ಬಡವರು ಆದರೂ ಶ್ರೀಮಂತರು ಅದು ಹೇಗೆ ಸಾಧ್ಯ?
ಶತಮಾನಗಳ ಹಿಂದೆ, ಒಬ್ಬ ಜ್ಞಾನಿಯು ತಾನು ಬಡವನಾಗದಿರುವಂತೆ ಬೇಡಿಕೊಂಡನು. ಅಂತಹ ಒಂದು ವಿನಂತಿ ಏಕೆ? ಏಕೆಂದರೆ, ಬಡತನವು ದೇವರೊಂದಿಗಿನ ತನ್ನ ಸಂಬಂಧವನ್ನು ಅಪಾಯಕ್ಕೊಡ್ಡಬಹುದಾದ ಮನೋಭಾವಗಳು ಮತ್ತು ಕ್ರಿಯೆಗಳನ್ನು ಪ್ರೇರಿಸಬಹುದೆಂದು ಅವನು ಭಯಪಟ್ಟನು. ಇದು ಅವನ ಮಾತುಗಳಿಂದ ಸ್ಪಷ್ಟವಾಗಿದೆ: “ನನಗೆ ತಕ್ಕಷ್ಟು ಆಹಾರವನ್ನು ಭೋಜನಮಾಡಿಸು. . . . ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರನ್ನು ಅಯೋಗ್ಯವಾಗಿ ಎತ್ತೇನು.” —ಜ್ಞಾನೋಕ್ತಿ 30:8, 9.
ನಂಬಿಗಸ್ತಿಕೆಯಿಂದ ದೇವರ ಸೇವೆಮಾಡುವುದು ಬಡವನೊಬ್ಬನಿಗೆ ಅಸಾಧ್ಯವೆಂಬುದನ್ನು ಇದು ಅರ್ಥೈಸುತ್ತದೊ? ಖಂಡಿತವಾಗಿಯೂ ಇಲ್ಲ! ಇತಿಹಾಸದಾದ್ಯಂತ, ಯೆಹೋವ ದೇವರ ಅನೇಕಾನೇಕ ಸೇವಕರು, ಬಡತನವು ತರುವ ತೊಂದರೆಯ ಎದುರಿನಲ್ಲೂ ಆತನೆಡೆಗೆ ಸಮಗ್ರತೆಯನ್ನು ಕಾಪಾಡಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ, ಯೆಹೋವನು ತನ್ನ ಮೇಲೆ ಭರವಸೆಯಿಡುವವರನ್ನು ಪ್ರೀತಿಸುತ್ತಾನೆ ಮತ್ತು ಅವರಿಗಾಗಿ ಒದಗಿಸುತ್ತಾನೆ.
ಗತಕಾಲದ ನಂಬಿಗಸ್ತರು
ಸ್ವತಃ ಅಪೊಸ್ತಲ ಪೌಲನೇ ಅಗತ್ಯದ ಸಮಯಗಳನ್ನು ಅನುಭವಿಸಿದನು. (2 ಕೊರಿಂಥ 6:3, 4) ಅವನು ನಂಬಿಗಸ್ತ ಕ್ರೈಸ್ತಪೂರ್ವ ಸಾಕ್ಷಿಗಳ ಒಂದು ‘ಮಹಾ ಮೇಘ’ವನ್ನೂ ವರ್ಣಿಸಿದನು. ಅವರಲ್ಲಿ ಕೆಲವರು “ಕೊರತೆ . . . ಅನುಭವಿಸುವವರಾಗಿದ್ದು ಕುರಿ ಮೇಕೆಗಳ ಚರ್ಮಗಳನ್ನು ಉಟ್ಟುಕೊಂಡವರಾಗಿ ತಿರುಗಾಡಿದರು. . . . ಅವರು ತಮ್ಮ ದೇಶದ ಕಾಡು ಬೆಟ್ಟ ಗವಿ ಕುಣಿಗಳಲ್ಲಿ ಅಲೆಯುವವರಾಗಿದ್ದರು.”—ಇಬ್ರಿಯ 11:37, 38; 12:1.
ಈ ನಂಬಿಗಸ್ತ ಸೇವಕರಲ್ಲಿ ಒಬ್ಬನು ಪ್ರವಾದಿಯಾದ ಎಲೀಯನಾಗಿದ್ದನು. ಮೂರೂವರೆ ವರ್ಷಗಳ ಬರಗಾಲದ ಸಮಯದಲ್ಲಿ, ಯೆಹೋವನು ಅವನಿಗೆ ಕ್ರಮವಾಗಿ ಆಹಾರವನ್ನು ಒದಗಿಸಿದನು. ಮೊದಲಿಗೆ, ಕಾಗೆಗಳು ಪ್ರವಾದಿಗೆ ರೊಟ್ಟಿ ಮತ್ತು ಮಾಂಸವನ್ನು ತಂದುಕೊಡುವಂತೆ ದೇವರು ಮಾಡಿದನು. (1 ಅರಸುಗಳು 17:2-6) ತದನಂತರ, ಯಾವ ಸರಬರಾಯಿಯಿಂದ ವಿಧವೆಯೊಬ್ಬಳು ಎಲೀಯನಿಗೆ ಒದಗಿಸುತ್ತಿದ್ದಳೊ ಆ ಹಿಟ್ಟು ಮತ್ತು ಎಣ್ಣೆಯ ಸರಬರಾಯಿಯನ್ನು ಯೆಹೋವನು ಅದ್ಭುತಕರವಾಗಿ ಹೆಚ್ಚಿಸಿದನು. (1 ಅರಸುಗಳು 17:8-16) ಆ ಆಹಾರವು ಬಹಳ ಸರಳವಾಗಿದ್ದರೂ, ಅದು ಪ್ರವಾದಿಯನ್ನು, ಆ ಸ್ತ್ರೀಯನ್ನು ಮತ್ತು ಅವಳ ಮಗನನ್ನು ಜೀವಂತವಾಗಿಟ್ಟಿತು.
ತದ್ರೀತಿಯಲ್ಲಿ ಯೆಹೋವನು ಕಠಿನ ಆರ್ಥಿಕ ಸಮಯಗಳಲ್ಲಿ ನಂಬಿಗಸ್ತ ಪ್ರವಾದಿಯಾದ ಯೆರೆಮೀಯನನ್ನು ಪೋಷಿಸಿದನು. ಬಾಬೆಲಿನವರು ಯೆರೂಸಲೇಮಿಗೆ ಮುತ್ತಿಗೆ ಹಾಕಿದಾಗ ಯೆರೆಮೀಯನು ಬದುಕಿ ಉಳಿದನು. ಆ ಸಮಯದಲ್ಲಿ ಜನರು “ಅನ್ನವನ್ನು ತೂಕದ ಪ್ರಕಾರ ಬೆದರಿನಿಂದ ತಿನ್ನ”ಬೇಕಿತ್ತು. (ಯೆಹೆಜ್ಕೇಲ 4:16) ಕಟ್ಟಕಡೆಗೆ, ನಗರದಲ್ಲಿ ಕ್ಷಾಮವು ಎಷ್ಟು ಉಗ್ರವಾಯಿತೆಂದರೆ, ಕೆಲವು ಸ್ತ್ರೀಯರು ತಮ್ಮ ಸ್ವಂತ ಮಕ್ಕಳ ಮಾಂಸವನ್ನು ತಿಂದರು. (ಪ್ರಲಾಪಗಳು 2:20) ತನ್ನ ಭಯರಹಿತವಾದ ಸಾರುವಿಕೆಯ ಕಾರಣದಿಂದ ಯೆರೆಮೀಯನು ಸೆರೆಯಲ್ಲಿದ್ದರೂ, “ಪಟ್ಟಣದ ರೊಟ್ಟಿಯೆಲ್ಲಾ ತೀರುವ ತನಕ” ಅವನಿಗೆ ಪ್ರತಿದಿನ “ಒಂದೊಂದು ರೊಟ್ಟಿಯನ್ನು” ಕೊಡಲಾಯಿತು ಎಂಬುದನ್ನು ಯೆಹೋವನು ಖಚಿತಪಡಿಸಿಕೊಂಡನು.—ಯೆರೆಮೀಯ 37:21.
ಹೀಗೆ, ಎಲೀಯನಂತೆ ಯೆರೆಮೀಯನಿಗೆ ತಿನ್ನಲು ಸ್ವಲ್ಪವೇ ಇತ್ತು. ಯೆರೂಸಲೇಮಿನಲ್ಲಿ ರೊಟ್ಟಿಯೆಲ್ಲ ತೀರಿಹೋದ ಬಳಿಕ ಯೆರೆಮೀಯನು ಏನನ್ನು ತಿಂದನು ಅಥವಾ ಎಷ್ಟು ಬಾರಿ ತಿಂದನೆಂಬುದನ್ನು ಶಾಸ್ತ್ರವಚನಗಳು ನಮಗೆ ತಿಳಿಸುವುದಿಲ್ಲ. ಆದರೂ, ಯೆಹೋವನು ಅವನನ್ನು ಪೋಷಿಸಿದನು ಮತ್ತು ಕ್ಷಾಮದ ಆ ಭಯಂಕರ ಸಮಯವನ್ನು ಅವನು ಪಾರಾಗಿ ಉಳಿದನೆಂಬುದು ನಮಗೆ ಗೊತ್ತು.
ಇಂದು, ಲೋಕದ ಪ್ರತಿಯೊಂದು ಭಾಗದಲ್ಲಿಯೂ ಬಡತನವು ಅಸ್ತಿತ್ವದಲ್ಲಿದೆ. ವಿಶ್ವ ಸಂಸ್ಥೆಗನುಸಾರ, ಬಡತನದ ಅತ್ಯಂತ ಹೆಚ್ಚಿನ ಕೇಂದ್ರೀಕರಣವು ಆಫ್ರಿಕದಲ್ಲಿ ಕಂಡುಕೊಳ್ಳಲ್ಪಡುತ್ತದೆ. 1996ರಲ್ಲಿ ವಾರ್ತಾ ಮಾಧ್ಯಮಕ್ಕಾಗಿ ತಯಾರಿಸಲ್ಪಟ್ಟ ಒಂದು ಯುಎನ್ ಹೇಳಿಕೆಯು ತಿಳಿಸಿದ್ದು: “ಎಲ್ಲ ಆಫ್ರಿಕನರಲ್ಲಿ ಕಡಮೆ ಪಕ್ಷ ಅರ್ಧದಷ್ಟು ಜನರು ಬಡವರಾಗಿದ್ದಾರೆ.” ಹೆಚ್ಚುತ್ತಿರುವ ಉಗ್ರವಾದ ಆರ್ಥಿಕ ಪರಿಸ್ಥಿತಿಗಳ ಎದುರಿನಲ್ಲೂ, ಸದಾ ವೃದ್ಧಿಯಾಗುತ್ತಿರುವ ಸಂಖ್ಯೆಯಲ್ಲಿ ಆಫ್ರಿಕನರು, ದೇವರು ತಮ್ಮನ್ನು ಪೋಷಿಸುವನೆಂಬ ಭರವಸೆಯಿಂದ ಜೀವನದಲ್ಲಿ ಬೈಬಲ್ ತತ್ವಗಳನ್ನು ಅನ್ವಯಿಸಿಕೊಳ್ಳುತ್ತಿದ್ದಾರೆ ಮತ್ತು ನಂಬಿಗಸ್ತಿಕೆಯಿಂದ ದೇವರ ಸೇವೆಯನ್ನು ಮಾಡುತ್ತಿದ್ದಾರೆ. ನಮ್ಮ ತೊಂದರೆಯುಕ್ತ ಲೋಕದ ಒಂದು ಭಾಗದಿಂದ ಬಂದ ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.
ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳುವುದು
ನೈಜೀರಿಯದಲ್ಲಿ ವಾಸಿಸುವ ಮೈಕಲ್,a ಪೋಷಿಸಲು ಆರು ಜನ ಮಕ್ಕಳಿರುವ ಒಬ್ಬ ರೈತನಾಗಿದ್ದಾನೆ. “ನಿಮ್ಮ ಕುಟುಂಬವನ್ನು ಪರಾಮರಿಸಲು ನಿಮ್ಮಲ್ಲಿ ಹಣವಿರದಿದ್ದಲ್ಲಿ, ಪ್ರಾಮಾಣಿಕರಾಗಿರುವುದು ಕಷ್ಟಕರ” ಎಂದು ಅವನು ಹೇಳುತ್ತಾನೆ. “ಆದರೆ, ಅಪ್ರಾಮಾಣಿಕನಾಗಿರುವಂತೆ ನಾನು ಪ್ರಲೋಭಿಸಲ್ಪಟ್ಟಾಗ, ನಾನು ಎಫೆಸ 4:28ನ್ನು ಸ್ವತಃ ಜ್ಞಾಪಿಸಿಕೊಳ್ಳುತ್ತೇನೆ. ಅದು ಹೇಳುವುದು: ‘ಕಳವು ಮಾಡುವವನು ಇನ್ನು ಮೇಲೆ ಕಳವುಮಾಡದೆ ಕೈಯಿಂದ ಯಾವುದಾದರೊಂದು ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ.’ ಆದುದರಿಂದ ನಾನು ಪ್ರಲೋಭಿಸಲ್ಪಟ್ಟಾಗ, ‘ನಾನು ಈ ಹಣಕ್ಕಾಗಿ ಕೆಲಸಮಾಡಿದ್ದೇನೊ?’ ಎಂದು ನನ್ನನ್ನೇ ಕೇಳಿಕೊಳ್ಳುತ್ತೇನೆ.”
ಮೈಕಲ್ ಕೂಡಿಸುವುದು, “ಉದಾಹರಣೆಗೆ, ನಾನು ಒಂದು ದಿನ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಮೋಟಾರ್ಸೈಕಲ್ನ ಹಿಂಬದಿಯಿಂದ ಒಂದು ಕೈಚೀಲ ಬೀಳುವುದನ್ನು ನೋಡಿದೆ. ಸವಾರನನ್ನು ನಿಲ್ಲಿಸಲು ನಾನು ಶಕ್ತನಾಗಲಿಲ್ಲ, ಆದುದರಿಂದ ನಾನು ಕೈಚೀಲವನ್ನು ಎತ್ತಿಕೊಂಡಾಗ, ಅದು ಹಣದಿಂದ ತುಂಬಿರುವುದನ್ನು ಕಂಡುಕೊಂಡೆ! ಕೈಚೀಲದಲ್ಲಿದ್ದ ಗುರುತನ್ನು ಉಪಯೋಗಿಸುತ್ತಾ, ನಾನು ಅದರ ಯಜಮಾನನನ್ನು ಕಂಡುಕೊಂಡು, ಅವನಿಗೆ ಆ ಚೀಲವನ್ನು ಹಿಂದಿರುಗಿಸಿದೆ.”
ಖಿನ್ನತೆಯ ವಿರುದ್ಧ ಹೋರಾಡುವುದು
ಉತ್ತರ ಆಫ್ರಿಕದಲ್ಲಿರುವ ಒಬ್ಬ ಮನುಷ್ಯನು ಗಮನಿಸಿದ್ದು: “ಬಡತನವು, ಒಂದು ಆಳವಾದ ಗುಂಡಿಯಲ್ಲಿ ಸಿಕ್ಕಿಕೊಂಡಿರುವ ಒಬ್ಬ ವ್ಯಕ್ತಿಯಂತಿದ್ದು, ಮೇಲೆ ಬೆಳಕನ್ನೂ ಜನರು ಮುಕ್ತವಾಗಿ ಓಡಾಡುತ್ತಿರುವುದನ್ನೂ ಅವನು ನೋಡಸಾಧ್ಯವಿದ್ದರೂ, ಸಹಾಯಕ್ಕಾಗಿ ಕೂಗಿಕರೆಯಲು ಇಲ್ಲವೆ ಹೊರಬರಲಿಕ್ಕಾಗಿ ಏಣಿಯನ್ನು ಕೇಳಲೂ ಅಶಕ್ತನಾಗಿರುವವನಂತಿದೆ.” ಬಡತನವು ಅನೇಕ ವೇಳೆ ಖಿನ್ನತೆ ಹಾಗೂ ಆಶಾಭಂಗದ ಅನಿಸಿಕೆಗಳನ್ನು ತರುವುದರಲ್ಲಿ ಆಶ್ಚರ್ಯವೇನೂ ಇಲ್ಲ! ದೇವರ ಸೇವಕರು ಸಹ ಇತರರ ಸಂಪತ್ತನ್ನು ನೋಡಿ, ಸಮಗ್ರತೆಯ ಜೀವಿತವು ಸಾರ್ಥಕವಾದದ್ದಲ್ಲವೆಂದು ನೆನಸಲು ತೊಡಗಬಹುದು. (ಹೋಲಿಸಿ ಕೀರ್ತನೆ 73:2-13.) ಇಂತಹ ಅನಿಸಿಕೆಗಳನ್ನು ಹೇಗೆ ಜಯಿಸಸಾಧ್ಯವಿದೆ?
ಪಶ್ಚಿಮ ಆಫ್ರಿಕದವನಾದ ಪೀಟರ್, ಸರಕಾರಿ ಕೆಲಸದಲ್ಲಿ 19 ವರ್ಷಗಳನ್ನು ಕಳೆದ ತರುವಾಯ ನಿವೃತ್ತನಾದನು. ಈಗ ಅವನು ಮುಖ್ಯವಾಗಿ ಒಂದು ಅಲ್ಪ ನಿವೃತ್ತಿ ವೇತನದ ಸಹಾಯದಿಂದ ಬದುಕುತ್ತಾನೆ. “ನಿರಾಶೆಯ ಅವಧಿಗಳನ್ನು ನಾನು ಅನುಭವಿಸುವಾಗ, ಬೈಬಲಿನಲ್ಲಿ ಮತ್ತು ವಾಚ್ ಟವರ್ ಸೊಸೈಟಿಯ ಪ್ರಕಾಶನಗಳಲ್ಲಿ ನಾನು ಓದಿರುವ ವಿಷಯಗಳನ್ನು ಸ್ವತಃ ಜ್ಞಾಪಿಸಿಕೊಳ್ಳುತ್ತೇನೆ” ಎಂಬುದಾಗಿ ಪೀಟರ್ ಹೇಳುತ್ತಾನೆ. “ಈ ಹಳೆಯ ವ್ಯವಸ್ಥೆಯು ಇನ್ನೇನು ಗತಿಸಿಹೋಗಲಿದೆ, ಮತ್ತು ನಾವು ಒಂದು ಉತ್ತಮ ವ್ಯವಸ್ಥೆಗಾಗಿ ಕಾಯುತ್ತಿದ್ದೇವೆ.
“ಮತ್ತೂ, ನಾನು 1 ಪೇತ್ರ 5:9ರ ಕುರಿತು ಆಲೋಚಿಸುತ್ತೇನೆ. ಅದು ಹೇಳುವುದು: ‘ನೀವು ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು [ಸೈತಾನನನ್ನು] ಎದುರಿಸಿರಿ; ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂದು ನಿಮಗೆ ತಿಳಿದದೆಯಲ್ಲಾ.’ ಆದುದರಿಂದ ಕಷ್ಟಗಳನ್ನು ಅನುಭವಿಸುತ್ತಿರುವವನು ನಾನೊಬ್ಬನೇ ಅಲ್ಲ. ಈ ಮರುಜ್ಞಾಪನಗಳು, ನಿರಾಶಾದಾಯಕ ಹಾಗೂ ಖಿನ್ನಗೊಳಿಸುವ ವಿಚಾರಗಳನ್ನು ತೊರೆದುಬಿಡುವಂತೆ ನನಗೆ ಸಹಾಯ ಮಾಡುತ್ತವೆ.”
ಪೀಟರ್ ಕೂಡಿಸುವುದು, “ಅದಲ್ಲದೆ, ಯೇಸು ಭೂಮಿಯ ಮೇಲಿದ್ದಾಗ, ಯಾರೊಬ್ಬನನ್ನೂ ಭೌತಿಕವಾಗಿ ಶ್ರೀಮಂತನನ್ನಾಗಿ ಮಾಡದಿದ್ದರೂ, ಅನೇಕ ಅದ್ಭುತಗಳನ್ನು ಮಾಡಿದನು. ಅವನು ನನ್ನನ್ನು ಶ್ರೀಮಂತನನ್ನಾಗಿ ಮಾಡುವಂತೆ ನಾನು ಏಕೆ ನಿರೀಕ್ಷಿಸಬೇಕು?”
ಪ್ರಾರ್ಥನೆಯ ಬಲ
ನಕಾರಾತ್ಮಕ ಆಲೋಚನೆಯ ವಿರುದ್ಧ ಹೋರಾಡುವ ಮತ್ತೊಂದು ವಿಧವು, ಪ್ರಾರ್ಥನೆಯಲ್ಲಿ ಯೆಹೋವ ದೇವರಿಗೆ ಹತ್ತಿರವಾಗುವುದೇ ಆಗಿದೆ. 1960ರಲ್ಲಿ, ಮಾರೀ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾದಾಗ, ಅವಳ ಕುಟುಂಬವು ಅವಳನ್ನು ತೊರೆದುಬಿಟ್ಟಿತು. ಅವಿವಾಹಿತಳೂ ಈಗ ತನ್ನ 50ಗಳಲ್ಲಿ ಇರುವವಳೂ ಆಗಿರುವ ಮಾರೀ, ನಿಶ್ಶಕ್ತಳಾಗಿದ್ದಾಳೆ ಮತ್ತು ಭೌತಿಕವಾಗಿ ಬಹಳಷ್ಟು ಕಡಿಮೆ ಸಂಪತ್ತು ಅವಳಲ್ಲಿದೆ. ಹಾಗಿದ್ದರೂ, ಅವಳು ಕ್ರೈಸ್ತ ಶುಶ್ರೂಷೆಯಲ್ಲಿ ಹುರುಪುಳ್ಳವಳಾಗಿದ್ದಾಳೆ.
ಮಾರೀ ಹೇಳುವುದು: “ನನಗೆ ನಿರಾಶೆಯಾದಾಗ, ನಾನು ಪ್ರಾರ್ಥನೆಯಲ್ಲಿ ಯೆಹೋವನನ್ನು ಸಮೀಪಿಸುತ್ತೇನೆ. ಆತನಿಗಿಂತ ಹೆಚ್ಚಾಗಿ ಯಾರೂ ನನಗೆ ಸಹಾಯ ಮಾಡಸಾಧ್ಯವಿಲ್ಲವೆಂದು ನನಗೆ ಗೊತ್ತಿದೆ. ನೀವು ಯೆಹೋವನಲ್ಲಿ ಭರವಸೆಯಿಡುವಾಗ, ಆತನು ನಿಮಗೆ ಸಹಾಯ ಮಾಡುತ್ತಾನೆಂದು ನಾನು ತಿಳಿದುಕೊಂಡಿದ್ದೇನೆ. ಕೀರ್ತನೆ 37:25ರಲ್ಲಿ ಅಡಕವಾಗಿರುವ ರಾಜ ದಾವೀದನ ಈ ಮಾತುಗಳನ್ನು ನಾನು ಯಾವಾಗಲೂ ಮನಸ್ಸಿಗೆ ತಂದುಕೊಳ್ಳುತ್ತೇನೆ: ‘ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ.’
“ಕಾವಲಿನಬುರುಜು ಪತ್ರಿಕೆಯಲ್ಲಿ ವರದಿಸಲ್ಪಡುವ, ವಯಸ್ಸಾದ ಆತ್ಮಿಕ ಸಹೋದರ ಸಹೋದರಿಯರ ಅನುಭವಗಳಿಂದಲೂ ನಾನು ಉತ್ತೇಜನವನ್ನು ಪಡೆದುಕೊಳ್ಳುತ್ತೇನೆ. ಯೆಹೋವ ದೇವರು ಅವರಿಗೆ ಸಹಾಯ ಮಾಡಿದನು, ಆದುದರಿಂದ ನನಗೂ ಸಹಾಯ ಮಾಡುವುದನ್ನು ಆತನು ಮುಂದುವರಿಸುವನೆಂಬುದನ್ನು ನಾನು ಬಲ್ಲೆನು. ಫುಫು [ಮರಗೆಣಸಿನ ಒಂದು ತಿಂಡಿ] ಮಾರಾಟದ ನನ್ನ ಚಿಕ್ಕ ಕೆಲಸವನ್ನು ಆತನು ಆಶೀರ್ವದಿಸುತ್ತಾನೆ, ಮತ್ತು ನನ್ನ ದಿನನಿತ್ಯದ ಅಗತ್ಯಗಳನ್ನು ಪೂರೈಸಲು ನನಗೆ ಸಾಧ್ಯವಾಗುತ್ತದೆ. ಕೆಲವೊಮ್ಮೆ ನನ್ನಲ್ಲಿ ಒಂದು ಕಾಸೂ ಇಲ್ಲದಿರುವಾಗ ಮತ್ತು ಏನು ಮಾಡುವುದೆಂದು ಆಲೋಚಿಸುತ್ತಿರುವಾಗ, ‘ಸಹೋದರಿ, ದಯವಿಟ್ಟು ಇದನ್ನು ತೆಗೆದುಕೊಳ್ಳಿ’ ಎಂಬುದಾಗಿ ಹೇಳಿ, ಕೊಡುಗೆಯೊಂದನ್ನು ನನಗೆ ಕೊಡುವ ಯಾರನ್ನಾದರೂ ಯೆಹೋವನು ಕಳುಹಿಸುತ್ತಾನೆ. ಯೆಹೋವನು ನನ್ನನ್ನು ಎಂದೂ ನಿರಾಶೆಗೊಳಿಸಿಲ್ಲ.”
ಬೈಬಲ್ ಅಧ್ಯಯನದ ಮೌಲ್ಯ
ಯೆಹೋವನ ಸಾಕ್ಷಿಗಳು ದೇವರ ವಾಕ್ಯವಾದ ಬೈಬಲಿನ ಅಧ್ಯಯನವನ್ನು ಅಮೂಲ್ಯವೆಂದೆಣಿಸುತ್ತಾರೆ, ಮತ್ತು ಅವರ ಮಧ್ಯದಲ್ಲಿರುವ ಬಡವರು ಇದಕ್ಕೆ ಹೊರತಾಗಿಲ್ಲ. ಅರವತ್ತು ವರ್ಷ ಪ್ರಾಯದ ಜಾನ್, ತನ್ನ ಸಭೆಯಲ್ಲಿ ಒಬ್ಬ ಪಯನೀಯರ್ (ಪೂರ್ಣ ಸಮಯದ ರಾಜ್ಯ ಪ್ರಚಾರಕ) ಹಾಗೂ ಶುಶ್ರೂಷಾ ಸೇವಕನಾಗಿ ಸೇವೆಸಲ್ಲಿಸುತ್ತಾನೆ. 13 ಕುಟುಂಬಗಳು ಒಟ್ಟಾಗಿ ವಾಸಿಸುವ, ಶಿಥಿಲವಾದ ಎರಡು ಅಂತಸ್ತಿನ ಕಟ್ಟಡದಲ್ಲಿ ಅವನು ವಾಸಿಸುತ್ತಾನೆ. ಅವನ ಕೋಣೆಯು, ಮರದ ಹಲಗೆಗಳಿಂದ ಪ್ರತ್ಯೇಕಿಸಲ್ಪಟ್ಟ, ಮೊದಲನೆಯ ಮಹಡಿಯ ಹಜಾರದ ಹಾದಿಯ ಒಂದು ಭಾಗವಾಗಿದೆ. ಅದರಲ್ಲಿ, ಎರಡು ಹಳೆಯ ಕುರ್ಚಿಗಳು ಮತ್ತು ಬೈಬಲ್ ಅಧ್ಯಯನ ಸಹಾಯಕಗಳ ರಾಶಿಯಿಂದ ತುಂಬಿರುವ ಒಂದು ಮೇಜಿದೆ. ಒಣಹುಲ್ಲಿನ ಚಾಪೆಯ ಮೇಲೆ ಅವನು ಮಲಗುತ್ತಾನೆ.
ರೊಟ್ಟಿ ಮಾರಾಟ ಮಾಡುವ ಮೂಲಕ ದಿನಕ್ಕೆ ಸುಮಾರು ಒಂದು ಡಾಲರನ್ನು ಜಾನ್ ಗಳಿಸುತ್ತಿದ್ದನು, ಆದರೆ ಗೋಧಿಯ ಆಮದು ನಿಷೇಧಿಸಲ್ಪಟ್ಟಾಗ, ಜೀವನೋಪಾಯದ ಈ ಸಂಪಾದನೆಯನ್ನು ಅವನು ಕಳೆದುಕೊಂಡನು. ಅವನು ಹೇಳುವುದು: “ಕೆಲವೊಮ್ಮೆ ಜೀವನವು ಬಹಳ ಕಷ್ಟಕರವಾಗಿರುವುದನ್ನು ನಾನು ಕಂಡುಕೊಳ್ಳುತ್ತೇನಾದರೂ, ಪಯನೀಯರಿಂಗ್ ಸೇವೆಯನ್ನು ನಾನು ಮುಂದುವರಿಸುತ್ತೇನೆ. ನನ್ನನ್ನು ಪೋಷಿಸುವಾತನು ಯೆಹೋವನಾಗಿದ್ದಾನೆ. ಕಂಡುಕೊಳ್ಳಸಾಧ್ಯವಿರುವ ಯಾವುದೇ ಕೆಲಸವನ್ನು ನಾನು ಮಾಡುತ್ತೇನೆ ಮತ್ತು ಸಭೆಯಲ್ಲಿರುವ ಸಹೋದರರು ಬಹಳಷ್ಟು ಸಹಾಯ ಮಾಡುವವರಾಗಿದ್ದಾರಾದರೂ, ನನ್ನನ್ನು ಬೆಂಬಲಿಸಲು ಇಲ್ಲವೆ ನನಗೆ ಆಹಾರ ನೀಡಲು ನಾನು ಯಾವುದೇ ಮಾನವನ ಮೇಲೆ ಆತುಕೊಳ್ಳುವುದಿಲ್ಲ. ಕೆಲಸವನ್ನು ಹುಡುಕಲು ಅವರು ನನಗೆ ಸಹಾಯ ಮಾಡುತ್ತಾರೆ ಮತ್ತು ಕೆಲವೊಮ್ಮೆ ಹಣದ ಕೊಡುಗೆಗಳನ್ನು ಕೊಡುತ್ತಾರೆ.
“ಬೈಬಲ್ ಮತ್ತು ವಾಚ್ ಟವರ್ ಸೊಸೈಟಿಯ ಪ್ರಕಾಶನಗಳನ್ನು ಓದಲು ನಾನು ಸಮಯವನ್ನು ಬದಿಗಿರಿಸುತ್ತೇನೆ. ನಸುಕಿನಲ್ಲಿ ಮನೆಯು ಶಾಂತವಾಗಿರುವಾಗ ನಾನು ಅಧ್ಯಯನ ಮಾಡುತ್ತೇನೆ ಮತ್ತು ತದನಂತರ ನಮ್ಮಲ್ಲಿ ವಿದ್ಯುಚ್ಛಕ್ತಿ ಇರುವಾಗಲೆಲ್ಲಾ ರಾತ್ರಿಯಲ್ಲಿ ಓದುತ್ತೇನೆ. ನನ್ನ ವೈಯಕ್ತಿಕ ಅಧ್ಯಯನವನ್ನು ನಾನು ಸಮಗತಿಯಲ್ಲಿಟ್ಟುಕೊಳ್ಳಬೇಕೆಂದು ನನಗೆ ಗೊತ್ತಿದೆ.”
ನಿತ್ಯಜೀವಕ್ಕಾಗಿ ಮಕ್ಕಳನ್ನು ತರಬೇತುಗೊಳಿಸುವುದು
ಡ್ಯಾನಿಯಲ್ ಆರು ಮಕ್ಕಳಿರುವ ವಿಧುರನಾಗಿದ್ದಾನೆ. 1985ರಲ್ಲಿ 25 ವರ್ಷಗಳಿಂದ ಮಾಡುತ್ತಿದ್ದ ಕೆಲಸವನ್ನು ಅವನು ಕಳೆದುಕೊಂಡನಾದರೂ, ಅಂಗಡಿಗಾರನಾಗಿ ಒಂದು ಕೆಲಸವನ್ನು ಅವನು ಕಂಡುಕೊಂಡನು. “ಹಣಕಾಸಿನ ವಿಷಯದಲ್ಲಿ ನೋಡುವುದಾದರೆ, ಕುಟುಂಬಕ್ಕೆ ಜೀವನವು ಕಷ್ಟಕರವಾಗಿದೆ” ಎಂದು ಅವನು ಹೇಳುತ್ತಾನೆ. “ಈಗ ನಾವು ದಿನಕ್ಕೆ ಒಂದು ಬಾರಿ ಮಾತ್ರ ತಿನ್ನಸಾಧ್ಯವಿದೆ. ಒಮ್ಮೆ, ನಾವು ಮೂರು ದಿನಗಳ ವರೆಗೆ ಏನನ್ನೂ ತಿನ್ನದೆ ಇದ್ದೆವು. ಬದುಕಿ ಉಳಿಯಲಿಕ್ಕಾಗಿ ನಾವು ನೀರನ್ನು ಮಾತ್ರ ಕುಡಿಯಲು ಶಕ್ತರಾಗಿದ್ದೆವು.”
ಡ್ಯಾನಿಯಲ್ ಸಭೆಯಲ್ಲಿ ಒಬ್ಬ ಹಿರಿಯನಾಗಿ ಸೇವೆಸಲ್ಲಿಸುತ್ತಾನೆ. “ನಾನು ಕ್ರೈಸ್ತ ಕೂಟಗಳಿಗೆ ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ, ಮತ್ತು ದೇವಪ್ರಭುತ್ವ ನೇಮಕಗಳೊಂದಿಗೆ ನನ್ನನ್ನು ಕಾರ್ಯಮಗ್ನನನ್ನಾಗಿ ಇರಿಸಿಕೊಳ್ಳುತ್ತೇನೆ” ಎಂದು ಅವನು ಹೇಳುತ್ತಾನೆ. “ರಾಜ್ಯ ಸಭಾಗೃಹದ ಸುತ್ತ ಯಾವುದೇ ಕೆಲಸವನ್ನು ಮಾಡಲಿಕ್ಕಿರುವಾಗಲೆಲ್ಲಾ, ನಾನಲ್ಲಿದ್ದೇನೆಂಬುದನ್ನು ಖಚಿತಪಡಿಸಿಕೊಳ್ಳುತ್ತೇನೆ. ಮತ್ತು ಸನ್ನಿವೇಶವು ಕಷ್ಟಕರವಾಗುವಾಗ, ಯೋಹಾನ 6:68ರಲ್ಲಿ ದಾಖಲುಮಾಡಲ್ಪಟ್ಟಿರುವ, ಪೇತ್ರನು ಯೇಸುವಿಗೆ ನುಡಿದ ಮಾತುಗಳನ್ನು ನಾನು ಜ್ಞಾಪಿಸಿಕೊಳ್ಳುತ್ತೇನೆ: ‘ಸ್ವಾಮೀ, ನಿನ್ನನ್ನು ಬಿಟ್ಟು ನಾವು ಇನ್ನಾರ ಬಳಿಗೆ ಹೋಗೋಣ?’ ನಾನು ಯೆಹೋವನ ಸೇವೆಮಾಡುವುದನ್ನು ನಿಲ್ಲಿಸಿದರೆ, ನಾನು ಹೋಗುವುದು ಎಲ್ಲಿಗೆ? ರೋಮಾಪುರ 8:35-39ರಲ್ಲಿ ನಾವು ಕಂಡುಕೊಳ್ಳುವ ಪೌಲನ ಮಾತುಗಳು ಸಹ ನನ್ನಲ್ಲಿ ದೃಢಸಂಕಲ್ಪವನ್ನು ತುಂಬುತ್ತವೆ. ಏಕೆಂದರೆ, ಯಾವ ವಿಷಯವೂ ನಮ್ಮನ್ನು ದೇವರ ಮತ್ತು ಕ್ರಿಸ್ತನ ಪ್ರೀತಿಯಿಂದ ಅಗಲಿಸಲಾರದೆಂದು ಅವು ತೋರಿಸುತ್ತವೆ. ಈ ಮನೋಭಾವವನ್ನೇ ನಾನು ನನ್ನ ಮಕ್ಕಳಲ್ಲಿ ಮೂಡಿಸುತ್ತೇನೆ. ನಾವು ಎಂದೂ ಯೆಹೋವನನ್ನು ಬಿಟ್ಟುಬಿಡಬಾರದೆಂದು ಅವರಿಗೆ ಸತತವಾಗಿ ಹೇಳುತ್ತೇನೆ.” ಕ್ರಮವಾದ ಕುಟುಂಬ ಬೈಬಲ್ ಅಧ್ಯಯನದೊಂದಿಗೆ ಡ್ಯಾನಿಯಲನ ಹುರುಪು, ಅವನ ಮಕ್ಕಳ ಮೇಲೆ ಸಕಾರಾತ್ಮಕವಾದ ಪ್ರಭಾವವನ್ನು ಬೀರಿದೆ.
ಕೊಡುವ ಮನೋಭಾವ
ಕಡು ಬಡತನದಲ್ಲಿ ಜೀವಿಸುವವರು, ರಾಜ್ಯಾಭಿರುಚಿಗಳನ್ನು ಪ್ರವರ್ಧಿಸಲಿಕ್ಕಾಗಿ ಆರ್ಥಿಕವಾಗಿ ದಾನಮಾಡುವ ಸ್ಥಿತಿಯಲ್ಲಿ ಇರುವುದಿಲ್ಲವೆಂದು ಒಬ್ಬನು ಭಾವಿಸಬಹುದು. ಆದರೆ ವಿಷಯವು ಹಾಗಿರುವುದಿಲ್ಲ. (ಹೋಲಿಸಿ ಲೂಕ 21:1-4.) ಘಾನದಲ್ಲಿರುವ ಕೆಲವು ಸಾಕ್ಷಿಗಳು—ಅವರ ಮುಖ್ಯ ಕಸಬು ಜೀವನಾಂಶ ಬೇಸಾಯವಾಗಿದೆ—ತಮ್ಮ ಜಮೀನಿನ ಒಂದು ಭಾಗವನ್ನು ದೇವರ ರಾಜ್ಯಾಭಿರುಚಿಗಳನ್ನು ಪ್ರವರ್ಧಿಸಲಿಕ್ಕಾಗಿ ಉಪಯೋಗಿಸಲು ಪ್ರತ್ಯೇಕವಾಗಿ ಗುರುತುಮಾಡುತ್ತಾರೆ. ತಮ್ಮ ಜಮೀನಿನ ಆ ಭಾಗದ ಉತ್ಪನ್ನವನ್ನು ಮಾರಿದಾಗ, ಹಣವು ಸಂಪೂರ್ಣವಾಗಿ ಆ ಉದ್ದೇಶಕ್ಕಾಗಿಯೇ ಉಪಯೋಗಿಸಲ್ಪಡುತ್ತದೆ. ಅದರಲ್ಲಿ ಯೆಹೋವನ ಸಾಕ್ಷಿಗಳ ಸ್ಥಳೀಯ ರಾಜ್ಯ ಸಭಾಗೃಹದಲ್ಲಿ ಕಾಣಿಕೆಗಳನ್ನು ನೀಡುವುದೂ ಒಳಗೊಂಡಿರುತ್ತದೆ.
ಮಧ್ಯ ಆಫ್ರಿಕದಲ್ಲಿ ವಾಸಿಸುವ ಜೋನ್, ಪಯನೀಯರಳಾಗಿದ್ದಾಳೆ. ಪಾರ್ಶ್ವವಾಯು ಪೀಡಿತ ಗಂಡ ಮತ್ತು ಇತರ ನಾಲ್ಕು ಅವಲಂಬಿಗಳನ್ನು ಪರಾಮರಿಸಲಿಕ್ಕಾಗಿ, ಅವಳು ರೊಟ್ಟಿ ಮಾರುತ್ತಾಳೆ. ಅವಳು ಹಾಜರಾಗುವ ಸಭೆಗೆ, ರಾಜ್ಯ ಸಭಾಗೃಹಕ್ಕಾಗಿ ಬೆಂಚುಗಳ ಅಗತ್ಯವಿದ್ದಾಗ, ಮನೆಯಲ್ಲಿದ್ದ ಎಲ್ಲ ಹಣವನ್ನು ದಾನಮಾಡಲು ಜೋನಳ ಕುಟುಂಬವು ನಿರ್ಧರಿಸಿತು. ಅವರಿಗಾಗಿ ಏನೂ ಉಳಿಯಲಿಲ್ಲ. ಆದರೆ, ಮರುದಿನ, ಯಾರೊ ಅನಿರೀಕ್ಷಿತವಾಗಿ ದೀರ್ಘ ಸಮಯದಿಂದ ಬಾಕಿಯಿದ್ದ ಸಾಲವನ್ನು—ಯಾವ ಹಣವನ್ನು ಪುನಃ ಪಡೆಯುವ ನಿರೀಕ್ಷೆಯನ್ನು ಅವರು ಬಿಟ್ಟುಬಿಟ್ಟಿದ್ದರೊ—ಹಿಂದಿರುಗಿಸಿದರು!
ಜೋನ್ ಹರ್ಷಚಿತ್ತಳಾಗಿದ್ದಾಳೆ, ಮತ್ತು ಹಣದ ಕುರಿತಾಗಿ ಅನುಚಿತವಾಗಿ ಚಿಂತಿಸುವುದಿಲ್ಲ. “ಪ್ರಾರ್ಥನೆಯಲ್ಲಿ ನಾನು ಯೆಹೋವನಿಗೆ ನನ್ನ ಸನ್ನಿವೇಶವನ್ನು ವಿವರಿಸುತ್ತೇನೆ, ಮತ್ತು ತದನಂತರ ಕ್ಷೇತ್ರ ಸೇವೆಗೆ ಹೋಗುತ್ತೇನೆ. ಈ ವಿಷಯಗಳ ವ್ಯವಸ್ಥೆಯಲ್ಲಿ ಉತ್ತಮ ಸಮಯಗಳಿಗೆ ಬಹಳಷ್ಟು ನಿರೀಕ್ಷೆಯಿರುವುದಿಲ್ಲವೆಂದು ನಮಗೆ ಗೊತ್ತಿದೆ. ಆದರೂ, ನಮ್ಮ ಅಗತ್ಯಗಳಿಗಾಗಿ ಯೆಹೋವನು ಒದಗಿಸುವನೆಂಬುದನ್ನು ನಾವು ಗ್ರಹಿಸುತ್ತೇವೆ.”
ಶ್ರಮಶೀಲತೆಯನ್ನು ಪ್ರದರ್ಶಿಸುವುದು
ಯೆಹೋವನ ಸಾಕ್ಷಿಗಳು ಪರಸ್ಪರರಿಗಾಗಿರುವ ತಮ್ಮ ಪ್ರೀತಿಯಿಂದ ಗುರುತಿಸಲ್ಪಡುತ್ತಾರೆ. (ಯೋಹಾನ 13:35) ಹಣವಿರುವವರು, ಅಗತ್ಯದಲ್ಲಿರುವ ತಮ್ಮ ಜೊತೆ ಕ್ರೈಸ್ತರಿಗೆ ನೆರವು ನೀಡುತ್ತಾರೆ. ಅನೇಕ ವೇಳೆ ಇದೊಂದು ಕೊಡುಗೆಯಾಗಿ ಮತ್ತು ಕೆಲವೊಮ್ಮೆ ಉದ್ಯೋಗದ ವಿಷಯದಲ್ಲಿ ಸಹಾಯದ ರೂಪದಲ್ಲಿ ಬರುತ್ತದೆ.
ಕಾಂಗೋದಲ್ಲಿ ವಾಸಿಸುವ ಮಾರ್ಕ್, ಕುಷ್ಠರೋಗದಿಂದ ಕಷ್ಟಾನುಭವಿಸುತ್ತಾನೆ. ಅದು ಅವನ ಕಾಲ್ಬೆರಳು ಹಾಗೂ ಕೈಬೆರಳುಗಳನ್ನು ವಿರೂಪಗೊಳಿಸಿದೆ. ಆದುದರಿಂದ, ನಡೆಯಲು ಅವನಿಗೆ ಊರುಗೋಲುಗಳ ಅಗತ್ಯವಿದೆ. ಮಾರ್ಕ್ ಯೆಹೋವನ ಸೇವೆಮಾಡಲು ನಿರ್ಧರಿಸಿದಾಗ, ತನ್ನ ಜೀವಿತದಲ್ಲಿ ಮುಖ್ಯವಾದ ಬದಲಾವಣೆಗಳನ್ನು ಮಾಡತೊಡಗಿದನು. ಈ ಹಿಂದೆ ಅವನು ಮಾಡಿದಂತೆ, ಆಹಾರಕ್ಕಾಗಿ ಭಿಕ್ಷೆಬೇಡುವ ಬದಲಿಗೆ, ಅವನು ತನ್ನ ಸ್ವಂತ ಆಹಾರವನ್ನು ಬೆಳೆಸತೊಡಗಿದನು. ಅವನು ಇಟ್ಟಿಗೆಗಳನ್ನೂ ಮಾಡಿ, ಅವುಗಳನ್ನು ಮಾರಿದನು.
ತನ್ನ ಶಾರೀರಿಕ ದೌರ್ಬಲ್ಯದ ಎದುರಿನಲ್ಲೂ, ಮಾರ್ಕ್ ಶ್ರಮಶೀಲತೆಯಿಂದ ಕೆಲಸಮಾಡುವುದನ್ನು ಮುಂದುವರಿಸಿದನು. ಕಟ್ಟಕಡೆಗೆ ಅವನು ಒಂದು ತುಂಡು ಜಮೀನನ್ನು ಖರೀದಿಸಿ, ಅದರಲ್ಲಿ ಒಂದು ಸಾಧಾರಣವಾದ ಮನೆಯನ್ನು ಕಟ್ಟಿಕೊಂಡನು. ಇಂದು, ಮಾರ್ಕ್ ಸಭಾ ಹಿರಿಯನಾಗಿ ಸೇವೆಸಲ್ಲಿಸುತ್ತಾನೆ, ಮತ್ತು ಅವನು ವಾಸಿಸುವ ಪಟ್ಟಣದಲ್ಲಿ ಬಹಳವಾಗಿ ಗೌರವಿಸಲ್ಪಡುತ್ತಾನೆ. ಈಗ ಅವನು ಅಗತ್ಯದಲ್ಲಿರುವ ಇತರರಿಗೆ ನೆರವು ನೀಡುತ್ತಾನೆ.
ಅನೇಕ ಸ್ಥಳಗಳಲ್ಲಿ ಕೆಲಸವನ್ನು ಕಂಡುಕೊಳ್ಳುವುದು ಕಾರ್ಯತಃ ಅಸಾಧ್ಯವಾಗಿದೆಯೆಂಬುದು ನಿಶ್ಚಯ. ಮಧ್ಯ ಆಫ್ರಿಕದಲ್ಲಿರುವ ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸುಗಳಲ್ಲೊಂದರಲ್ಲಿ ಸೇವೆಮಾಡುವ ಒಬ್ಬ ಕ್ರೈಸ್ತ ಹಿರಿಯನು ಬರೆದುದು: “ಇಲ್ಲಿ ಅನೇಕ ಸಹೋದರರಿಗೆ ಕೆಲಸವಿಲ್ಲ. ಕೆಲವರು ತಮ್ಮ ಸ್ವಂತ ಕೆಲಸಗಳನ್ನು ಸೃಷ್ಟಿಸಿಕೊಳ್ಳಲು ಪ್ರಯತ್ನಿಸುತ್ತಾರೆ, ಆದರೆ ಇದು ಕಷ್ಟಕರವಾಗಿದೆ. ತಾವು ಏನೇ ಮಾಡಲಿ, ಕಷ್ಟಾನುಭವಿಸುವುದು ಖಂಡಿತ ಎಂಬ ಕಾರಣದಿಂದ, ಪಯನೀಯರ್ ಶುಶ್ರೂಷಕರಾಗಿ ಭೌತಿಕ ತ್ಯಾಗಗಳನ್ನು ತಾವು ಮಾಡುವೆವೆಂದು ಅನೇಕರು ವಿವೇಚಿಸಿದ್ದಾರೆ. ಹಾಗೆ ಮಾಡುವುದರಲ್ಲಿ, ಕಡಿಮೆ ಅಥವಾ ಸಂಬಳವೇ ಇರದ ಒಂದು ಕೆಲಸ ತಮಗಿರುವುದಕ್ಕಿಂತ, ತಾವು ಹೆಚ್ಚು ಹೇರಳವಾಗಿ ಆಶೀರ್ವದಿಸಲ್ಪಟ್ಟಿದ್ದೇವೆಂದು ಅನೇಕರು ಕಂಡುಕೊಳ್ಳುತ್ತಾರೆ.”
ಯೆಹೋವನು ತನ್ನ ಜನರನ್ನು ಪೋಷಿಸುತ್ತಾನೆ
ಯೇಸು ಕ್ರಿಸ್ತನು ತನ್ನ ಕುರಿತಾಗಿ ಹೇಳಿದ್ದು: “ನರಿಗಳಿಗೆ ಗುದ್ದುಗಳವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ.” (ಲೂಕ 9:58) ತದ್ರೀತಿಯಲ್ಲಿ, ಅಪೊಸ್ತಲ ಪೌಲನು ಬರೆದುದು: “ಈ ಗಳಿಗೆಯ ವರೆಗೂ ನಾವು ಹಸಿದವರೂ ಬಾಯಾರಿಕೆಯುಳ್ಳವರೂ ಮೈಗೆ ವಸ್ತ್ರವಿಲ್ಲದವರೂ ಗುದ್ದು ತಿನ್ನುವವರೂ ಮನೆಯಿಲ್ಲದವರೂ . . . ಆಗಿದ್ದೇವೆ.”—1 ಕೊರಿಂಥ 4:11.
ತಮ್ಮ ಶುಶ್ರೂಷೆಯನ್ನು ಹೆಚ್ಚು ಪೂರ್ಣವಾಗಿ ಬೆನ್ನಟ್ಟಸಾಧ್ಯವಾಗುವಂತೆ, ಯೇಸು ಮತ್ತು ಪೌಲರಿಬ್ಬರೂ ಸೀಮಿತ ಆರ್ಥಿಕ ಜೀವಿತವನ್ನು ಜೀವಿಸಲು ಆರಿಸಿಕೊಂಡರು. ಪ್ರಚಲಿತ ದಿನದ ಅನೇಕ ಕ್ರೈಸ್ತರು ಬಡವರಾಗಿದ್ದಾರೆ, ಏಕೆಂದರೆ ಅವರಿಗೆ ಇನ್ನಾವ ಆಯ್ಕೆಯೂ ಇಲ್ಲ. ಹಾಗಿದ್ದರೂ, ಅವರು ಜೀವಿತದಲ್ಲಿ ಬೈಬಲಿನ ತತ್ವಗಳನ್ನು ಅನ್ವಯಿಸಿಕೊಳ್ಳುತ್ತಾರೆ ಮತ್ತು ಹುರುಪಿನಿಂದ ದೇವರ ಸೇವೆಮಾಡಲು ಪ್ರಯತ್ನಿಸುತ್ತಾರೆ. ಯೇಸುವಿನ ಈ ಆಶ್ವಾಸನೆಯ ಸತ್ಯತೆಯನ್ನು ಅವರು ಅನುಭವಿಸಿದಂತೆ, ತಾವು ಯೆಹೋವನಿಂದ ಬಹಳವಾಗಿ ಪ್ರೀತಿಸಲ್ಪಡುತ್ತೇವೆಂದು ಅವರಿಗೆ ಗೊತ್ತಿದೆ: “ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ [ಭೌತಿಕ ವಿಷಯಗಳು] ನಿಮಗೆ ದೊರಕುವವು.” (ಮತ್ತಾಯ 6:25-33) ಅಲ್ಲದೆ, ದೇವರ ಈ ಬಡ ಸೇವಕರಿಗೆ, “ಯೆಹೋವನ ಆಶೀರ್ವಾದವು—ಭಾಗ್ಯದಾಯಕವು” ಎಂಬ ಪುರಾವೆಯಿದೆ.—ಜ್ಞಾನೋಕ್ತಿ 10:22.
[ಅಧ್ಯಯನ ಪ್ರಶ್ನೆಗಳು]
a ಈ ಲೇಖನದಲ್ಲಿ ಬದಲಿ ಹೆಸರುಗಳು ಉಪಯೋಗಿಸಲ್ಪಟ್ಟಿವೆ.
[ಪುಟ 6 ರಲ್ಲಿರುವ ಚೌಕ]
“ವಾಕ್ಯದ ಪ್ರಕಾರ ಮಾಡುವವರು” ಯಾರಾಗಿದ್ದಾರೆ?
ಇಸವಿ 1994ರ ಒಂದು ಗ್ಯಾಲಪ್ ಮತ ಎಣಿಕೆಗನುಸಾರ, 96 ಪ್ರತಿಶತದಷ್ಟು ಅಮೆರಿಕನರು “ದೇವರಲ್ಲಿ ಇಲ್ಲವೆ ಒಂದು ವಿಶ್ವ ಆತ್ಮದಲ್ಲಿ ನಂಬುತ್ತಾರೆ.” “ಭೂಮಿಯ ಮೇಲಿರುವ ಬೇರೆ ಯಾವುದೇ ರಾಷ್ಟ್ರಕ್ಕಿಂತಲೂ, ಅಮೆರಿಕದಲ್ಲಿ ತಲಾ ಒಬ್ಬನಿಗೆ ಹೆಚ್ಚಿನ ಚರ್ಚು”ಗಳು ಇವೆ ಎಂದು, ಯು.ಎಸ್.ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಹೇಳಿತು. ಇಂತಹ ಧರ್ಮಶ್ರದ್ಧೆಯ ತೋರಿಕೆಗಳ ಎದುರಿನಲ್ಲೂ, ನುರಿತ ಚುನಾವಣಾಧಿಕಾರಿ ಜಾರ್ಜ್ ಗ್ಯಾಲಪ್ ಜೂನಿಯರ್ ಹೇಳುವುದು: “ಶುದ್ಧ ನಿಜಾಂಶವೇನೆಂದರೆ, ಅಧಿಕಾಂಶ ಅಮೆರಿಕನರಿಗೆ ತಾವು ಏನನ್ನು ನಂಬುತ್ತೇವೆ ಇಲ್ಲವೆ ಏಕೆ ನಂಬುತ್ತೇವೆಂಬುದು ಗೊತ್ತಿಲ್ಲ.”
ಅನೇಕ ಜನರ ಧಾರ್ಮಿಕ ನಂಬಿಕೆಗಳು ಹಾಗೂ ಅವರ ಕ್ರಿಯೆಗಳ ನಡುವೆ ಒಂದು ದೊಡ್ಡ ಅಂತರವಿದೆ ಎಂಬುದನ್ನು ಅಂಕಿಅಂಶಗಳು ಸಹ ಸೂಚಿಸುತ್ತವೆ. ದೃಷ್ಟಾಂತಕ್ಕೆ, “ಸಮಾಜಶಾಸ್ತ್ರಜ್ಞರು ಗಮನಿಸುವುದೇನೆಂದರೆ, ದೇಶದ ಅತಿ ಹೆಚ್ಚು ಪಾತಕ ನಡೆಯುವ ಕ್ಷೇತ್ರಗಳಲ್ಲಿ ಕೆಲವು, ಧಾರ್ಮಿಕ ನಂಬಿಕೆ ಹಾಗೂ ಆಚರಣೆಯು ಅತಿ ಪ್ರಬಲವಾಗಿರುವ ಸ್ಥಳಗಳೂ ಆಗಿವೆ” ಎಂದು ಬರಹಗಾರ ಜೆಫ್ರಿ ಶೆಲರ್ ಹೇಳುತ್ತಾರೆ.
ಇದು ಆಶ್ಚರ್ಯಗೊಳಿಸುವಂತಹ ವಿಷಯವಾಗಿರಬೇಕಾಗಿಲ್ಲ. ಏಕೆ? ಏಕೆಂದರೆ ಒಂದನೆಯ ಶತಮಾನದಷ್ಟು ಹಿಂದೆಯೇ, ಅಪೊಸ್ತಲ ಪೌಲನು ಜೊತೆ ಕ್ರೈಸ್ತರಿಗೆ, “ತಾವು ದೇವರನ್ನು ಅರಿತವರೆಂದು ಹೇಳಿ . . . ಆದರೆ . . . ದೇವರನ್ನು ಅರಿಯೆವೆಂದು ತಮ್ಮ ಕಾರ್ಯಗಳಿಂದಲೇ ಹೇಳು”ವ ಜನರ ಬಗ್ಗೆ ಜಾಗರೂಕರಾಗಿರಬೇಕೆಂದು ಎಚ್ಚರಿಸಿದನು. (ತೀತ 1:16) ಇದಕ್ಕೆ ಕೂಡಿಸಿ, ‘ಕಡೇ ದಿವಸಗಳು’ “ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವ” ಜನರಿಂದ ಗುರುತಿಸಲ್ಪಡುವವೆಂದು ಪೌಲನು ಯುವಕನಾದ ತಿಮೊಥೆಯನಿಗೆ ಹೇಳಿದನು.—2 ತಿಮೊಥೆಯ 3:1, 5.
ಸತ್ಯ ಕ್ರೈಸ್ತರಾದರೊ, “ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂಬ ಯೇಸು ಕ್ರಿಸ್ತನ ಆಜ್ಞೆಯನ್ನು ಅನುಸರಿಸಲು ತಮ್ಮಿಂದಾದುದೆಲ್ಲವನ್ನೂ ಮಾಡುತ್ತಾರೆ. (ಮತ್ತಾಯ 28:19) ಈ ವಿಧದಲ್ಲಿ ಅವರು “ವಾಕ್ಯವನ್ನು ಕೇಳುವವರು ಮಾತ್ರವಲ್ಲ, ವಾಕ್ಯದ ಪ್ರಕಾರ ಮಾಡುವವರು” (NW) ಆಗುತ್ತಾರೆ.—ಯಾಕೋಬ 1:22.
[ಪುಟ 7 ರಲ್ಲಿರುವ ಚೌಕ]
ಬೈಬಲ್ ಅಧ್ಯಯನವು, ಲೋಕದ ಸುತ್ತಲೂ ಇರುವ ಜನರಿಂದ ಮೌಲ್ಯದ್ದೆಂದೆಣಿಸಲ್ಪಡುತ್ತದೆ