ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g94 10/8 ಪು. 17-19
  • ದೇವರ ಕುರಿತು ಏಕೆ ಮಾತಾಡಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ಕುರಿತು ಏಕೆ ಮಾತಾಡಬೇಕು?
  • ಎಚ್ಚರ!—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕೆಲವರು ಹಿಂಜರಿಯುವುದರ ಕಾರಣ
  • ಒಂದು ಕ್ರೈಸ್ತ ಹಂಗು
  • ನೀವು ಸಾಧಿಸಬಲ್ಲ ವಿಷಯ
  • ಸುವಾರ್ತೆಯನ್ನು ನೀಡುವದು—ಯುವಕರಿಗೆ
    1991 ನಮ್ಮ ರಾಜ್ಯದ ಸೇವೆ
  • ಯುವ ಜನರೇ—ಯೆಹೋವನು ನಿಮ್ಮ ಕೆಲಸವನ್ನು ಮರೆಯಲಾರನು!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ನಾನು ದೀಕ್ಷಾಸ್ನಾನಕ್ಕೆ ಸಿದ್ಧಳಾಗಿದ್ದೇನೊ?
    ಎಚ್ಚರ!—1992
  • ಯುವ ಜನರೇ—ಯೆಹೋವನ ಹೃದಯವನ್ನು ಸಂತೋಷಪಡಿಸಿರಿ
    1993 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಎಚ್ಚರ!—1994
g94 10/8 ಪು. 17-19

ಯುವ ಜನರು ಪ್ರಶ್ನಿಸುವುದು . . .

ದೇವರ ಕುರಿತು ಏಕೆ ಮಾತಾಡಬೇಕು?

“ಪ್ರತಿಯೊಬ್ಬರಿಗೂ ತಮ್ಮ ಸ್ವಂತ ಧರ್ಮವಿದೆ. ನಿಮ್ಮ ದೇವರಲ್ಲಿ ನಂಬಿಕೆಯಿಡುವಂತೆ ಇತರ ಜನರನ್ನು ನೀವು ಬಲಾತ್ಕರಿಸಬಾರದು.”—14 ವರ್ಷ ಪ್ರಾಯದ ರಾಶೀಷ್‌, ಗಯಾನ.

“ದೇವರ ಕುರಿತು ಮಾತಾಡುವುದರಿಂದ ನನಗೆ ದೊರೆಯುವ ಅಪಹಾಸ್ಯದ ಕುರಿತು ನಾನು ಸಂಕೋಚಪಡುವ ಕಾರಣದಿಂದ, ನಾನು ಹಿಂಜರಿಯುತ್ತೇನೆ.”—17 ವರ್ಷ ಪ್ರಾಯದ ರೋಹನ್‌, ಗಯಾನ.

“ದೇವರು ನಮ್ಮ ಸೃಷ್ಟಿಕರ್ತನಾಗಿರುವುದರಿಂದ ಮತ್ತು ಆತನು ನಮಗೆ ಜೀವವನ್ನು ಕೊಟ್ಟದ್ದರಿಂದ, ನಾವು ಆತನ ಕುರಿತು ಮಾತಾಡಬೇಕು.”—13 ವರ್ಷ ಪ್ರಾಯದ ಮಾರ್ಕೊ, ಜರ್ಮನಿ.

ಯುವ ಜನರ ಒಂದು ಗುಂಪು ಮಾತಾಡುತ್ತಿರುವುದನ್ನು ಜಾಗ್ರತೆಯಿಂದ ಆಲಿಸಿರಿ ಮತ್ತು ನೀವು ಬಹುಶಃ ಈ ದುಃಖಕರವಾದ ನಿರ್ಣಯಕ್ಕೆ ಬರುವಿರಿ: ಸಾಮಾನ್ಯವಾಗಿ, ಯುವ ಜನರ ನಡುವೆ ಸಂಭಾಷಣೆಗಾಗಿ ಅತ್ಯಂತ ಜನಪ್ರಿಯ ವಿಷಯವು ದೇವರು ಆಗಿರುವುದಿಲ್ಲ ನಿಶ್ಚಯ. ಕ್ರೀಡೆಗಳು, ಉಡುಪುಗಳು, ಇತ್ತೀಚಿಗಿನ ಚಲನಚಿತ್ರಗಳು, ಅಥವಾ ವಿರುದ್ಧ ಲಿಂಗ ಜಾತಿಯ ವಿಷಯಗಳನ್ನು ನೀವು ಪ್ರಸ್ತಾಪಿಸುವುದಾದರೆ, ನೀವು ಸಾಮಾನ್ಯವಾಗಿ ಒಂದು ಸ್ವಾರಸ್ಯಕರವಾದ ಚರ್ಚೆಯನ್ನು ಆರಂಭಿಸುವಿರಿ. ದೇವರ ಕುರಿತು ಪ್ರಸ್ತಾಪಿಸಲು ಸಾಹಸ ಮಾಡುವುದಾದರೂ, ಮಂಜಿನಷ್ಟು ದಟ್ಟವಾದ ವಿಕಾರ ನಿಶ್ಶಬ್ದವು ಬೇಗನೆ ವ್ಯಾಪಿಸಬಲ್ಲದು.

ಕೆಲವು ಯುವ ಜನರು ಸುಲಭವಾಗಿ ದೇವರಲ್ಲಿ ನಂಬಿಕೆಯನ್ನಿಡುವುದಿಲ್ಲ. ಅವರು ಆತನನ್ನು ನೋಡಸಾಧ್ಯವಿರದ ಕಾರಣದಿಂದಾಗಿ, ಆತನು ಅಸ್ತಿತ್ವದಲ್ಲಿಲ್ಲ ಎಂದು ಅವರು ತರ್ಕಿಸಬಹುದು—ಆತನ ಕುರಿತು ಮಾತಾಡುವುದು ಸಮಯವನ್ನು ವ್ಯರ್ಥ ಮಾಡುವಂತೆ ತೋರಬಹುದು. ಆದಾಗ್ಯೂ, ಯುವ ಜನರ ನಡುವೆ ನಾಸ್ತಿಕರು ಖಂಡಿತವಾಗಿಯೂ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಒಂದು ಗ್ಯಾಲಪ್‌ ಸಮೀಕ್ಷೆಗನುಸಾರ, ಅಮೆರಿಕದ ಸುಮಾರು 95 ಪ್ರತಿಶತ ಜನರು ದೇವರಲ್ಲಿ ನಂಬಿಕೆ ಇಡುತ್ತಾರೆ. ವಾಸ್ತವವಾಗಿ, ಗ್ಯಾಲಪ್‌ ಮುಕ್ತಾಯಗೊಳಿಸಿದ್ದು: “ಅನೇಕ ಯುವ ಜನರಿಗೆ ದೇವರ ಕುರಿತಾದ ಅವರ ಭಾವನೆಯು ಅಸ್ಪಷ್ಟವಾಗಿದ ಸೈದ್ಧಾಂತಿಕ ಮೂಲ ತತ್ವವಾಗಿಲ್ಲ, ಬದಲಿಗೆ ಅವರ ಚಟುವಟಿಕೆಗಳನ್ನು ಗಮನಿಸುವ ಮತ್ತು ಅದಕ್ಕನುಗುಣವಾಗಿ ಅವರನ್ನು ಬಹುಮಾನಿಸುವ ಅಥವಾ ಶಿಕ್ಷೆ ನೀಡುವ ಒಬ್ಬ ವೈಯಕ್ತಿಕ ದೇವರಾಗಿದ್ದಾನೆ.” ಹಾಗಾದರೆ, ಅಷ್ಟೊಂದು ಯುವ ಜನರು ಅವರೇನನ್ನು ನಂಬುತ್ತಾರೊ ಅದರ ಕುರಿತು ಮಾತಾಡಲು ಏಕೆ ಅನಿಶ್ಚಿತರಾಗಿರುತ್ತಾರೆ?

ಕೆಲವರು ಹಿಂಜರಿಯುವುದರ ಕಾರಣ

ನಂಬಿಕೆಯ ವಿಷಯಗಳ ಕುರಿತು ಮಾತಾಡುವುದು ಅಸಭ್ಯ ಶಿಷ್ಟಾಚಾರವಾಗಿದೆಯೆಂದು ಮತ್ತು ಆ ಧಾರ್ಮಿಕ ಆಲೋಚನೆಗಳು ಗುಪ್ತವಾಗಿ ಇಡಲ್ಪಡತಕ್ಕದ್ದು ಎಂದು ಅನೇಕರು ಭಾವಿಸುವಂತೆ ತೋರುತ್ತದೆ. ದೇವರ ಕುರಿತು ಚರ್ಚಿಸುವುದರ ಬರಿಯ ಕಲ್ಪನೆಯಿಂದಲೇ ಕೆಲವು ಯುವ ಜನರು ಪೇಚಾಟಕ್ಕೊಳಗಾಗುವಂತೆ ಭಾಸವಾಗುತ್ತದೆ. ‘ಹಾಗೆ ಮಾಡುವುದು ಯುವ ಜನರ ನಡುವೆ ಅಂಗೀಕಾರಾರ್ಹವಾಗಿರುವುದಿಲ್ಲ’ ಎಂದು ಅವರು ತರ್ಕಿಸುತ್ತಾರೆ.

ನಿಮ್ಮ ಸಮಾನಸ್ಥರ ನೋಟವು ಏನೇ ಇರಲಿ, ಈ ವಿವಾದಾಂಶದ ಕುರಿತು ನಿಮ್ಮ ಸ್ಥಾನವೇನು? ನೀವು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿ ಬೆಳೆಸಲ್ಪಟ್ಟಿರುವಲ್ಲಿ, ಈ ಪ್ರಶ್ನೆಯು ವಿಶೇಷವಾಗಿ ಸೂಕ್ತವಾದದ್ದಾಗಿದೆ. ಏಕೆ? ಯಾಕೆಂದರೆ ಸಾಕ್ಷಿನೀಡುವುದು, ದೇವರ ಕುರಿತು ಇತರರಿಗೆ ಹೇಳುವುದು, ಆ ನಂಬಿಕೆಯ ಮುಖ್ಯಾಂಶವಾಗಿದೆ!—ಯೆಶಾಯ 43:9, 10; ಮತ್ತಾಯ 24:14.

ಹಾಗಿದ್ದಾಗ್ಯೂ, ಅನೇಕವೇಳೆ ತಾವು ಎದುರಿಸುವ ವಿರೋಧದಿಂದ ನಿರಾಶೆಗೊಂಡು, ಕೆಲವು ಸಾಕ್ಷಿ ಯುವ ಜನರು ಸಾರ್ವಜನಿಕವಾಗಿ ಸಾರುವ ಕೆಲಸದಲ್ಲಿ ಭಾಗವಹಿಸುವುದರಿಂದ ಹಿಂಜರಿಯುತ್ತಾರೆ—ಅಥವಾ ತಮ್ಮ ಹೆತ್ತವರ ಪ್ರೇರಿಸುವಿಕೆಯ ಕಾರಣದಿಂದ ಮಾತ್ರ ಭಾಗವಹಿಸುತ್ತಾರೆ. ಇತರರು ಸಾರುವ ಕೆಲಸದಲ್ಲಿ ಪಾಲ್ಗೊಳ್ಳುತ್ತಾರೆ, ಆದರೆ ತಾವು ಹಾಗೆ ಮಾಡುವುದನ್ನು ತಮ್ಮ ಶಾಲಾ ಸ್ನೇಹಿತರಲ್ಲಿ ಯಾರೂ ನೋಡಬಾರದೆಂದು ಗುಪ್ತವಾಗಿ ಹಾರೈಸುತ್ತಾರೆ. ಶಾಲೆಯಲ್ಲಿ ಕೆಲವರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಗುಪ್ತವಾಗಿಡಲು ಪ್ರಯತ್ನಿಸುತ್ತಾರೆ. ಅನೇಕವೇಳೆ ಇದು ಅವರು ಶಾಲಾ ಸ್ನೇಹಿತರಿಂದ ಅಪಹಾಸ್ಯಕ್ಕೀಡಾಗುವ ಭಯದಿಂದಲೇ. “ದೇವರ ಕುರಿತು ಮಾತಾಡಲು ನಾನು ಗಾಬರಿಗೊಳ್ಳುತ್ತಿದ್ದೆ” ಎಂದು ಯುವಕ ರೈಅನ್‌ ಒಪ್ಪಿಕೊಳ್ಳುತ್ತಾನೆ, “ಯಾಕೆಂದರೆ ನನ್ನ ಸಹವಾಸಿಗಳು ನನ್ನನ್ನು ಕೆಟ್ಟ ಹೆಸರುಗಳಿಂದ ಕೂಗುತ್ತಿದ್ದರು ಮತ್ತು ಸಂಭಾಷಣೆಯನ್ನು ಮುಂದುವರಿಸುವ ಧೈರ್ಯ ನನಗೆ ಇರಲಿಲ್ಲ.”

ತದನಂತರ ತಾವು ಸಂಪೂರ್ಣವಾಗಿ ಬೈಬಲಿನ ಮಟ್ಟಗಳಿಗನುಸಾರ ಜೀವಿಸಲು ಸಾಧ್ಯವಿಲ್ಲವೆಂದು ಭಯಪಡುವ ಕಾರಣದಿಂದ ಹಿಂಜರಿಯುವವರೂ ಇದ್ದಾರೆ. “ಯೌವನ ಪ್ರಾಯದಲ್ಲಿ ಸಂಭವಿಸಬಹುದಾದ ಇಚ್ಛೆಗಳ” ಆಕರ್ಷಣೆಯನ್ನು ಅನುಭವಿಸುತ್ತಾ, ಒಂದು ವೇಳೆ ಅವರು ಯಾವುದಾದರೂ ತಪ್ಪನ್ನು ಮಾಡುವುದಾದರೆ, ಆದದರಿಂದ ತಮ್ಮನ್ನು ಕ್ರೈಸ್ತರೋಪಾದಿ ಗುರುತಿಸಿಕೊಳ್ಳದಿರುವುದು ಅತ್ಯುತ್ತಮವಾದದ್ದಾಗಿರಬಹುದು ಎಂದು ಅವರು ಪರ್ಯಾಲೋಚಿಸುತ್ತಾರೆ.—2 ತಿಮೊಥೆಯ 2:22.

ತಾವು ಕೊರತೆಯುಳ್ಳವರು ಎಂದು ಭಾವಿಸುವುದರಿಂದ ಕೆಲವರು ದೇವರ ಕುರಿತು ಮಾತಾಡುವುದಿಲ್ಲ. ಹತ್ತೊಂಬತ್ತು ವರ್ಷ ಪ್ರಾಯದ ವಿಲ್ಟನ್‌ ಇದನ್ನು ಈ ರೀತಿಯಲ್ಲಿ ವಿವರಿಸುತ್ತಾನೆ: “ದೇವರ ಕುರಿತು ನನ್ನ ಜೊತೆ ಕೆಲಸಗಾರರೊಂದಿಗೆ ಮಾತಾಡುವುದನ್ನು ನಾನು ಕಷ್ಟವಾದದ್ದಾಗಿ ಕಂಡುಕೊಂಡೆ, ಯಾಕಂದರೆ ನಾನು ಆತನ ಕುರಿತು ಹೇಳಿದ ವಿಷಯಗಳಿಗಾಗಿ ಸಮರ್ಪಕವಾದ ಕಾರಣವನ್ನು ಒದಗಿಸಲು ನಾನು ಅರ್ಹನಾಗಿಲ್ಲ ಎಂದು ನನಗನಿಸಿತು. ನನ್ನ ನಂಬಿಕೆಗಳ ಕುರಿತು ಸವಾಲನ್ನು ಎದುರಿಸುವುದಾದರೆ, ನನ್ನಲ್ಲಿ ಸಮಾಧಾನಕರ ಉತ್ತರವು ಸಿಗುತ್ತಿರಲಿಲ್ಲವೆಂದು ನಾನು ಭಾವಿಸಿದೆ.”

ಒಂದು ಕ್ರೈಸ್ತ ಹಂಗು

ತದ್ರೀತಿಯ ಕಾರಣಗಳಿಗಾಗಿ ದೇವರ ಕುರಿತು ಮಾತಾಡುವುದರಿಂದ ನೀವು ಹಿಂಜರಿದಿದ್ದೀರೊ? ಹಾಗಿರುವಲ್ಲಿ, ನೀವು ಒಬ್ಬಂಟಿಗರಾಗಿಲ್ಲ. ಇತರ ಯುವ ಜನರು ಅದೇರೀತಿಯ ಭಾವನೆಗಳೊಂದಿಗೆ ಹೋರಾಡಿದ್ದಾರೆ. ಆದಾಗ್ಯೂ, ಹಾಗೆ ಮಾಡುವುದರಿಂದ ಒಬ್ಬನನ್ನು ನಿರುತ್ಸಾಹಗೊಳಿಸಬಹುದಾದ ಎಲ್ಲಾ ವಿಷಯಗಳ ಹೊರತಾಗಿಯೂ, ದೇವರ ಕುರಿತು ಇತರರೊಂದಿಗೆ ಮಾತಾಡಲು ಒತ್ತಾಯಪಡಿಸುವ ಕಾರಣಗಳು ಇವೆ ಎಂಬುದನ್ನು ಅನೇಕರು ಗಣ್ಯಮಾಡತೊಡಗಿದ್ದಾರೆ. ಇವುಗಳಲ್ಲಿ ಕೆಲವು ಯಾವುವು?

ಆರಂಭದಲ್ಲಿ ಪ್ರಸ್ತಾಪಿಸಲ್ಪಟ್ಟ ಯೌವನಸ್ಥ ಮಾರ್ಕೊ, ದೇವರು “ನಮ್ಮ ಸೃಷ್ಟಿಕರ್ತನಾಗಿದ್ದಾನೆ ಮತ್ತು ನಾವು ನಮ್ಮ ಜೀವಿತಗಳನ್ನು ಆತನಿಗೆ ಕೊಡುವ ಹಂಗಿನಲ್ಲಿದ್ದೇವೆ” ಎಂದು ಹೇಳಿದಾಗ, ಅದನ್ನು ಒಳ್ಳೆಯದಾಗಿ ಸೂಚಿಸಿದನು. (ಪ್ರಕಟನೆ 4:11, NW) ಹೌದು, ಜೀವವು ಅಮೂಲ್ಯವಾದ ಬಹುಮಾನವಾಗಿದೆ. ದೇವರ ಕುರಿತು ಕೀರ್ತನೆಗಾರನು ಹೇಳಿದ್ದು: “ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ.” (ಕೀರ್ತನೆ 36:9) ಈ ಬಹುಮಾನವನ್ನು ಪಡೆದುಕೊಂಡಿರುವುದರಿಂದ, ಅದಕ್ಕಾಗಿ ನೀವು ಕೃತಜ್ಞತೆಯನ್ನು ತೋರಿಸಬಾರದೊ?

ಇತರರ ಸಮ್ಮುಖದಲ್ಲಿ ಯೆಹೋವ ದೇವರನ್ನು ಸ್ತುತಿಸುವುದು ಕೃತಜ್ಞತೆಯನ್ನು ತೋರಿಸುವುದರ ಒಂದು ವಿಧಾನವಾಗಿದೆ. ಸೂರ್ಯ, ಚಂದ್ರ, ಮಳೆ, ನಾವು ಉಸಿರಾಡುವ ಗಾಳಿ, ಮತ್ತು ನಾವು ಸೇವಿಸುವ ಆಹಾರ ಎಲ್ಲವನ್ನು ಉತ್ಪತ್ತಿ ಮಾಡಿದಾತನು ಆತನೇ ಆಗಿದ್ದಾನೆ. (ಅ. ಕೃತ್ಯಗಳು 14:15-17) ‘ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಇಳಿದುಬರುತ್ತವೆ’ ಎಂದು ಶಿಷ್ಯ ಯಾಕೋಬನು ಹೇಳಿದನು. (ಯಾಕೋಬ 1:17) ಈ ಬಹುಮಾನಗಳಿಗಾಗಿ ನೀವು ದೇವರಿಗೆ ಉಪಕಾರ ಸಲ್ಲಿಸುತ್ತೀರೊ? (ಕೊಲೊಸ್ಸೆ 3:15) ನಿಮ್ಮ ಉಪಕಾರವನ್ನು ವ್ಯಕ್ತಪಡಿಸಲು, ದೇವರ ಕುರಿತು ಮಾತಾಡುವುದಕ್ಕಿಂತಲೂ ಹೆಚ್ಚು ಉತ್ತಮವಾದ ಮಾರ್ಗ ಯಾವುದಿದೆ?—ಲೂಕ 6:45.

ಆದರೂ, ವಾಸ್ತವವಾಗಿ, ನಾವು ಆತನ ಕುರಿತು ಮಾತಾಡುವಂತೆ ದೇವರು ಆಜ್ಞಾಪಿಸುತ್ತಾನೆ. ಆತನ ಮಗನಾದ ಯೇಸು ಕ್ರಿಸ್ತನು ಕ್ರೈಸ್ತರಿಗೆ ಆಜ್ಞೆಯನ್ನಿತ್ತದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ.” (ಮತ್ತಾಯ 28:19, 20) ಈ ಕೆಲಸದಲ್ಲಿ ಭಾಗವಹಿಸುವ ಜವಾಬ್ದಾರಿಯಿಂದ ಯುವ ಜನರು ಪ್ರತ್ಯೇಕಿಸಲ್ಪಡುವುದಿಲ್ಲ. ಕೀರ್ತನೆಗಾರನು ಆಜ್ಞೆಯನ್ನಿತ್ತದ್ದು: “ಪ್ರಾಯಸ್ಥರಾದ ಸ್ತ್ರೀಪುರುಷರೂ ಮುದುಕರೂ ಹುಡುಗರೂ ಯೆಹೋವನನ್ನು ಕೊಂಡಾಡಲಿ. ಆತನ ನಾಮವೊಂದೇ ಮಹತ್ವವುಳ್ಳದ್ದು; ಆತನ ಪ್ರಭಾವವು ಭೂಮ್ಯಾಕಾಶಗಳಲ್ಲಿ ಮೆರೆಯುತ್ತದೆ.” (ಕೀರ್ತನೆ 148:7, 12, 13) ಆದರೆ ನೀವು ಈ ನೇಮಕವನ್ನು ಒಂದು ಹೊರೆಯೋಪಾದಿ ವೀಕ್ಷಿಸಬೇಕಾದ ಅಗತ್ಯವಿಲ್ಲ. ನಿಜವಾಗಿ, ಅದು ಒಂದು ಸುಯೋಗವಾಗಿದೆ—ವಾಸ್ತವವಾಗಿ ನೀವು ‘ದೇವರ ಜೊತೆ ಕೆಲಸಗಾರ’ರಲ್ಲಿ ಒಬ್ಬರಾಗಬಲ್ಲಿರಿ.—1 ಕೊರಿಂಥ 3:9.

ನೀವು ಅರ್ಹರೆಂದು ನಿಮಗನಿಸದಿರುವಲ್ಲಿ ಆಗೇನು? ಬೈಬಲಿನ ಸಮಯಗಳಲ್ಲಿ, ಪ್ರವಾದಿ ಯೆರೆಮೀಯನಿಗೆ ಅಂತಹ ಭಾವನೆಗಳಿದ್ದವು. “ಅಯ್ಯೋ, ಕರ್ತನಾದ ಯೆಹೋವನೇ, ನಾನು ಮಾತು ಬಲ್ಲವನಲ್ಲ, ಬಾಲಕನು ಎಂದು ಬಿನ್ನವಿಸಿದೆನು. ಆಗ ಯೆಹೋವನು ನನಗೆ—ಬಾಲಕನೆನ್ನ ಬೇಡ; ಯಾರ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಅವರೆಲ್ಲರ ಬಳಿಗೆ ನೀನು ಹೋಗೇ ಹೋಗುವಿ; ನಾನು ಆಜ್ಞಾಪಿಸುವದನ್ನೆಲ್ಲಾ ನುಡಿಯಲೇ ನುಡಿಯುವಿ.” (ಯೆರೆಮೀಯ 1:6, 7) ಯೆಹೋವನ ಸಹಾಯದಿಂದ ಯೆರೆಮೀಯನು 40 ವರ್ಷಗಳ ವರೆಗೆ ಅದನ್ನೇ ಮಾಡಿದನು!

ತದ್ರೀತಿಯಲ್ಲಿ ಇಂದು ಕ್ರೈಸ್ತರೊಂದಿಗೆ, “ಸಮರ್ಪಕವಾಗಿ ಅರ್ಹರಾಗಿರುವುದು ದೇವರಿಂದ ಫಲಿಸುತ್ತದೆ.” (2 ಕೊರಿಂಥ 3:5, NW) ನೀವು ಸಹಜವಾಗಿ ಸಂಕೋಚ ಪ್ರಕೃತಿಯವರು, ಮೌನಿಗಳು ಆಗಿರುವುದಾದರೂ, ಮಾತಾಡಲು ಧೈರ್ಯವನ್ನು ಹೊಂದುವಂತೆ ದೇವರು ನಿಮಗೆ ಸಹಾಯ ಮಾಡಬಲ್ಲನು. ದೇವರ ವಾಕ್ಯದ ಒಬ್ಬ ಬೋಧಕರೋಪಾದಿ ಹೆಚ್ಚು “ಸಮರ್ಪಕವಾಗಿ ಅರ್ಹರಾಗು”ವಂತೆ ನಿಮಗೆ ಸಹಾಯ ಮಾಡಬಲ್ಲ ಒದಗಿಸುವಿಕೆಗಳು ಕ್ರೈಸ್ತ ಸಭೆಯೊಳಗಿವೆ. ಸ್ವಲ್ಪ ವೈಯಕ್ತಿಕ ಸಹಾಯವು ನಿಮಗೆ ಅಗತ್ಯವಿದೆಯೆಂದು ನಿಮಗನಿಸುವುದಾದರೆ, ಸಭೆಯ ಮೇಲ್ವಿಚಾರಕರಲ್ಲಿ ಒಬ್ಬರೊಂದಿಗೆ ಏಕೆ ಮಾತಾಡಬಾರದು? ವೈಯಕ್ತಿಕ ಬೈಬಲ್‌ ಅಭ್ಯಾಸದ ಒಂದು ಕಾಲತಖ್ತೆಯನ್ನು ವಿಕಸಿಸುವುದರ ಅಥವಾ ಹೆಚ್ಚು ಅನುಭವವುಳ್ಳ ಯಾರೊಂದಿಗಾದರೂ ಕೆಲಸ ಮಾಡುವುದರ ಕುರಿತಾದ ಒಂದು ವಿಷಯವು ಅದಾಗಿರಬಹುದು.

ನೀವು ಸಾಧಿಸಬಲ್ಲ ವಿಷಯ

ದೇವರ ಕುರಿತು ಮಾತಾಡುವುದು, ಸಾಧನೆಯ ಒಂದು ನೈಜ ಪರಿಜ್ಞಾನವನ್ನು ನಿಮಗೆ ನೀಡಬಲ್ಲದು. ಒಂದು ವಿಷಯವೇನಂದರೆ, ನಮ್ಮ ಸಮಾನಸ್ಥರಲ್ಲಿ ಅನೇಕರು ಜೀವಿತದ ಸಮಸ್ಯೆಗಳ ಉತ್ತರಗಳಿಗಾಗಿ ಹುಡುಕುತ್ತಿದ್ದಾರೆ, ಸಹಾಯಕ್ಕಾಗಿ ಬಹುಮಟ್ಟಿಗೆ ಮೊರೆಯಿಡುತ್ತಿದ್ದಾರೆ. ಅವರಿಗೆ ಮಾರ್ಗದರ್ಶನವಿಲ್ಲ ಮತ್ತು ಭವಿಷ್ಯದ ಕುರಿತು ಸ್ಪಷ್ಟವಾಗಿದ ವೀಕ್ಷಣವಿಲ್ಲ. ಅವರು ಆಶ್ಚರ್ಯಗೊಳ್ಳುವುದು, ‘ನಾವು ಏಕೆ ಇಲ್ಲಿದ್ದೇವೆ? ನಾವೆಲ್ಲಿಗೆ ಹೋಗುತ್ತಿದ್ದೇವೆ? ಲೋಕವು ತೊಂದರೆಯಿಂದ ಅಷ್ಟೊಂದು ಭರಿತವಾಗಿರುವುದು ಏಕೆ?’ ಒಬ್ಬ ಕ್ರೈಸ್ತರೋಪಾದಿ ಉತ್ತರಗಳು ನಿಮ್ಮಲ್ಲಿವೆ, ಮತ್ತು ಅಂತಹ ತಿಳಿವಳಿಕೆಯನ್ನು ನಿಮ್ಮ ಸಮಾನಸ್ಥರಿಗೆ ತಿಳಿಸುವ ಅತ್ಯುತ್ಕೃಷ್ಟ ಸ್ಥಾನದಲ್ಲಿ ನೀವಿರುವುದು ಸಂಭವನೀಯ. ಅವರು ನಿಮಗೆ ಸಮಾನಾನುಭವಿಗಳು ಮತ್ತು ಬಹುಶಃ ವಯಸ್ಕರೊಂದಿಗೆ ಮಾತಾಡುವುದಕ್ಕೆ ಬದಲಾಗಿ ತಮ್ಮ ಸ್ವಂತ ಪ್ರಾಯದ ಒಬ್ಬರೊಂದಿಗೆ ಮಾತಾಡುವರು.

ನೀವು ಆಗಿಂದಾಗ್ಗೆ ತಿರಸ್ಕಾರವನ್ನು ಎದುರಿಸುವಿರಿ ನಿಜ. ಆದರೆ ಬೈಬಲಿನ ಸಂದೇಶವನ್ನು ಸ್ವೀಕರಿಸುವ ವ್ಯಕ್ತಿಗಳನ್ನೂ ನೀವು ಕಂಡುಕೊಳ್ಳಬಹುದು. ಯುವ ಸಾಕ್ಷಿಯೊಬ್ಬಳು, ಬಸ್ಸಿನಲ್ಲಿ ಯುವ ಜನರು ಪ್ರಶ್ನಿಸುವುದು—ಕಾರ್ಯಸಾಧ್ಯ ಉತ್ತರಗಳು ಎಂಬ ಪುಸ್ತಕದ ತನ್ನ ವೈಯಕ್ತಿಕ ಪ್ರತಿಯನ್ನು ಓದುತ್ತಾ ಕುಳಿತಳು.a ಅವಳ ಪಕ್ಕ ಕುಳಿತಿದ್ದ ಹುಡುಗನೊಬ್ಬನು ಅವಳೊಂದಿಗೆ ಓದಲಾರಂಭಿಸಿದನು. “ಇದೊಂದು ಒಳ್ಳೆಯ ಪುಸ್ತಕ!” ಎಂದು ಹುಡುಗನು ಉದ್ಗರಿಸಿದನು. “ಈ ಪುಸ್ತಕವು ದೇವರ ಕುರಿತು ಬಹಳವಾಗಿ ಮಾತಾಡುತ್ತದೆ. ಅಧಿಕಾಂಶ ಜನರು ಧರ್ಮದಲ್ಲಿ ಆಸಕ್ತರಾಗಿರುವುದಿಲ್ಲ.” ಯುವ ಸಾಕ್ಷಿಯು, ದೇವರ ಹೆಸರಿನ ಕುರಿತಾದ ವಿಷಯದ ಮೇಲೆ ವ್ಯಾಪಕವಾದ ಚರ್ಚೆಯನ್ನು ಮಾಡಲಿಕ್ಕಾಗಿ ಒಂದು ಸಂದರ್ಭದೋಪಾದಿ ಇದನ್ನು ಉಪಯೋಗಿಸಿಕೊಂಡಳು.

ನೀವು ನಿಮ್ಮನ್ನು ಒಬ್ಬ ಕ್ರೈಸ್ತರೋಪಾದಿ ಗುರುತಿಸಿಕೊಳ್ಳುವುದಾದರೆ, ನೀವು ಅದರಂತೆ ವರ್ತಿಸುವ ಹಂಗಿಗೊಳಪಡಿಸಲ್ಪಡುತ್ತೀರಿ ಎಂಬುದು ಸತ್ಯ. (1 ಪೇತ್ರ 2:12) ಆದರೆ ಕ್ರೈಸ್ತ ನಡವಳಿಕೆಯು ಮಾತ್ರವೇ ನಿಮ್ಮ ಸಂದೇಶದ ವಿಶ್ವಾಸಾರ್ಹತೆಯನ್ನು ವರ್ಧಿಸುವುದು. ಎರಿಕ್‌ ಎಂಬ ಹೆಸರಿನ ಯೌವನಸ್ಥನೊಬ್ಬನ ಅನುಭವವನ್ನು ಪರಿಗಣಿಸಿರಿ. ಅವನ ಶಾಲೆಯಲ್ಲಿದ್ದ ಸಾಕ್ಷಿ ಯುವ ಜನರ ಒಳ್ಳೆಯ ನಡತೆಯಿಂದ ಅವನು ಪ್ರಭಾವಿಸಲ್ಪಟ್ಟನು. ಇದು ದೇವರ ಕುರಿತು ಕಲಿಯುವುದರಲ್ಲಿ ಅವನ ಆಸಕ್ತಿಯನ್ನು ಕೆರಳಿಸಿತು. ಅವನೊಂದಿಗೆ ಒಂದು ಬೈಬಲ್‌ ಅಧ್ಯಯನವು ಆರಂಭಿಸಲ್ಪಟ್ಟಿತು, ಮತ್ತು ಇಂದು ಅವನು ನ್ಯೂ ಯಾರ್ಕ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯ ಕಾರ್ಯಾಲಯದಲ್ಲಿ ಸೇವೆ ಮಾಡುತ್ತಿರುವ ಒಬ್ಬ ಸ್ನಾನಿತ ಕ್ರೈಸ್ತನಾಗಿದ್ದಾನೆ.

ದೇವರ ಕುರಿತು ಮಾತಾಡುವುದು ನಿಮಗೆ ಸಹ ಸಹಾಯ ಮಾಡಬಲ್ಲದು! ಅದು ರಕ್ಷಣೆಯೋಪಾದಿ ಕಾರ್ಯನಡಿಸಬಲ್ಲದು. ನೀವು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿದೀರ್ದೆಂದು ನಿಮ್ಮ ಸಂಗಡಿಗರು ತಿಳಿಯುವಾಗ, ಅನೇಕರು ನಿಮ್ಮನ್ನು ಗೌರವಿಸುವರು. ನಿಮಗೆ ಅತ್ಯುತ್ತಮವಾದ ನೈತಿಕ ಮಟ್ಟಗಳಿವೆ ಎಂಬುದನ್ನು ಅವರು ಗ್ರಹಿಸುವಾಗ, ಮತ್ತು ಅವರು ನಿಮ್ಮನ್ನು ಒತ್ತಾಯಿಸುವಾಗ ನೀವು ಅವರಿಗೆ ಒಂದು ಸಾಕ್ಷಿಯನ್ನು ಕೊಡುವ ಸಂಭವವಿದೆ ಎಂದು ತಿಳಿಯುವಾಗ, ತಪ್ಪುಕಾರ್ಯದಲ್ಲಿ ಒಳಗೂಡುವಂತೆ ನಿಮ್ಮನ್ನು ಒತ್ತಾಯಪಡಿಸುವದರಲ್ಲಿ ಅವರು ಕಡಿಮೆ ಪ್ರವೃತ್ತಿಯುಳ್ಳವರಾಗಬಹುದು.

ನಿಶ್ಚಯವಾಗಿಯೂ, ನೀವು ಮಾತಾಡುವಾಗ ಪ್ರತಿಯೊಂದು ಬಾರಿ ಶಾಸ್ತ್ರವಚನಗಳನ್ನು ಉದ್ಧರಿಸಬೇಕೆಂದು ಇದು ಅರ್ಥೈಸುವುದಿಲ್ಲ. ನಿಮಗೆ ಇನ್ನೂ ಕ್ರೀಡೆಗಳು, ಉಡುಪುಗಳು, ಅಥವಾ ಸಂಗೀತದಲ್ಲಿ ಆಸಕ್ತಿಯಿರುವುದು ಮತ್ತು ಆಗಿಂದಾಗ್ಗೆ ಅಂತಹ ವಿಷಯಗಳ ಕುರಿತು ಮಾತಾಡಲು ನೀವು ಬಯಸುವಿರಿ. ಆದರೆ ನೆನಪಿನಲ್ಲಿಡಿರಿ: “ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು.” (ಮತ್ತಾಯ 12:34) ನಿಜವಾಗಿಯೂ ದೇವರಿಗಾಗಿ ಪ್ರೀತಿಯು ನಿಮ್ಮ ಹೃದಯದಲ್ಲಿರುವುದಾದರೆ, ಆತನ ಕುರಿತಾಗಿ ಮಾತಾಡಲು ನೀವು ಸಹಜವಾಗಿ ಬಯಸುವಿರಿ. ಮುಂದಿನ ಸಂಚಿಕೆಯಲ್ಲಿ, ನೀವು ಹಾಗೆ ಪರಿಣಾಮಕಾರಿಯಾಗಿ ಮಾಡಬಲ್ಲ ಕೆಲವು ವಿಧಾನಗಳನ್ನು ನಾವು ಚರ್ಚಿಸುವೆವು. (g94 9⁄22)

[ಅಧ್ಯಯನ ಪ್ರಶ್ನೆಗಳು]

a ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ನ್ಯೂ ಯಾರ್ಕ್‌, ಇಂಕ್‌ನಿಂದ ಪ್ರಕಾಶಿಸಲ್ಪಟ್ಟದ್ದು.

[ಪುಟ 19 ರಲ್ಲಿರುವ ಚಿತ್ರ]

ಸಾರ್ವಜನಿಕವಾಗಿ ಸಾರುವ ಕೆಲಸದಲ್ಲಿ ನೀವಿರುವಾಗ, ನಿಮ್ಮ ಶಾಲಾ ಸಹಪಾಠಿಗಳಿಂದ ನೋಡಲ್ಪಡುವಲ್ಲಿ ನಿಮಗೆ ನಾಚಿಕೆಯಾಗುತ್ತದೊ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ