ನಾವು ಯಾವಾಗ ಸಾಯಬೇಕು ಅನ್ನೋದು ಮೊದಲೇ ನಿರ್ಧಾರ ಆಗಿದ್ಯಾ?
ಬೈಬಲ್ ಕೊಡೋ ಉತ್ತರ
ಇಲ್ಲ, ನಾವು ಯಾವಾಗ ಸಾಯಬೇಕು ಅನ್ನೋದು ಮೊದಲೇ ನಿರ್ಧಾರ ಆಗಿರಲ್ಲ. ನಾವು ಹಣೆಬರಹದಿಂದಲ್ಲ, ‘ಅನಿರೀಕ್ಷಿತ ಘಟನೆಗಳಿಂದ’ ಸಾಯ್ತೀವಿ ಅಂತ ಬೈಬಲ್ ಹೇಳುತ್ತೆ.—ಪ್ರಸಂಗಿ 9:11.
“ಸಾಯೋಕೆ ಒಂದು ಸಮಯ” ಇದೆ ಅಂತ ಬೈಬಲ್ ಹೇಳುತ್ತಾ?
ಹೇಳುತ್ತೆ. ಪ್ರಸಂಗಿ 3:2 “ಹುಟ್ಟೋಕೆ ಒಂದು ಸಮಯ, ಸಾಯೋಕೆ ಒಂದು ಸಮಯ, ನೆಡೋಕೆ ಒಂದು ಸಮಯ, ನೆಟ್ಟದ್ದನ್ನ ಕೀಳೋಕೆ ಒಂದು ಸಮಯ” ಇದೆ ಅಂತ ಹೇಳುತ್ತೆ. ಈ ವಚನದಲ್ಲಿ ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಪದೇ ಪದೇ ಆಗೋ ವಿಷ್ಯಗಳ ಬಗ್ಗೆ ಇದೆ. (ಪ್ರಸಂಗಿ 3:1-8) ಬೀಜ ಬಿತ್ತೋಕೆ ಒಂದು ಸಮಯ ಇರುತ್ತೆ. ಆದ್ರೆ ರೈತ ಇದೇ ಸಮಯದಲ್ಲಿ ಬೀಜ ಬಿತ್ತಬೇಕು ಅಂತ ದೇವರು ನಿರ್ಧಾರ ಮಾಡಿರಲ್ಲ. ಅದೇ ತರ ನಾವು ಸಾಯೋದಕ್ಕೆ ದೇವರು ಒಂದು ಸಮಯವನ್ನ ನಿರ್ಧಾರ ಮಾಡಿರಲ್ಲ. ಈ ವಚನದ ಅರ್ಥ ಏನಂದ್ರೆ ನಾವು ಜೀವನದ ಜಂಜಾಟದಲ್ಲಿ ಸೃಷ್ಟಿಕರ್ತ ದೇವರನ್ನ ಮರಿಬಾರದು ಅನ್ನೋದೇ ಆಗಿದೆ.—ಪ್ರಸಂಗಿ 3:11; 12:1, 13.
ನಾವು ಜಾಸ್ತಿ ದಿನ ಬದುಕಬಹುದು
ಜೀವನದಲ್ಲಿ ಯಾವಾಗ ಏನು ಬೇಕಾದ್ರೂ ಆಗಬಹುದು, ಆದ್ರೆ ನಾವು ಸರಿಯಾದ ನಿರ್ಧಾರ ಮಾಡಿದ್ರೆ ಜಾಸ್ತಿ ದಿನ ಬದುಕಬಹುದು. ಅದಕ್ಕೆ ಬೈಬಲ್ ಹೀಗೆ ಹೇಳುತ್ತೆ: “ವಿವೇಕಿಯ ಬುದ್ಧಿವಾದ ಜೀವದ ಬುಗ್ಗೆ, ಅದು ಮರಣದ ಉರ್ಲುಗಳಿಂದ ಒಬ್ಬನನ್ನ ಕಾಪಾಡುತ್ತೆ.” (ಜ್ಞಾನೋಕ್ತಿ 13:14) ಅದಕ್ಕಾಗಿ ಮೋಶೆ ಇಸ್ರಾಯೇಲ್ಯರಿಗೆ ‘ನೀವು ದೇವರ ನಿಯಮಗಳನ್ನ ಪಾಲಿಸಿದ್ರೆ ಜಾಸ್ತಿ ವರ್ಷ ಬದುಕ್ತೀರ’ ಅಂತ ಹೇಳಿದ. (ಧರ್ಮೋಪದೇಶಕಾಂಡ 6:2) ಆದ್ರೆ ನಾವು ಮೂರ್ಖರ ತರ ಕೆಟ್ಟ ನಿರ್ಧಾರಗಳನ್ನ ಮಾಡಿದ್ರೆ ಜಾಸ್ತಿ ದಿನ ಬದುಕೋದಕ್ಕೆ ಆಗಲ್ಲ.—ಪ್ರಸಂಗಿ 7:17.
ಕೆಲವು ಸಲ ನಾವು ಎಷ್ಟೇ ಹುಷಾರಾಗಿದ್ರೂ ಸಾವಿಂದ ತಪ್ಪಿಸಿಕೊಳ್ಳೋದಕ್ಕೆ ಆಗಲ್ಲ. (ರೋಮನ್ನರಿಗೆ 5:12) ಆದ್ರೆ ಇದು ಹೀಗೇ ಮುಂದುವರೆಯಲ್ಲ, ಯಾಕಂದ್ರೆ ‘ಸಾವೇ ಇಲ್ಲದ’ ಒಂದು ಸಮಯ ಬರುತ್ತೆ ಅಂತ ಬೈಬಲ್ ಹೇಳುತ್ತೆ.—ಪ್ರಕಟನೆ 21:4.