ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ಮೇ ಪು. 8-13
  • ಯೆಹೋವನಿಂದ ಸಾಂತ್ವನ ಪಡ್ಕೊಳ್ಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನಿಂದ ಸಾಂತ್ವನ ಪಡ್ಕೊಳ್ಳಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೆಹೋವ ನಮ್ಮನ್ನ ಕ್ಷಮಿಸ್ತಾನೆ
  • ಯೆಹೋವ ನಮಗೆ ನಿರೀಕ್ಷೆ ಕೊಟ್ಟಿದ್ದಾನೆ
  • ಭಯ ಆದಾಗ ಯೆಹೋವ ನಮಗೆ ಧೈರ್ಯ ತುಂಬ್ತಾನೆ
  • ಯೆಹೋವ “ಹೃದಯ ಒಡೆದು ಹೋಗಿರೋರನ್ನ ವಾಸಿಮಾಡ್ತಾನೆ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ದೀನತೆ ತೋರಿಸಿ, ನಿಮಗೆ ಗೊತ್ತಿಲ್ಲದಿರೋ ವಿಷ್ಯಗಳೂ ಇವೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ನಾವು ಯಾವತ್ತೂ ಒಂಟಿಯಲ್ಲ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ಮೇ ಪು. 8-13

ಅಧ್ಯಯನ ಲೇಖನ 20

ಗೀತೆ 7 ಯೆಹೋವ, ನಮ್ಮ ಶಕ್ತಿ

ಯೆಹೋವನಿಂದ ಸಾಂತ್ವನ ಪಡ್ಕೊಳ್ಳಿ

“ದೇವರಿಗೆ ಹೊಗಳಿಕೆ ಸಿಗ್ಲಿ. ಆತನು ಕೋಮಲ ಕರುಣೆ ತೋರಿಸೋ ತಂದೆ, ಎಲ್ಲ ತರದ ಸಾಂತ್ವನ ಕೊಡೋ ದೇವರು.”—2 ಕೊರಿಂ. 1:3.

ಈ ಲೇಖನದಲ್ಲಿ ಏನಿದೆ?

ಬಾಬೆಲಲ್ಲಿ ಕೈದಿಗಳಾಗಿದ್ದ ಯೆಹೂದ್ಯರಿಗೆ ಯೆಹೋವ ಸಾಂತ್ವನ ಕೊಟ್ಟನು. ಅದ್ರಿಂದ ನಾವೇನು ಕಲಿಬಹುದು?

1. ಬಾಬೆಲಲ್ಲಿ ಕೈದಿಗಳಾಗಿದ್ದ ಯೆಹೂದ್ಯರ ಪರಿಸ್ಥಿತಿ ಹೇಗಿತ್ತು?

ಬಾಬೆಲಲ್ಲಿ ಕೈದಿಗಳಾಗಿದ್ದ ಯೆಹೂದ್ಯರ ಜೀವನ ಹೇಗಿತ್ತು ಅಂತ ಸ್ವಲ್ಪ ಯೋಚ್ನೆ ಮಾಡಿ. ಅವ್ರ ಕಣ್ಮುಂದೆನೇ ಬಾಬೆಲಿನವರು ಯೆರೂಸಲೇಮನ್ನ ನಾಶ ಮಾಡಿದ್ರು ಮತ್ತು ಅವ್ರನ್ನ ಕೈದಿಗಳಾಗಿ ಕರ್ಕೊಂಡು ಹೋದ್ರು. ಅವರು ಪದೇ ಪದೇ ಯೆಹೋವನ ಮಾತನ್ನ ಕೇಳದೆ ಇದ್ದಿದ್ರಿಂದ ಅವ್ರಿಗೆ ಈ ಗತಿ ಬಂತು. (2 ಪೂರ್ವ. 36:15, 16, 20, 21) ಬಾಬೆಲಲ್ಲಿ ಅವ್ರಿಗೆ ಸ್ವಲ್ಪ ಸ್ವಾತಂತ್ರ್ಯ ಏನೋ ಇತ್ತು. ಆದ್ರೆ ಅಲ್ಲಿ ಜೀವನ ಮಾಡೋದು ಅಷ್ಟು ಸುಲಭ ಆಗಿರಲಿಲ್ಲ. (ಯೆರೆ. 29:4-7) ಯಾಕಂದ್ರೆ ಅವರು ಅಲ್ಲಿಗೆ ಇಷ್ಟಪಟ್ಟು ಬಂದಿರಲಿಲ್ಲ. ಅವ್ರಲ್ಲೊಬ್ಬ ಕೈದಿ “ಬಾಬೆಲಿನ ನದಿಗಳ ದಡದಲ್ಲಿ ನಾವು ಕೂತ್ಕೊಂಡ್ವಿ, ಚೀಯೋನನ್ನ ನೆನಪಿಸ್ಕೊಂಡು ಕಣ್ಣೀರು ಹಾಕಿದ್ವಿ” ಅಂತ ಹೇಳಿದ. (ಕೀರ್ತ. 137:1) ಇದ್ರಿಂದ ಅವ್ರಿಗೆಷ್ಟು ಸಾಂತ್ವನ ಬೇಕಿತ್ತು ಅಂತ ಗೊತ್ತಾಗುತ್ತಲ್ವಾ? ಆದ್ರೆ ಯಾರು ಮಾತ್ರ ಅವ್ರಿಗೆ ಸಾಂತ್ವನ ಕೊಡೋಕೆ ಆಗ್ತಿತ್ತು?

2-3. (ಎ) ಕೈದಿಗಳಾಗಿದ್ದ ಯೆಹೂದ್ಯರಿಗೆ ಯೆಹೋವ ಹೇಗೆ ಸಾಂತ್ವನ ಕೊಟ್ಟನು? (ಬಿ) ನಾವು ಈ ಲೇಖನದಲ್ಲಿ ಏನು ಕಲಿತೀವಿ?

2 ಯೆಹೋವನೇ “ಎಲ್ಲ ತರದ ಸಾಂತ್ವನ ಕೊಡೋ ದೇವರು.” (2 ಕೊರಿಂ. 1:3) ದೇವರು ತನ್ನ ಸೇವಕರನ್ನ ತುಂಬ ಪ್ರೀತಿಸೋದ್ರಿಂದ ಯಾರು ಆತನಿಗೆ ಹತ್ರ ಆಗ್ತಾರೋ ಅವ್ರಿಗೆ ಆತನು ಸಾಂತ್ವನ ಕೊಡ್ತಾನೆ. ಕೈದಿಗಳಾಗಿದ್ದ ಯೆಹೂದ್ಯರಲ್ಲಿ ಕೆಲವರು ತಾವು ಮಾಡಿದ್ದ ತಪ್ಪನ್ನ ತಿದ್ಕೊಂಡು ತನ್ನ ಹತ್ರ ವಾಪಸ್‌ ಬರ್ತಾರೆ ಅಂತ ಯೆಹೋವನಿಗೆ ಗೊತ್ತಿತ್ತು. (ಯೆಶಾ. 59:20) ಅದಕ್ಕೇ ಅವರು ಕೈದಿಗಳಾಗಿ ಹೋಗೋ 100 ವರ್ಷ ಮುಂಚೆನೇ ಸಾಂತ್ವನ ಕೊಡೋಕೆ ಆತನು ಯೆಶಾಯ ಪುಸ್ತಕವನ್ನ ಬರೆಸಿದನು. ಅದ್ರಲ್ಲಿ “‘ನನ್ನ ಜನ್ರನ್ನ ಸಂತೈಸಿ’ ಅಂತ ನಿಮ್ಮ ದೇವರು ಹೇಳ್ತಾನೆ” ಅಂತ ಯೆಶಾಯ ಬರೆದ. (ಯೆಶಾ. 40:1) ಹೀಗೆ ಯೆಹೋವ ದೇವರು ಯೆಶಾಯನ ಮೂಲಕ ಕೈದಿಗಳಾಗಿದ್ದ ಯೆಹೂದ್ಯರಿಗೆ ಸಾಂತ್ವನ ಕೊಟ್ಟನು.

3 ಕೈದಿಗಳಾಗಿದ್ದ ಯೆಹೂದ್ಯರಿಗೆ ಯೆಹೋವ ಮೂರು ರೀತೀಲಿ ಸಾಂತ್ವನ ಕೊಟ್ಟನು. (1) ಪಶ್ಚಾತ್ತಾಪಪಟ್ಟಾಗ ಅವ್ರನ್ನ ಕ್ಷಮಿಸ್ತೀನಿ ಅಂತ ಮಾತು ಕೊಟ್ಟನು. (2) ಅವ್ರಿಗೆ ನಿರೀಕ್ಷೆ ಕೊಟ್ಟನು. (3) ಅವ್ರಿಗೆ ಭಯ ಆದಾಗ ಧೈರ್ಯ ತುಂಬಿದನು. ಯೆಹೂದ್ಯರ ತರ ನಮಗೂ ಆಗಾಗ ಸಾಂತ್ವನ ಬೇಕಾಗುತ್ತೆ. ಹಾಗಾಗಿ ಈ 3 ವಿಧಗಳ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಣ. ಆಗ ಯೆಹೋವನಿಂದ ನಾವೂ ಸಾಂತ್ವನ ಪಡ್ಕೊಳ್ತೀವಿ.

ಯೆಹೋವ ನಮ್ಮನ್ನ ಕ್ಷಮಿಸ್ತಾನೆ

4. ಯೆಹೋವ ಕರುಣಾಮಯಿ ತಂದೆ ಅಂತ ಹೇಗೆ ತೋರಿಸ್ಕೊಟ್ಟನು? (ಯೆಶಾಯ 55:7)

4 ಯೆಹೋವ “ಕೋಮಲ ಕರುಣೆ ತೋರಿಸೋ ತಂದೆ.” (2 ಕೊರಿಂ. 1:3) ಆತನಲ್ಲಿ ಈ ಗುಣ ಇರೋದ್ರಿಂದ ಪಶ್ಚಾತ್ತಾಪಪಟ್ಟ ಯೆಹೂದ್ಯರನ್ನ ಕ್ಷಮಿಸ್ತೀನಿ ಅಂತ ಮಾತು ಕೊಟ್ಟನು. (ಯೆಶಾಯ 55:7 ಓದಿ.) ಅದಕ್ಕೆನೇ ಆತನು “ಅಂತ್ಯವಿಲ್ಲದ ಶಾಶ್ವತ ಪ್ರೀತಿಯಿಂದ ನಾನು ನಿನಗೆ ಕರುಣೆ ತೋರಿಸ್ತೀನಿ” ಅಂತ ಹೇಳಿದನು. (ಯೆಶಾ. 54:8) ಹಾಗಾದ್ರೆ ದೇವರು ಈ ಕರುಣೆಯನ್ನ ಹೇಗೆ ತೋರಿಸಿದನು? ಯೆಹೂದ್ಯರು ತಾವು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸ್ತಿದ್ರು ನಿಜ, ಆದ್ರೆ ಅವರು ಬಾಬೆಲಲ್ಲೇ ಇರೋ ತರ ಯೆಹೋವ ಬಿಟ್ಟುಬಿಡಲಿಲ್ಲ, ಅವ್ರನ್ನ ಬಿಡಿಸ್ತೀನಿ ಅಂತ ಮಾತು ಕೊಟ್ಟನು. (ಯೆಶಾ. 40:2) ಇದನ್ನ ತಿಳ್ಕೊಂಡಾಗ ಪಶ್ಚಾತ್ತಾಪಪಟ್ಟ ಯೆಹೂದ್ಯರಿಗೆ ಎಷ್ಟು ಸಮಾಧಾನ ಆಗಿರುತ್ತೆ ಅಲ್ವಾ!

5. ಯೆಹೋವ ನಮ್ಮನ್ನ ಕ್ಷಮಿಸ್ತಾನೆ ಅನ್ನೋದಕ್ಕೆ ಯಾವ ದೊಡ್ಡ ಕಾರಣ ಇದೆ?

5 ನಾವೇನು ಕಲಿತೀವಿ? ಯೆಹೋವ ತನ್ನ ಸೇವಕರನ್ನ ಪೂರ್ತಿಯಾಗಿ ಕ್ಷಮಿಸ್ತಾನೆ. ಆತನು ನಮ್ಮನ್ನ ಕ್ಷಮಿಸ್ತಾನೆ ಅಂತ ನಂಬೋಕೆ ಯೆಹೂದ್ಯರಿಗಿಂತ ನಮಗೆ ಒಂದು ದೊಡ್ಡ ಕಾರಣ ಇದೆ. ಯೆಶಾಯ ಭವಿಷ್ಯವಾಣಿ ಹೇಳಿದ ಹಾಗೇ ಯೆಹೋವ ತನ್ನ ಒಬ್ಬನೇ ಮಗನನ್ನ ಭೂಮಿಗೆ ಕಳಿಸ್ಕೊಟ್ಟನು. ಯೇಸು ತನ್ನ ಪ್ರಾಣನ ಪಶ್ಚಾತ್ತಾಪ ಪಡೋ ಎಲ್ರಿಗೋಸ್ಕರ ಬಿಡುಗಡೆ ಬೆಲೆಯಾಗಿ ಕೊಟ್ಟನು. ಈ ಬಿಡುಗಡೆ ಬೆಲೆಯ ಆಧಾರದ ಮೇಲೆ ಯೆಹೋವ ನಮ್ಮೆಲ್ರ ‘ಪಾಪಗಳನ್ನ ಅಳಿಸಿಹಾಕ್ತಾನೆ.’ (ಅ. ಕಾ. 3:19; ಯೆಶಾ. 1:18; ಎಫೆ. 1:7) ಎಷ್ಟು ಕರುಣೆ ಇರೋ ದೇವರನ್ನ ನಾವು ಆರಾಧಿಸ್ತಿದ್ದೀವಿ ಅಲ್ವಾ!

6. ಯೆಹೋವ ಕರುಣಾಮಯಿ ತಂದೆ ಅನ್ನೋದನ್ನ ಮನಸ್ಸಲ್ಲಿ ಇಟ್ರೆ ಏನು ಪ್ರಯೋಜನ ಆಗುತ್ತೆ? (ಚಿತ್ರ ನೋಡಿ.)

6 ನಾವು ಹಿಂದೆ ಮಾಡಿದ ತಪ್ಪಿಗೆ ಈಗ್ಲೂ ಕೊರಗ್ತಾ ಇದ್ರೆ ಯೆಶಾಯ 55:7ರಲ್ಲಿರೋ ಮಾತು ನಮಗೆ ಸಾಂತ್ವನ ಕೊಡುತ್ತೆ. ಕೆಲವರು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟ ಮೇಲೂ ಅದ್ರ ಬಗ್ಗೆ ಇನ್ನೂ ಕೊರಗ್ತಾ ಇರ್ತಾರೆ. ಅದ್ರಲ್ಲೂ ಅವರು ಮಾಡಿದ ತಪ್ಪಿಂದ ಇನ್ನೂ ಕಷ್ಟಪಡ್ತಾ ಇರೋದಾದ್ರೆ ಆ ಕೊರಗು ಅವ್ರನ್ನ ಬಿಟ್ಟುಹೋಗಲ್ಲ. ಆದ್ರೆ ನಮ್ಮ ತಪ್ಪನ್ನ ಒಪ್ಕೊಂಡು ತಿದ್ಕೊಂಡ್ರೆ ಯೆಹೋವ ನಮ್ಮನ್ನ ಕ್ಷಮಿಸ್ತಾನೆ. ಆತನು ನಮ್ಮನ್ನ ಒಂದುಸಲ ಕ್ಷಮಿಸಿದ ಮೇಲೆ ಅದನ್ನ ಯಾವತ್ತೂ ನೆನಪಿಸ್ಕೊಳ್ಳಲ್ಲ. ಯೆಹೋವ ದೇವರೇ ನಮ್ಮ ತಪ್ಪನ್ನ ಮರೆತಿದ್ದಾನೆ ಅಂದ್ಮೇಲೆ ನಾವ್ಯಾಕೆ ಅದನ್ನ ನೆನಸ್ಕೊಂಡು ಕೊರಗಬೇಕು? (ಯೆರೆಮೀಯ 31:34 ಹೋಲಿಸಿ.) ಯೆಹೋವ ದೇವರು ನಾವು ಮುಂಚೆ ಮಾಡಿದ ತಪ್ಪನ್ನಲ್ಲ ನಾವು ಈಗ ಏನು ಮಾಡ್ತಾ ಇದ್ದೀವಿ ಅನ್ನೋದನ್ನ ನೋಡ್ತಾನೆ. (ಯೆಹೆ. 33:14-16) ನಾವು ಮಾಡಿರೋ ತಪ್ಪಿಂದ ಈಗ್ಲೂ ಕಷ್ಟಪಡ್ತಾ ಇರಬಹುದು ನಿಜ. ಆದ್ರೆ ಆದಷ್ಟು ಬೇಗ ಕರುಣಾಮಯಿ ದೇವರಾದ ಯೆಹೋವ ಅದನ್ನ ತೆಗೆದುಹಾಕ್ತಾನೆ.

ಒಬ್ಬ ಸಹೋದರ ತಲೆ ಮೇಲಕ್ಕೆತ್ತಿ ನಡಿತಿದ್ದಾರೆ. ಚಿತ್ರ: ಅವರು ಹಿಂದೆ ಏನು ಮಾಡಿದ್ರು ಮತ್ತು ಈಗ ಏನು ಮಾಡ್ತಿದ್ದಾರೆ ಅಂತ ತೋರಿಸೋ ಚಿತ್ರಗಳು. ಹಿಂದೆ ಮಾಡಿದ ತಪ್ಪುಗಳು: 1. ಹಿಂಸೆ ತುಂಬಿರೋ ವಿಡಿಯೋ ಗೇಮ್‌ ಆಡ್ತಿದ್ರು. 2. ಅತಿಯಾಗಿ ಕುಡಿತಾ ಮತ್ತು ಸಿಗರೇಟ್‌ ಸೇದ್ತಾ ಇದ್ರು. 3. ಕಂಪ್ಯೂಟರಲ್ಲಿ ತಪ್ಪಾದ ವಿಷ್ಯಗಳನ್ನ ನೋಡ್ತಿದ್ರು. ಈಗ ಏನು ಮಾಡ್ತಿದ್ದಾರೆ ಅಂತ ತೋರಿಸೋ ಚಿತ್ರಗಳು: 1. ರಾಜ್ಯ ಸಭಾಗೃಹ ಕ್ಲೀನ್‌ ಮಾಡ್ತಿದ್ದಾರೆ. 2. ವಯಸ್ಸಾಗಿರೋ ಒಬ್ಬ ಸಹೋದರಿ ಹತ್ರ ಮಾತಾಡ್ತಿದ್ದಾರೆ. 3. ಸಿಹಿಸುದ್ದಿ ಸಾರುತ್ತಾ ಇದ್ದಾರೆ.

ನಾವು ಹಿಂದೆ ಏನು ತಪ್ಪು ಮಾಡಿದ್ದೀವಿ ಅಂತಲ್ಲ, ಈಗ ಏನು ಮಾಡ್ತಿದ್ದೀವಿ ಅಂತ ಯೆಹೋವ ನೋಡ್ತಾನೆ (ಪ್ಯಾರ 6 ನೋಡಿ)


7. ನಾವು ಮಾಡಿದ ತಪ್ಪಿನ ಬಗ್ಗೆ ಹಿರಿಯರ ಹತ್ರ ಹೇಳೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?

7 ನಾವು ಯಾವುದಾದ್ರೂ ದೊಡ್ಡ ತಪ್ಪನ್ನ ಮಾಡಿ ಅದನ್ನ ಮುಚ್ಚಿಟ್ರೆ ನಮ್ಮ ಮನಸ್ಸು ಚುಚ್ತಾ ಇರುತ್ತೆ. ಆಗ ನಾವೇನು ಮಾಡಬೇಕು? ಹಿರಿಯರ ಹತ್ರ ಹೋಗಿ ಸಹಾಯ ಕೇಳಬೇಕು ಅಂತ ಬೈಬಲ್‌ ಹೇಳುತ್ತೆ. (ಯಾಕೋ. 5:14, 15) ಈ ತರ ಹೋಗಿ ನಮ್ಮ ತಪ್ಪನ್ನ ಹೇಳೋದು ಅಷ್ಟು ಸುಲಭ ಅಲ್ಲ. ಆದ್ರೆ ನಮಗೆ ಸಹಾಯ ಮಾಡೋಕೆ ಯೆಹೋವ ಈ ಹಿರಿಯರನ್ನ ನೇಮಿಸಿದ್ದಾನೆ. ಅವರು ಆತನ ತರಾನೇ ಪ್ರೀತಿಯಿಂದ ಮತ್ತು ಕರುಣೆಯಿಂದ ನಮಗೆ ಸಹಾಯ ಮಾಡ್ತಾರೆ. ಇದನ್ನ ನಾವು ಮನಸ್ಸಲ್ಲಿಟ್ರೆ ಮತ್ತು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ರೆ ಅವ್ರ ಹತ್ರ ಹೋಗಿ ಮಾತಾಡಬೇಕು ಅಂತ ನಮಗೇ ಅನಿಸುತ್ತೆ. ಆರ್ಥರ್‌a ಅನ್ನೋ ಸಹೋದರನೂ ಹೀಗೇ ಮಾಡಿದ್ರು. ಅವರು ಮಾಡಿದ ತಪ್ಪಿಂದ ಅವ್ರ ಮನಸ್ಸಾಕ್ಷಿ ಚುಚ್ತಾ ಇತ್ತು. ಅದ್ರ ಬಗ್ಗೆ ಅವರು ಹೀಗೆ ಹೇಳ್ತಾರೆ: “ಹತ್ತತ್ರ ಒಂದು ವರ್ಷ ನಾನು ಅಶ್ಲೀಲ ಚಿತ್ರಗಳನ್ನ ನೋಡ್ತಾ ಇದ್ದೆ. ಒಂದು ಭಾಷಣದಲ್ಲಿ ಮನಸ್ಸಾಕ್ಷಿ ಬಗ್ಗೆ ಕೇಳಿದ ಮೇಲೆ ನನ್ನ ತಪ್ಪನ್ನ ನನ್ನ ಹೆಂಡ್ತಿ ಹತ್ರ, ಹಿರಿಯರ ಹತ್ರ ಹೇಳಿದೆ. ಅದಾದ್ಮೇಲೆ ನಂಗೆ ತುಂಬ ಸಮಾಧಾನ ಆಯ್ತು. ಆದ್ರೆ ನಂಗೇ ನನ್ನ ಮೇಲೆ ಬೇಜಾರಿತ್ತು. ಆಗ ಹಿರಿಯರು ಯೆಹೋವ ನನ್ನ ಕೈಬಿಟ್ಟಿಲ್ಲ ಅಂತ ನೆನಪಿಸಿದ್ರು. ಯೆಹೋವ ಯಾರನ್ನ ಪ್ರೀತಿಸ್ತಾನೋ ಅವ್ರಿಗೇ ಶಿಸ್ತು ಕೊಡ್ತಾನೆ ಅಂತ ಅರ್ಥ ಮಾಡಿಸಿದ್ರು. ಅವ್ರ ಮಾತು ನನ್ನ ಮನಸ್ಸು ಮುಟ್ತು. ಆಗ ನಾನು ಯೆಹೋವ ನನ್ನನ್ನ ಪೂರ್ತಿಯಾಗಿ ಕ್ಷಮಿಸಿದ್ದಾನೆ ಅಂತ ಅರ್ಥ ಮಾಡ್ಕೊಂಡೆ” ಅಂತ ಆರ್ಥರ್‌ ಹೇಳ್ತಾರೆ. ಈಗ ಆರ್ಥರ್‌ ಒಬ್ಬ ಪಯನೀಯರ್‌ ಆಗಿದ್ದಾರೆ ಮತ್ತು ಸಭೇಲಿ ಸಹಾಯಕ ಸೇವಕರಾಗಿ ಸೇವೆ ಮಾಡ್ತಿದ್ದಾರೆ. ನಾವು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟಾಗ ನಮಗೆ ಕರುಣೆ ತೋರಿಸೋಕೆ ಯೆಹೋವ ತುದಿಗಾಲಲ್ಲಿ ನಿಂತಿರ್ತಾನೆ ಅಂತ ಅರ್ಥ ಮಾಡ್ಕೊಂಡಾಗ ಎಷ್ಟು ಖುಷಿ ಆಗುತ್ತಲ್ವಾ!

ಯೆಹೋವ ನಮಗೆ ನಿರೀಕ್ಷೆ ಕೊಟ್ಟಿದ್ದಾನೆ

8. (ಎ) ಯೆಹೋವ ಕೈದಿಗಳಾಗಿದ್ದ ಯೆಹೂದ್ಯರಿಗೆ ಯಾವ ನಿರೀಕ್ಷೆ ಕೊಟ್ಟನು? (ಬಿ) ಈ ನಿರೀಕ್ಷೆ ಬಗ್ಗೆ ತಿಳ್ಕೊಂಡಿದ್ರಿಂದ ಯೆಹೂದ್ಯರಿಗೆ ಏನು ಪ್ರಯೋಜನ ಆಯ್ತು? (ಯೆಶಾಯ 40:29-31)

8 ಬಾಬೆಲಲ್ಲಿ ಕೈದಿಗಳಾಗಿದ್ದ ಯೆಹೂದ್ಯರಿಗೆ ವಾಪಸ್‌ ತಮ್ಮೂರಿಗೆ ಹೋಗೋದು ಬರೀ ಕನಸಾಗಿತ್ತು. ಯಾಕಂದ್ರೆ ಬಾಬೆಲಿನವರು ಒಂದುಸಲ ಕೈದಿಗಳನ್ನ ಕರ್ಕೊಂಡು ಹೋದ್ರೆ ಅವ್ರನ್ನ ಅಲ್ಲಿಂದ ಬಿಡುಗಡೆ ಮಾಡ್ತಾನೇ ಇರಲಿಲ್ಲ. (ಯೆಶಾ. 14:17) ಹಾಗಿದ್ರೂ ಯೆಹೋವ ಅವ್ರನ್ನ ಅಲ್ಲಿಂದ ಬಿಡಿಸ್ತೀನಿ ಅಂತ ಮಾತು ಕೊಟ್ಟನು. ಅಷ್ಟೇ ಅಲ್ಲ ತನ್ನನ್ನ ತಡಿಯೋಕೆ ಯಾರಿಂದನೂ ಆಗಲ್ಲ ಅಂತಾನೂ ಹೇಳಿದನು. (ಯೆಶಾ. 44:26; 55:12) ಯಾಕಂದ್ರೆ ಬಾಬೆಲಿನವರು ಯೆಹೋವನ ಕಣ್ಣಿಗೆ ಧೂಳಿನ ತರ ಇದ್ರು. (ಯೆಶಾ. 40:15) ಒಂದುಸಲ ಉಫ್‌ ಅಂತ ಊದಿದ್ರೆ ಹಾರಿ ಹೋಗೋ ತರ ಇದ್ರು. ಯೆಹೋವನ ಮಾತು ಕತ್ತಲೆ ತುಂಬಿದ ಯೆಹೂದ್ಯರ ಬಾಳಿಗೆ ಬೆಳಕಿನ ತರ ಇತ್ತು. ಇದ್ರಿಂದ ಅವರು ಸಾಂತ್ವನ ಪಡ್ಕೊಂಡ್ರು, ಹೊಸಬಲನೂ ಪಡ್ಕೊಂಡ್ರು. ಅದಕ್ಕೇ ಯೆಶಾಯ “ಯೆಹೋವನಲ್ಲಿ ನಿರೀಕ್ಷೆ ಇಡೋರು ಹೊಸಬಲ ಪಡಿತಾರೆ. ಹದ್ದಿನ ತರ ರೆಕ್ಕೆಗಳನ್ನ ಚಾಚಿ ಅವರು ಎತ್ರದಲ್ಲಿ ಹಾರ್ತಾರೆ” ಅಂತ ಹೇಳಿದ.—ಯೆಶಾಯ 40:29-31 ಓದಿ.

9. ಯೆಹೋವ ಕೊಟ್ಟ ಮಾತು ನಿಜ ಆಗೇ ಆಗುತ್ತೆ ಅಂತ ನಂಬೋಕೆ ಯೆಹೂದ್ಯರಿಗೆ ಏನು ಸಹಾಯ ಮಾಡ್ತು?

9 ಯೆಹೋವ ಕೊಟ್ಟ ಮಾತು ನಿಜ ಆಗೇ ಆಗುತ್ತೆ ಅಂತ ಯೆಹೂದ್ಯರು ಪೂರ್ತಿಯಾಗಿ ನಂಬಬಹುದಿತ್ತು. ಯಾಕಂದ್ರೆ ಭವಿಷ್ಯವಾಣಿಗಳು ನೆರವೇರಿರೋದನ್ನ ಅವರು ಈಗಾಗ್ಲೇ ನೋಡಿದ್ರು. ಇಸ್ರಾಯೇಲಿನ ಉತ್ತರದ ರಾಜ್ಯವನ್ನ ಅಶ್ಶೂರ್ಯರು ವಶಮಾಡ್ಕೊಂಡು ಅಲ್ಲಿದ್ದವ್ರನ್ನ ಕೈದಿಗಳಾಗಿ ಕರ್ಕೊಂಡು ಹೋಗಿದ್ರ ಬಗ್ಗೆ ಯೆಹೂದ್ಯರಿಗೆ ಗೊತ್ತಿತ್ತು. (ಯೆಶಾ. 8:4) ತಮ್ಮ ಮುಂದೆನೇ ಬಾಬೆಲಿನವರು ಯೆರೂಸಲೇಮನ್ನ ನಾಶಮಾಡಿ ಕೈದಿಗಳಾಗಿ ಕರ್ಕೊಂಡು ಬಂದಿದ್ದನ್ನ ಕಣ್ಣಾರೆ ನೋಡಿದ್ರು. (ಯೆಶಾ. 39:5-7) ಅಷ್ಟೇ ಅಲ್ಲ ರಾಜ ಚಿದ್ಕೀಯನ ಕಣ್ಣು ಕಿತ್ತು ಅವನನ್ನೂ ಕೈದಿಯಾಗಿ ಕರ್ಕೊಂಡು ಹೋಗಿದ್ದನ್ನ ಅವರು ನೋಡಿದ್ರು. (ಯೆರೆ. 39:7; ಯೆಹೆ. 12:12, 13) ಈ ಭವಿಷ್ಯವಾಣಿಗಳ ಬಗ್ಗೆ ಯೆಹೋವ ಮುಂಚೆನೇ ಹೇಳಿದ್ದನು. ಅದೆಲ್ಲ ಈಗ ನಿಜ ಆಗಿತ್ತು. (ಯೆಶಾ. 42:9; 46:10) ಇದು, ತಮ್ಮನ್ನ ಬಿಡಿಸ್ತೀನಿ ಅಂತ ಯೆಹೋವ ಕೊಟ್ಟ ಮಾತಿನ ಮೇಲೆ ನಂಬಿಕೆನ ಜಾಸ್ತಿ ಮಾಡ್ಕೊಳ್ಳೋಕೆ ಅವ್ರಿಗೆ ಸಹಾಯ ಮಾಡ್ತು.

10. ಈ ಕೊನೇ ದಿನಗಳಲ್ಲೂ ನಿರೀಕ್ಷೆನ ಹಚ್ಚಹಸಿರಾಗಿ ಇಟ್ಕೊಳ್ಳೋಕೆ ನಮಗೆ ಏನು ಸಹಾಯ ಮಾಡುತ್ತೆ?

10 ನಾವೇನು ಕಲಿತೀವಿ? ನಾವು ಜೀವಿಸ್ತಿರೋ ಈ ಸಮಯದಲ್ಲಿ ನಮಗೆ ತುಂಬ ಕಷ್ಟಗಳು ಬರುತ್ತೆ. ಅಷ್ಟೇ ಅಲ್ಲ ಸೈತಾನ ಮತ್ತು ಅವನ ಜನ್ರಿಂದ ತುಂಬ ವಿರೋಧನೂ ಬರುತ್ತೆ. ಆದ್ರೆ ಈ ಸಮಸ್ಯೆಗಳಿಂದ ನಾವು ಕುಗ್ಗಿ ಹೋಗಬಾರದು. ಯಾಕಂದ್ರೆ ಯೆಹೋವ ನಮಗೆ ಹೊಸ ಲೋಕದ ನಿರೀಕ್ಷೆನ ಕೊಟ್ಟಿದ್ದಾನೆ. ಅಲ್ಲಿ ನಾವೆಲ್ರೂ ಶಾಂತಿಯಿಂದ ಸುರಕ್ಷಿತವಾಗಿ ಇರ್ತೀವಿ. ಯಾರೂ ನಮಗೆ ತೊಂದ್ರೆ ಕೊಡಲ್ಲ. ಹಾಗಾಗಿ ನಾವು ಆ ಹೊಸ ಲೋಕನ ಮನಸ್ಸಲ್ಲಿ ಹಚ್ಚಹಸಿರಾಗಿ ಇಟ್ಕೊಬೇಕು. ಒಂದು ಸುಂದರವಾಗಿರೋ ಜಾಗನ ಗಲೀಜಾಗಿರೋ ಕಿಟಕಿಯಿಂದ ನೋಡಿದ್ರೆ ಹೇಗೆ ಕಾಣಿಸುತ್ತೆ? ಸ್ಪಷ್ಟವಾಗಿ ಕಾಣಿಸುತ್ತಾ? ಇಲ್ಲ ಅಲ್ವಾ? ಹಾಗಿದ್ರೆ ನಾವೇನು ಮಾಡಬೇಕು? ಆ ಕಿಟಕಿನ ಕ್ಲೀನ್‌ ಮಾಡಿ ನೋಡಬೇಕು. ಆಗ ನಮಗದು ಸ್ಪಷ್ಟವಾಗಿ ಕಾಣಿಸುತ್ತೆ. ಅದೇ ತರ ನಮ್ಮ ನಿರೀಕ್ಷೆ ಮನಸ್ಸಲ್ಲಿ ಹಚ್ಚಹಸಿರಾಗಿ ಇರಬೇಕಂದ್ರೆ ಅದ್ರ ಬಗ್ಗೆ ನಾವು ಯೋಚ್ನೆ ಮಾಡಬೇಕು. ಅದಕ್ಕೆ ನಮಗೆ ಏನು ಸಹಾಯ ಮಾಡುತ್ತೆ? ಹೊಸಲೋಕದ ಬಗ್ಗೆ ಇರೋ ಲೇಖನಗಳು, ವಿಡಿಯೋಗಳು, ಹಾಡುಗಳು ಸಹಾಯ ಮಾಡುತ್ತೆ. ಅಷ್ಟೇ ಅಲ್ಲ ನಮಗೆ ಹೊಸಲೋಕದಲ್ಲಿ ಏನೆಲ್ಲ ನೋಡೋಕೆ ಆಸೆ ಇದೆ ಅಂತ ಯೆಹೋವ ದೇವರ ಹತ್ರ ಹೇಳ್ಕೊಬೇಕು.

11. ಸಹೋದರಿ ಜಾಯ್‌ ಹೇಗೆ ಹೊಸಬಲ ಪಡ್ಕೊಂಡ್ರು?

11 ಜಾಯ್‌ ಅನ್ನೋ ಸಹೋದರಿಗೆ ತುಂಬ ಆರೋಗ್ಯ ಸಮಸ್ಯೆ ಇತ್ತು. ಆದ್ರೆ ಅವರು ನಿರೀಕ್ಷೆ ಬಗ್ಗೆ ಯೋಚ್ನೆ ಮಾಡಿದ್ರಿಂದ ಸಾಂತ್ವನ, ಬಲ ಪಡ್ಕೊಂಡ್ರು. “ನನ್ನ ನೋವು ನನ್ನನ್ನ ಕಿತ್ತು ತಿಂತಾ ಇದ್ದಾಗ ಯೆಹೋವನ ಹತ್ರ ನನ್ನ ಮನಸ್ಸಲ್ಲಿ ಇದ್ದದ್ದನ್ನೆಲ್ಲ ಹೇಳ್ಕೊಂಡೆ. ಆತನು ನನ್ನನ್ನ ಅರ್ಥ ಮಾಡ್ಕೊಳ್ತಾನೆ ಅಂತ ನಂಗೆ ಗೊತ್ತಿತ್ತು. ಅದಕ್ಕೇ ‘ಸಾಮಾನ್ಯವಾಗಿ ಇರೋ ಶಕ್ತಿಗಿಂತ ಇನ್ನೂ ಹೆಚ್ಚಿನ ಶಕ್ತಿನ’ ದೇವರು ನಂಗೆ ಕೊಟ್ಟನು” ಅಂತ ಆ ಸಹೋದರಿ ಹೇಳ್ತಾರೆ. (2 ಕೊರಿಂ. 4:7) ಅಷ್ಟೇ ಅಲ್ಲ ಆ ಸಹೋದರಿ “ದೇಶದಲ್ಲಿ ಒಬ್ಬನೂ ‘ನನಗೆ ಹುಷಾರಿಲ್ಲ’ ಅಂತ ಹೇಳಲ್ಲ” ಅನ್ನೋ ಮಾತಿನ ಬಗ್ಗೆ ಯೋಚ್ನೆ ಮಾಡಿದ್ರು. ಹೊಸ ಲೋಕದಲ್ಲಿ ತಾನೂ ಈ ಮಾತನ್ನ ಹೇಳ್ತೀನಿ ಅಂತ ಆ ಸಹೋದರಿ ಕಲ್ಪಿಸ್ಕೊಂಡ್ರು. (ಯೆಶಾ. 33:24) ಈ ಸಹೋದರಿ ತರ ನಾವೂ ನಮ್ಮ ಮನಸ್ಸಲ್ಲಿ ಇರೋದನ್ನೆಲ್ಲ ಯೆಹೋವನ ಹತ್ರ ಹೇಳ್ಕೊಂಡ್ರೆ, ನಮ್ಮ ನಿರೀಕ್ಷೆ ಬಗ್ಗೆ ಯಾವಾಗ್ಲೂ ಯೋಚ್ನೆ ಮಾಡಿದ್ರೆ ಹೊಸಬಲ ಪಡ್ಕೊತೀವಿ.

12. ಯೆಹೋವನ ಮಾತನ್ನ ನಾವು ಯಾಕೆ ನಂಬಬಹುದು? (ಚಿತ್ರ ನೋಡಿ.)

12 ಯೆಹೋವ ಕೈದಿಗಳಾಗಿದ್ದ ಯೆಹೂದ್ಯರಿಗೆ ತನ್ನ ಮಾತನ್ನ ನಂಬೋಕೆ ಆಧಾರಗಳನ್ನ ಕೊಟ್ಟ ತರಾನೇ ಇವತ್ತು ನಮಗೂ ಆತನ ಮಾತನ್ನ ನಂಬೋಕೆ ಎಷ್ಟೋ ಆಧಾರಗಳನ್ನ ಕೊಟ್ಟಿದ್ದಾನೆ. ನಾವಿರೋ ಈ ಕಾಲದ ಬಗ್ಗೆ ಆತನು ಹೇಳಿದ್ದ ಭವಿಷ್ಯವಾಣಿಗಳ ಬಗ್ಗೆ ಯೋಚ್ನೆ ಮಾಡಿ. ಉದಾಹರಣೆಗೆ, ಈಗಿರೋ ಲೋಕಶಕ್ತಿಯ “ಒಂದು ಭಾಗ ಗಟ್ಟಿಯಾಗಿರುತ್ತೆ, ಇನ್ನೊಂದು ಭಾಗ ನಾಜೂಕು ಆಗಿರುತ್ತೆ” ಅಂತ ಬೈಬಲ್‌ ಹೇಳಿತ್ತು. (ದಾನಿ. 2:42, 43) “ಒಂದರ ನಂತರ ಇನ್ನೊಂದು ಸ್ಥಳದಲ್ಲಿ . . . ಭೂಕಂಪ ಆಗುತ್ತೆ” ಅಂತನೂ ಹೇಳಿತ್ತು. ಅಷ್ಟೇ ಅಲ್ಲ ಸಿಹಿಸುದ್ದಿನ “ಎಲ್ಲಾ ದೇಶಗಳಿಗೆ” ಸಾರಲಾಗುತ್ತೆ ಅಂತನೂ ಹೇಳಿತ್ತು. (ಮತ್ತಾ. 24:7, 14) ಈ ಎಲ್ಲಾ ಭವಿಷ್ಯವಾಣಿಗಳು ಈಗಾಗ್ಲೇ ನೆರವೇರುತ್ತಾ ಇದೆ. ಇದಷ್ಟೇ ಅಲ್ಲ ಇನ್ನೂ ಬೇರೆ ಭವಿಷ್ಯವಾಣಿಗಳ ಬಗ್ಗೆನೂ ಯೋಚ್ನೆ ಮಾಡುವಾಗ ಯೆಹೋವ ಭವಿಷ್ಯದ ಬಗ್ಗೆ ಕೊಟ್ಟಿರೋ ಮಾತುಗಳು ನಿಜ ಆಗೇ ಆಗುತ್ತೆ ಅನ್ನೋ ನಂಬಿಕೆ ಜಾಸ್ತಿ ಆಗುತ್ತೆ.

ಒಬ್ಬ ಸಹೋದರಿ ಬೈಬಲಲ್ಲಿರೋ ಭವಿಷ್ಯವಾಣಿಗಳ ಬಗ್ಗೆ ಓದಿ ಚೆನ್ನಾಗಿ ಯೋಚ್ನೆ ಮಾಡ್ತಿದ್ದಾರೆ. ಚಿತ್ರಗಳು: 1. ಒಂದು ದಂಪತಿ ತಳ್ಳುಬಂಡಿ ಸಾಕ್ಷಿಕಾರ್ಯ ಮಾಡ್ತಿದ್ದಾರೆ. ಪಕ್ಕದಲ್ಲಿ ಒಬ್ಬ ವ್ಯಕ್ತಿ ಹತ್ರ ಮಾತಾಡ್ತಿದ್ದಾರೆ. 2. ಒಬ್ಬ ಅಪ್ಪ ಮತ್ತು ಮಗ ವಿಪತ್ತಿಂದ ಏನೆಲ್ಲ ಹಾನಿ ಆಗಿದೆ ಅಂತ ನೋಡ್ತಾ ನಿಂತಿದ್ದಾರೆ. 3. ದಾನಿಯೇಲ 2ನೇ ಅಧ್ಯಾಯದಲ್ಲಿ ತಿಳಿಸಿರೋ ನೆಬೂಕದ್ನೆಚ್ಚರ ಕನಸಲ್ಲಿ ನೋಡಿದ ಮೂರ್ತಿಗೆ ಒಂದು ದೊಡ್ಡ ಕಲ್ಲು ಬಂದು ಹೊಡೆದಿದೆ. 4. ಜನ್ರೆಲ್ಲ ಪರದೈಸಲ್ಲಿ ಖುಷಿಖುಷಿಯಾಗಿ ಇದ್ದಾರೆ.

ಈಗ ನೆರವೇರುತ್ತಾ ಇರೋ ಭವಿಷ್ಯವಾಣಿಗಳು ಯೆಹೋವ ಭವಿಷ್ಯದ ಬಗ್ಗೆ ಕೊಟ್ಟಿರೋ ಮಾತುಗಳು ನೆರವೇರುತ್ತೆ ಅಂತ ನಂಬೋಕೆ ಸಹಾಯ ಮಾಡುತ್ತೆ (ಪ್ಯಾರ 12 ನೋಡಿ)


ಭಯ ಆದಾಗ ಯೆಹೋವ ನಮಗೆ ಧೈರ್ಯ ತುಂಬ್ತಾನೆ

13. (ಎ) ಯೆಹೂದ್ಯರಿಗೆ ಬಿಡುಗಡೆ ಸಮಯ ಹತ್ರ ಆದಾಗ ಯಾವ ಕಷ್ಟ ಬಂತು? (ಬಿ) ಯೆಶಾಯ 41:10-13ರಲ್ಲಿ ಹೇಳಿರೋ ಹಾಗೆ ಯೆಹೋವ ಯೆಹೂದ್ಯರಿಗೆ ಹೇಗೆ ಸಾಂತ್ವನ ಕೊಟ್ಟನು?

13 ಯೆಹೋವ ದೇವರು ಯೆಹೂದ್ಯರನ್ನ ಬಾಬೆಲಿಂದ ಬಿಡಿಸ್ತೀನಿ ಅಂತ ಮುಂಚೆನೇ ಒಂದು ನಿರೀಕ್ಷೆ ಕೊಟ್ಟಿದ್ದನು. ಆದ್ರೆ ಆ ಬಿಡುಗಡೆಯ ಸಮಯ ಹತ್ರ ಆಗ್ತಿದ್ದ ಹಾಗೆ ಕಷ್ಟಗಳೂ ಬರುತ್ತೆ ಅಂತ ಆತನಿಗೆ ಗೊತ್ತಿತ್ತು. ಯಾಕಂದ್ರೆ ಒಬ್ಬ ಶೂರ ರಾಜ ಬಾಬೆಲಿನ ಸುತ್ತಮುತ್ತ ಇದ್ದ ದೇಶಗಳನ್ನ ಪುಡಿಪುಡಿ ಮಾಡ್ತಾನೆ, ಅವನು ಬಾಬೆಲನ್ನೂ ಬಿಡಲ್ಲ ಅಂತ ಯೆಹೋವ ಮುಂಚೆನೇ ಹೇಳಿದ್ದನು. (ಯೆಶಾ. 41:2-5) ಈ ಕಷ್ಟ ಬಂದಾಗ ಯೆಹೂದ್ಯರು ಹೆದರಬೇಕಿತ್ತಾ? ಇಲ್ಲ! ಯಾಕಂದ್ರೆ ಯೆಹೋವ ಈಗಾಗ್ಲೇ “ಹೆದರಬೇಡ. ಯಾಕಂದ್ರೆ ನಾನು ನಿನ್ನ ಜೊತೆ ಇದ್ದೀನಿ. ಕಳವಳಪಡಬೇಡ. ಯಾಕಂದ್ರೆ ನಾನು ನಿನ್ನ ದೇವರು” ಅಂತ ಅವ್ರಿಗೆ ಸಾಂತ್ವನ ಕೊಟ್ಟಿದ್ದನು. (ಯೆಶಾಯ 41:10-13 ಓದಿ.) ಇಲ್ಲಿ ಯೆಹೋವ ಯಾಕೆ “ನಾನು ನಿನ್ನ ದೇವರು” ಅಂತ ಹೇಳ್ತಿದ್ದಾನೆ? ಅವರು ತನ್ನನ್ನ ಆರಾಧನೆ ಮಾಡಬೇಕು ಅಂತು ಅವ್ರಿಗೆ ನೆನಪಿಸ್ತಾ ಇದ್ದನಾ? ಇಲ್ಲ. ಯಾಕಂದ್ರೆ ಅವ್ರಿದನ್ನ ಈಗಾಗ್ಲೇ ಮಾಡ್ತಿದ್ರು. ಹಾಗಿದ್ರೆ ಯಾಕೆ ಹೇಳಿದನು? ಏನೇ ಆದ್ರೂ ಅವ್ರ ಕೈಬಿಡಲ್ಲ, ಅವರ ಜೊತೆನೇ ಇದ್ದೀನಿ ಅನ್ನೋದನ್ನ ನೆನಪಿಸೋಕೆ ಹಾಗೆ ಹೇಳಿದನು.—ಕೀರ್ತ. 118:6.

14. ಯೆಹೋವ ದೇವರು ಯೆಹೂದ್ಯರ ಭಯನ ಕಮ್ಮಿ ಮಾಡೋಕೆ ಇನ್ನೇನು ಮಾಡಿದನು?

14 ಯೆಹೋವ ದೇವರು ಯೆಹೂದ್ಯರ ಭಯನ ಕಮ್ಮಿ ಮಾಡೋಕೆ ಇನ್ನೇನು ಮಾಡಿದನು? ತನಗೆ ಎಷ್ಟು ತಿಳುವಳಿಕೆ ಮತ್ತು ಶಕ್ತಿ ಇದೆ ಅಂತ ಅರ್ಥಮಾಡಿಸಿದನು. ಅದಕ್ಕೇ ಆಕಾಶದಲ್ಲಿರೋ ನಕ್ಷತ್ರಗಳನ್ನ ನೋಡೋಕೆ ಅವ್ರಿಗೆ ಹೇಳಿದನು. ಯೆಹೋವ ಕೋಟಿಗಟ್ಟಲೆ ನಕ್ಷತ್ರಗಳನ್ನ ಸೃಷ್ಟಿ ಮಾಡಿದ್ದಷ್ಟೇ ಅಲ್ಲ, ಪ್ರತಿಯೊಂದು ನಕ್ಷತ್ರಗಳ ಹೆಸ್ರು ಆತನಿಗೆ ಗೊತ್ತಿದೆ. (ಯೆಶಾ. 40:25-28) ಹಾಗಿರುವಾಗ ತನ್ನ ಸೇವಕರ ಹೆಸ್ರುಗಳನ್ನ ಆತನು ಮರಿತಾನಾ? ಯೆಹೋವನಿಗೆ ಇಷ್ಟೊಂದು ನಕ್ಷತ್ರಗಳನ್ನೇ ಸೃಷ್ಟಿಮಾಡೋ ಶಕ್ತಿ ಇದೆ ಅಂದ್ಮೇಲೆ ತನ್ನ ಸೇವಕರಿಗೆ ಸಹಾಯ ಮಾಡೋ ಶಕ್ತಿ ಇಲ್ವಾ? ಖಂಡಿತ ಇದೆ! ಹಾಗಾಗಿ ಯೆಹೂದ್ಯರು ಹೆದರೋ ಅಗತ್ಯನೇ ಇರಲಿಲ್ಲ.

15. ಬಿಡುಗಡೆ ಆಗೋ ಸಮಯದಲ್ಲಿ ಯೆಹೂದ್ಯರು ಏನು ಮಾಡಬೇಕು ಅಂತ ಯೆಹೋವ ಮುಂಚೆನೇ ಹೇಳಿದನು?

15 ಯೆಹೋವ ದೇವರು ಮುಂಚೆನೇ ಯೆಹೂದ್ಯರಿಗೆ ಬಿಡುಗಡೆ ಆಗೋ ಸಮಯದಲ್ಲಿ ಏನು ಮಾಡಬೇಕು ಅಂತ ಹೇಳಿದನು. ಅದಕ್ಕೇ ಯೆಶಾಯ ಪುಸ್ತಕದ ಆರಂಭದಲ್ಲಿ ಯೆಹೋವ ಅವ್ರಿಗೆ “ನಿಮ್ಮನಿಮ್ಮ ಒಳಗಿನ ಕೋಣೆಗಳಿಗೆ ಹೋಗಿ, ಬಾಗಿಲು ಹಾಕೊಳ್ಳಿ, ಸ್ವಲ್ಪಹೊತ್ತು ಬಚ್ಚಿಟ್ಕೊಳ್ಳಿ. ನನ್ನ ಕೋಪ ತೀರೋ ತನಕ ಅಲ್ಲೇ ಇರಿ” ಅಂತ ಹೇಳಿದನು. (ಯೆಶಾ. 26:20) ಈ ವಚನದ ಮೊದಲನೇ ನೆರವೇರಿಕೆ ರಾಜ ಕೋರೆಷ ಬಾಬೆಲನ್ನ ವಶ ಮಾಡ್ಕೊಂಡಾಗ ಆಗಿರಬಹುದು. ಅದಕ್ಕೇ ಒಬ್ಬ ಗ್ರೀಕ್‌ ಇತಿಹಾಸಗಾರ, ರಾಜ ಕೋರೆಷ “ಮನೆಯ ಹೊರಗೆ ಇದ್ದವರೆಲ್ಲರನ್ನು ಕೊಂದುಹಾಕುವ ಆಜ್ಞೆಯನ್ನು ತನ್ನ [ಸೈನಿಕರಿಗೆ] ಕೊಟ್ಟನು” ಅಂತ ಹೇಳಿದನು. ಇದನ್ನೆಲ್ಲ ನೋಡಿದ ಯೆಹೂದ್ಯರಿಗೆ ಹೇಗೆ ಅನಿಸಿರಬೇಕು ಅಂತ ಸ್ವಲ್ಪ ಯೋಚಿಸಿ! ಆದ್ರೆ ಅವರು ಯೆಹೋವ ಹೇಳಿದ ಹಾಗೆನೇ ಬಚ್ಚಿಟ್ಕೊಂಡಿದ್ರಿಂದ ಅವ್ರ ಜೀವ ಉಳಿದಿರಬಹುದು.

16. ಮಹಾ ಸಂಕಟದ ಸಮಯದಲ್ಲಿ ತುಂಬ ಕಷ್ಟಗಳು ಬರುತ್ತೆ ಅಂತ ನೆನಸಿ ನಾವ್ಯಾಕೆ ಹೆದರಬಾರದು? (ಚಿತ್ರ ನೋಡಿ.)

16 ನಾವೇನು ಕಲಿತೀವಿ? ಇನ್ನೇನು ಮಹಾ ಸಂಕಟ ಶುರುವಾಗುತ್ತೆ. ಆಗ ನಾವು ಇಲ್ಲಿ ತನಕ ನೋಡದೇ ಇರೋ, ಕೇಳದೇ ಇರೋ ಕಷ್ಟಗಳನ್ನ ಅನುಭವಿಸ್ತೀವಿ. ಈ ಕಷ್ಟ ಬಂದಾಗ ಲೋಕದ ಜನ್ರೆಲ್ಲ ಗಾಬರಿಪಡ್ತಾರೆ. ಆದ್ರೆ ಯೆಹೋವನ ಜನ್ರಾದ ನಾವು ಹೆದ್ರೋದೇ ಇಲ್ಲ. ಯಾಕೆ? ಯಾಕಂದ್ರೆ ನಮ್ಮ ದೇವರಾಗಿರೋ ಯೆಹೋವ ನಮ್ಮ ಜೊತೆನೇ ಇದ್ದಾನೆ ಅಂತ ನಮಗೆ ಗೊತ್ತು. ಅಷ್ಟೇ ಅಲ್ಲ, ನಮ್ಮ “ಬಿಡುಗಡೆ ಹತ್ರ ಆಗಿದೆ” ಅಂತ ನಮಗೆ ಗೊತ್ತಿರೋದ್ರಿಂದ ನಾವು ತಲೆಯನ್ನ ಮೇಲಕ್ಕೆತ್ತಿ ಸ್ಥಿರವಾಗಿ ನಿಲ್ತೀವಿ. (ಲೂಕ 21:28) ಹಾಗಾಗಿ ಜನಾಂಗಗಳ ಗುಂಪು ನಮ್ಮ ಮೇಲೆ ಆಕ್ರಮಣ ಮಾಡಿದ್ರೂ ನಾವು ಹೆದ್ರಲ್ಲ. ಆ ಸಮಯದಲ್ಲಿ ಯೆಹೋವ ತನ್ನ ದೇವದೂತರಿಂದ ನಮಗೆ ಸಹಾಯ ಮಾಡ್ತಾನೆ. ಅಷ್ಟೇ ಅಲ್ಲ ನಮ್ಮ ಜೀವ ಉಳಿಸ್ಕೊಳ್ಳೋಕೆ ಬೇಕಾದ ನಿರ್ದೇಶನನೂ ಕೊಡ್ತಾನೆ. ಆದ್ರೆ ಆ ನಿರ್ದೇಶನ ನಮಗೆ ಹೇಗೆ ಸಿಗುತ್ತೆ? ಹೀಗೆನೇ ಸಿಗುತ್ತೆ ಅಂತ ನಮಗೆ ಹೇಳೋಕೆ ಆಗಲ್ಲ, ಆದ್ರೂ ಅದು ನಮಗೆ ಸಭೆಗಳಿಂದನೇ ಸಿಗಬಹುದು. ಈ ಸಭೆಗಳೇ ನಮಗೆ ‘ಒಳಗಿನ ಕೋಣೆಗಳಾಗಿರಬಹುದು.’ ಹಾಗಿದ್ರೆ ಇದಕ್ಕೆಲ್ಲ ನಾವು ಹೇಗೆ ತಯಾರಿ ಮಾಡ್ಕೊಬೇಕು? ನಮ್ಮ ಸಹೋದರ ಸಹೋದರಿಯರ ಜೊತೆ ನಾವು ಈಗ್ಲೇ ಒಳ್ಳೇ ಸ್ನೇಹ ಬೆಳೆಸ್ಕೊಬೇಕು. ಸಂಘಟನೆ ನಿರ್ದೇಶನ ಕೊಡುವಾಗ ಅದನ್ನ ಪಾಲಿಸಬೇಕು. ಅಷ್ಟೇ ಅಲ್ಲ, ಈ ಸಂಘಟನೆಯನ್ನ ಯೆಹೋವನೇ ನಡಿಸ್ತಿದ್ದಾನೆ ಅಂತ ಪೂರ್ತಿಯಾಗಿ ನಂಬಬೇಕು.—ಇಬ್ರಿ. 10:24, 25; 13:17.

ಮಹಾ ಸಂಕಟದ ಸಮಯದಲ್ಲಿ ಸಹೋದರ ಸಹೋದರಿಯರೆಲ್ಲ ಒಂದು ಮನೆಯಲ್ಲಿ ಸೇರಿ ಬಂದಿದ್ದಾರೆ. ಆಗ ಒಬ್ಬ ಸಹೋದರ ಕತ್ತಲೆ ತುಂಬಿರೋ ಆಕಾಶದ ಕಡೆಗೆ ಕೈ ತೋರಿಸ್ತಿದ್ದಾರೆ.

ಯೆಹೋವನಿಗೆ ನಮ್ಮನ್ನ ಕಾಪಾಡೋ ಶಕ್ತಿಯಿದೆ ಅಂತ ನಾವು ಅರ್ಥಮಾಡ್ಕೊಂಡ್ರೆ ಮಹಾ ಸಂಕಟದ ಸಮಯದಲ್ಲಿ ಹೆದರಲ್ಲ (ಪ್ಯಾರ 16 ನೋಡಿ)b


17. ಯೆಹೋವ ನಮ್ಮನ್ನ ಹೇಗೆ ಸಂತೈಸ್ತಾನೆ?

17 ಬಾಬೆಲಲ್ಲಿರುವಾಗ ಯೆಹೂದ್ಯರ ಜೀವನ ಅಷ್ಟೇನು ಸುಲಭ ಆಗಿರಲಿಲ್ಲ, ಅದಕ್ಕೇ ಯೆಹೋವ ಅವ್ರಿಗೆ ಸಾಂತ್ವನ ಕೊಟ್ಟನು. ಅದೇ ತರ ಯೆಹೋವ ನಮಗೂ ಸಾಂತ್ವನ ಕೊಡ್ತಾನೆ. ನಾಳೆ ನಮಗೆ ಬೆಟ್ಟದಂಥ ಕಷ್ಟಗಳೇ ಬಂದ್ರೂ ಯೆಹೋವ ನಮ್ಮನ್ನ ಹೇಗೆ ಸಂತೈಸ್ತಾನೆ? ಯೆಹೋವ ಕರುಣಾಮಯಿ ತಂದೆ ಆಗಿರೋದ್ರಿಂದ ನಮಗೆ ಖಂಡಿತ ಕರುಣೆ ತೋರಿಸ್ತಾನೆ, ನಮ್ಮ ನಿರೀಕ್ಷೆನ ಹಚ್ಚಹಸಿರಾಗಿ ಇಡೋಕೆ ಸಹಾಯನೂ ಮಾಡ್ತಾನೆ. ಹಾಗಾಗಿ ನಾವೆಲ್ರೂ ಒಂದು ವಿಷ್ಯನ ಯಾವಾಗ್ಲೂ ನೆನಪಿಡೋಣ. ಅದೇನಂದ್ರೆ, ಯೆಹೋವ ನಮ್ಮ ದೇವರಾಗಿರೋದ್ರಿಂದ ನಾವು ಯಾವದಕ್ಕೂ ಭಯಪಡೋ ಅಗತ್ಯನೇ ಇಲ್ಲ.

ಸಾಂತ್ವನ ಪಡ್ಕೊಳ್ಳೋಕೆ ಈ ವಚನಗಳು ನಿಮಗೆ ಹೇಗೆ ಸಹಾಯ ಮಾಡುತ್ತೆ?

  • ಯೆಶಾಯ 55:7

  • ಯೆಶಾಯ 40:29-31

  • ಯೆಶಾಯ 41:10-13

ಗೀತೆ 38 ಮಾಡುವನು ಸ್ಥಿರ, ನೀಡುವನು ಬಲ!

a ಕೆಲವ್ರ ಹೆಸ್ರು ಬದಲಾಗಿದೆ.

b ಚಿತ್ರ ವಿವರಣೆ: ಕೆಲವು ಸಹೋದರ ಸಹೋದರಿಯರು ಒಟ್ಟಿಗೆ ಸೇರಿಬಂದಿದ್ದಾರೆ. ಅವರು ಆಕಾಶದಲ್ಲಿರೋ ನಕ್ಷತ್ರಗಳನ್ನ ನೋಡುವಾಗ ತಾವೆಲ್ಲೇ ಇದ್ರೂ ಯೆಹೋವ ತಮ್ಮನ್ನ ಕಾಪಾಡೇ ಕಾಪಾಡ್ತಾನೆ ಅಂತ ನೆನಪಿಸ್ಕೊಳ್ತಿದ್ದಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ