರ ಮನಸ್ಸಾಕ್ಷಿಗೆ ಬಿಟ್ಟಿದ್ದು ಮತ್ತು ಪ್ರತಿಯೊಬ್ರಿಗೂ “ಆಯ್ಕೆ ಮಾಡೋ . . . ಸ್ವಾತಂತ್ರ್ಯ” ಇದೆ ಅಂತ ಅರ್ಥ ಮಾಡಿಸಿದ. ಅವರ ಮನಸಾಕ್ಷಿ ಚುಚ್ಚದ ಹಾಗೆ, ಬೇರೆಯವ್ರನ್ನ ಎಡವಿಸದ ಹಾಗೆ ತೀರ್ಮಾನಗಳನ್ನ ಮಾಡೋಕೆ ಸಹಾಯ ಮಾಡೋ ಕೆಲವು ಬೈಬಲ್‌ ತತ್ವಗಳನ್ನ ಹೇಳಿದ. (1 ಕೊರಿಂ. 8:4, 7-9) ಹೀಗೆ ಸರಿ ಯಾವುದು ತಪ್ಪು ಯಾವುದು ಅಂತ ಇನ್ನೊಬ್ರ ಹತ್ರ ಕೇಳದೇ, ಎಲ್ಲದಕ್ಕೂ ನಿಯಮಗಳನ್ನ ಹುಡುಕದೇ, ತತ್ವಗಳನ್ನ ಹುಡುಕಿ ಅವರಾಗೇ ತೀರ್ಮಾನ ಮಾಡೋದು ಹೇಗೆ ಅಂತ ಪೌಲ ಕೊರಿಂಥದವ್ರಿಗೆ ಹೇಳ್ಕೊಟ್ಟ. ಅವ್ರಿಗೆ ಪ್ರೌಢರಾಗೋಕೆ ಸಹಾಯ ಮಾಡಿದ.

15. ಇಬ್ರಿಯ ಕ್ರೈಸ್ತರು ಪ್ರೌಢರಾಗೋಕೆ ಪೌಲ ಹೇಗೆ ಸಹಾಯ ಮಾಡಿದ?

15 ಅಪೊಸ್ತಲ ಪೌಲ ಇಬ್ರಿಯರಿಗೆ ಬರೆದ ಪತ್ರದಿಂದನೂ ನಾವೊಂದು ಪಾಠ ಕಲಿಬಹುದು. ಆ ಸಭೆಯಲ್ಲಿದ್ದ ಕೆಲವು ಕ್ರೈಸ್ತರು ನಿಂತ ನೀರಿನ ತರ ಆಗಿಬಿಟ್ರು. ಅವರು ಇನ್ನೂ ಜಾಸ್ತಿ ಪ್ರೌಢರಾಗೋಕೆ ಪ್ರಯತ್ನ ಮಾಡ್ಲಿಲ್ಲ. ಅವರು ಗಟ್ಟಿ ಆಹಾರ ತಿನ್ನುವವ್ರ ತರ ಅಲ್ಲ, “ಮತ್ತೆ ಹಾಲು ಕುಡಿಯುವವ್ರ ತರ” ಆಗಿಬಿಟ್ಟಿದ್ರು. (ಇಬ್ರಿ. 5:12) ಅಂದ್ರೆ ಯೆಹೋವ ಕಲಿಸ್ತಾ ಇದ್ದ ಹೊಸ ವಿಷ್ಯಗಳನ್ನ ಅವರು ಕಲಿಯೋಕೆ ಮನಸ್ಸು ಮಾಡ್ಲಿಲ್ಲ, ಅದನ್ನ ಅವರು ಒಪ್ಕೊಳ್ಳಲಿಲ್ಲ. (ಜ್ಞಾನೋ. 4:18) ಉದಾಹರಣೆಗೆ ಯೇಸು ತನ್ನ ಜೀವ ತ್ಯಾಗ ಮಾಡಿದ ಮೇಲೆ ಮೋಶೆಯ ನಿಯಮ ಪುಸ್ತಕ ಕೊನೆ ಆಯ್ತು. ಆದ್ರೆ ಯೆಹೂದಿ ಧರ್ಮದಿಂದ ಬಂದವರು ಅದನ್ನ ಒಪ್ಕೊಳ್ಳಲಿಲ್ಲ. (ರೋಮ. 10:4; ತೀತ 1:10) ಕ್ರಿಸ್ತನ ನಿಯಮ ಬಂದು 30 ವರ್ಷ ಆದ್ರೂ ಅವರು ಮೋಶೆಯ ನಿಯಮನೇ ಪಾಲಿಸ್ತಾ ಇದ್ರು. ಯೆಹೋವ ಕಲಿಸೋ ವಿಷ್ಯಗಳನ್ನ ಅರ್ಥಮಾಡ್ಕೊಳ್ಳೋಕೆ ಅವ್ರಿಗೆ 30 ವರ್ಷ ಸಮಯ ಸಿಕ್ಕಿದ್ರೂ ಅವರು ಅದನ್ನ ಅರ್ಥಮಾಡ್ಕೊಳ್ಳಲಿಲ್ಲ. ಅದಕ್ಕೇ ಪೌಲ ಅವ್ರಿಗೆ ಸಹಾಯ ಮಾಡಿದ. ಯೇಸುವಿನ ಬಿಡುಗಡೆ ಬೆಲೆಯ ಆಧಾರದ ಮೇಲೆ ಯೆಹೋವ ಮಾಡಿರೋ ಹೊಸ ಆರಾಧನೆಯ ಏರ್ಪಾಡು ಎಷ್ಟು ಚೆನ್ನಾಗಿದೆ ಅನ್ನೋದನ್ನ ತನ್ನ ಪತ್ರದಲ್ಲಿ ಬರೆದ. ಆಗ ಆ ಕ್ರೈಸ್ತರ ನಂಬಿಕೆ ಗಟ್ಟಿ ಆಯ್ತು. ಅಷ್ಟೇ ಅಲ್ಲ ಅವರು ಈ ರೀತಿ ಬದಲಾವಣೆ ಮಾಡ್ಕೊಂಡಿದ್ರಿಂದ ಎಷ್ಟೋ ಯೆಹೂದ್ಯರು ಅವ್ರನ್ನ ವಿರೋಧಿಸಿದ್ರೂ ಅವರು ಧೈರ್ಯವಾಗಿದ್ರು ಮತ್ತು ಸಿಹಿಸುದ್ದಿ ಸಾರೋದನ್ನ ಬಿಡ್ಲಿಲ್ಲ.—ಇಬ್ರಿ. 10:19-23.

ನಮಗೆ ಯಾಕೆ ಅತಿಯಾದ ಆತ್ಮವಿಶ್ವಾಸ ಇರಬಾರದು?

16. ನಾವು ಪ್ರೌಢರಾದ ಮೇಲೂ ಏನು ಮಾಡ್ತಾ ಇರಬೇಕು?

16 ನಾವು ಪ್ರೌಢರಾದ ಮೇಲೆ ಅಲ್ಲಿಗೇ ನಿಂತುಬಿಡಬಾರದು, ಪ್ರಗತಿ ಮಾಡ್ತಾನೇ ಇರಬೇಕು. ಪ್ರೌಢರಾದ ಮೇಲೆ ಯೆಹೋವ ದೇವರ ಜೊತೆ ನಮ್ಮ ಸಂಬಂಧವನ್ನ ಇನ್ನು ಗಟ್ಟಿ ಮಾಡ್ಕೊಳ್ಳೋ ಅವಶ್ಯಕತೆ ಇಲ್ಲ ಅನ್ನೋ ಅತಿಯಾದ ಆತ್ಮವಿಶ್ವಾಸ ಯಾವತ್ತೂ ಬರಬಾರದು. (1 ಕೊರಿಂ. 10:12) ಅದಕ್ಕೇ ನಮ್ಮನ್ನ ನಾವು ಯಾವಾಗ್ಲೂ “ಪರೀಕ್ಷಿಸ್ಕೊಳ್ತಾ” ಇರಬೇಕು.—2 ಕೊರಿಂ. 13:5.

17. ಪೌಲ ಕೊಲೊಸ್ಸೆಯವ್ರಿಗೆ ಪ್ರೌಢರಾಗ್ತಾ ಇರಬೇಕು ಅಂತ ಯಾಕೆ ಹೇಳಿದ?

17 ನಾವು ಯಾಕೆ ಪ್ರೌಢರಾಗ್ತಾ ಇರಬೇಕು ಅಂತ ಪೌಲ ಕೊಲೊಸ್ಸೆಯವ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ. ಈಗಾಗ್ಲೇ ಪ್ರೌಢರಾಗಿರೋ ಕೊಲೊಸ್ಸೆಯವ್ರಿಗೆ ಇನ್ನೂ ಪ್ರೌಢರಾಗೋಕೆ ಯಾಕೆ ಹೇಳಿದ? ಯಾಕಂದ್ರೆ ಅವರು ಲೋಕದ ಜನ್ರ ತರ ಯೋಚ್ನೆ ಮಾಡಿಬಿಡಬಹುದಿತ್ತು. (ಕೊಲೊ. 2:6-10) ಎಪಫ್ರ ಕೂಡ ಸಭೆಯಲ್ಲಿರೋ ಸಹೋದರ ಸಹೋದರಿಯರಿಗಾಗಿ ಪ್ರಾರ್ಥನೆ ಮಾಡಿದ. ‘ದೇವರ ಜೊತೆ ಅವ್ರಿಗೆ ಒಳ್ಳೇ ಸಂಬಂಧ ಇರಬೇಕು’, ಅವರು ಇನ್ನೂ ಪ್ರೌಢರಾಗಬೇಕು ಅಂತ ಯಾವಾಗ್ಲೂ ದೇವರ ಹತ್ರ ಬೇಡ್ಕೊಳ್ತಾ ಇದ್ದ. (ಕೊಲೊ. 4:12) ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? ಪ್ರೌಢರಾಗಬೇಕಂದ್ರೆ ನಮ್ಮ ಪ್ರಯತ್ನನೂ ಹಾಕಬೇಕು ಮತ್ತು ಯೆಹೋವನ ಸಹಾಯನೂ ಬೇಕು. ಅದಕ್ಕೇ ಪೌಲ ಮತ್ತು ಎಪಫ್ರ ಕೊಲೊಸ್ಸೆಯವ್ರಿಗೆ ಎಷ್ಟೇ ಕಷ್ಟ ಬಂದ್ರೂ ಪ್ರೌಢರಾಗೋಕೆ ಪ್ರಯತ್ನ ಮಾಡ್ತಾ ಇರಿ ಅಂತ ಹೇಳಿದ್ರು.

18. ಒಬ್ಬ ಪ್ರೌಢ ಕ್ರೈಸ್ತ ಹುಷಾರಾಗಿ ಇಲ್ಲಾಂದ್ರೆ ಏನಾಗಬಹುದು? (ಚಿತ್ರನೂ ನೋಡಿ.)

18 ಪೌಲ ಇಬ್ರಿಯ ಕ್ರೈಸ್ತರಿಗೆ, ಒಬ್ಬ ಪ್ರೌಢ ಕ್ರೈಸ್ತ ಹುಷಾರಾಗಿ ಇಲ್ಲಾಂದ್ರೆ ಅವನು ಶಾಶ್ವತವಾಗಿ ಯೆಹೋವನ ಮೆಚ್ಚಿಗೆ ಕಳ್ಕೊಂಡು ಬಿಡಬಹುದು ಅಂತ ಎಚ್ಚರಿಸಿದ. ಅಂಥ ವ್ಯಕ್ತಿ ಯೆಹೋವನ ಮಾತನ್ನ ಕೇಳದೇ ತನ್ನ ಹೃದಯವನ್ನ ಕಲ್ಲು ಮಾಡ್ಕೊಂಡು ಬಿಟ್ರೆ ಯೆಹೋವನಿಂದ ತುಂಬ ದೂರ ಹೋಗಿಬಿಡ್ತಾನೆ. ಆಗ ಅವನಿಗೆ ಪಶ್ಚಾತ್ತಾಪ ಪಡೋಕೂ ಆಗಲ್ಲ, ದೇವರಿಂದ ಕ್ಷಮೆ ಪಡ್ಕೊಳ್ಳೋಕೂ ಆಗಲ್ಲ. ಅಂಥ ಜನ್ರ ಬಗ್ಗೆ ಪೌಲ ತನ್ನ ಪತ್ರದಲ್ಲಿ ಬರೆದ. ಆದ್ರೆ ಇಬ್ರಿಯ ಕ್ರೈಸ್ತರು ಆ ಮಟ್ಟಕ್ಕೆ ಹೋಗ್ಲಿಲ್ಲ. (ಇಬ್ರಿ. 6:4-9) ಇವತ್ತೂ ಯೆಹೋವನಿಂದ ದೂರ ಹೋಗಿರೋ ಮತ್ತು ಬಹಿಷ್ಕಾರ ಆಗಿರೋ ಎಷ್ಟೋ ಸಹೋದರ ಸಹೋದರಿಯರು ಇಬ್ರಿಯ ಕ್ರೈಸ್ತರ ತರನೇ ಇದ್ದಾರೆ. ಇವರು ಪಶ್ಚಾತ್ತಾಪ ಪಟ್ಟು ಯೆಹೋವನ ಹತ್ರ ವಾಪಸ್‌ ಬಂದಿದ್ದಾರೆ. ಇವರು ಪೌಲ ಹೇಳಿದ ಜನ್ರ ತರ ಇಲ್ಲ. ಅವ್ರ ತರ ಇವರು ದೇವರಿಂದ ಶಾಶ್ವತ ಮೆಚ್ಚಿಗೆಯನ್ನ ಕಳ್ಕೊಂಡಿಲ್ಲ. ಆದ್ರೆ ಇವ್ರಿಗೆ ಯೆಹೋವನ ಜೊತೆ ಮತ್ತೆ ಸಂಬಂಧ ಬೆಳೆಸ್ಕೊಳ್ಳೋಕೆ ಸಹಾಯ ಬೇಕು. (ಯೆಹೆ. 34:15, 16) ಅದಕ್ಕೇ ಹಿರಿಯರು ಕೆಲವು ಪ್ರೌಢ ಕ್ರೈಸ್ತರ ಹತ್ರ ಇವ್ರಿಗೆ ಸಹಾಯ ಮಾಡೋಕೆ ಹೇಳಬಹುದು.

ವಯಸ್ಸಾದ ಸಹೋದರ ಒಬ್ಬ ಸಹೋದರನ ಮನೆಗೆ ಹೋಗಿ ಬೈಬಲಿಂದ ಪ್ರೋತ್ಸಾಹ ಕೊಡ್ತಿದ್ದಾನೆ.

ಯಾರು ಯೆಹೋವನ ಮೇಲೆ ಮತ್ತೆ ನಂಬಿಕೆ ಬೆಳೆಸ್ಕೊಳ್ಳೋಕೆ ಇಷ್ಟಪಡ್ತಾರೋ ಅವ್ರಿಗೆ ಆತನು ಸಹಾಯ ಮಾಡ್ತಾನೆ (ಪ್ಯಾರ 18 ನೋಡಿ)


19. ನಿಮಗೆ ಯಾವ ಗುರಿ ಇರಬೇಕು?

19 ನೀವು ಪ್ರೌಢರಾಗೋಕೆ ಗುರಿ ಇಟ್ಟಿದ್ದೀರಾ? ಹಾಗಾದ್ರೆ ಅದನ್ನ ಮುಟ್ಟೋಕೆ ಏನು ಮಾಡಬೇಕು? ಗಟ್ಟಿಯಾದ ಆಹಾರ ತಗೊಳ್ಳಿ. ಅಂದ್ರೆ, ಬೈಬಲಲ್ಲಿರೋ ಮುಖ್ಯವಾದ ಬೋಧನೆಗಳನ್ನ ಚೆನ್ನಾಗಿ ತಿಳ್ಕೊಳ್ತಾ ಇರಿ ಮತ್ತು ಯೆಹೋವನ ತರ ಯೋಚಿಸೋಕೆ ಪ್ರಯತ್ನ ಮಾಡ್ತಾ ಇರಿ. ಆಗ ನಿಮ್ಮ ಗುರಿಯನ್ನ ಖಂಡಿತ ಮುಟ್ಟುತ್ತೀರ. ನೀವು ಈಗಾಗ್ಲೇ ಪ್ರೌಢರಾಗಿದ್ರೆ ಇನ್ನೂ ಪ್ರೌಢರಾಗೋಕೆ ಪ್ರಯತ್ನ ಮಾಡ್ತಾ ಇರಿ.

ನೀವೇನು ಹೇಳ್ತೀರಾ?

  • ಪ್ರೌಢ ಕ್ರೈಸ್ತರಾಗೋದು ಅಂದ್ರೇನು?

  • ಪ್ರೌಢ ಕ್ರೈಸ್ತರಾಗೋಕೆ ನಾವೇನು ಮಾಡಬೇಕು?

  • ನಮ್ಮಲ್ಲಿ ಅತಿಯಾದ ಆತ್ಮವಿಶ್ವಾಸ ಯಾಕೆ ಇರಬಾರದು?

ಗೀತೆ 45 ಮುನ್ನಡೆ!

a ಹೀಬ್ರು ವಚನಗಳಲ್ಲಿ “ಪ್ರೌಢ” ಅನ್ನೋ ಪದವನ್ನ ಬಳಸಿಲ್ಲದೇ ಇರಬಹುದು. ಆದ್ರೆ ಪ್ರೌಢರಾಗೋಕೆ ನಮಗೆ ಪ್ರೋತ್ಸಾಹ ಕೊಟ್ಟಿದೆ. ಅದನ್ನ ನಾವು ಹೇಗೆ ಹೇಳಬಹುದು? ಉದಾಹರಣೆಗೆ, ಜ್ಞಾನೋಕ್ತಿ ಪುಸ್ತಕದಲ್ಲಿ ಯುವ ಜನ್ರು, ಅನುಭವ ಇಲ್ಲದವರು ಹೇಗಿರ್ತಾರೆ ಮತ್ತು ಬುದ್ಧಿವಂತರು, ಅರ್ಥಮಾಡ್ಕೊಳ್ಳೋ ಸಾಮರ್ಥ್ಯ ಇರೋರು ಹೇಗಿರ್ತಾರೆ ಅಂತ ಹೇಳಿದೆ.—ಜ್ಞಾನೋ. 1:4, 5.

b “ಇತರ ವಿಷಯಗಳು” ಅನ್ನೋ ಲೇಖನ ಸರಣಿಯಲ್ಲಿ “ತಪ್ಪು ಮಾಹಿತಿಯಿಂದ ತಪ್ಪಿಸಿಕೊಳ್ಳಿ” ಅನ್ನೋ ಲೇಖನ ನೋಡಿ. ಇದು jw.orgನಲ್ಲಿ ಮತ್ತು JW ಲೈಬ್ರರಿಯಲ್ಲಿ ಇದೆ.

c ಈ ಸಂಚಿಕೆಯಲ್ಲಿರೋ “ಇದನ್ನ ಮಾಡಿ ನೋಡಿ!” ಅನ್ನೋ ಭಾಗ ನೋಡಿ.

d ಚಿತ್ರ ವಿವರಣೆ: ಒಬ್ಬ ಸಹೋದರ ಟಿವಿ ನೋಡುವಾಗ ದೇವರ ವಾಕ್ಯದಿಂದ ಕಲಿತ ತತ್ವಗಳನ್ನ ಪಾಲಿಸ್ತಿದ್ದಾನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ