ಯೆಹೋವನನ್ನು ಸ್ವ-ತ್ಯಾಗದ ಆತ್ಮದೊಂದಿಗೆ ಸೇವಿಸುವುದು
“ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಹಿಂಸಾಕಂಭವನ್ನು ಹೊತ್ತುಕೊಂಡು ಎಡೆಬಿಡದೆ ನನ್ನ ಹಿಂದೆ ಬರಲಿ.”—ಮತ್ತಾಯ 16:24, NW.
1. ಬರಲಿರುವ ತನ್ನ ಮರಣದ ಕುರಿತು ಯೇಸು ತನ್ನ ಶಿಷ್ಯರಿಗೆ ಹೇಗೆ ತಿಳಿಸಿದನು?
ಮಂಜು ನೆತ್ತಿಯ ಹೆರ್ಮೋನ್ ಬೆಟ್ಟದ ನೆರೆಕರೆಯಲ್ಲಿ, ಯೇಸು ಕ್ರಿಸ್ತನು ತನ್ನ ಜೀವಿತದ ಒಂದು ಮಹಾ ಮೈಲುಗಲ್ಲನ್ನು ತಲಪುತ್ತಾನೆ. ಅವನಿಗೆ ಜೀವಿಸಲು ಒಂದು ವರ್ಷಕ್ಕಿಂತಲೂ ಕಡಿಮೆ ಸಮಯವಿದೆ. ಅದು ಅವನಿಗೆ ತಿಳಿದದೆ; ಅವನ ಶಿಷ್ಯರಿಗೆ ತಿಳಿದಿಲ್ಲ. ಅದು ಅವರಿಗೆ ತಿಳಿಯುವ ಸಮಯವೀಗ ಬಂದಿದೆ. ಬರಲಿರುವ ತನ್ನ ಮರಣವನ್ನು ಯೇಸು ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದನು ನಿಜ, ಆದರೆ ಅದರ ಕುರಿತು ಸ್ಪಷ್ಟವಾಗಿಗಿ ಹೇಳಿದ್ದು ಇದು ಮೊದಲನೆಯ ಸಾರಿ. (ಮತ್ತಾಯ 9:15; 12:40) ಮತ್ತಾಯನ ವೃತ್ತಾಂತವು ಓದುವುದು: “ಅಂದಿನಿಂದ ಯೇಸು ಕ್ರಿಸ್ತನು ತಾನು ಯೆರೂಸಲೇಮಿಗೆ ಹೋಗಿ ಅಲ್ಲಿ ಹಿರಿಯರಿಂದಲೂ ಮಹಾ ಯಾಜಕರಿಂದಲೂ ಶಾಸ್ತ್ರಿಗಳಿಂದಲೂ ಬಹು ಕಷ್ಟಗಳನ್ನನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡಬೇಕೆಂದು ತನ್ನ ಶಿಷ್ಯರಿಗೆ ತಿಳಿಸುವದಕ್ಕೆ ಪ್ರಾರಂಭಮಾಡಿದನು.”—ಮತ್ತಾಯ 16:21; ಮಾರ್ಕ 8:31, 32.
2. ಭವಿಷ್ಯತ್ತಿನ ಕಷ್ಟಾನುಭವದ ಕುರಿತ ಯೇಸುವಿನ ಮಾತುಗಳಿಗೆ ಪೇತ್ರನ ಪ್ರತಿಕ್ರಿಯೆ ಏನಾಗಿತ್ತು, ಮತ್ತು ಯೇಸು ಹೇಗೆ ಪ್ರತಿವರ್ತಿಸಿದನು?
2 ಯೇಸುವಿನ ಮರಣಕ್ಕೆ ಕೇವಲ ಕೊಂಚವೇ ಸಮಯವು ಉಳಿದಿತ್ತು. ಪೇತ್ರನಾದರೋ ಅಂಥ ವಿಕಾರ ಭಾವನೆಯೆಂದು ತೋರುವ ವಿಷಯಕ್ಕೆ ಕ್ರೋಧದಿಂದ ಪ್ರತಿಕ್ರಿಯಿಸುತ್ತಾನೆ. ಮೆಸ್ಸೀಯನು ನಿಜವಾಗಿ ಕೊಲ್ಲಲ್ಪಡುವನೆಂಬದನ್ನು ಅವನು ಸ್ವೀಕರಿಸಲು ಶಕ್ತನಿಲ್ಲ. ಆದುದರಿಂದ ಪೇತ್ರನು ತನ್ನ ಬೋಧಕನನ್ನು ಗದರಿಸುವ ಸಾಹಸ ಮಾಡುತ್ತಾನೆ. ಅತ್ಯುತ್ತಮ ಹೇತುಗಳಿಂದ ಪ್ರೇರಿತನಾಗಿ ಉದ್ರೇಕದಿಂದ ಅವನು ಒತ್ತಾಯಿಸುವುದು: “ಸ್ವಾಮೀ, ದೇವರು ನಿನ್ನನ್ನು ಕಾಯಲಿ; ನಿನಗೆ ಹೀಗೆ ಎಂದಿಗೂ ಆಗಬಾರದು.” ಆದರೆ ಯೇಸು ಆ ಕೂಡಲೇ ಪೇತ್ರನ ಅನುಚಿತ ದಯೆಯನ್ನು, ಒಬ್ಬನು ವಿಷಕಾರಿ ಹಾವಿನ ತಲೆಯನ್ನು ಜಜ್ಜುವಂತೆ, ತಿರಸ್ಕರಿಸುತ್ತಾನೆ. “ಸೈತಾನನೇ, ನನ್ನ ಮುಂದೆ ನಿಲ್ಲಬೇಡ, ನಡೆ, ನನಗೆ ನೀನು ವಿಘ್ನವಾಗಿದ್ದೀ; ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ.”—ಮತ್ತಾಯ 16:22, 23.
3. (ಎ) ಪೇತ್ರನು ಬುದ್ಧಿಪೂರ್ವಕವಲ್ಲದೆ ತನ್ನನ್ನು ಸೈತಾನನ ಕಾರ್ಯಭಾರಿಯಾಗಿ ಮಾಡಿದ್ದು ಹೇಗೆ? (ಬಿ) ಸ್ವ-ತ್ಯಾಗದ ಮಾರ್ಗಕ್ಕೆ ಪೇತ್ರನು ಎಡವುಗಲ್ಲಾದದ್ದು ಹೇಗೆ?
3 ಪೇತ್ರನು ಬುದ್ಧಿಪೂರ್ವಕವಲ್ಲದೆ ತನ್ನನ್ನು ಸೈತಾನನ ಕಾರ್ಯಭಾರಿಯಾಗಿ ಮಾಡಿಕೊಂಡನು. ಯೇಸುವಿನ ಎದುರುತ್ತರವು ಅರಣ್ಯದಲ್ಲಿ ಸೈತಾನನಿಗೆ ಉತ್ತರಕೊಟ್ಟಾಗ ಇದ್ದಂತೆಯೇ ನಿರ್ಣಾಯಕವಾಗಿತ್ತು. ಒಂದು ಸುಖಕರವಾದ ಜೀವನದೊಂದಿಗೆ, ಕಷ್ಟಾನುಭವವಿಲ್ಲದ ರಾಜ್ಯಪದದೊಂದಿಗೆ ಯೇಸುವನ್ನು ಶೋಧಿಸಲು ಸೈತಾನನು ಪ್ರಯತ್ನಿಸಿದ್ದನು. (ಮತ್ತಾಯ 4:1-10) ಈಗಲಾದರೋ ಪೇತ್ರನು—ತಾನು ತನ್ನನ್ನು ಕಟುವಾಗಿ ಅಲ್ಲ, ಕೋಮಲವಾಗಿ ಉಪಚರಿಸುವಂತೆ ಉತ್ತೇಜನ ಕೊಡುತ್ತಾನೆ. ಇದು ತನ್ನ ತಂದೆಯ ಚಿತ್ತವಲ್ಲವೆಂದು ಯೇಸುವಿಗೆ ಗೊತ್ತಿತ್ತು. ಅವನ ಜೀವನವು ಸ್ವ-ತ್ಯಾಗದ್ದಾಗಿರಬೇಕಿತ್ತು, ಸ್ವ-ಸಂತೃಪ್ತಿಯದಲ್ಲ. (ಮತ್ತಾಯ 20:28) ಅಂಥ ಮಾರ್ಗಕ್ಕೆ ಪೇತ್ರನು ಎಡವುಗಲ್ಲಾಗುತ್ತಾನೆ, ಅವನ ಸದ್ಭಾವನೆಯ ಅನುತಾಪವು ಒಂದು ಪಾಶವಾಗಿ ಪರಿಣಮಿಸುತ್ತದೆ.a ತ್ಯಾಗರಹಿತ ಜೀವಿತದ ಯಾವುದೇ ವಿಚಾರಕ್ಕೆ ತಾನು ಎಡೆಗೊಟ್ಟರೆ ಸೈತಾನಿಕ ಪಾಶದ ಮಾರಕ ಹಿಡಿತದಲ್ಲಿ ಸಿಕ್ಕಿಬೀಳುವ ಮೂಲಕ ದೇವರ ಮೆಚ್ಚಿಕೆಯನ್ನು ಕಳಕೊಳ್ಳುವನೆಂದು ಯೇಸುವಾದರೋ ಸ್ಪಷ್ಟವಾಗಿಗಿ ಕಾಣುತ್ತಾನೆ.
4. ವಿಷಯಲೋಲುಪವಾದ ಆರಾಮಕರ ಜೀವಿತವು ಯೇಸುವಿಗಾಗಿ ಮತ್ತು ಆತನ ಹಿಂಬಾಲಕರಿಗಾಗಿರಲಿಲ್ಲವೇಕೆ?
4 ಆದುದರಿಂದ ಪೇತ್ರನ ಯೋಚನೆಗೆ ಅಳವಡಿಸುವಿಕೆಯು ಅಗತ್ಯವಿತ್ತು. ಯೇಸುವಿಗೆ ಅವನು ನುಡಿದ ಮಾತುಗಳು ಮನುಷ್ಯನ ಆಲೋಚನೆಯನ್ನು ಪ್ರತಿನಿಧಿಸಿದ್ದವು, ದೇವರದ್ದಲ್ಲ. ಆರಾಮದ ವಿಷಯಲೋಲುಪ ಜೀವನವು, ಕಷ್ಟಾನುಭವವಿಲ್ಲದ ಸುಲಭ ಮಾರ್ಗವು ಯೇಸುವಿಗಾಗಿರಲಿಲ್ಲ; ಅವನ ಹಿಂಬಾಲಕರಿಗಾಗಿಯೂ ಅಂಥ ಒಂದು ಜೀವನವನ್ನು ಬಯಸಿರಲಿಲ್ಲ. ಯಾಕಂದರೆ ಯೇಸು ಒಡನೆಯೇ ಪೇತ್ರನಿಗೆ ಮತ್ತು ಉಳಿದ ಶಿಷ್ಯರಿಗೆ ಹೇಳುವುದು: “ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಹಿಂಸಾಕಂಭವನ್ನು ಹೊತ್ತುಕೊಂಡು ಎಡೆಬಿಡದೆ ನನ್ನ ಹಿಂದೆ ಬರಲಿ.”—ಮತ್ತಾಯ 16:24, NW.
5. (ಎ) ಕ್ರೈಸ್ತ ಜೀವನವನ್ನು ಜೀವಿಸುವ ಪಂಥಾಹ್ವಾನವು ಯಾವುದು? (ಬಿ) ಯಾವ ಮೂರು ಆವಶ್ಯಕ ವಿಷಯಗಳಿಗಾಗಿ ಒಬ್ಬ ಕ್ರೈಸ್ತನು ತಯಾರಾಗಿರಲೇಬೇಕು?
5 ಪುನಃ ಪುನಃ ಯೇಸು ಈ ಮುಖ್ಯ ವಿಷಯಕ್ಕೆ ಹಿಂತಿರುಗುತ್ತಾನೆ: ಕ್ರಿಸ್ತೀಯ ಜೀವನವನ್ನು ಜೀವಿಸುವ ಪಂಥಾಹ್ವಾನ. ಯೇಸುವಿನ ಹಿಂಬಾಲಕರಾಗಿರುವುದಕ್ಕಾಗಿ, ಕ್ರೈಸ್ತರು, ಅವರ ನಾಯಕನಂತೆ, ಯೆಹೋವನನ್ನು ಸ್ವ-ತ್ಯಾಗದ ಆತ್ಮದಿಂದ ಸೇವಿಸಲೇ ಬೇಕು. (ಮತ್ತಾಯ 10:37-39) ಹೀಗೆ, ಕ್ರೈಸ್ತನು ಮಾಡಲು ತಯಾರಿರಲೇಬೇಕಾದ ಮೂರು ಆವಶ್ಯಕ ವಿಷಯಗಳನ್ನು ಆತನು ಪಟ್ಟಿಮಾಡುತ್ತಾನೆ: (1) ತನ್ನನ್ನು ನಿರಾಕರಿಸುವುದು, (2) ತನ್ನ ಹಿಂಸಾಕಂಭವನ್ನು ಹೊತ್ತುಕೊಳ್ಳುವುದು, ಮತ್ತು (3) ಎಡೆಬಿಡದೆ ಆತನನ್ನು ಹಿಂಬಾಲಿಸುವುದು.
“ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ”
6. (ಎ) ಒಬ್ಬ ವ್ಯಕ್ತಿಯು ತನ್ನನ್ನು ನಿರಾಕರಿಸುವುದು ಹೇಗೆ? (ಬಿ) ನಮಗಿಂತ ಹೆಚ್ಚಾಗಿ ನಾವು ಯಾರನ್ನು ಮೆಚ್ಚಿಸಬೇಕು?
6 ತನ್ನನ್ನು ತಾನೇ ನಿರಾಕರಿಸುವುದರ ಅರ್ಥವೇನು? ತನಗೆ ಒಂದು ರೀತಿಯ ಮರಣದಂತೆ, ತನ್ನನ್ನು ವ್ಯಕ್ತಿಯೊಬ್ಬನು ಸಂಪೂರ್ಣವಾಗಿ ವರ್ಜಿಸಿಕೊಳ್ಳುವುದು ಎಂದದರ ಅರ್ಥ. “ನಿರಾಕರಿಸು” ಎಂದು ತರ್ಜುಮೆಯಾದ ಗ್ರೀಕ್ ಶಬ್ದದ ಮೂಲ ಅರ್ಥವು “ಬೇಡವೆನ್ನುವುದು” ಆಗಿದೆ; “ಪೂರ್ಣವಾಗಿ ವರ್ಜಿಸುವುದು” ಎಂದೇ ಅದರ ಅರ್ಥ. ಆದುದರಿಂದ ಕ್ರೈಸ್ತ ಜೀವನದ ಪಂಥಾಹ್ವಾನವನ್ನು ನೀವು ಸ್ವೀಕರಿಸುವುದಾದರೆ, ನಿಮ್ಮ ಸ್ವಂತ ಹೆಬ್ಬಯಕೆಗಳು, ಆರಾಮ, ಅಪೇಕ್ಷೆಗಳು, ಸಂತೋಷ, ಸುಖಭೋಗವನ್ನು ನೀವು ಇಚ್ಛಾಪೂರ್ವಕವಾಗಿ ಬಿಟ್ಟುಕೊಡುತ್ತೀರಿ. ಸಾರಾಂಶದಲ್ಲಿ, ನಿಮ್ಮ ಇಡೀ ಜೀವಿತವನ್ನು ಮತ್ತು ಅದರಲ್ಲಿ ಒಳಗೂಡಿರುವ ಎಲ್ಲವನ್ನು ಸದಾಕಾಲಕ್ಕಾಗಿ ಯೆಹೋವ ದೇವರಿಗೆ ಒಪ್ಪಿಸುತ್ತೀರಿ. ತನ್ನನ್ನು ನಿರಾಕರಿಸುವುದು ಎಂದರೆ ಆಗಿಂದಾಗ್ಯೆ ನಿರ್ದಿಷ್ಟ ಸುಖಭೋಗಗಳನ್ನು ತನಗೆ ತ್ಯಜಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಅರ್ಥದಲ್ಲಿದೆ. ಬದಲಿಗೆ, ವ್ಯಕ್ತಿಯು ತನ್ನ ಒಡೆತನವನ್ನು ಯೆಹೋವನಿಗೆ ಬಿಟ್ಟುಕೊಡುವುದು ಎಂದು ಅದರ ಅರ್ಥವಾಗಿದೆ. (1 ಕೊರಿಂಥ 6:19, 20) ತನ್ನನ್ನು ನಿರಾಕರಿಸಿಕೊಂಡ ವ್ಯಕ್ತಿಯು ತನ್ನನ್ನಲ್ಲ, ದೇವರನ್ನು ಮೆಚ್ಚಿಸುವುದಕ್ಕಾಗಿ ಜೀವಿಸುತ್ತಾನೆ. (ರೋಮಾಪುರ 14:8; 15:3) ಅಂದರೆ ಅವನ ಜೀವನದ ಪ್ರತಿಯೊಂದು ಕ್ಷಣದಲ್ಲಿ, ಸ್ವಾರ್ಥಪರ ಅಪೇಕ್ಷೆಗಳಿಗೆ ಅವನು ಬೇಡವೆನ್ನುತ್ತಾನೆ ಮತ್ತು ಯೆಹೋವನಿಗೆ ಬೇಕೆನ್ನುತ್ತಾನೆ.
7. ಕ್ರೈಸ್ತನ ಹಿಂಸಾಕಂಭವು ಯಾವುದು, ಮತ್ತು ಅವನು ಅದನ್ನು ಹೊತ್ತುಕೊಳ್ಳುವುದು ಹೇಗೆ?
7 ಆದುದರಿಂದ, ನಿಮ್ಮ ಹಿಂಸಾಕಂಭವನ್ನು ಹೊತ್ತುಕೊಳ್ಳುವುದರಲ್ಲಿ ಗಂಭೀರವಾದ ತೊಡಗಿಸಿಕೊಳ್ಳುವಿಕೆಗಳು ಇವೆ. ಕಂಭವನ್ನು ಹೊತ್ತುಕೊಳ್ಳುವುದು ಒಂದು ಹೊರೆಯಾಗಿದೆ ಮತ್ತು ಸಾವಿನ ಸೂಚಕವಾಗಿದೆ. ಯೇಸುವಿನ ಹಿಂಬಾಲಕನಾಗಿರುವ ಕಾರಣ ಅವಶ್ಯಬಿದ್ದಾಗ ಕ್ರೈಸ್ತನು ಕಷ್ಟಾನುಭವಿಸಲು, ಅವಮಾನಿತನಾಗಲು ಯಾ ಹಿಂಸಿಸಲ್ಪಡಲು ಅಥವಾ ಕೊಲ್ಲಲ್ಪಡಲು ಸಹ ಸಿದ್ಧಮನಸ್ಕನಾಗಿದ್ದಾನೆ. ಯೇಸುವಂದದ್ದು: “ಯಾವನಾದರೂ ತನ್ನ ಶಿಲುಬೆಯನ್ನು [ಹಿಂಸಾಕಂಭವನ್ನು, NW] ತೆಗೆದುಕೊಂಡು ನನ್ನ ಹಿಂದೆ ಬಂದ ಹೊರತು ನನಗೆ ಯೋಗ್ಯನಲ್ಲ.” (ಮತ್ತಾಯ 10:38) ಕಷ್ಟಾನುಭವ ಪಡುವ ಎಲ್ಲರೂ ಹಿಂಸಾಕಂಭವನ್ನು ಹೊತ್ತುಕೊಂಡಿರುವುದಿಲ್ಲ. ದುಷ್ಟರಿಗೆ ಅನೇಕ “ಕಷ್ಟನಷ್ಟಗಳು” ಇರುತ್ತವೆಯಾದರೂ ಅವರಿಗೆ ಹಿಂಸಾಕಂಭವಿಲ್ಲ. (ಕೀರ್ತನೆ 32:10) ಆದರೂ, ಕ್ರೈಸ್ತನ ಜೀವಿತವು ಯೆಹೋವನಿಗೆ ಯಜ್ಞಾರ್ಪಿತ ಸೇವೆಯ ಹಿಂಸಾಕಂಭವನ್ನು ಹೊತ್ತುಕೊಳ್ಳುವ ಜೀವನವಾಗಿದೆ.
8. ಯೇಸು ತನ್ನ ಹಿಂಬಾಲಕರಿಗೆ ಯಾವ ಜೀವನ ಮಾದರಿಯನ್ನು ಇಟ್ಟನು?
8 ಯೇಸು ತಿಳಿಸಿದ ಕೊನೆಯ ಶರ್ತವು, ನಾವಾತನನ್ನು ಎಡೆಬಿಡದೆ ಹಿಂಬಾಲಿಸುವುದಾಗಿದೆ. ಆತನು ಕಲಿಸಿದ್ದನ್ನು ನಾವು ಸ್ವೀಕರಿಸುವಂತೆ ಮತ್ತು ನಂಬುವಂತೆ ಮಾತ್ರವೇ ಅಲ್ಲ ನಮ್ಮ ಇಡೀ ಜೀವಿತಕ್ಕಾಗಿ ಆತನಿಟ್ಟ ಮಾದರಿಯನ್ನು ನಾವು ಎಡೆಬಿಡದೆ ಅನುಸರಿಸುವಂತೆಯೂ ಯೇಸು ಅಪೇಕ್ಷಿಸುತ್ತಾನೆ. ಮತ್ತು ಅವನ ಜೀವಿತ ಮಾದರಿಯಲ್ಲಿ ಕಂಡು ಬಂದ ಕೆಲವು ಪ್ರಧಾನ ವೈಶಿಷ್ಟ್ಯಗಳು ಯಾವುವು? ತನ್ನ ಹಿಂಬಾಲಕರಿಗೆ ಅವರ ಕೊನೆಯ ನಿಯೋಗವನ್ನು ಕೊಟ್ಟಾಗ, ಅವನಂದದ್ದು: “ನೀವು ಹೊರಟುಹೋಗಿ . . . ಶಿಷ್ಯರನ್ನಾಗಿ ಮಾಡಿರಿ. ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:19, 20) ರಾಜ್ಯದ ಸುವಾರ್ತೆಯನ್ನು ಯೇಸು ಸಾರಿದನು ಮತ್ತು ಕಲಿಸಿದನು. ಅವನ ಅತಿ ಸಮೀಪದ ಶಿಷ್ಯರು ಹಾಗೆಯೇ ಮಾಡಿದ್ದರು ಮತ್ತು ನಿಶ್ಚಯವಾಗಿ, ಇಡೀ ಆದಿ ಕ್ರೈಸ್ತ ಸಭೆಯು ಮಾಡಿತ್ತು. ಈ ಹುರುಪಿನ ಚಟುವಟಿಕೆ, ಮತ್ತು ಇದಕ್ಕೆ ಕೂಡಿಸಿ, ಲೋಕದ ಭಾಗವಾಗದೆ ಅವರ ಇರುವಿಕೆಯು ಲೋಕದ ದ್ವೇಷ ಮತ್ತು ವಿರೋಧವನ್ನು ಅವರ ಮೇಲೆ ತಂದಿತು, ಅವರು ಹಿಂಸಾಕಂಭವನ್ನು ಹೊತ್ತುಕೊಳ್ಳುವುದರಲ್ಲಿ ಪರಿಣಮಿಸಿತು.—ಯೋಹಾನ 15:19, 20; ಅ. ಕೃತ್ಯಗಳು 8:4.
9. ಯೇಸು ಬೇರೆ ಜನರನ್ನು ಹೇಗೆ ಉಪಚರಿಸಿದನು, ಮತ್ತು ನಾವು ಆತನನ್ನು ಹೇಗೆ ಅನುಕರಿಸಬಲ್ಲೆವು?
9 ಯೇಸುವಿನ ಜೀವಿತದಲ್ಲಿ ಕಂಡುಬಂದ ಇನ್ನೊಂದು ಪ್ರಧಾನ ಮಾದರಿಯು ಆತನು ಬೇರೆ ಜನರನ್ನು ಉಪಚರಿಸಿದ ರೀತಿಯೇ. ಅವನು ದಯೆಯುಳ್ಳವನಾಗಿದ್ದನು ಮತ್ತು “ಸಾತ್ವಿಕನೂ ದೀನಮನಸ್ಸುಳ್ಳವನೂ” ಆಗಿದ್ದನು. ಹೀಗೆ, ಅವನಿಗೆ ಕಿವಿಗೊಟ್ಟವರು ಆತ್ಮದಲ್ಲಿ ನವಚೈತನ್ಯವನ್ನು ಹೊಂದಿದರು ಮತ್ತು ಆತನ ಸನ್ನಿಧಿಯಿಂದ ಪ್ರೋತ್ಸಾಹಿಸಲ್ಪಟ್ಟರು. (ಮತ್ತಾಯ 11:29) ತನ್ನನ್ನು ಹಿಂಬಾಲಿಸುವಂತೆ ಅವನು ಅವರಿಗೆ ಬೆದರಿಕೆ ಹಾಕಲಿಲ್ಲ ಅಥವಾ ಅವರದನ್ನು ಮಾಡುವ ವಿಧಾನದ ಕುರಿತು ನಿಯಮಗಳ ಮೇಲೆ ನಿಯಮಗಳನ್ನು ಹೊರಿಸಲಿಲ್ಲ; ತನ್ನ ಶಿಷ್ಯರಾಗುವಂತೆ ಒತ್ತಾಯಿಸುವುದಕ್ಕಾಗಿ ಆತನು ದೋಷ ಭಾವನೆಗಳನ್ನು ಪ್ರೇರಿಸಿದ್ದೂ ಇಲ್ಲ. ಸ್ವ-ತ್ಯಾಗದ ಜೀವನದ ನಡುವೆಯೂ, ಅವರು ನಿಜ ಸಂತೋಷವನ್ನು ಹೊರಸೂಸಿದರು. “ಕಡೇ ದಿವಸ” ಗಳನ್ನು ಗುರುತಿಸುವ ವಿಷಯಲೋಲುಪ ಲೌಕಿಕ ಆತ್ಮವಿರುವವರೊಂದಿಗೆ ಎಂಥ ಸ್ಫುಟವಾದ ವೈದೃಶ್ಯವಿದು!—2 ತಿಮೊಥೆಯ 3:1-4.
ಯೇಸುವಿನ ಸ್ವ-ತ್ಯಾಗದ ಆತ್ಮವನ್ನು ವಿಕಸಿಸಿರಿ ಮತ್ತು ಉಳಿಸಿಕೊಳ್ಳಿರಿ
10. (ಎ) ಫಿಲಿಪ್ಪಿ 2:5-8 ಕ್ಕೆ ಅನುಸಾರವಾಗಿ, ಕ್ರಿಸ್ತನು ತನ್ನನ್ನು ನಿರಾಕರಿಸಿದ್ದು ಹೇಗೆ? (ಬಿ) ನಾವು ಕ್ರಿಸ್ತನ ಹಿಂಬಾಲಕರಾಗಿದ್ದರೆ, ಯಾವ ಮಾನಸಿಕ ಭಾವವನ್ನು ನಾವು ಪ್ರದರ್ಶಿಸಬೇಕು?
10 ತನ್ನನ್ನು ನಿರಾಕರಿಸಿಕೊಳ್ಳುವುದರಲ್ಲಿ ಸ್ವತಃ ಯೇಸು ತಾನೇ ಮಾದರಿಯನ್ನಿಟ್ಟನು. ಅವನು ತನ್ನ ಹಿಂಸಾಕಂಭವನ್ನು ಎತ್ತಿಕೊಂಡು, ತನ್ನ ತಂದೆಯ ಚಿತ್ತವನ್ನು ಮಾಡುವ ಮೂಲಕ ಅದನ್ನು ಎಡೆಬಿಡದೆ ಹೊತ್ತುಕೊಂಡನು. ಪೌಲನು ಫಿಲಿಪ್ಪಿಯದ ಕ್ರೈಸ್ತರಿಗೆ ಬರೆದದ್ದು: “ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು [ಮಾನಸಿಕ ಭಾವ, NW] ನಿಮ್ಮಲ್ಲಿಯೂ ಇರಲಿ. ಆತನು ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವದೆಂಬ ಅಮೂಲ್ಯ ಪದವಿಯನ್ನು ಬಿಡಲೊಲೆನ್ಲು ಎಂದೆಣಿಸದೆ ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶನಾದನು. ಹೀಗೆ ಅವನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆ [ಹಿಂಸಾಕಂಭ, NW] ಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.” (ಫಿಲಿಪ್ಪಿ 2:5-8) ಅದಕ್ಕಿಂತ ಹೆಚ್ಚು ಪೂರ್ಣವಾಗಿ ತನ್ನನ್ನು ನಿರಾಕರಿಸಿಕೊಳ್ಳಶಕ್ತನು ಯಾರು? ನೀವು ಕ್ರಿಸ್ತ ಯೇಸುವಿಗೆ ಸೇರಿದವರಾಗಿದ್ದರೆ ಮತ್ತು ನೀವು ಅವನ ಹಿಂಬಾಲಕರಲ್ಲಿ ಒಬ್ಬರಾಗಿದ್ದರೆ, ಇದೇ ಮಾನಸಿಕ ಭಾವವನ್ನು ನೀವು ಇಟ್ಟುಕೊಳ್ಳಲೇಬೇಕು.
11. ಸ್ವ-ತ್ಯಾಗದ ಜೀವನವನ್ನು ಜೀವಿಸುವುದೆಂದರೆ ಯಾರ ಚಿತ್ತಕ್ಕಾಗಿ ಜೀವಿಸುವುದಾಗಿದೆ?
11 ಯೇಸು ನಮಗಾಗಿ ಕಷ್ಟವನ್ನು ಅನುಭವಿಸಿ ಸತ್ತದ್ದರಿಂದಾಗಿ, ಕ್ರಿಸ್ತನಲ್ಲಿದ್ದ ಅದೇ ಆತ್ಮದೊಂದಿಗೆ ಕ್ರೈಸ್ತರು ಸು-ಸಜ್ಜಿತರಾದ ಸೈನಿಕರಂತೆ, ಶಸ್ತ್ರಸನ್ನದ್ಧರಾಗಿ ತಮ್ಮನ್ನು ಇರಿಸಬೇಕೆಂದು ಇನೊಬ್ಬ ಅಪೊಸ್ತಲ, ಪೇತ್ರನು ನಮಗೆ ಹೇಳುತ್ತಾನೆ. ಅವನು ಬರೆಯುವುದು: “ಕ್ರಿಸ್ತನು ಶರೀರದಲ್ಲಿ ಬಾಧೆಪಟ್ಟದ್ದರಿಂದ ನೀವು ಸಹ ಆತನಿಗಿದ್ದ ಭಾವವನ್ನೇ ಹಿಡಿದುಕೊಳ್ಳಿರಿ. ಯಾಕಂದರೆ ಶರೀರದಲ್ಲಿ ಬಾಧೆಪಟ್ಟವನು ಪಾಪದ ವಶದಿಂದ ತಪ್ಪಿಸಿಕೊಂಡವನಾಗಿ ಉಳಿದಿರುವ ತನ್ನ ಜೀವಮಾನಕಾಲದಲ್ಲಿ ಇನ್ನೂ ಮನುಷ್ಯರ ಅಭಿಲಾಷೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವದಕ್ಕೆ ಪ್ರಯತ್ನಮಾಡುವನು.” (1 ಪೇತ್ರ 3:18; 4:1, 2) ಯೇಸುವಿನ ಸ್ವ-ತ್ಯಾಗದ ನಡೆವಳಿಯು ದೇವರ ಚಿತ್ತದ ಕುರಿತು ಅವನಿಗೆ ಯಾವ ಅನಿಸಿಕೆಯಿತ್ತು ಎಂಬದನ್ನು ಸ್ಪಷ್ಟವಾಗಿಗಿ ತೋರಿಸಿತ್ತು. ಅವನು ತನ್ನ ತಂದೆಯ ಚಿತ್ತವನ್ನು ಸ್ವಂತದ್ದಕ್ಕಿಂತ ಯಾವಾಗಲೂ ಮೇಲಿಡುತ್ತಾ, ಅವಮಾನಕರ ಮರಣದ ಬಿಂದುವಿನ ತನಕವೂ, ತನ್ನ ಭಕ್ತಿಯಲ್ಲಿ ಏಕಾಗ್ರಚಿತ್ತನಾಗಿದ್ದನು.—ಮತ್ತಾಯ 6:10; ಲೂಕ 22:42.
12. ಸ್ವ-ತ್ಯಾಗದ ಜೀವನವು ಯೇಸುವಿಗೆ ಅರುಚಿಯದ್ದಾಗಿತ್ತೋ? ವಿವರಿಸಿರಿ.
12 ಯೇಸುವಿನ ಸ್ವ-ತ್ಯಾಗದ ಜೀವಿತವು ಅವನಿಗೆ ಅನುಸರಿಸಲು ಕಷ್ಟಕರವಾದ ಮತ್ತು ಪಂಥಾಹ್ವಾನದ ಮಾರ್ಗವಾಗಿದ್ದರೂ, ಅದನ್ನು ಅರುಚಿಯುಕ್ತವಾಗಿ ಅವನು ಕಾಣಲಿಲ್ಲ. ಬದಲಿಗೆ, ದೈವಿಕ ಚಿತ್ತಕ್ಕೆ ತನ್ನನ್ನು ಅಧೀನಪಡಿಸುವುದರಲ್ಲಿ ಯೇಸು ಸಂತೋಷಪಟ್ಟನು. ತಂದೆಯ ಕೆಲಸವನ್ನು ಮಾಡುವುದು ಅವನಿಗೆ ಆಹಾರದಂತೆ ಇತ್ತು. ಒಬ್ಬನು ಒಂದು ಒಳ್ಳೆಯ ಊಟದಿಂದ ಹೇಗೋ ಹಾಗೆ, ಅವನು ಅದರಿಂದ ನಿಜ ಸಂತೃಪ್ತಿಯನ್ನು ಪಡೆದನು. (ಮತ್ತಾಯ 4:4; ಯೋಹಾನ 4:34) ಹೀಗೆ, ನಿಮ್ಮ ಜೀವನದಲ್ಲಿ ನಿಜವಾದ ಪೂರೈಕೆಯ ಅನಿಸಿಕೆಯನ್ನು ಹೊಂದಲು ನೀವು ಬಯಸುವುದಾದರೆ, ಯೇಸುವಿನ ಮಾನಸಿಕ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ಆತನ ಮಾದರಿಯನ್ನು ಅನುಸರಿಸುವುದಕ್ಕಿಂತ ಹೆಚ್ಚು ಉತ್ತಮವಾದ ಬೇರೆ ಏನನ್ನೂ ನೀವು ಮಾಡಲಾರಿರಿ.
13. ಸ್ವ-ತ್ಯಾಗದ ಆತ್ಮದ ಹಿಂದೆ ಪ್ರೀತಿಯು ಪ್ರಚೋದಕ ಶಕ್ತಿಯಾಗಿದೆ ಹೇಗೆ?
13 ನಿಜವಾಗಿಯೂ, ಸ್ವ-ತ್ಯಾಗದ ಆತ್ಮದ ಹಿಂದಿರುವ ಪ್ರಚೋದಕ ಶಕ್ತಿಯು ಅದ್ಯಾವುದು? ಒಂದೇ ಶಬ್ದದಲ್ಲಿ, ಪ್ರೀತಿ. ಯೇಸುವಂದದ್ದು: “ನಿನ್ನ ದೇವರಾಗಿರುವ ಕರ್ತ [ಯೆಹೋವ, NW] ನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು. ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಒಂದು ಉಂಟು, ಅದು ಯಾವದಂದರೆ—ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ.” (ಮತ್ತಾಯ 22:37-39) ಕ್ರೈಸ್ತನು ಸ್ವಾರ್ಥವನ್ನು ಹುಡುಕುವವನಾಗಿರುತ್ತಾ, ಅದೇ ಸಮಯದಲ್ಲಿ ಆ ಮಾತುಗಳಿಗೆ ವಿಧೇಯನಾಗಿರಲೂ ಸಾಧ್ಯವಿಲ್ಲ. ಅವನ ಸ್ವಂತ ಸಂತೋಷ ಮತ್ತು ಅಭಿರುಚಿ, ಪ್ರಥಮವಾಗಿ ಮತ್ತು ಪ್ರಾಮುಖ್ಯವಾಗಿ, ಯೆಹೋವನ ಮೇಲಣ ಅವನ ಪ್ರೀತಿಯಿಂದ ಮತ್ತು ಅನಂತರ ನೆರೆಯವನ ಮೇಲಣ ಅವನ ಪ್ರೀತಿಯಿಂದ ಪ್ರಭಾವಿತವಾಗಬೇಕು. ಯೇಸು ತನ್ನ ಜೀವಿತವನ್ನು ಜೀವಿಸಿದ್ದು ಅದೇ ರೀತಿಯಲ್ಲಿ, ಮತ್ತು ತನ್ನ ಹಿಂಬಾಲಕರಿಂದ ಅವನು ಅಪೇಕ್ಷಿಸುವುದೂ ಅದನ್ನೇ.
14. (ಎ) ಇಬ್ರಿಯ 13:15, 16 ರಲ್ಲಿ ಯಾವ ಇಬ್ಬಗೆಯ ಜವಾಬ್ದಾರಿಕೆಯು ವಿವರಿಸಲ್ಪಟ್ಟಿದೆ? (ಬಿ) ಸುವಾರ್ತೆಯನ್ನು ಹುರುಪಿನಿಂದ ಸಾರುವಂತೆ ನಮ್ಮನ್ನು ಪ್ರೇರಿಸುವುದು ಯಾವುದು?
14 ಅಪೊಸ್ತಲ ಪೌಲನು ಈ ಪ್ರೀತಿಯ ಸೂತ್ರವನ್ನು ತಿಳಿದಿದ್ದನು. ಅವನು ಬರೆದದ್ದು: “ಆತನ ಮೂಲಕವಾಗಿಯೇ ದೇವರಿಗೆ ಸ್ತೋತ್ರ ಯಜ್ಞವನ್ನು, ಅಂದರೆ, ಆತನ ನಾಮದ ಬಹಿರಂಗ ಅರಿಕೆಯನ್ನು ಮಾಡುವ ತುಟೀಫಲವನ್ನು ಎಡೆಬಿಡದೆ ಸಮರ್ಪಿಸೋಣ. ಇದಲ್ಲದೆ ಸತ್ಕಾರ್ಯ ಮಾಡುವದನ್ನು ಮತ್ತು ಇತರರೊಂದಿಗೆ ವಿಷಯಗಳಲ್ಲಿ ಪಾಲಿಗರಾಗುವದನ್ನು ಮರೆಯಬೇಡಿರಿ; ಇಂಥ ಯಜ್ಞಗಳನ್ನು ದೇವರು ಮೆಚ್ಚುತ್ತಾನೆ.” (ಇಬ್ರಿಯ 13:15, 16, NW) ಪ್ರಾಣಿಗಳ ಮತ್ತು ಅದರಂತಿರುವ ಬೇರೆ ಯಜ್ಞಗಳನ್ನು ಕ್ರೈಸ್ತರು ಯೆಹೋವನಿಗೆ ಅರ್ಪಿಸುವುದಿಲ್ಲ; ಆದಕಾರಣ, ಅವರ ಆರಾಧನೆಯಲ್ಲಿ ಪೌರೋಹಿತ್ಯ ನಡಿಸಲು ಭೌತಿಕ ಆಲಯದಲ್ಲಿ ಮಾನವ ಯಾಜಕರ ಅಗತ್ಯವು ಅವರಿಗಿಲ್ಲ. ನಮ್ಮ ಸ್ತುತಿ ಯಜ್ಞವು ಅರ್ಪಿಸಲ್ಪಡುವುದು ಕ್ರಿಸ್ತ ಯೇಸುವಿನ ಮೂಲಕವಾಗಿಯೇ. ಮತ್ತು ಮುಖ್ಯವಾಗಿ ಆ ಸ್ತುತಿ ಯಜ್ಞದ ಮೂಲಕ, ಆತನ ನಾಮಕ್ಕೆ ಆ ಬಹಿರಂಗ ಅರಿಕೆಯ ಮೂಲಕ, ದೇವರ ಮೇಲಣ ನಮ್ಮ ಪ್ರೀತಿಯನ್ನು ನಾವು ತೋರಿಸುತ್ತೇವೆ. ವಿಶಿಷ್ಟವಾಗಿ, ಪ್ರೀತಿಯಲ್ಲಿ ಬೇರೂರಿದ ನಮ್ಮ ನಿಸ್ವಾರ್ಥ ಆತ್ಮವು ಸುವಾರ್ತೆಯನ್ನು ಹುರುಪಿನಿಂದ ಸಾರುವಂತೆ, ನಮ್ಮ ತುಟೀ ಫಲವನ್ನು ದೇವರಿಗೆ ನೀಡುವರೇ ಸದಾ ಉತ್ಸುಕರಾಗಿರುವಂತೆ ನಮ್ಮನ್ನು ಉತ್ತೇಜಿಸುತ್ತಾ ಇರುತ್ತದೆ. ಈ ರೀತಿಯಲ್ಲಿ ನಮ್ಮ ನೆರೆಯವರೆಡೆಗಿನ ಪ್ರೀತಿಯನ್ನು ನಾವು ಸಹ ತೋರಿಸುತ್ತೇವೆ.
ಸ್ವ-ತ್ಯಾಗವು ಹೇರಳ ಅಶೀರ್ವಾದಗಳನ್ನು ತರುತ್ತದೆ
15. ಸ್ವ-ತ್ಯಾಗದ ಸಂಬಂಧದಲ್ಲಿ ಯಾವ ಪರೀಕ್ಷಕ ಪ್ರಶ್ನೆಗಳನ್ನು ನಾವು ನಮಗೆ ಕೇಳಬಲ್ಲೆವು?
15 ಒಂದು ಕ್ಷಣ ನಿಂತು, ಕೆಳಗಿನ ಪ್ರಶ್ನೆಗಳನ್ನು ಪುನರಾಲೋಚನೆ ಮಾಡಿರಿ: ನನ್ನ ಜೀವನದ ಪ್ರಚಲಿತ ಮಾದರಿಯು ಸ್ವ-ತ್ಯಾಗದ ಮಾರ್ಗವನ್ನು ಪ್ರದರ್ಶಿಸುತ್ತದೋ? ನನ್ನ ಧ್ಯೇಯಗಳು ಅಂಥ ಒಂದು ಜೀವಿತಕ್ಕೆ ಕೈತೋರಿಸುತ್ತವೋ? ನನ್ನ ಕುಟುಂಬದ ಸದಸ್ಯರು ನನ್ನ ಮಾದರಿಯಿಂದ ಆತ್ಮಿಕ ಲಾಭಾಂಶವನ್ನು ಕೊಯ್ಯುತ್ತಿದ್ದಾರೋ? (ಹೋಲಿಸಿರಿ 1 ತಿಮೊಥೆಯ 5:8.) ಅನಾಥರ ಮತ್ತು ವಿಧವೆಯರ ಕುರಿತಾಗಿ ಏನು? ನನ್ನ ಸ್ವ-ತ್ಯಾಗದ ಆತ್ಮದಿಂದ ಅವರು ಸಹ ಪ್ರಯೋಜನ ಪಡೆಯುತ್ತಾರೋ? (ಯಾಕೋಬ 1:27) ನನ್ನ ಬಹಿರಂಗ ಸ್ತುತಿ ಯಜ್ಞದಲ್ಲಿ ನಾನು ಕಳೆಯುವ ಸಮಯವನ್ನು ನಾನು ವಿಸ್ತರಿಸಬಲ್ಲೆನೋ? ಪಯನೀಯರ, ಬೆತೆಲ್, ಮತ್ತು ಮಿಷನೆರಿ ಸುಯೋಗಕ್ಕಾಗಿ ನಾನು ಎಟಕಿಸಿಕೊಳ್ಳ ಶಕ್ತನೋ, ಅಥವಾ ಎಲ್ಲಿ ರಾಜ್ಯ ಘೋಷಕರ ಹೆಚ್ಚಿನ ಅಗತ್ಯವಿದೆಯೋ ಆ ಕ್ಷೇತ್ರದಲ್ಲಿ ಸೇವೆ ಮಾಡಲು ನಾನು ಹೋಗಬಲ್ಲೆನೋ?
16. ಸ್ವ-ತ್ಯಾಗದ ಜೀವನವನ್ನು ಜೀವಿಸುವುದಕ್ಕೆ ಜಾಣತನವು ನಮಗೆ ಹೇಗೆ ಸಹಾಯವಾಗಬಹುದು?
16 ಸ್ವ-ತ್ಯಾಗದ ಆತ್ಮದೊಂದಿಗೆ ಯೆಹೋವನನ್ನು ಸೇವಿಸುವುದರಲ್ಲಿ ನಮ್ಮ ಪೂರ್ಣ ಶಕ್ಯತೆಯನ್ನು ತಲಪಲು ಕೆಲವು ಸಾರಿ ಕೇವಲ ತುಸು ಜಾಣತನವು ಬೇಕಾಗುತ್ತದೆ. ದೃಷ್ಟಾಂತಕ್ಕೆ, ಇಕ್ವೆಡೋರ್ನಲ್ಲಿ ಕ್ರಮದ ಪಯನೀಯರಳಾಗಿರುವ ಜ್ಯಾನೆಟ್, ಪೂರ್ಣ ಸಮಯದ ಉದ್ಯೋಗವನ್ನು ಮಾಡುತ್ತಿದ್ದಳು. ಸ್ವಲ್ಪ ಸಮಯದಲ್ಲೇ ಅವಳ ಕಾರ್ಯತಖ್ತೆಯು ಅವಳ ಕ್ರಮದ ಪಯನೀಯರ ತಾಸುಗಳ ಆವಶ್ಯಕತೆಯನ್ನು ಉಲ್ಲಾಸಕರ ಆತ್ಮದೊಂದಿಗೆ ತಲಪಲು ಕಷ್ಟಕರವಾಗಿ ಮಾಡಿತು. ತನ್ನ ಧನಿಗೆ ಸಮಸ್ಯೆಯನ್ನು ವಿವರಿಸಲು ಅವಳು ನಿರ್ಣಯಿಸಿದಳು ಮತ್ತು ಕೆಲಸದ ತಾಸುಗಳಲ್ಲಿ ಕಡಿತವನ್ನು ವಿನಂತಿಸಿದಳು. ಅವನು ಅವಳ ಕೆಲಸದ ತಾಸುಗಳನ್ನು ಕಡಿಮೆಮಾಡಲು ಇಚ್ಛಿಸದ ಕಾರಣ, ಪಯನೀಯರಳಾಗುವುದಕ್ಕಾಗಿ ಅಂಶ-ಕಾಲಿಕ ಕೆಲಸವನ್ನು ಹುಡುಕುತ್ತಿದ್ದ ಮರಿಯಳನ್ನು ಅನಂತರ ಅವಳು ತನ್ನೊಂದಿಗೆ ಒಯ್ದಳು. ಇಡೀ ದಿನದ ಕೆಲಸದಲ್ಲಿ ಪಾಲಿಗರಾಗಲು, ಅವರಲ್ಲಿ ಪ್ರತಿಯೊಬ್ಬರು ಅರ್ಧ ದಿನದ ಕೆಲಸಕ್ಕಾಗಿ ನೀಡಿಕೊಂಡರು. ಧನಿಯು ಈ ಪ್ರಸ್ತಾಪಕ್ಕೆ ಒಪ್ಪಿದನು. ಈಗ ಇಬ್ಬರು ಸಹೋದರಿಯರೂ ಕ್ರಮದ ಪಯನೀಯರರಾಗಿದ್ದಾರೆ. ಈ ಆಶ್ಚರ್ಯಕರ ಫಲಿತಾಂಶವನ್ನು ಕಂಡಾಗ, ಅದೇ ಕಂಪೆನಿಯಲ್ಲಿ ಪೂರ್ಣ ಸಮಯದ ಉದ್ಯೋಗದಿಂದಾಗಿ ಬಳಲಿಹೋಗಿದ್ದ ಮತ್ತು ತನ್ನ ಪಯನೀಯರ ಸಮಯವನ್ನು ಹಾಕಲು ಹೋರಾಡುತ್ತಿದ್ದ ಕೇಫ ಕೂಡ, ಮಗಲಿಯನ್ನು ತನ್ನೊಂದಿಗೆ ಒಯ್ದಳು ಮತ್ತು ಅದೇ ನೀಡಿಕೆಯನ್ನು ಮಾಡಿದಳು. ಅದು ಕೂಡ ಸ್ವೀಕರಿಸಲ್ಪಟ್ಟಿತು. ಹೀಗೆ, ಪೂರ್ಣ ಸಮಯದ ಸೇವೆಯನ್ನು ಬಿಡುವ ಬಿಂದುವಿನಲ್ಲಿದ್ದ ಇಬ್ಬರ ಬದಲಿಗೆ, ನಾಲ್ವರು ಸಹೋದರಿಯರು ಪಯನೀಯರಿಂಗ್ ಮಾಡಲು ಶಕ್ತರಾದರು. ಜಾಣತನ ಮತ್ತು ಮೊದಲಹೆಜ್ಜೆಯು ಪ್ರಯೋಜನಕರ ಫಲಿತಾಂಶಗಳನ್ನು ತಂದಿತು.
17-21. ಒಬ್ಬ ವಿವಾಹಿತ ದಂಪತಿಗಳು ತಮ್ಮ ಜೀವಿತದಲ್ಲಿನ ಉದ್ದೇಶಕ್ಕೆ ಪುನಃ ಬೆಲೆಕಟ್ಟಿದ್ದು ಹೇಗೆ, ಯಾವ ಫಲಿತಾಂಶದೊಂದಿಗೆ?
17 ಅದಲ್ಲದೆ, ಕಳೆದ ಹತ್ತು ವರ್ಷಗಳಿಂದ ಇವಾನ್ ಎಂಬವಳಿಂದ ಅನುಸರಿಸಲ್ಪಟ್ಟ ಸ್ವ-ತ್ಯಾಗದ ಆತ್ಮವನ್ನು ಗಮನಕ್ಕೆ ತನ್ನಿರಿ. ಮೇ 1991 ರಲ್ಲಿ ವಾಚ್ಟವರ್ ಸೊಸೈಟಿಗೆ ಅವಳು ಕೆಳಗಿನ ಪತ್ರವನ್ನು ಬರೆದಳು:
18 “ಅಕ್ಟೋಬರ 1982 ರಲ್ಲಿ, ನನ್ನ ಕುಟುಂಬ ಮತ್ತು ನಾನು ಬ್ರೂಕ್ಲಿನ್ ಬೆತೆಲ್ನ್ನು ಸಂದರ್ಶಿಸಿದೆವು. ಅದನ್ನು ಕಂಡಾಗ ಅದು ನನ್ನನ್ನು ಅಲ್ಲಿ ಕೆಲಸಮಾಡಲು ಸ್ವಯಂ ನೀಡಿಕೊಳ್ಳುವಂತೆ ಮಾಡಿತು. ನಾನು ಒಂದು ಅರ್ಜಿಯನ್ನು ಓದಿದೆ, ಅಲ್ಲೊಂದು ಗಮನಾರ್ಹ ಪ್ರಶ್ನೆಯಿತ್ತು, ‘ಕಳೆದ ಆರು ತಿಂಗಳಲ್ಲಿ ನಿನ್ನ ಕ್ಷೇತ್ರ ಸೇವೆಯ ಸರಾಸರಿ ತಾಸುಗಳೆಷ್ಟು? ಸರಾಸರಿ ತಾಸುಗಳು ಹತ್ತಕ್ಕಿಂತ ಕೆಳಗಿದ್ದರೆ, ಅದಕ್ಕೆ ಕಾರಣವೇನೆಂದು ವಿವರಿಸು.’ ಯಾವುದೇ ಸಮಂಜಸ ಕಾರಣವನ್ನು ನಾನು ನೆನಸಲಾರದೆ ಹೋದೆ, ಆದ್ದರಿಂದ ನಾನೊಂದು ಗುರಿಯನ್ನಿಟ್ಟೆನು ಮತ್ತು 5 ತಿಂಗಳ ತನಕ ಅದನ್ನು ತಲಪಿದೆನು.
19 “ಪಯನೀಯರಿಂಗ್ ಮಾಡದೆ ಇರಲು ಕೆಲವು ನೆವನಗಳನ್ನು ನೆನಸ ಸಾಧ್ಯವಿದ್ದರೂ, ಯೆಹೋವನ ಸಾಕ್ಷಿಗಳ 1983 ರ ವರ್ಷ ಪುಸ್ತಕ ವನ್ನು ಓದಿದಾಗ, ಪಯನೀಯರರಾಗುವುದಕ್ಕಾಗಿ ಇತರರು ನನಗಿಂತಲೂ ಹೆಚ್ಚಿನ ಅಡಿಗ್ಡಳನ್ನು ನಿಭಾಯಿಸಿದ್ದಾರೆಂದು ನನಗೆ ಮಂದಟ್ಟಾಯಿತು. ಹೀಗೆ, ಎಪ್ರಿಲ್ 1, 1983 ರಲ್ಲಿ ನಾನು ನನ್ನ ಲಾಭಕರವಾದ ಪೂರ್ಣ ಸಮಯದ ಉದ್ಯೋಗವನ್ನು ಬಿಟ್ಟುಕೊಟ್ಟೆ ಮತ್ತು ಸಹಾಯಕ ಪಯನೀಯರಳಾದೆ, ಮತ್ತು ಸಪ್ಟಂಬರ 1, 1983 ರಲ್ಲಿ ಕ್ರಮದ ಪಯನೀಯರ ಪಂಕ್ತಿಯನ್ನು ಪ್ರವೇಶಿಸಿದೆನು.
20 “ತದನಂತರ, ಎಪ್ರಿಲ್ 1985 ರಲ್ಲಿ, ಒಬ್ಬ ಒಳ್ಳೇ ಶುಶ್ರೂಷಾ ಸೇವಕನನ್ನು ವಿವಾಹವಾಗುವ ಸಂತೋಷವು ನನಗೆ ಲಭಿಸಿತು. ಮೂರು ವರ್ಷಗಳ ತರುವಾಯ, ಪಯನೀಯರಿಂಗ್ ಕುರಿತಾದ ಒಂದು ಜಿಲ್ಲಾ ಅಧಿವೇಶನದ ಭಾಷಣವು ನನ್ನ ಗಂಡನನ್ನು, ನನಗೆ ಹೀಗೆ ಪಿಸುಗುಟ್ಟುವಂತೆ ಪ್ರಚೋದಿಸಿತು, ‘ಸಪ್ಟಂಬರ 1 ರೊಳಗೆ ಪಯನೀಯರ ಸೇವೆಯನ್ನು ನಾನೇಕೆ ಆರಂಭಿಸಬಾರದೆಂಬದಕ್ಕೆ ಯಾವ ಕಾರಣವನ್ನಾದರೂ ನೀನು ಕಾಣುತ್ತಿಯಾ?’ ಮುಂದಿನ ಎರಡು ವರ್ಷಗಳಲ್ಲಿ ಅವನು ನನ್ನೊಂದಿಗೆ ಈ ಕಾರ್ಯದಲ್ಲಿ ಸಹಭಾಗಿಯಾದನು.
21 “ಬ್ರೂಕ್ಲಿನ್ ಬೆತೆಲ್ನಲ್ಲಿ ಎರಡು ವಾರಗಳ ತನಕ ಕಟ್ಟಡ ಕಟ್ಟುವ ಕೆಲಸದಲ್ಲೂ ನನ್ನ ಗಂಡನು ಸ್ವಯಂಸೇವೆ ಮಾಡಿದನು ಮತ್ತು ಅಂತರ್ರಾಷ್ಟ್ರೀಯ ಕಟ್ಟೋಣ ಕಾರ್ಯಕ್ರಮಕ್ಕೂ ಅರ್ಜಿಹಾಕಿದನು. ಹೀಗೆ ಮೇ 1989 ರಲ್ಲಿ ಬ್ರಾಂಚ್ ಕಟ್ಟಡ ಕಟ್ಟುವಿಕೆಯಲ್ಲಿ ನೆರವಾಗಲು ನಾವು ಒಂದು ತಿಂಗಳಿಗಾಗಿ ನೈಜಿರೀಯಕ್ಕೆ ಹೋದೆವು. ನಾಳೆ ನಾವು ಜರ್ಮನಿಗೆ ಪ್ರಯಾಣ ಮಾಡಲಿದ್ದೇವೆ, ಅಲ್ಲಿಂದ ಪೋಲೆಂಡಿಗೆ ನಮ್ಮ ಪ್ರವೇಶಕ್ಕಾಗಿ ವೀಸಾಗಳು ಏರ್ಪಡಿಸಲ್ಪಡಲಿವೆ. ಅಂಥ ಒಂದು ಸ್ಮರಣೀಯ ಕಟ್ಟಡ ಕಟ್ಟುವ ಯೋಜನೆಯಲ್ಲಿ ಮತ್ತು ಪೂರ್ಣ ಸಮಯದ ಸೇವೆಯ ಈ ಹೊಸ ವಿಧಾನದಲ್ಲಿ ಒಳಗೂಡಿರಲು ನಾವು ಪುಳಕಿತರಾಗಿದ್ದೇವೆ.”
22. (ಎ) ನಾವು ಪೇತ್ರನಂತೆ, ಬುದ್ಧಿಪೂರ್ವಕವಲ್ಲದೆ ಎಡವುಗಲ್ಲಾಗಿ ಹೇಗೆ ಪರಿಣಮಿಸಬಹುದು? (ಬಿ) ಸ್ವ-ತ್ಯಾಗದ ಆತ್ಮದೊಂದಿಗೆ ಯೆಹೋವನನ್ನು ಸೇವಿಸುವುದು ಯಾವುದರ ಮೇಲೆ ಆಧಾರಿತವಾಗಿಲ್ಲ?
22 ಸ್ವತಃ ನೀವು ಪಯನೀಯರರಾಗಲು ಶಕ್ತರಾಗದಿದ್ದರೆ, ಯಾರು ಪೂರ್ಣ ಸಮಯದ ಸೇವೆಯಲ್ಲಿರುತ್ತಾರೋ ಅವರು ತಮ್ಮ ಸುಯೋಗದಲ್ಲಿ ದೃಢವಾಗಿ ನಿಲ್ಲುವಂತೆ ನೀವು ಉತ್ತೇಜಿಸಬಲ್ಲಿರೋ ಮತ್ತು ಅವರು ಹಾಗೆ ಮಾಡುವಂತೆ ಪ್ರಾಯಶಃ ಸಹಾಯವನ್ನು ಸಹ ನೀಡಬಲ್ಲಿರೋ? ಅಥವಾ ನೀವು, ಕೆಲವು ಸದ್ಭಾವನೆಯುಳ್ಳ ಕುಟುಂಬ ಸದಸ್ಯರು ಅಥವಾ ಮಿತ್ರರಂತಿದ್ದು, ಪೇತ್ರನು ಮಾಡಿದ ಹಾಗೆ, ಅದು ಹೇಗೆ ಎಡವುಗಲ್ಲಾಗಿರಬಹುದೆಂದು ತಿಳಿಯದೇ ಪೂರ್ಣ ಸಮಯದ ಸೇವಕನಿಗೆ—ಅವನು ಹಾಯಾಗಿದ್ದು ಆರಾಮದ ಜೀವಿತವನ್ನು ನಡಸುವಂತೆ ಹೇಳುವಿರೋ? ಒಬ್ಬ ಪಯನೀಯರನ ಆರೋಗ್ಯವು ಗಂಭೀರವಾಗಿ ಕೆಟ್ಟಿದ್ದರೆ ಅಥವಾ ಕ್ರೈಸ್ತ ಹಂಗುಗಳನ್ನು ಅವನು ಅಲಕ್ಷ್ಯಮಾಡುತ್ತಾನಾದರೆ, ಪೂರ್ಣ ಸಮಯದ ಸೇವೆಯನ್ನು ಸ್ವಲ್ಪ ಸಮಯದ ತನಕ ಅವನು ಬಿಡಬೇಕಾದೀತು! ಯೆಹೋವನನ್ನು ಸ್ವ-ತ್ಯಾಗದ ಆತ್ಮದಿಂದ ಸೇವಿಸುವಿಕೆಯು ಪಯನೀಯರ, ಬೆತೆಲ್ ಪರಿವಾರದವ, ಅಥವಾ ಬೇರೆಯವನೆಂಬ ಗುರುತು ಪಟ್ಟಿಯ ಮೇಲೆ ಆಧಾರಿತವಾಗಿಲ್ಲ. ಬದಲಿಗೆ, ವ್ಯಕ್ತಿಗಳೋಪಾದಿ ನಾವು ಏನಾಗಿದೇವ್ದೋ ಅದರ ಮೇಲೆ—ನಾವು ಹೇಗೆ ಯೋಚಿಸುತ್ತೇವೆ, ಏನು ಮಾಡುತ್ತೇವೆ, ಇತರರನ್ನು ನಾವು ಹೇಗೆ ಉಪಚರಿಸುತ್ತೇವೆ, ನಮ್ಮ ಜೀವನವನ್ನು ಹೇಗೆ ಜೀವಿಸುತ್ತೇವೆಂಬದರಲ್ಲಿ ಆಧಾರಿಸಿದೆ.
23. (ಎ) ದೇವರೊಂದಿಗೆ ಜೊತೆಗೆಲಸದವರಾಗಿರುವ ಸಂತೋಷವನ್ನು ನಾವು ಮುಂದುವರಿಸುವುದು ಹೇಗೆ? (ಬಿ) ಇಬ್ರಿಯ 6:10-12 ರಲ್ಲಿ ಯಾವ ಆಶ್ವಾಸನೆಯನ್ನು ನಾವು ಕಾಣುತ್ತೇವೆ?
23 ನಮಗೆ ನಿಜವಾಗಿ ಸ್ವ-ತ್ಯಾಗದ ಆತ್ಮವಿದ್ದರೆ, ದೇವರ ಜೊತೆಗೆಲಸದವರಾಗಿರುವ ಸಂತೋಷವು ನಮಗಿರುವುದು. (1 ಕೊರಿಂಥ 3:9) ಯೆಹೋವನ ಹೃದಯವನ್ನು ಸಂತೋಷಪಡಿಸುತ್ತೇವೆಂದು ತಿಳಿಯುವ ಸಂತೃಪ್ತಿಯು ನಮಗಿರುವುದು. (ಜ್ಞಾನೋಕ್ತಿ 27:11) ಮತ್ತು ನಾವು ಎಷ್ಟರ ತನಕ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುತ್ತೇವೋ ಆ ತನಕ ಆತನೆಂದೂ ನಮ್ಮನ್ನು ಮರೆಯನು ಅಥವಾ ತ್ಯಜಿಸನು ಎಂಬ ಆಶ್ವಾಸನೆಯು ನಮಗಿದೆ.—ಇಬ್ರಿಯ 6:10-12.
[ಅಧ್ಯಯನ ಪ್ರಶ್ನೆಗಳು]
a ಗ್ರೀಕ್ನಲ್ಲಿ “ಎಡವುಗಲ್ಲು” (ಸ್ಕಾನ್‘ಡ.ಲಾನ್, σκανδαλον) ಮೂಲತಃ “ಬೋನಿನ ಯಾವ ಭಾಗಕ್ಕೆ ಎರೆಯು ಜೋಡಿಸಲ್ಪಡುತ್ತದೋ ಅದರ ಹೆಸರಾಗಿದೆ, ಆದಕಾರಣ, ಅದು ತಾನೇ ಬೋನು ಅಥವಾ ಪಾಶವಾಗಿದೆ.”—ವೈನ್ಸ್ ಎಕ್ಸ್ಪೊಸಿಟರಿ ಡಿಕ್ಷನರಿ ಆಫ್ ದ ಓಲ್ಡ್ ಆ್ಯಂಡ್ ನ್ಯೂ ಟೆಸ್ಟಮೆಂಟ್ ವರ್ಡ್ಸ್.
ನಿಮ್ಮ ಯೋಚನೆಗಳೇನು?
▫ ಸ್ವ-ತ್ಯಾಗದ ಮಾರ್ಗಕ್ಕೆ ಪೇತ್ರನು ಬುದ್ಧಿಪೂರ್ವಕವಲ್ಲದೆ ಒಂದು ಎಡವುಗಲ್ಲಾಗಿ ಪರಿಣಮಿಸಿದ್ದು ಹೇಗೆ?
▫ ‘ತನ್ನನ್ನು ನಿರಾಕರಿಸುವದು’ ಎಂಬದರ ಅರ್ಥವೇನು?
▫ ಕ್ರೈಸ್ತನು ತನ್ನ ಹಿಂಸಾಕಂಭವನ್ನು ಹೊತ್ತುಕೊಳ್ಳುವುದು ಹೇಗೆ?
▫ ಸ್ವ-ತ್ಯಾಗದ ಆತ್ಮವನ್ನು ನಾವು ವಿಕಸಿಸುವುದು ಮತ್ತು ಉಳಿಸಿಕೊಳ್ಳುವುದು ಹೇಗೆ?
▫ ಸ್ವ-ತ್ಯಾಗದ ಆತ್ಮದ ಹಿಂದಿರುವ ಪ್ರಚೋದಕ ಶಕ್ತಿಯು ಯಾವುದು?
[ಪುಟ 10 ರಲ್ಲಿರುವ ಚಿತ್ರ]
ನೀವು ನಿಮ್ಮನ್ನು ನಿರಾಕರಿಸಿಕೊಳ್ಳಲು, ನಿಮ್ಮ ಹಿಂಸಾಕಂಭವನ್ನು ಹೊತ್ತುಕೊಳ್ಳಲು, ಮತ್ತು ಯೇಸುವನ್ನು ಎಡೆಬಿಡದೆ ಹಿಂಬಾಲಿಸಲು ಇಚ್ಛೆಯುಳ್ಳವರಾಗಿದ್ದೀರೋ?