ಬುಧವಾರ, ಅಕ್ಟೋಬರ್ 22
ನಿಮಗೆ ನಂಬಿಕೆ ಇದೆ ಅಂತ ಹೇಳಿ ಅದನ್ನ ಒಳ್ಳೇ ಕೆಲಸ ಮಾಡಿ ತೋರಿಸ್ದೆ ಇದ್ರೆ ನಂಬಿಕೆ ಇದ್ರೂ ಪ್ರಯೋಜನ ಇಲ್ಲ.—ಯಾಕೋ. 2:17.
ಒಬ್ಬ ವ್ಯಕ್ತಿಗೆ ನಂಬಿಕೆ ಇಲ್ಲ ಅನ್ನೋದು ಅವನು ಮಾಡ್ತಿರೋ ಕೆಲಸಗಳಿಂದ ಗೊತ್ತಾಗುತ್ತೆ. (ಯಾಕೋ. 2:1-5, 9) ಅವನ ಸಹೋದರ ಅಥವಾ ಸಹೋದರಿ ಹತ್ರ ಬಟ್ಟೆ ಇಲ್ಲ, ತಿನ್ನೋಕೆ ಊಟ ಇಲ್ಲ ಅಂತ ಗೊತ್ತಾದಾಗ ಅವನು ಅವ್ರಿಗೆ ಸಹಾಯ ಮಾಡದೇ ಇದ್ರೆ ಅವನಿಗೆ ನಂಬಿಕೆ ಇದೆ ಅಂತ ಹೇಳಕ್ಕಾಗುತ್ತಾ? ಇಲ್ಲ. ಅವನಿಗೆ ನಂಬಿಕೆ ಇದ್ರೂ ಅದು ವ್ಯರ್ಥ ಆಗುತ್ತೆ. ಯಾಕಂದ್ರೆ ಅವನ ಕೆಲಸಗಳಲ್ಲಿ ಅದನ್ನ ತೋರಿಸ್ತಾ ಇಲ್ಲ. (ಯಾಕೋ. 2:14-16) ನಂಬಿಕೆ ಇದೆ ಅಂತ ತಮ್ಮ ಕೆಲಸದಲ್ಲಿ ತೋರಿಸಿದವ್ರಲ್ಲಿ ರಾಹಾಬ್ ಕೂಡ ಒಬ್ಬಳು ಅಂತ ಯಾಕೋಬ ಹೇಳಿದ. (ಯಾಕೋ. 2:25, 26) ಯೆಹೋವನ ಬಗ್ಗೆ, ಆತನು ಇಸ್ರಾಯೇಲ್ಯರನ್ನ ಹೇಗೆಲ್ಲಾ ಕಾಪಾಡಿದನು ಅನ್ನೋದ್ರ ಬಗ್ಗೆ ರಾಹಾಬ್ ಕೇಳಿಸ್ಕೊಂಡಿದ್ದಳು. (ಯೆಹೋ. 2:9-11) ಆಗ ಅವಳು ಯೆಹೋವನ ಮೇಲೆ ನಂಬಿಕೆ ಇಟ್ಟಿದ್ದಷ್ಟೇ ಅಲ್ಲ, ಇಬ್ರು ಇಸ್ರಾಯೇಲ್ಯ ಗೂಢಾಚಾರರು ಬಂದಾಗ ಅವ್ರನ್ನ ಬಚ್ಚಿಟ್ಟು ಕಾಪಾಡಿದಳು. ಹೀಗೆ ನಂಬಿಕೆ ಇದೆ ಅಂತ ತನ್ನ ಕೆಲಸದಲ್ಲಿ ತೋರಿಸಿದಳು. ಇವಳು ಅಬ್ರಹಾಮನ ತರ ಅಪರಿಪೂರ್ಣಳಾಗಿದ್ದಳು ಮತ್ತು ಮೋಶೆ ನಿಯಮ ಪುಸ್ತಕನ ಪಾಲಿಸ್ತಿರಲಿಲ್ಲ. ಹಾಗಿದ್ರೂ ಯೆಹೋವ ಅವ್ರಿಬ್ರನ್ನ ನೀತಿವಂತರು ಅಂತ ಕರೆದನು. ಹಾಗಾಗಿ ನಂಬಿಕೆ ಇದ್ರೆ ಮಾತ್ರ ಸಾಕಾಗಲ್ಲ, ಅದನ್ನ ನಮ್ಮ ಕೆಲಸದಲ್ಲಿ ತೋರಿಸೋದು ತುಂಬ ಮುಖ್ಯ ಅಂತ ರಾಹಾಬಳಿಂದ ಗೊತ್ತಾಗುತ್ತೆ. w23.12 5-6 ¶12-13
ಗುರುವಾರ, ಅಕ್ಟೋಬರ್ 23
ನೀವು ಬಲವಾಗಿ ಬೇರೂರಿರಬೇಕು ಮತ್ತು ಅಡಿಪಾಯದ ಮೇಲೆ ಸ್ಥಿರವಾಗಿ ನಿಲ್ಲಬೇಕು.—ಎಫೆ. 3:17.
ಕ್ರೈಸ್ತರಾಗಿರೋ ನಾವು ಬೈಬಲಲ್ಲಿರೋ ಕೆಲವು ವಿಷ್ಯಗಳನ್ನ ತಿಳ್ಕೊಂಡ್ರೆ ಮಾತ್ರ ಸಾಕಾಗಲ್ಲ, ಯೆಹೋವನ ಬಗ್ಗೆ ಇರೋ “ಗಾಢವಾದ ವಿಷ್ಯಗಳನ್ನ” ತಿಳ್ಕೊಬೇಕು. ಅದಕ್ಕೆ ಆತನು ಕೊಡೋ ಪವಿತ್ರಶಕ್ತಿ ಸಹಾಯ ಮಾಡುತ್ತೆ. (1 ಕೊರಿಂ. 2:9, 10) ಅದನ್ನ ತಿಳ್ಕೊಳ್ಳೋಕೆ ಮತ್ತು ದೇವರಿಗೆ ಹತ್ರ ಆಗೋಕೆ ಬೈಬಲ್ ಪ್ರಾಜೆಕ್ಟ್ ಮಾಡಿ. ಉದಾಹರಣೆಗೆ, ಯೆಹೋವ ದೇವರು ಹಿಂದಿನ ಕಾಲದಲ್ಲಿ ತನ್ನ ಸೇವಕರಿಗೆ ಹೇಗೆಲ್ಲ ಪ್ರೀತಿ ತೋರಿಸಿದನು ಅಂತ ಹುಡುಕಿ. ಆಗ ಯೆಹೋವ ನಮ್ಮನ್ನ ಹೇಗೆ ಪ್ರೀತಿಸ್ತಾನೆ ಅಂತ ಗೊತ್ತಾಗುತ್ತೆ ಅಥವಾ ಯೆಹೋವ ದೇವರು ಇಸ್ರಾಯೇಲ್ಯರಿಗೆ ಹೇಗೆ ಆರಾಧನೆ ಮಾಡೋಕೆ ಹೇಳಿದ್ದನು ಅಂತ ಹುಡುಕಿ. ಆಗ ನಾವೂ ಅದೇ ತರ ಮಾಡ್ತಿದ್ದೀವಾ ಅಂತ ಗೊತ್ತಾಗುತ್ತೆ. ಇಲ್ಲಾಂದ್ರೆ ಯೇಸು ಭೂಮಿಗೆ ಬಂದ್ಮೇಲೆ ಆತನ ಬಗ್ಗೆ ಇರೋ ಭವಿಷ್ಯವಾಣಿಗಳು ಹೇಗೆಲ್ಲ ನಿಜ ಆಯ್ತು ಅಂತ ಅಧ್ಯಯನ ಮಾಡಿ. ಇಂಥ ವಿಷ್ಯಗಳ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಅನ್ನೋದ್ರಲ್ಲಿ ಹುಡುಕಿ ನೋಡಿ. ಈ ತರ ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡಿದ್ರೆ ಬೋರ್ ಆಗಲ್ಲ. ನಮ್ಮ ನಂಬಿಕೆನೂ ಗಟ್ಟಿಯಾಗುತ್ತೆ ಮತ್ತು ‘ದೇವರ ಬಗ್ಗೆ ಹೆಚ್ಚು ಕಲಿಯೋಕೂ’ ಆಗುತ್ತೆ.—ಜ್ಞಾನೋ. 2:4, 5 w23.10 18-19 ¶3-5
ಶುಕ್ರವಾರ, ಅಕ್ಟೋಬರ್ 24
ಮುಖ್ಯವಾಗಿ ಒಬ್ರ ಮೇಲೆ ಒಬ್ರಿಗೆ ತುಂಬ ಪ್ರೀತಿ ಇರಬೇಕು. ಯಾಕಂದ್ರೆ ಪ್ರೀತಿ ಇರೋ ವ್ಯಕ್ತಿ ಯಾವಾಗ್ಲೂ ಬೇರೆಯವ್ರ ತಪ್ಪುಗಳನ್ನ ಕ್ಷಮಿಸ್ತಾನೆ.—1 ಪೇತ್ರ 4:8.
ಅಪೊಸ್ತಲ ಪೇತ್ರ ಉಪಯೋಗಿಸಿದ “ತುಂಬ” ಅನ್ನೋ ಪದದ ಅಕ್ಷರಾರ್ಥ “ಹಾಸೋದು”. ಆ ವಚನದ ಎರಡನೇ ಭಾಗದಲ್ಲಿ “ಪ್ರೀತಿ ಇರೋ ವ್ಯಕ್ತಿ ಯಾವಾಗ್ಲೂ ಬೇರೆಯವ್ರ ತಪ್ಪುಗಳನ್ನ ಕ್ಷಮಿಸ್ತಾನೆ” ಅಂತ ಹೇಳುತ್ತೆ. ಅಂದ್ರೆ ಅವ್ರ ಪಾಪಗಳನ್ನ ಮುಚ್ಚುತ್ತಾನೆ. ಇದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡಿ. ನಿಮ್ಮ ಮನೇಲಿ ನೋಡೋಕೆ ತುಂಬ ಗಲೀಜಾಗಿರೋ ಒಂದು ಟೇಬಲ್ ಇದೆ ಅಂತ ಅಂದ್ಕೊಳ್ಳಿ. ಅದ್ರ ಮೇಲೆ ನೀವೊಂದು ಬಟ್ಟೆಯನ್ನ ಹಾಸಿದಾಗ ಅದ್ರಲ್ಲಿರೋ ಒಂದೆರಡಲ್ಲ, ಎಲ್ಲಾ ಗಲೀಜನ್ನ ಅಥವಾ ಕಲೆಯನ್ನ ಆ ಬಟ್ಟೆ ಮುಚ್ಚಿ ಬಿಡುತ್ತೆ. ಹಾಗೇನೇ ಸಹೋದರ ಸಹೋದರಿಯರ ಮೇಲೆ ನಮಗೆ “ತುಂಬ ಪ್ರೀತಿ” ಇದ್ರೆ ಅವ್ರು ಒಂದಲ್ಲಾ, ಎರಡಲ್ಲಾ ‘ಎಷ್ಟೇ ತಪ್ಪುಗಳನ್ನ’ ಮಾಡಿದ್ರೂ ಕ್ಷಮಿಸ್ತೀವಿ, ಅದೆಷ್ಟೇ ಕಷ್ಟ ಆದ್ರೂ ಕ್ಷಮಿಸ್ತೀವಿ. (ಕೊಲೊ. 3:13) ಹೀಗೆ ಮಾಡುವಾಗ ಅವ್ರ ಮೇಲೆ ನಮಗೆಷ್ಟು ಪ್ರೀತಿ ಇದೆ ಅಂತ ತೋರಿಸೋದಷ್ಟೇ ಅಲ್ಲ, ಯೆಹೋವನನ್ನ ಮೆಚ್ಚಿಸೋ ಆಸೆನೂ ಇದೆ ಅಂತ ತೋರಿಸ್ತೀವಿ. w23.11 11-12 ¶13-15