ಒತ್ತಡಕ್ಕೊಳಗಾಗಿರುವ ಹೆತ್ತವರು
ಹೊಸ ಹೆತ್ತವರು ಅನೇಕವೇಳೆ ಉದ್ರೇಕತನದಿಂದ ತಮ್ಮನ್ನು ತಾವೇ ಹೆಚ್ಚುಕಡಮೆ ಮರೆತಿರುವಂತೆ ಕಾಣುತ್ತದೆ. ಅವರ ಶಿಶುವಿನ ಬಹುಮಟ್ಟಿಗೆ ಪ್ರತಿಯೊಂದು ವಿಷಯವು ಅವರನ್ನು ರೋಮಾಂಚಗೊಳಿಸುವಂತೆ ಕಾಣುತ್ತದೆ. ಶಿಶುವಿನ ಮೊದಲ ನಗೆ, ಮೊದಲ ಮಾತುಗಳು, ಮತ್ತು ಮೊದಲ ಹೆಜ್ಜೆಗಳು, ಹೆತ್ತವರಿಂದ ಬಹು ಮುಖ್ಯವಾದ ಸಂದರ್ಭಗಳಾಗಿ ಪರಿಗಣಿಸಲ್ಪಡುತ್ತವೆ. ಕಥೆಗಳ ಮತ್ತು ಛಾಯಾಚಿತ್ರಗಳಿಂದ ಅವರು ಸ್ನೇಹಿತರನ್ನು ಹಾಗೂ ಸಂಬಂಧಿಕರನ್ನು ಆಹ್ಲಾದಪಡಿಸುತ್ತಾರೆ. ಅವರು ತಮ್ಮ ಮಗುವನ್ನು ಪ್ರೀತಿಸುತ್ತಾರೆ ಎಂಬುದು ಸುವ್ಯಕ್ತ.
ಆದರೆ ಕೆಲವೊಂದು ಕುಟುಂಬಗಳಲ್ಲಿ, ವರುಷಗಳು ದಾಟಿದಷ್ಟಕ್ಕೆ ಒಂದು ದುರಂತವು ವಿಕಾಸವಾಗುತ್ತದೆ. ಹೆತ್ತವರ ಲಲ್ಲೆಯಾಟವು, ಬಿರುಸು ಹಾಗೂ ಕೀಳಾದ ಮಾತುಗಳಿಂದ ಸ್ಥಾನ ಪಲ್ಲಟವಾಗುತ್ತದೆ; ವಾತ್ಸಲ್ಯದ ಆಲಿಂಗನಗಳು ಕೋಪದ ಏಟುಗಳಿಂದ ಸ್ಥಾನಪಲ್ಲಟವಾಗುತ್ತವೆ ಅಥವಾ ಸಂಪೂರ್ಣವಾಗಿ ಶಾರೀರಿಕ ಸ್ಪರ್ಶವೇ ಇಲ್ಲದೆ ಹೋಗುತ್ತದೆ; ಹೆತ್ತವರ ಹೆಮ್ಮೆಯು ವೈಷಮ್ಯದಿಂದ ಸ್ಥಾನಪಲ್ಲಟವಾಗುತ್ತದೆ. “ನಾನು ಎಂದಿಗೂ ಮಕ್ಕಳನ್ನು ಪಡೆಯಬಾರದಾಗಿತ್ತು,” ಎಂದು ಅನೇಕರು ಹೇಳುತ್ತಾರೆ. ಇತರ ಕುಟುಂಬಗಳಲ್ಲಿ ಸಮಸ್ಯೆಯು ಇನ್ನೂ ಹಾಳಾಗಿದೆ—ಮಗುವು ಒಂದು ಶಿಶುವಾಗಿದ್ದಾಗಲೂ ಹೆತ್ತವರು ಪ್ರೀತಿಯನ್ನು ತೋರಿಸಲು ತಪ್ಪಿಹೋದರು! ಎರಡು ಸಂದರ್ಭಗಳಲ್ಲಿಯೂ ಏನು ಸಂಭವಿಸಿತು? ಪ್ರೀತಿ ಎಲ್ಲಿದೆ?
ಖಂಡಿತವಾಗಿಯೂ, ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯಲು ಮಕ್ಕಳು ಅಷ್ಟೊಂದು ಸಮರ್ಥರಲ್ಲ. ಆದರೆ ಇದು ಅವರನ್ನು ಅವರದ್ದೇ ಆದ ನಿರ್ಧಾರಗಳಿಗೆ ಬರುವುದರಿಂದ ತಡೆಯುವುದಿಲ್ಲ. ಹೃದಯದಾಳದಲ್ಲಿ, ಮಗುವು ಹೀಗೆಂದು ನಿರ್ಧರಿಸಬಹುದು, ‘ಅಮ್ಮ ಅಥವಾ ಅಪ್ಪ ನನ್ನನ್ನು ಪ್ರೀತಿಸುವುದಿಲ್ಲವಾದರೆ, ಅದರ ಕಾರಣ ನನ್ನಲ್ಲಿ ಏನೋ ತಪ್ಪಿದೆ. ನಾನು ತೀರ ಕೆಟ್ಟವನಾಗಿರಬೇಕು.’ ಇದೊಂದು ಆಳವಾಗಿ ಬೇರೂರಿದ ನಂಬಿಕೆ—ಜೀವಿತದಾದ್ಯಂತ ಎಲ್ಲ ರೀತಿಯ ಹಾನಿಯನ್ನು ಉಂಟುಮಾಡಸಾಧ್ಯವಿರುವ ಒಂದು ನಂಬಿಕೆ—ಯಾಗಿ ಪರಿಣಮಿಸಬಹುದು.
ಆದರೆ, ತುಂಬ ವಿವಿಧವಾದ ಕಾರಣಗಳಿಗಾಗಿ ಮಕ್ಕಳಿಗೆ ಬೇಕಾಗಿರುವ ಪ್ರೀತಿಯನ್ನು ಹೆತ್ತವರು ಅವರಿಗೆ ತೋರಿಸಲು ತಪ್ಪಿಹೋಗಬಹುದು ಎಂಬುದು ಸತ್ಯವಾಗಿದೆ. ಇಂದು ಹೆತ್ತವರು ಮಹತ್ತರವಾದ ಒತ್ತಡಗಳನ್ನು ಎದುರಿಸುತ್ತಿದ್ದಾರೆ ಎಂಬುದು ಒಪ್ಪತಕ್ಕ ವಿಷಯ. ಇವುಗಳಲ್ಲಿ ಕೆಲವೊಂದು ಒತ್ತಡಗಳನ್ನು ಅವರು ಹಿಂದೆಂದೂ ಕಂಡಿಲ್ಲದ ಪ್ರಮಾಣದಲ್ಲಿ ಎದುರಿಸುತ್ತಿದ್ದಾರೆ. ಇವುಗಳೊಂದಿಗೆ ಯುಕ್ತವಾಗಿ ವ್ಯವಹರಿಸಲು ತಯಾರಿಲ್ಲದ ಹೆತ್ತವರಿಗೆ ಈ ಒತ್ತಡಗಳು, ಹೆತ್ತವರೋಪಾದಿ ಅವರ ಸಾಮರ್ಥ್ಯವನ್ನು ಬಹಳವಾಗಿ ದುರ್ಬಲಗೊಳಿಸಬಲ್ಲದು. ಒಂದು ಪುರಾತನ ವಿವೇಕಯುತ ಹೇಳಿಕೆಯು ಘೋಷಿಸಿದ್ದು: “ಕೇವಲ ದಬ್ಬಾಳಿಕೆಯು, ಒಬ್ಬ ವಿವೇಕಿಯು ಹುಚ್ಚನ ಹಾಗೆ ವರ್ತಿಸುವಂತೆ ಮಾಡಬಹುದು.”—ಪ್ರಸಂಗಿ 7:7, NW.
“ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು”
ಒಂದು ಅಸಾಧ್ಯಾದರ್ಶ ಯುಗ. ಈ ಶತಮಾನದಲ್ಲಿ ಇದು ಸಂಭವಿಸುವುದನ್ನು ನೋಡಲು ಅನೇಕ ಜನರು ನಿರೀಕ್ಷಿಸಿದ್ದಾರೆ. ಕಲ್ಪಿಸಿಕೊಳ್ಳಿರಿ—ಆರ್ಥಿಕ ಒತ್ತಡಗಳು, ಬರಗಾಲಗಳು, ಅನಾವೃಷ್ಟಿಗಳು, ಯುದ್ಧಗಳು ಇನ್ನಿಲ್ಲ! ಆದರೆ ಇಂತಹ ನಿರೀಕ್ಷೆಗಳು ನೆರವೇರದೆ ಹೋಗಿವೆ. ಬದಲಾಗಿ, ಇಂದಿನ ಲೋಕವು ಹಿಂದೆ ಸಾ.ಶ. ಮೊದಲನೆಯ ಶತಮಾನದಲ್ಲಿ ಒಬ್ಬ ಬೈಬಲ್ ಬರಹಗಾರನು ಪ್ರವಾದಿಸಿದಂತೆ ಪರಿಣಮಿಸಿದೆ. ನಮ್ಮ ದಿನಗಳಲ್ಲಿ ನಾವು “ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳ”ನ್ನು (NW) ಎದುರಿಸುವೆವು ಎಂಬುದಾಗಿ ಅವನು ಬರೆದನು. (2 ತಿಮೊಥೆಯ 3:1-5) ಈ ಮಾತುಗಳನ್ನು ಒಪ್ಪಿಕೊಳ್ಳಲು ಹೆಚ್ಚಿನ ಹೆತ್ತವರು ಮೊದಲಿಗರಾಗಿರಬಹುದು.
ಇಂದಿನ ಲೋಕದಲ್ಲಿ, ಮಕ್ಕಳನ್ನು ಬೆಳೆಸಲು ಆಗುವ ಅತಿ ಹೆಚ್ಚಿನ ಖರ್ಚಿನಿಂದ ಅನೇಕ ಹೊಸ ಹೆತ್ತವರು ದಂಗುಬಡಿದವರಾಗಿರುತ್ತಾರೆ. ಅನೇಕ ವೇಳೆ, ಕೇವಲ ಮೂಲಭೂತ ಆವಶ್ಯಕತೆಗಳನ್ನು ಒದಗಿಸಲು ಹೆತ್ತವರಿಬ್ಬರೂ ಮನೆಯಿಂದ ಹೊರಗೆ ಕೆಲಸಮಾಡಬೇಕಾಗುತ್ತದೆ. ವೈದ್ಯಕೀಯ ಖರ್ಚುಗಳು, ಬಟ್ಟೆಬರೆ, ಶಾಲಾ ಶಿಕ್ಷಣ, ಮಕ್ಕಳ ಹಗಲು ಪಾಲನೆ, ಮತ್ತು ಆಹಾರ ಹಾಗೂ ವಸತಿಯು ಸಹ, ಮಾಸಿಕವಾಗಿ ದೊಡ್ಡ ಸಂಖ್ಯೆಯ ಬಿಲ್ಗಳನ್ನು ತರಬಹುದು. ಇದು ಅನೇಕ ಹೆತ್ತವರು ತಾವು ಮುಳುಗುತ್ತಿದ್ದೇವೆ ಎಂದು ಭಾವಿಸುವಂತೆ ಮಾಡುತ್ತದೆ. ಈ ಆರ್ಥಿಕ ಪರಿಸ್ಥಿತಿಯು, ಕೇವಲ ಒಂದು ದಿನಕ್ಕೆ ಸಾಕಾಗುವಷ್ಟು ಆವಶ್ಯಕತೆಗಳನ್ನು ಖರೀದಿಸಲು ಇಡೀ ದಿನದ ಸಂಬಳವನ್ನು ಜನರು ಖರ್ಚುಮಾಡಬೇಕಾದ ಸಮಯವನ್ನು ಮುಂತಿಳಿಸುವ ಪ್ರಕಟನೆಯ ಪ್ರವಾದನೆಯನ್ನು ಬೈಬಲ್ ವಿದ್ಯಾರ್ಥಿಗಳ ಜ್ಞಾಪಕಕ್ಕೆ ತರುತ್ತದೆ!—ಪ್ರಕಟನೆ 6:6.
ಮಕ್ಕಳು ತಮ್ಮ ಹೆತ್ತವರನ್ನು ಬಾಧಿಸುವ ಈ ಎಲ್ಲ ಒತ್ತಡಗಳನ್ನು ಅರ್ಥಮಾಡಿಕೊಳ್ಳಬೇಕೆಂದು ನಿರೀಕ್ಷಿಸಸಾಧ್ಯವಿಲ್ಲ. ಇಲ್ಲ, ಮಕ್ಕಳು ಸ್ವಾಭಾವಿಕವಾಗಿಯೇ ಪ್ರೀತಿ ಮತ್ತು ಗಮನದ ಅಗತ್ಯವುಳ್ಳವರಾಗಿದ್ದಾರೆ, ಅದಕ್ಕಾಗಿ ಹಸಿದಿರುತ್ತಾರೆ. ಆಟದ ಸಾಮಾನುಗಳು, ಉಡುಪುಗಳು, ಹಾಗೂ ಇಲೆಕ್ಟ್ರಾನಿಕ್ ವಸ್ತುಗಳಲ್ಲಿ ಅತ್ಯಾಧುನಿಕವಾದುದನ್ನು ಪಡೆದುಕೊಳ್ಳಲು ಸಮೂಹಮಾಧ್ಯಮ ಮತ್ತು ಶಾಲಾಸಂಗಾತಿಗಳಿಂದ ಅವರು ಹೀರಿಕೊಳ್ಳುವ ಒತ್ತಡವು ಸಾಮಾನ್ಯವಾಗಿ, ಸದಾ ಬೆಳೆಯುವಂತಹ ಬೇಕುಗಳ ಒಂದು ಪಟ್ಟಿಯನ್ನು ಪೂರೈಸುವಂತೆ ಹೆತ್ತವರ ಮೇಲೆ ಹಾಕಲ್ಪಟ್ಟ ಒತ್ತಡವಾಗಿ ಪರಿಣಮಿಸುತ್ತದೆ.
ಹೆತ್ತವರ ಮೇಲಿನ ಇನ್ನೊಂದು ಒತ್ತಡವು, ಈ ದಿನಗಳಲ್ಲಿ ಹೆಚ್ಚು ಕೆಟ್ಟದ್ದಾಗಿ ಬೆಳೆಯುತ್ತಿರುವಂತೆ ಕಾಣುವ ದಂಗೆಕೋರತನವಾಗಿದೆ. ಆಸಕ್ತಿಕರವಾಗಿ, ಹೆತ್ತವರ ಕಡೆಗೆ ಮಕ್ಕಳ ವ್ಯಾಪಕವಾದ ಅವಿಧೇಯತೆಯು ನಮ್ಮ ತೊಂದರೆಯುಕ್ತ ಸಮಯಗಳ ಇನ್ನೊಂದು ಸೂಚನೆಯಾಗಿದೆ ಎಂಬುದಾಗಿ ಬೈಬಲ್ ಪ್ರವಾದಿಸಿದೆ. (2 ತಿಮೊಥೆಯ 3:2) ನಿಜ, ಮಕ್ಕಳ ಶಿಸ್ತಿನ ಸಮಸ್ಯೆಗಳು ಹೊಸತೇನಲ್ಲ. ಮತ್ತು ಯಾವುದೇ ಹೆತ್ತವರು ಮಗುವಿನ ನಿಂದಾತ್ಮಕ ಉಪಚಾರಕ್ಕೆ ಮಗುವಿನ ಅಯೋಗ್ಯವರ್ತನೆಯ ಮೇಲೆ ನ್ಯಾಯವಾಗಿ ದೂರುಹೊರಿಸಸಾಧ್ಯವಿಲ್ಲ. ಆದರೆ, ಒಂದು ಸಂಪೂರ್ಣವಾದ ದಂಗೆಕೋರ ವಾತಾವರಣದಲ್ಲಿ ಮಕ್ಕಳನ್ನು ಬೆಳೆಸುವುದರೊಂದಿಗೆ ಇಂದು ಹೆತ್ತವರು ಹೆಣಗಬೇಕು ಎಂಬುದನ್ನು ನೀವು ಒಪ್ಪುವುದಿಲ್ಲವೋ? ಕೋಪೋದ್ರೇಕ, ದಂಗೆ, ಮತ್ತು ಹತಾಶೆಯನ್ನು ಉತ್ತೇಜಿಸುವ ಜನಪ್ರಿಯ ಸಂಗೀತ; ಹೆತ್ತವರನ್ನು ಅವಿವೇಕಿಗಳಾದ ಮೂರ್ಖರು ಮತ್ತು ಮಕ್ಕಳನ್ನು ಅವರ ಚಾಕಚಕ್ಯತೆಯುಳ್ಳ ಶ್ರೇಷ್ಠರು ಎಂಬುದಾಗಿ ಚಿತ್ರಿಸುವ ಟಿವಿ ಕಾರ್ಯಕ್ರಮಗಳು; ಹಿಂಸಾತ್ಮಕ ಪ್ರಚೋದನೆಯ ಮೇಲೆ ಆಧಾರಿತವಾದ ನಡತೆಯನ್ನು ಘನಪಡಿಸುವ ಚಲನಚಿತ್ರಗಳು—ಇಂತಹ ಪ್ರಭಾವಗಳಿಂದ ಮಕ್ಕಳು ಇಂದು ದಾಳಿಗೊಳಗಾಗಿದ್ದಾರೆ. ದಂಗೆಕೋರತನದ ಈ ಸಂಸ್ಕೃತಿಯನ್ನು ಹೀರಿಕೊಂಡು, ಅನುಕರಿಸುವ ಮಕ್ಕಳು, ತಮ್ಮ ಹೆತ್ತವರ ಮೇಲೆ ಭಯಂಕರವಾದ ಪ್ರಯಾಸವನ್ನು ಹಾಕಸಾಧ್ಯವಿದೆ.
“ಸ್ವಾಭಾವಿಕವಾದ ಮಮತೆಯಿಲ್ಲದವರು”
ಇದೇ ಪುರಾತನ ಪ್ರವಾದನೆಗೆ ಇನ್ನೊಂದು ಅಂಶವಿದೆ. ಅದು ಇಂದಿನ ಕುಟುಂಬಕ್ಕೆ ಇನ್ನೂ ಹೆಚ್ಚು ತೊಂದರೆಯನ್ನು ಮುನ್ ಸೂಚಿಸುತ್ತದೆ. ಬಹು ಸಂಖ್ಯಾತ ಜನರಿಗೆ “ಸ್ವಾಭಾವಿಕವಾದ ಮಮತೆ”(NW)ಯಿರುವುದಿಲ್ಲವೆಂದು ಅದು ಸೂಚಿಸುತ್ತದೆ. (2 ತಿಮೊಥೆಯ 3:3) ಸ್ವಾಭಾವಿಕವಾದ ಮಮತೆಯು ಕುಟುಂಬವನ್ನು ಒಟ್ಟಾಗಿಡುವಂತಹ ಸಂಗತಿಯಾಗಿದೆ. ಮತ್ತು ಬೈಬಲಿನ ಪ್ರವಾದನೆಯ ಕುರಿತು ಅತಿ ಸಂದೇಹವಾದಿಗಳಾಗಿರುವವರು ಸಹ ನಮ್ಮ ಸಮಯಗಳು ಕುಟುಂಬ ಜೀವಿತದಲ್ಲಿನ ಆಶ್ಚರ್ಯಕರವಾದ ಕುಸಿತವನ್ನು ನೋಡಿವೆ ಎಂಬುದನ್ನು ಅನುಮೋದಿಸಲೇಬೇಕು. ಲೋಕದಾದ್ಯಂತ, ವಿವಾಹ ವಿಚ್ಛೇದದ ಪ್ರಮಾಣಗಳು ಬಹಳ ಎತ್ತರಕ್ಕೆ ಏರಿವೆ. ಅನೇಕ ಸಮಾಜಗಳಲ್ಲಿ, ಸಾಂಪ್ರದಾಯಿಕ ಕುಟುಂಬಗಳಿಗಿಂತಲೂ ಒಂಟಿಹೆತ್ತವರಿರುವ ಕುಟುಂಬಗಳು ಮತ್ತು ಮಲಕುಟುಂಬಗಳು ಹೆಚ್ಚು ಸಾಮಾನ್ಯವಾಗಿವೆ. ಒಂಟಿಹೆತ್ತವರು ಮತ್ತು ಮಲಹೆತ್ತವರು, ಮಕ್ಕಳಿಗೆ ಬೇಕಾಗಿರುವ ಪ್ರೀತಿಯನ್ನು ಅವರಿಗೆ ತೋರಿಸಲು ಕಷ್ಟಕರವನ್ನಾಗಿ ಮಾಡಸಾಧ್ಯವಿರುವ ವಿಶೇಷವಾದ ಪಂಥಾಹ್ವಾನಗಳನ್ನು ಹಾಗೂ ಒತ್ತಡಗಳನ್ನು ಕೆಲವೊಮ್ಮೆ ಎದುರಿಸುತ್ತಾರೆ.
ಆದರೆ, ಬಹು ಗಾಢವಾದ ಆಘಾತವೊಂದಿದೆ. ಇಂದಿನ ಅನೇಕ ಹೆತ್ತವರು ಸ್ವತಃ ಕೊಂಚವೇ “ಸ್ವಾಭಾವಿಕವಾದ ಮಮತೆ” ಇರುವ ಅಥವಾ “ಸ್ವಾಭಾವಿಕವಾದ ಮಮತೆ”ಯೇ ಇಲ್ಲದಿದ್ದ ಮನೆಗಳಲ್ಲಿ—ವ್ಯಭಿಚಾರ ಹಾಗೂ ವಿವಾಹ ವಿಚ್ಛೇದದಿಂದ ಒಡೆದುಹೋಗಿರುವ ಮನೆಗಳು; ಭಾವಶೂನ್ಯವಾದ ಹಾಗೂ ಹಗೆಯಿಂದ ನಾಶಗೊಂಡಿರುವ ಮನೆಗಳಲ್ಲಿ ಬೆಳೆದಿರುತ್ತಾರೆ; ಬಹುಶಃ ಮೌಖಿಕ, ಭಾವನಾತ್ಮಕ, ಶಾರೀರಿಕ, ಅಥವಾ ಲೈಂಗಿಕ ದುರುಪಯೋಗವು ಮಾಮೂಲಿಯಾಗಿರುವ ಮನೆಗಳಲ್ಲಿಯೂ ಬೆಳೆದಿರುತ್ತಾರೆ. ಇಂತಹ ಮನೆಗಳಲ್ಲಿ ಬೆಳೆಯುವುದು ಮಕ್ಕಳನ್ನು ಹಾನಿಗೊಳಿಸುವುದು ಮಾತ್ರವಲ್ಲ ಅವರು ಮುಂದಕ್ಕೆ ವಯಸ್ಕರಾಗಿ ಪರಿಣಮಿಸುವಾಗಲೂ ಹಾನಿಗೊಳಿಸಸಾಧ್ಯವಿದೆ. ಸಂಖ್ಯಾ ಸಂಗ್ರಹಣಗಳು ಒಂದು ಕರಾಳ ಚಿತ್ರಣವನ್ನು ಚಿತ್ರಿಸುತ್ತವೆ—ಮಕ್ಕಳಾಗಿರುವಾಗ ದುರುಪಯೋಗಿಸಲ್ಪಟ್ಟಿರುವ ಹೆತ್ತವರು, ತಮ್ಮ ಸ್ವಂತ ಮಕ್ಕಳನ್ನು ದುರುಪಯೋಗಿಸುವುದು ಹೆಚ್ಚು ಸಂಭವನೀಯ. ಬೈಬಲ್ ಕಾಲಗಳಲ್ಲಿ ಯೆಹೂದ್ಯರಲ್ಲಿ ಒಂದು ನಾಣ್ಣುಡಿಯಿತ್ತು: “ತಂದೆಗಳು ಹುಳಿದ್ರಾಕ್ಷೆಯನ್ನು ತಿಂದರು, ಮಕ್ಕಳ ಹಲ್ಲುಗಳು ಚಳಿತುಹೋಗಿವೆ.”—ಯೆಹೆಜ್ಕೇಲ 18:2.
ಹಾಗಿದ್ದರೂ, ವಿಷಯವು ಹೀಗಿರಬೇಕಾದ ಅವಶ್ಯವಿಲ್ಲ ಎಂಬುದಾಗಿ ದೇವರು ತನ್ನ ಜನರಿಗೆ ಹೇಳಿದನು. (ಯೆಹೆಜ್ಕೇಲ 18:3) ಒಂದು ಅತ್ಯಾವಶ್ಯಕವಾದ ಅಂಶವು ಇಲ್ಲಿ ಹೇಳಲ್ಪಡಬೇಕು. ಹೆತ್ತವರ ಮೇಲೆ ಬರುವಂತಹ ಈ ಎಲ್ಲ ಒತ್ತಡಗಳ ಅರ್ಥವು, ಅವರು ತಮ್ಮ ಸ್ವಂತ ಮಕ್ಕಳನ್ನು ದುರುಪಚರಿಸುವುದನ್ನು ತಡೆಯಲು ಸಾಧ್ಯವೇ ಇಲ್ಲ ಎಂಬುದಾಗಿದೆಯೋ? ನಿಶ್ಚಯವಾಗಿಯೂ ಇಲ್ಲ! ನೀವು ಒಬ್ಬ ಹೆತ್ತವರಾಗಿರುವುದಾದರೆ ಮತ್ತು ಮೇಲೆ ತಿಳಿಸಲ್ಪಟ್ಟಿರುವ ಕೆಲವೊಂದು ಒತ್ತಡಗಳೊಂದಿಗೆ ನೀವು ಹೋರಾಡುತ್ತಿರುವುದಾದರೆ, ಮತ್ತು ನೀವು ಒಂದು ಒಳ್ಳೆಯ ಹೆತ್ತವರಾಗಿರಸಾಧ್ಯವಿದೆಯೋ ಎಂದು ಚಿಂತಿಸುತ್ತಿರುವುದಾದರೆ, ಧೈರ್ಯ ತೆಗೆದುಕೊಳ್ಳಿರಿ! ನೀವು ಒಂದು ಸಂಖ್ಯಾ ಸಂಗ್ರಹಣವಲ್ಲ. ನಿಮ್ಮ ಹಿಂದಿನ ಜೀವಿತವು, ಸ್ವಯಂಚಾಲಿತವಾಗಿ ನಿಮ್ಮ ಭವಿಷ್ಯತ್ತನ್ನು ನಿರ್ಧರಿಸುವುದಿಲ್ಲ.
ಅಭಿವೃದ್ಧಿಯು ಸಾಧ್ಯವಿದೆ ಎಂದು ತಿಳಿಸುವ ಶಾಸ್ತ್ರೀಯ ಭರವಸೆಯೊಂದಿಗೆ ಹೋಲಿಕೆಯಲ್ಲಿ, ಆರೋಗ್ಯಕರವಾದ ಜನ್ಮದಾತೃತನ (ಇಂಗ್ಲಿಷ್) ಎಂಬ ಪುಸ್ತಕವು ಈ ಹೇಳಿಕೆಯನ್ನು ಮಾಡುತ್ತದೆ: “ನಿಮ್ಮ ಹೆತ್ತವರಿಗಿಂತ ಭಿನ್ನವಾಗಿ ನಡೆದುಕೊಳ್ಳಲು ಜಾಗರೂಕ ಹೆಜ್ಜೆಗಳನ್ನು ನೀವು ತೆಗೆದುಕೊಳ್ಳದೆ ಇರುವುದಾದರೆ, ನಿಮ್ಮ ಬಾಲ್ಯಾವಸ್ಥೆಯ ನಡತೆಯ ನಮೂನೆಗಳು—ನಿಮಗೆ ಅವುಗಳು ಪುನರಾವರ್ತಿಸಬೇಕಾಗಿರಲಿ ಇಲ್ಲದಿರಲಿ—ತಾವಾಗಿ ಪುನರಾವರ್ತಿಸುವವು. ಈ ಚಕ್ರವನ್ನು ಮುರಿಯಲು, ನಿಮ್ಮಲ್ಲಿ ಶಾಶ್ವತವಾಗಿರುವ ಅಪಾಯಕರವಾದ ನಡತೆಯ ನಮೂನೆಗಳ ಕುರಿತು ನೀವು ಅರಿವುಳ್ಳವರಾಗಬೇಕು ಮತ್ತು ಅವುಗಳನ್ನು ಬದಲಾಯಿಸುವ ರೀತಿಯನ್ನು ಕಲಿಯಬೇಕು.”
ಹೌದು, ಅಗತ್ಯವಿರುವುದಾದರೆ ನೀವು ದುರುಪಯೋಗದ ಜನ್ಮದಾತೃತನದ ಚಕ್ರವನ್ನು ಮುರಿಯಸಾಧ್ಯವಿದೆ! ಮತ್ತು ಇಂದು ಜನ್ಮದಾತೃತನವನ್ನು ಬಹು ಕಷ್ಟಕರವನ್ನಾಗಿ ಮಾಡುವ ಒತ್ತಡಗಳೊಂದಿಗೆ ನೀವು ವ್ಯವಹರಿಸಸಾಧ್ಯವಿದೆ. ಆದರೆ ಹೇಗೆ? ಆರೋಗ್ಯಕರವಾದ ಜನ್ಮದಾತೃತನದ ಅತ್ಯುತ್ತಮವಾದ, ಬಹಳ ಭರವಸಯೋಗ್ಯವಾದ ಮಟ್ಟಗಳನ್ನು ನೀವು ಎಲ್ಲಿ ಕಲಿಯಸಾಧ್ಯವಿದೆ? ಈ ವಿಷಯವನ್ನು ನಮ್ಮ ಮುಂದಿನ ಲೇಖನವು ಪರಿಗಣಿಸುವುದು.
[ಪುಟ 7 ರಲ್ಲಿರುವ ಚಿತ್ರ]
ಒತ್ತಡದ ಕೆಳಗೆ, ಕೆಲವು ಹೆತ್ತವರು ತಮ್ಮ ಮಕ್ಕಳ ಕಡೆಗೆ ಪ್ರೀತಿಯನ್ನು ವ್ಯಕ್ತಪಡಿಸಲು ತಪ್ಪಿಹೋಗುತ್ತಾರೆ
[ಪುಟ 8 ರಲ್ಲಿರುವ ಚಿತ್ರ]
ಹೆತ್ತವರು ತಮ್ಮ ಮಕ್ಕಳಿಗೆ ಬೇಕಾಗಿರುವ ಪ್ರೀತಿಯನ್ನು ವ್ಯಕ್ತಪಡಿಸಬೇಕು