ಕಡಮೆ ಸಮಯದಲ್ಲಿ ಹೆಚ್ಚನ್ನು ಮಾಡಿ ಮುಗಿಸುವ ವಿಧ
‘ಸಮಯ ಎಲ್ಲಿಗೆ ಹೋಗಿ ಬಿಟ್ಟಿತು?’ ನೀವು ಈ ಪ್ರಶ್ನೆಯನ್ನು ಎಷ್ಟು ಬಾರಿ ಕೇಳಿಕೊಂಡಿರುವುದಿಲ್ಲ? ನೀವು ಅಧಿಕಾಂಶ ಜನರಂತೆ ಇರುವಲ್ಲಿ, ಜ್ಞಾಪಕಕ್ಕೆ ಬರುವುದಕ್ಕಿಂತಲೂ ಹೆಚ್ಚು ಬಾರಿ ಇದನ್ನು ಪ್ರಾಯಶಃ ಕೇಳುತ್ತೀರಿ.
ಕೆಳಗಣ ಸೂಚನೆಗಳನ್ನು ಮಹಿಳೆಯ ದೃಷ್ಟಿಕೋನದಲ್ಲಿ ಕೊಟ್ಟಿರುವುದಾದರೂ ಪುರುಷ ಮತ್ತು ಮಹಿಳೆಯರಿಗೆ ಪ್ರತಿ ವಾರ ಲಭ್ಯವಾಗುವ ಸಮಯದ ಮೊತ್ತ ಒಂದೇ ಆಗಿರುವುದರಿಂದ, ‘ನನಗೆ ದೊರೆಯುವ ಸಮಯದಿಂದ ನಾನು ಹೆಚ್ಚನ್ನು ಹೇಗೆ ಪಡೆಯಬಲ್ಲೆ?’ ಎಂಬ ಪ್ರಶ್ನೆಗೆ ಪುರುಷರೂ ಸ್ತ್ರೀಯರೂ ಉತ್ತರ ಪಡೆಯಲಿಚ್ಫಿಸುವರು.
ಆದ್ಯತೆಗಳನ್ನು ಇಡಿರಿ
ಜೀವನದ ಪ್ರತಿ ಚಟುವಟಿಕೆಗೂ ಸಮಯ ಹಿಡಿಯುವುದರಿಂದ ಕೆಲವು ವಿಷಯಗಳಿಗೆ ಇತರ ವಿಷಯಗಳಿಗಿಂತ ಹೆಚ್ಚು ಆದ್ಯತೆ ಕೊಡುವುದು ಸ್ವಾಭಾವಿಕ. ದೃಷ್ಟಾಂತಕ್ಕೆ, ಚಳಿಗಾಲದ ಚಳಿಯ ದಿನದ ಬೆಳಿಗ್ಗೆ, ಸ್ವಲ್ಪ ಹೆಚ್ಚು ಕಾಲ ತನ್ನ ಬೆಚ್ಚಗೆನ ಹಾಸಿಗೆಯಲ್ಲಿ ಮಲಗಲು ಒಬ್ಬ ತಾಯಿ ಇಷ್ಟ ಪಡಬಹುದು. ಆದರೆ, ಗಂಡನನ್ನು ಕೆಲಸಕ್ಕೆ ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಮಯವಾಯಿತೆಂದು ಗಂಟೆ ಸೂಚಿಸುತ್ತದೆ.
ನಿಮ್ಮ ಕುಟುಂಬ ಸರಿಯಾಗಿ ಕಾರ್ಯ ನಡೆಸಬೇಕಾದರೂ ಆದ್ಯತೆಗಳು ಅತ್ಯವಶ್ಯ. ಆಹಾರ ಖರೀದಿಸಲು ಮತ್ತು ಅದನ್ನು ಅಡುಗೆ ಮಾಡಲು ಸಮಯವಿದೆ; ಮನೆಯನ್ನು ಶುಚಿ ಮಾಡಲು ಮತ್ತು ಬಟ್ಟೆ ಒಗೆಯಲು ಸಮಯ ಬೇಕು; ವಿಶ್ರಾಂತಿ ಮಾಡಲು ಮತ್ತು ಅಧ್ಯಯನಕ್ಕೆ ಸಮಯ ಅಗತ್ಯ; ಮಕ್ಕಳ ಶಾಲಾ ಮನೆಗೆಲಸ ಮತ್ತು ಇತರ ಕೆಲಸಗಳ ಮೇಲ್ವಿಚಾರಣೆ ನೋಡಿಕೊಳ್ಳಲು ಸಮಯ ಬೇಕು—ಹೀಗೆ ಪಟ್ಟಿ ಉದ್ದವಾಗುತ್ತಾ ಹೋಗುತ್ತದೆ.
ನೀವು ಮನೆಯ ಹೊರಗೆ ಕೆಲಸ ಮಾಡುವವರೊ? ಹಾಗಿರುವಲ್ಲಿ, ಮಾಡಲಿರುವ ಹೆಚ್ಚಿಗೆಯ ಕರ್ತವ್ಯಗಳ ಕಾರಣ ನಿಮ್ಮ ಸಮಯ ಇನ್ನೂ ಅಮೂಲ್ಯವಾಗುತ್ತದೆ. ಸಮಯ ನಷ್ಟ ಮಾಡುವುದೂ ಅಸಾಧ್ಯ, ಕೆಲಸವನ್ನು ಸದಾ ಮುಂದಕ್ಕೆ ದೂಡುವುದೂ ಅಸಾಧ್ಯ. ಆದುದರಿಂದ, ಕೆಲಸ ಮಾಡಿ ಮುಗಿಸಬೇಕಾದರೆ ಒಂದು ಸಮಯ ತಖ್ತೆ ಬೇಕೇ ಬೇಕು ಎಂದು ಅನೇಕ ಸ್ತ್ರೀಯರು ಒಪ್ಪುತ್ತಾರೆ.
ಎರಡರಿಂದ 15 ವಯಸ್ಸಿನ ಆರು ಮಕ್ಕಳಿರುವ ಜೋಸೆಫಿನ್ ಹೇಳುವುದು: “ದೈನಂದಿನ ಸಮಯ ತಖ್ತೆ ಇಲ್ಲದಿರುವಲ್ಲಿ ನನ್ನ ಪ್ರತಿ ದಿನದ ಗುರಿಗಳನ್ನು ಮುಟ್ಟುವುದೇ ಅಸಾಧ್ಯ.” ವಾರಕ್ಕೆ 25 ತಾಸು ಮನೆಯಿಂದ ಹೊರಗೆ ಕೆಲಸ ಮಾಡುವ, ಮೂವರು ಮಕ್ಕಳಿರುವ ಸಾಂಡ್ರ ಇದಕ್ಕೆ ಸಮ್ಮತಿಸಿ ಹೇಳುವುದು: “ನನಗೆ ಸಮಯ ತಖ್ತೆ ಇಲ್ಲದಿದ್ದರೆ ನಾನು ಹುಚ್ಚಳಾಗಿ ಹೋದೇನು.”
ಇದಲ್ಲದೆ, ಸಮಯಕ್ಕೆ ನೀವು ಕೊಡುವ ಬೆಲೆಯಿಂದ ನಿಮ್ಮ ಆದ್ಯತೆಗಳು ನಿರ್ಮಿಸಲ್ಪಡುತ್ತವೆಂಬುದು ನಿಸ್ಸಂದೇಹ. ಲೋಲ ಎಂಬವಳ ವಿಷಯದಲ್ಲಿ ಇದು ನಿಜ. ಅವಳಿಗೆ ಪರಾಮರಿಸಲು ಗಂಡನಿರುವುದು ಮಾತ್ರವಲ್ಲ, ಆಕೆ ಪ್ರತಿ ತಿಂಗಳು 90ರಿಂದ 100 ತಾಸುಗಳನ್ನು ಬೈಬಲ್ ಕಲಿಸುವ ಕೆಲಸದಲ್ಲಿಯೂ ಕಳೆಯುತ್ತಾಳೆ. ಅವಳು ಹೇಳುವುದು: “ನನಗೆ ಸಮಯ ಅತಿ ಪ್ರಾಮುಖ್ಯ. ಜನರು ಕಾದು ನಿಲ್ಲುವಂತೆ ಮಾಡುವುದು ಸರಿಯಲ್ಲವೆಂದು ನನ್ನ ಎಣಿಕೆ. ಮತ್ತು ಸಮಯವನ್ನು ಅಸಡ್ಡೆ ಮಾಡುವವರು, ನಾನು ಸಮಯವನ್ನು ಅಮೂಲ್ಯವೆಂದೆಣಿಸುತ್ತೇನೆಂದು ನೋಡುವಾಗ ನನ್ನ ಸಮಯವನ್ನು ಅವರು ಹೆಚ್ಚು ಗೌರವಿಸುತ್ತಾರೆ.”
ಕೆಲಸಗಳನ್ನು ಸಂಘಟಿಸಿರಿ
ಕೆಲವು ಮಹಿಳೆಯರು ತಮ್ಮ ಕೆಲಸವನ್ನು ಎಂದಿಗೂ ಮಾಡಿ ಮುಗಿಸದಿರುವಂತೆ ಕಾಣುವುದೇಕೆ? ಅಥವಾ, ತಮಗೆ ಸಮಯದ ಕೊರತೆಯೆಂದು ಕೆಲವರು ಸದಾ ಗೊಣಗುವುದೇಕೆ? ಕೆಲಸವನ್ನು ಸಂಘಟಿಸದೆ ಇರುವುದು ಒಂದು ಕಾರಣವಾಗಿರಬಹುದೆ? ಗತ ಸಂತತಿಗಳಲ್ಲಿ, ಸ್ತ್ರೀಯರಿಗೆ ಒಂದು ದಿವಸ ಬಟ್ಟೆ ಒಗೆಯುವುದು, ಮರು ದಿವಸ ಇಸ್ತ್ರಿ ಹಾಕುವುದು, ಹೀಗೆ ಎರಡು ದಿವಸ ಹಿಡಿಯುತ್ತಿತ್ತು. ಇದೇ ಸಮಯದಲ್ಲಿ ಅವರು ಆಹಾರ ಪದಾರ್ಥಗಳನ್ನು ಕೊಂಡು ಅಡುಗೆ ಮಾಡುತ್ತಿದ್ದರು. ಆದರೆ ಇಂದು ಅನೇಕ ದೇಶಗಳಲ್ಲಿ, ಒಬ್ಬ ಸ್ತ್ರೀ, ಸಂಘಟಿತಳಾಗಿ ಇರುವಲ್ಲಿ, ಏಕಕಾಲಿಕವಾಗಿ, ಮನೆ ಶುಚಿ ಮಾಡಿ, ಬಟ್ಟೆ ಒಗೆದು, ಅದನ್ನು ಒಣಗಿಸಿ, ಅಡುಗೆಯನ್ನೂ ಮಾಡಬಲ್ಲಳು. ಆಧುನಿಕ ಸೌಕರ್ಯಗಳು ಅನೇಕ ಸ್ತ್ರೀಯರನ್ನು ಅವರು ಹೊರಗೆ ಕೆಲಸ ಮಾಡಿಯೂ ತಮ್ಮ ಕುಟುಂಬದ ಆವಶ್ಯಕತೆಗಳನ್ನು ನೋಡಿಕೊಳ್ಳುವಂತೆ ಸ್ವತಂತ್ರಿಸಿವೆ.
ಆದರೆ ಮನೆಯಿಂದ ಹೊರಗೆ ಕಳೆಯುವ ಸಮಯದ ವಿಷಯವೇನು? ಕೆಲಸದ ಸಮಯವನ್ನು ಬಿಟ್ಟು, ಸಮಯದ ಒಂದು ದೊಡ್ಡ ಭಾಗವನ್ನು ಕೆಲಸಕ್ಕೆ ಮತ್ತು ಹಿಂದೆ ಪ್ರಯಾಣದಲ್ಲಿ ಮತ್ತು ಡಾಕ್ಟರರ ಮತ್ತು ದಂತ ವೈದ್ಯರ ಚಿಕಿತ್ಸಾಲಯಗಳಲ್ಲಿ ಕಾದು ನಿಂತು ಕಳೆಯಲಾಗುತ್ತದೆ. ಈ ಸಮಯದಲ್ಲಿ ಹೆಚ್ಚಿನದನ್ನು ಉಪಯೋಗಿಸಸಾಧ್ಯವಿದೆಯೆ? ನೀವು ನಿಟಿಂಗ್, ಕ್ರೋಷೆ, ನೀಡ್ಲ್ಪಾಯಿಂಟ್ ಮತ್ತು ಕಸೂತಿಯ ಕೆಲಸ ಮಾಡುತ್ತೀರೊ? ಇಂಥ ಸಾಮರ್ಥ್ಯಗಳಲ್ಲಿ ಕೆಲವನ್ನು ಇಂಥ ಸಮಯ ಮತ್ತು ಸ್ಥಳಗಳಲ್ಲಿ ಉಪಯೋಗಿಸಬಹುದೆ? ಅನೇಕ ಮಹಿಳೆಯರು ಓದುತ್ತಾರೆ, ಸಾಮಾನು ಕೊಳ್ಳುವ ಪಟ್ಟಿ ಮಾಡುತ್ತಾರೆ ಯಾ ಪತ್ರಗಳನ್ನು ಬರೆಯುತ್ತಾರೆ. ವಾಸ್ತವವಾಗಿ, ಇನ್ನೊಮ್ಮೆ ನೀವು ಟೀವೀ ನೋಡಲು ಕುಳಿತುಕೊಳ್ಳುವಾಗ ಹೊಲಿಯಲು ಯಾ ಕುಟುಂಬಕ್ಕಾಗಿ ಇನ್ನೇನಾದರು ಮಾಡಲು ಸಮಯವನ್ನು ಏಕೆ ಉಪಯೋಗಿಸಬಾರದು? ಅಂಗಡಿಯ ಸಾಮಾನಿಗಿಂತ ಇದನ್ನು ನಿಮ್ಮ ಕುಟುಂಬ ಹೆಚ್ಚು ಗಣ್ಯ ಮಾಡೀತು ಮತ್ತು ನೀವು ಸಮಯ ನಷ್ಟ ಮಾಡಿರುವುದಿಲ್ಲ ಎಂಬ ವಾಸ್ತವ ರುಜುವಾತು ನಿಮಗಿರುವುದು.!
ಆದರೂ, ಈ ಸಂಗತಿಗೆ ಇನ್ನೊಂದು ಬದಿಯಿದೆ. ಪ್ರತಿಯೊಂದು ನಿಮಿಷವನ್ನೂ ಗಡುಸಾಗಿ ಲೆಕ್ಕಕ್ಕೆ ಹಿಡಿಯುವುದರಿಂದ ನೀವು ದೂರವಿರಬೇಕು. ಇಲ್ಲದಿದ್ದರೆ ನೀವು ಸಮಯದ ಗುಲಾಮರಾಗುವಿರಿ ಮತ್ತು ಇದು ನಿಮ್ಮ ಸಂತೋಷವನ್ನು ಕೊಳ್ಳೆ ಹೊಡೆಯುವುದು. ಒಮ್ಮೊಮ್ಮೆ ಸುಮ್ಮನೆ ಕುಳಿತು, ಮಾಡಿರುವುದನ್ನು ತನ್ನಲ್ಲಿ ಆಲೋಚಿಸಲು ಒಬ್ಬನು ಬಯಸಬಹುದು. ಇಂಥ ಕ್ಷಣಗಳು ನಿಶ್ಚಯವಾಗಿಯೂ ಅಮೂಲ್ಯ!
ಹಣ ಉಳಿತಾಯದ ಸಂಬಂಧದಲ್ಲೂ ಇದೇ ಮೂಲಸೂತ್ರ ಅನ್ವಯಿಸುತ್ತದೆ. ಇಲ್ಲಿ ಸಮತೋಲನ ಅವಶ್ಯ. ಕೆಲವು ರೂಪಾಯಿಗಳನ್ನು ಉಳಿಸಲು ನೀವು ಇಡೀ ಊರು ಸುತ್ತಬಹುದು. ಆದರೆ ಇದಕ್ಕೆ ಹೆಚ್ಚು ಸಮಯ ಮತ್ತು ಪೆಟ್ರೋಲಿನ ಹಣವನ್ನು ನೀವು ಖರ್ಚು ಮಾಡಬಹುದು. ಹೌದು, ನಿಮ್ಮ ಬಜೆಟು ಕಟ್ಟುನಿಟ್ಟಾಗಿರುವಲ್ಲಿ, ಉಳಿತಾಯ ಪ್ರಾಮುಖ್ಯ. ಒಂದೇ ಕೇಂದ್ರ ಅಂಗಡಿಯಲ್ಲಿ ಖರೀದಿಸುವುದು ಪ್ರಾಯಶಃ ಸಹಾಯ ಮಾಡೀತು. ವಸ್ತು ಎಲ್ಲಿದೆ (ಸಮಯದ ಉಳಿತಾಯ) ಎಂಬುದು ನಿಮಗೆ ಗೊತ್ತು ಮತ್ತು ಕಡಮೆ ಬೆಲೆಯ ಮಾರಾಟ (ಹಣದ ಉಳಿತಾಯ) ಯಾವಾಗವೆಂದೂ ನಿಮಗೆ ತಿಳಿದಿದೆ.
ಅತ್ಯುತ್ತಮ ಸಮಯವನ್ನು ಹೆಕ್ಕುವುದು
ಪ್ರತಿಯೊಬ್ಬ ಮಹಿಳೆಯಲ್ಲಿ ಸ್ವಂತ ಆಂತರಿಕ ಗಡಿಯಾರವಿದೆ. ಕೆಲವರು ಬೆಳಿಗ್ಗೆ ಅತ್ಯುತ್ತಮ ಕೆಲಸ ಮಾಡುವವರು; ಇತರರು ಅಪರಾಹ್ಣದ ತನಕ ಸರಿಯಾಗಿ ಕೆಲಸ ಮಾಡುವುದಿಲ್ಲ. ನೀವು ಬೆಳಗ್ಗಿನ ವ್ಯಕ್ತಿಯಾಗಿರುವಲ್ಲಿ, ಕಷ್ಟಕರವಾದ ಕೆಲಸಗಳನ್ನು ನಿಶ್ಚಯವಾಗಿಯೂ ಆಗ ಮಾಡುವಂತೆ ನೋಡಿರಿ. ನಿಮ್ಮ ಸಾಮರ್ಥ್ಯಗಳನ್ನು ನಿಮ್ಮ ಅತ್ಯುನ್ನತ ಸಮಯಗಳಲ್ಲಿ ಮಾಡಿರಿ. ಮನೆಯ ಹೊರಗೆ ಕೆಲಸ ಮಾಡುವವರು ನೀವಾಗಿರುವಲ್ಲಿ, ನಿಮ್ಮ ಧಣಿಯೊಡನೆ ಏಕೆ ಮಾತಾಡಬಾರದು? ಕೆಲಸವನ್ನು ಸಮಯಾನುಸಾರ ಮಾಡುವುದು ಮತ್ತು ಮಾಡಿಸುವುದು ನಿಮಗೂ ಅವನಿಗೂ ಪ್ರಯೋಜನಕರವಾಗಿರುವುದು. ಆದರೆ, ಬೆಳಗ್ಗೆ ನೀವು ನಿಧಾನಿಗಳಾಗಿರುವಲ್ಲಿ, ಅತಿ ಪ್ರಾಮುಖ್ಯ ಕೆಲಸಗಳನ್ನು, ನೀವು ಹೆಚ್ಚು ಉತ್ತಮವಾಗಿ ಕೆಲಸ ಮಾಡುವ ಸಮಯಕ್ಕೆ ಇಡಿರಿ.
ಮೇರಿ ಬೆಳಗ್ಗಿನ ವ್ಯಕ್ತಿ. ಆಕೆ ಸುವಾರ್ತಾ ಸೇವೆಯಲ್ಲಿ ಕಳೆಯುವ ಸಮಯ ತನ್ನ ದಿವಸದ ಹೆಚ್ಚು ಪ್ರಾಮುಖ್ಯ ಭಾಗವೆಂದು ನೆನಸುತ್ತಾಳೆ. ಆದುದರಿಂದ ಅವಳು ಅಪರಾಹ್ಣದಲ್ಲಿ ಅಂಶಿಕ ಕಾಲದ ಕೆಲಸವನ್ನು ಪಡೆದಳು. ಇದು ಆಕೆ ತನ್ನ ಅತ್ಯುತ್ತಮ ತಾಸುಗಳನ್ನು ಬೈಬಲ್ ಕಲಿಸುವ ಕೆಲಸಕ್ಕೆ ಮೀಸಲಾಗಿಡುವಂತೆ ಸಾಧ್ಯ ಮಾಡುತ್ತದೆ. ನಿಮಗಿರುವ ಸಮಯ ತಖ್ತೆಯಲ್ಲಿಯೂ ನೀವು ಈ ರೀತಿ ಮಾಡಬಲ್ಲಿರೊ?
ವಾಸ್ತವತೆಯುಳ್ಳವರಾಗಿರಿ
ಪ್ರಾಯೋಗಿಕವಾಗಿರಬೇಕಾದರೆ, ಸಮಯ ತಖ್ತೆಯಲ್ಲಿ ಅನೇಕಾನೇಕ ವಿಷಯಗಳಿರಬಾರದು. ಅತೀತಳಾದ ಅಮ್ಮ, ಪತ್ನಿ, ಯಾ ಕಾರ್ಮಿಕಳಾಗುವುದು ನಿರಾಶೆ ಮತ್ತು ಹತಾಶೆಗೆ ನಡೆಸಬಲ್ಲದು. ನಿಮಗೆ ಆರೋಗ್ಯ ಸಮಸ್ಯೆಗಳಿರುವಾಗಲಂತೂ ಇದು ವಿಶೇಷವಾಗಿ ನಿಜ. ನಿಮ್ಮ ಮಿತಿಗನುಸಾರ ಕೆಲಸ ಮಾಡಲು ಕಲಿಯಿರಿ.
ಅಸ್ಥಿಗತ ಕಾಯಿಲೆ ಇರುವ ಡಾಲಿ ವಿವರಿಸುವುದು: “ನನ್ನ ಸಮಯ ನನ್ನ ಗಂಡನ ಚಟುವಟಿಕೆಗಳೊಂದಿಗೆ ಸೇರಿಕೊಂಡಿದೆ. ಅವನು ಸಂಚಾರ ಸುವಾರ್ತಾ ಸೇವಕ. ನಾವು ಒಂದು ಸಣ್ಣ ವಾಹನಗೃಹದಲ್ಲಿ ಜೀವಿಸುವುದರಿಂದ,ಅವನ ಕೆಲಸ ಮುಗಿದಾಗ ನಾನು ನನ್ನ ಕೆಲಸ ಮಾಡುತ್ತೇನೆ. ನನ್ನ ಕಾಯಿಲೆ, ಇಷ್ಟವಿರುವುದನ್ನೆಲ್ಲ ಮಾಡುವುದರಿಂದ ನನ್ನನ್ನು ತಡೆಹಿಡಿಯುತ್ತದೆ. ಆದರೆ, ಸಾಧ್ಯವಿರುವಾಗ ನನ್ನ ಸುವಾರ್ತಾ ಸೇವೆಗೆ ಆದ್ಯತೆ ಕೊಡಲ್ಪಡುತ್ತದೆ. ಮನೆಯಲ್ಲಿ ಮಾಡಲಿಕ್ಕಿರುವ ಕೆಲಸವನ್ನು ಅಂದು ಮಾಡಲಾಗುವುದಿಲ್ಲ.”
ನಮನೀಯತೆಯುಳ್ಳವರಾಗಿರಿ
ಒತ್ತಡವಿರುವಾಗ ಹೇಗೆ ಸಹಿಸುತ್ತಾಳೆಂಬುದು ಒಬ್ಬ ಹೆಂಗಸಿನ ಕೆಚ್ಚಿನ ಪರೀಕ್ಷೆ. ವಿಪತ್ತಿನ ಸಮಯದಲ್ಲಿ ಶಾಂತಚಿತ್ತಳಾಗಿರುವುದು ಭಾವಾತ್ಮಕವಾಗಿ ಚೂರುಚೂರಾಗುವುದಕ್ಕಿಂತ ಎಷ್ಟೊ ಹೆಚ್ಚಿನದನ್ನು ಸಾಧಿಸುತ್ತದೆ.
ಸಾಂಡ್ರ ಒತ್ತಡವನ್ನು ನಿಯಂತ್ರಿಸುವ ಗುಟ್ಟನ್ನು ಕಂಡುಹಿಡಿದಳು. ಅವಳು ಹೇಳುವುದು: “ತುರ್ತು ಪರಿಸ್ಥಿತಿಯಲ್ಲಿ ಎಲ್ಲ ಕಡೆಗಳಿಂದ ಮುತ್ತಲ್ಪಡುವಾಗ, ನಾನು ಸಡಿಲಭಾವದವಳಾಗುತ್ತೇನೆ. ಇದು ವಿಚಿತ್ರವಾಗಿ ಕಾಣಬಹುದು, ಆದರೆ ಇದು ಫಲದಾಯಕ. ನನ್ನನ್ನು ನಿಯಂತ್ರಿಸಿಕೊಂಡ ಬಳಿಕ, ನಾನು ಪ್ರಥಮವಾಗಿ ಏನು ಮಾಡಬೇಕೆಂದು ನಿಶ್ಚಯಿಸಬಲ್ಲೆ. ನಾನು ಸಡಿಲಮನಸ್ಕಳಾಗದಿದ್ದರೆ ಯೋಗ್ಯ ಆದ್ಯತೆಗಳನ್ನು ಕೊಡಲಾಗುವುದಿಲ್ಲ. ಆದ್ಯತೆಗಳನ್ನು ನಿಶ್ಚಯಿಸಿದ ಬಳಿಕ, ತುರ್ತನ್ನು ಮುಟ್ಟಲು ನನ್ನ ಚಟುವಟಿಕೆಗಳನ್ನು ತ್ವರಿತಪಡಿಸಿ ಕೆಲಸಗಳನ್ನು ಮಾಡಿ ಮುಗಿಸುತ್ತೇನೆ. ದೃಷ್ಟಾಂತಕ್ಕೆ, ಒಮ್ಮೆ ಕೆಲವು ಅತಿಥಿಗಳು ಊಟಕ್ಕೆ ತಾಸುಗಳಿಗೆ ಮುಂಚಿತವಾಗಿಯೆ ಬಂದರು. ಆಗ ದಿಗಿಲುಪಡುವ ಬದಲಿಗೆ ಅವರೊಂದಿಗೆ ಸಾಧ್ಯವಾಗುವಷ್ಟು ಮಾತನಾಡುವಾಗಲೆ ನಾನು ಅಡುಗೆ ಮಾಡಿದೆ. ಎಲ್ಲರೂ ವಿಶ್ರಾಂತಿಗೊಂಡು ಆನಂದಪಟ್ಟರು.”
ಸಹಾಯ ಪಡೆಯಿರಿ
ದಕ್ಷತೆಯ ಸಹಾಯಕರಿಂದ ಸುತ್ತಲ್ಪಟ್ಟಿರುವ ಕಾರ್ಯ ನಿರ್ವಾಹಕನು ಅತ್ಯುತ್ತಮ ಅಧಿಕಾರಿ ಎಂದು ಯಾರೊ ಒಮ್ಮೆ ಹೇಳಿದ್ದುಂಟು. ಕೆಲಸಕ್ಕೆ ಇತರರ ಸಹಾಯವನ್ನು ನೀವು ಪಡೆಯುವುದುಂಟೆ? ಜೊತೆ ಕಾರ್ಮಿಕರು ತಮ್ಮ ಸಹಾಯ ಗಣ್ಯ ಮಾಡಲ್ಪಟ್ಟದೆ ಎಂದು ತಿಳಿಯುವಲ್ಲಿ, ಸಿದ್ಧ ಮನಸ್ಸಿನಿಂದ ಕೆಲಸಕ್ಕೆ ಇಳಿಯುತ್ತಾರೆ. ಮನೆಯಲ್ಲಿಯೂ ಇದು ನಿಜ. ದುರ್ಭಾಗ್ಯದ ಸಂಗತಿಯೇನಂದರೆ, ಹಲವು ಸ್ತ್ರೀಯರು ಎಷ್ಟು ಸೂಕ್ಷ್ಮ ರೀತಿಯ ಮನೆಗೆಲಸದವರು ಮತ್ತು ಅಡುಗೆಯವರೆಂದರೆ ಅವರು ಸಹಾಯ ನೀಡುವವರನ್ನು ನಿರುತ್ತೇಜನಗೊಳಿಸುತ್ತಾರೆ. ಮತ್ತು ಈ ಮನೋಭಾವವೆ ಕೆಲವು ಹೆಂಡತಿಯರು ಮತ್ತು ತಾಯಂದಿರು ಸದಾ ಮಿತಿಮೀರಿ ಕೆಲಸದ ಹೊರೆಯಿಂದಿರುವುದಕ್ಕೂ ಅವರ ಕುಟುಂಬದ ಸದಸ್ಯರು ಅಚಿಂತಿತರಾಗಿ ವಿಶ್ರಮಿಸುವುದಕ್ಕೂ ಕಾರಣವಾಗಿರಬಹುದು.
ನಿಮ್ಮ ವಿಷಯವೇನು? ಸಹಾಯ ಬೇಕಾಗುವಾಗ ಅದನ್ನು ನೀವು ಪ್ರೋತ್ಸಾಹಿಸುತ್ತೀರೊ? ಅದಕ್ಕಾಗಿ ಕೇಳುತ್ತೀರೊ ಯಾ ತಗಾದೆ ಮಾಡುತ್ತೀರೊ? ನೀವು ಮಕ್ಕಳೊಡನೆಯಾಗಲಿ ಗಂಡನೊಂದಿಗಾಗಲಿ ಮಾತನಾಡುವಾಗ “ನೀನು ಹೀಗೀಗೆ ಮಾಡಬೇಕು” ಎಂಬುದರ ಬದಲಿಗೆ “ದಯವಿಟ್ಟು ಮಾಡುವಿಯಾ” ಎಂಬುದು ಹೆಚ್ಚು ಆಕರ್ಷಕ ಮಾತುಗಳು.
ಒಬ್ಬ ಮಹಿಳೆ, ತನ್ನ ಗಂಡನು ಕೊಡುವ ಸಹಾಯವನ್ನು ಪ್ರಶಂಸಿಸುತ್ತಾ ಹೇಳುವುದು: “ಅವರು ನಿಜವಾಗಿಯೂ ಅದರ ವಿಷಯ ಒಳ್ಳೆಯ ಮನಸ್ಸಿನವರು. ನಾನು ಕಾಯಿಲೆ ಬೀಳುವಾಗ ನನ್ನನ್ನು ಮಲಗುವಂತೆ ಹೇಳಿ ತನೇ ಅಡುಗೆ ಮಾಡುತ್ತಾರೆ; ಅವರೂ ಮಕ್ಕಳೆಲ್ಲರೂ ಮುಂದೆ ಬಂದು ಕೆಲಸ ಮಾಡಲು ಸಹಾಯ ನೀಡುತ್ತಾರೆ. ನಾನು ಇದನ್ನು ನಿಜವಾಗಿಯೂ ಗಣ್ಯ ಮಾಡುತ್ತೇನೆ.”
ಕುಟುಂಬಕ್ಕೆ ಈ ಮನೋಭಾವವಿರವುದು ಎಷ್ಟು ಉತ್ತಮ! ಆದರೆ ಈ ಪರಿಸ್ಥಿತಿಯಲ್ಲಿ ಮುಖ್ಯ ಪಾತ್ರ ತಾಯಿಯದ್ದು. ಮಕ್ಕಳು ಸಮಯದ ಮೌಲ್ಯವನ್ನು ತಿಳಿದು ಕೆಲಸದ ಕಡೆಗೆ ಸಕಾರಾತ್ಮಕ ಮನೋಭಾವವನ್ನು ಬೆಳೆಸಲು ಆಕೆ ಅವರಿಗೆ ತರಬೇತು ನೀಡಬಲ್ಲಳು. ಇಂಥ ಮಕ್ಕಳು ಸಾಮಾನ್ಯವಾಗಿ ಸಹಾಯ ನೀಡಲು ಮನಸ್ಸು ಮಾಡುತ್ತಾರೆ, ಏಕೆಂದರೆ ಎಲ್ಲರಿಗೂ ಸೇರಿರುವ ಕುಟುಂಬ ಗುರಿಗೆ ಸಹಾಯ ನೀಡುವುದರಲ್ಲಿ ಅವರು ಆನಂದಿಸುತ್ತಾರೆ.
ಇತರರು ಏನೇ ಮಾಡಲಿ ಯಾ ಹೇಳಲಿ, ಹಲವರು ಸಮಯದ ನಷ್ಟವನ್ನು ಮಾಡಿಯೆ ಮಾಡುತ್ತಾರೆ ಎಂದು ಹೇಳುವ ಅಗತ್ಯವೇ ಇಲ್ಲ. ನಾವು ಅವರನ್ನು ಬದಲಾಯಿಸಲಾರೆವು; ನಾವು ನಮ್ಮನ್ನು ಅಭಿವೃದ್ಧಿಗೊಳಿಸಬಲ್ಲೆವು. ಸಮಯದ ಕುರಿತು ನಾವು ವಾಸ್ತವತೆಯುಳ್ಳವರೂ ಹೆಚ್ಚು ಸುಸಂಘಟಿತರೂ, ಯೋಗ್ಯ ಆದ್ಯತೆಯನ್ನಿಡುವವರೂ ಅಗತ್ಯವಿರುವಲ್ಲಿ ಸಹಾಯ ಪಡೆಯುವವರೂ ಆಗಿರಬಲ್ಲೆವು. (g90 6/8)
[ಪುಟ 15 ರಲ್ಲಿರುವಚಿತ್ರ]
ಕುಟುಂಬವು ಯೋಗ್ಯ ರೀತಿಯಲ್ಲಿ ಕೆಲಸ ನಡೆಸಬೇಕಾದರೆ ಆದ್ಯತೆಗಳನ್ನು ಇಡತಕ್ಕದ್ದು