ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w16 ಏಪ್ರಿಲ್‌ ಪು. 18-22
  • ಆರಾಧನೆಗಾಗಿ ನಾವು ಏಕೆ ಕೂಡಿ ಬರಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆರಾಧನೆಗಾಗಿ ನಾವು ಏಕೆ ಕೂಡಿ ಬರಬೇಕು?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕೂಟಗಳು ನಮಗೆ ಪ್ರಯೋಜನಕರ
  • ಕೂಟಗಳಲ್ಲಿ ಇತರರಿಗೆ ಸಹಾಯಮಾಡುತ್ತೇವೆ
  • ಕೂಟಗಳಿಗೆ ಹಾಜರಾಗುವ ಮೂಲಕ ಯೆಹೋವನಿಗೆ ಸಂತೋಷ ತರುತ್ತೇವೆ
  • ಸಹೋದರರೊಟ್ಟಿಗೆ ಕೂಡಿಬರುವುದನ್ನು ಮುಂದುವರಿಸಿ
  • ಯೆಹೋವನ ಸಾಕ್ಷಿಗಳ ಕೂಟಗಳಿಗೆ ನಿಮಗೆ ಸ್ವಾಗತ!
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ನಮ್ಮ ಹಾಜರಿ ಕೊಡುವ ಖಾತರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಕ್ರೈಸ್ತ ಕೂಟಗಳ ಭಕ್ತಿವೃದ್ಧಿಯಲ್ಲಿ ನೀವು ಪಾಲಿಗರೊ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಯೆಹೋವನು ನಮ್ಮನ್ನು ಹೇಗೆ ನಡೆಸುತ್ತಿದ್ದಾನೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
w16 ಏಪ್ರಿಲ್‌ ಪು. 18-22
ಕೊರಿನಾ ಮತ್ತು ಇನ್ನೊಬ್ಬ ಸಹೋದರಿ ಸೈಬೀರಿಯದಲ್ಲಿ ಒಂದು ಕೂಟಕ್ಕೆ ಹಾಜರಾಗಲು ತುಂಬ ದೂರ ನಡೆದು ಹೋಗುತ್ತಿದ್ದಾರೆ

ಆರಾಧನೆಗಾಗಿ ನಾವು ಏಕೆ ಕೂಡಿ ಬರಬೇಕು?

‘ನಾವು ಪರಸ್ಪರ ಹಿತಚಿಂತಕರಾಗಿದ್ದು ಸಭೆಯಾಗಿ ಕೂಡಿಬರುವುದನ್ನು ಬಿಟ್ಟುಬಿಡದಿರೋಣ.’—ಇಬ್ರಿ. 10:24, 25.

ಗೀತೆಗಳು: 20, 119

“ಕೂಟಗಳಿಗೆ ಹಾಜರಾಗಲು ಕಾರಣಗಳು” ಚೌಕ ನೋಡಿ ವಿವರಿಸಿ

  • ಸಭಾ ಕೂಟಗಳಿಂದ ನಮಗೆ ಹೇಗೆ ಪ್ರಯೋಜನವಾಗುತ್ತದೆ?

  • ನಾವು ಕೂಟಗಳಿಗೆ ಹಾಜರಾಗುವಾಗ ಇತರರಿಗೆ ಹೇಗೆ ಸಹಾಯವಾಗುತ್ತದೆ?

  • ನಾವು ಕೂಟಗಳಿಗೆ ಹಾಜರಾಗುವಾಗ ಯೆಹೋವನಿಗೆ ಹೇಗನಿಸುತ್ತದೆ?

1-3. (ಎ) ಆರಾಧನೆಗಾಗಿ ಕೂಡಿಬರಲು ತವಕಪಡುತ್ತಾರೆಂದು ಕ್ರೈಸ್ತರು ಹೇಗೆ ತೋರಿಸಿದ್ದಾರೆ? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಈ ಲೇಖನದಲ್ಲಿ ಏನು ಚರ್ಚಿಸಲಿದ್ದೇವೆ?

ಕೊರಿನಾ ಬರೀ 17 ವರ್ಷದವಳಾಗಿದ್ದಾಗ ಅವಳ ತಾಯಿಯನ್ನು ಕೈದುಮಾಡಿ ದೂರದ ಒಂದು ಶ್ರಮ ಶಿಬಿರಕ್ಕೆ ಒಯ್ಯಲಾಯಿತು. ನಂತರ ಕೊರಿನಾಳನ್ನೇ ಮನೆಯಿಂದ ಸಾವಿರಾರು ಮೈಲು ದೂರದಲ್ಲಿದ್ದ ಸೈಬೀರಿಯಕ್ಕೆ ಬಂದಿಯಾಗಿ ಒಯ್ದರು. ಅಲ್ಲಿ ಒಂದು ಪಶುಪಾಲನ ಕೇಂದ್ರದಲ್ಲಿ ಅವಳು ಅಡಿಯಾಳಿನಂತೆ ದುಡಿಯಬೇಕಾಯಿತು. ಹೊರಗೆ ಮರಗಟ್ಟುವ ಚಳಿಯಲ್ಲಿ ಕೆಲವೊಮ್ಮೆ ಕೆಲಸ ಮಾಡಬೇಕಾಗುತ್ತಿತ್ತು. ಚಳಿ ತಡೆದುಕೊಳ್ಳಲು ಸಾಕಷ್ಟು ಬಟ್ಟೆಯೂ ಅವಳಿಗಿರಲಿಲ್ಲ. ಇಷ್ಟೆಲ್ಲಾ ಕಷ್ಟವಿದ್ದರೂ ಕೊರಿನಾ ಮತ್ತು ಅವಳ ಜೊತೆ ಇದ್ದ ಇನ್ನೊಬ್ಬ ಸಹೋದರಿ ಹೇಗಾದರೂ ಮಾಡಿ ಒಂದು ಸಭಾ ಕೂಟಕ್ಕೆ ಹಾಜರಾಗಬೇಕೆಂದು ದೃಢನಿರ್ಣಯ ಮಾಡಿದರು.

2 ಕೊರಿನಾ ಹೇಳಿದ್ದು: “ಒಂದು ಸಂಜೆ ನಾವಿಬ್ಬರೂ ಕೆಲಸದ ಸ್ಥಳದಿಂದ ಹೊರಟು 25 ಕಿ.ಮೀ. ದೂರದಲ್ಲಿದ್ದ ರೈಲು ನಿಲ್ದಾಣಕ್ಕೆ ನಡೆದುಕೊಂಡು ಹೋದೆವು. ರಾತ್ರಿ 2 ಗಂಟೆಗೆ ರೈಲು ಹೊರಟಿತು. 6 ತಾಸಿನ ಪ್ರಯಾಣದ ನಂತರ ನಾವು ರೈಲಿನಿಂದ ಇಳಿದು ಕೂಟದ ಸ್ಥಳಕ್ಕೆ 10 ಕಿ.ಮೀ. ನಡೆದುಕೊಂಡು ಹೋದೆವು.” ಆ ಪ್ರಯಾಣ ಮಾಡಿದ್ದಕ್ಕಾಗಿ ಕೊರಿನಾ ತುಂಬ ಸಂತೋಷಪಟ್ಟಳು. ಅವಳಂದದ್ದು: “ಆ ಕೂಟದಲ್ಲಿ ಕಾವಲಿನಬುರುಜು ಅಧ್ಯಯನ ಮಾಡಿದೆವು ಮತ್ತು ರಾಜ್ಯ ಗೀತೆಗಳನ್ನು ಹಾಡಿದೆವು. ಇದರಿಂದ ನಮಗೆ ತುಂಬ ಪ್ರೋತ್ಸಾಹ ಸಿಕ್ಕಿತು, ನಮ್ಮ ನಂಬಿಕೆ ಬಲವಾಯಿತು.” ಈ ಇಬ್ಬರೂ ಸಹೋದರಿಯರು ಮೂರು ದಿನಗಳ ಬಳಿಕ ತಮ್ಮ ಕೆಲಸದ ಸ್ಥಳಕ್ಕೆ ಹಿಂದಿರುಗಿದರು. ಆಶ್ಚರ್ಯ ಏನೆಂದರೆ ಅವರು ಅಷ್ಟು ದಿನ ಇಲ್ಲದ್ದನ್ನು ಅವರ ಧಣಿ ಗಮನಿಸಿರಲೇ ಇಲ್ಲ!

3 ಮುಂಚಿನಿಂದಲೂ ಯೆಹೋವನ ಜನರು ಒಟ್ಟಾಗಿ ಸೇರಿಬರುವ ಸಂದರ್ಭಗಳನ್ನು ಎದುರುನೋಡಿದ್ದಾರೆ. ಉದಾಹರಣೆಗಾಗಿ, ಆರಂಭದ ಕ್ರೈಸ್ತರು ಯೆಹೋವನನ್ನು ಆರಾಧಿಸಲಿಕ್ಕಾಗಿ ಮತ್ತು ಆತನ ಕುರಿತು ಕಲಿಯಲಿಕ್ಕಾಗಿ ಕೂಡಿಬರಲು ತವಕಪಡುತ್ತಿದ್ದರು. (ಅ. ಕಾ. 2:42) ನೀವು ಸಹ ಅವರಂತೆಯೇ ಕೂಟಗಳಿಗೆ ಹೋಗಲು ಎದುರುನೋಡುತ್ತೀರಿ ನಿಜ. ಆದರೆ ಬೇರೆಲ್ಲ ಸಹೋದರ ಸಹೋದರಿಯರಂತೆ ನಿಮಗೂ ಪ್ರತಿ ವಾರ ತಪ್ಪದೇ ಕೂಟಗಳಿಗೆ ಹೋಗಲು ಕಷ್ಟ ಆಗುತ್ತಿರಬಹುದು. ಬಹುಶಃ ನೀವು ಹೊರಗೆ ತುಂಬ ತಾಸು ದುಡಿಯಬೇಕಾಗುತ್ತದೆ. ಇಲ್ಲವೇ ಮಾಡಲು ಬೇರೆಷ್ಟೋ ಕೆಲಸಗಳಿರಬಹುದು. ಅಥವಾ ನಿಮಗೆ ಯಾವಾಗಲೂ ತುಂಬ ಆಯಾಸ ಆಗುತ್ತಿರಬಹುದು. ಹೀಗಿರುವಾಗ ಕೂಟಗಳಿಗೆ ತಪ್ಪದೆ ಹೋಗಲಿಕ್ಕಾಗಿ ನಮ್ಮಿಂದಾದ ಎಲ್ಲವನ್ನು ಮಾಡಲು ಯಾವುದು ಸಹಾಯಕರ?[1] ಕೂಟಗಳಿಗೆ ತಪ್ಪದೇ ಹಾಜರಾಗುವಂತೆ ನಮ್ಮ ಬೈಬಲ್‌ ವಿದ್ಯಾರ್ಥಿಗಳನ್ನೂ ಇತರರನ್ನೂ ಹೇಗೆ ಪ್ರೋತ್ಸಾಹಿಸಬಹುದು? ನಾವು ಕೂಟಗಳಿಗೆ ಹಾಜರಾಗುವುದು (1) ನಮಗೆ ಏಕೆ ಪ್ರಯೋಜನಕರ, (2) ಇತರರಿಗೆ ಹೇಗೆ ಸಹಾಯಮಾಡುತ್ತದೆ, (3) ಯೆಹೋವನಿಗೆ ಏಕೆ ಸಂತೋಷ ತರುತ್ತದೆ ಎಂದು ಈ ಲೇಖನ ವಿವರಿಸಲಿದೆ.[2]

ಕೂಟಗಳು ನಮಗೆ ಪ್ರಯೋಜನಕರ

4. ಯೆಹೋವನ ಬಗ್ಗೆ ಕಲಿಯಲು ಕೂಟಗಳು ಹೇಗೆ ಸಹಾಯಮಾಡುತ್ತವೆ?

4 ಕೂಟಗಳಿಂದ ಶಿಕ್ಷಣ ಪಡೆಯುತ್ತೇವೆ. ಪ್ರತಿಯೊಂದು ಕೂಟದಲ್ಲಿ ನಾವು ಯೆಹೋವನ ಬಗ್ಗೆ ಹೆಚ್ಚನ್ನು ಕಲಿಯುತ್ತೇವೆ. ಉದಾಹರಣೆಗೆ, ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕವನ್ನು ಸಭಾ ಬೈಬಲ್‌ ಅಧ್ಯಯನದಲ್ಲಿ ಚರ್ಚಿಸಿದಾಗ ಯೆಹೋವನ ಬಗ್ಗೆ ಹಲವಾರು ವಿಷಯಗಳನ್ನು ಕಲಿತೆವು. ಆ ಕೂಟದಲ್ಲಿ ಯೆಹೋವನ ಗುಣಗಳ ಬಗ್ಗೆ ಚರ್ಚಿಸುತ್ತಿದ್ದಾಗ ಮತ್ತು ನಿಮ್ಮ ಸಹೋದರ ಸಹೋದರಿಯರು ಆತನ ಬಗ್ಗೆ ಅವರ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸಿದಾಗ ನಿಮಗೆ ಹೇಗನಿಸಿತು? ಯೆಹೋವನ ಮೇಲೆ ನಿಮಗಿರುವ ಪ್ರೀತಿ ಹೆಚ್ಚಾಯಿತಲ್ಲವೇ? ಕೂಟಗಳಲ್ಲಿ ಭಾಷಣಗಳಿಗೆ ಮತ್ತು ಅಭಿನಯಗಳಿಗೆ ಗಮನಕೊಡುವ ಮೂಲಕ, ಬೈಬಲ್‌ ವಚನಗಳ ಓದುವಿಕೆಗೆ ಕಿವಿಗೊಟ್ಟು ಕೇಳುವ ಮೂಲಕ ಬೈಬಲಿನ ಬಗ್ಗೆಯೂ ಹೆಚ್ಚನ್ನು ಕಲಿಯುತ್ತೇವೆ. (ನೆಹೆ. 8:8) ಪ್ರತಿ ವಾರದ ಬೈಬಲ್‌ ವಾಚನ ಭಾಗವನ್ನು ನಾವು ಓದಿ ತಯಾರಿಸುವಾಗ ಮತ್ತು ಬೇರೆಯವರು ಅದೇ ಭಾಗದಿಂದ ಕಲಿತಂಥ ವಿಷಯಗಳನ್ನು ಕೂಟದಲ್ಲಿ ಹೇಳುವಾಗ ನಮಗೆ ಸಿಗುವ ಆಧ್ಯಾತ್ಮಿಕ ರತ್ನಗಳ ಕುರಿತೂ ಯೋಚಿಸಿ!

5. ಬೈಬಲಿನಿಂದ ಕಲಿತ ವಿಷಯಗಳನ್ನು ಅನ್ವಯಿಸಲು ಮತ್ತು ಸಾರುವ ವಿಧದಲ್ಲಿ ಪ್ರಗತಿಮಾಡಲು ಕೂಟಗಳು ನಿಮಗೆ ಹೇಗೆ ಸಹಾಯಮಾಡಿವೆ?

5 ಕೂಟಗಳು ನಮಗೆ ಬೈಬಲಿನ ತತ್ವಗಳನ್ನು ಜೀವನದ ಎಲ್ಲ ಕ್ಷೇತ್ರಗಳಲ್ಲಿ ಅನ್ವಯಿಸಲು ಸಹ ಕಲಿಸುತ್ತವೆ. (1 ಥೆಸ. 4:9, 10) ಉದಾಹರಣೆಗೆ, ಯಾವುದಾದರೊಂದು ನಿರ್ದಿಷ್ಟ ಕಾವಲಿನಬುರುಜು ಅಧ್ಯಯನವು ನಿಮಗೆ ಯೆಹೋವನ ಸೇವೆಯಲ್ಲಿ ಇನ್ನೂ ಹೆಚ್ಚನ್ನು ಮಾಡಲು, ನಿಮ್ಮ ಪ್ರಾರ್ಥನೆಗಳ ಗುಣಮಟ್ಟವನ್ನು ಹೆಚ್ಚಿಸಲು, ಇಲ್ಲವೇ ಒಬ್ಬ ಸಹೋದರ ಅಥವಾ ಸಹೋದರಿಯನ್ನು ಕ್ಷಮಿಸಿಬಿಡಲು ಪ್ರಚೋದಿಸಿದೆಯಾ? ‘ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ’ ಕೂಟವು ಸುವಾರ್ತೆ ಸಾರುವುದು ಹೇಗೆ ಮತ್ತು ಬೈಬಲಿನ ಸತ್ಯವನ್ನು ಅರ್ಥಮಾಡಿಕೊಳ್ಳಲು ಇತರರಿಗೆ ನೆರವಾಗುವುದು ಹೇಗೆ ಎಂದು ಕಲಿಸಿಕೊಡುತ್ತದೆ.—ಮತ್ತಾ. 28:19, 20.

6. ಕೂಟಗಳು ನಮಗೆ ಹೇಗೆ ಪ್ರೋತ್ಸಾಹ ನೀಡುತ್ತವೆ ಮತ್ತು ನಮ್ಮನ್ನು ಹೇಗೆ ಬಲಗೊಳಿಸುತ್ತವೆ?

6 ಕೂಟಗಳು ನಮ್ಮನ್ನು ಪ್ರೋತ್ಸಾಹಿಸುತ್ತವೆ. ಸೈತಾನನ ಲೋಕವು ನಮ್ಮ ನಂಬಿಕೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತದೆ. ನಮಗೆ ತುಂಬ ಮಾನಸಿಕ ಒತ್ತಡ ತಂದು ನಿರುತ್ಸಾಹಗೊಳ್ಳುವಂತೆ ಮಾಡುತ್ತದೆ. ಆದರೆ ನಮ್ಮ ಕೂಟಗಳು ನಮ್ಮನ್ನು ಹುರಿದುಂಬಿಸುತ್ತವೆ. ಯೆಹೋವನ ಸೇವೆ ಮಾಡುತ್ತಾ ಇರಲು ನಮ್ಮನ್ನು ಬಲಗೊಳಿಸುತ್ತವೆ. (ಅ. ಕಾರ್ಯಗಳು 15:30-32 ಓದಿ.) ಬೈಬಲಿನ ಪ್ರವಾದನೆಗಳು ಹೇಗೆ ಸತ್ಯವಾಗಿವೆ ಎಂದು ಕೂಟಗಳಲ್ಲಿ ಅನೇಕ ಸಲ ಚರ್ಚಿಸುತ್ತೇವೆ. ಇದು, ಭವಿಷ್ಯದ ಕುರಿತು ಯೆಹೋವನು ಕೊಟ್ಟಿರುವ ಮಾತು ನಿಜವಾಗುವುದೆಂಬ ಭರವಸೆಯನ್ನು ನಮ್ಮಲ್ಲಿ ಇನ್ನಷ್ಟು ಹೆಚ್ಚಿಸುತ್ತದೆ. ನಮ್ಮ ಸಹೋದರ ಸಹೋದರಿಯರು ಸಹ ನಮಗೆ ಪ್ರೋತ್ಸಾಹ ಕೊಡುತ್ತಾರೆ. ಅವರು ಕೊಡುವ ಭಾಷಣಗಳು, ಉತ್ತರಗಳು ಮತ್ತು ಹೃದಯದಿಂದ ಹಾಡುವ ಗೀತೆಗಳು ನಮ್ಮನ್ನು ಉತ್ತೇಜಿಸುತ್ತವೆ. (1 ಕೊರಿಂ. 14:26) ಕೂಟಕ್ಕೆ ಮುಂಚೆ ಮತ್ತು ನಂತರ ನಾವು ಅವರೊಂದಿಗೆ ಮಾತಾಡುವಾಗಲೂ ನಮಗೆ ಚೈತನ್ಯ ಸಿಗುತ್ತದೆ. ಏಕೆಂದರೆ ನಮ್ಮ ಬಗ್ಗೆ ನಿಜವಾದ ಕಾಳಜಿಯಿರುವ ಸ್ನೇಹಿತರು ಅವರಾಗಿದ್ದಾರೆ.—1 ಕೊರಿಂ. 16:17, 18.

7. ನಾವು ಕೂಟಗಳಲ್ಲಿ ಹಾಜರಿರುವುದು ಏಕೆ ತುಂಬ ಪ್ರಾಮುಖ್ಯ?

7 ಕೂಟಗಳಲ್ಲಿ ನಮಗೆ ಪವಿತ್ರಾತ್ಮದ ಸಹಾಯ ಸಿಗುತ್ತದೆ. ಸಭೆಗಳನ್ನು ಮಾರ್ಗದರ್ಶಿಸಲು ಯೇಸು ಪವಿತ್ರಾತ್ಮವನ್ನು ಬಳಸುತ್ತಾನೆ. ಆದ್ದರಿಂದ ‘ಪವಿತ್ರಾತ್ಮವು ಸಭೆಗಳಿಗೆ ಹೇಳುವುದನ್ನು ಕೇಳಬೇಕೆಂದು’ ಆತನು ಹೇಳಿದ್ದಾನೆ. (ಪ್ರಕ. 2:7) ಪವಿತ್ರಾತ್ಮವು ನಮಗೆ ಪ್ರಲೋಭನೆಗಳನ್ನು ತಿರಸ್ಕರಿಸಲು, ಧೈರ್ಯದಿಂದ ಸಾರಲು ಮತ್ತು ಒಳ್ಳೇ ನಿರ್ಣಯಗಳನ್ನು ಮಾಡಲು ನೆರವು ನೀಡುತ್ತದೆ. ಆದ್ದರಿಂದಲೇ ನಾವು ಕೂಟಗಳಿಗೆ ಹೋಗಲು ನಮ್ಮಿಂದಾದ ಎಲ್ಲ ಪ್ರಯತ್ನ ಮಾಡಬೇಕು. ಅಲ್ಲಿ ನಮಗೆ ಪವಿತ್ರಾತ್ಮದ ಸಹಾಯ ಸಿಗುತ್ತದೆ.

ಕೂಟಗಳಲ್ಲಿ ಇತರರಿಗೆ ಸಹಾಯಮಾಡುತ್ತೇವೆ

8. ನಾವು ಕೂಟಗಳಲ್ಲಿ ಇರುವುದನ್ನು, ಉತ್ತರ ಕೊಡುವುದನ್ನು, ಗೀತೆ ಹಾಡುವುದನ್ನು ನಮ್ಮ ಸಹೋದರರು ನೋಡುವಾಗ ಅವರಿಗೆ ಹೇಗೆ ಸಹಾಯವಾಗುತ್ತದೆ? (“ಕೂಟಕ್ಕೆ ಹಾಜರಾದ ನಂತರ ಯಾವಾಗಲೂ ಒಳ್ಳೇದೆನಿಸುತ್ತದೆ” ಚೌಕ ಸಹ ನೋಡಿ.)

8 ಕೂಟಗಳಲ್ಲಿ ಸಹೋದರ ಸಹೋದರಿಯರಿಗೆ ನಮ್ಮ ಪ್ರೀತಿ ತೋರಿಸಲು ಅವಕಾಶಗಳು ಸಿಗುತ್ತವೆ. ನಮ್ಮ ಸಭೆಯಲ್ಲಿ ಅನೇಕರು ಕಷ್ಟ ಸಮಸ್ಯೆಗಳನ್ನು ತಾಳಿಕೊಳ್ಳುತ್ತಿದ್ದಾರೆ. ಹಾಗಾಗಿ ‘ನಾವು ಪರಸ್ಪರ ಹಿತಚಿಂತಕರಾಗಿರಬೇಕು’ ಎಂದು ಅಪೊಸ್ತಲ ಪೌಲನು ಬರೆದನು. (ಇಬ್ರಿ. 10:24, 25) ಕೂಟಕ್ಕೆ ಬಂದು ಒಬ್ಬರನ್ನೊಬ್ಬರು ಪ್ರೋತ್ಸಾಹಿಸುವ ಮೂಲಕ ಸಹೋದರರ ಕಡೆಗೆ ನಮಗಿರುವ ಕಾಳಜಿಯನ್ನು ತೋರಿಸುತ್ತೇವೆ. ನಮ್ಮ ಸಹೋದರರ ಜೊತೆಗಿರಲು, ಅವರೊಟ್ಟಿಗೆ ಮಾತಾಡಲು ನಮಗೆ ಮನಸ್ಸಿದೆ ಮತ್ತು ಅವರ ಕ್ಷೇಮದ ಬಗ್ಗೆ ನಮಗೆ ಚಿಂತೆಯಿದೆಯೆಂದು ತೋರಿಸಿಕೊಡುತ್ತೇವೆ. ನಾವು ಉತ್ತರಗಳನ್ನು ಕೊಡುವಾಗ ಮತ್ತು ಹೃದಯದಿಂದ ಗೀತೆಗಳನ್ನು ಹಾಡುವಾಗ ಅವರಿಗೆ ಪ್ರೋತ್ಸಾಹ ಸಿಗುತ್ತದೆ.—ಕೊಲೊ. 3:16.

9, 10. (ಎ) ಯೋಹಾನ 10:16⁠ರಲ್ಲಿರುವ ಯೇಸುವಿನ ಮಾತುಗಳು ಸಹೋದರರೊಂದಿಗೆ ಕೂಡಿಬರುವುದು ಪ್ರಾಮುಖ್ಯವೆಂದು ಅರ್ಥಮಾಡಿಕೊಳ್ಳಲು ಹೇಗೆ ಸಹಾಯಮಾಡುತ್ತವೆ? ವಿವರಿಸಿ. (ಬಿ) ನಾವು ಕೂಟಗಳಿಗೆ ತಪ್ಪದೇ ಹಾಜರಾದರೆ ಕುಟುಂಬದಿಂದ ತಿರಸ್ಕರಿಸಲ್ಪಟ್ಟವರಿಗೆ ಹೇಗೆ ಸಹಾಯವಾಗುತ್ತದೆ?

9 ಕೂಟಗಳಿಗೆ ಬರುವುದರಿಂದ ನಾವೆಲ್ಲರೂ ಐಕ್ಯವಾಗಿರಲು ಆಗುತ್ತದೆ. (ಯೋಹಾನ 10:16 ಓದಿ.) ಯೇಸು ತನ್ನನ್ನು ಒಬ್ಬ ಕುರುಬನಿಗೆ ಮತ್ತು ತನ್ನ ಹಿಂಬಾಲಕರನ್ನು ಕುರಿಹಿಂಡಿಗೆ ಹೋಲಿಸಿದನು. ಸ್ವಲ್ಪ ಯೋಚಿಸಿ: ಎರಡು ಕುರಿಗಳು ಗುಡ್ಡದ ಮೇಲೆ, ಇನ್ನೆರಡು ಕುರಿಗಳು ಕೆಳಗೆ ತಗ್ಗಿನಲ್ಲಿ, ಒಂದು ಕುರಿ ಬೇರೆಲ್ಲೊ ಇದ್ದರೆ ಈ ಐದು ಕುರಿಗಳನ್ನು ‘ಹಿಂಡು’ ಎಂದು ಕರೆಯಲಿಕ್ಕಾಗುತ್ತದಾ? ಇಲ್ಲ. ಕುರಿಹಿಂಡು ಎನ್ನುವಾಗ ಕುರಿಗಳೆಲ್ಲ ಯಾವಾಗಲೂ ಒಟ್ಟೊಟ್ಟಿಗೆ ಇರುತ್ತವೆ. ಕುರುಬನನ್ನು ಹಿಂಬಾಲಿಸುತ್ತವೆ. ಹಾಗೆಯೇ, ನಾವು ಕೂಟಗಳಿಗೆ ಹೋಗದೆ ಸಹೋದರರಿಂದ ದೂರವಿದ್ದರೆ ಹಿಂಡಿನ ಭಾಗವಾಗುವುದಿಲ್ಲ. ಹಾಗಾಗಿ ‘ಒಂದೇ ಹಿಂಡಿನ’ ಭಾಗವಾಗಲು ಮತ್ತು ‘ಒಬ್ಬನೇ ಕುರುಬನನ್ನು’ ಹಿಂಬಾಲಿಸಲು ನಾವು ಸಹೋದರರೊಟ್ಟಿಗೆ ಕೂಡಿಬರಬೇಕು.

10 ಪ್ರೀತಿತುಂಬಿದ ಕುಟುಂಬದಂತೆ ಐಕ್ಯವಾಗಿರಲು ನಮ್ಮ ಕೂಟಗಳು ಸಹಾಯಮಾಡುತ್ತವೆ. (ಕೀರ್ತ. 133:1) ಸಭೆಯಲ್ಲಿ ಕೆಲವರನ್ನು ಅವರ ಕುಟುಂಬದವರು ಅಂದರೆ ಅಪ್ಪಅಮ್ಮ, ಅಣ್ಣತಮ್ಮ, ಅಕ್ಕತಂಗಿಯರು ತಿರಸ್ಕರಿಸಿದ್ದಾರೆ. ಆದರೆ ಇಂಥವರಿಗೆ ಅವರನ್ನು ಪ್ರೀತಿಸುವ, ಕಾಳಜಿವಹಿಸುವ ಒಂದು ಕುಟುಂಬವನ್ನು ಕೊಡುವೆನೆಂದು ಯೇಸು ಮಾತು ಕೊಟ್ಟಿದ್ದಾನೆ. (ಮಾರ್ಕ 10:29, 30) ನೀವು ಕೂಟಗಳಿಗೆ ತಪ್ಪದೇ ಹಾಜರಾದರೆ ಇಂಥವರಿಗೆ ಅಪ್ಪಅಮ್ಮ, ಅಣ್ಣತಮ್ಮ, ಅಕ್ಕತಂಗಿಯರಂತೆ ಆಗುವಿರಿ. ಇದರ ಬಗ್ಗೆ ಯೋಚಿಸುವಾಗ ನಮಗೆ ಎಲ್ಲ ಕೂಟಗಳಿಗೆ ಹೋಗಲು ಆದಷ್ಟು ಹೆಚ್ಚು ಪ್ರಯತ್ನ ಮಾಡುವಂತೆ ಮನಸ್ಸಾಗುತ್ತದೆ ಅಲ್ಲವೇ?

ಕೂಟಕ್ಕೆ ಹಾಜರಾದ ನಂತರ ಯಾವಾಗಲೂ ಒಳ್ಳೇದೆನಿಸುತ್ತದೆ

“ಆರೋಗ್ಯ ಸಮಸ್ಯೆಯಿಂದಾಗಿ ನನಗೆ ಈಗೀಗ ಕೂಟಗಳಿಗೆ ಹೋಗಲು ತುಂಬ ಕಷ್ಟವಾಗುತ್ತಿದೆ. ಆದರೆ ಒಮ್ಮೆ ಅಲ್ಲಿ ಹೋದ ಮೇಲೆ ಯೆಹೋವನು ತಯಾರಿಸಿರುವ ಆಶ್ಚರ್ಯಕರ ಆಧ್ಯಾತ್ಮಿಕ ಊಟ ನನ್ನನ್ನು ತುಂಬ ಸಂತೋಷಪಡಿಸುತ್ತದೆ. ತೀವ್ರ ಮಂಡಿ ನೋವು, ಹೃದ್ರೋಗ, ಮಧುಮೇಹ ನನಗಿದ್ದರೂ ಕೂಟಕ್ಕೆ ಬರುವಾಗ ಇರುವ ಬಳಲಿಕೆ ಕೂಟ ಮುಗಿಸಿ ಹೋಗುವಾಗ ಯಾವಾಗಲೂ ಕಾಣೆಯಾಗಿ ತುಂಬ ಒಳ್ಳೇದೆನಿಸುತ್ತದೆ.

“‘ವಿನಮ್ರನ ಪ್ರಾರ್ಥನೆ’ ಎಂಬ 68⁠ನೇ ಗೀತೆಯನ್ನು ಸಭೆಯಲ್ಲಿ ಎಲ್ಲರೂ ಹಾಡಿದ್ದನ್ನು ನಾನು ಮೊದಲ ಬಾರಿ ಕೇಳಿಸಿಕೊಂಡಾಗ ಕಣ್ಣೀರು ತುಂಬಿ ಬಂತು. ಅದು ಸುಮಧುರವಾದ ಗೀತೆ! ನನ್ನ ಶ್ರವಣ ಸಾಧನ ಪ್ರತಿಯೊಬ್ಬರ ಸ್ವರವನ್ನು ಸ್ಪಷ್ಟವಾಗಿ ಹೆಕ್ಕಿ ತೆಗೆಯಿತು. ಆಗ ನಾನೂ ಅವರ ಜೊತೆಗೂಡಿ ಹಾಡಿದೆ. ಆಹಾ, ಅಲ್ಲಿರುವುದು ಎಷ್ಟೊಂದು ಆಹ್ಲಾದಕರ!”—ಜಾರ್ಜ್‌, ವಯಸ್ಸು 58.

ಕೂಟಗಳಿಗೆ ಹಾಜರಾಗುವ ಮೂಲಕ ಯೆಹೋವನಿಗೆ ಸಂತೋಷ ತರುತ್ತೇವೆ

11. ಯೆಹೋವನಿಗೆ ಸಲ್ಲಬೇಕಾದದ್ದನ್ನು ಸಲ್ಲಿಸಲು ಕೂಟಗಳು ಹೇಗೆ ಸಹಾಯಮಾಡುತ್ತವೆ?

11 ಕೂಟಗಳಲ್ಲಿರುವಾಗ ನಾವು ಯೆಹೋವನಿಗೆ ಸಲ್ಲಬೇಕಾದದ್ದನ್ನು ಸಲ್ಲಿಸುತ್ತೇವೆ. ಯೆಹೋವನು ನಮ್ಮ ಸೃಷ್ಟಿಕರ್ತನಾಗಿರುವ ಕಾರಣ ನಾವಾತನಿಗೆ ಕೃತಜ್ಞತೆ, ಸ್ತುತಿ, ಘನಮಾನ ಸಲ್ಲಿಸಬೇಕು. (ಪ್ರಕಟಣೆ 7:12 ಓದಿ.) ಇದನ್ನು ನಾವು ಕೂಟಗಳಲ್ಲಿ ಪ್ರಾರ್ಥನೆ ಮಾಡುವಾಗ, ಸ್ತುತಿಗೀತೆಗಳನ್ನು ಹಾಡುವಾಗ, ಆತನ ಕುರಿತು ಮಾತಾಡುವಾಗ ಸಲ್ಲಿಸುತ್ತೇವೆ. ಹೀಗೆ ಯೆಹೋವನನ್ನು ಆರಾಧಿಸಲು ಪ್ರತಿ ವಾರ ನಮಗೆ ಎಷ್ಟೊಂದು ಅದ್ಭುತ ಅವಕಾಶಗಳಿವೆ!

12. ಕೂಟಗಳಿಗೆ ಹಾಜರಾಗಬೇಕೆಂಬ ಆಜ್ಞೆಗೆ ನಾವು ವಿಧೇಯರಾದಾಗ ಯೆಹೋವನಿಗೆ ಹೇಗನಿಸುತ್ತದೆ?

12 ಯೆಹೋವನು ನಮ್ಮನ್ನು ಸೃಷ್ಟಿಸಿರುವುದರಿಂದ ನಾವಾತನಿಗೆ ವಿಧೇಯರಾಗಬೇಕು. ನಾವು ಸಭೆಯಾಗಿ ಕೂಡಿಬರಬೇಕೆಂದು, ಅಂತ್ಯ ಹತ್ತಿರವಾಗುತ್ತಿದ್ದಂತೆ ಅದನ್ನು ಇನ್ನಷ್ಟು ಹೆಚ್ಚಾಗಿ ಮಾಡಬೇಕೆಂದು ಆತನೇ ಆಜ್ಞೆ ಕೊಟ್ಟಿದ್ದಾನೆ. ಆ ಆಜ್ಞೆಯನ್ನು ನಾವು ಪಾಲಿಸುವಾಗ ಯೆಹೋವನಿಗೆ ಸಂತೋಷವಾಗುತ್ತದೆ. (1 ಯೋಹಾ. 3:22) ಕೂಟಗಳಿಗೆ ಹಾಜರಾಗಲು ನಾವು ನಿಜವಾಗಿಯೂ ಇಷ್ಟಪಡುತ್ತೇವೆ ಎಂಬುದನ್ನು ಆತನು ಗಮನಿಸುತ್ತಾನೆ. ಅಲ್ಲಿರಲು ನಾವು ಮಾಡುವ ಎಲ್ಲ ಪ್ರಯತ್ನಗಳನ್ನು ಅಮೂಲ್ಯವಾಗಿ ಕಾಣುತ್ತಾನೆ.—ಇಬ್ರಿ. 6:10.

13, 14. ಯೆಹೋವನಿಗೆ, ಯೇಸುವಿಗೆ ಹತ್ತಿರವಾಗಲು ಕೂಟಗಳು ನಮಗೆ ಹೇಗೆ ಸಹಾಯಮಾಡುತ್ತವೆ?

13 ಕೂಟಗಳಿಗೆ ಹಾಜರಾಗುವ ಮೂಲಕ ನಾವು ಯೆಹೋವನಿಗೆ, ಆತನ ಮಗನಿಗೆ ಇನ್ನಷ್ಟು ಹತ್ತಿರವಾಗಲು ಬಯಸುತ್ತೇವೆಂದು ಯೆಹೋವನಿಗೆ ತೋರಿಸುತ್ತೇವೆ. ಕೂಟಗಳಲ್ಲಿ ಬೈಬಲಿನ ಅಧ್ಯಯನ ಮಾಡುತ್ತೇವೆ. ಹೀಗೆ ನಮ್ಮ ನಡತೆ ಹೇಗಿರಬೇಕು, ನಾವು ಹೇಗೆ ಜೀವಿಸಬೇಕೆಂದು ಯೆಹೋವನಿಂದಲೇ ಕಲಿಯುತ್ತೇವೆ. (ಯೆಶಾ. 30:20, 21) ಯೆಹೋವನ ಆರಾಧಕರಲ್ಲದವರು ಕೂಟಗಳಿಗೆ ಬಂದಾಗ ಅವರಲ್ಲಿ ಕೆಲವರು, “ದೇವರು ನಿಜವಾಗಿಯೂ ನಿಮ್ಮ ಮಧ್ಯೆ ಇದ್ದಾನೆ” ಎಂದು ಹೇಳುತ್ತಾರೆ. (1 ಕೊರಿಂ. 14:23-25) ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ನಮ್ಮ ಕೂಟಗಳನ್ನು ನಿರ್ದೇಶಿಸುತ್ತಿದ್ದಾನೆ. ನಾವಲ್ಲಿ ಏನು ಕಲಿಯುತ್ತೇವೊ ಅದು ಆತನಿಂದಲೇ ಬರುತ್ತದೆ. ಆದ್ದರಿಂದ ನಾವು ಕೂಟಗಳಲ್ಲಿ ಯೆಹೋವನ ಮಾತುಗಳಿಗೆ ಕಿವಿಗೊಡುತ್ತೇವೆ, ನಮ್ಮನ್ನು ಆತನು ಎಷ್ಟು ಪ್ರೀತಿಸುತ್ತಾನೆಂದು ಗ್ರಹಿಸುತ್ತೇವೆ ಮತ್ತು ಆತನಿಗೆ ಇನ್ನಷ್ಟು ಹತ್ತಿರವಾಗುತ್ತೇವೆ.

14 ಸಭೆಯ ನಾಯಕನಾದ ಯೇಸು, “ನನ್ನ ಹೆಸರಿನಲ್ಲಿ ಎಲ್ಲಿ ಇಬ್ಬರು ಅಥವಾ ಮೂವರು ಕೂಡಿಬರುತ್ತಾರೋ ಅಲ್ಲಿ ಅವರ ಮಧ್ಯೆ ನಾನಿದ್ದೇನೆ” ಎಂದು ಹೇಳಿದ್ದಾನೆ. (ಮತ್ತಾ. 18:20) ಅಲ್ಲದೆ ಯೇಸು ಸಭೆಗಳ ಮಧ್ಯೆ ‘ನಡೆದಾಡುತ್ತಾನೆ’ ಎಂದೂ ಬೈಬಲ್‌ ಹೇಳುತ್ತದೆ. (ಪ್ರಕ. 1:20–2:1) ಹಾಗಾಗಿ ಯೆಹೋವನು ಮತ್ತು ಯೇಸು ಕೂಟಗಳಲ್ಲಿ ನಮ್ಮ ಮಧ್ಯೆ ಇದ್ದು ನಮ್ಮನ್ನು ಬಲಪಡಿಸುತ್ತಾರೆ ಎಂಬುದರಲ್ಲಿ ಸ್ವಲ್ಪವೂ ಸಂಶಯವಿಲ್ಲ. ನೀವು ಆತನಿಗೂ ಆತನ ಮಗನಿಗೂ ಹತ್ತಿರವಾಗಲು ನಿಮ್ಮಿಂದಾದ ಎಲ್ಲವನ್ನು ಮಾಡುವುದನ್ನು ನೋಡುವಾಗ ಯೆಹೋವನಿಗೆ ಹೇಗನಿಸುತ್ತದೆಂದು ನೆನಸುತ್ತೀರಿ?

15. ಕೂಟಗಳಿಗೆ ಹಾಜರಾಗುವುದರಿಂದ ಯೆಹೋವನಿಗೆ ವಿಧೇಯರಾಗಲು ಇಷ್ಟಪಡುತ್ತೇವೆಂದು ಆತನಿಗೆ ಹೇಗೆ ತೋರಿಸುತ್ತೇವೆ?

15 ಕೂಟಗಳಿಗೆ ಹಾಜರಾಗುವ ಮೂಲಕ ನಾವು ಯೆಹೋವನಿಗೆ ವಿಧೇಯರಾಗಲು ಇಷ್ಟಪಡುತ್ತೇವೆಂದು ಆತನಿಗೆ ತೋರಿಸುತ್ತೇವೆ. ತಾನು ಹೇಳಿದ್ದನ್ನೇ ಮಾಡಬೇಕೆಂದು ಯೆಹೋವನು ನಮಗೆ ಒತ್ತಾಯ ಮಾಡುವುದಿಲ್ಲ. (ಯೆಶಾ. 43:23) ಹಾಗಾಗಿ ಕೂಟಗಳಿಗೆ ಹಾಜರಾಗಬೇಕೆಂಬ ಆತನ ಆಜ್ಞೆಗೆ ನಾವು ಸ್ವಇಷ್ಟದಿಂದ ವಿಧೇಯರಾದರೆ ಆತನನ್ನು ಪ್ರೀತಿಸುತ್ತೇವೆಂದು ತೋರಿಸುತ್ತೇವೆ. ಅಲ್ಲದೆ ನಮಗೆ ಆಜ್ಞೆ ಕೊಡುವ ಹಕ್ಕು ಆತನಿಗಿದೆ ಎಂಬ ನಂಬಿಕೆಯನ್ನು ಪ್ರದರ್ಶಿಸುತ್ತೇವೆ. (ರೋಮ. 6:17) ಉದಾಹರಣೆಗೆ, ಮಾಲೀಕನು ಕೂಟಗಳ ದಿನ ಜಾಸ್ತಿ ಹೊತ್ತು ಕೆಲಸ ಮಾಡಬೇಕೆಂದು ಹೇಳಿದರೆ ಏನು ಮಾಡುತ್ತೇವೆ? ಅವನು ಹೇಳಿದಂತೆ ಮಾಡಿ ಆಗಾಗ ಕೂಟಗಳನ್ನು ತಪ್ಪಿಸುತ್ತೇವಾ? ಅಥವಾ ಸರ್ಕಾರವು ಯೆಹೋವನನ್ನು ಆರಾಧಿಸಲು ಕೂಡಿಬರಬಾರದೆಂದು ಆಜ್ಞೆ ಹೊರಡಿಸಿದರೆ? ಒಂದುವೇಳೆ ಕೂಡಿಬಂದರೆ ದಂಡ ತೆರಬೇಕು, ಜೈಲಿಗೆ ಹೋಗಬೇಕು, ಅದಕ್ಕಿಂತಲೂ ಹೆಚ್ಚಿನ ಶಿಕ್ಷೆ ಸಿಗುತ್ತದೆ ಎಂದು ಹೇಳಿದರೆ ನೀವೇನು ಮಾಡುತ್ತೀರಿ? ಅಥವಾ ಕೆಲವೊಮ್ಮೆ ಕೂಟಗಳಿಗೆ ಹೋಗುವುದಕ್ಕಿಂತಲೂ ಬೇರೇನಾದರೂ ಮಾಡಬೇಕೆಂದು ನಾವು ಇಷ್ಟಪಡಬಹುದು. ಇಂಥ ಪ್ರತಿಯೊಂದು ಸಂದರ್ಭದಲ್ಲಿ ಏನು ಮಾಡಬೇಕೆಂದು ನಾವೇ ನಿರ್ಣಯಿಸಬೇಕು. (ಅ. ಕಾ. 5:29) ಆದರೆ ನಾವು ಯೆಹೋವನಿಗೆ ವಿಧೇಯರಾಗಲು ಆರಿಸಿಕೊಂಡರೆ ಆತನು ತುಂಬ ಸಂತೋಷಪಡುತ್ತಾನೆ.—ಜ್ಞಾನೋ. 27:11.

ಸಹೋದರರೊಟ್ಟಿಗೆ ಕೂಡಿಬರುವುದನ್ನು ಮುಂದುವರಿಸಿ

16, 17. (ಎ) ಒಂದನೇ ಶತಮಾನದ ಕ್ರೈಸ್ತರಿಗೆ ಕೂಟಗಳು ತುಂಬ ಮುಖ್ಯವಾಗಿದ್ದವೆಂದು ನಮಗೆ ಹೇಗೆ ಗೊತ್ತು? (ಬಿ) ಕ್ರೈಸ್ತ ಕೂಟಗಳ ಬಗ್ಗೆ ಸಹೋದರ ಜಾರ್ಜ್‌ ಗ್ಯಾಂಗಸ್‌ ಅವರ ಮನೋಭಾವ ಹೇಗಿತ್ತು?

16 ಕ್ರೈಸ್ತರು ಕ್ರಿ.ಶ. 33⁠ರ ಪಂಚಾಶತ್ತಮ ಹಬ್ಬದಂದು ಒಟ್ಟಾಗಿ ಕೂಡಿಬಂದಿದ್ದರು. ನಂತರವೂ ಯೆಹೋವನ ಆರಾಧನೆಗಾಗಿ ಕ್ರಮವಾಗಿ ಕೂಡಿಬರುವುದನ್ನು ಮುಂದುವರಿಸಿದರು. ಅವರು “ಅಪೊಸ್ತಲರ ಬೋಧನೆಗೆ, ಪರಸ್ಪರವಾಗಿ ಹಂಚಿಕೊಳ್ಳುವುದಕ್ಕೆ . . . ತಮ್ಮನ್ನು ಮೀಸಲಾಗಿಟ್ಟುಕೊಳ್ಳುತ್ತಿದ್ದರು.” (ಅ. ಕಾ. 2:42) ರೋಮ್‌ ಸರ್ಕಾರದಿಂದ ಹಾಗೂ ಯೆಹೂದಿ ಧಾರ್ಮಿಕ ಮುಖಂಡರಿಂದ ಹಿಂಸೆ, ವಿರೋಧಗಳು ಬಂದಾಗಲೂ ಸಭೆಯಾಗಿ ಒಟ್ಟು ಸೇರುವುದನ್ನು ಕ್ರೈಸ್ತರು ನಿಲ್ಲಿಸಲಿಲ್ಲ. ಇದು ಸುಲಭವಾಗಿರದಿದ್ದರೂ ಕೂಟಗಳಿಗೆ ಹಾಜರಾಗುವುದನ್ನು ಮುಂದುವರಿಸಲು ಅವರು ತಮ್ಮಿಂದಾದ ಎಲ್ಲ ಪ್ರಯತ್ನ ಮಾಡಿದರು.

17 ಇಂದು ಸಹ ಯೆಹೋವನ ಸೇವಕರು ಕೂಟಗಳಿಗಾಗಿ ತುಂಬ ಕೃತಜ್ಞರಾಗಿದ್ದಾರೆ. ಅಲ್ಲಿರಲು ಬಹಳ ಸಂತೋಷಪಡುತ್ತಾರೆ. 22ಕ್ಕಿಂತ ಹೆಚ್ಚು ವರ್ಷ ಆಡಳಿತ ಮಂಡಲಿಯ ಸದಸ್ಯರಾಗಿದ್ದ ಜಾರ್ಜ್‌ ಗ್ಯಾಂಗಸ್‌ ಹೀಗೆ ಹೇಳಿದರು: “ನನ್ನ ಜೀವನದಲ್ಲಿ ತುಂಬ ಸಂತೋಷ ಕೊಡುವ ಒಂದು ವಿಷಯ ಅಂದರೆ ಸಹೋದರರೊಂದಿಗೆ ಕೂಡಿಬರುವುದೇ. ಅವರ ಸಹವಾಸ ನನಗೆ ಪ್ರೋತ್ಸಾಹದ ಚಿಲುಮೆಯಾಗಿದೆ. ಸಾಧ್ಯ ಆದಾಗೆಲ್ಲಾ ರಾಜ್ಯ ಸಭಾಗೃಹಕ್ಕೆ ಎಲ್ಲರಿಗಿಂತ ಮೊದಲು ಬಂದು ಕೊನೆಗೆ ಹೋಗಲು ನನಗೆ ತುಂಬ ಇಷ್ಟ. ದೇವಜನರೊಂದಿಗೆ ಮಾತಾಡುವಾಗ ನನ್ನ ಮನಸ್ಸಲ್ಲಿ ಏನೋ ಒಂಥರಾ ಸಂತೋಷ. ಅವರ ಮಧ್ಯೆ ಇರುವಾಗ ಮನೆಮಂದಿ ಜತೆ ಇರುವಂತೆ ಅನಿಸುತ್ತದೆ. ಇದು ನಿಜಕ್ಕೂ ಆಧ್ಯಾತ್ಮಿಕ ಪರದೈಸ್‌.” ಅವರು ಕೂಡಿಸಿ ಹೇಳಿದ್ದು: “ಕೂಟಗಳಿಗೆ ಹಾಜರಾಗುವುದು ನನ್ನ ಹೃದಯದಾಳದ ಆಸೆ, ಅಪೇಕ್ಷೆಯಾಗಿದೆ.”

18. (ಎ) ಕೂಟಗಳ ಬಗ್ಗೆ ನಿಮಗೆ ಯಾವ ಮನೋಭಾವವಿದೆ? (ಬಿ) ನೀವೇನು ಮಾಡಲು ದೃಢನಿಶ್ಚಯ ಮಾಡಿದ್ದೀರಿ?

18 ಯೆಹೋವನನ್ನು ಆರಾಧಿಸಲು ಕೂಡಿಬರುವುದರ ಬಗ್ಗೆ ನಿಮಗೂ ಅಂಥದ್ದೇ ಮನೋಭಾವ ಇದೆಯಾ? ಹಾಗಾದರೆ ಕಷ್ಟವಾದರೂ ಸರಿ ಕೂಟಗಳಿಗೆ ಹೋಗಿ ನಿಮ್ಮ ಸಹೋದರರೊಂದಿಗೆ ಇರಲು ನಿಮ್ಮಿಂದಾಗುವ ಎಲ್ಲವನ್ನೂ ಮಾಡಿ. “ಯೆಹೋವನೇ, ನಿನ್ನ ನಿವಾಸವು ನನಗೆ ಎಷ್ಟೋ ಪ್ರಿಯ” ಎಂದು ರಾಜ ದಾವೀದನು ಹೇಳಿದನು. ಈ ಮನೋಭಾವ ನಿಮ್ಮಲ್ಲೂ ಇದೆಯೆಂದು ಯೆಹೋವನಿಗೆ ತೋರಿಸಿ.—ಕೀರ್ತ. 26:8.

^ [1] (ಪ್ಯಾರ 3) ನಮ್ಮ ಕೆಲವು ಸಹೋದರ ಸಹೋದರಿಯರು ಕಾಯಿಲೆ ಬಿದ್ದಿರುವುದರಿಂದ ಅಥವಾ ಇತರ ಕೈಮೀರಿದ ಪರಿಸ್ಥಿತಿಗಳಿಂದ ಪ್ರತಿ ವಾರ ಕೂಟಗಳಿಗೆ ಹೋಗಲು ಆಗಲಿಕ್ಕಿಲ್ಲ. ಅವರು ತಮ್ಮ ಪರಿಸ್ಥಿತಿ ಯೆಹೋವನಿಗೆ ಅರ್ಥವಾಗುತ್ತದೆ ಮತ್ತು ಆತನನ್ನು ಆರಾಧಿಸಲು ಮಾಡುವ ಎಲ್ಲ ಪ್ರಯತ್ನವನ್ನು ಮೆಚ್ಚುತ್ತಾನೆಂದು ಮನಸ್ಸಿನಲ್ಲಿಡಬೇಕು. ಅವರು ಕೂಟದ ಕಾರ್ಯಕ್ರಮಗಳನ್ನು ಫೋನ್‌ ಮೂಲಕ ಕೇಳಿಸಿಕೊಳ್ಳಲು ಹಿರಿಯರು ಏರ್ಪಾಡು ಮಾಡಬಹುದು ಅಥವಾ ರೆಕಾರ್ಡ್‌ ಮಾಡಿ ಕೊಡಬಹುದು.

^ [2] (ಪ್ಯಾರ 3) “ಕೂಟಗಳಿಗೆ ಹಾಜರಾಗಲು ಕಾರಣಗಳು” ಚೌಕ ನೋಡಿ.

ಸಭಾ ಕೂಟ ನಡೆಯುತ್ತಾ ಇದೆ

ಕೂಟಗಳಿಗೆ ಹಾಜರಾಗಲು ಕಾರಣಗಳು

  1. ಯೆಹೋವನು ನಮಗೆ ಅಲ್ಲಿ ಕಲಿಸುತ್ತಾನೆ.

  2. ನಮಗೆ ಪ್ರೋತ್ಸಾಹ ಸಿಗುತ್ತದೆ.

  3. ದೇವರ ಪವಿತ್ರಾತ್ಮದ ಸಹಾಯ ಪಡೆಯುತ್ತೇವೆ.

  4. ನಮ್ಮ ಸಹೋದರರಿಗೆ ಪ್ರೀತಿ ತೋರಿಸಲು ಅವಕಾಶಗಳು ಸಿಗುತ್ತವೆ.

  5. ನಮ್ಮ ಸಹೋದರರೊಟ್ಟಿಗೆ ಐಕ್ಯವಾಗಿರಲು ಆಗುತ್ತದೆ.

  6. ಯೆಹೋವನಿಗೆ ಸಲ್ಲಬೇಕಾದದ್ದನ್ನು ಸಲ್ಲಿಸಲು ಆಗುತ್ತದೆ.

  7. ಯೆಹೋವನಿಗೂ ಆತನ ಮಗನಿಗೂ ಹತ್ತಿರವಾಗಿರಲು ಬಯಸುತ್ತೇವೆಂದು ಯೆಹೋವನಿಗೆ ತೋರಿಸುತ್ತೇವೆ.

  8. ಯೆಹೋವನಿಗೆ ವಿಧೇಯರಾಗಲು ಇಷ್ಟಪಡುತ್ತೇವೆಂದು ಆತನಿಗೆ ತೋರಿಸುತ್ತೇವೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ