ಯುವ ಜನರು ಪ್ರಶ್ನಿಸುವುದು. . .
ನನ್ನ ಆದರ್ಶ ವ್ಯಕ್ತಿ ಯಾರಾಗಿರಬೇಕು?
“ಒಬ್ಬ ಬಾಸ್ಕೆಟ್ಬಾಲ್ ಆಟಗಾರನಾಗಿ ಅವನಲ್ಲಿದ್ದ ಸಾಮರ್ಥ್ಯವು ಅಸಾಮಾನ್ಯವಾದದ್ದಾಗಿತ್ತು. ನನ್ನ ಎಲ್ಲ ಗೆಳೆಯರು ಅವನನ್ನು ಪ್ರೀತಿಸುತ್ತಿದ್ದರು. ಅವನು ನನ್ನ ಆದರ್ಶ ವ್ಯಕ್ತಿಯಾಗಿದ್ದನು, ಮತ್ತು ನಾನು ಅವನಂತೆ ಇರಲು ಹಾಗೂ ಅವನ ಬಳಿ ಏನೆಲ್ಲ ಇತ್ತೊ ಅದೆಲ್ಲವೂ ನನ್ನ ಬಳಿಯೂ ಇರುವಂತೆ ಬಯಸಿದೆನು.”—ಪಿಂಗ್, ಏಷ್ಯದ ಒಬ್ಬ ಯುವಕ.
ಯಾರನ್ನು ಅಭಿಮಾನದಿಂದ ಕಾಣಲಾಗುತ್ತದೊ ಮತ್ತು ಅನುಕರಿಸಲಾಗುತ್ತದೊ, ಅಂತಹ ಜನರನ್ನು ಅನೇಕವೇಳೆ ಆದರ್ಶ ವ್ಯಕ್ತಿಗಳೆಂದು ಕರೆಯಲಾಗುತ್ತದೆ. ಲಿಂಡ ನೀಲ್ಸನ್ ಎಂಬ ಬರಹಗಾರ್ತಿಯು ಅವಲೋಕಿಸಿದ್ದು: “ಯುವ ವ್ಯಕ್ತಿಗಳು, ತಾವು ಅರ್ಥಮಾಡಿಕೊಳ್ಳಬಲ್ಲ ಮತ್ತು ತಮಗೂ ಇರುವಂತಹ ರೀತಿಯ ಭಾವನೆಗಳನ್ನು ಹಾಗೂ ವಿಚಾರಗಳನ್ನು ಹೊಂದಿರುವ, ಮತ್ತು ಯಾರು ತಾವು ಆಶಿಸುವಂತಹ ಗಮನ ಅಥವಾ ಪ್ರತಿಫಲಗಳನ್ನು ಪಡೆಯುತ್ತಿದ್ದಾರೊ ಅಂತಹ ಜನರನ್ನು ಅನುಕರಿಸುತ್ತಾರೆ.” ಆದುದರಿಂದಲೇ ಯುವ ಜನರು, ಜನಪ್ರಿಯ ಅಥವಾ ಆಕರ್ಷಕರಾಗಿರುವ ಸಮವಯಸ್ಕರನ್ನು ಅಭಿಮಾನದಿಂದ ಕಾಣುವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಆದರೆ ಅನೇಕ ಯುವ ಜನರು ವಿಶೇಷವಾಗಿ, ಚಲನಚಿತ್ರ ತಾರೆಯರು, ಸಂಗೀತಗಾರರು, ಮತ್ತು ಕ್ರೀಡಾಪಟುಗಳ ಕಡೆಗೆ ಆಕರ್ಷಿತರಾಗಿ, ಅವರನ್ನು ತಮ್ಮ ಆದರ್ಶ ವ್ಯಕ್ತಿಗಳಾಗಿ ಮಾಡಿಕೊಳ್ಳುತ್ತಾರೆ.
ನಿಶ್ಚಯವಾಗಿಯೂ, ಹೆಚ್ಚಿನ ಹೆಸರಾಂತ ವ್ಯಕ್ತಿಗಳ ಕುರಿತಾಗಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಚಿತ್ರಣವು, ಅನೇಕವೇಳೆ ಕೇವಲ ವಿವರವಾಗಿ ನಿರೂಪಿಸಲ್ಪಟ್ಟಿರುವ ಕಲ್ಪನಾಕಥೆ, ದೋಷಗಳನ್ನು ಮುಚ್ಚಿಸಲು, ಅತಿಸ್ತುತಿಯನ್ನು ಉತ್ತೇಜಿಸಲು, ಮತ್ತು ವಿಶೇಷವಾಗಿ ಮಾರಾಟವಾಗಲಿಕ್ಕಾಗಿ ಜಾಗರೂಕತೆಯಿಂದ ಏರ್ಪಡಿಸಲ್ಪಟ್ಟಿರುವ ಒಂದು ಯೋಜನೆಯಾಗಿದೆ! ಈ ಹಿಂದೆ ಉಲ್ಲೇಖಿಸಲ್ಪಟ್ಟಿರುವ ಪಿಂಗ್ ಒಪ್ಪಿಕೊಳ್ಳುವುದು: “ನನ್ನ ಬಾಸ್ಕೆಟ್ಬಾಲ್ ಹೀರೋವಿನ ಎಲ್ಲ ವಿಡಿಯೊಗಳನ್ನು ನಾನು ಖರೀದಿಸಿದೆ ಮತ್ತು ಅವನು ಯಾವ ಛಾಪುಳ್ಳ ಬಟ್ಟೆಗಳನ್ನು ಮತ್ತು ಶೂಗಳನ್ನು ಧರಿಸಿದನೊ ಅದನ್ನೇ ನಾನೂ ಧರಿಸಿದೆ.” ಕೆಲವು ಯುವ ಜನರು ತಮ್ಮ ಟಿವಿ ಅಥವಾ ಕ್ರೀಡಾ ಆರಾಧ್ಯ ವ್ಯಕ್ತಿಗಳಂತೆಯೇ ಉಡುಪು ಧರಿಸುತ್ತಾರೆ, ಕೇಶಶೈಲಿ ಮಾಡುತ್ತಾರೆ, ಮತ್ತು ನಡೆಯುತ್ತಾರೆ ಹಾಗೂ ಮಾತಾಡುತ್ತಾರೆ ಸಹ.
ಪ್ರಯೋಜನಕರ ಮತ್ತು ಹಾನಿಕರ ಆದರ್ಶ ವ್ಯಕ್ತಿಗಳು
‘ಆದರೆ ಯಾರಾದರೊಬ್ಬರನ್ನು ಅಭಿಮಾನದಿಂದ ಕಾಣುವುದರಲ್ಲಿ ಏನು ಹಾನಿಯಿದೆ?’ ಎಂದು ನೀವು ಕೇಳುತ್ತೀರಿ. ಅದು ನೀವು ಯಾರನ್ನು ಅಭಿಮಾನದಿಂದ ಕಾಣುತ್ತೀರೊ ಅದರ ಮೇಲೆ ಅವಲಂಬಿಸುತ್ತದೆ. ಬೈಬಲ್ ಹೇಳುವುದು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” (ಜ್ಞಾನೋಕ್ತಿ 13:20) ನಾವು ಮನುಷ್ಯರ ಹಿಂಬಾಲಕರಾಗುವುದನ್ನು ಬೈಬಲು ಉತ್ತೇಜಿಸುವುದಿಲ್ಲ. (ಮತ್ತಾಯ 23:10) ಆದರೆ, “ಯಾರು ವಾಗ್ದಾನಗಳನ್ನು ನಂಬಿ ಅವುಗಳ ಫಲಕ್ಕೋಸ್ಕರ ಬಹು ದಿವಸಗಳ ವರೆಗೂ ಕಾದಿದ್ದು ಆ ಫಲವನ್ನು ಹೊಂದುತ್ತಾರೋ ಅವರನ್ನು ಅನುಸರಿಸುವವರಾಗಬೇಕೆಂದು” ಅದು ನಮಗೆ ನಿಶ್ಚಯವಾಗಿಯೂ ಹೇಳುತ್ತದೆ. (ಇಬ್ರಿಯ 6:12) ಆ ಮಾತುಗಳ ಬರಹಗಾರನಾದ ಅಪೊಸ್ತಲ ಪೌಲನು, ಆದಿ ಕ್ರೈಸ್ತರಿಗಾಗಿ ಒಂದು ಉತ್ತಮ ಮಾದರಿಯನ್ನಿಟ್ಟನು. ಈ ಕಾರಣದಿಂದಲೇ ಅವನು ಹೀಗೆ ಹೇಳಸಾಧ್ಯವಿತ್ತು: “ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ.”—1 ಕೊರಿಂಥ 11:1.
ತಿಮೊಥೆಯ ಎಂಬ ಹೆಸರಿನ ಒಬ್ಬ ಯುವ ವ್ಯಕ್ತಿಯು ಅದನ್ನೇ ಮಾಡಿದನು. ಜೊತೆಯಾಗಿ ತಾವು ಮಾಡಿದ ಮಿಷನೆರಿ ಪ್ರಯಾಣಗಳಲ್ಲಿ ಅವನು ಪೌಲನೊಂದಿಗೆ ಒಂದು ನಿಕಟವಾದ ಸ್ನೇಹವನ್ನು ಬೆಳೆಸಿಕೊಂಡನು. (ಅ. ಕೃತ್ಯಗಳು 16:1-4) ಪೌಲನು ತಿಮೊಥೆಯನನ್ನು, ‘ಕರ್ತನಲ್ಲಿ ಪ್ರಿಯನೂ ನಂಬಿಗಸ್ತನೂ ಆದ ಮಗನು’ ಎಂದು ಎಣಿಸಿದನು. (1 ಕೊರಿಂಥ 4:17) ಪೌಲನ ಸಹಾಯದಿಂದ ತಿಮೊಥೆಯನು ಒಬ್ಬ ಗಮನಾರ್ಹ ಕ್ರೈಸ್ತ ಪುರುಷನಾಗಿ ಪರಿಣಮಿಸಿದನು.—ಫಿಲಿಪ್ಪಿ 2:19-23.
ಆದರೆ ನೀವು ತಪ್ಪಾದ ಆದರ್ಶ ವ್ಯಕ್ತಿಯನ್ನು ಆರಿಸಿಕೊಳ್ಳುವಲ್ಲಿ ಏನು ಸಂಭವಿಸಬಲ್ಲದು? ರಿಚರ್ಡ್ ಎಂಬ ಹೆಸರಿನ ಒಬ್ಬ ಯುವ ಪುರುಷನು ತಿಳಿಸುವುದು: “ನಾನು 15 ವರ್ಷ ಪ್ರಾಯದವನಾಗಿದ್ದಾಗ, ಮಾರ್ಯೋ ಎಂಬ ಹೆಸರಿನ ಒಬ್ಬ ಸಹಪಾಠಿಯು ನನ್ನ ಅತ್ಯಾಪ್ತ ಗೆಳೆಯನಾದನು. ನನ್ನ ಹೆತ್ತವರು ಕ್ರೈಸ್ತರಾಗಿದ್ದರು, ಮತ್ತು ಅವರು ನನಗೆ ಆತ್ಮಿಕವಾಗಿ ಸಹಾಯಮಾಡಲು ಪ್ರಯತ್ನಿಸಿದರು. ಆದರೆ ಮಾರ್ಯೋ ಎಲ್ಲ ರೀತಿಯ ಮಜಾವನ್ನು—ಡಿಸ್ಕೋಗಳು, ಪಾರ್ಟಿಗಳು, ಮೋಟಾರ್ಬೈಕ್ಗಳು, ಮತ್ತು ಇವುಗಳಂತಹ ವಿಷಯಗಳನ್ನು—ಅನುಭವಿಸುತ್ತಿದ್ದನು. ಅವನು ಮಾಡಲು ಬಯಸಿದೆಲ್ಲವನ್ನೂ, ಬಯಸಿದಾಗಲೆಲ್ಲಾ ಮಾಡಸಾಧ್ಯವಿತ್ತು. ಆದರೆ ನಾನು ಹಾಗೆ ಮಾಡಸಾಧ್ಯವಿರಲಿಲ್ಲ. ಆದುದರಿಂದ ನಾನು 16 ವರ್ಷ ಪ್ರಾಯದವನಾದಾಗ, ನಾನು ಇನ್ನು ಮುಂದೆ ಒಬ್ಬ ಕ್ರೈಸ್ತನಾಗಿರಲು ಬಯಸುವುದಿಲ್ಲವೆಂದು ನನ್ನ ಹೆತ್ತವರಿಗೆ ಹೇಳಿ, ಹಾಗೆಯೇ ಮಾಡಿದೆ.”
ಹೆಸರಾಂತ ವ್ಯಕ್ತಿಗಳನ್ನು ಮತ್ತು ಕ್ರೀಡಾ ಹೀರೋಗಳನ್ನು ಆದರ್ಶ ವ್ಯಕ್ತಿಗಳಾಗಿ ವೀಕ್ಷಿಸುವುದರಲ್ಲಿ ತದ್ರೀತಿಯ ಅಪಾಯಗಳಿವೆಯೊ? ಹೌದು, ಇವೆ. ಆದರೆ, ಒಬ್ಬ ಕ್ರೀಡಾಪಟು, ಒಬ್ಬ ಅಭಿನಯಗಾರ, ಅಥವಾ ಒಬ್ಬ ಸಂಗೀತಗಾರನ ಕೌಶಲವನ್ನು ಮೆಚ್ಚುವುದರಲ್ಲಿ ತಪ್ಪೇನಿಲ್ಲ. ಆದರೆ ‘ಈ ಜನರು ತಮ್ಮ ವೈಯಕ್ತಿಕ ಜೀವಿತಗಳಲ್ಲಿ ಯಾವ ವಿಧದ ಮಾದರಿಯನ್ನಿಡುತ್ತಾರೆ?’ ಎಂದು ನಿಮ್ಮನ್ನೇ ಕೇಳಿಕೊಳ್ಳಿರಿ. ಅನೇಕ ಕ್ರೀಡಾ ಹೀರೋಗಳು, ಸಂಗೀತಗಾರರು, ಮತ್ತು ಇತರ ಪ್ರದರ್ಶನಗಾರರು, ಲೈಂಗಿಕ ಅನೈತಿಕತೆ, ಅಮಲೌಷಧಗಳು ಮತ್ತು ಮದ್ಯಪಾನದಲ್ಲಿನ ತಮ್ಮ ಲೋಲುಪತೆಗಾಗಿ ಕುಪ್ರಸಿದ್ಧರಾಗಿಲ್ಲವೊ? ಅವರಿಗೆ ಹಣ ಮತ್ತು ಕೀರ್ತಿಯಿದ್ದರೂ, ಅನೇಕರು ಅಸಂತೋಷಕರ, ಅತೃಪ್ತಿಕರವಾದ ಜೀವಿತಗಳನ್ನು ನಡಿಸುತ್ತಾರೆಂಬುದೂ ಸತ್ಯ ಸಂಗತಿಯಲ್ಲವೊ? ಈ ದೃಷ್ಟಿಕೋನದಿಂದ ನೀವು ಸಂಗತಿಗಳನ್ನು ನೋಡುವಾಗ, ಅಂತಹವರನ್ನು ಅನುಕರಿಸುವುದರಿಂದ ಸಂಭಾವ್ಯವಾಗಿ ಏನು ಪ್ರಯೋಜನ ದೊರೆಯಸಾಧ್ಯವಿದೆ?
ಒಬ್ಬ ಹೆಸರಾಂತ ವ್ಯಕ್ತಿಯ ಕೇಶಶೈಲಿ, ಬಟ್ಟೆಗಳು, ಅಥವಾ ಮಾತಾಡುವ ವಿಧವನ್ನು ನಕಲುಮಾಡುವುದು, ಒಂದು ಚಿಕ್ಕ ಸಂಗತಿಯಾಗಿ ತೋರಬಹುದು ನಿಜ. ಆದರೆ ಲೋಕವು “ನಿಮ್ಮನ್ನು ಅದರ ಸ್ವಂತ ಅಚ್ಚಿನೊಳಗೆ ಒತ್ತಲು” ಅನುಮತಿಸುವುದರಲ್ಲಿ ಇದು ಪ್ರಥಮ ಹೆಜ್ಜೆಯಾಗಿರಸಾಧ್ಯವಿದೆ. (ರೋಮಾಪುರ 12:2, ಫಿಲಿಪ್ಸ್) ಆರಂಭದಲ್ಲಿ, ಆ ಅಚ್ಚು ಹಿತಕರವಾಗಿ ತೋರಬಹುದು. ಆದರೆ ನೀವು ಅದರ ಪ್ರಭಾವಕ್ಕೆ ಪೂರ್ಣವಾಗಿ ಒಳಗಾಗುವಲ್ಲಿ, ನಿಮ್ಮನ್ನು ನಿಶ್ಚಯವಾಗಿಯೂ ದೇವರೊಂದಿಗೆ ಘರ್ಷಣೆಯಲ್ಲಿ ತರುವಂತಹ ವಿಧಗಳಲ್ಲಿ ಅದು ನಿಮ್ಮನ್ನು ರೂಪಿಸಬಲ್ಲದು. “ಇಹಲೋಕಸ್ನೇಹವು ದೇವವೈರ” ಎಂದು ಯಾಕೋಬ 4:4ರಲ್ಲಿ ಬೈಬಲು ಹೇಳುತ್ತದೆ.
ಒಬ್ಬ ಒಳ್ಳೆಯ ಆದರ್ಶ ವ್ಯಕ್ತಿಯು ನಿಮಗೆ ಸಹಾಯಮಾಡಬಲ್ಲ ವಿಧ
ಹಾಗಿದ್ದರೂ, ಒಳ್ಳೆಯ ಮಾದರಿಯನ್ನಿಡುವ ಒಬ್ಬ ವ್ಯಕ್ತಿಯನ್ನು ಅನುಕರಿಸುವುದು, ನಿಮ್ಮ ಜೀವಿತದ ಮೇಲೆ ಒಂದು ಸಕಾರಾತ್ಮಕ ಪ್ರಭಾವವನ್ನು ಬೀರಸಾಧ್ಯವಿದೆ! ಜೊತೆ ಕ್ರೈಸ್ತರ ನಡುವೆ, ‘ನಡೆ ನುಡಿ ಪ್ರೀತಿ ನಂಬಿಕೆ ಶುದ್ಧತ್ವ ಇವುಗಳ ವಿಷಯದಲ್ಲಿ ಮಾದರಿಯಾಗಿರುವ’ ಅನೇಕರನ್ನು ನೀವು ಕಂಡುಕೊಳ್ಳಸಾಧ್ಯವಿದೆ. (1 ತಿಮೊಥೆಯ 4:12) ಒಡನಾಡಿಗಳನ್ನು ಆಯ್ದುಕೊಳ್ಳುವಾಗ—ಕ್ರೈಸ್ತ ಸಭೆಯಲ್ಲೂ—ನೀವು ಎಚ್ಚರಿಕೆಯಿಂದಿರಬೇಕು, ನಿಜ. (2 ತಿಮೊಥೆಯ 2:20, 21) ಆದರೆ ಸಭೆಯಲ್ಲಿ ಯಾರು ನಿಜವಾಗಿಯೂ “ಸತ್ಯವಂತರಾಗಿ ನಡೆ”ಯುತ್ತಾ ಇದ್ದಾರೆಂಬುದನ್ನು ಗುರುತಿಸುವುದು ಸಾಮಾನ್ಯವಾಗಿ ಕಷ್ಟಕರವಲ್ಲ. (2 ಯೋಹಾನ 4) ಇಬ್ರಿಯ 13:7ರಲ್ಲಿರುವ ಮೂಲತತ್ತ್ವವು ತಿಳಿಸುವುದು: “ಅವರ ನಡತೆಯು ಹೇಗೆ ಪರಿಣಮಿಸುತ್ತದೊ ಅದನ್ನು ನೀವು ಪರ್ಯಾಲೋಚಿಸಿದಂತೆ, ಅವರ ನಂಬಿಕೆಯನ್ನು ಅನುಕರಿಸಿರಿ” (NW). ನಿಮ್ಮ ಸಮವಯಸ್ಕರಲ್ಲಿ ಹೆಚ್ಚಿನವರ ವಿಷಯದಲ್ಲಿ, ಅವರ ನಡತೆಯು ಯಾವುದರಲ್ಲಿ ಪರಿಣಮಿಸುವುದೆಂಬುದನ್ನು ಇನ್ನೂ ನೋಡಬೇಕಾಗಿದೆ. ಆದರೆ ತಮ್ಮ ನಂಬಿಗಸ್ತಿಕೆಯನ್ನು ರುಜುಪಡಿಸಿರುವ ವೃದ್ಧ ವ್ಯಕ್ತಿಗಳು ಸಭೆಯಲ್ಲಿದ್ದಾರೆ, ಮತ್ತು ಅವರ ಪರಿಚಯಮಾಡಿಕೊಳ್ಳುವುದು ವಿವೇಕಯುತವಾದದ್ದಾಗಿದೆ.
‘ವೃದ್ಧ ವ್ಯಕ್ತಿಗಳ ಪರಿಚಯಮಾಡಿಕೊಳ್ಳುವುದೊ?’ ಎಂದು ನೀವು ಕೇಳಬಹುದು. ನಿಜ, ಆರಂಭದಲ್ಲಿ ಇದು ಅಷ್ಟೇನೂ ಆಕರ್ಷಕವಾಗಿ ಧ್ವನಿಸಲಿಕ್ಕಿಲ್ಲ. ಆದರೆ ತಿಮೊಥೆಯನು, ತನಗಿಂತಲೂ ಹಿರಿಯನಾಗಿದ್ದ ಸ್ನೇಹಿತ ಅಪೊಸ್ತಲ ಪೌಲನೊಂದಿಗೆ ಹೊಂದಿದ್ದ ಸಂಬಂಧವನ್ನು ಮನಸ್ಸಿಗೆ ತಂದುಕೊಳ್ಳಿರಿ. ಪೌಲನು ತಿಮೊಥೆಯನ ಸಂಭಾವ್ಯ ಸಾಮರ್ಥ್ಯವನ್ನು ನೋಡಿ, ಅವನಲ್ಲಿದ್ದ “ದೇವರ ಕೃಪಾವರವು ಪ್ರಜ್ವಲಿಸುವಂತೆ” ಅವನನ್ನು ಉತ್ತೇಜಿಸಿದನು. (2 ತಿಮೊಥೆಯ 1:6) ನಿಮಗೆ ಸಹಾಯಮಾಡಿ, ಉತ್ತೇಜಿಸುವಂತಹ, ನಿಮ್ಮ ದೇವದತ್ತ ವರಗಳನ್ನು ಪೋಷಿಸುವಂತೆ ನಿಮ್ಮನ್ನು ಪ್ರೇರೇಪಿಸುವ ಒಬ್ಬರಿರುವುದು ಉಪಯುಕ್ತವಾಗಿರಲಿಕ್ಕಿಲ್ಲವೊ?
ಬ್ರೈಯನ್ ಎಂಬ ಹೆಸರಿನ ಒಬ್ಬ ಯುವ ವ್ಯಕ್ತಿಯು ಇದು ಸತ್ಯವೆಂದು ಕಂಡುಕೊಂಡನು. ಸಭೆಯಲ್ಲಿ ಒಬ್ಬ ಪ್ರಾಯಸ್ಥ, ಅವಿವಾಹಿತ ಶುಶ್ರೂಷಾ ಸೇವಕನೊಂದಿಗೆ ಅವನು ಪರಿಚಿತನಾದ ಸಮಯದಲ್ಲಿ, ಅವನು ಕೀಳರಿಮೆಯ ಅನಿಸಿಕೆಗಳೊಂದಿಗೆ ಹೋರಾಡುತ್ತಿದ್ದನು. ಬ್ರೈಯನ್ ಹೇಳುವುದು: “ನನ್ನನ್ನು ಸೇರಿಸಿ, ಇತರರಿಗಾಗಿರುವ ಅವನ ಪ್ರೀತಿಪರ ಚಿಂತೆ, ಶುಶ್ರೂಷೆಗಾಗಿರುವ ಅವನ ಹುರುಪು, ಮತ್ತು ಅವನ ಅತ್ಯುತ್ತಮ ಭಾಷಣಗಳನ್ನು ನಾನು ಮೆಚ್ಚುತ್ತೇನೆ.” ಈ ಪ್ರಾಯಸ್ಥ ಕ್ರೈಸ್ತನಿಂದ ಅವನು ಪಡೆದುಕೊಳ್ಳುತ್ತಿರುವ ವೈಯಕ್ತಿಕ ಗಮನದಿಂದ ಬ್ರೈಯನ್ ಈಗಾಗಲೇ ಪ್ರಯೋಜನವನ್ನು ಪಡೆಯುತ್ತಿದ್ದಾನೆ. ಅವನು ಮುಚ್ಚುಮರೆಯಿಲ್ಲದೆ ಒಪ್ಪಿಕೊಳ್ಳುವುದು: “ನಾನು ಈ ಮುಂಚೆ ಏನಾಗಿದ್ದೇನೊ—ಒಂದು ನಾಚಿಕೆಸ್ವಭಾವದ ಮತ್ತು ಕಾಂತಿಹೀನ ವ್ಯಕ್ತಿತ್ವವುಳ್ಳವನು—ಅದರಿಂದ ಬದಲಾಗುವಂತೆ ಅದು ನನಗೆ ಸಹಾಯಮಾಡಿದೆ.”
ಆದರ್ಶ ವ್ಯಕ್ತಿಗಳೋಪಾದಿ ಹೆತ್ತವರು
“ಸಾಮಾನ್ಯ ತರುಣ ವ್ಯಕ್ತಿಯು ಒಂದು ತೃಪ್ತಿಕರವಾದ ವ್ಯಕ್ತಿತ್ವವನ್ನು ಪಡೆದುಕೊಳ್ಳುವುದರಲ್ಲಿ ನೆರವನ್ನು ನೀಡುವ ಇಲ್ಲವೇ ಅಡ್ಡಗಟ್ಟುವ ಏಕಮಾತ್ರ ಅತಿ ಪ್ರಾಮುಖ್ಯ ಬಾಹ್ಯ ಪ್ರಭಾವವು” ಹೆತ್ತವರಾಗಿದ್ದಾರೆಂದು, ತರುಣಾವಸ್ಥೆ—ಒತ್ತಡದ ಕೆಳಗಿರುವ ಸಂತತಿ (ಇಂಗ್ಲಿಷ್) ಎಂಬ ಪುಸ್ತಕವು ಹೇಳುತ್ತದೆ. ನಿರ್ದೇಶನ ಮತ್ತು ಸ್ವವ್ಯಕ್ತಿತ್ವದ ಆ ಸ್ಪಷ್ಟವಾದ ಪ್ರಜ್ಞೆಯಿಲ್ಲದೆ, ಯುವ ಜನರು “ದಾಟಿಹೋಗುತ್ತಿರುವ ಪ್ರತಿಯೊಂದು ಅಲೆಯೊಂದಿಗೆ ಮಾರ್ಗಕ್ರಮವನ್ನು ಬದಲಾಯಿಸುತ್ತಿರುವ, ಚುಕ್ಕಾಣಿಯಿಲ್ಲದ ಹಡಗಿನಂತೆ ಆಗುವರು” ಎಂದು ಆ ಪುಸ್ತಕವು ಕೂಡಿಸಿ ಹೇಳುತ್ತದೆ.
ಈ ಬುದ್ಧಿವಾದವು, ಯಾಕೋಬ 1:6ರಲ್ಲಿ ದಾಖಲಿಸಲ್ಪಟ್ಟಿರುವಂತೆ, 1,900ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ಶಿಷ್ಯನಾದ ಯಾಕೋಬನು ಬರೆದಂತಹ ವಿಷಯವನ್ನು ಪ್ರತಿಬಿಂಬಿಸುತ್ತದೆ: “ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಟ್ಟು ಕೇಳಿಕೊಳ್ಳಬೇಕು. ಸಂದೇಹಪಡುವವನೋ ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ತೆರೆಯಂತೆ ಅಲೆಯುತ್ತಿರುವನು.” ಈ ಸ್ವಭಾವವಿರುವ ಕೆಲವು ಯುವ ವ್ಯಕ್ತಿಗಳು ನಿಮಗೆ ಗೊತ್ತಿರಬಹುದು. ನಾಳೆಯ ಕುರಿತಾಗಿ ಚಿಂತಿಸದೆ, ಅವರು ಇವತ್ತಿನ ರೋಮಾಂಚನಗಳಿಗಾಗಿ ಜೀವಿಸುವ ಪ್ರವೃತ್ತಿಯುಳ್ಳವರಾಗಿದ್ದಾರೆ.
ಸಭೆಯಲ್ಲಿ ಒಂದು ಒಳ್ಳೆಯ ಮಾದರಿಯನ್ನಿಡುವ ದೇವಭಯವುಳ್ಳ ಹೆತ್ತವರೊಂದಿಗೆ ನೀವು ಆಶೀರ್ವದಿಸಲ್ಪಟ್ಟಿದ್ದೀರೊ? ಹಾಗಿರುವಲ್ಲಿ, ನೀವು ಅವರ ಪ್ರಭಾವಕ್ಕೆ ಮಣಿಯುತ್ತಿದ್ದೀರೊ? ಅಥವಾ ನೀವು ಎಲ್ಲ ಸಮಯವೂ ಅವರೊಂದಿಗೆ ಜಗಳವಾಡುತ್ತೀರೊ? ನಿಮ್ಮ ಹೆತ್ತವರು ಪರಿಪೂರ್ಣರಲ್ಲ ನಿಜ. ಆದರೆ ಅವರ ಒಳ್ಳೆಯ ಗುಣಗಳಿಗೆ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಬೇಡಿರಿ. ಈ ಗುಣಗಳನ್ನು ಅನುಕರಿಸುವುದರಿಂದ ನಿಮಗೆ ಒಳಿತಾಗುವುದು. “ನನ್ನ ಹೆತ್ತವರನ್ನು ನಾನು ತುಂಬ ಅಭಿಮಾನದಿಂದ ಕಾಣುತ್ತೇನೆ. ಶುಶ್ರೂಷೆಯಲ್ಲಿನ ಅವರ ತಾಳ್ಮೆಯುಕ್ತ ಹುರುಪು, ಆರ್ಥಿಕ ಕಷ್ಟಗಳನ್ನು ಅವರು ಎದುರಿಸಿರುವ ವಿಧ, ಮತ್ತು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ಅವರು ನನಗೆ ನೀಡಿರುವ ಉತ್ತೇಜನವು, ಇವೆಲ್ಲವೂ ನನ್ನ ಮೇಲೆ ಒಳ್ಳೆಯ ಪ್ರಭಾವವನ್ನು ಬೀರಿವೆ. ನನ್ನ ಹೆತ್ತವರು ಯಾವಾಗಲೂ ನನ್ನ ಆದರ್ಶ ವ್ಯಕ್ತಿಗಳಾಗಿದ್ದಾರೆ” ಎಂದು ಜಾರಡ್ ಎಂಬ ಹೆಸರಿನ ಒಬ್ಬ ಕ್ರೈಸ್ತ ಯುವಕನು ಬರೆಯುತ್ತಾನೆ.
ಅತ್ಯುತ್ತಮನಾದ ಆದರ್ಶ ವ್ಯಕ್ತಿ
ಅಮೆರಿಕದಲ್ಲಿರುವ ಕೆಲವು ಯುವ ಜನರಿಗೆ, ತಾವು ಇತಿಹಾಸದಲ್ಲಿ ಯಾರನ್ನು ಅತಿ ಮಹಾನ್ ವ್ಯಕ್ತಿಯೆಂದು ಪರಿಗಣಿಸುತ್ತಾರೆಂದು ಗ್ಯಾಲಪ್ ಸಮೀಕ್ಷಾ ಸಂಸ್ಥೆಯು ಕೇಳಿದಾಗ, ಹೆಚ್ಚಿನವರು ಅಮೆರಿಕದ ರಾಜಕೀಯ ವ್ಯಕ್ತಿಗಳನ್ನು ಆಯ್ದುಕೊಂಡರು. ಕೇವಲ 6 ಪ್ರತಿಶತ ಮಂದಿ ಯೇಸು ಕ್ರಿಸ್ತನನ್ನು ಆಯ್ದುಕೊಂಡರು. ಆದರೆ, ಯೇಸು ಕ್ರಿಸ್ತನು “[ನಾವು] ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು” ಬಿಟ್ಟುಹೋದನೆಂದು ಬೈಬಲ್ ನಮಗೆ ಹೇಳುತ್ತದೆ. (1 ಪೇತ್ರ 2:21; ಇಬ್ರಿಯ 12:3) ತನ್ನ ಶಿಷ್ಯರು ತನ್ನಿಂದ ಕಲಿಯುವಂತೆ ಅವನು ಉತ್ತೇಜಿಸುತ್ತಾನೆ. (ಮತ್ತಾಯ 11:28, 29) ಆದರೆ ನೀವು ಯೇಸುವಿನಿಂದ ಕಲಿಯುವುದಾದರೂ ಹೇಗೆ?
ಯೇಸುವಿನ ಜೀವಿತದೊಂದಿಗೆ ಪೂರ್ಣವಾಗಿ ಪರಿಚಿತರಾಗಿರಿ. ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕದೊಂದಿಗೆ, ಸುವಾರ್ತಾ ವೃತ್ತಾಂತಗಳನ್ನು ಸಂಪೂರ್ಣವಾಗಿ ಓದಲು ಪ್ರಯತ್ನಿಸಿರಿ.a ಯೇಸು ಕಲಿಸಿದಂತಹ ವಿಧ, ಅವನು ಜನರೊಂದಿಗೆ ಕರುಣೆಯಿಂದ ವ್ಯವಹರಿಸಿದಂತಹ ವಿಧ, ಮತ್ತು ಒತ್ತಡದ ಕೆಳಗೆ ಅವನು ತೋರಿಸಿದಂತಹ ಧೈರ್ಯವನ್ನು ಗಮನಿಸಿರಿ. ಯೇಸು, ನೀವು ಅನುಸರಿಸಬಹುದಾದ ಅತಿ ಉತ್ತಮನಾದ ಆದರ್ಶ ವ್ಯಕ್ತಿ ಆಗಿದ್ದಾನೆಂಬುದನ್ನು ನೀವು ಕಂಡುಕೊಳ್ಳುವಿರಿ.
ಆ ಪರಿಪೂರ್ಣ ಆದರ್ಶ ವ್ಯಕ್ತಿಯೊಂದಿಗೆ ನೀವು ಹೆಚ್ಚು ಪರಿಚಿತರಾದಂತೆ, ಅಹಿತಕರವಾದ ಸಮವಯಸ್ಕರು ಅಥವಾ ಹೆಸರಾಂತ ವ್ಯಕ್ತಿಗಳ ಕಡೆಗೆ ನೀವು ಅಷ್ಟೇ ಕಡಿಮೆ ಆಕರ್ಷಿತರಾಗುವಿರಿ. ಪಿಂಗ್ ಮತ್ತು ಒಬ್ಬ ಕ್ರೀಡಾ ಹೀರೋಗಾಗಿ ಅವನಿಗಿದ್ದ ಅಭಿಮಾನವು ನಿಮಗೆ ನೆನಪಿದೆಯೊ? ಪಿಂಗ್ ಆಗಾಗ್ಗೆ ಬಾಸ್ಕೆಟ್ಬಾಲ್ ಆಟದಲ್ಲಿ ಆನಂದಿಸುತ್ತಾನೆ, ಆದರೆ ಹೆಸರಾಂತ ವ್ಯಕ್ತಿಗಳನ್ನು ಅನುಕರಿಸುವುದು ಮೂರ್ಖತನವೆಂಬುದನ್ನು ಅವನು ಗ್ರಹಿಸಿಕೊಂಡಿದ್ದಾನೆ.
ಮತ್ತು ರಿಚರ್ಡ್ನ ಕುರಿತಾಗಿ ಏನು? ಅವನು ಆಯ್ಕೆಮಾಡಿದ ಆದರ್ಶ ವ್ಯಕ್ತಿಯು, ಅವನು ಕ್ರೈಸ್ತ ನಂಬಿಕೆಯನ್ನು ತೊರೆಯುವಂತೆ ಮಾಡಿದನು. ಆದರೆ, ರಿಚರ್ಡ್ಗೆ ಯೆಹೋವನ ಸಾಕ್ಷಿಗಳಲ್ಲೊಬ್ಬನಾಗಿರುವ ಸೈಮನ್ ಎಂಬ ಹೆಸರಿನ, 20ರ ಪ್ರಾಯದಲ್ಲಿರುವ ಒಬ್ಬ ಯುವಕನ ಪರಿಚಯವಾಯಿತು. “ಸೈಮನ್ ನನ್ನೊಂದಿಗೆ ಗೆಳೆತನವನ್ನು ಬೆಳೆಸಿಕೊಂಡನು, ಮತ್ತು ಬೈಬಲ್ ಮೂಲತತ್ತ್ವಗಳನ್ನು ರಾಜಿಮಾಡಿಕೊಳ್ಳದೆ ಒಬ್ಬನು ಜೀವನವನ್ನು ಆನಂದಿಸಿಕೊಳ್ಳಲು ಸಾಧ್ಯವಿದೆಯೆಂಬುದನ್ನು ನೋಡುವಂತೆ ನನಗೆ ಸಹಾಯಮಾಡಿದನು. ಸ್ವಲ್ಪ ಸಮಯದಲ್ಲೇ ನಾನು ಸೈಮನ್ಗಾಗಿ ಗೌರವವನ್ನು ಬೆಳೆಸಿಕೊಂಡೆ, ಮತ್ತು ಅವನ ಮಾದರಿಯು, ನಾನು ಸಭೆಗೆ ಹಿಂದಿರುಗಿ, ಯೆಹೋವನಿಗೆ ನನ್ನ ಜೀವಿತವನ್ನು ಸಮರ್ಪಿಸಿಕೊಳ್ಳುವುದರಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸಿತು. ಈಗ ನಾನು ಹೆಚ್ಚು ಸಂತೋಷಿತನಾಗಿದ್ದೇನೆ, ಮತ್ತು ನನ್ನ ಜೀವಿತಕ್ಕೆ ನಿಜವಾದ ಉದ್ದೇಶವಿದೆ.”
ಹೌದು, ಆದರ್ಶ ವ್ಯಕ್ತಿಗಳ ವಿಷಯದಲ್ಲಿ ನೀವು ಮಾಡುವ ಆಯ್ಕೆಯು ನಿಜವಾಗಿಯೂ ಪ್ರಾಮುಖ್ಯವಾಗಿದೆ!
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
[ಪುಟ 13 ರಲ್ಲಿರುವ ಚಿತ್ರ]
ಒಳ್ಳೆಯ ಹೆಸರಿರುವ ವೃದ್ಧ ವ್ಯಕ್ತಿಗಳೊಂದಿಗೆ ಸಹವಸಿಸುವುದು ನಿಮಗೆ ಸಹಾಯಮಾಡಬಲ್ಲದು