ಜಗತ್ತನ್ನು ಗಮನಿಸುವುದು
◼ “ಸಮುದ್ರದಾಳವು ಈ ಭೂಗ್ರಹದ ಅತಿ ದೊಡ್ಡ ನೆಲೆಬೀಡಾಗಿದೆ. ಇರುವಂಥ ಎಲ್ಲ ನೆಲೆಗಳಲ್ಲಿ ಅತಿ ಕಠೋರವಾದದ್ದೂ ಇದೇ ಆಗಿದೆ . . . ಹಾಗಿದ್ದರೂ ಎಲ್ಲೆಲ್ಲಿಯೂ ನಮಗೆ ಜೀವಿಗಳು ಕಾಣುತ್ತವೆ, ಮತ್ತು ಕೆಲವೊಮ್ಮೆ ಅವು ಅಸಾಧಾರಣ ಪ್ರಮಾಣದಲ್ಲಿ ಯಥೇಷ್ಟವಾಗಿರುತ್ತದೆ.”—ನ್ಯೂ ಸೈಅಂಟಿಸ್ಟ್, ಬ್ರಿಟನ್.
◼ ಇತ್ತೀಚೆಗೆ ಅಮೆರಿಕದ ಪೆನ್ಸಿಲ್‌ವೇನಿಯದ ಹ್ಯಾರಿಸ್‌ಬರ್ಗ್‌ನಲ್ಲಿನ ಒಬ್ಬ ಫೆಡರೆಲ್ ಕೋರ್ಟ್ ನ್ಯಾಯಾಧೀಶರು ಒಂದು ತತ್ತ್ವ ನಿರ್ಣಾಯಕ ಮೊಕದ್ದಮೆಯಲ್ಲಿ ಕೊಟ್ಟ ತೀರ್ಮಾನವೇನೆಂದರೆ, “ಸಾರ್ವಜನಿಕ ಶಾಲೆಯಲ್ಲಿನ ವಿಜ್ಞಾನ ತರಗತಿಯಲ್ಲಿ ಜೀವವಿಕಾಸದ ಬದಲಿಗೆ [ಬುದ್ಧಿಶಕ್ತಿಯಿಂದ ಮಾಡಲ್ಪಟ್ಟಿರುವ ವಿನ್ಯಾಸದ] ಕುರಿತಾಗಿ ಕಲಿಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ.”—ನ್ಯೂ ಯಾರ್ಕ್ ಟೈಮ್ಸ್, ಅಮೆರಿಕ.
◼ ಇಸವಿ 2005ರಲ್ಲಿ ನಡೆಸಲ್ಪಟ್ಟ ಒಂದು ವಾರ್ತಾ ಸಮೀಕ್ಷೆಯ ಪ್ರಕಾರ, “51 ಪ್ರತಿಶತ ಅಮೆರಿಕನರು ಜೀವವಿಕಾಸದ ಸಿದ್ಧಾಂತವನ್ನು ತಿರಸ್ಕರಿಸುತ್ತಾರೆ.”—ನ್ಯೂ ಯಾರ್ಕ್ ಟೈಮ್ಸ್, ಅಮೆರಿಕ.
◼ ಆಸ್ಟ್ರೇಲಿಯದ ಬ್ರಿಸ್‌ಬೇನ್ ಮೃಗಾಲಯದಲ್ಲಿದ್ದ, 150 ಕೆಜಿ ತೂಕದ ಹರೀಟ್ ಎಂಬ ಹೆಸರಿನ ದೈತ್ಯ ಗಾಲಪಾಗೊಸ್ ಆಮೆಯು 2006ರ ಜೂನ್ ತಿಂಗಳಲ್ಲಿ ಸತ್ತಾಗ ಅದಕ್ಕೆ 175 ವರ್ಷ ಪ್ರಾಯವಾಗಿತ್ತು. ಅದು “ಜಗತ್ತಿನಲ್ಲಿ ಜ್ಞಾತವಾಗಿರುವ ಅತಿ ಹೆಚ್ಚು ವಯಸ್ಸಿನ ಜೀವಂತ ಪ್ರಾಣಿ” ಆಗಿತ್ತು.—ಆಸ್ಟ್ರೇಲಿಯದ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್.
◼ ಕೆಲವು ಪ್ರಭೇದಗಳ ಜೋಳದ ಗಿಡಗಳು ಪಾಶ್ಚಾತ್ಯ ಜೋಳದ ಬೇರುಹುಳುಗಳ ವಿರುದ್ಧ ತಮ್ಮನ್ನೇ ಹೇಗೆ ರಕ್ಷಿಸುತ್ತವೆಂಬುದನ್ನು ಸ್ವಿಸ್ ಸಂಶೋಧಕರು ಕಂಡುಹಿಡಿದಿದ್ದಾರೆ. ಈ ಜೋಳದ ಗಿಡಗಳು ನೆಲದಲ್ಲಿ ಕಂಪನ್ನು ಹೊರಸೂಸುತ್ತವೆ. ಈ ಕಂಪು, ತುಂಬ ಸೂಕ್ಷ್ಮವಾದ ದಾರದಂಥ ಹುಳುಗಳನ್ನು ಆಕರ್ಷಿಸುತ್ತದೆ ಮತ್ತು ಈ ಹುಳುಗಳು ಬೇರುಹುಳುಗಳ ಮೊಟ್ಟೆಗಳನ್ನು ಸಾಯಿಸಿಬಿಡುತ್ತವೆ.—ಡೈ ವೆಲ್ಟ್, ಜರ್ಮನಿ. (g 9/06)
ದೈತ್ಯ ಸ್ಕ್ವಿಡ್‌ನ ಫೋಟೊ
ದಕ್ಷಿಣ ಜಪಾನಿನ ಬೊನಿನ್ ದ್ವೀಪಗಳ ಸಮೀಪ, ವಿಜ್ಞಾನಿಗಳು ಮೊದಲ ಬಾರಿ ದೈತ್ಯಾಕಾರದ ಒಂದು ಜೀವಂತ ಸ್ಕ್ವಿಡ್‌ನ ಫೋಟೋವನ್ನು ಅದರ ಸಹಜ ನೆಲೆಯಲ್ಲಿ ತೆಗೆದಿದ್ದಾರೆ. ಅವರು ಚಿಕ್ಕ ಸ್ಕ್ವಿಡ್ ಮತ್ತು ಸಿಗಡಿಯನ್ನು ಅರೆದು ಅದರ ತಿರುಳನ್ನು ಗಾಳದ ಕೊಕ್ಕೆಗಳಿಗೆ ಎರೆಯಾಗಿಳಿಸಿ, ಅದರ ಮೇಲ್ಭಾಗದಲ್ಲಿ ಕ್ಯಾಮೆರಾಗಳನ್ನು ನೇತುಹಾಕಿದರು. 3,000 ಅಡಿ ಆಳದಲ್ಲಿ ಕಂಡುಬಂದ ಒಂದು ದೈತ್ಯಕಾರದ ಸ್ಕ್ವಿಡ್, 25 ಅಡಿ ಉದ್ದವಾಗಿತ್ತೆಂದು ಅಂದಾಜುಮಾಡಲಾಗಿದೆ.
“ಡೈನೊಸಾರ್‌ಗಳು ಹುಲ್ಲು ತಿನ್ನುತ್ತಿದ್ದವು”
“ಡೈನೊಸಾರ್‌ಗಳು ಹುಲ್ಲು ತಿನ್ನುತ್ತಿದ್ದವು” ಎಂಬ ವಿಚಾರವು “ವಿಜ್ಞಾನಿಗಳಿಗೆ ಒಂದು ದೊಡ್ಡ ಆಶ್ಚರ್ಯ” ಎಂದು, ಅಸೋಸಿಯೇಟೆಡ್ ಪ್ರೆಸ್‌ನ ಒಂದು ವರದಿಯು ತಿಳಿಸುತ್ತದೆ. ಭಾರತದಲ್ಲಿ ಕಂಡುಹಿಡಿಯಲಾದ ಸಾರೋಪಾಡ್ ಡೈನೊಸಾರ್‌ನ ಲದ್ದಿಯ ಪಳೆಯುಳಿಕೆಯನ್ನು ಪರಿಶೀಲಿಸಿದಾಗ ಈ ವಿಚಾರವು ಬೆಳಕಿಗೆ ಬಂತು. ಇದರಲ್ಲಿ ಆಶ್ಚರ್ಯದ ವಿಷಯವೇನಿದೆ? ಆ ವರದಿಯು ವಿವರಿಸಿದ್ದೇನೆಂದರೆ, “ಡೈನೊಸಾರ್‌ಗಳು ಅಳಿದು ಹೋದ ಬಹಳಷ್ಟು ಸಮಯದ ಬಳಿಕವೇ ಹುಲ್ಲು ಬೆಳೆಯಲಾರಂಭಿಸಿತು” ಎಂದು ಈ ಮುಂಚೆ ಭಾವಿಸಲಾಗುತ್ತಿತ್ತು. ಸಾರೋಪಾಡ್‌ಗಳಿಗೆ ಹುಲ್ಲಿನ “ತರಚುವ ಗರಿಕೆಗಳನ್ನು ಅಗಿದು ತಿನ್ನಲು ಬೇಕಾದ ವಿಶೇಷ ಹಲ್ಲುಗಳಿರಲಿಲ್ಲ” ಎಂದು ಸಹ ನೆನಸಲಾಗುತ್ತಿತ್ತು. “[ಸಾರೋಪಾಡ್‌ಗಳು] ಹುಲ್ಲು ತಿನ್ನುತ್ತಿದ್ದವೆಂದು ಅಧಿಕಾಂಶ ಜನರು ಊಹಿಸಿರಲಿಕ್ಕೂ ಇಲ್ಲ” ಎಂದು ಇದನ್ನು ಕಂಡುಹಿಡಿದ ತಂಡದ ನಾಯಕಿಯಾದ, ಪ್ರಾಗ್ಜೀವ-ಸಸ್ಯ ವಿಜ್ಞಾನಿ ಕ್ಯಾರೊಲಿನ್ ಸ್ಟ್ರೋಂಬರ್ಗ್ ಹೇಳಿದರು.
ಜೇನುನೊಣಗಳು ಹೇಗೆ ಹಾರುತ್ತವೆ?
ಜೇನುನೊಣಗಳಿಗೆ ಹಾರಲಾಗುವುದಿಲ್ಲವೆಂದು ಇಂಜಿನಿಯರರು ರುಜುಮಾಡಿತೋರಿಸಿದ್ದಾರೆ ಎಂಬುದು ತಮಾಷೆಯಿಂದ ಹೇಳಲಾಗಿದೆ. ನಿಧಾನ ರಕ್ಕೆಬಡಿತವುಳ್ಳ, ಈ “ಭಾರವಾದ” ಕೀಟಗಳು ಹಾರಲು ಬೇಕಾಗಿರುವ ಮೇಲ್ಮುಖ ಒತ್ತಡವನ್ನು ಉತ್ಪಾದಿಸಲಾರವೆಂದು ತೋರುತ್ತಿತ್ತು. ಆ ಕೀಟಗಳ ರಹಸ್ಯವನ್ನು ಬಿಚ್ಚಲು, ಇಂಜಿನಿಯರರು “ಜೇನುನೊಣಗಳು ಹಾರಾಡುತ್ತಿರುವುದನ್ನು ಚಿತ್ರೀಕರಿಸಿದರು ಮತ್ತು ಅದರಲ್ಲಿ ಒಂದು ಸೆಕೆಂಡ್‌ಗೆ 6,000 ಬಿಡಿಚಿತ್ರಗಳನ್ನು ಸೆರೆಹಿಡಿದರು” ಎಂದು ನ್ಯೂ ಸೈಅಂಟಿಸ್ಟ್ ಪತ್ರಿಕೆ ಹೇಳುತ್ತದೆ. ಜೇನುನೊಣಗಳ ಹಾರುವ ವಿಧಾನವನ್ನು “ಅಸಾಮಾನ್ಯ” ಎಂದು ವರ್ಣಿಸಲಾಗಿದೆ. “ರೆಕ್ಕೆಯು 90 ಡಿಗ್ರಿ ಕಮಾನಾಗಿ ಹಿಂದಕ್ಕೆ ಬೀಸಿ, ಮಗಚಿಕೊಂಡು ಮತ್ತೆ ಮುಂದಕ್ಕೆ ಬಡಿಯುತ್ತದೆ—ಇದು ಒಂದು ಸೆಕೆಂಡಿಗೆ 230 ಬಾರಿ ನಡೆಯುತ್ತದೆ. . . . ಇದು, ಸುತ್ತು ತಿರುಗುತ್ತಿರುವ ಬ್ಲೇಡ್‌ಗಳುಳ್ಳ ಪ್ರೊಪೆಲ್ಲರ್‌ನಂತೆಯೂ ಇದೆ” ಎಂದು ಆ ಸಂಶೋಧನಾ ತಂಡದವನೊಬ್ಬನು ವಿವರಿಸುತ್ತಾನೆ. ಅವರ ಸಂಶೋಧನೆಯು, ಇಂಜಿನಿಯರರು ಪ್ರೊಪೆಲ್ಲರ್‌ಗಳನ್ನು ಪುನರ್‌ವಿನ್ಯಾಸಿಸುವಂತೆ ಮತ್ತು ಹೆಚ್ಚು ಕುಶಲ ನಿರ್ವಹಣೆ ಮಾಡಬಲ್ಲ ವಾಯುನೌಕೆಯನ್ನು ರಚಿಸುವಂತೆ ಸಹಾಯಮಾಡಬಹುದು.
ಹಾಡುವ ಇಲಿಗಳು
“ಇಲಿಗಳು ಹಾಡಬಲ್ಲವು ಮತ್ತು . . . ತಮ್ಮ ಭಾವೀ ಸಂಗಾತಿಗಳಿಗಾಗಿರುವ ಅವುಗಳ ಹಾಡುಗಳು, ಹಕ್ಕಿಗಳ ಹಾಡಿನಷ್ಟೇ ಕ್ಲಿಷ್ಟಕರವಾಗಿರಬಲ್ಲವು,” ಎಂದು ನ್ಯೂ ಸೈಅಂಟಿಸ್ಟ್ ಪತ್ರಿಕೆಯು ವರದಿಸುತ್ತದೆ. ಈ ಸಂಗತಿಯು ಇಷ್ಟರವರೆಗೆ ಗಮನಕ್ಕೆ ಬಾರದಿರಲು ಕಾರಣ, ಇಲಿಗಳ ಹಾಡುಗಳು ಶ್ರವಣಾತೀತ ಕಂಪನಗಳದ್ದಾಗಿವೆ ಅಂದರೆ ಅದರ ಸ್ವರದ ಮಟ್ಟವು ಮಾನವ ಶ್ರವಣಶಕ್ತಿಯನ್ನು ಮೀರುವಷ್ಟು ಉಚ್ಚವಾಗಿದೆ. ಅಮೆರಿಕದ ಮಿಸುರೀ ರಾಜ್ಯದ ಸೆಂಟ್ ಲೂಯಿ ನಗರದ ಸಂಶೋಧಕರು, ಗಂಡು ಇಲಿಗಳ ಪಲುಕುವಿಕೆಗಳು ಗೀತಾಂಗಭಾಗಗಳಾಗಿಯೂ ಸ್ವರಶ್ರೇಣಿಗಳಾಗಿಯೂ ಏರ್ಪಡಿಸಲ್ಪಟ್ಟು, ಒಂದು ‘ಗೀತೆಗೆ’ ಸಮಾನವಾಗುತ್ತದೆ ಎಂದು ಕಂಡುಹಿಡಿದರು. ಇದು ಇಲಿಗಳನ್ನು ಒಂದು ಪ್ರತ್ಯೇಕ ಗುಂಪಿಗೆ ಸೇರಿಸುತ್ತದೆ. ಹಾಡುತ್ತವೆಂದು ನಮಗೆ ತಿಳಿದಿರುವ ಬೇರೆ ಸಸ್ತನಿಗಳು ತಿಮಿಂಗಿಲಗಳು, ಡಾಲ್ಫಿನ್‌ಗಳು, ಕೆಲವು ಬಾವಲಿಗಳು ಮತ್ತು ಮನುಷ್ಯರು ಮಾತ್ರ. (g 9/06)